ಕಾರ್ನಾಡರ “ಹಯವದನ”

ಮನುಷ್ಯನ ಅಪೂರ್ಣತೆಯ ಬಗೆಗೆ ಆಲೋಚಿಸಲು, ಕಾರ್ನಾಡರ “ಹಯವದನ” ಓದಬೇಕು. ನಾಟಕ ಆರಂಭ ಆಗುವುದು ಗಣೇಶನ ಅಪೂರ್ಣತೆಯ ಉಲ್ಲೇಖನದಿಂದ. ಇಲ್ಲಿ ಕಂಡುಬರುವುದು ಬರೇ ಮೂರು ಮುಖ್ಯ ಪಾತ್ರಗಳು – ಪದ್ಮಿನಿ, ದೇವದತ್ತ ಹಾಗೂ ಕಪಿಲ. ಇಲ್ಲಿ ಅಪೂರ್ಣತೆಯ ಪ್ರತೀಕ ಅನ್ನುವಂತೆ ಹಯವದನನಿದ್ದಾನೆ. 

ಇಲ್ಲಿನ ಕಥೆ ಸಾಮಾನ್ಯವಾಗಿ ಗೊತ್ತಿರುವಂತಹದೆ. ಯಾವುದೇ ಕಾರಣಕ್ಕೆ ಇಬ್ಬರು ಮನುಷ್ಯರ ತಲೆ ಅದಲು ಬದಲಾದರೆ, ತಲೆ ಇರುವವನನ್ನು ಅವನ ಹೆಸರಿನಿಂದ ಗುರುತಿಸುತ್ತೇವೆ, ಯಾಕೆಂದರೆ ತಲೆ ಮುಖ್ಯ. ಈ ಸಣ್ಣ ತುಣುಕನ್ನು ಹಿಡಿದುಕೊಂಡು ಕಾರ್ನಾಡರು ತುಂಬಾ ವಿಚಾರ ಪೂರಿತ ನಾಟಕ ಬರೆದಿದ್ದಾರೆ. 

ದೇವದತ್ತ – ಕಪಿಲ ಇಬ್ಬರು ಗೆಳೆಯರು, ಸೂತ್ರಧಾರ ಹೇಳುವಂತೆ, ಬಾಳ ಕೊರಳ ಗೆಳೆಯರು. ದೇವದತ್ತ ಬ್ರಾಹ್ಮಣ, ಪಂಡಿತ. ತೆಳ್ಳಗೆ ಬೆಳ್ಳಗೆ, ಸುಂದರಾಂಗ – ಸುಕುಮಾರ. ಕಪಿಲ ಕಮ್ಮಾರ. ತಾಮ್ರ ವರ್ಣ. ಬಲಶಾಲಿ, ಕೆಲಸದಲ್ಲಿ, ಅಟೋಟದಲ್ಲಿ ನಿಸ್ಸೀಮ.

 ದೇವದತ್ತ ಕುಮಾರಿಯೊಬ್ಬಳನ್ನು ಕಂಡು ಆಕೆಗೆ ಮರುಳಾಗುತ್ತಾನೆ. ಕಪಿಲನ ಸಹಾಯದಿಂದ ಆತ ಮೆಚ್ಚಿದ ಪದ್ಮಿನಿಯನ್ನು ಮದುವೆ ಆಗುತ್ತಾನೆ. ಪದ್ಮಿನಿಯನ್ನು ಮೊದಲು ಕಂಡಾಗ ಕಪಿಲ ಅಂದುಕೊಳ್ಳುತ್ತಾನೆ, “ನನ್ನ ಮನಸ್ಸು ಯಾಕೋ ಕಸಿವಿಸಿ ಗೊಂಡಿದೆ. ನೀನು (ದೇವದತ್ತ) ಸುಕುಮಾರ, ……..ಇವಳು ಮಿಂಚಿದ ಗೊಂಚಲು, ನಿನ್ನಂಥವನಿಗೆ ಹೇಳಿದವಳಲ್ಲ. ಇವಳಿಗೆ ಉಕ್ಕಿನ ಗಂಡೇ ಬೇಕು….” (ಸಂಪೂರ್ಣ ನಾಟಕದಲ್ಲಿ ದೇವದತ್ತನಿಗಿಂತಲೂ ಕಪಿಲನೇ ಬುದ್ದಿವಂತನಾಗಿ ಕಾಣುತ್ತಾನೆ). 

ಗಂಡ ಹೆಂಡತಿ, ಮಧ್ಯದಲ್ಲಿ ಕಪಿಲ – ದೇವದತ್ತನಿಗೆ ಸ್ವಲ್ಪ ಅಸೂಯೆ, ಸಂಶಯ. ಇದು ಸಹಜವೆ. ಆದರೆ ಅದನ್ನು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ – ಅಂತಹ ಗೆಳೆತನ.

ಪದ್ಮಿನಿ ಅನ್ನುವುದು, “….ಕಪಿಲ ಒಬ್ಬ ಹುಂಬ. ಅದಕ್ಕೆ ಅವನ ಚೇಷ್ಟೆ ಮಾಡೊದರಲ್ಲಿ ಹೊತ್ತು ಬೇಗ ಹೋಗುತ್ತದೆ ಅಷ್ಟೆ…”

ದೇವದತ್ತ ಅಂದುಕೊಳ್ಳುತ್ತಾನೆಃ ಇವಳಿಗೆ ನಿಜವಾಗ್ಯೂ ತಿಳಿಯೋದಿಲ್ಲವೋ, ತಿಳಿದೂ ಹೀಗೆ ಮಾಡತಾಳೊ…….ಈಗ ಇವಳನ್ನು ನೋಡಿದರೆ ಸಾಕು..ಒಡತಿಯನ್ನು ಕಂಡ ನಾಯಿಯ ಹಾಗೆ ದೀನನಾಗುತ್ತಾನೆ…..

ಗರ್ಬಿಣಿ ಹೆಂಡತಿಯ ಜೊತೆ ಗೆಳೆಯರಿಬ್ಬರೂ ಉಜ್ಜಯನಿಗೆ ಹೋಗುವ ಕಾರ್ಯಕ್ರಮ. ಹೋಗಬೇಕು, ಬೇಡದ ಹೊಯ್ದಾಟದ ನಂತರ ಹೋಗುತ್ತಾರೆ. ದೇವದತ್ತನಿಗೆ ನಿರಾಶೆ. ಉಳಿದ ಇಬ್ಬರಿಗೂ ಉತ್ಸಾಹ. ಪ್ರವಾಸ ರದ್ದಾದಾಗ ಕಪಿಲನ ಭಾವನೆಗಳುಃ …..ಇನ್ನು ಎಂಟುದಿನ ಏನು ಮಾಡಲಿ?…..ನನ್ನಲ್ಲಿ ಈ ಪೊಳ್ಳು ಯಾಕೆ ತುಂಬಬೇಕು? ಕಪಿಲ, ಕಪಿಲ, ನಿನ್ನನ್ನು ಹಿಡಿತದಲ್ಲಿಟ್ಟುಕೋ ಜಾರತಿದ್ದೀ. ಹಿಡಿತ ಬಿಡಬೇಡ…… 

ಇಲ್ಲಿ, ಪ್ರವಾಸದ ಚಿತ್ರಣದಲ್ಲಿ ಕಾರ್ನಾಡರ ಪ್ರತಿಭೆಯನ್ನು ಓದಿಯೇ ತಿಳಿದುಕೊಳ್ಳಬೇಕು. ಚಕ್ಕಡಿ ಹೋಗುವ ರೀತಿ, ಕಾಡಿನ ಸೌಂಧರ್ಯ ನಮ್ಮ ಕಣ್ಣ ಮುಂದೆ ತರುತ್ತಾರೆ. ಹೂವನ್ನು ವರ್ಣಿಸುವ ರೀತಿ ಅದ್ಭುತವಾಗಿದೆ.

 ಪದ್ಮಿನಿಯ ಮನೋಭಾವ – ಕಪಿಲ ಮರ ಹತ್ತುವಾಗ ತನ್ನಲ್ಲೇ ಅಂದುಕೊಳ್ಳುತ್ತಾಳೆಃ …ಚೈತನ್ಯದ ಜಲಪಾತ! ಮೈ ಮಾತ್ರ ಎಂಥ ಮೈ.………ನೋಡಿದರೆ ಮೈನವಿರೇಳುತ್ತದೆ…..ಯಾವ ಭಾಗ್ಯವಂತೆಯ ಪಾಲಿಗೆ ಹೋಗುತ್ತಾನೋ………ಯಾವ ಹೆಣ್ಣಾದರೂ ಮಾರುಹೋಗಬೇಕು. 

ಮುಂದೆ ದೇವದತ್ತನ ಮನೋಭಾವನೆಗಳನ್ನು ಓದುತ್ತಾ ಹೋಗುವಾಗ ನಮ್ಮ ಓದುಗರ ಮನಸ್ಸಿನ ಒಂದು ಮೂಲೆಯಲ್ಲಿ ನೋವಾಗುತ್ತದೆಃ…….ಎಂಥ ಮೂರ್ಖ ನಾನು! ಇಷ್ಟು ದಿನ ಕಪಿಲನ ಕಣ್ಣಿಂದ ಕೈಚಾಚೋ ದೈನ್ಯ ಕಂಡೆ. ಅವಳ ಕಣ್ಣಲ್ಲಿ ನೋಡಲಿಲ್ಲ. ನೋಡಿದಾಗೆಲ್ಲಾ ಅಲ್ಲಿ ತೂಗುಬಿಟ್ಟ ಪಡದೆನೇ ಕಣ್ಣೀನ ತಳ ಅಂತ ನಂಬಿದೆ…..

ಪದ್ಮಿನಿಯ ತಳಮಳಃ ಹೀಗೆ ಮುಂದುವರಿದರೆ ಏನು ಗತಿ? ದೇವರೇ ಮುಂದೆ ಏನು ಗತಿ?…. 

ನಂತರ ದೇವದತ್ತ ಕಾಡಿನ ಮಧ್ಯ ಇರುವ ಕಾಳಿಕಾ ಗುಡಿಗೆ ಹೋಗಿ, ಅಲ್ಲಿರುವ ಹಳೇ ಖಡ್ಗದಿಂದ, ತಾನು ಹಿಂದೆ, ಪದ್ಮಿನಿಗೆ ಮರುಳಾದಾಗ, ಕೊಟ್ಟ ಮಾತಿನಂತೆ ದೇವರಿಗೆ ತನ್ನ ಶಿರವನ್ನು ಅರ್ಪಿಸುತ್ತಾನೆ. ಆತನನ್ನು ಹುಡುಕುತ್ತಾ ಹೋದ ಕಪಿಲ ಸಹ ತನ್ನ ಗೆಳೆಯನಿಗಾಗಿ ಆ ದೇವತೆಗೆ ತನ್ನ ತಲೆಯನ್ನು ಬಲಿ ಕೊಡುತ್ತಾನೆ. 

ಇವರಿಬ್ಬಬರನ್ನೂ ಹುಡುಕುತ್ತಾ ಬಂದ ಬಸುರಿ ಪದ್ಮಿನಿ ಸಹ ತನ್ನ ಬಲಿದಾನಕ್ಕೆ ಸಿದ್ದಳಾಗುತ್ತಾಳೆ. ಸಾಯುವಾಗ ಆಕೆ ಅನ್ನುವ ಮಾತುಃ ” …….ನನ್ನ ಮೇಲೆ ನಿನಗೆ(ದೇವದತ್ತ) ಇಷ್ಟೇ ಪ್ರೀತಿ ಇತ್ತೇನು? ಮತ್ತು ಕಪಿಲ ನೀನು? ನಾಯಿಗಣ್ಣಿಂದ ನೋಡುವ ನೀನೂ ನನ್ನ ವಿಚಾರ ಮಾಡಲಿಲ್ಲ?……..” 

ಇನ್ನೊಂದು ಬಲಿದಾನಕ್ಕೆ ಮುನ್ನ ದೇವಿ ನಿದ್ದೆಯಿಂದ ಎಚ್ಚೆತ್ತು ಆಕೆಯನ್ನು ತಡೆಯುತ್ತಾಳೆ. ಅವರಿಬ್ಬರ ತಲೆಗಳನ್ನು ಜೋಡಿಸಲು ಹೇಳಿ ತಾನು ಾವರಿಗೆ ಪ್ರಾಣ ದಾನ ಮಾಡುವ ಬಗೆಗೆ ಭರವಸೆ ನೀಡುತ್ತಾಳೆ. ತಲೆ ಜೋಡಿಸುವ ಮೊದಲು ಪದ್ಮಿನಿ ದೇವಿಯಲ್ಲಿ ಒಂದು ಪ್ರಶ್ನೆ ಕೇಳುತ್ತಾಳೆಃ ಇಬ್ಬರಲ್ಲಿ ಒಬ್ಬನನ್ನಾದರೂ ಉಳಿಸಿಕೊಳ್ಳಬಹುದಿತ್ತಲ್ಲ ಎಂದು. ಅಲ್ಲಿ ನಡೆಯುವ ಸಂಭಾಷಣೆಯಲ್ಲಿ ದೇವಿ ಹೇಳುತ್ತಾಳೆಃ ಸತ್ಯ ಮಾತನಾಡಿದವಳು ನೀನೊಬ್ಬಳೆ ಎಂದು. 

ಕತ್ತಲಲ್ಲಿ ಪದ್ಮಿನಿ ತಿಳಿದೋ, ತಿಳಿಯದೆಯೋ ಅವರೀರ್ವರ ತಲೆಯನ್ನು ಅದಲು ಬದಲು ಮಾಡುತ್ತಾಳೆ. ಆವಾಗ ದೇವಿ ಹೇಳುವ ಮಾತುಃ ಮಗಳೇ, ಸತ್ಯದಿಂದ ನಡೆಯೋದಕ್ಕೂ ಒಂದು ಮಿತಿ ಇರಬೇಕು…. 

ಜೀವ ತಳೆದ ಅವರಿಬ್ಬರಲ್ಲಿ ಒಬ್ಬನಿಗೆ ತಲೆ ಭಾರ ಆದರೆ, ಮತ್ತೊಬ್ಬನಿಗೆ ದೇಹ ಭಾರ ಆಗುತ್ತದೆ. ತಮ್ಮಲ್ಲಿ ಆದ ಬದಲಾವಣೆಗೆ ಮೊದಲು ಸಂತೋಷ ಪಡುತ್ತಾರೆ. ಖುಶಿಯಿಂದ ಕುಣಿಯುತ್ತಾರೆ. ಮೊದಲಿನ ಸ್ನೇಹದ ಸಂಬಧ ಈಗ ರಕ್ತದ ಸಂಬಂಧ… 

ದೇವದತ್ತ (ಕಪಿಲನ ದೇಹದ, ದೇವದತ್ತನ ತಲೆಯ) ಮತ್ತು ಪದ್ಮಿನಿ ಒಟ್ಟಿಗೆ ಹೊಸ ಜೀವನ ನಡೆಸಲು ಹೊರಟಾಗ, ಕಪಿಲನಿಗೆ ಪದ್ಮಿನಿ ತನ್ನವಳು, ಆಕೆ ತನ್ನ ದೇಹ ಹಂಚಿಕೊಡವಳು ಹಾಗಾಗಿ ಆಕೆ ತನ್ನೊಡನೆ ಇರಬೇಕು ಅನಿಸುತ್ತದೆ. ಇದು ಗೆಳೆತನದ ಬಿರುಕಿಗೆ ಮೂಲವಾಗುತ್ತದೆ. ಈವಾಗ ಕಪಿಲ ಹೇಳುವ ಮಾತುಃ ನಿನಗೆ ದೇವದತ್ತನ ಬುದ್ಧಿವಂತ ತಲೆ ಬೇಕು. ಕಪಿಲನ ಶಕ್ತಿವಂತ ಮೈ ಬೇಕು. 

ದೇವದತ್ತನ ಬುದ್ಧಿವಂತ ತಲೆ ಉತ್ತರಿಸುತ್ತದೆ, ” ಅದರಲ್ಲೇನೂ ತಪ್ಪಿಲ್ಲ….ಗಂಡು ಮೈ ನೋಡಿ ಹೆಂಗಸಿಗೆ ಆಕರ್ಷಣೆ ಎನಿಸಿದರೆ ತಪ್ಪೇನೂ ಇಲ್ಲ…” 

ಒಬ್ಬ ತಪಸ್ವಿಯ ಮಾತಿನಂತೆ ಪದ್ಮಿನಿ ದೇವದತ್ತನ ತಲೆಇರುವವನ ಮಡದಿ ಆಗುತ್ತಾಳೆ, ಏಕೆಂದರೆ, ದೇಹದಲ್ಲಿ ತಲೆಯೇ ಪ್ರಮುಖ ವಾದುದು.ಪದ್ಮಿನಿ ಮತ್ತು ದೇವದತ್ತ (ಕಪಿಲನ ಮೈಯೊಂದಿಗೆ) ಊರಿಗೆ ಹೋದರೆ, ಕಪಿಲ ಕಾಡಿಗೆ ಹೋಗುತ್ತಾನೆ – ಮತ್ತೆಂದೂ ಊರಿನ ಮುಖ ನೋಡುವದಿಲ್ಲ.

 ಪದ್ಮಿನಿ ಈಗ ಸುಖಿ. ಹೆಣ್ಣು ಬಯಸುವ ಕಪಿಲನ ಗಂಡು ದೇಹ ಹಾಗೂ ದೇವದತ್ತನ ಬುದ್ಧಿವಂತ ತಲೆ ಆಕೆಗೆ ಸಿಕ್ಕಿದೆ.(ಪ್ರೀತಿಗೆ ಸ್ಥಾನ ಇಲ್ಲದ್ದು ದುರಾದೄಷ್ಟ – ವೈಯಕ್ತಿಕ ಅಭಿಪ್ರಾಯ). 

ಶಿರ ಪ್ರಮುಖ ಅಂಗ. ಹಾಗಾಗಿ ದೇವದತ್ತ ಬದಲಾಗುತ್ತಾನೆ. ಮೊದಲಿನ ಕಸುವು, ಮೊದಲಿನ ದೈಹಿಕ ಲವಲವಿಕೆ ಕಡಿಮೆ ಆಗುತ್ತಾ ಹೋಗುತ್ತದೆ – ಆತ ಮೊದಲಿನಂತೆಯೇ ಕೃಶನಾಗುತ್ತಾ ಮೊದಲಿನ ದೇವದತ್ತ ಆಗುತ್ತಾನೆ. ಆತನ ಸ್ಪರ್ಷದಿಂದ, ಆತನಲ್ಲಾಗಿರುವ ಬದಲಾವಣೆಗೆ ಪದ್ಮಿನಿ ಕಂಪಿಸುತ್ತಾಳೆ. ಆಕೆಗೆ ಮರೆತು ಹೋದ ಕಪಿಲ ಪುನಃ ನೆನಪಾಗುತ್ತಾನೆ. 

ದೇವದತ್ತನಲ್ಲಾಗುವ ಬದಲಾವಣೆ, ಪದ್ಮಿನಿಯ ಮನಸ್ಥಿತಿ, ಆಕೆಯ ಕನಸ್ಸು…ಎಲ್ಲವನ್ನೂ ಮಗುವಿನ ಗೊಂಬೆಗಳ ಮುಖಾಂತರ ಕಾರ್ನಾಡರು ಸುಂದರವಾಗಿ ಹೇಳುತ್ತಾರೆ. 

ಮಗುವಿಗೆ ಹೊಸ ಗೊಂಬೆ ತರಲು ಗಂಡನನ್ನು ದೂರ ಕಳುಹಿದ ಪದ್ಮಿನಿ, ಮಗುವಿನೊಂದಿಗೆ ಕಾಡಿನ ದಾರಿ ಹಿಡಿಯುತ್ತಾಳೆ. ಕಾಡಿಗೆ ಹೊರಟ ಪದ್ಮಿನಿ ಮಗುವಿಗೆ ಹೇಳುವ ಮುತ್ತೈದೆಯ ಮರ ಕಪಿಲನ ನೆನಪು ಮೂಡಿಸುತ್ತದೆ.”ಹಳೆಯ ಗುರುತಿನ ಅಚ್ಚು ಮೆಚ್ಚಿನ ಗಿಡ. ಅದನ್ನು ಮಾತನಾಡಿಸಿ ನಮಸ್ಕಾರ ಅಂದು ಬರಬೇಕು”. 

ಕಾಡನ್ನು ಒಳ ಹೊಕ್ಕ ಆಕೆ, ಕಪಿಲನ ಜಾಗವನ್ನು ಪತ್ತೆ ಮಾಡಿ ಆತನಲ್ಲಿ ಹೋಗುತ್ತಾಳೆ. “ಮಗನಿಗೆ ನದಿಯ ಜೊತೆ ನಕ್ಕು ಗೊತ್ತಿಲ್ಲ. ತಂಗಾಳಿಗೆ ನಡುಗಿ ಗೊತ್ತಿಲ್ಲ. ಕಾಲಿಗೆ ಮುಳ್ಳು ಚುಚ್ಚಿ ಅತ್ತು ಗೊತ್ತಿಲ್ಲ….” –ಆಕೆಗೆ ಮಗನನ್ನು ಪೂರ್ಣ ಮನುಷ್ಯನನನ್ನಾಗಿ ಮಾಡುವ ಆಸೆ. – ಅನುಭವದಿಂದ ಕಲಿತ ಪಾಠ. 

ಮುಂದೆ ಕಪಿಲ ಪದ್ಮಿನಿಯರ ನಡೆವ ಸಂಭಾಷಣೆ ತುಂಬಾ ವಿಚಾರಪೂರ್ಣವಾಗಿದೆ. ಕಪಿಲನ ನೋವು, ಪದ್ಮಿನಿಯ ತೊಳಲಾಟ ತುಂಬಾ ಹೊತ್ತು ನಮ್ಮ ಮನಸ್ಸನ್ನು ಕಲಕುತ್ತದೆ. ಕಪಿಲ ಆಕೆಯಲ್ಲಿ ತನ್ನ ನೆನಪನ್ನು ಯಾಕೆ ಕೆದಕಿದೆಯೆಂದು ಕೇಳುತ್ತಾ ಆಕೆಗೆ ಹಿಂದೆ ಹೋಗಲು ಹೇಳುತ್ತಾನೆ. “ತಲೆಗೆ ನೆನಪಿರುವ ಹಾಗೆ ತೊಗಲಿಗೂ ನೆನಪಿರುತ್ತದೆ ಗೊತ್ತೇನು” ಅನ್ನುತ್ತಾನೆ. “ನೀ ನನ್ನ ಮುಟ್ಟಿದಾಗ ಎಲ್ಲೋ ಮುಟ್ಟಿದ ನೆನಪು – ಎಲ್ಲೆಂದು ಗೊತ್ತಾಗುವದಿಲ್ಲ – ಹಿಂದೆ ನನ್ನ ಮುಟ್ಟಿದಾಗ ಈ ತಲೆ ಇರಲಿಲ್ಲ ನೋಡು” ಅನ್ನುತ್ತಾನೆ. “ಆದರೆ ಈ ಅಸಹ್ಯ ಮೈ ಮಾತ್ರ ಹಳೆಯ ಗೆಳಯನನ್ನು ಕಂಡ ಹಾಗೆ ನಿನ್ನ ಸ್ಪರ್ಶಕ್ಕೆ ಹೂ ಬಿಟ್ಟಿತು.”

“ನನ್ನ ಅಪೂರ್ಣತೆಯ ಅರಿವನ್ನೇ ಹುದುಗಿ ಬಿಟ್ಟಿದ್ದೆ, ನೀನು ಉಗುರಿನಿಂದ ಕೆದರಿ ಮತ್ತೆ ಅಗೆದು ತೆಗೆದೆ.”

“ಯಾಕೆ ಬಂದೆ? ಕಾಡುತ್ತಿದ್ದ ನೆನಪುಗಳನ್ನೆಲ್ಲ ಕಿತ್ತು ಹಾಕುವಷ್ಟರಲ್ಲಿ ಮತ್ತೆ ಯಾಕೆ ಬೆನ್ನಟ್ಟಿ ಬಂದೆ?…..ಮೈ ಮತ್ತು ತಲೆಯ ನಡುವೆ ಬಿರುಕು ಇಲ್ಲದಿದ್ದ ಕಪಿಲ. ಈಗ ಇನ್ನೇನು ಬೇಕು ನಿನಗೆ?”

ಪದ್ಮಿನಿಯ ಬವಣೆಃ ದೇವದತ್ತ ಒಂದೇ ರಾತ್ರಿಯಲ್ಲಿ ಬದಲಾಗಿ ಮೊದಲಿನ ಹಾಗೆ ಆಗಿ ಬಿಟ್ಟಿದ್ದರೆ ನಾನು ನಿನ್ನನ್ನು ಪೂರಾ ಮರೀತಿದ್ದೆ. ಆದರೆ ಹಾಗಾಗಲಿಲ್ಲ………ಅವನು ಬದಲಾಗುತ್ತಾ ಹೋದ ಹಾಗೆ, ನಿನ್ನ ನೆನಪು ತೀವ್ರವಾಗಿ ಓಡಿ ಬಂದೆ….

ಕಪಿಲನಿಗೆ ಆಕೆ ಹೇಳುವ ಮಾತುಃ “……ನಿನ್ನ ಮೈ ಯಾವುದೋ ನದಿಯಲ್ಲಿ ಮಿಂದು ನಲಿದು, ಸುಖಪಟ್ಟಿತು. ಆ ನದಿ ಯಾವುದು, ಆ ಈಸು ಯಾವುದು ತಲೆಗೆ ತಿಳ್ಯೋದು ಬೇಡೇನು? ನಿನ್ನ ತಲೆ ಆ ನದಿಯಲ್ಲಿ ಮುಳುಗಬೇಕು,…..ಮುಖವನ್ನು ತನ್ನೆದೆಗೆ ಅದುಮಿ ಹಿಡಿಯಬೇಕು. ಅಲ್ಲಿಯವರೆಗೂ ಅಪೂರ್ಣ ನೀನು.”

ದೇವದತ್ತ ಪದ್ಮಿನಿ ಮತ್ತು ಮಗುವನ್ನು ಹುಡುಕಿಕೊಂಡು ಅಲ್ಲಿಗೇ ಬರುತ್ತಾನೆ.

ಕಪಿಲ ದೇವದತ್ತರ ಸಂಭಾಷನೆಯನ್ನು ನೋಡಿಃ

ದೇಃ ನನಗೆ ನಿನ್ನ ಶಕ್ತಿ ಬೇಕಾಗಿತ್ತು. ಆದರೆ, ಕಾಡು ಪ್ರೇರಣೆಗಳು ಬೇಕಾಗಿದ್ದಿಲ್ಲ. ನೀನು ದ್ವೇಷದಲ್ಲಿ ಬಾಳಿದೆ, ನಾನು ಭಯದಲ್ಲಿ

ಕಃ ಇಲ್ಲ. ಹೆದರಿ ಬಾಳಿದವನು ನಾನು.

ಇಬ್ಬರೂ ಪದ್ಮಿನಿಯನ್ನು ಪ್ರೀತಿಸಿದುವುದಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಪಾಂಡವರ ತರಹ ಮೂವರೂ ಒಟ್ಟಿಗೆ ಇರುವುದು ಅಸಾಧ್ಯ ಎಂದು ಒಪ್ಪಿಕೊಳ್ಳುತ್ತಾರೆ. ಗೆಳೆಯರಿಬ್ಬರೂ ಪ್ರೀತಿಯಿಂದಲೇ ಒಬ್ಬರನೊಬ್ಬರು ಇರಿದು ಸಾಯುತ್ತಾರೆ. ಪದ್ಮಿನಿ ತಾನೂ ಚಿತೆ ಏರುತ್ತಾಳೆ. 

ಸಾಯುವ ಮುನ್ನ ಮಗುವನ್ನು ಭಾಗವತರ ಕೈಯಲ್ಲಿ ಇತ್ತು, ಮೊದಲ ಐದು ವರ್ಷ ಕಾಡಿನ ಶಬರನಿಗೆ ಕಪಿಲನ ಮಗನೆಂದು ಕೊಡಲು ಹೇಳುತ್ತಾಳೆ. ನಂತರ ದೇವದತ್ತನ ಮಗನೆಂದು ಆತನ ತಂದೆಗೆ ಒಪ್ಪಿಸಲು ಹೇಳುತ್ತಾಳೆ. ಸಾಯುವಾಗ ತನ್ನ ಮಗನಾದರೂ ಪೂರ್ಣ ಮನುಷ್ಯನಾಗುವ ಬಯಕೆ ಆಕೆಗೆ. 

ಈ ನಾಟಕದಲ್ಲಿ ಹಯವದನ ಅಪೂರ್ಣತೆಯ ಸಂಕೇತ. ಕಥೆ ಹಯವದನ ಪೂರ್ಣಾಂಗನಾಗುವುದು ಇತ್ಯಾಧಿಯಲ್ಲಿ ಮುಂದುವರಿಯುತ್ತದೆ. ಈ ನಾಟಕ ಓದಿ ಮುಗಿಸಿದ ನಂತರ, ಮನಸ್ಸಿನಲ್ಲಿ ಕಾಡುವ ಈ ಪಾತ್ರಗಳು, ನಂತರ ಒಂದು ಪ್ರಶ್ನೆ ಏಳುತ್ತದೆ; ನಾವು “ಪೂರ್ಣ”ರಾಗಲು ಸಾಧ್ಯವಿಲ್ಲವೆ? ನಮ್ಮಲ್ಲಿ ಒಂದಲ್ಲ ಒಂದು ಕೊರತೆ ಇರುವುದು ವಿಧಿ ಲಿಖಿತವೆ? ಗಂಡು ಹೆಣ್ಣಿನ ನಡುವೆ ಪ್ರೀತಿ ಒಂದು ಸಾಕಾಗುವದಿಲ್ಲವೆ? ನಮ್ಮಲ್ಲಿರುವ ಕೊರತೆಯ ಅರಿವು ನಮ್ಮ ನಿರಾಶೆಗೆ ಕಾರಣವೆ ಅಥವಾ ನಮ್ಮ ಅಭಿವೄದ್ಧಿಗೆ ಕಾರಣವೆ?

ಹಯವದನ ಕೊನೆಯಲ್ಲಿ ಒಂದು ಮಾತು ಹೇಳುತ್ತಾನೆಃ ಇಂಥ ಭಾವನಾ ವಿವಶತೆಯಿಂದಲೇ ನಮ್ಮ ಸಾಹಿತ್ಯ ಕೆಟ್ಟು ಹೋಗಿದೆ, ನಮ್ಮ ಜೀವನ ಲಡ್ಡಾಗಿದೆ….

ಕಾರ್ನಾಡರ ಹಯವದನವನ್ನು ಎಲ್ಲರೂ ಓದಬೇಕೆಂದು ನನ್ನ ಅಭಿಪ್ರಾಯ. ನಾನು ಕಳೆದು ಹೋದ ಪುಸ್ತಕವನ್ನು ಪುನಹ ಪಡೆಯಲು ಮೂರು ಸಲ ಕೊಂಡು ಕೊಂಡೆ ಅನ್ನುವುದು ಈ ಪುಸ್ತಕದ ಮೌಲ್ಯ ಕಾರಣವೇ ಅಥವಾ ಭಾವನಾತ್ಮಕ ಸಂಭಂಧವೇ ಎಂದು ನನಗೆ ಗೊತ್ತಿಲ್ಲ.

– ರಾಜೇಂದ್ರ ಬಿ. ಶೆಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

19 Comments
Oldest
Newest Most Voted
Inline Feedbacks
View all comments
ramachandra shetty
ramachandra shetty
11 years ago

ಧನ್ಯವಾದಗಳು.ಸರ್ .ಒ೦ದು ಪುಸ್ತಕದ ವಿವರಣೆಯನ್ನು ಚೆನ್ನಾಗಿ ಕೊಟ್ಟಿದ್ದೀರಿ..ಈ ಬಾರಿ ನಾನು ಕೊ೦ಡು ಓದುವೆ

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ಮೆಚ್ಚುಗೆಗೆ ಧನ್ಯವಾದಗಳು

ಚಿನ್ಮಯ ಭಟ್ಟ
ಚಿನ್ಮಯ ಭಟ್ಟ
11 years ago

ಸರ್,
ಇಲ್ಲಿಯತನಕವೂ ನನಗೆ ನಾಟಕದ ಮಾಧ್ಯಮ ಸರಿಯಾಗಿ ಗೊತ್ತಿಲ್ಲ…
ಕಳೆದ ಬಾರಿ VTU FEST ಅಲ್ಲಿ ಎರಡು ನಾಟಕ ಆಡಿದ್ದೆವಷ್ಟೇ…ಜೊತೆಗೆ ಅಲ್ಲಲ್ಲಿ ಪಿಯೂಸಿ,ಹೈಸ್ಕೂಲಿನಲ್ಲಿ ನನ್ನ ಪಾಲಿನ ಸಂಭಾಷಣೆ ಉರು ಹೊಡೆದು ಅಭಿನಯದ ಥರ ಏನೋ ಮಾಡಿದ್ದೇನೆ …ಕಳೆದ ಬಾರಿ ಒಂದು ಸ್ವಂತದ ನಾಟಕವನ್ನು ಬರೆಯುವ ಪ್ರಯತ್ನ ಮಾಡಿ ಸೋತೂ ಇದ್ದೇನೆ…ಅದೇ ಬೇಜಾರಿಗೆ ಅವತ್ತು ನಡೆದ ಎಲ್ಲ ಕಿರುನಾಟಕಗಳನ್ನು (ಸುಮಾರು ೨೦) ನೋಡಿದ್ದೆ..
ಅದಿಷ್ಟು ಬಿಟ್ಟರೆ ನಾಟಕದ ಬಗ್ಗೆ ಜಾಸ್ತಿಯೇನೂ ಗೊತ್ತಿಲ್ಲ…ಜಾತ್ರೆಯಲ್ಲಿರುವ ನಾಟಕದ ಕಥೆ ಬೇರೆ ಬಿಡಿ..
ಇನ್ನು ನಿಮ್ಮ ಬರಹದಿಂದ ನಾಟಕಗಳ ಮೂಲಕವೂ ತಮ್ಮ ಅಭಿಪ್ರಾಯವನ್ನು ಅರ್ಥಪೂರ್ಣವಾಗಿ  ಮಂಡಿಸಬಹುದೆಂದು ನೆನಪಾಗುತ್ತಿದೆ…
ಕಾರ್ನಾಡರಿಗೆ ನಾಟಕ ಕ್ಷೇತ್ರದಲ್ಲಿ ಪ್ರಸಿದ್ಧರು ಎಂಬುದಷ್ಟು ಗೊತ್ತಿತ್ತು…
ಧನ್ಯವಾದ ನನಗೆ ಗೊತ್ತಿರದ ಹೊಸ ಮಾಧ್ಯಮದ ಪರಿಚಯ ಮಾಡಿಸಿದ್ದುದಕ್ಕಾಗಿ…
ಹಾಂ ನಾನಿನ್ನೂ ಕೃತಿ ಓದಿಲ್ಲವಾದುದರಿಂದ ಏನೂ ಹೇಳಲಾರೆ…ಹೇಳಬಾರದೂ ಕೂಡಾ…
ಸರ್ ಅಲ್ಲಿ ಕೊನೆಯಲ್ಲಿ ಒಂದು ಕಡೆ "ಹುಡುಕಿಕೋಂಡು" ಆಗಿದೆ ಚೂರು ನೋಡಿ…
ಜೊತೆಗೆ ಸಂಭಾಷಣೆಗಳನ್ನು ಹೊಸ ವಾಕ್ಯದಲ್ಲೇ ಕೊಟ್ಟಿದ್ದರೆ ಓದಲು ಇನ್ನಷ್ಟು ಚೆನ್ನವೇನೋ…ನೋಡಿ…
ಹಾಂ ನನ್ನ ಸಂಗ್ರದಲ್ಲಿದ್ದ ರಂಗ ಗೀತೆಗಳಲ್ಲಿ ಎರಡು "ಹಯವದನ" ಎನ್ನುವ ಹೆಸರಿನಲ್ಲಿದ್ದಿದ್ದೆ…
ದಿ.ಸಿ.ಅಶ್ವಥ್ ಅವರ ಗಾನಸಿರಿಯನ್ನು ಅನುಭವಿಸಿಯೇ ತೀರಬೇಕು….
ಒಂದು
"ನಮಗೆ ಒಪ್ಪಿತವಿಲ್ಲ ….."
ಮತ್ತೊಂದು 
"ನೀರಿನ ಮೇಲೆ ಚಿತ್ರ ಕೆತ್ತಲಿಕ್ಕೆ ಆಗೋದಿಲ್ಲ….."
ಇದರದ್ದೇ ತಾನೆ ಅವು????
ಬರೆಯುತ್ತಿರಿ..
ಹಾಂ ಇದು ನಾನು ಓದಿದ "ಪಂಜು"ವಿನ ಮೊದಲ ಸಂಚಿಕೆ…ಚೆನಾಗಿದೆ ಮುಂದುವರೆಯಲಿ …
ನಮಸ್ತೆ 🙂

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ಧನ್ಯವಾದಗಳು.
ಓದಿದ ಕಾರ್ನಾಡರ ನಾಟಕಗಳಲ್ಲಿ  ಕಂಡು ಕೊಂಡ ವಿಶೇಷತೆ – ಸಂಭಾಷಣೆಗಳು. ಅವು ನಮ್ಮ ಮನ ತಟ್ಟುತ್ತವೆ. ಮನಸ್ಸಿನಲ್ಲಿ ತುಂಬಾ ಕಾಲ ಉಳಿಯುತ್ತವೆ.
ಈ ನನ್ನ ಪ್ರೀತಿಯ ನಾಟಕ ನೋಡುವ ಅವಕಾಶ ನನಗಿನ್ನೂ ಸಿಕ್ಕಿಲ್ಲ, ಒಂದಲ್ಲ ಒಂದು ಕಾರಣದಿಂದ ನನ್ನ ಕೈ ತಪ್ಪಿ ಹೋಗಿವೆ. ಹಾಗಾಗಿ ಆ ಗೀತೆಗಳ ಬಗೆಗೆ ನನಗೆ ಗೊತ್ತಿಲ್ಲ. "ನೀರಿನ ಮೇಲೆ…" ಆ ಹಾಡು ಹಯವದನ ನಾಟಕದಲ್ಲೂ ಇದೆ.
ಇನ್ನು ಕಾಗುಣಿತ ತಪ್ಪು ಎರಡು ಮೂರು ಕಡೆ ಆಗಿದೆ – ನನ್ನ ಟೈಪಿಂಗ್ ಕಾರಣ ಹಾಗೂ ಕೆಲೆವೆಡೆ ನನ್ನ ಅಜ್ಞಾನವೂ ಇರಬಹುದು.

Raghunandan K
11 years ago

ನಾಟಕದ ಓದಿನ ವಿಮರ್ಶೆ ಬೇರೆ, ನೋಟದ ವಿಮರ್ಶೆ ಬೇರೆ…
ಓದು ನೀಡುವ ಭಾವಗಳನ್ನ ವಿಸ್ತಾರವನ್ನ ನೋಟ ನೀಡದಿರಬಹುದು, ಓದುವಾಗ ಅರ್ಥೈಸಿಕೊಳ್ಳುವ ಕಾಲಾವಧಿ ನಮ್ಮ ಕೈಯಲ್ಲಿರುತ್ತದೆ, ವಿಸ್ತಾರಕ್ಕೂ ಅವಧಿ ಸಿಗುತ್ತದೆ,
ನೋಡುವಾಗ ಕೆಲವು ಅಂಶಗಳು ವಿಚಾರದ ಪರಿಮಿತಿಯಿಂದಾಚೆ ಹೋಗಬಹುದು, ತೀವ್ರ ಸೆಳೆದ ನೋಟ ಮಾತ್ರ ಕಾಡಬಹುದು…
ಈ ಎರಡರ ಸಾಧ್ಯತೆಗಳು ಪರಸ್ಪರ ಮಿತಿಗಳೂ ಆಗಬಹುದು…

ಸುಂದರವಾದ ಓದಿನ ಪರಿಚಯ ನೀಡಿದ "ಪಂಜು" ವಿಗೆ "ರಾಜೇಂದ್ರ" ರವರಿಗೆ ಧನ್ಯವಾದ… ಈ ತರಹದ ಪರಿಚಯಗಳು ನಮ್ಮ ಓದಿಗೆ ಮತ್ತಷ್ಟು ಸಾಣೆ ಹಿಡಿದಂತೆ… 

ಒಳಿತಾಗಲಿ…

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago
Reply to  Raghunandan K

ಧನ್ಯವಾದಗಳು.
ನಿಮ್ಮ ವಿಚಾರಗಳನ್ನು ಒಪ್ಪುತ್ತೇನೆ. ನಾಗರ ಹಾವು ಚಲನ ಚಿತ್ರಬಂದಾಗ ಅದರ ಲೇಖಕ ತ. ರಾ. ಸು. ರವರು ಬಹಳ ಅಸಂತುಷ್ಟತೆ ಪ್ರದರ್ಶಿಸಿದ್ದರು.
ನಾನು ಬರೆದದ್ದು ಪುಸ್ತಕದ ಬಗೆಗೆ. "ಹಯವದನ" ನೋಡುವ ಅವಕಾಶ ನನಗಿನ್ನೂ ಸಿಕ್ಕಿಲ್ಲ.

PARTHASARATHY N
11 years ago

ಕತೆಗಳಲ್ಲಿ ತರ್ಕವನ್ನು ನಿರೀಕ್ಷಿಸುವಂತಿಲ್ಲವಾದರು, ನಾಟಕದ ನಿರೂಪಣೆ ನಿಮ್ಮ ಪದಗಳಲ್ಲಿ ಸೊಗಸಾಗಿ ಮೂಡಿದೆ. ಕತೆ ಇಲ್ಲಿ ಸಂಕೇತಿಕವಾಗಿ ಮನುಷ್ಯನ ಮನಸಿನ ಅಯಾಮಗಳ ಒಳಹೊಕ್ಕು ನೋಡುವಿಕೆ ನಾಟಕದ ಮುಖ್ಯ ವಸ್ತುವಾಗಿರುತ್ತದೆ . ಚಿನ್ನಾಗಿದೆ ನಿಮ್ಮ ನಾಟಕದ ಪರಿಚಯ

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ಧನ್ಯವಾದಗಳು. ಯಾಕೋ, ಈ ನಾಟಕವನ್ನು ಓದಿದಂತೆಲ್ಲಾ ಅದರ ಬಗ್ಗೆ ಒಂದು ವ್ಯಾಮೋಹ ಹುಟ್ಟುತ್ತದೆ.

chinmay mathapati
chinmay mathapati
11 years ago

ಕವಿ ಕಾರ್ನಾಡರು,ಮೂರು ಪಾತ್ರಗಳನ್ನು ನಾಟಕದ ಪ್ರಧಾನ ಭೂವಿಕೆಯಲ್ಲಿಟ್ಟು  ಕಟ್ಟಿಕೊಟ್ಟಂತಹ ಈ "ಹಯವದನ" ನಾಟಕವನ್ನು ಬಹಳ ಸುಂದರವಾಗಿ ಮತ್ತು ಸುಲಲಿತವಾಗಿ ವಿಶ್ಲೇಷಿಸಿದ್ದೀರಿ. ಮನುಷ್ಯನಲ್ಲಿನ ಅಪೂರ್ಣತೆಯನ್ನು ಪದ್ಮಿನಿಯ ಸೂಪ್ತವಾಂಛೆಗಳಿಂದ ವ್ಯಕ್ತಪಡಿಸಿದ ಬಗೆ ಅತೀ ಅಮೋಘ ವೆನಿಸಿತು. ನಿಮ್ಮ ಅಭಿಪ್ರಾಯ ನನಗೂ ಹಯವದನವನ್ನು ಓದುವ ತುಡಿತವನ್ನು ಹುಟ್ಟುಹಾಕಿತು.ಇನ್ನು, ಕೊನೆಯಲ್ಲಿ ನೀವು ಹೇಳಿದ ಹಾಗೆ ಅಪೂರ್ಣತೆಯೆಂಬುದು ಎಲ್ಲರಲ್ಲೂ ಇರುವಂತಹ ವ್ಯಕ್ತಿತ್ವ. ಇದರಿಂದ ಮನುಷ್ಯನ ಏಳ್ಗೆ ಮತ್ತು ವಿನಾಶ ಎರಡರ ಸಾಧ್ಯಾಸಾಧ್ಯತೆಗಳ ಅರಿವು ನನಗಾಯಿತು…. !! ಚೆಂದದ ವಿಮರ್ಶೆಗೆ ಧನ್ಯವಾದಗಳು  ಸರ್ ….!!!

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ಧನ್ಯವಾದಗಳು – ನಿಮ್ಮ ಮೆಚ್ಚುಗೆಗೆ. ನಾಟಕವನ್ನು ಓದಿದ ನಂತರ, ನೀವು ಅಲ್ಲಿನ ಸಂಭಾಷಣೆಯಲ್ಲಿ ಇನ್ನೂ ಹೊಸ ಅರ್ಥ ಕಾಣಬಹುದು.

Prasad V Murthy
11 years ago

ನಾನು ಹಯವದನ ನಾಟಕವನ್ನು ಓದಿಲ್ಲ, ಆದರೆ ಈ ವಿಮರ್ಶೆ ಓದಿದ ಮೇಲೆ ಓದಬೇಕು ಎನಿಸಿದೆ. ನಾಟವನ್ನು ಓದುವ ಪರಿಪಾಟವನ್ನು 'ಹಯವದನ'ದಿಂದಲೇ ಪ್ರಾರಂಭಿಸುತ್ತೇನೆ. ಧನ್ಯವಾದಗಳು ರಾಜೇಂದ್ರ ಸರ್ 🙂
– ಪ್ರಸಾದ್.ಡಿ.ವಿ.

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ಧನ್ಯವಾದಗಳು, ಪ್ರಸಾದರೆ.

Santhoshkumar LM
11 years ago

ರಾಜೇಂದ್ರ ಸರ್,
ಏನಿದು? ಒಂದು ನಾಟಕವನ್ನು ಹೀಗೆಯೋ ಬರೆಯಬಹುದಾ?
ಅದರ ಸಾಹಿತ್ಯವೂ ಹೀಗೆ ಪಾತ್ರಗಳ ಜೊತೆ ನಮ್ಮ ಮನಸಿನ ಕೋಣೆಗೆ ಲಗ್ಗೆ ಇಡುತ್ತಾ?
ನಿಮ್ಮ ಈ ಲೇಖನ ನೋಡಿದ ಮೇಲೆ ಬಂದ ಉದ್ಗಾರಗಳಿವು.

ಸಿಕ್ಕಾಪಟ್ಟೆ Mature ಆಗಿ ಬರೆದಿದ್ದೀರ!!
ಆ ಪುಸ್ತಕದ Feel ಅನ್ನು ಇದರಲ್ಲೇ ಕೊಟ್ಟಿದ್ದೀರ.
ಚೆನ್ನಾಗಿದೆ. ಇಷ್ಟವಾಯಿತು!!

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ನಿಮ್ಮ ಮೆಚ್ಚುಗೆಗಿಂತಲೂ ಹೆಚ್ಚು ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಸಂತೋಷರವರೆ.

M.S.Krishna Murthy
M.S.Krishna Murthy
11 years ago

ನಿಮ್ಮ ವಿಮರ್ಶೆ ಚೆನ್ನಾಗಿದೆ ಸರ್. ಇದನ್ನು ಓದಿದ ಮೇಲೆ ನನಗೂ ಹಯವದನ ಓದುವ ಆಸೆ ಅಯಿತು. ಇತ್ತಿಚೆಗೆ ಇಂಗ್ಲೀಶ್ ಚಿತ್ರವೂ ಸಹ ಬಂದಿತ್ತು ಇದೆ ಕತೆಯ ಮಾದರಿ FACE OFF ಅನ್ನೊ ಚಿತ್ರ.

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

Niharika
Niharika
11 years ago

Chandada Vimarshe.. iShata aaytu…:)

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago
Reply to  Niharika

ಮೆಚ್ಚುಗೆಗೆ ಧನ್ಯವಾದಗಳು.

D.Ravivarma
D.Ravivarma
11 years ago

tumbaa arthapurna haagu apyayamanavaada baraha ii natakadalli ondu haadu gajavadana  he rambaa …tumbaa adbutavaada haadu jayasrii avaru adannu maidumbi haadiddare…. naanu aagaagge gunuguttene….karnaadarannu naavu innu arthisikollabeku….

19
0
Would love your thoughts, please comment.x
()
x