ನನ್ನನ್ಯಾರು ಈ ರೀತಿ ಹೆಸರು ಹಿಡಿದು ಕರೆಯುವವರು ಎಂದು ಸಿಟ್ಟಿನಲ್ಲೇ ಒಳಮನೆಯಿಂದ ಸೌಟುಧಾರಿಣಿಯಾಗಿಯೇ ಹೊರ ಬಂದಳು ಕಾಮಾಕ್ಷಮ್ಮ..
ಹೊರ ಬಾಗಿಲಲ್ಲಿ ವರದರಾಜ ರಾಯರು ದೊಡ್ಡ ಹೂವಿನ ಹಾರ ಹಾಕಿಸಿಕೊಂಡು ಒಂದು ಕೈಯಲ್ಲಿ ಹೂವಿನ ಬುಕೆ, ಹೆಗಲ ಮೇಲೆ ಶಾಲು, ಪ್ಲಾಸ್ಟಿಕ್ ಚೀಲದ ತುಂಬಾ ಹಣ್ಣುಗಳು ಮತ್ತು ಬಣ್ಣದ ಕಾಗದದಿಂದ ಸುತ್ತಿದ್ದ ದೊಡ್ಡದೊಂದು ಡಬ್ಬ ಹಿಡಿದು ನಿಂತಿದ್ದರು.
ಯಾಕ್ರೀ ಏನಾಯ್ತು? ಈ ಅವತಾರದಲ್ಯಾಕೆ ಈ ಹೊತ್ತಲ್ಲಿ ಮನೆಗೆ ಬಂದಿರಿ? ಇವತ್ತು ಆಫೀಸ್ ಇಲ್ವಾ ಎಂದು ಕೇಳಿದರು.
ಇವತ್ಯಾಕೆ? ಇನ್ನು ಯಾವತ್ತೂ ಆಫೀಸ್ ಇಲ್ಲ.
ಅಯ್ಯೋ ರಾಮ.. ಯಾಕ್ರೀ ಏನಾಯ್ತು?
ಏನಾಗೋದು? ಕೆಲಸದಿಂದ ಮುಕ್ತಿ ಸಿಕ್ಕಿತು ಕಣೇ..ಇನ್ನು ನಾನು ಫ್ರೀ..
ಹೌದೇನೂ.. ನಿಮ್ಗೆ ಅಷ್ಟು ಪ್ರಾಯ ಅದ್ಯಾವಾಗ ಆಯ್ತು ರೀ.. ಮೊನ್ನೆ ಮೊನ್ನೆಯಷ್ಟೇ ಅಲ್ವಾ ನಮ್ಮ ಮದ್ವೆ ಆಗಿದ್ದು, ಮಗ ಹುಟ್ಟಿದ್ದು, ಮಗಳು ಹುಟ್ಟಿದ್ದು, ಮಗಳಿಗೆ ಮದ್ವೆ ಆಗಿ ಮೊಮ್ಮಗಳು ಹುಟ್ಟಿದ್ದು. ಮಗ ಮದ್ವೆ ಮಡ್ಕೊಂಡು ಫಾರಿನ್ನಿಗೆ ಹೋಗಿದ್ದು..
ಹುಂ.. ಎಲ್ಲಾ ಮೊನ್ನೆ ಮೊನ್ನೇನೇ ..ಆ ಮೊನ್ನೇಗೆ ಸುಮಾರು ನಲ್ವತ್ತು ವರ್ಷ ಕಳೀತು ಅಷ್ಟೇ..
ಹೌದೇನ್ರೀ..
ರೀ.. ನಂಗೊಂದೇ ಒಂದು ಆಸೆ ಕಣ್ರೀ..
ಅದೇನೇ .. ನೋಡು ನಂಗಿನ್ನು ಮೊದಲಿನಷ್ಟು ಸಂಬಳ ಕೂಡಾ ಬರೋದಿಲ್ಲ ನೀನು ಚಿನ್ನದ ಸರ ಓಲೆ ಬಳೆ ಅಂತೆಲ್ಲಾ ರಾಗ ತೆಗೆದರೆ ಮತ್ತುಳಿದ ನಮ್ಮ ಜೀವನಕ್ಕೆ ಕಷ್ಟ ಕಣೇ.. ಪಕ್ಕನೆ ಆರೋಗ್ಯ ತಪ್ಪಿದರೆ ಆಸ್ಪತ್ರೆ ಗೀಸ್ಪತ್ರೆ ಸೇರ್ಬೇಕಾದ್ರೆ ಕರ್ಚೆಷ್ಟು ಬರುತ್ತೆ ಗೊತ್ತಾ..
ಅಯ್ಯೋ ನನ್ನ ಕರ್ಮವೇ.. ನಾನೆಂದಾದ್ರು ಅದೆಲ್ಲ ಕೇಳಿದ್ದಾಗಲೀ ಉಂಟಾ.. ಮದುವೆ ಆಗಿ ಬಂದಲ್ಲಿಂದ ಈ ಎರಡೆಳೆ ಕರಿಮಣಿ ಸರ ಬಿಟ್ರೆ ಬೇರೇನಾದ್ರೂ ಹಾಕಿದ್ದು ನೋಡಿದ್ದೀರಾ..
ಹುಂ .. ನನ್ನಂತವನನನ್ನು ಮದುವೆ ಆಗಿದ್ದಕ್ಕೆ ಅದಕ್ಕಿಂತ ಹೆಚ್ಚಿನ ಕನಸಾದ್ರೂ ನೋಡಲು ಸಾಧ್ಯವಿತ್ತೋ ಇಲ್ವೋ..
ಅಯ್ಯೋ.. ನಿಮ್ದೆಂತ ಇದು ಗೋಳೋ ಅನ್ನುವ ಡೈಲಾಗ್.. ಅದಲ್ಲ ನಾನು ಕೇಳಿದ್ದು .. ನೋಡಿ ನಾನು ಹಳ್ಳಿಯಿಂದ ಬಂದವಳು. ಹೇಗೋ ಪೇಟೆಯ ಗಾಳಿ ನೀರಿಗೆ ಹೊಂದಿಕೊಂಡು ಇಷ್ಟು ಕಾಲ ಮೂರು ಮತ್ತೊಂದು ಕೋಣೆಯ ಮನೆಯಲ್ಲಿ ಬದುಕಿದ್ದಾಗಿತ್ತು.. ಈಗ..
ಅಂದ್ರೆ.. ಈಗೇನು.. ಈ ಮನೆ ಮಾರಿ ಹೊಸ ಮನೆ ತೆಗೋಳ್ಳೋಣ ಅಂತೀಯಾ.. ಪುಟ್ಟ ಮನೆಯಾದ್ರೂ ಅಡ್ಡಾಡಲಿಕ್ಕೆ ಹಿತ್ತಲು, ನಮ್ಮದೇ ಅನ್ನೋ ಬಾವಿ, ತರಕಾರಿ ಸಿಪ್ಪೆ ಎಸೆಯೋದಿಕ್ಕೆ ಅಂತಲೇ ಎರಡು ತೆಂಗಿನ ಮರದ ಬುಡ, ಎಲ್ಲಾ ಇರೋ ಅನುಕೂಲದ ಮನೆ ಇದು.. ಒಂದು ಹಲಸು, ಒಂದು ಮಾವು, ಎರಡು ಕರಿಬೇವಿನ ಗಿಡ ಇಲ್ಲಿರೋ ಯಾರ ಮನೇಲಿ ಇದೆ ಹೇಳು.. ಇದನ್ನು ಬಿಟ್ಟು ಹೋಗೋಣ ಅಂತ ಆಲೋಚನೆಯಾದ್ರೂ ಹೇಗೆ ಮಾಡ್ತೀಯಾ ನೀನು..
ನೋಡ್ರೀ ನನ್ನನ್ನೇನು ಮಾತಾಡಕ್ಕೆ ಬಿಡ್ತೀರಾ ಇಲ್ವಾ.. ನಾನೇನೋ ಹೇಳಕ್ಕೆ ಹೊರಟ್ರೆ ನಿಮ್ದೇ ಒಂದು ರಾಮಾಯಣ ಬೇರೆ..
ಆಯ್ತು . ಇನ್ನು ನಿನ್ನ ಮಾತು ಕೇಳೋದು ಬಿಟ್ಟು ಬೇರೇನು ಉದ್ಯೋಗ ಇದೆ ನಂಗೆ.. ಅದೇನು ಹೇಳ್ತೀಯೋ ಹೇಳು..
ನಮ್ಮ ಹಿಂದಿನ ಹಲಸಿನ ಮರ ಇದೆಯಲ್ಲಾ..
ಅಯ್ಯೋ ಅಯ್ಯೋ ಅದೇನು ಅಂತ ಮಾತಾಡ್ತೀಯಾ ನೀನು.. ಅದನ್ನು ಕಡಿಸಿ ಬಿಡೋಕೆ ನಾನಂತೂ ಒಪೆÇ್ಪೀದೇ ಇಲ್ಲ.. ವರ್ಷಕ್ಕೆ ನಾಲ್ಕೇ ನಾಲ್ಕಾದರೂ ಹಣ್ಣು ಕೊಡುತ್ತೋ ಇಲ್ವೋ ಅದು.. ಇದೆಲ್ಲಾ ನಿನ್ನ ಮಗನ ಪಿತೂರಿಯಾ. ಅವ್ನಿಗೆ ಹಲಸಿನ ಹಣ್ಣೂ ಇಷ್ಟ ಇಲ್ಲ .. ನನ್ನ ಇಷ್ಟ ಕಷ್ಟ ಕೇಳೋರುಂಟೇ..?
ಥೂ ನಿಮ್ಮ.. ಅದೇನು ಅಂತ ಮಾತಾಡ್ತೀರಿ.. ನಾನೆಲ್ಲಿ ಹೇಳಿದೆ ಹಲಸಿನ ಮರ ಕಡಿಸಿ ಅಂತಾ..
ಮತ್ತೇನೇ..
ನೋಡಿ ಈ ಸಲ ನಮ್ಮ ಹಲಸಿನ ಮರದಲ್ಲಿ ಕಡಿಮೆ ಅಂದ್ರೂ ಹತ್ತನ್ನೊಂದು ಹಲಸಿನ ಕಾಯಿ ಬಿಟ್ಟಿದೆ.
ಹೌದಾ.. ಅಷ್ಟೊಂದು ಬಿಟ್ಟಿದೆಯಾ.. ನಾನು ನೋಡ್ಲೇ ಇಲ್ಲಾ.. ಹಲಸಿನ ಹಣ್ಣಿನ ಪಾಯಸ, ಮುಳ್ಕ, ಸೀಕರಣೆ, ಕಡುಬು, ಗೆಣೆಸೆಲೆ.. ಮತ್ತುಳಿದ ಹಣ್ಣು ಹಾಗೇ ತಿನ್ನೋಕೆ.. ಆಹಾ.. ಸ್ವಲ್ಪ ಅರೆಗಾಯಿ ಆದ್ರೆ ಜೇನು ಇದ್ದೇ ಇದೆಯಲ್ಲಾ..
ರ್ರೀ.. ನಾನು ಹೇಳೋದು ಸ್ವಲ್ಪ ಕೇಳ್ತೀರಾ..
ಏನೇ ಕೇಳೋದು..
ನೋಡ್ರೀ ನಾನೀಗ ಮಾತಾಡ್ಲೋ.. ಇಲ್ಲಾ ಒಳಗೆ ಹೋಗಿ ನನ್ನ ಕೆಲ್ಸ ಮಾಡ್ಲಾ..
ಇಲ್ಲಾ ಹೇಳು..
ಏನಿಲ್ಲಾ.. ಪ್ರತಿ ಸಲ ಎಲ್ಲಾ ಹಲಸಿನ ಕಾಯಿಯನ್ನೂ ಹಣ್ಣೂ ಮಾಡಿಯೇ ಉಪಯೋಗಿಸೋದು ತಾನೇ.. ಈ ಸಲ ಅಷ್ಟೊಂದು ಬಿಟ್ಟಿದೆ ಅಲ್ವಾ.. ಒಂದೆರಡು ಬೆಳೆದ ಕಾಯಿ ತೆಗೆದು ಹಪ್ಪಳ ಹಾಕೋಣ್ವಾ.. ಎಷ್ಟು ಕಾಲ ಆಯ್ತೇನೋ ಹಲಸಿನ ಹಪ್ಪಳವನ್ನು ತಿನ್ನಬೇಕು ಎನ್ನುವಷ್ಟು ತಿನ್ನದೆ..
ಹಪ್ಪಳವಾ.. ?
ಹುಂ.. ಹಪ್ಪಳವೇ.. ನಿಮ್ಗೂ ಅದು ಇಷ್ಟ ಅಲ್ವಾ..
ಅದೇನೋ ಸರಿ.. ಕೆಲಸ ತುಂಬಾ ಇರುತ್ತಲ್ವಾ..
ಅಯ್ಯೋ.. ಮನಸ್ಸಿದ್ರೆ ಎಲ್ಲಾ ಕೆಲ್ಸವೂ ಸುಲಭವೇ..ನಾನು ಮೆಟ್ಟುಗತ್ತಿ ಇಟ್ಟು ಕೊಡ್ತೇನೆ.. ನೀವು ಹಲಸಿನ ಕಾಯಿ ಭಾಗ ಮಾಡಿ ಕೊಡಿ.. ಸೊಳೆ ತೆಗೆದು ಬೇಯಿಸಿ ನಾನು ಕೊಡ್ತೇನೆ.. ಹಪ್ಪಳಕ್ಕೆ ಹಿಟ್ಟು ಒಂದಿಷ್ಟು ಗುದ್ದಿ ಕೊಡಿ.. ಉಂಡೆ ನಾನು ಮಾಡ್ತೇನೆ.. ನೀವೊಂದಿಷ್ಟು ಹಪ್ಪಳ ಒತ್ತಿ ಚಾಪೆಗೆ ಹಾಕಿ.. ಒಣಗಿಸಿ ತೆಗೆಯೋದು ನನ್ನ ಕೆಲ್ಸ..
ಅಷ್ಟೇಯಾ..
ಹುಂ .. ಅಷ್ಟೇ..
ಹಿತ್ತಲಲ್ಲಿ ಆಗಿನ್ನು ಕಣ್ಣು ಬಿಡುತ್ತಿದ್ದ ಗುಜ್ಜೆ ಇವರ ಸಂವಾದಕ್ಕೆ ತಲೆದೂಗುತ್ತಿತ್ತು..
-ಅನಿತಾ ನರೇಶ್ ಮಂಚಿ
*****
Ajji mane nenapaitu 🙂