ಕಾಯಕ ಎಂದರೆ ಕೆಲಸ. ಪ್ರತಿಯೊಬ್ಬರೂ ಕೆಲಸ ಮಾಡಬೇಕಿರುವುದು
ಅನಿವಾರ್ಯ. ಬ್ರಹ್ಮಾಂಡದಲ್ಲಿರುವ ಸಕಲ ಕಾಯಗಳೂ ಚಲಿಸುತ್ತಾ ಸದಾ ಕೆಲಸದಲ್ಲಿ ನಿರತವಾಗಿವೆ. ಗ್ರಹ, ಉಪಗ್ರಹ, ನಕ್ಷತ್ರ ….. ಆಕಾಶ ಕಾಯಗಳು ಭ್ರಮಿಸುತ್ತಾ, ಪರಿಭ್ರಮಿಸುತ್ತಾ ಕಾರ್ಯನಿರ್ವಹಸುತ್ತಿವೆ. ಭೂಮಿ ಒಂದು ದಿನ ಭ್ರಮಿಸದಿದ್ದರೆ ಹಗಲು – ರಾತ್ರಿಗಳು ಆಗುವುದಿಲ್ಲ. ಪರಿಭ್ರಮಿಸದಿದ್ದರೆ ಋತುಮಾನಗಳು ಸಂಭವಿಸುವುದಿಲ್ಲ. ಆಗ ಬದುಕಾಗುವುದು ಅಯೋಮಯ! ನಮಗಷ್ಟೇ ಅಲ್ಲದೆ ಭೂಮಿಗೂ ಬರುವುದು ಆಪತ್ತು! ಭೂಮಿ ನಿತ್ಯ ಕಾಯಕದಲ್ಲಿ ತೊಡಗಿರುವುದರಿಂದ ಎಂದಿನಂತೆ ಬದುಕು ಸಾಗುವುದು.
" ಶರೀರಯಾತ್ರ್ಯಾಪಿ ಚ ತೇ ನ ಪ್ರಸಿಧ್ಯೇದಕರ್ಮಣಃ " – ಕರ್ಮ ಮಾಡದೆ ಶರೀರ ವ್ಯಾಪಾರ ಕೂಡ ನಡೆಯಲಾರದು — ಭಗವದ್ಗೀತೆಯಲ್ಲಿ ಹೀಗೆ ಕರ್ಮದ ಅನಿವಾರ್ಯತೆಯನ್ನು ಹೇಳಿದೆ. ಮನದಲ್ಲಿನ ಚಿಂತನೆಗಳು ಸಹ ಕಾಯಕವೇ ಎಂದು ಹೇಳಿ ಕಾಯಕದ ವೈಶಾಲ್ಯತೆಯನ್ನು ತಿಳಿಸಿದೆ.
ಕಾಯಕ್ಕಂಟಿದ ಕಾಯಕ. ಕಾಯಕ ಮಾಡದೆ ಇದ್ದರೆ ಚಯಾಪಚಯ ಕ್ರಿಯೆಗಳಾಗವು. ಅವು ಆಗದಿದ್ದರೆ ದೇಹದಲ್ಲಿ ಅನೇಕ ಸಮಸ್ಯೆಗಳು ತಲೆದೋರಿ ರೋಗಸ್ಥರಾಗುವುದು. ನೋವು ಯಾತನೆ ಉಂಟಾಗುವುದು. ದೈಹಿಕ ಶ್ರಮ ಆರಂಭಿಸಿದರೆ ಎಲ್ಲಾ ಮಾಯವಾಗುವುದು. ಇದು ಕಾಯಕದ ಅನಿವಾರ್ಯತೆ ಮತ್ತು ಮಹತ್ವವನ್ನು ಸಾರುತ್ತಿದೆಯಲ್ಲವೆ!
ಇಂದು ರೋಗಗಳಿಲ್ಲದ, ಆಸ್ಪತ್ರೆಗೆ ಹೋಗದ ಜನ ಅಪರೂಪ. ವೈದ್ಯರು ಬಹು ಮಂದಿಗೆ ವಾಯುವಿಹಾರ, ವ್ಯಾಯಾಮ, ಪ್ರಾಣಾಯಾಮ, ಯೋಗ ಮಾಡುವ ಸಲಹೆಗಳನ್ನು ಕೊಡುತ್ತಾರೆ. ಪ್ರಯುಕ್ತ ನಗರದ ಬಹಳ ಕಡೆ ವ್ಯಾಯಾಮ, ಯೋಗ, ಜಿಮ್ …. ಶಾಲೆಗಳು ಹೆಚ್ಚುತ್ತಿವೆ. ಪ್ರಾತಃಕಾಲ ಸಂಧ್ಯಾಕಾಲಗಳಲ್ಲಿ ಮೈದಾನಗಳೆಲ್ಲಾ ವಿಚಿತ್ರ ವೇಷ, ಭಾವ, ಭಂಗಿ, ನಡೆ ಜನರಿಂದ ತುಂಬಿ ಹೋಗಿರುತ್ತವೆ. ಹಿಂದೆ ರೈತರು ಬೆಳಬೆಳಿಗ್ಗೆ ಹೊಲಗಳಿಗೆ ಹೋಗಿ ದುಡಿಯಲು ಬೆವರು ಇಳಿಸುತ್ತಿದ್ದರು, ಇಂದು ತಿಂದುದ ಜೀರ್ಣಿಸಿಕೊಳ್ಳಲು, ಬೊಜ್ಜು ಕರಗಿಸಿಕೊಳ್ಳಲು ಬೆವರು ಇಳಿಸುವಂತಾಗಿರುವುದು ವಿಪರ್ಯಾಸ! ಆದರೂ ಅನಿವಾರ್ಯ!
ಬಹಳಷ್ಟು ಜನ ಕಷ್ಟ ಪಡದೆ ಹಣ ಗಳಿಸುವವನೇ ಬುದ್ದಿವಂತ, ಶ್ರಮರಹಿತ ಬದುಕೇ ಸುಖದ ಬದುಕು ಎಂದು ಭಾವಿಸಿದಂತೆ ಕಾಣುತ್ತದೆ. ಅದಕ್ಕೆ ಇಂದಿನ ಜನ ಶ್ರಮರಹಿತ ಉದ್ಯೋಗಗಳನ್ನು ಇಷ್ಟಪಡುತ್ತಿರುವುದು. ಜೆ ಸಿ ಬಿ ಯಂಥಾ ಯಂತ್ರಗಳ ಸೃಷ್ಟಿಸಿ ಮಾನವನ ದೈಹಿಕ ಶ್ರಮ ಕಡಿಮೆಗೊಳಿಸಿರುವುದು, ಶ್ರಮ ಪಡದ ಉದ್ಯೋಗಗಳು ಸೃಷ್ಟಿಯಾಗುತ್ತಿರುವುದು. ಅವುಗಳಿಗೆ ಜನ ಮುಗಿಬೀಳುತ್ತಿರುವುದು. ಮುಂತಾದವುಗಳು ಜನ ಶ್ರಮಪಡಲು ಇಷ್ಟ ಪಡದೆ ಇರುವುದನದನ್ನು ತೋರಿಸುತ್ತದೆ.
ಕಾಯಕದಲ್ಲಿ ಎರಡು ವಿಧ.
೧ ಬೌದ್ಧಿಕ ಶ್ರಮ ಪ್ರಧಾನ ಕಾಯಕಗಳು.
೨ ಶರೀರ ಶ್ರಮ ಪ್ರಧಾನ ಕಾಯಕಗಳು.
೧ ಬೌದ್ಧಿಕ ಶ್ರಮ ಪ್ರಧಾನ ಕಾಯಕಗಳು : ಅಂದರೆ ಬುದ್ದಿಯನ್ನೇ ಪ್ರಧಾನವಾಗಿ ದುಡಿಯಲು ಬಳಸಿಕೊಳ್ಳುತ್ತಿರುವ ಕೆಲಸಗಳು. ಇತ್ತೀಚೆಗೆ ಇವೇ ಹೆಚ್ಚಿ ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ಆದರೂ ಇವುಗಳನ್ನೇ ಜನ ಇಷ್ಟಪಟ್ಟು ರೋಗಗಳ ಆಹ್ವಾನಿಸಿ, ನೋವಿನ ಕಷ್ಟ ತಂದುಕೊಳ್ಳುತ್ತಿದ್ದಾರೆ. ಕಂಪ್ಯೂಟರ್ ಮುಂದೆ ಕುಳಿತು ಮಾಡುವ ಕೆಲಸ, ಕುರ್ಚಿ ಟೇಬಲ್ಲಿಗೆ ಅಂಟಿಕೊಂಡಿರುವ ಕೆಲಸಗಳು, ಸದಾ ಕುಳಿತೇ ಮಾಡುವ ಕೆಲಸಗಳು ಮುಂತಾದವು ಶರೀರದ ಶ್ರಮವಿರದ ಕಾಯಕಗಳಾಗಿವೆ. ಈ ಕಾಯಕ ಮಾಡುವವರಿಗೆ, ಹಣ ಹರಿದು ಬರುತ್ತದೆ. ಅದ ಕಂಡು ಸುಖಿಸುತ್ತಾರಾದರು ಅದು ನೆಮ್ಮದಿಯನ್ನು ಕೊಡದು. ಅಂತಹ ಶರೀರ ಶ್ರಮವಿರದ ಕೆಲಸಗಳಲ್ಲಿ ಬಹುಕಾಲ ಮುಂದುವರಿದರೆ ಅವರಿಗೆ ಹಸಿವಾಗದು, ಮೃಷ್ಟಾನ್ನ ರುಚಿಸದು, ನಿದ್ರೆ ಬಾರದು, ಬೆಳಕು ಎಷ್ಟು ಹೊತ್ತಿಗೆ ಆದೀತು ಎಂದು ಕಾಯಬೇಕಾಗುವುದು, ಎದ್ದಾಗ ಮೈ, ಮನಸು ಭಾರವಾಗಿ, ಆಲಸ್ಯ ಆವರಿಸಿ ನಿತ್ಯ ಕರ್ಮಗಳಿಗೆ ಹಿಂಸೆ ಅನುಭವಿಸಿ ಲೋಕ ಕೆಟ್ಟದಾಗಿ ಕಾಣಿಸತೊಡಗುವುದು. ಇಷ್ಟಪಟ್ಟು ತಂದ ಕಾರಲ್ಲಿ ಕೂರಲು, ಕಛೇರಿಗೆ ಕಾಲಿಡಲು, ಕಛೇರಿಯಲಿ ಕಾರ್ಯ ನಿರ್ವಹಿಸಲು ಆಗದ ಪರಿಸ್ಥಿತಿ ಬರುವುದು , ಎಷ್ಟೋತ್ತಿಗೆ ದಿನ ಕಳೆದೀತೆನಿಸುವುದು ಒಂದರ ಹಿಂದೊಂದು ರೋಗಗಳು ಬಂದು ಮೃಷ್ಟಾನ್ನ, ಸಂಪತ್ತ ಸವಿಯದಾಗಿ ಬದುಕಾಗುವುದು ನರಕ. ಇದರ ಜತೆಗೆ ಇವರಿಗೆ ಆಧುನಿಕ ಜೀವನದ ಒತ್ತಡ ಬೇರೆ! ಇಂದು ಇವರೇ ಹೆಚ್ಚಾಗಿ ನಗೆಕೂಟದ, ವೈದ್ಯರ, ಮೈದಾನಗಳ ಒಡನಾಡಿ ಆಗುತ್ತಿರುವುದು!
೨ ಶರೀರ ಶ್ರಮ ಪ್ರಧಾನ ಕಾಯಕಗಳು : ಅಂದರೆ ದೇಹದ ಶಕ್ತಿಯನ್ನೇ ಪ್ರಧಾನವಾಗಿ ದುಡಿಯಲು ಬಳಸಿಕೊಳ್ಳತ್ತಿರುವ ಕಾಯಕಗಳು. ದೇಹದಲ್ಲಿ ಚಯಾಪಚಯ ಕ್ರೀಯೆಗಳು ನಡೆಯುವಾಗ ಬೇಡವಾದ ವಸ್ತುಗಳು ಉತ್ಪತ್ತಿಯಾಗುತ್ತವೆ. ಅವೆಲ್ಲಾ ಹೊರ ಬಂದರೆ ದೇಹ ಹಗುರ. ದೇಹದ ಯಾವ ಯಾವ ಅಂಗಗಳಿಗೆ ಪೂರ್ಣ ಪ್ರಮಾಣದ ವ್ಯಾಯಾಮ ಆಗಿರುವುದಿಲ್ಲವೋ ಆ ಅಂಗದ ಮಲಗಳು ಪೂರ್ಣ ಹೊರ ಬಂದಿರುವುದಿಲ್ಲ. ಪ್ರಯುಕ್ತ ಅಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ದೇಹ ಶ್ರಮಪಟ್ಟು ಕೆಲಸ ಮಾಡುವಾಗ ದೇಹದ ನೋವುಗಳಿಗೆ ಕಾರಣವಾಗುವ ಎಲ್ಲೋ ಅಡಗಿದ್ದ ಇಂಗಾಲದ ಡೈ ಆಕ್ಸೈಡ್, ಕೆಲವು ಲವಣಗಳು ನಿಶ್ವಾಸದ ಉಸಿರು ಮತ್ತು ಬೆವರಿನ ಮೂಲಕ ಹೊರಬರುತ್ತವೆ. ಚಯಾಪಚಯ ಕ್ರಿಯೆಗಳು ಸರಾಗವಾಗಿ ನಡೆದು ಉಳಿದ ದೇಹದ ಮಲಗಳು ಹೊರಬರುತ್ತವೆ. ದೈಹಿಕ ಶ್ರಮವಿರುವ ಕಾಯಕಗಳಲ್ಲಿ ದೇಹಕ್ಕೆ ಉತ್ತಮ ವ್ಯಾಯಾಮವಾಗುತ್ತದೆ, ರಾತ್ರಿ ಊಟ ಮುದ್ದೆ ಚಟ್ನಿಯಿರಲಿ ಮೃಷ್ಟಾನ್ನದಂತೆ ರುಚಿಯೆನಿಸುತ್ತದೆ. ಉಂಡ ತಕ್ಷಣ ಸುಖ ನಿದ್ರೆ ಆವರಿಸುತ್ತದೆ, ಎಲ್ಲೇ ಮಲಗಲಿ ಬೆಳಕಾದದ್ದೇ ತಿಳಿಯದಂತೆ ಸುಖ ನಿದ್ದೆಯಾಗುತ್ತದೆ. ಹಾಸಿಗೆ ಬಿಟ್ಟು ಮೇಲೆದ್ದಾಗ ಮೈ, ಮನಸ್ಸೆಲ್ಲಾ ಹೂವಂತೆ ಹಗುರವಾಗಿ ಲೋಕವೆಲ್ಲಾ ಹೊಸದಾಗಿ, ಸುಂದರವಾಗಿ ಕಾಣುತ್ತದೆ. ಕಾಯಕ ಮಾಡಲು ಹೊಸ ಹುರುಪು ತುಂಬುತ್ತದೆ. ಕಾಯಕ ಅದೇ ಆದರೂ ಹೊಸತೆಂಬಂತೆ ಕಾಯಕದಲ್ಲಿ ನಿರತನಾಗುವಂತೆ ಮಾಡುತ್ತದೆ. ಪ್ರತಿ ಸಾರಿ ಪ್ರತಿಫಲ ಪಡೆಯುವಾಗ ಎಲ್ಲಿಲ್ಲದ ಖುಷಿ ಪಡುತ್ತದೆ. ರೈತರು, ಕೃಷಿ ಕೂಲಿ ಕಾರ್ಮಿಕರು … ಹಗಲೆಲ್ಲಾ ಬೆವರಿಳಿಸಿದ್ದರಿಂದ ಇಂಥಾ ಬದುಕನ್ನು ಬದುಕುತ್ತಿದ್ದಾರೆ. ಇದೇ ಸುಖ, ಇದೇ ಸ್ವರ್ಗ. ಇದೇ ಶರೀರಶ್ರಮ ಪ್ರಧಾನ ಕಾಯಕದ ಮಹತ್ವ.
ಶರೀರ ಶ್ರಮ ಪ್ರಧಾನ ಕಾಯಕದಲ್ಲಿ ತೊಡಗಿರುವ ವ್ಯಕ್ತಿ ಬೇರೆ ಬೇರೆ ಭಂಗಿಗಳಲ್ಲಿ ಕುಳಿತು, ನಿಂತು, ಬಾಗಿ ಓಡಾಡಿ ಕೆಲಸ ಮಾಡಬೇಕಾಗುತ್ತದೆ. ಆಗ ಪ್ರಾಣಾಯಾಮದ ಪ್ರಧಾನ ಅಂಶಗಳಾದ ರೇಚಕ, ಪೂರಕ, ಕುಂಬಕಗಳನ್ನು ಆಗಾಗ ಅನುಭವಿಸುತ್ತಾನೆ. ಹಾಗೇ ಯೋಗದ ಕೆಲವು ಆಸನಗಳು ಬಂದು ಹೋಗುತ್ತವೆ. ಕೆಲಸ ಸುಂದರ ಆಗಬೇಕಾದರೆ ದೇಹ ಮನಸ್ಸು ಮಾಡುವ ಕಾಯಕದಲ್ಲಿ ಲೀನವಾಗಿರಬೇಕು. ಪ್ರಪಂಚದ ಉತ್ಕೃಷ್ಟವಾದ ಕಲೆಗಳು ತಲ್ಲೀನತೆಯ ಪರಾಕಾಷ್ಠೆಯ ಪ್ರತೀಕಗಳಾಗಿವೆ. ಕೆಲಸಗಳು ಸುಂದರಗೊಳ್ಳುವುದು ಕೆಲಸದಲ್ಲಿ ತನು ಮನ ಐಕ್ಯವಾದಾಗ. ಅದೇ ಯೋಗ! ಇದರಿಂದ ದೇಹ ಮನಸ್ಸಿಗೆ ಒತ್ತಡ ಕಡಿಮೆಯಾಗಿ, ಆರೋಗ್ಯ ಉಂಟಾಗಿ ಜೀವನೋತ್ಸಾಹ ಹೆಚ್ಚುವುದು. ಇದು ಶರೀರ ಶ್ರಮದ ಪ್ರತಿಫಲ!
ಶರೀರ ಶ್ರಮ ಪ್ರಧಾನ ಕಾಯಕದಲ್ಲಿ ಎರಡು ವಿಧ :
೧ ಅನುತ್ಪಾದಕ ಶರೀರ ಶ್ರಮ ಪ್ರಧಾನ ಕಾಯಕಗಳು.
೨ ಉತ್ಪಾದಕ ಶರೀರ ಶ್ರಮ ಪ್ರಧಾನ ಕಾಯಕಗಳು.
೧ ಅನುತ್ಪಾದಕ ಶರೀರ ಶ್ರಮ ಪ್ರಧಾನ ಕಾಯಕಗಳು : ಶರೀರ ಶ್ರಮಿಸಿದರೂ ಯಾವ ಉತ್ಪಾದನೆ ಆಗದ ಹಣ ಗಳಿಸದ ಕಾಯಕಗಳು. ಜಿಮ್, ಜಾಗಿಂಗ್, ವಾಕಿಂಗ್, ಎಕ್ಸಸೈಸ್, ಗರಡಿ ಮನೆ ತಾಲೀಮು, ಮಲ್ಲಗಂಬ ಕಸರತ್ತು ಮುಂತಾದವು ಅನುತ್ಪಾದಕ ದೈಹಿಕ ಶ್ರಮವಾಗುವುವು. ಏಕೆಂದರೆ ಈ ಶ್ರಮದಿಂದ ದೇಹಕ್ಕೆ ವ್ಯಾಯಾಮದ ಲಾಭ ಆಯಿತೇ ವಿನಃ ಜೀವನ ನಿರ್ವಹಣೆಗೆ ಅವಶ್ಯವಾದುದನ್ನು ಗಳಿಸಲು ಅನುಕೂಲವಾಗಲಿಲ್ಲ. ಆದ್ದರಿಂದ ಇವು ಅನುತ್ಪಾದಕ ಶ್ರಮದ ಕಾಯಕಗಳಾಗಿವೆ. ಇಲ್ಲಿನ ಶ್ರಮ ಹಣ ಅಥವಾ ಜೀವನಾವಶ್ಯಗಳ ಗಳಿಸುವಲ್ಲಿ ವಿಫಲವಾಗಿದೆ.
೨ ಉತ್ಪಾದಕ ಶರೀರ ಶ್ರಮದ ಕಾಯಕಗಳು : ಈ ಶರೀರ ಶ್ರಮದಿಂದ ಆರೋಗ್ಯ ಲಭಿಸುವುದಲ್ಲದೆ ಜೀವನೋಪಾಯಕ್ಕೂ ದಾರಿಯಾಗುವುದು. ರೈತರು, ಕೃಷಿ ಕಾರ್ಮಿಕರು, ಕಟ್ಟಡ ಕೂಲಿ ಕಾರ್ಮಿಕರು, ರಸ್ತೆ ಕೂಲಿ ಕಾರ್ಮಿಕರದು ಮುಂತಾದವರವು ಉತ್ಪಾದಕ ದೈಹಿಕ ಶ್ರಮದ ಕಾಯಕವಾಗಳಾಗಿವೆ. ಉಳ್ಳವರು, ಬೌದ್ದಿಕ ಶ್ರಮಜೀವಿಗಳು ಘನತೆಗೆಂದು ಕೈಗೊಬ್ಬರು, ಕಾಲಿಗೊಬ್ಬರು ಕೆಲಸಗಾರರನ್ನು ನೇಮಿಸಿಕೊಂಡಿರುತ್ತಾರೆ. ಆ ಕೆಲಸಗಳನ್ನು ಇವರೇ ನಿರ್ವಹಿಸಿದಾಗ ಕೆಲಸ ಅಚ್ಚುಕಟ್ಟಾಗುವುದು, ಶುಚಿ ಮನಕೊಪ್ಪುತ್ತದೆ, ನಾವೇ ಮಾಡಿದೆವಲ್ಲಾ ಎಂಬ ಸಂತೃಪ್ತಿ ಉಂಟಾಗುವುದು. ವಸ್ತುಗಳ ಮೇಲೆ ಪ್ರೀತಿ ಹೆಚ್ಚುವುದು, ಮನೆ ಅಂದವು ಹೆಚ್ಚಿ, ಹಣ ಉಳಿಯುತ್ತದೆ, ಉತ್ಪಾದಕ ಶ್ರಮ ಆಗುತ್ತದೆ. ಆರೋಗ್ಯದ ಜತೆಗೆ ಘನತೆಯೂ ಹೆಚ್ಚುತ್ತದೆ. ಆದ್ದರಿಂದ ತಮ್ಮ ತಮ್ಮ ಕೆಲಸಗಳ ತಾವೇ ಮಾಡಿಕೊಳ್ಳುವುದರಿಂದ ಉತ್ಪಾದಕ ಶ್ರಮ ಆರಂಭಿಸಿ. ಬದುಕ ಆನಂದಿಸಿ
ನಿಮ್ಮ ಮನೆಯಲ್ಲಿ ಕೆಲಸಗಳು ಇಲ್ಲದಿದ್ದರೆ ನಿಮ್ಮ ಬೀದಿಯ ಅಥವಾ ನಿಮಗೆ ಹತ್ತಿರವಿರುವ ಯಾವುದೋ ದೇವಸ್ಥಾನದ ಅಥವಾ ಸರ್ಕಾರದ ಕಛೇರಿಯ, ಸರ್ಕಾರಿ ಶಾಲೆಯ ಕಸ ಸಾಕಷ್ಟಿರುತ್ತದೆ. ಅದನ್ನು ಗುಡಿಸಿ ಸ್ವಚ್ಛತಾಂದೋಲನಕ್ಕೆ ಕೈ ಜೋಡಿಸಿದಂತಾಗುತ್ತದೆ, ದೇಶಕ್ಕೆ ಉತ್ಪಾದನಾ ಶ್ರಮವಾಗುತ್ತದೆ. ದೇಹದ ಮಲದ ಜತೆಗೆ ದೇಶದೇಹದ ಮಲವನ್ನೂ ಹೊರಹಾಕಿದಂತಾಗುತ್ತದೆ . ಸಸಿನೆಡುವ, ಸಸಿಗಳಿಗೆ ನೀರುಣಿಸುವ ಇಂಥಾ ನಿಮಗೆ ಅನುಕೂಲವಾಗುವ ಕೆಲಸಗಳನ್ನು ಪ್ರತಿದಿನ ಅರ್ದ ಗಂಟೆ ಸಮಯ ಮಾಡಿ, ಸಮಾಜದ ಸೇವಕರಾಗಿ, ಸೇವೆಯಿಂದ ಬರುವ ಅಪಾರ ಆನಂದದ ಅನುಭೋಗಿಗಳಾಗಿ.ಅದೇ ಸ್ವರ್ಗ ಸುಖ ನೀಡುತ್ತದೆ.
" ಕೈ ಕೆಸರಾದರೆ ಬಾಯಿ ಮೊಸರು " ಕಷ್ಟಪಟ್ಟು ಕೆಲಸ ಮಾಡಿದರೆ ಸುಖ ಎಂದು ಹೇಳುತ್ತದೆ ಈ ಗಾದೆ. " ನಿನ್ನ ಬೆವರು ಸುರಿಸಿ ಅನ್ನ ತಿನ್ನು " ಎಂದು ಹೇಳುತ್ತದೆ ಬೈಬಲ್. ವಚನಕಾರರಲ್ಲಿ ಬಸವಣ್ಣ " ಕಾಯಕವೇ ಕೈಲಾಸ " ಎಂದು ಕಾಯಕದ ಮಹತ್ವ ಹೇಳಿದ್ದಾರೆ. ಇದು ಎಲ್ಲಾ ಆರ್ಥಿಕ ಮತ್ತು ಸಾಮಾಜಿಕ ಚಿಂತಕರಿಗಿಂತ ಉತ್ತಮ ಚಿಂತನೆಯಾಗಿದೆ! ಅವರವರು ಅವರವರ ಕೆಲಸದಲ್ಲಿ ತಲ್ಲೀನರಾಗುವುದರಿಂದ ಕೆಲಸ ಸುಂದರವಾಗುತ್ತದೆ. ಅನ್ಯ ಚಿಂತನಗೆಳಿಂದ ಆಗುವ ಅನಾಹುತಗಳು ತಪ್ಪಿ ನೀತಿಯುತ ಸಮಾಜದ ಸೃಷ್ಟಿ, ಸದೃಢ ಭಾರತದ ಆರ್ಥಕತೆಗೆ ದಾರಿಯಾಗುತ್ತದೆ. ನಾವು ಬಯಸಿದುದಕಿಂತ ಹೆಚ್ಚು ಆದಾಯ ನಮ್ಮದಾದರೂ ಅದು ಸೋಮಾರಿಗಳನ್ನಾಗಿ, ಅನಾರೋಗ್ಯವಂತರಾಗಿ ಮಾಡುವುದರಿಂದ, ಅದನ್ನು ಅವಶ್ಯ ಇರುವವರಿಗೆ, ಯೋಗ್ಯರಿಗೆ , ಸಾರ್ವಜನಿಕರಿಗೆ ಅನುಕೂಲವಾಗುವ ಕಟ್ಟಡಗಳ ನಿರ್ಮಿಸಲು ದಾನ ಮಾಡುವುದರಿಂದ ಅದು ನಿತ್ಯದಂತೆ ದುಡಿಯಲು ಹಚ್ಚಿ ಸದಾ ಉತ್ಸಹದ ಸೆಲೆ ಬತ್ತದಂತೆ ನೋಡಿಕೊಳ್ಳುತ್ತದೆ. ವಚನಕಾರರು ಅವಶ್ಯಕತೆಗಿಂತ ಹೆಚ್ಚನ್ನು ಸಂಗ್ರಹಿಸಿಟ್ಟುಕೊಳ್ಳುವುದು ಪಾಪ ಎಂದು ಭಾವಿಸಿದ್ದರು. ತಮಗೆ ಎಷ್ಟು ಅವಶ್ಯವೋ ಅಷ್ಟು ಮಾತ್ರ ದುಡಿಯಬೇಕು, ಹೆಚ್ಚು ದುಡಿದರೆ ಇತರರ ಪಾಲನ್ನು ನಾವು ತಂದು ಇತರರಿಗೆ ಆ ವಸ್ತು ದೊರೆಯದಂತಾಗಲು ಕಾರಣರಾಗುತ್ತೇವೆಂಬುವುದನ್ನು ನುಡಿಯಲ್ಲಷ್ಟೇ ಅಲ್ಲದೆ ನಡೆಯಲ್ಲೂ ಪಾಲಿಸಿ ಕಾಯಕದ ಮಹತ್ವ ಹೆಚ್ಚಿಸಿರುವುದ ಕಾಣುತ್ತೇವೆ! ಅದಕ್ಕೇ ವಚನಕಾರರು ಶ್ರೇಷ್ಠರಾಗುವುದು. ಆದರೆ ಇಂದು ಕೊಳ್ಳುಬಾಕ ಸಂಸ್ಕೃತಿ ಹೆಚ್ಚಿ ಅವಶ್ಯಕವಲ್ಲದಿದ್ದರೂ ಯಥೇಚ್ಛವಾಗಿ ಅನೇಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳತ್ತಿರುವುದನ್ನು ಕಾಣುತ್ತೇವೆ.
ಬಸವಣ್ಣ " ಉಳ್ಳವರು ಶಿವಾಲಯವ ಮಾಡುವರು … " ವಚನದಲ್ಲಿ " ….ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ " ಎಂದು ಹೇಳಿರುತ್ತಾರೆ. ಚಲಿಸದಿರುವ ವಸ್ತುವಿಗೆ ನಾಶವಿದೆಯೇ ವಿನಃ, ಚಲಿಸುವ ವಸ್ತುವಿಗಲ್ಲ ಎಂದಿದ್ದಾರೆ. ಒಂದು ಹೊಲಿಗೆ ಯಂತ್ರ ಬಹಳ ಕಾಲ ಉಪಯೋಗಿಸದಿದ್ದರೆ ತುಕ್ಕು ಹಿಡಿದು ನಾಶವಾಗುವುದಲ್ಲದೆ ತಂದವರಿಗೆ ನಷ್ಟವನ್ನುಂಟು ಮಾಡುತ್ತದೆ. ಉಪಯೋಗಿಸುತ್ತಿದ್ದರೆ ಬಹಳ ವರ್ಷ ಬಾಳುವುದಲ್ಲದೆ ಲಾಭದಾಯಕವೂ ಆಗುತ್ತದೆ. ಹಾಗೆ ಮನುಷ್ಯನ ದೇಹ ಸಹ.
' ಉದ್ಯೋಗಂ ಪುರುಷ ಲಕ್ಷಣಂ ' ಎಂಬ ನುಡಿಯಿರುವುದು. ಪುರುಷ ಲಕ್ಷಣ ಎಂಬುದನ್ನು ಜೀವಿಗಳ ಲಕ್ಷಣ ಎಂದೂ ಅರ್ಥೈಸಿಕೊಳ್ಳಬೇಕಿದೆ. ಈ ಅರ್ಥವೇ ಅದಾಗಿದ್ದಿರಬಹುದು. ವಚನಕಾರರು ಕಾಯಕದಲ್ಲಿ ನಿರತರಾಗಿ ನಿತ್ಯ ಕಾಯಕ ಮಾಡುತ್ತಿದ್ದುದು, ಕಾಯಕಯೋಗಿ ಎಂದು ಸಿದ್ಧರಾಮ ಕರೆಯಿಸಿಕೊಂಡದ್ದು, ಗಾಂಧೀಜಿ ಚರಕದಿಂದ ನೂಲು ತೆಗೆದು ಕಾಯಕ ಯೋಗಿಯಾಗಿ, ಸ್ವದೇಶಿ ವಸ್ತುಗಳ ಬಳಕೆಗೆ ಪ್ರಾಮುಖ್ಯತೆ ನೀಡಿ, ಗುಡಿ ಕೈಗಾರಿಕೆಗಳ ಅಗತ್ಯತೆ ಸಾರಿದ್ದು, ಭಗವಧ್ಗೀತತೆಯಲ್ಲಿ ಭಗವಂತ ತಾನೂ ಕಾರ್ಯನಿರತನಾಗಿರುವುದಾಗಿ ಹೇಳುವುದು … ಸೃಷ್ಟಿ, ಲಯ, ಸ್ಥಿತಿ ಗಳಿಗೆ ತ್ರಿಮೂರ್ತಿಗಳು ಕಾರಣರಾಗಿ ತಮ್ಮ ಕರ್ತವ್ಯ ಮಾಡುತ್ತಿರುವುದು, ಕಾಯಕದ ಮಹತ್ವವನ್ನು, ಅನಿವಾರ್ಯತೆಯನ್ನು ಸಾರುತ್ತಿಲ್ಲವೆ.
ಮಕ್ಕಳಿಂದ ಮನೆಗೆಲಸ ಮಾಡಿಸದಿರುವುದು ಅವರ ಮೇಲಿನ ಪ್ರೀತಿ ಎಂದು ನಾವು ಭಾವಿಸಿದ್ದೇವೆ, ಅದು ಭವಿಷ್ಯದಿ ನೋವು ಕೊಡುವ ರೀತಿ ! ಪೋಷಕರು, ಸಮಾಜ, ಸರ್ಕಾರಗಳು ಮಕ್ಕಳಿಗೆ ಶ್ರಮಿಸಿ ದುಡಿಯುವುದನ್ನು ಹೇಳಿಕೊಡಬೇಕೇ ವಿನಃ, ಸುಖಿಸಲೆಂದು ಅವರ ಮೇಲಣ ಮಮತೆಯಿಂದ ಕೂಡಿಟ್ಟರೆ, ಕೆಲಸ ಮಾಡಿಸದಿದ್ದರೆ ಅವರಿಗೆ ನೋವುಣಿಸಿ, ನಾವೂ ದುಃಖಿಸುವಂತಾದೀತು! ಸಂಪಾದನೆಯನ್ನು ಏನು ಮಾಡುವುದು ಎಂಬ ಚಿಂತೆಯೇ? ಅನಾಥಾಶ್ರಮ, ವೃದ್ದಾಶ್ರಮಗಳಿಗೆ ಕೊಡಿ! ಕೆರೆ, ಕಟ್ಟೆ, ಶೌಚಾಲಯ ಮುಂತಾದವುಗಳ ನಿರ್ಮಿಸಲು ದಾನ ಮಾಡಿ ಆಗ ನಿಮಗಾಗುವುದು ಪರಮಾನಂದ! ದಾನದ ಆನಂದ ಅನುಭವಿಸಿ, ಅದೇ ಸ್ವರ್ಗ ಸುಖ!
* ಕೆ ಟಿ ಸೋಮಶೇಖರ ಹೊಳಲ್ಕೆರೆ.