ಕಾಯಕವೇ ಕೈಲಾಸ: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ.

ಅವತ್ತು ಸಂಜೆ ಬೇಗನೆ ಮನೆಗೆ ತಲುಪಿದ ವೆಂಕಣ್ಣನ ಕಿವಿಯಲ್ಲಿ ಜೇಮ್ಸ್ ನ ಮಾತುಗಳು ಗುಂಯ್ ಗುಡುತ್ತಿತ್ತು. ಹೌದೆ? ನಾವೆಲ್ಲ ಅಮೆರಿಕಾಕ್ಕೆ ಬಂದು ಇವರ ಕೆಲಸಗಳನ್ನು ಕಸಿಯುತ್ತಿದ್ದೇವೆಯೇ? ಅನ್ನುವ ಪ್ರಶ್ನೆ ಇವನ ಕಾಡತೊಡಗಿತ್ತು. ಜಾನು ಮತ್ತು ಖುಷಿ ಇನ್ನೂ ಅಮೆರಿಕಾದ ದಿನಗಳಿಗೆ ಹೊಂದಿಕೊಳ್ಳದೆ ದಿನವಿಡಿ ನಿದ್ದೆಯಲ್ಲೇ ಕಳೆದಿದ್ದರು. ಇವನಿಗೂ ನಿದ್ದೆ ಎಳೆಯುತ್ತಿದ್ದರೂ ಬಲವಂತವಾಗಿ ಅದನ್ನು ತಡೆಯುತ್ತಿದ್ದ. ಆಗ ತಾನೇ ಎದ್ದು ಕುಳಿತಿದ್ದ ಖುಷಿಗೆ ಬೇರೆ ಏನೂ ಮಾಡಲು ತೋಚದೆ ಅಲ್ಲಿನ ಟೀವಿಯಲ್ಲಿ ಬರುತ್ತಿದ್ದ ಕಾರ್ಟೂನು ನೋಡುತ್ತಿದ್ದಳು.  ಜಾನು ರಾತ್ರಿಗೆ ಊಟಕ್ಕೆ ಏನು ಮಾಡುವುದೆಂಬ ಗೊಂದಲದಲ್ಲಿದ್ದಳು. ರಾತ್ರಿ ಒಂಬತ್ತಾದರೂ ಇನ್ನೂ ಸೂರ್ಯ ಮುಳುಗಿರಲಿಲ್ಲ.  ಅವರಿಗೆಲ್ಲ  ಅದೊಂದು ವಿಚಿತ್ರವಾದ ವಿದ್ಯಮಾನವಾಗಿತ್ತು. ಭಾರತದಲ್ಲೂ ಹೀಗೆ ಇದ್ದರೆ ಎಷ್ಟು ಚೆನ್ನ ಅಂತ ಜಾನು ಹೇಳುತ್ತಿದ್ದಳು. ವಿದ್ಯುತ್ ಸಮಸ್ಯೆಯಾದರೂ ಬಗೆ ಹರಿಯುತ್ತೆ ಅಲ್ಲವೇ? ಎಂದ ಅವಳ  ಪ್ರಶ್ನೆಗೆ ವೆಂಕಣ್ಣ ನಕ್ಕು ಸುಮ್ಮನಾದ. ಕತ್ತಲಾದ ಮೇಲೆ ಮಲಗುವ ರೂಢಿ ಇಲ್ಲಿಗೆ ಅನ್ವಯವಾಗದೆಂಬ ಸತ್ಯ ಬಹು ಬೇಗನೆ ಗೋಚರಿಸಿತು. ರಾತ್ರಿ ೧೦ ಗಂಟೆಗೆ ಇನ್ನೂ ಸೂರ್ಯಾಸ್ತವೆ ಆಗಿಲ್ಲದಿದ್ದ ಮೇಲೆ ಕತ್ತಲಾಗುವವರೆಗೆ ಕಾಯುವ ತಾಳ್ಮೆ ಯಾರಿಗಿತ್ತು? ವೆಂಕಣ್ಣನ ಪರಿವಾರ ಊಟ ಮಾಡಿ  ಮಲಗಿತ್ತು. 

ಸುಜಯ್ ಅವತ್ತು ಉತ್ಸಾಹದಿಂದಲೇ ಕೆಲಸಕ್ಕೆ ಬಂದಿದ್ದ. ಪ್ರತಿ ಸೋಮವಾರ ಕಾಡುತ್ತಿದ್ದ ಬೇಸರಿಕೆ ಇಂದಿರಲಿಲ್ಲ. ಅದಕ್ಕೆ 'ನಿಶಾ'ಗಮನವೇ ಕಾರಣವಲ್ಲದೆ ಬೇರೇನೂ ಇರಲಿಲ್ಲ. ತನ್ನ ಜಾಗದಲ್ಲಿ ಕುಳಿತು laptop ಹೊತ್ತಿಸಿದವನಿಗೆ ಅದರ ಫಲಕದಲ್ಲಿ ನಿಶಾ ಳ  ಮುಖಾರವಿಂದವನ್ನು ಕಂಡಂತಾಗಿ ಬೆಚ್ಚಿ ಬಿದ್ದ. ಅವಳ್ಯಾಕೋ ಇವನನ್ನು ಜಾಸ್ತಿಯೇ ಅನ್ನಿಸುವಷ್ಟು ಆವರಿಸಿಕೊಳ್ಳತೊಡಗಿದ್ದಳು. ಮುಖ ಕೊಡವಿಕೊಂಡು ಅವತ್ತಿನ email ಗಳ ಪರಿಶೀಲಿಸತೊಡಗಿದ.  ವೆಂಕಣ್ಣ ಅಮೆರಿಕಾದ ಪ್ರವಾಸದಲ್ಲಿದ್ದುದರಿಂದ ಅವನ ಅನುಪಸ್ಥಿತಿಯಲ್ಲಿ ಅವನ  ಟೀಮಿನ ಉಸ್ತುವಾರಿಯನ್ನೂ ಇವನೇ ನೋಡಿಕೊಳ್ಳಬೇಕೆಂದು ಇವನ ಬಾಸ್ ಸುಧೀರ್ ಅಪ್ಪಣೆ ಹೊಡಿಸಿದ್ದ. ವೆಂಕಣ್ಣನ ಟೀಮ್ ನಲ್ಲಿ ಇಪ್ಪತ್ತು ಜನರಿದ್ದರು. ತನ್ನ ಟೀಮ್ ನೋಡಿಕೊಳ್ಳುವುದರ ಜೊತೆಗೆ ಇದೊಂದು ಜವಾಬ್ದಾರಿ ಸುಜಯ್ ಗೆ ಭಾರವೆನಿಸಿತ್ತು. ಅದರೂ ಏನೂ ಮಾಡುವ ಹಾಗಿರಲಿಲ್ಲ. 

ಇವನು ತನ್ನ laptop ನಲ್ಲಿ ಮುಳುಗಿದ್ದಾಗಲೇ, ಎದುರಿಗೆ ಪ್ರದೀಪ್ ಬಂದು ನಿಂತಿದ್ದ. ಏನೋ ತುರ್ತಾದ ವಿಷಯ ಮಾತಾಡುವುದಿದೆಯೆಂದು ಹೇಳಿದ. ಪ್ರದೀಪ್ ಒಬ್ಬ ಡೆವೆಲಪರ್. ತಾನು ಏನೋ ಕೆಲಸದಲ್ಲಿದ್ದಾಗಲೇ ಅವನು ಬಂದು ತೊಂದರೆ ಕೊಡುತ್ತಿದ್ದುದು ಇವನಿಗೆ ಕೋಪ ತರಿಸಿತ್ತು. ಈಗ ಆಗೋಲ್ಲ, ಆಮೇಲೆ ಮಾತಾಡೋಣ ಅಂದಿದ್ದಕ್ಕೆ, ಇಲ್ಲ ತುಂಬಾ ಅರ್ಜೆಂಟ್ ಅಂತ ಸೊಟ್ಟ ಮೊರೆ ಹಾಕಿ ನಿಂತನವನು. ಅವನು ಹೋಗುವ ಲಕ್ಷಣ ಕಾಣದಿದ್ದಾಗ ಕೂಡು ಅಂತ ಸನ್ನೆ ಮಾಡಿದ. ಆದರೂ ಬಂದ ಕೂಡಲೇ ಮಾತಾಡಿಸಿದರೆ ಮ್ಯಾನೇಜರ್ ಹುದ್ದೆಯನ್ನು  ಅವಮಾನಿಸಿದಂತೆ ಅಲ್ಲವೇ? ಯಾವುದೋ ಮುಖ್ಯವಾದ ಒಂದು ಕೆಲಸದಲ್ಲಿದ್ದಂತೆ ನಟಿಸಿ ಅವನಿಗೆ ಸ್ವಲ್ಪ ಕಾಯಿಸಿ, ಆಮೇಲೆ  "ಎಸ್?" ಅಂದ. ಪ್ರದೀಪ್ ಈಗ ಕೆಲವು ದಿನಗಳಿಂದ ತನ್ನ ಆರೋಗ್ಯ ಕೆಟ್ಟು ಹೋಗಿದೆ ಎಂದು ಹೇಳಿ, ತನ್ನ ಬೆನ್ನು ನೋವು ತುಂಬಾ ಹೆಚ್ಚಾಗಿದೆಯೆಂತಲೂ, ತನಗೆ ವೈದ್ಯರು ಕೆಲವು ತಿಂಗಳ ಮಟ್ಟಿಗೆ ಆಫೀಸಿಗೆ ಹೋಗಲೇಕೂಡದೆಂಬ ಹುಕುಂ ಮಾಡಿದ್ದಾರೆಂದು ಹೇಳಿದ. ಸುಜಯ್ ಗೆ ನಗು ಬಂದಿತ್ತು. ಯಾಕಂದ್ರೆ ಆಫಿಸಿನಲ್ಲಿ ಅವನು ಮಾಡುತ್ತಿದ್ದ ಕೆಲಸವೂ ಅಷ್ಟಕ್ಕಷ್ಟೇ.
 
…ಪ್ರದೀಪನ ದಿನಚರಿಯೇ ಹಾಗಿತ್ತು. ಬೆಳಿಗ್ಗೆ ಹನ್ನೊಂದಕ್ಕೆ ಆಫಿಸಿಗೆ ಬಂದು, ತನ್ನ ಚೀಲ, ಊಟದ ಡಬ್ಬಿಗಳನ್ನು ತಾನು ಕುಳಿತುಕೊಳ್ಳುವ ಜಾಗದಲ್ಲಿ ಸ್ಥಾಪಿಸಿ, ಕಂಪ್ಯೂಟರ್ ನ ಹೊತ್ತಿಸುತ್ತಿದ್ದ. ಅದ್ಯಾಕೆ ಅಂದರೆ, ನೋಡಿದವರಿಗೆ ಗೊತ್ತಾಗುವುದು ಬೇಡವೇ ಇವನು ಬಂದ ವಿಷಯ! ಅಷ್ಟು ಮಾಡಿದ ಮೇಲೆ ಚಹಾ ಕುಡಿಯಲು ಅಂತ ಕೆಳಗೆ ಹೋಗುತ್ತಿದ್ದ. ಸೀನು ಮತ್ತು ನಾರಾಯಣ ಅವನ ಜೊತೆಗಾರರು.  ಚಹದ ಜೊತೆಗೆ ಒಂದಿಷ್ಟು ಹರಟೆ. ಅದರಲ್ಲಿ ಇಣುಕುತ್ತಿದ್ದ ವದಂತಿಗಳ ವಿಶ್ಲೇಷಣೆ… ಹೀಗೆ ಎಲ್ಲ ಮುಗಿಸಿ ತನ್ನ ಸ್ವ ಸ್ಥಾನಕ್ಕೆ ಹಿಂತಿರುಗುವುದರೊಳಗೆ ಮಟ ಮಟ ಮದ್ಯಾಹ್ನದ ೧೨ ಗಂಟೆ. ಅವತ್ತಿನ ಕೆಲಸವೇನಿರಬಹುದು ಎಂದು ಪರಿಶೀಲಿಸುವುದರಲ್ಲೇ ಊಟದ ಸಮಯವಾಗಿ ಬಿಡುತ್ತದೆ. ಪಾಪ ಅವನಾದರೂ ಏನು ಮಾಡುವುದು? ಎಲ್ಲಾನೂ ಮಾಡೋದು ಹೊಟ್ಟೆಗಾಗಿಯೇ ಅಲ್ಲವೇ? ಹೊತ್ತಿಗೆ ಸರಿಯಾಗಿ ಇವನ ಸಹಚರರರೂ ಹಾಜರು! ಮತ್ತೆ ಊಟಕ್ಕೆ ಅಂತ ಹೋದವನು ಬಂದು ಒಂದು ಮಟ್ಟಕ್ಕೆ ಕೆಲಸಕ್ಕೆ ಅಂತ ಕೂಡುವುದರೊಳಗೆ 3 ಗಂಟೆ. ಒಂದೆರಡು ತಾಸು ಕೆಲಸ ಮಾಡಿದಂಗೆ ಮಾಡಿ, ಮತ್ತೆ ಚಹಾ ಕುಡಿಯುವುದರೊಳಗೆ ಸಂಜೆಯಾಗಿ, ಮನೆಗೆ ಹೊರಡುವ ತಯ್ಯಾರಿಯೇ! ಅದೂ ಅಲ್ಲದೆ ಅವನು ಒಂದು ವಾರ ಸರಿಯಾಗಿ ಆಫೀಸಿಗೆ ಬಂದನೆಂದರೆ ಮುಂದಿನ ವಾರ  ಎರಡು ದಿನ ರಜಾ ಹಾಕೋದು ನಿಶ್ಚಿತ. ಹೊಟ್ಟೆ ಸರಿಯಿಲ್ಲವೆಂತಲೋ ಕೆಮ್ಮು ಅಂತಲೋ ಏನೋ ಒಂದು ನೆಪ. ಅವನ ರಜೆ ಹಾಕುವ ಬಗೆಯನ್ನು ಅವನ ಕೆಲವು ಕ್ರಮಗಳಿಂದ ಊಹಿಸಿಬಿಡಬಹುದಾಗಿತ್ತು, ಅದು ಎಷ್ಟೋ ಸರ್ತಿ ನಿಜವೂ ಆಗಿರುತ್ತಿತ್ತು. ಉದಾಹರಣೆಗೆ, ಇವತ್ತು ಅವನು ಸ್ವೇಟರ್ ಹಾಕಿಕೊಂಡು ಬಂದನೆಂದರೆ ಮರುದಿನ ಖಂಡಿತವಾಗಿಯೂ ಜ್ವರ ಬರುತ್ತಿತ್ತು! ರಜೆ ಹಾಕೆ ತೀರುತ್ತಿದ್ದ! ಇದನ್ನು ಬಿಟ್ಟರೆ, ಯಾವುದಾದರೂ ತ್ವರಿತವಾಗಿ ಮುಗಿಸುವ ಕೆಲಸವನ್ನು ಕೊಟ್ಟರೂ ಅಷ್ಟೇ, ಅವನ ಹೊಟ್ಟೆ ನೋವು ಹಠಾತ್ ಆಗಿ ಜಾಸ್ತಿಯಾಗಿಬಿಡುತ್ತಿತ್ತು! ಆಗ ಅನಿವಾರ್ಯವಾಗಿ ಸುಜಯ್ ಬೇರೆ ಯಾವನೊ ಪ್ರಾಮಾಣಿಕ ಕೆಲಸಗಾರನಿಗೆ ಈ ಪ್ರದೀಪನ ಕೆಲಸವನ್ನೂ ಹೇರುತ್ತಿದ್ದ. ಆ ಇನ್ನೊಬ್ಬ ಡೆವೆಲಪರ್ ಇವನ ಕೆಲಸ ಮುಗಿಸಿದ ಮೇಲೆ ಪ್ರದೀಪನ ಹೊಟ್ಟೆ ನೋವು ತಂತಾನೇ ಕಡಿಮೆಯಾಗಿ ಮತ್ತೆ ಆಫೀಸಿಗೆ ಬರುತ್ತಿದ್ದ. ಅವನು ಹೀಗೆ ಆರಾಮವಾಗಿ ಇದ್ದುದರಿಂದಲೇ ಈ ಕಂಪನಿಯಲ್ಲಿ ಹತ್ತು ವರ್ಷದಿಂದ ಅಲ್ಲೇ ಕಚ್ಚಿಕೊಂಡಿದ್ದಾನೆ. ಅವನಿಗೆ ಮೇಲ್ವರ್ಗಕ್ಕೆ ಬಡ್ತಿ ಪಡೆಯುವ ಆಸೆಯೂ ಇಲ್ಲ. ಬರುವ ಪುಗಸಟ್ಟೆ ಸಂಬಳ ಬರುತ್ತಿದ್ದರಷ್ಟೇ ಸಾಕು…

ಇಂತಹ ಘಟಾನುಘಟಿ ಡೆವೆಲಪರ್ ಎರಡು ಮೂರು ತಿಂಗಳು ಆಫೀಸಿಗೆ ಬರಲಾಗದು ಎಂದು ಹೇಳುತ್ತಿದ್ದರೆ ಸುಜಯ್ ಗೆ ಖುಷಿ ಆಗದೆ ಇದ್ದೀತೆ? ಹೀಗೆ ಅವನ ರಜೆಯನ್ನೇ ನೆಪ ಮಾಡಿಕೊಂಡು ಅವನನ್ನು ಹೊರ ಹಾಕುವ ಸುವರ್ಣ ಅವಕಾಶವೂ ಇವನಿಗೆ ಕಂಡಿತು. ಆದರೂ ಕೆಲಸವನ್ನೇ ಮಾಡದ ಅವನ ಬೆನ್ನಿಗೆ ನೋವಾದರೂ ಬರಲು ಹೇಗೆ ಸಾಧ್ಯ ಅಂತ ಮನದಲ್ಲೇ ಆಶ್ಚರ್ಯಪಟ್ಟ! ರಜೆ ಕೊಡಲು ಕೂಡಲೇ ಒಪ್ಪಿಗೆ ಕೊಟ್ಟ. ಆದರೆ ಅಲ್ಲಿ ರಜೆ ಯಾರು ಕೇಳಿದ್ದು? ಪ್ರದೀಪ, ತಾನು ಹೇಳಿದ್ದು ಹಾಗಲ್ಲ ಅಂದ. ಮತ್ತೆ ಏನು ಅನ್ನುವ ಸುಜಯ್ ನ ಗಂಟು ಮುಖದ ಪ್ರಶ್ನೆಗೆ, ತಾನು ಆಫೀಸಿಗೆ ಬರಲಾಗದು, ಆದರೆ ಮನೆಯಿಂದಲೇ ಕೆಲಸ ಮಾಡುವೆನೆಂದೂ, ಅದಕ್ಕಾದರೆ ವೈದ್ಯರು ಅಡ್ಡಿ ಇಲ್ಲವೆಂದು ಹೇಳಿದ್ದಾರೆಂದೂ ಹೇಳಿ, ಆ ವೈದ್ಯರ ಶಿಫಾರಸ್ಸನ್ನು ಇವನ ಮುಂದಿರಿಸಿ ಕೈ ಕಟ್ಟಿ ಕೂತ! ಕಣ್ಣ ಮುಂದೆ ಇದ್ದುಕೊಂಡೇ ಅವನ ಬಳಿ ಕೆಲಸ ಮಾಡಿಸಲಾಗದಿದ್ದಾಗ, ಮನೆಯಿಂದ ಅವನು ಕೆಲಸ ಮಾಡಬಹುದಾದ ಸಾಧ್ಯತೆಗಳೇ ಇಲ್ಲದಾಗಿತ್ತು. ಅದೂ ಅಲ್ಲದೆ, ಮನೆಯಿಂದ ಕೆಲಸ ಮಾಡಲು ಅವನಿಗೆ laptop ಹಾಗೂ ಅದಕ್ಕೆ ಬೇಕಾಗುವ ಅಂತರ್ಜಾಲದ ವ್ಯವಸ್ಥೆ ಮಾಡಿಸಬೇಕು. ಅದೊಂದು ಖರ್ಚಿನ ವ್ಯವಹಾರವಾಗಿತ್ತಲ್ಲದೆ ಅನವಶ್ಯಕವೂ ಆಗಿತ್ತು. ಆದರೂ ಯೋಚನೆ ಮಾಡಿ ಹೇಳುತ್ತೇನೆಂದು ಅವನ ಸಾಗ ಹಾಕಿದ. 

ಅವನ ಬೀಳ್ಕೊಟ್ಟು ಮತ್ತೆ laptop ನ ಪರದೆಯಲ್ಲಿ ಮುಳುಗಿದವನಿಗೆ ಘಂ ಅನ್ನುವ ಪರಿಮಳ ಹೊಡಿದೆಬ್ಬಿಸಿತು. ಕತ್ತೆತ್ತಿ ನೋಡಿದವನ ಎದುರು ನಿಶಾ ನಿಂತಿದ್ದಳು! ಅವಳಲ್ಲೊಂದು ಮುಗುಳ್ನಗುವಿತ್ತು. "ಹಾಯ್" ಅನ್ನುತ್ತ ಕೈ ಕುಲುಕಿದಳವಳು… ಜೊತೆಗೆ ಇವನ ಮನವನ್ನೂ ಕಲುಕಿದಳು. ಯಾರ ಸಾಂಗತ್ಯಕ್ಕೆ ಹಾತೊರೆಯುತ್ತಿದ್ದನೋ, ಅವಳೇ ಬಂದು ದರ್ಶನ ಕೊಟ್ಟರೆ ಎಷ್ಟು ಖುಷಿಯಾಗಬೇಡಾ? ಅವಳು ಇವನನ್ನು  ಊಟಕ್ಕೆ ಕರೆಯಲು ಬಂದಿದ್ದಳು. ಅವನು ಇದ್ದ ಬದ್ದ ಕೆಲಸವ ಮುಂದೂಡಿ ಅವಳ ಹಿಂಬಾಲಿಸಿದ! ತುಂಬಾ ಬ್ಯುಸಿ ಇದ್ದೆನೆಂದು ಕೆಲವೇ ನಿಮಿಷಗಳಿಗೆ ಮೊದಲು ತನ್ನೊಂದಿಗೆ ಮಾತಾಡಲು ನಿರಾಕರಿಸಿದ್ದ ತನ್ನ ಮ್ಯಾನೇಜರ್ ನಿಶಾಳ ಜೊತೆ ಹೊರಟಿದ್ದು ಕಂಡ ಪ್ರದೀಪ್ ತನ್ನ ಪಕ್ಕವೇ ಕೂತಿದ್ದ ಸೀನು ನನ್ನು ನೋಡಿ ಕಣ್ಣು ಮಿಟುಕಿಸಿ ನಕ್ಕ…      

(ಮುಂದುವರಿಯುವುದು…)                      

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

11 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ಕಾಯಕವೇ ಕೈಲಾಸ – ಪ್ರದೀಪನಿಗೆ ಪಾಯಸ!!!. ಚೆನ್ನಾಗಿದೆ ಗುರು. ಆದರೆ ಬಾಳ ಶಾರ್ಟ್ ಆಯಿತು ಅನಿಸುತ್ತೆ. ಬ್ಯುಸಿ ಇದಿರೇನೋ? ಹಾಗಾಗಿ.

ಗುರುಪ್ರಸಾದ ಕುರ್ತಕೋಟಿ

ಪ್ರಿಯ ಅಖಿಲೇಶ್, ಈ ಸಲದ ಲೇಖನ ಸ್ವಲ್ಪ ಚಿಕ್ಕದಾಗಿದ್ದು ಹೌದು! ನಾನು ಬ್ಯುಸಿ ಇದ್ದದ್ದೂ ಇದಕ್ಕೆ ಕಾರಣವಿರಬಹುದು, ಆದರೆ ಸುಜಯ್ ತರಹದ ಬ್ಯುಸಿ ಅಲ್ಲ ಮಾರಾಯ್ರೆ…. 🙂

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು!!

Vitthal Kulkarni
Vitthal Kulkarni
9 years ago

ನಮ್ಮ ಐಟಿ ಕಂಪನಿಗಳ ಕಥೆ ಹಿಂಗನ!ಪ್ರದೀಪನ ದಿನಚರಿ ನಮ್ಮ ಹಳೆ ಕಂಪನಿ ಯೊಳಗಿನ ಕೆಲಒಂದು ಕ್ಯರೆಕ್ಟೊರ್ ನೆನಪಿಗೆ ತಂತು… ಗುರು ಛೊಲೊಅದ ಆದರ ಇನ್ನು ಎರಡು ಮುರು ಪ್ಯಾರಾ ಹೆಚಗಿ ಆಗಿದ್ರ ಮಸ್ತ ಅನಸ್ತಿತ್ತು… ಭಾಳ ಜಲ್ದಿ ಮುಗಿತು! 

ಗುರುಪ್ರಸಾದ ಕುರ್ತಕೋಟಿ

ವಿಟ್ಠಲ, ಹೌದು… ಇಂಥಾ ಭಾಳ ಕ್ಯಾರಕ್ಟರ್ ಗಳು ಇನ್ನೂ ಬಾಕಿ ಅವ! ಜಾಸ್ತಿ ಬರಿಯೊ ಪ್ರಯತ್ನ ಮಾಡ್ತೀನಿ. ಪ್ರೀತಿಯಿಂದ ಓದಿ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಖುಷಿ ಆಯ್ತು!!

ಶ್ರೀಧರ್. ಜಿ
ಶ್ರೀಧರ್. ಜಿ
9 years ago

ಮನಸ್ಸಿಗೆ ನಿಶಾ ಆವರಿಸಿದನ್ದನ್ತೆ ಬುಸ್ಯಿ ಮಾಯವಾಗುತ್ತೆ ಎನ್ನುವ ರೂಪಕ chennagi mudibandide.

ಗುರುಪ್ರಸಾದ ಕುರ್ತಕೋಟಿ

ಶ್ರೀಧರ್ ಗುರುಗಳೆ, ನಿಮ್ಮ ಪ್ರೋತ್ಸಾಹಕ್ಕೆ ನಾನು ಋಣಿ!

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ವೋ ಹೈ "ನಿಶಾ" …..  ಗುರು. ಇಷ್ಟು ವರ್ಷಾತು ನಂಗಿನ್ನೂ "ನಿಶೇ"ನೇ ಹತ್ತಿಲ್ಲ…. ಕೆಲಸದಲ್ಲಿ.. ಭಾಳ ದುರಾದೃಷ್ಟವಂತ…

ಗುರುಪ್ರಸಾದ ಕುರ್ತಕೋಟಿ

ಅಮರ್ ಭಾಯ್, ಆ 'ನಿಶೆ'ಯಿಂದ ದುಷ್ಪರಿಣಾಮಗಳೆ ಜಾಸ್ತಿ… ನಿಜ ಹೇಳಬೇಕೆಂದರೆ ನೀವು ಅದೃಷ್ಟವಂತರು 🙂 …. ಪ್ರೀತಿಯಿಂದ ಓದಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು!

adarsh
adarsh
9 years ago

ಹಳೆಯ ಕ೦ತುಗಳನ್ನು ಒ೦ದೇ ಬಾರಿ ಓದಿ ಮುಗಿಸಿ, ಈ ವಾರದ ಕ೦ತನ್ನೂ ಓದಿ ಮುಗಿಸಿಯಾಯಿತು. ಐಟಿ ಕರ್ಮಚಾರಿಗಳ ದಿನಚರಿ ಓದುತ್ತಾ ಅವರುಗಳ ಬಗ್ಗೆ ತಿಳಿಯುವ೦ತೆ ಮಾಡಿತು. ಮು೦ದಿನ ಕ೦ತಿಗೆ, ನಿಶೆಯ ನಶೆಗೆ ಕಾಯುವ೦ತೆ ಮಾಡಿದ್ರಿ.

ಗುರುಪ್ರಸಾದ ಕುರ್ತಕೋಟಿ
Reply to  adarsh

ಪ್ರಿಯ ಆದರ್ಶ, ನಿಮ್ಮಂತಹ ಓದುಗರು ಸಿಕ್ಕರೆ ಬರೆಯುವವರಿಗೆ ಎಷ್ಟು ನಿಶೆ ಆಗುತ್ತೆ ಗೊತ್ತೇ! ನಿಮಗೂ ಅದು ಅನುಭವಕ್ಕೆ ಬಂದಿರಬಹುದು :). ನಿಮ್ಮನ್ನು ಜಾಸ್ತಿ ಕಾಯಲು ಬಿಡದೇ ಪ್ರತಿ ವಾರ ಬರೆಯುವ ಪ್ರತಿಜ್ನೆಯಂತೂ ಮಾಡಿದ್ದೇನೆ!

ನಿಮ್ಮ ಪ್ರೀತಿಗೆ ಧನ್ಯವಾದಗಳು!

trackback

[…] ಇಲ್ಲಿಯವರೆಗೆ… ನಿಶಾ ಳ ಸಂಗಡ ಹೋಗುತ್ತಿರುವಂತೆ, ಆಫೀಸಿನಲ್ಲಿ ಎಲ್ಲರ ಕಣ್ಣುಗಳು ಇವರನ್ನೇ ನೋಡುತ್ತಿದ್ದರೆ ಸುಜಯ್ ಗೆ ಒಳಗೊಳಗೇ  ಖುಷಿ. ಅದರೂ ಅದು ಹೇಗೋ ಅವನ ಮುಖದ ಮೇಲೆಯೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದನ್ನು ಗಮನಿಸಿದ ಅವಳ ಮುಖದಲ್ಲೊಂದು ತುಂಟ ಮುಗುಳ್ನಗು ಸುಳಿಯಿತು. ಇಬ್ಬರೂ ರಿಸೆಪ್ಶನ್ ದಾಟಿಕೊಂಡು ಹೋಗುತ್ತಿದ್ದಂತೆ, “ಸುಜಯ್… ಹೇ ಸುಜಯ್…” ಅಂತ ಕೂಗುತ್ತಿದ್ದ ಕೋಮಲ ದನಿಯೊಂದು ಇವರಿಬ್ಬರಿಗೂ ನಿಲ್ಲುವಂತೆ ಮಾಡಿತು. ಯಾರು ಅಂತ ಹಿಂತಿರುಗಿ ನೋಡಿದರೆ ಆ ಕೋಮಲ ದನಿ ಬೇರೆ ಯಾರದೂ ಅಲ್ಲ, ಪೃಥ್ವಿ ಅನ್ನುವ ಗಂಡಸಿನದು!  […]

11
0
Would love your thoughts, please comment.x
()
x