1.ಕಾರ್ನ್ ಪಲಾವ್. (Corn Pulao)
ಮಕ್ಕಳಿಂದ ದೊಡ್ಡವರವರೆಗೂ ಇಷ್ಟವಾಗುವ ಕಾರ್ನ್ ಪಲಾವ್ ಆರೋಗ್ಯಕರವಾದ ಮತ್ತು ರುಚಿಕರವಾದ ಪಲಾವ್ ನಲ್ಲಿ ಒಂದಾಗಿದೆ. ಕಾರ್ನ್ ಪಲಾವ್ ವೊಂದಿಗೆ ರಯತಾ, ವೆಜ್ ಕೂರ್ಮ ಹಾಕಿ ಸವಿಯಲು ರುಚಿಯಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಬಾಸುಮತಿ ಅಕ್ಕಿ ಒಂದು ಕಪ್
ಕಾರ್ನ್ ಒಂದು ಕಪ್
ಈರುಳ್ಳಿ ಎರಡು/ಚಿಕ್ಕದಾಗಿ ಕತ್ತರಿಸಿ.
ಟೊಮೆಟೊ ಎರಡು/ಚಿಕ್ಕದಾಗಿ ಕತ್ತರಿಸಿ
ಕ್ಯಾರೆಟ್, ಬೀನ್ಸ್ ಒಂದು ಕಪ್/ಚಿಕ್ಕದಾಗಿ ಕತ್ತರಿಸಿ
ಕ್ಯಾಪ್ಸಿಕಂ ಒಂದು/ಚಿಕ್ಕದಾಗಿ ಕತ್ತರಿಸಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ಟೀ ಚಮಚ
ಗರಂಮಸಾಲೆ ಅರ್ಧ ಟೀ ಚಮಚ
ಜೀರಿಗೆ ಒಂದು ಟೀ ಚಮಚ
ಕಾಳುಮೆಣಸು ಒಂದು ಟೀ ಚಮಚ
ಚಕ್ಕೆ ಒಂದಿಂಚು
ಸ್ಟಾರ್ ಅನೈಸ್ ಒಂದು
ಪಲಾವ್ ಎಲೆ ಒಂದು
ತುಪ್ಪ ಎರಡು ಟೀ ಚಮಚ
ಹಸಿ ಮೆಣಸಿನಕಾಯಿ ಎರಡು
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಖಾರದ ಪುಡಿ ಅರ್ಧ ಟೀ ಚಮಚ
ಧನಿಯಾ ಪುಡಿ ಒಂದೂವರೆ ಟೀ ಚಮಚ
ಜೀರಿಗೆ ಪುಡಿ ಒಂದು ಟೀ ಚಮಚ
ತಯಾರಿಸುವ ವಿಧಾನ:
ಬಾಸುಮತಿ ಅಕ್ಕಿಯನ್ನು ತೊಳೆದು ನೀರಿನಲ್ಲಿ ಅರ್ಧ ಗಂಟೆ ನೆನೆಸಿಡಿ.
ಕುಕ್ಕರ್ನಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ ಕೊಳ್ಳಿ. ಬಿಸಿಯಾದ ತುಪ್ಪಕ್ಕೆ ಪಲಾವ್ ಎಲೆ,ಸ್ಟಾರ್ ಅನೈಸ್, ಲವಂಗ, ಚಕ್ಕೆ, ಕಾಳುಮೆಣಸು ಮತ್ತು ಒಂದು ಟೀ ಚಮಚ ಜೀರಿಗೆ ಹಾಕಿ ಹುರಿಯಿರಿ. ನಂತರ ಹಸಿ ಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ ಬಾಡಿಸಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವರೆಗೆ ಹುರಿಯಿರಿ. ಟೊಮೆಟೊ ಹಾಕಿ ಚೆನ್ನಾಗಿ ಬಾಡಿಸಿ. ನಂತರ ಕಾರ್ನ್ ಮತ್ತು ಎಲ್ಲಾ ತರಕಾರಿಗಳನ್ನು ಹಾಕಿ ಮಿಶ್ರಣ ಮಾಡಿ.ಒಂದು ನಿಮಿಷ ಚೆನ್ನಾಗಿ ಹುರಿಯಿರಿ.ಗರಂಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಖಾರದ ಪುಡಿಯನ್ನು ಹಾಕಿ ಮಿಶ್ರಣ ಮಾಡಿ.
ನೆನೆಸಿ ಕೊಂಡ ಬಾಸುಮತಿ ಅಕ್ಕಿಯ ನೀರನ್ನು ಪೂರ್ತಿ ತೆಗೆದು ಹುರಿದು ಕೊಂಡ ಮಿಶ್ರಣಕ್ಕೆ ಸೇರಿಸಿ ಒಂದು ನಿಮಿಷ ಹುರಿಯಿರಿ. ನಂತರ ಒಂದು ಕಪ್ ಹಾಲು ಮತ್ತು ಒಂದು ಕಪ್ ನೀರು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.ಕುಕ್ಕರ್ ವಿಷಲ್ ಹಾಕಿ ಮುಚ್ಚಿ.ಎರಡು ವಿಷಲ್ ಬಂದ ನಂತರ ಒಲೆ ಅರಿಸಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
2.ಕರಬೂಜದ ಹಣ್ಣಿನ ಮಿಲ್ಕ್ ಶೇಕ್.
ಬೇಸಿಗೆ ಕಾಲದಲ್ಲಿ ಸಿಗುವ ಹಣ್ಣುಗಳಲ್ಲಿ ಕರಬೂಜದವೂ ಒಂದು.ಈ ಹಣ್ಣು ಜ್ಯೂಸ್,ಮಿಲ್ಕ್ ಶೇಕ್ ಅಥವಾ ಹಾಗೆಯೂ ತಿನ್ನಲು ರುಚಿಯಾಗಿರುತ್ತದೆ. ಜ್ಯೂಸ್ ಮಾಡುವಾಗ ಸಕ್ಕರೆ, ಬೆಲ್ಲ ಅಥವಾ ಜೇನುತುಪ್ಪ ಉಪಯೋಗಿಸಿ ಸಹ ಮಾಡಬಹುದು. ಕರಬೂಜದ ಹಣ್ಣು ಅಧಿಕ ಪ್ರಮಾಣದಲ್ಲಿ ನೀರಿನಾಂಶ ಹೊಂದಿದೆ. ಇದರಲ್ಲಿ ‘ಸಿ’ಜೀವಸತ್ವ ಹೆಚ್ಚಾಗಿದೆ.ಈ ಹಣ್ಣನ್ನು ತಿನ್ನುವುದರಿಂದ ಆಯಾಸ, ಸುಸ್ತು ಕಡಿಮೆ ಮಾಡುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಕರಬೂಜದ ಹಣ್ಣು ಒಂದು
ಹಾಲು ಒಂದು ಕಪ್
ಜೇನು ತುಪ್ಪ ಎರಡು ಟೀ ಚಮಚ
ಖರ್ಜೂರ ಐದಾರು/ಚಿಕ್ಕದಾಗಿ ಕತ್ತರಿಸಿ
ತಯಾರಿಸುವ ವಿಧಾನ:
ಖರ್ಜೂರವನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ ಕೊಳ್ಳಿ. ನಂತರ
ಕರಬೂಜದ ಹಣ್ಣನ್ನು ಮತ್ತು ಜೇನುತುಪ್ಪ ಹಾಕಿ ಅದರೊಂದಿಗೆ ಮತ್ತೊಮ್ಮೆ ರುಬ್ಬಿಕೊಳ್ಳಿ. ನಂತರ ಹಾಲನ್ನು ಹಾಕಿ ಇನ್ನೋಮ್ಮೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಗ್ಲಾಸ್ಗಳಿಗೆ ಹಾಕಿ ರುಚಿಯಾದ ಮತ್ತು ಸಕ್ಕರೆ, ಬೆಲ್ಲವನ್ನು ಸೇರಿಸದ ಕರಬೂಜದ ಹಣ್ಣಿನ ಮಿಲ್ಕ್ ಶೇಕ್ ಮಾಡಿ ಸವಿಯಿರಿ. ಇದು ಮಧುಮೇಹ ಇರುವವರೆಗೂ ಒಳ್ಳೆಯ ಮಿಲ್ಕ್ ಶೇಕ್ ಆಗಿದೆ.
-ವೇದಾವತಿ ಹೆಚ್.ಎಸ್.