ಕಾಮೆಡಿಗಳಲ್ಲಿ ಅದ್ವಿತೀಯತೆ ಮರೆದ- Ben Jonson: ನಾಗರೇಖಾ ಗಾಂವಕರ

ಇಂಗ್ಲೀಷ ಸಾಹಿತ್ಯದಲ್ಲಿ ಅದ್ವಿತೀಯನೆಂದೇ ಹೆಸರು ಗಳಿಸಿದ ಶೇಕ್ಸಪಿಯರ್ ತನ್ನ ಟ್ರಾಜಡಿಗಳಿಂದ ಖ್ಯಾತನಾಗಿದ್ದರೆ ಆತನ ಸಮಕಾಲೀನನಾದ ಬೆನ್‍ಜಾನ್ಸನ್ [ಆದರೂ ಹತ್ತು ವರ್ಷಗಳಿಗೆ ಕಿರಿಯ] ಕಾಮೆಡಿಗಳಲ್ಲಿ ಅದ್ವಿತೀಯತೆ ಮೆರೆದಿದ್ದ. ಹಾಗೆಂದು ಇಬ್ಬರೂ ಬರಿಯ ಒಂದೇ ಪ್ರಕಾರಕ್ಕೆ ಸೀಮಿತಗೊಂಡಿರಲಿಲ್ಲ. ಟ್ರಾಜಡಿ ಕಾಮೆಡಿಗಳೆರಡೂ ಮನುಷ್ಯನ ಬದುಕಿನ ಎರಡು ದಾರಿಗಳೇ ಆಗಿದ್ದು, ಶೇಕ್ಸಪಿಯರ ಕಾಮೆಡಿಗಳಿಂದಲೂ ಪ್ರಸಿದ್ಧ. ಅದು 1598ರ ಸುಮಾರು. ಬೆನ್ ಜಾನಸನ್ ತನ್ನ ಮೊದಲ ಕಾಮೆಡಿಯ ‘Every Man in His Humour’ಮೂಲಕ ಹಾಗೂ ಶೇಕ್ಸಪಿಯರನ ತನ್ನ ಮೊದಲ ಕಾಮೆಡಿ ‘Love’s Labour”s Lost’ಮೂಲಕ ಸಮಕಾಲೀನರಾಗೇ ತಮ್ಮ ಕಾವ್ಯ ಜಗತ್ತನ್ನು ಪ್ರವೇಶಿಸಿದರು. ಶೇಕ್ಸಪಿಯರ್ ‘ಟು ಜಂಟಲ್ ಮೆನ್ ಆಫ್ ವೆರೋನಾ’ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಮುಂತಾದ ಕಾಮೆಡಿಗಳ ಬರೆದಿದ್ದರೂ, ಆತ ಟ್ರಾಜಡಿಗಳಿಂದಲೇ ಪ್ರಖ್ಯಾತನಾದ. ಅದೇ ರೀತಿ ಬೆನ್ ಜಾನಸನ್ ಕೂಡಾ ‘Sejanus’ದಂತಹ ಟ್ರಾಜಡಿಗಳ ಬರೆದಿದ್ದರೂ ತನ್ನ ಕಾಮೆಡಿಗಳಿಂದಲೇ ಹೆಸರಾಗಿದ್ದಾನೆ.

ವಿಲಿಯಂ ಶೇಕ್ಸಪಿಯರನಿಗಿಂತ ಹತ್ತು ವರ್ಷಗಳಿಗೆ ಕಿರಿಯನಾದ ಬೆನ್ ಜಾನಸನ್ ಜನಿಸಿದ್ದು 1573ರಂದು ವೆಸ್ಟಮಿನಿಸ್ಟರ್ ಅಬೆಯಲ್ಲಿ. ಜಾನಸನ್‍ನ ತಾತ ಇಂಗ್ಲೆಂಡಿಗೆ ವಲಸಿಗನಾಗಿದ್ದರು. ಜಾನಸನ್ ತಂದೆ ಚರ್ಚಿನ ಪಾರಮ್ಯವನ್ನು ವಿರೋಧಿಸಿದ್ದ ಕಾರಣ, ಹಾಗೂ ನಾಸ್ತಿಕತೆಯನ್ನು ಪ್ರದರ್ಶಿಸಿದ ಕಾರಣ ಕ್ವೀನ್ ಮೇರಿ ಆತನ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಂಡಳು. ಇದರಿಂದ ಕೆಲಸಮಯ ಜಾನಸನ್ ತಂದೆ ತೊಂದರೆಗೆ ಒಳಗಾದ. ಆದರೆ ತದನಂತರ ಚರ್ಚಿನ ನಿಯಂತ್ರಣವನ್ನು ಒಪ್ಪಿಕೊಂಡು ಬದುಕಿದರೂ, ದುರಾದೃಷ್ಟವಶಾತ್ ಜಾನಸನ್ ಹುಟ್ಟುವ ಒಂದು ತಿಂಗಳು ಮೊದಲೇ ಆತ ಮರಣಹೊಂದಿದ. ಇದರಿಂದ ಜಾನಸನ್ ಶೈಶವದಲ್ಲಿಯೇ ತಂದೆಯ ಕಳೆದುಕೊಂಡು ವಿಧವೆ ತಾಯಿಯೊಂದಿಗೆ ತೀರಾ ಬಡತನದಲ್ಲಿ ಬೆಳೆದ. ಆ ನಂತರ ಆತನ ತಾಯಿ ಇಟ್ಟಿಗೆ ಕಾರ್ಮಿಕನೊಬ್ಬನ ವಿವಾಹವಾದ್ದರಿಂದ, ಜಾನಸನ್ ಆ ಮಲತಂದೆಯ ಸುಪರ್ದಿಯಲ್ಲಿ ಬೆಳೆದುದೊಡ್ಡವನಾದ. ಆತನ ಇಟ್ಟಿಗೆ ವ್ಯವಹಾರವನ್ನು ನೋಡಿಕೊಳ್ಳುತ್ತ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರೂ ಮುಂದೆ ವೆಸ್ಟಮಿನಿಸ್ಟರ್ ಸ್ಕೂಲ್‍ನ ವಿಲಿಯಂ ಕಾಮಡೆನ್ ಎಂಬ ಅನ್ವೇಷಕನಿಂದ ಸಾಹಿತ್ಯದೆಡೆಗೆ ಪ್ರಭಾವಿತನಾದ. ‘knew little Latin and no Greek’ ಎಂದು ತನ್ನನ್ನೆ ತಾನು ಬಣ್ಣಿಸಿಕೊಂಡ ಶೆಕ್ಸಪಿಯರ್‍ನಂತೆ ಜಾನಸನ್ ಓದು ಕೂಡಾ. ಆದರೂ ವೆಸ್ಟಮಿನಿಸ್ಟರ ಸ್ಕೂಲ್‍ನಲ್ಲಿ ಕ್ಲಾಸಿಕಲ್ ಕಲಿಕೆಯಿಂದ ಜ್ಞಾನದ ಬಹಳಷ್ಟನ್ನು ಗಳಿಸಿದ ಜಾನಸನ್ ಪಾಂಡಿತ್ಯದ ವಿಚಾರದಲ್ಲಿ ತನ್ನ ಸಮಕಾಲೀನರಿಗಿಂತ ಒಂದಿಷ್ಟು ಹೆಚ್ಚೇ ಎನ್ನುವಷ್ಟು ವಿದ್ವಾನ್ ಆಗಿದ್ದ.

ಆದರೆ ಆತನ ವೈಯಕ್ತಿಕ ಬದುಕು ಮಾತ್ರ ಸುಂದರವಾಗಿರಲಿಲ್ಲ. ಮಲತಂದೆಯ ವ್ಯವಹಾರವನ್ನು ನೋಡಿಕೊಳ್ಳುವ ಕಾರಣ ಆಕ್ಸಪರ್ಢ ಇಲ್ಲವೇ ಕೇಂಬ್ರಿಜ್ಡ್ ವಿಶ್ವವಿದ್ಯಾಲಯಗಳಲ್ಲಿ ನೋಂದಾಯಿಸಿಕೊಂಡು ವಿಧ್ಯಾಭ್ಯಾಸ ಮಾಡಲಾಗಿರಲಿಲ್ಲ. ಆದರೂ ಮುಂದೆ ಈ ವಿಶ್ವವಿದ್ಯಾಲಯಗಳು ಆತನ ಸಾಹಿತ್ಯ ಸೇವೆಗೆ ಗೌರವ ಡಾಕ್ಟರೇಟ್ ನೀಡಿದ್ದವು. ಮಲತಂದೆಯೊಂದಿಗೆ ಮುನಿಸು ಉಂಟಾಗಿ ಕೆಲವು ಕಾಲ ಲಂಡನ್ನ ಬಿಟ್ಟು ನೆದರ್‍ಲ್ಯಾಂಡಿಗೆ ಹೋದ. ಅಲ್ಲಿ ಹಾಲಂಡಿನ ಸೈನ್ಯವನ್ನು ಸೇರಿ ಸ್ಪೇನ್‍ನೊಂದಿಗೆ ಯುದ್ಧದಲ್ಲಿ ವೀರತನದಿ ಹೋರಾಡಿ ವೀರಯೋಧನೆಂಬ ಬಿರುದನ್ನು ಪಡೆದ. ಪುನಃ 1592ರಲ್ಲಿ ಲಂಡನ್ನಿಗೆ ವಾಪಸ್ಸಾದ, ವಿವಾಹವಾದ. ಆದರೆ ಸಂತಸದ ಬದುಕು ಆತನದಾಗಲಿಲ್ಲ. ಆತನ ಪತ್ನಿ ಗಯ್ಯಾಳಿಯಾಗಿದ್ದಳು. ಆಕೆಯ ಕಿರಿಕಿರಿಗೆ ಬೇಸತ್ತು ಒಪ್ಪಂದದ ಮೇಲೆಯೇ ಐದು ವರ್ಷಗಳಿಗೆ ಆಕೆಯಿಂದ ದೂರವಿದ್ದು ಬದುಕಿದ. ಆದಾಗ್ಯೂ ಆಕೆಯನ್ನು ಆತ ಬಣ್ಣಿಸುವುದು ಹೀಗೆ. ‘A Shrew yet honest’

ಕೌಟಂಬಿಕ ಸಮಸ್ಯೆಗಳು ಆತನನ್ನು ಜರ್ಜರಿತಗೊಳಿಸಿದ್ದವು. ಆತನ ಪ್ರೀತಿಯ ಪುತ್ರ ತನ್ನ ಏಳನೇ ವಯಸ್ಸಿಗೆ ಪ್ಲೇಗ್ ರೋಗಕ್ಕೆ ಬಲಿಯಾದ. ಅದಕ್ಕೂ ಮುಂಚೆ ಆತನ ಮಗಳು ಶೈಶವದಲ್ಲೆ ಅಸುನೀಗಿದಳು. ಉಳಿದ ಒಬ್ಬನೇ ಮಗ ಜಾನಸನ್‍ನ ಜೊತೆಗಾದ. ಇವೆಲ್ಲ ಅಡ್ಡಿ ಆತಂಕಗಳ ನಡುವೆಯೇ ಆತನ ಸಾಹಿತ್ಯದ ಬದುಕು ಸಾಗಿತ್ತು. ಇನ್ನು ನಟನಾಗಿ ಪೀಲಿಫ್ ಹೆನ್ಸಲೊವ್ ಎಂಬ ಥೇಟರ ಮಾಲಿಕನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ತನ್ನ ಸಹ ನಟನೊಬ್ಬನ ದುಷ್ಟತನಕ್ಕೆ ಕೋಪಗೊಂಡು ಕೊಂದು ಹಾಕಿದ. ಇದರಿಂದ ಮರಣದಂಡನೆಯ ಅಪಾಯ ಇತ್ತಾದರೂ ಇತನೊಬ್ಬ ಶ್ರೇಷ್ಟ ಸಾಹಿತಿ ಎಂಬ ಕಾರಣಕ್ಕೆ ಬಿಡುಗಡೆ ಸಿಕ್ಕಿತು. ಆ ನಂತರ 1598ರಲಿಲ್ಲ ನಾಟಕದ ಭರ್ಜರಿ ಯಶಸ್ಸಿನ ನಂತರ ಜಾನಸನ್ Cynthia Revels, Poetaster, Sejanus,
ಮುಂತಾದ ಹಲವು ನಾಟಕಗಳ ಬರೆದ. ಕಿಂಗ ಜೇಮ್ಸ್ ಇಂಗ್ಲೆಂಡಿನ ಪಟ್ಟಕ್ಕೆ ಬಂದ ನಂತರ ಈತನಿಗೆ ರಾಜನ ಆಶ್ರಯ ಸಿಕ್ಕಿತು. ಈ ಕಾಲಕ್ಕೆ ಆತ ಪುನಃ ʼThe Volpone’, ‘The Silent Women’, ‘The Alchemist’, ‘the Bartholomew fair’ ಮುಂತಾದ ನಾಟಕಗಳ ಬರೆದು ಪ್ರದರ್ಶಿಸಿ ಪ್ರಸಿದ್ಧನಾದ. ಆದರೆ ಶ್ರೇಷ್ಟ ಸಾಹಿತಿಯ ಬದುಕಿನ ಕೊನೆಗಾಲ ಕೂಡಾ ಆತನ ಬಾಲ್ಯದಂತೆಯೇ ಸಂಕಟಗಳಿಂದ ಕೂಡಿತ್ತು. ಪಾಶ್ವವಾಯುವಿಗೆ ತುತ್ತಾಗಿ ಎಲ್ಲಿಗೂ ಹೋಗಲಾಗದೇ ಏನೂ ಮಾಡಲಾಗದೇ ಏಕಾಂಗಿಯಾಗಿ, ಆರ್ಥಿಕ ದುಸ್ಥಿತಿಗೂ ಒಳಗಾಗಿ 1637 ಅಗಸ್ಟ 6ರಂದು ಇಹಲೋಕ ತ್ಯಜಿಸಿದ.
ಜಾನಸನ್ ನಾಟಕಗಳು ಆ ಕಾಲಕ್ಕೆ ಎದುರಾಳಿಗಳೇ ಇಲ್ಲದ ಶೇಕ್ಸಪಿಯರನ ನಾಟಕಗಳಿಗೆ ಇರುವ ಒಂದೇ ಬೆದರಿಕೆಗಳಾಗಿದ್ದವು. ಎಲ್ಲ ಆಯಾಮಗಳಲ್ಲಿ ಶೇಕ್ಸಪಿಯರ್ ಅಗ್ರಪಂಕ್ತಿಯಲ್ಲಿದ್ದರೆ ಹಾಸ್ಯರಸವನ್ನೆ ತನ್ನ ಪ್ರಧಾನ ವಸ್ತುವಾಗಿ ಪ್ರತಿಪಾದಿಸುತ್ತಿದ್ದ ಆ ಮೂಲಕ ಸಾಮಾಜಿಕ ಬದುಕನ್ನು ಪ್ರತಿನಿಧಿಸುತ್ತಿದ್ದ ಬೆನ್ ಜಾನಸನ್ ದ್ವಿತೀಯನಾಗೇ ನಿಲ್ಲಿಸಲ್ಪಟ್ಟ. ಹೀಗಾಗಿ ಶೇಕ್ಸಪಿಯರನ ಕಾಲಕ್ಕೆ ಜಾನಸನ್ ಬರೆಯಲಾರಂಭಿಸಿದ್ದು ಆತನಿಗೆ ವರವಾದಕ್ಕಿಂತ ಶಾಪವೇ ಅಗಿತ್ತೆಂದು ವಿಮರ್ಶಕರ ಅಂಬೋಣ. ಶೇಕ್ಸಪಿಯರ ಎಂಬ ವಿಜಯದ ಕುದುರೆಯ ಹಿಂಭಾಗದಲ್ಲಿ ಕಟ್ಟಿ ಎಳೆಯಲ್ಪಡುವ ಬಂಧಿತನಂತೆ ಜಾನಸನ್ ಸ್ಥಿತಿ ಇತ್ತೆಂದು ಲೇಖಕನೊಬ್ಬ ಹೇಳುತ್ತಾನೆ.
ಆದಾಗ್ಯೂ ಜಾನ್‍ಸನ್ ಬದುಕನ್ನು ಪರಿಗಣಿಸಿದ ರೀತಿ ಮತ್ತು ಅದನ್ನು ವ್ಯಕ್ತಗೊಳಿಸಲು ಆಯ್ದುಕೊಂಡ ನಾಟಕಗಳು ಅವುಗಳ ಸಾದ್ಯತೆಗಳು ಶೆಕ್ಸಪಿಯರ್‍ಗಿಂತ ಸಂಪೂರ್ಣ ಭಿನ್ನವಾಗಿದ್ದವು. ಆತನ ನಾಟಕಗಳು ಎಲಿಜಬೆತನ್ ಇಂಗ್ಲೆಂಡ ಮತ್ತು ಯುರೋಪಿನ ರಿನೇಸ್ಸಾನ್ಸ್ ಕಾಲದ ಸಾಮಾಜಿಕ ಜೀವನಕ್ಕೆ ಕನ್ನಡಿ ಹಿಡಿಯುತ್ತವೆ. ಶೇಕ್ಸಪಿಯರ್ ನಾಟಕಗಳಲ್ಲಿ ಕಂಡುಬರುವ ದುಷ್ಟತೆ ಮತ್ತು ಶಿಷ್ಟತೆಗಳ ಪರಾಮರ್ಶೆಯನ್ನೆ ಜಾನಸನ್ ವಾಸ್ತವದ ತಳಹದಿಯ ಮೇಲೆ ಬಿಂಬಿಸುವ ಪ್ರಯತ್ನ ಮಾಡುತ್ತಾನೆ. ಅತಿಯಾದ ಕಾಲ್ಪನಿಕ ಉತ್ಪ್ರೇಕ್ಷೆಗಳು ಗೋಚರಿಸುವುದಿಲ್ಲ.

ಜಾನಸನ್ ಶೇಕ್ಸಪಿಯರ್‍ನೊಂದಿಗೆ ನಾಟಕ ಜಗತ್ತಿಗೆ ತನ್ನನ್ನು ತೊಡಗಿಸಿಕೊಂಡಿದ್ದ. ಆತನ ಮೊದಲ ನಾಟಕ ‘Every Man in His Humour’ ಮೊಟ್ಟಮೊದಲ ಬಾರಿ ಪ್ರದರ್ಶನಕ್ಕೆ ಲಾರ್ಡ ಚೆಂಬರ್ಲಿನ್ ಕಂಪನಿಗೆ ವಿನಂತಿಸಿದಾಗ ಆ ಕಂಪನಿ ಅತನ ಮೊನೊಸ್ಕ್ರೀಪ್ಟನ್ನು ತಿರಸ್ಕರಿಸಿತ್ತು. ಆದರೆ ಅದಾಗಲೇ ಆ ಕಂಪನಿಯ ಶೇರ ಹೋಲ್ಡರ್ ಆಗಿದ್ದ ಶೇಕಸ್ಪಿಯರ ಆ ನಾಟಕವನ್ನು ಓದಿ, ಸಂಭ್ರಮಿಸಿ, ಮೆಚ್ಚುಗೆ ವ್ಯಕ್ತಪಡಿಸಿದ. ತನ್ನ ಕಂಪನಿಯ ಮೂಲಕ ಅದನ್ನು ಯಶಸ್ವಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದ. ಅಷ್ಟೇ ಅಲ್ಲದೇ ಆ ನಾಟಕದ ಪ್ರಮುಖ ಪಾತ್ರವೊಂದರಲ್ಲಿ ಖುದ್ದು ನಟಿಸಿದ್ದ. ಇದನ್ನು ಜಾನಸನ್ ಮರೆಯುವುದಿಲ್ಲ. ಅದನ್ನಾತ ತನ್ನ ಕವಿತೆಯೊಂದರಲ್ಲಿ ʼTo the memory of my beloved Master William Shakespeare, and what he hath left us’. ಎಂದು ಹೊಗಳಿದ್ದಾನೆ.

ಆದರೂ ಆ ಕಾಲದ ಜಗತ್ತು ಕೇವಲ ಶೆಕ್ಸಪಿಯರ್‍ನನ್ನು ಮಾತ್ರ ಓಲೈಸುತ್ತಿದ್ದರಿಂದ ಒಳಗೊಳಗೆ ನರಳುತ್ತಿದ್ದ ಜಾನಸನ್ ಶೇಕ್ಸಪಿಯರನ್ ನಾಟಕಗಳ ಉತ್ಕೃಷ್ಟತೆಯನ್ನು ಒಪ್ಪಿಕೊಳ್ಳುತ್ತಲೇ ತನ್ನ ನಾಟಕಗಳು ಅಂತಹ ನಿಕೃಷ್ಟವಾಗಿಲ್ಲವೆಂದು ಸಾರುತ್ತಿದ್ದ.

-ನಾಗರೇಖಾ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Gerald Carlo
Gerald Carlo
4 years ago

ನಿಮ್ಮ ಲೇಖನ ಮಾಹಿತಿಪೂರ್ಣವಾಗಿದೆ. ಧನ್ಯವಾದಗಳು.

1
0
Would love your thoughts, please comment.x
()
x