ಕಥಾಲೋಕ

ಕಾಮಾತುರಾಣಾಂ: ಉಪೇಂದ್ರ ಪ್ರಭು

'ಏ ಚೆನ್ನಾಗಿ ಥಳಿಸು. ಜೀವಮಾನವಿಡೀ ಮರೀಬಾರ್ದು. ಮಾನಗೇಡಿ, ಏನಂದ್ಕೊಂಡಿದ್ದಾನೆ?'

'ಹಾಡುಹಗಲಲ್ಲೇ ಈ ಥರ ವರ್ತಿಸೋರು ಇನ್ನು ರಾತ್ರೆ ಏನೆಲ್ಲಾ ಮಾಡಿಯಾರೋ?'

'ಎಷ್ಟು ಕೊಬ್ಬು. ಅವಳ ಅಪ್ಪನ ವಯಸ್ಸಾಗಿರಬಹುದು!'

'ಕಾಮಾತುರನಿಗೆ ಎಲ್ಲಿಯ ಭಯ , ಎಲ್ಲಿಯ ಲಜ್ಜೆ !'

'ಎಲ್ಲಾ ಈ ಕುಡಿತದಿಂದ.  ದಿನಾ ನೋಡ್ತಿದ್ದೀವಿ. ಮಧ್ಯಾಹ್ನ, ಸಂಜೆ, ರಾತ್ರೆ, ಹೊತ್ತಿಲ್ಲ ಗೊತ್ತಿಲ್ಲ, ತೂರಾಡುತ್ತಲೇ ಇರುತ್ತಾನೆ.  ಈ ಗೌರ್‍ಮೆಂಟ್ನವ್ರೂ ಅಷ್ಟೆ. ತಮ್ಮ ಲಾಭಕ್ಕೆ ಎಲ್ಲಾರ್ಗೂ ಲೈಸನ್ಸ್ ಕೊಟ್ಟ್‍ಬಿಟ್ಟಿದ್ದಾರೆ. ಹೆಜ್ಜೆಗೊಂದೊಂದು ಬಾರ್, ಸಾರಾಯಿ ಅಂಗಡಿ!' 

'ಚಪ್ಲಿಯಿಂದ ಬಾರಿಸ್ರೋ, ಸತ್ರೂ ಸಾಯ್ಲಿ. ಮರ್ಯಾದಸ್ಥರು ಬಾಳೋದಾದ್ರೂ ಹೇಗೆ?'

'ಫೋಲೀಸ್ರನ್ನು ಕರೀರೋ. ಅವ್ರೂ ಅಷ್ಟೆ. ಬೇಡ್‍ದಿದ್ದ ಸಮಯಕ್ಕೆ ಇಲ್ಲೇ ಗಸ್ತು ಹೊಡೆಯುತ್ತಿರುತ್ತಾರೆ. ಈಗ ನೋಡಿ-ಅವರ ಪತ್ತೇನೇ ಇಲ್ಲಾ!'

'ಅಲ್ಲಾ, ಆದದ್ದಾದರೂ ಏನು? ಯಾಕೆ ದನಕ್ಕೆ ಹೊಡೆಯುವ ಹಾಗೆ ಅವನನ್ನು ಹೊಡೆಯುತ್ತಿದ್ದೀರಿ? ನೋಡಿ ರಕ್ತ ಎಷ್ಟು ಸುರಿಯುತ್ತಿದೆ! ಹಣೆ, ಗಲ್ಲ ಸೀಳಿ ಹೋಗಿದೆ.  ಇನ್ನೂ ಹೊಡೆತ ಬಿದ್ರೆ ಖಂಡಿತ ಸತ್ತೇ ಹೋಗ್ತಾನೆ. ಯಾರಾದ್ರೂ ಸ್ವಲ್ಪ ನೀರು ಕೊಡಿ, ಕುಡಿಯಲಿ, ಪಾಪ!'

'ರೀ ಹೋಗ್ರೀರೀ.  ಯಾರಿಗೆ ಬುದ್ಧಿ ಹೇಳ್ತಿದ್ದೀರಾ? ನಿಮ್ಮ ಸಂಬಂಧಿ ಏನ್ರೀ ಈ ನಾಯಿ?'

ಗುಂಪು ಸೇರುತ್ತಲೇ ಇತ್ತು. ಒಬ್ಬೊಬ್ಬರು ಒಂದೊಂದು ಥರಾ ಮಾತಾಡುತ್ತಿದ್ದರು. ಎಲ್ಲಾ ತಮ್ಮ ತಮ್ಮ ಅಮೂಲ್ಯ ಸಲಹೆಗಳನ್ನು ಕೊಡುವುದರಲ್ಲಿ, ಕೈ ಎತ್ತುವುದರಲ್ಲಿ 'ಬಿಸಿ'ಯಾಗಿದ್ದರೇ ಹೊರತು ಸರಿಯಾದ ವಿಷಯ ಏನೆಂದು ತಿಳಿದುಕೊಳ್ಳುವ ಗೋಜಿಗೇ ಹೋಗಿರಲಿಲ್ಲ.  

ನಡೆದದ್ದೇನು?  

ನೋಡಿದ್ದೇನು?

ಅರ್ಥೈಸಿಕೊಂಡಿದ್ದೇನು?

ಪರಿಣಾಮ ಏನು? 

ಯಾರು ಸರಿ? ಯಾರು ತಪ್ಪು?

ಈ ಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಆಟೋ ಡ್ರೈವರ್ ಹೇಳಿದ್ದು ಹೀಗೆ: 'ನಾವ್ ಯಾವಾಗ್ಲೂ ಇಲ್ಲೇ ಓಡಾಡ್ಕೊಂಡು ಇರೋರು. ನಮ್ದೇ ಏರಿಯಾ ಇದು. ಒಂದ್ವಾರದಿಂದ ನೋಡ್ತಾ ಇದ್ದೀವಿ. ಈಯಪ್ಪಾ ದಿನಾ ಕುಡ್ಕೊಂಡ್ಬಂದು ಇಲ್ಲೇ ಈ ಕಲ್ಲ್ ಬೆಂಚ್ ಮೇಲೆ ತಳ ಊರಿ ಲೈನ್ ಹೊಡೀತಾ ಇರ್ತಾನೆ.  ಅರ್ಧ ಆಯಸ್ಸು ಮುಗ್ದಿದ್ರೂ ಇನ್ನೂ ಚಪಲ ಬಿಟ್ಟಿಲ್ಲ. ಸ್ಕೂಲ್‍ಗೆ ಹೋಗೋ ಹೆಣ್ಮಕ್ಳಿಂದ ಹಿಡ್ದು ನಾಳೆ ರಿಟೈರ್ ಆಗೋ ಹೆಂಗಸ್ರ ತನ್ಕಾ, ಯಾರನ್ ಕಂಡ್ರೂ ಜೊಲ್ಲ್ ಸುರಿಸ್ತಾನೇ ಇರ್ತಾನೆ ಬೇವಾರ್ಸಿ.  ಈಗ್ಲೂ ಅಷ್ಟೆ. ಆ ಹುಡ್ಗಿ ಬಸ್ಸಿಂದ ಇಳ್ದು ತನ್ ಪಾಡಿಗೆ ನಡ್ಕೊಂಡ್ ಹೋಗ್ತಿದ್ಲಾ? ಈಯಪ್ಪ ಕೂತ ಜಾಗದಿಂದ ಪಾಸಾದ್ಲೋ ಇಲ್ವೋ-ಗಬಕ್ಕನೆ ಅಪ್ಪಿ ರೋಡ್ ಸೈಡಲ್ಲೇ ಮಲಗಿಸಿ ಬಿಟ್ಟಾ! ಇವ್ನಿಗೆ ಇಷ್ಟೊಂದು ತೀಟೆ ಇದ್ರೆ ಬೇರೆ ಕಡೆ ಹೋಗ್ಲಿ, ದುಡ್ಡ್ ಬಿಸಾಕಿದ್ರೆ ಬೇಕಾದಷ್ಟು ಸಿಕ್ತಾರೆ.  ನಮ್ ಎದುರ್ಗೆ ನಮ್ ಏರಿಯಾದಾಗೆ ಹೀಗೆಲ್ಲಾ ನಡೆಯೋಕೆ ಬಿಟ್ರೆ.. ನಾವೇನ್ ನಮ್ ಅಪ್ಪಂದ್ರಿಗೆ ಹುಟ್ಟಿದೋರಲ್ವಾ? ಸರಿಯಾಗೆ ಬುದ್ಧಿ ಕಲಿಸಿದ್ದೀವಿ.  ಇನ್ನೊಂದ್ ದಪಾ ನಮ್ ಏರಿಯಾದ ಹೆಣ್ಮಕ್ಳನ್ನು ಕಣ್ಣೆತ್ತಿಯೂ ನೋಡ್ಬಾರ್ದು- ಇವಾ ಮಾತ್ರ ಅಲ್ಲಾ, ಯಾವ್ ಮಿನಿಸ್ಟರ್ ಮಗಾ ಬಂದ್ರೂ ಇದೇ ರೀತಿ ಪಾಠ ಕಲಿಸ್ತೀವಿ'

ಈ ಘಟನೆಯಲ್ಲಿ ಮೂಕಪ್ರೇಕ್ಷಕಿಯಾಗಿದ್ದ ಗೂಡಂಗಡಿಯ ಸಾಬಿ ಹೆಂಡ್ತಿ ಹೇಳಿದ್ದು ಹೀಗೆ: 'ಕ್ಯಾ ಝಮಾನಾ ಆಗಯಾ ರೇ! ಈ ಮನ್‍ಷಾ ಶಾದೀಶುದಾ ಆಗಿದ್ರೆ ಇವ್‍ನಿಗೆ ಆ ಲಡ್ಕೀ ಉಮರ್‍ನ ಬೇಟೀ ಇದ್ರೂ ಇರ್ಬೋದು. ಅದೂ ಮಟಮಟ ಮಧ್ಯಾಹ್ನ, ಫುಲ್ ನಶಾ ಬೇರೆ. ಆ ಲಡ್ಕೀ ಏನೂ ಕಡಿಮೆ ಇಲ್ಲಾ. ಯಾ ಅಲ್ಲಾ, ಉಸ್‍ಕಾ ಡ್ರೆಸ್ ದೇಖೋ, ಅಂದರ್ ಕಾ ಕುಚ್ ಭೀ ಛುಪಾ ನಹೀ ಥಾ! ಅದ್ರ ಉಮರ್‍ಗೆ ಹಾಕೋ ಡ್ರೆಸ್ಸಾ ಅದು?'

ಅವನ್ಯಾರು?

ಒಂದು ಸರಕಾರೀ ಸ್ವಾಮ್ಯದ ಕಾರ್ಖಾನೆಯೊಂದರಲ್ಲಿ ಸುಮಾರು ಇಪ್ಪತ್ತು ವರ್ಷ ಕೆಲಸ ಮಾಡಿದ ಆತ ಈಗ ನಿರುದ್ಯೋಗಿ. ಕಾರಣ: ಕಾರ್ಖಾನೆ ಲಾಸ್‍ನಲ್ಲಿದೆ ಎಂದು ಇವನಂಥಾ ಸೆಮಿ ಸ್ಕಿಲ್ಡ್ ಕಾರ್ಮಿಕರನ್ನು ಮ್ಯಾನೇಜ್‍ಮೆಂಟ್ ಕಂಪಲ್ಸರಿಯಾಗಿ "ವಾಲಂಟರಿ ರಿಟೈರ್‍ಮೆಂಟ್" ಕೊಡಿಸಿತ್ತು.  ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಾಗದಿದ್ದಾಗ ಅವನಿಗಿಂತ ಸ್ವಲ್ಪ ಜಾಸ್ತಿ ಸಂಬಳ ತರುತ್ತಿದ್ದ ಆತನ ಸುಂದರ ಹೆಂಡತಿ ತನ್ನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಮೇಲಧಿಕಾರಿಯೊಬ್ಬರ ಕರುಣ ಕಟಾಕ್ಷಕ್ಕೆ ಬಿದ್ದು ಅವರ 'ಎರಡನೇ' ಮನೆಗೆ ತನ್ನನ್ನು ವರ್ಗಾಯಿಸಿಕೊಂಡಿದ್ದ ಕಾರಣ ಆತ ಒಬ್ಬಂಟಿಗ. ಹೆಂಡತಿಯಿದ್ದಾಗ ಅಪರೂಪಕ್ಕೆ ತಿಂಗಳಿಗೊಮ್ಮೆ ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದ ಆತ, ಆಕೆ ದೂರವಾದ ಮೇಲೆ  ರಜಾ ದಿನಗಳಲ್ಲಿ ಕುಡಿಯುವ ಚಟಕ್ಕೆ ಬಿದ್ದಿದ್ದ. ಆಪ್ತರೆಂದು ಕರೆಸಿಕೊಳ್ಳುವಂಥ ಗೆಳೆಯರಾರೂ ಅವನಿಗಿರಲಿಲ್ಲವಾದರೂ ಕೆಲವರು ಮರುಮದುವೆಯ- ಅದೂ ತಮ್ಮ ಸಂಬಂಧಿಕರಲ್ಲಿ, ವಿವಾಹ ವಿಚ್ಛೇದನ ಪಡೆದವಳ ಅಥವಾ ಒಂದೆರಡು ಮಕ್ಕಳಿದ್ದ ವಿಧವೆಯ- ಪ್ರಸ್ತಾಪವನ್ನು ಇವನ ಮುಂದಿಟ್ಟಿದ್ದರು.  ಅವನೋ ಮದುವೆಯಲ್ಲಿ ನಂಬಿಕೆಯೇ ಕಳೆದುಕೊಂಡಿದ್ದ ಕಾರಣ ನಿರ್ಲಿಪ್ತನಾಗಿದ್ದ. ಕ್ರಮೇಣ ಅವರೂ ಆವನಲ್ಲಿ ಕೇಳುವುದನ್ನು ಬಿಟ್ಟಿದ್ದರು.

ಕೆಲಸ ಕಳಕೊಂಡ ಮೇಲೆ ತನ್ನವರೆಂದು ಯಾರೂ ಇರದಿದ್ದ ಕಾರಣ ಮನೆಯಲ್ಲಿ ಹೊತ್ತು ಹೋಗದೇ ದಿನಾ ಮಧ್ಯಾಹ್ನ, ಸಂಜೆ ಕುಡಿಯುವ ಚಟ ಅಂಟಿಸಿಕೊಂಡಿದ್ದ. ಚಟ ಬೆಳೆದಿತ್ತಾದರೂ ಅವನಿಗೆ ತನ್ನ 'ಲಿಮಿಟ್' ತಿಳಿದಿತ್ತು. ದಿನಾ ಬಾರ್‍ನಿಂದ ಹೊರಗೆ ಬರುವುದನ್ನು ನೋಡಿಯೇ ಈತ ಕುಡಿದಿದ್ದಾನೆ ಎನ್ನಬಹುದಿತ್ತೇ ವಿನಾಃ ಎಂದೂ ಆಯತಪ್ಪಿ ತೂರಾಡುತ್ತಿರಲಿಲ್ಲ. ಹಾಂ, ತುಂಬಾ ಹತ್ತಿರ ಹೋದರೆ ಒಮ್ಮೊಮ್ಮೆ ಅವನ ಬಾಯಿವಾಸನೆಯಿಂದಲೂ ಈತ ಕುಡಿದಿದ್ದಾನೆ ಎಂದು ಗೊತ್ತಾಗುತಿತ್ತು. ಇತ್ತೀಚೆಗೆ, ಬಾರಲ್ಲಿ ಕುಡಿದು ಅಷ್ಟೋ ಇಷ್ಟೋ ತಿಂದು ಅಲ್ಲೇ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಕಲ್ಲು ಬೆಂಚಲ್ಲಿ ಕೂತು 'ದಾರಿಹೋಕ'ರನ್ನು ಗಮನಿಸುವುದನ್ನು ರೂಡಿಸಿಕೊಂಡಿದ್ದ. ಸಮವಸ್ತ್ರ ಧರಿಸಿ ಅಲ್ಲೇ ಪಕ್ಕದಲ್ಲಿದ್ದ ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು-ಅದರಲ್ಲೂ ಹೆಣ್ಣುಮಕ್ಕಳನ್ನು ನೋಡುವುದೆಂದರೆ ಅವನಿಗೆ ಅದೇನೋ ಖುಷಿ. ಮೊದಲಿನಿಂದಲೂ ಅವನಿಗೆ ಹೆಣ್ಣು ಮಕ್ಕಳೆಂದರೆ ಇಷ್ಟ.  ಆದರೆ ಇದನ್ನು ಹೊರಗೆಲ್ಲೂ ತೋರಿಸಿಕೊಳ್ಳುತ್ತಿರಲಿಲ್ಲ. 

 ಇಂದೂ ಅಷ್ಟೆ. 'ದಾರಿಹೋಕ'ರನ್ನು ಗಮನಿಸುವುದರಲ್ಲಿ ಮಗ್ನನಾಗಿದ್ದ ಅವನ ಕಣ್ಣಿಗೆ ಬೀಳುತ್ತಾಳೆ – ಬಸ್‍ನಿಂದ ಇಳಿಯುತಿದ್ದ ಆ ಇಪ್ಪತ್ತರ ಬಾಲೆ. ಒಂದು ವಾರದಿಂದಲೂ ಅವಳನ್ನು ಗಮನಿಸುತ್ತಲೇ ಇದ್ದಾನೆ.  ದಿನಾ ಒಂದೊಂದು ರೀತಿಯ ರೀತಿಯ ಸ್ವಲ್ಪ 'ವಿಪರೀತ' ಅನಿಸುವಂಥಾ ಬಟ್ಟೆ ಧರಿಸುವ ಆವಳು, ಸುಮಾರು ಇದೇ ವೇಳೆಗೆ, ಕಿವಿಗೆ ಈಯರ್ ಫೋನ್ ಹಾಕಿ ಹಾಡು ಕೇಳುತ್ತಾ, ಕೈಯಲ್ಲಿ ಮೊಬೈಲ್ ಹಿಡಿದು ಅದರ ಕೀಗಳನ್ನು ಒತ್ತುತ್ತಾ,  ತನ್ನಷ್ಟಕ್ಕೆ ತಾನೇ ನಗುತ್ತಾ ಅವನ ಮುಂದೆ ಹಾದು ಹೋಗುತ್ತಿರುತ್ತಾಳೆ. ಇಂದಿನ ಆವಳ ಬಟ್ಟೆ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಪಾರದರ್ಶಕ ಹಾಗೂ ಬಿಗಿಯಾಗಿತ್ತು. ಎಂದಿನಂತೇ ಹಾಡು ಕೇಳುತ್ತಾ ಯಾರಿಗೋ ಎಸ್ಸೆಮ್ಮೆಸ್ ಕಳುಹಿಸುವುದರಲ್ಲಿ ಮಗ್ನಳಾಗಿ ರಸ್ತೆ ದಾಟಿ ಹೆಚ್ಚುಕಡಿಮೆ ರಸ್ತೆಯ ನಡುಭಾಗದಲ್ಲೇ ನಡೆದುಕೊಂಡು ಹೋಗುತ್ತಿದ್ದ ಅವಳಿಗೆ ತನ್ನ ಹಿಂದೆ ಮುಂದೆ ಏನು ನಡೆಯುತ್ತಿದೆ ಎನ್ನುವ ಪರಿವೆಯೇ ಇರಲಿಲ್ಲ. ಅವಳ ಹಿಂದಿನಿಂದ ತನ್ನ ಮೊಬೈಲನ್ನು ಕಿವಿಗಾನಿಸಿಕೊಂಡು ಶರವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಆ ಚಾಲಕನಿಗೂ ಅಷ್ಟೆ- ಪಾದಾಚಾರಿಗಳ ಪರಿವೆಯೇ ಇರಲಿಲ್ಲ! ಇಬ್ಬರನ್ನೂ ಗಮನಿಸುತ್ತಿದ್ದ ಆತನ ಆರನೇ ಇಂದ್ರಿಯ ಸಮಯಕ್ಕೆ ಸರಿಯಾಗಿ ಪ್ರತಿಕ್ರ್ರಯಿಸಿತ್ತು. ಆ ಹುಡುಗಿಯ ಕೈ ಹಿಡಿದೆಳೆದು ಪಕ್ಕಕ್ಕೆ ಸರಿಸಿದವನೇ ಆಯತಪ್ಪಿ ಅವಳ ಮೇಲೆ ಬಿದ್ದಿದ್ದ. ಆ ಕಾರು ತನ್ನ ವೇಗದಲ್ಲಿ ಯಾವ ವ್ಯತ್ಯಾಸವೂ ಇಲ್ಲದೇ ಮಾಯವಾಗಿತ್ತು. ಅವನ ಭಾರಕ್ಕೆ ಆಯ ತಪ್ಪಿದ ಅವಳು ರಸ್ತೆಯ ಅಂಚಿನಲ್ಲಿ ಬಿದ್ದ ರಭಸಕ್ಕೆ ಅವಳ ಬಿಗಿ ಸ್ಕರ್ಟ್ ಉದ್ದಕ್ಕೆ ಸೀಳಿತ್ತು. ಹುಡುಗಿ ಗಾಭರಿಯಿಂದ ಜೋರಾಗಿ ಕಿರುಚಿದ್ದಷ್ಟೇ ಅಲ್ಲಿ ತಮ್ಮ ಪಾಡಿಗೆ ತಾವಿದ್ದ ಒಂದಷ್ಟು ಮಂದಿಗಳ ಗಮನ ಸೆಳೆದದ್ದು! ಎಲ್ಲರ ಕಣ್ಣು ಅತ್ತ ಹೊರಳಿದಾಗ – ಆತ ಅವಳ ಮೇಲೆರಗಿರುವುದು ಹಾಗೂ ಸ್ಕರ್ಟ್ ಹರಿದ ಅವಳ ಬಿಳಿಯ ತೊಡೆಯ ಮೇಲೆ ಅವನ ಕೈಯಿರುವುದು- ಇಷ್ಟೇ ಸಾಕಾಗಿತ್ತು, 'ಸು' ಅನ್ನು 'ಸುಕುರುಂಡೆ' ಮಾಡಲು. ಜನ ಸೇರಿ ಆತನನ್ನು ಯದ್ವಾತದ್ವಾ ಹೊಡೆಯಲು ಬಡೆಯಲು ಶುರು ಮಾಡಿದ್ದೇ ಮಾಡಿದ್ದು. ಮೈತುಂಬಾ ಪೆಟ್ಟು ಬಿದ್ದ ಆತ ಅರೆ ಪ್ರಜ್ಯ್ಞಾವಸ್ಥೆಯಲ್ಲಿದ್ದ.  ಈ ಗಲಾಟೆಯಲ್ಲಿ ಆ ಹುಡುಗಿ ಮೆಲ್ಲಗೆ ಅಲ್ಲಿಂದ ಯಾವ ಮಾಯದಲ್ಲಿ ಜಾರಿಕೊಂಡಳೋ, ಆ ದೇವರಿಗೇ ಗೊತ್ತು!! 

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಕಾಮಾತುರಾಣಾಂ: ಉಪೇಂದ್ರ ಪ್ರಭು

  1. ಉತ್ತಮ ಬರಹ. ಒಬ್ಬ ವ್ಯಕ್ತಿ ಹಾಳಾಗಿದ್ದಾನೆ ಅಂದರೆ ಎಲ್ಲರೂ ಅವನನ್ನ ದೂಷಿಸುತ್ತಾರೆ ವಿನಃ ಅವನು ಆ ಸ್ಥಿತಿಗೆ ಯಾಕೆ ಬಂದ ಅಂತ ಸ್ವಲ್ಪವೂ ಯೋಚಿಸುವುದಿಲ್ಲ. ಬೈಕ್ ಓಡಿಸುವಾಗ ಹುಡುಗಿ ಹಿಂದಿನಿಂದ ಬಂದು ಹುಡುಗನಿಗೆ ಡಿಕ್ಕಿ ಹೊಡೆದು ಬಿದ್ರೆ ಜನರೆಲ್ಲಾ ಸೇರಿ ಯಾರ ತಪ್ಪು ಅಂತಲೂ ನೋಡದೆ ಹುಡುಗನಿಗೆ ಹಿಗ್ಗಾ ಮುಗ್ಗಾ ಹೊಡೆದು ಬಿಡ್ತಾರೆ. ಆಮೇಲೆ ಹುಡುಗಿ ಎಲ್ಲಿ ಅಂತ ನೋಡಿದ್ರೆ ಅವಳು ಯಾವಾಗೋ ನಾಪತ್ತೆ ಆಗಿರ್ತಾಳೆ. ಇಂಥಹ ಘಟನೆಗಳು ದಿನವೂ ನಮ್ಮ ಕಣ್ಣೆದುರಿಗೆ ನಡೆಯುತ್ತೆ. ಇತ್ತೀಚಿಗೆ ಶರರ ಪ್ರದೇಶದಲ್ಲಿ ಹುಡುಗಿಯರು ತುಂಬಾ ಮುಂದುವರೆದಿದ್ದಾರೆ (ಚಿಕ್ಕ ಚಿಕ್ಕ ಬಟ್ಟೆ ಧರಿಸುವುದು, ಧೂಮಪಾನ, ಮಧ್ಯಪಾನ, ಹೀಗೆ..) ಇದರ ಬಗ್ಗೆಯೂ ಜಾಗೃತಿ ಮೂಡಿಸುವ ಬರಹಗಳು ನಿಮ್ಮಿಂದ ಹೆಚ್ಚು ಹೆಚ್ಚು ಮೂಡಿಬರಲಿ ಎಂದು ಆಶಿಸುತ್ತೇನೆ.
    ಧನ್ಯವಾದಗಳು.

  2.  ವಸ್ತು ವಿಷಯವನ್ನು ತಿಳಿಯದೇ ತಕ್ಷಣ ಹೀರೊಗಳಂತೆ ವರ್ತಿಸುವ ಜನಗಳ ಬಗ್ಗೆ ಬರೆದದ್ದು. ಚೆನ್ನಾಗಿದೆ!

Leave a Reply

Your email address will not be published. Required fields are marked *