ಕೊಲ್ಲುವುದು ಸುಲಭ. ಕಾಯುವುದು ಕಷ್ಟ. ಒಂದು ಗಿಡವನ್ನು ನೆಟ್ಟು, ಪೋಷಿಸಿ, ರಕ್ಷಿಸಿ ಮರವಾಗುವತನಕ ನೋಡಿಕೊಳ್ಳುವುದು ತಪಸ್ಸಿನಂತೆ. ಕೊಲ್ಲುವುದಕ್ಕೆ ಒಂದು ಕತ್ತಿಯೇಟು ಸಾಕು. ಹಾಗೆ ಕೆಲಬಾರಿ ಪ್ರಕೃತಿಯಲ್ಲಿ ರಕ್ಷಿಸುವ ಪ್ರಯತ್ನವೂ ವಿಫಲಗೊಳ್ಳುವುದಕ್ಕೆ ಪ್ರತ್ಯಕ್ಷವಾಗಿ ನಾವೇ ಕಾರಣವಾಗುವುದು ಇದೆ. ಕಾಯುವ ಪ್ರಯತ್ನದಲ್ಲಿ ಸಫಲಗೊಂಡು ಸಂತೋಷದಿಂದ ಬೀಗಿದ ಘಟನೆಯ ಜೊತೆಗೆ ವಿಫಲಗೊಂಡು ದು:ಖ ಅನುಭವಿಸಿದ ಕತೆಯೂ ಇಲ್ಲಿದೆ.
ನಾನು ಕೆಲಸ ಮಾಡುವ ಜಾಗದಲ್ಲಿ ಜನರ ತಿರುಗಾಟ ಹೆಚ್ಚು. ಜೋಡಿ ಪಿಕಳಾರಗಳಿಗೆ ಗೂಡು ಕಟ್ಟಲು ಜಾಗವೊಂದು ಬೇಕು, ಕಾಂಕ್ರೀಟ್ ಕಾಡಿನಲ್ಲಿ ಅವಕ್ಕೆ ಪ್ರಶಸ್ತ ಸ್ಥಳವಿಲ್ಲ. ಅದೇಕೊ ಅತಿಯಾದ ಜನರ ತಿರುಗಾಟ ಇರುವ ಬಾಗಿಲಿನ ಮೇಲೆ ಅಂದರೆ ಆರುವರೆ ಅಡಿ ಎತ್ತರದಲ್ಲಿ ಬರೀ ಮೂರಿಂಚು ಜಾಗವಿತ್ತು, ಅಲ್ಲಿ ತಮ್ಮ ಗೂಡಿಗೆ ಫೌಂಡೇಷನ್ ಹಾಕಿದವು. ಆಸ್ಪತ್ರೆಯನ್ನು ಚೊಕ್ಕಟ ಮಾಡುವ ಆಯಾಗಳಿಗೆ ಹಕ್ಕಿಗಳು ಗೂಡು ಕಟ್ಟುವುದು ಕಿರಿ-ಕಿರಿ ವಿಷಯ. ಕಸಗಳನ್ನು ತಂದು ಕೆಡವುತ್ತವೆ. ಮತ್ತೆ-ಮತ್ತೆ ಗುಡಿಸಬೇಕಲ್ಲ. ಅದಕ್ಕಿಂತ ಗೂಡನ್ನೇ ಕಿತ್ತು ಹಾಕಿದರೆ, ಹಾಳು ತಾಪತ್ರಯವೇ ಇರುವುದಿಲ್ಲ. ಅದಕ್ಕೊಂದು ಉಪಾಯ ಕಂಡುಹಿಡಿಯಲಾಯಿತು. ಆಯಮ್ಮಗಳನ್ನು ಕರೆದು ಇಲ್ಲೊಂದು ಹಕ್ಕಿ ಗೂಡು ಕಟ್ಟುತ್ತಿದೆ ಅದು “ದೇವರ ಹಕ್ಕಿ” ಎಂದೆ. ಮಾರನೇ ದಿನ ಬಿದ್ದು-ಬಿದ್ದು ನಗುವ ಸರದಿ ನನ್ನದಾಗಿತ್ತು. ಪುಟ್ಟಮ್ಮ ಆ ಬಾಗಿಲಿನಿಂದ ಬರುವಾಗ ಗೂಡಿಗೊಂದು ನಮಸ್ಕಾರ ಮಾಡಿ ಒಳಗೆ ಬಂದಳು. ಗೂಡು ಕಟ್ಟಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಬರೀ ಎರಡೇ ದಿನದಲ್ಲಿ ಗೃಹ ಪ್ರವೇಶ ಆಯಿತು. ಮೂರನೇ ದಿನವೇ ಗೋಲಿಯಷ್ಟು ಚಿಕ್ಕದಾದ ಚುಕ್ಕಿ-ಚುಕ್ಕಿ ಮೊಟ್ಟೆಗಳು ಗೂಡಲಿದ್ದವು. ಇದೀಗ ತಂದೆ-ತಾಯಿಗಳಿಗೆ ಕಾವು ಕೊಡುವ ಸಮಯ. ನನಗೇಕೋ ಅನುಮಾನ ಆರಡಿ ವ್ಯಕ್ತಿ ಆ ಬಾಗಿಲಿನಿಂದ ಹಾದು ಹೋಗುವಾಗ ವ್ಯಕ್ತಿಯ ತಲೆಗೂ ಮತ್ತು ಗೂಡಿಗೂ ಬರೀ 6 ಇಂಚು ವ್ಯತ್ಯಾಸ ಇರುತ್ತದೆ. ಈ ಹಕ್ಕಿಗಳು ಹೇಗೆ ಕಾವು ಕೊಡುತ್ತವೆ ಎಂದು ಗಮನಿಸುವ ಕೆಲಸ ಶುರುವಾಯಿತು. ಆಶ್ಚರ್ಯವೆಂಬಂತೆ ತಾಯಿ ಹಕ್ಕಿ ಗೂಡಿನಲ್ಲಿ ಕಾವು ಕೊಡಲು ಕುಳಿತೇ ಬಿಟ್ಟಿತು.
ಜನರ ಓಡಾಟದಿಂದ ಕಿರಿ-ಕಿರಿ ಅನುಭವಿಸುತ್ತಿತ್ತು. ನಿಶ್ಯಬ್ಧವಿರುವಾಗ ನಿಶ್ಚಿಂತೆಯಿಂದ ಕುಳಿತಿರುತ್ತಿದ್ದ ತಾಯಿ, ಯಾರಾದರೂ ಆ ಬಾಗಿಲಿನ ಮೂಲಕ ಹಾದು ಹೋದಾಗ ಇಡೀ ದೇಹವನ್ನು ಕುಗ್ಗಿಸಿ ಕೂರುತ್ತಿತ್ತು. ನೆಟ್ಟಗಿರುವ ಅದರ ಪುಟ್ಟ ಜುಟ್ಟವೂ ದೇಹದಲ್ಲಿ ಹುದುಗಿ ಹೋಗಿರುತ್ತಿತ್ತು. ಮಧ್ಯದಲ್ಲಿ ಹೋಗಿ ಅಗತ್ಯವಿರುವಷ್ಟು ಆಹಾರವನ್ನು ತಿಂದು ಮತ್ತೆ ಬಂದು ಕೂರುತ್ತಿತ್ತು. ಸುಮಾರು ಹನ್ನೆರೆಡು ದಿನಗಳ ನಂತರ ಒಂದು ಮೊಟ್ಟೆಯೊಡೆದು ಮರಿ ಹೊರಗೆ ಬಂತು. ಇನ್ನೊಂದು ಮೊಟ್ಟೆ ಹಾಗೆಯೇ ಇತ್ತು. ಈಗ ತಾಯಿಗೆ ಹೆಚ್ಚುವರಿ ಕೆಲಸ. ಮರಿಗೆ ಆಹಾರವೊದಗಿಸುವುದು ಮತ್ತು ಕಾವು ಕೊಡುವುದು. ಅಂತೂ ಎರಡು ದಿನ ಬಿಟ್ಟು ಮತ್ತೊಂದು ಮೊಟ್ಟೆಯೂ ಮರಿಯಾಯಿತು. ನಿಸರ್ಗದಲ್ಲಿ ಬದುಕಲು ಬೇಕಾದ ಎಲ್ಲಾ ಸೂತ್ರಗಳು ಲಭ್ಯವಿದೆ. ಚಿಕ್ಕ ಪಕ್ಷಿಗಳಿಗೆ ಮೊಟ್ಟೆ-ಮರಿಗಳನ್ನು ಶತ್ರುಗಳಿಂದ ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಹೆಚ್ಚು ದಿನಗಳು ಅಂದರೆ ಹೆಚ್ಚು ಅಪಾಯ. ಹೀಗಾಗಿ ಚಿಕ್ಕ ಪಕ್ಷಿಗಳ ಮೊಟ್ಟೆಗಳು ಬೇಗ ಮರಿಯಾಗುತ್ತವೆ. ಅಂದರೆ ಪಿಕಳಾರದ ಮೊಟ್ಟೆ ಮರಿಯಾಗಲು 10-12 ದಿನ ಬೇಕಾದರೆ ಕಾಗೆಯಂತಹ ದೊಡ್ಡ ಪಕ್ಷಿಗಳ ಮೊಟ್ಟೆ ಮರಿಯಾಗಲು 30-40 ದಿನ ಬೇಕು. ಹಾಗೆಯೇ ಮರಿಗಳು ಹಾರಲು ಕಲಿಯುವ ಪ್ರಕ್ರಿಯೆಯಲ್ಲೂ ಇದೇ ನಿಯಮವಿದೆ. ಗೂಡು ಕಟ್ಟಿದ ದಿನದಿಂದಲೇ ಪಿಕಳಾರಗಳು ಮೊಟ್ಟೆಯಿಟ್ಟು, ಮರಿಮಾಡಿ ಹಾರಿಸಿಕೊಂಡು ಹೋಗುವುದರ ಬಗ್ಗೆ ಬಹಳವೇ ಸಂಶಯವಿತ್ತು. ಬೇಗ-ಬೇಗ ಹಾರಲು ಕಲಿಸುವುದು ತಾಯಿ ಹಕ್ಕಿಗಳ ಆದ್ಯತೆ. ಬೇಗ ಬೆಳೆಯಲು ಹೆಚ್ಚು ಆಹಾರ. ಹೆಚ್ಚು ಪೌಷ್ಟಿಕ ಕೀಟಗಳು. ದಿನೇ ದಿನೇ ಮರಿಗಳು ಹಿಗ್ಗುತ್ತಿದ್ದವು. ಗೂಡಿನ ಮೂರಿಂಚು ಜಾಗ ಚಿಕ್ಕದಾಗಿತ್ತು. ಆರುವರೆ ಅಡಿ ಎತ್ತರದ ಗೂಡಿನಿಂದ ಬಿದ್ದು ಹೋಗುವ ಎಲ್ಲಾ ಸಾಧ್ಯತೆಗಳು ಇದ್ದವು. ಬೀಳದ ಹಾಗೆ ಒಂದು ಸಣ್ಣ ಮರೆ ಮಾಡುವ ಯೋಚನೆಯಿಂದ ಒಂದು ಸಣ್ಣ ತಗಡು ಮತ್ತು ಕ್ವಿಕ್‍ಫಿಕ್ಸ್ ತಂದಿಟ್ಟುಕೊಂಡಾಗಿತ್ತು. ನಮ್ಮ ಮಧ್ಯಸ್ತಿಕೆಯಿಂದಾಗಿ ಹಕ್ಕಿಗಳು ಗೂಡಿಗೆ ಬರುವುದು ನಿಲ್ಲಿಸಿದರೆ ಎಂಬ ಅಳುಕೂ ಇತ್ತು.
ಮಾರ್ಚ್ ಇಪ್ಪತ್ತು. ವಿಶ್ವ ಗುಬ್ಬಿಗಳ ದಿನ. ಬಂದು ನೋಡುತ್ತೇನೆ. ಅಚಾತುರ್ಯವಾಗಿದೆ ಒಂದು ಹಕ್ಕಿಮರಿ ಮೇಲಿನಿಂದ ಕೆಳಗೆ ಬಿದ್ದಿದೆ. ನೋಡಿದರೆ ಸೋಮಾಲಿಯಾದ ಹೊಟ್ಟೆಗಿಲ್ಲದ ಮಗುವಿನ ತರಹ ನೆಲ ನೋಡುತ್ತಾ ನಡುಗುತ್ತಾ ಇದೆ. ನಾಜೂಕಿನಿಂದ ಎರಡೂ ಕೈಯಲ್ಲಿ ಹಿಡಿದು ಗೂಡಿನ ಒಳಗಿಟ್ಟೆ. ತಾಯಿ ಹಕ್ಕಿಯ ಗಲಾಟೆ ಜೋರಾಯಿತು. ನನ್ನ ಪ್ರಕಾರ ಪೆಟ್ಟು ಬಿದ್ದ ಈ ಮರಿ ಬದುಕಲಿಕ್ಕಿಲ್ಲ. ಏನೇ ಆದರೂ ಹಾಗೆ ಬಿಡುವ ಹಾಗಿಲ್ಲ. ಮೊದಲೇ ತಂದಿಟ್ಟುಕೊಂಡಿದ್ದ ಕ್ವಿಕ್‍ಫಿಕ್ಸ್ ಕೆಲಸಕ್ಕೆ ಬರಲಿಲ್ಲ. ಮತ್ತೇನು ಮಾಡುವುದು ಎಂಬ ಚಿಂತೆಯಲ್ಲಿರುವಾಗ ಡಿಸ್ಪೋವಾನ್ ಇಂಜಕ್ಷನ್ ಸಿರಿಂಜ್‍ನ ಖಾಲಿ ಡಬ್ಬ ಕಣ್ಣಿಗೆ ಬಿತ್ತು. ಅದನ್ನು ಅರ್ಧಕ್ಕೆ ಕತ್ತರಿಸಿ, ಈಗ ಹಾಲಿ ಇರುವ ಗೂಡಿಗಿಂತ ಕೊಂಚ ದೊಡ್ಡದು ಮಾಡಿ, ಪ್ಲಾಸ್ಟರ್ ಹಾಕಿ ಅಂಟಿಸುವುದು ಮುಂದಿದ್ದ ಯೋಚನೆ. ಮತ್ತೆ ತಡವೇಕೆ? ತಾಯಿ ಹಕ್ಕಿಗಳು ಹೊರಗೆ ಹೋದ ಸಮಯದಲ್ಲಿ ಇದನ್ನು ಮಾಡಬೇಕಿತ್ತು. ಇಲ್ಲವಾದರೆ ಹಕ್ಕಿಗಳು ಸಿಕ್ಕಾಪಟ್ಟೆ ಕೂಗಾಡಿ ಗಲಾಟೆ ಮಾಡುತ್ತವೆ. ರಟ್ಟಿನ ಡಬ್ಬ ರೆಡಿ ಮಾಡಿ ಕಾಯುತ್ತಾ ಕುಳಿತೆವು. ತಾಯಿ ಹಕ್ಕಿ ಗುಟುಕು ಕೊಟ್ಟು ಹೊರಹೋಯಿತು. ನಿಧಾನವಾಗಿ ಮರಿಗಳ ಸಮೇತ ಹಕ್ಕಿ ಗೂಡನ್ನು ತೆಗೆದು ರಟ್ಟಿನ ಡಬ್ಬಿಯಲ್ಲಿಡುವುದು ನಮ್ಮ ಯೋಜನೆ. ಆದರೆ ಗೂಡು ಎಷ್ಟು ಭದ್ರವಾಗಿ ಅಂಟಿಕೊಂಡಿತ್ತೆಂದರೆ ಕೀಳಲು ಭಯವಾಗುವಷ್ಟು, ಹುಲ್ಲಿನ ಎಳೆಗಳನ್ನು ಅಲ್ಯೂಮಿನಿಯಂ ಚೌಕಟ್ಟಿಗೆ ಹಾಕಿದ ಒಂದು ಸ್ಕ್ರೂಗೆ ಬಲವಾಗಿ ಸುತ್ತಿ ಗಟ್ಟಿ ಮಾಡಿಟ್ಟಿದ್ದವು. ಪ್ರಯತ್ನ ಬಿಡುವ ಹಾಗಿಲ್ಲ. ನಿಧಾನವಾಗಿ ಮರಿಗಳಿಗೆ ತೊಂದರೆಯಾಗದಂತೆ ಗೂಡನ್ನು ಎತ್ತಿ ನಮ್ಮ ರಟ್ಟಿನ ಪೆಟ್ಟಿಗೆಯಲ್ಲಿಟ್ಟೆವು. ತಾಯಿ ಆಹಾರ ಕೊಡಲು ಬಂದಿರಬೇಕೆಂದು ತಮ್ಮ ಕೆಂಪಾದ ಕೊಕ್ಕನ್ನು ರಾಕ್ಷಸಾಕಾರಾವಾಗಿ ತೆರೆದು ಚೀಂ ಚೀಂಗುಟ್ಟಿದವು. ಅಷ್ಟರಲ್ಲಿ ತಾಯಿ ಹಕ್ಕಿ ಜೊತೆಗಾರನೊಂದಿಗೆ ಬಂದೇ ಬಿಟ್ಟಿತು. ಇಲ್ಲಿ ನೋಡಿದರೆ ಟ್ರಾನ್ಸ್‍ಫರ್ ಸೀನರಿಯಾಗಿದೆ.
ತಮ್ಮ ಗೂಡಿನ ಬದಲಿಗೆ ಬೇರೊಂದು ಕೃತಕ ಗೂಡು!!. ತಾಯಿ ಹಕ್ಕಿ ಈ ನಮ್ಮ ಕೃತಕ ಗೂಡಿನ ಮೇಲೆ ಕೂತು ತಪಾಸಣೆ ಮಾಡಿತು. ಮರಿಗಳು ಬಾಯಿ ಕಳೆದು ಕೂತಿವೆ. ಕಚ್ಚಿಕೊಂಡು ಬಂದ ಕೀಟಗಳನ್ನು ಕೊಡದೇ ಹಾಗೆ ಹಾರಿಹೋಗಿ ಜೊತೆಗಾರನನ್ನು ತಪಾಸಣೆಗಾಗಿ ಕಳುಹಿಸಿತು. ಅದು ಬಂದು ನೋಡಿದ ಮೇಲೆ ಏನೂ ತೊಂದರೆಯಿಲ್ಲವೆಂದು ಅನಿಸಿರಬೇಕು. ಮತ್ತೆ ತಾಯಿ ಹಕ್ಕಿ ಬಂದು ಆಚೀಚೆ ನೋಡಿ ಗುಟುಕು ನೀಡಿತು. ದಿನದಲ್ಲಿ ಅದೆಷ್ಟು ಬಾರಿ ತಾಯಿ ಹಕ್ಕಿ ಗುಟುಕು ಎಂದು ಎಣಿಸಲು ಸಾಧ್ಯವಾಗಲಿಲ್ಲ. ಮಾರ್ಚ್ 25. ಬೆಳಗ್ಗೆ ಬಂದು ನೋಡಿದಾಗ ಮರಿಗಳು ಬೇರೆ ತರನಾಗಿ ಕೂಗುತ್ತಿದ್ದವು, ವ್ಯತ್ಯಾಸವೆಂದರೆ ಗೂಡಿನಿಂದ ಹಾರಿ ಹೊರಗಿದ್ದವು. ಒಂದು ಕಿಟಕಿಯ ಸರಳಿನ ಮೇಲೆ ಕುಳಿತ್ತಿತ್ತು. ಇನ್ನೊಂದು ನೆಲದ ಮೇಲಿತ್ತು. ನೆಲದ ಮೇಲಿರುವ ಮರಿಯನ್ನು ಗೂಡಿಗೆ ಹಾಕಬೇಕು ಎಂದುಕೊಂಡು ಕೆಳಗೆ ಬಗ್ಗಿದೆ, ಮರಿ ಪುರ್ರಂತ ಅಷ್ಟು ದೂರ ಹಾರಿತು. ಕೈಗೆ ಸಿಗಲಿಲ್ಲ. ಮತ್ತೊಂದು ಪ್ರಯತ್ನ ಮಾಡುವ ಗಡಿಬಿಡಿಯಲ್ಲಿ ಪರ್ರಂತ ಸಶಬ್ಧವಾಗಿ ಪ್ಯಾಂಟ್‍ನ ಹಿಂಬದಿ ಹರಿದುಹೋಯಿತು. ಹಕ್ಕಿಮರಿ ಕೈಗೆ ಸಿಕ್ಕಿತು. ಗೂಡಿನಲ್ಲಿ ಇಟ್ಟು ಪ್ಯಾಂಟ್ ಬದಲಾಯಿಸಲು ಅರ್ಜಂಟ್ ಮನೆಗೋಡಿದೆ. ವಾಪಾಸು ಬರುವಷ್ಟರಲ್ಲಿ ಕಿಟಕಿಯ ಮೇಲೆ ಕುಳಿತ್ತಿದ್ದ ಮರಿಯನ್ನು ತಾಯಿ ಹಕ್ಕಿ ಹಾರಿಸಿಕೊಂಡು ಹೋಗಿತ್ತು. ಎರಡನೇ ಮರಿಯನ್ನು ಹಾರಿಸಿಕೊಂಡು ಹೋಗುವ ಪ್ರಯತ್ನದಲ್ಲಿತ್ತು. ಹೊರ ಹೋಗಿ ಯಾವುದೇ ಹಿಂಸ್ರ ಪಕ್ಷಿಗಳಿಲ್ಲದ್ದನ್ನು ಖಾತ್ರಿ ಮಾಡಿಕೊಂಡ ಮೇಲೆ ಸಮಾಧಾನವಾಯಿತು. ಮಧ್ಯಾಹ್ನ ಊಟಕ್ಕೆ ಹೋಗುವ ಹೊತ್ತಿನಲ್ಲಿ ಆಚೀಚೆ ನೋಡಿದೆ ಹತ್ತಿರದ ಹಾಲುಮಡ್ಡಿಯ ಗಿಡದ ಎಲೆಗಳ ಮರೆಯಲ್ಲಿ ಕುಳಿತುಕೊಂಡ ಮರಿಗಳು ತಾಯಿಯನ್ನು ಆಹಾರಕ್ಕಾಗಿ ಪೀಡಿಸುತ್ತಿದ್ದವು. ನಿರ್ಕಾಯ್ ಮರದ ಮೇಲೆ ಹೊಂಚಿ ಕುಳಿತ ಕಾಗೆಯತ್ತ ಒಂದು ಸಣ್ಣ ಕಲ್ಲು ಬೀಸಿ ಒಗೆದೆ. ಕಾ.. ಕಾ.. ಎನ್ನುತ್ತಾ ಹಾರಿ ದೂರದ ತೆಂಗಿನ ಮರದ ಮೇಲೆ ಕುಳಿತಿತು. ಮರಿಗಳು ಬದುಕಿನ ಹೋರಾಟಕ್ಕೆ ಅಣಿಯಾಗುತ್ತಿದ್ದವು.
ಈ ಘಟನೆಯ ನಂತರ ಸರಿಯಾಗಿ 2 ತಿಂಗಳಲ್ಲಿ ಇದೇ ಜಾಗದಲ್ಲಿ ಮತ್ತೊಂದು ಜೋಡಿ ಗೂಡು ಕಟ್ಟಿದವು. ಮೂರು ಮೊಟ್ಟೆಗಳು ಒಡೆದು ಮೂರು ಮರಿಗಳು ಚೀಂವ್‍ಗುಟ್ಟಿದವು. ನಾಲ್ಕಾರು ದಿನಗಳಲ್ಲಿ ಮರಿಗಳು ಗೂಡಿನಿಂದ ಹೊರಬರಲು ಪ್ರಯತ್ನಿಸಿತ್ತಿದ್ದವು. ಮೊದಲ ಘಟನೆಯ ಗೆಲುವಿನಿಂದಾಗಿ ನಮ್ಮಲ್ಲಿ ಆತ್ಮವಿಶ್ವಾಸವಿತ್ತು. ಮತ್ತೆ ಮರಿ ಬೀಳದಂತಿರಲು ರಟ್ಟಿನ ಗೂಡು ರಚಿಸಿ ಅದರೊಳಗೆ ಒರಿಜಿನಲ್ ಗೂಡನ್ನು ಇಟ್ಟೆವು. ಹೊಸ ಹಕ್ಕಿ ಆಕ್ರಮಣಕಾರಿ ಮನೋಭಾವವನ್ನು ತೋರಿದರೂ ನಾವು ತಲೆ ಕೆಡಿಸಿಕೊಳ್ಳಲಿಲ್ಲ. ಅದೇನು ವ್ಯತ್ಯಾಸವಾಯಿತು ಗೊತ್ತಿಲ್ಲ. ಹಕ್ಕಿ ಗೂಡಿನಲ್ಲಿ ಕೂರುತ್ತಿರಲಿಲ್ಲ. ಬರೀ ಆಹಾರವನ್ನು ನೀಡುತ್ತಿತ್ತು. ಇಂದು ನಾಳೆ ಸರಿಹೋಗಬಹುದೆಂದು ಆತಂಕದಿಂದ ಕಾದೆವು. ಮಳೆ ಬೀಳುತ್ತಿತ್ತು. ಮರಿಗಳಿಗೆ ತಾಯಿಯ ಬೆಚ್ಚನೆಯ ಶಾಖದ ಅಗತ್ಯವಿತ್ತು. ರಾತ್ರಿ ಹಕ್ಕಿ ಬಂದು ಕೂರಲಿಲ್ಲ. ಬೆಳಗ್ಗೆ ಬಂದು ಎಲ್ಲಾ ಮರಿಗಳಿಗೂ ಆಹಾರ ನೀಡಿ ಹಾರಿ ಹೋದ ಹಕ್ಕಿ ಮಧ್ಯಾಹ್ನದವರೆಗೂ ಪತ್ತೆಯಿಲ್ಲ. ನಿಸರ್ಗದಾಟವೆಂದರೆ ಸಂಕೀರ್ಣತೆಯಿಂದ ಕೂಡಿರುತ್ತದೆ. ನಿಧಾನವಾಗಿ ಹಕ್ಕಿಯ ಬೇಟಿ ಕಡಿಮೆಯಾಗತೊಡಗಿತು. ಕೃತಕವಾಗಿ ಆಹಾರ ನೀಡಲು ನಮ್ಮಲ್ಲಿ ಯಾವುದೇ ಮಾಹಿತಿಯಿಲ್ಲ. ಇಂಟರ್‍ನೆಟ್‍ನಲ್ಲಿ ಹುಡುಕಾಡಿದಾಗ ಸಿಕ್ಕ ಮಾಹಿತಿ ಇಷ್ಟು ಚಿಕ್ಕ ಮರಿಗಳಿಗೆ ಉಪಯೋಗವಾಗುವಂತಿರಲಿಲ್ಲ. ಮರಿಗಳು ಬೇಗ ಬೇಗ ಬೆಳೆಯಲು ನಿಸರ್ಗದಲ್ಲಿ ಸಿಗುವ ವಿವಿಧ ಕೀಟಗಳ ಅಗತ್ಯವಿದೆ. ನಮ್ಮ ಯಾವ ತಂತ್ರಜ್ಞಾನವೂ ಆ ಚಿಕ್ಕ ಮರಿಗಳ ಹಸಿವನ್ನು ಇಂಗಿಸಲು ಶಕ್ತವಾಗಲಿಲ್ಲ. ತಾಯಿ ಹಕ್ಕಿ ಬರಲಿಲ್ಲ. ಬಂದರೂ ಸರಿಯಾಗಿ ಆಹಾರ ನೀಡಲಿಲ್ಲ. 2 ದಿನದ ಅಂತರದಲ್ಲಿ ಮೂರು ಮರಿಗಳು ಸತ್ತು ಹೋದವು. ಕಾಯುವ ನಮ್ಮ ಪ್ರಯತ್ನ ವಿಫಲವಾಯಿತು. ಮನಸ್ಸಿಗಾದ ನೋವನ್ನು ಬರೆಯಲು ಅಕ್ಷರಗಳಿಲ್ಲ.
ಆರಿದ್ರಾ ಮಳೆ ಶುರುವಾಗಿ ಎರಡು ದಿನ ಚೆನ್ನಾಗಿ ಬಂತು. ಮನೆಯ ಮುಂದಿನದು ಚರಂಡಿಯೇ ಆದರೂ, ಯಾವುದೇ ಹೊಲಸು ನೀರು ಅಲ್ಲಿ ಹರಿಯುವುದಿಲ್ಲ. ನಮ್ಮ ಸಾಲಿನಲ್ಲಿರುವ ಎಲ್ಲಾ ಮನೆಗಳ ನೀರು ಮನೆಯ ಹಿಂಭಾಗದ ಚರಂಡಿ ಸೇರುತ್ತದೆ. ನಗರಸಭೆಯ ಚರಂಡಿಯದು ನಿಶ್ಚಿತವಾಗಿ ಕಳಪೆ ಕಾಮಗಾರಿ. ಆದರೂ ಇದರಲ್ಲೊಂದು ಅನುಕೂಲವಿತ್ತು. ನಮಗಲ್ಲ. ಕಪ್ಪೆಗಳಿಗೆ. ಮಳೆ ಜೋರಾದಾಗ ಗ್ವಾಟರ ಕಪ್ಪೆಗಳು ತಮ್ಮ ಗಾತ್ರಕ್ಕೂ ಮೀರಿ ಕೂಗುತ್ತಿದ್ದವು. ಚರಂಡಿಯ ನಿಂತ ಮಳೆನೀರಿನಲ್ಲಿ ಮೊಟ್ಟೆಯಿಟ್ಟು ಹೋಗಿದ್ದವು. ಮೊಟ್ಟೆಗಳು ಗೊದಮೊಟ್ಟೆಗಳಾಗಿ ಅಸಂಖ್ಯವಾಗಿ ಆ ನೀರಿನಲ್ಲಿ ಬಾಲ ಬೀಸುತ್ತಾ ಕಪ್ಪೆಯಾಗುವ ಹಂತದಲ್ಲಿ ಮಳೆ ಸಂಪೂರ್ಣ ನಿಂತು ಹೋಗಿತ್ತು. ನೀರಿಲ್ಲಿದ ಗೊದಮೊಟ್ಟೆಗಳು ಸಾಯುವ ಹಂತ. ಅವಕ್ಕೆ ನೀರಿನ ಅವಶ್ಯಕತೆಯಿತ್ತು. ನಗರಸಭೆಯಿಂದ ನಲ್ಲಿಯಲ್ಲಿ ಬರುವ ಸಂಸ್ಕರಿಸಿದ ನೀರಿನಲ್ಲಿ ರಾಸಾಯನಿಕಗಳಿರುತ್ತವೆ. ಮಳೆ ನೀರನ್ನು ಎಲ್ಲಿಂದ ತರುವುದು. ಮೊಳೆಕೊಯ್ಲು ಮಾಡಿದ ನೀರು ಡ್ರಂನಲ್ಲಿತ್ತು. ಒಂದರೆಡು ಬಕೇಟ್ ನೀರು ತಂದು ಚರಂಡಿಗೆ ಸುರುವಿದೆ. ಗೊದಮೊಟ್ಟೆಗಳಲ್ಲಿ ಚಲನೆ ಶುರುವಾಯಿತು. ಮತ್ತೆರೆಡು ದಿನಗಳಲ್ಲಿ ಸ್ವಲ್ಪ ಮಳೆಯಾಗಿ ಚರಂಡಿಯಲ್ಲಿ ಸಾಕಷ್ಟು ನೀರು ನಿಂತಿತು. ಸೊಳ್ಳೆಗಳ ಮೊಟ್ಟೆಗಳನ್ನು ತಿಂದು ಗೊದಮೊಟ್ಟೆಗಳು ಕಪ್ಪೆಗಳಾಗಿ ರೂಪಾಂತರ ಹೊಂದುತ್ತಿವೆ. ಪಿಕಳಾರ ಹಕ್ಕಿಯ ಮರಿಗಳು ಸತ್ತುಹೋದ ದು:ಖವನ್ನು ಮರೆಸಲು ಗೊದಮೊಟ್ಟೆಗಳು ಸಹಾಯ ಮಾಡಿದವು ಎಂಬಲ್ಲಿಗೆ ಈ ಕತೆ ಮುಗಿಯುತ್ತದೆ.
ಕತೆಯೇನೋ ಮುಗಿಯಿತು. ಆದರೂ ಹತ್ತನೇ ತರಗತಿಯ ನನ್ನ ಮಗ ಕೇಳಿದ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. “ನಿಸರ್ಗವನ್ನು ಹಾಗೆ ಬಿಡು, ನೀನು ಮಧ್ಯೆ ಪ್ರವೇಶಿಸುವುದು ಯಾಕೆ? ಚಿರತೆಗೆ ಆಹಾರ ಜಿಂಕೆ. ಜಿಂಕೆಯನ್ನುಳಿಸಲು ಚಿರತೆಗೆ ಅಡ್ಡಬರುವುದು ಎಷ್ಟು ಸರಿ???. ಹಾಗೆಯೇ ಪಿಕಳಾರದ ಸಂಸಾರದ ಮಧ್ಯೆ ಪ್ರವೇಶ ಮಾಡಲು ನೀನ್ಯಾರು???”. ನಾನು ಹೇಳಿದ ಉತ್ತರಗಳು ಅವನಿಗೆ ಸಮಾಧಾನ ತರಲಿಲ್ಲವೆಂಬುದು ಸತ್ಯ.
Super sir, very interesting!!
I appreciate your love towards the nature…….Please continue…
ತುಂಬಾ ಚೆನ್ನಾಗಿದೆ ಸರ್.
ತೇಜಸ್ವಿಯವರ ಸುಸ್ಮಿತಾ ಮತ್ತು
ಹಕ್ಕಿಮರಿ ಕಥೆ ಓದಿದ್ದೆ.ತುಂಬಾ ದಿನಗಳ
ನಂತರ ಅಂಥಹುದೇ ಒಂದು ಅನುಭವ ಕಥನ ಓದಿ
ಖುಷಿಯಾಯಿತು .
ಚೆನ್ನಾಗಿದೆ ಸರ್ ಹಕ್ಕಿಕತೆ 🙂
ತುಂಬಾ ಖುಶಿಯಾಯಿತು – ಈ ಲೇಖನ ಓದಿ. ನಿಮ್ಮಂತಹ ಸಾವಿರಾರು ಜನರು ಹುಟ್ಟಿ ಬರಲಿ.
Thumba chenagidhe sir munduvaresi shubhavagali