ಕಥಾಲೋಕ

ಕಾಮಣ್ಣ ಮಕ್ಕಳೊ: ರೇಣುಕಾ ಕೋಡಗುಂಟಿ


ಅಂದು ಹೋಳಿ ಹುಣ್ಣಿಮೆಯ ದಿನ ಬಳಿಗಾರ ಓಣಿಯ ಮಕ್ಕಳೆಲ್ಲ ಸೇರಿ ರಾಗಾ, ಶರಣಾ, ಮಲ್ಲಾ, ಮಂಜಾ ಇವರ ಮುಂದಾಳತ್ವದಲ್ಲಿ ಒಟ್ಟು 12 ಜನ ಮಕ್ಕಳು ಕಾಮಣ್ಣನ್ನ ಕೂರಿಸಾಕ ನಿರ್ಧಾರ ಮಾಡಿದ್ದರು. ಅಲ್ಲಿ ಇಲ್ಲಿ ಸ್ವಲ್ಪ ಪಟ್ಟಿ ಎತ್ತಿ ಒಂದು ಟೆಂಟ್ ಹೊಡೆದು ತಯಾರಿ ಮಾಡಿದ್ದರು. ಒಂದು ಹಳೆ ಅಂಗಿ ಪ್ಯಾಂಟು ತಂದು ಅದರಲ್ಲಿ ಹುಲ್ಲು ತುಂಬಿ, ಅಂಗಿನ್ನು ಪ್ಯಾಂಟನ್ನು ಸೂಜಿ ದಾರದಿಂದ ಹೊಲಿದು ಕಾಮಣ್ಣನ್ನ ರೆಡಿ ಮಾಡಿದ್ದರು. ಕಾಮಣ್ಣನ ಹೊಟ್ಟೆಯನ್ನು ದಪ್ಪವಾಗಿ ಕಾಣುವಂತೆ ಮಾಡಿದ್ದರು. ಕುಂಬಾರ ಮನಿಯಿಂದ ಒಂದು ಗಡಿಗಿ ತಂದು ಅದಕ್ಕ ದೊಡ್ಡ ದೊಡ್ಡ ಕಣ್ಣು, ಮೂಗು, ಬಾಯಿ ಬರೆದು ದಪ್ಪವಾದ ಮೀಸೆಯನ್ನು ಬರೆದು ಕಾಮಣ್ಣನ ಮುಖವನ್ನು ಮಾಡಿದರು. ಒಂದು ಕುರ್ಚಿ ಮೇಲೆ ಕಾಮಣ್ಣನನ್ನು ಕೂರಿಸಿ ಹೆಗಲ ಮೇಲೆ ಶಲ್ಲೆ ಹಾಕಿ, ಹಣೆಗೆ ಉದ್ದದ ನಾಮ ಎಳೆದು, ಸಿದ್ದಗೊಳಿಸಿ ಪ್ರಜೆ ಮಾಡಿ ಎಲ್ಲರು ಕಾಮಣ್ಣ ಮಕ್ಕಳೊ,,,ಕತ್ತೆ ಸೂಳೆ ಮಕ್ಕಳೊ,,,ಎಂದು ಹೇಳುತ್ತಾ ಲಬೊ,,ಲಬೊ,,, ಅಂತ ಬಾಯಿ ಬಡಿದುಕೊಂಡರು. ಆಗ ಶರಣ ಲೇ..,,,ಯಾರಾದ್ರು ಒಬ್ರು ಹೆಣ ಆಗ್ರಿ ನಾವೆಲ್ಲ ಅಳಾಮ ಅಂಗಾದ್ರಾ ನೋಡಾಕ ಮಂದಿ ಬರ್ತಾರ,,,ರೊಕ್ಕ ಕೊಡ್ತಾರ ಅಂತ ಹೇಳಿದ. ಎಲ್ಲರು ಶರಣನ ಮಾತಿಗೆ ಒಪ್ಪಿದ್ರು. ಯಾರು ಹೆಣ ಆಗ್ತಿರಿ ಅಂದಾಗ ಮಂಜಾ ನಾನು,,,ನಾನು,,,ಅಂತ ಮುಂದೆ ಬಂದ. ಆದ್ರೆ ಮೊದಲಿನಿಂದಲೂ ಈ ಶರಣಗಾ ಮಂಜಾಗ ಇಬ್ಬರಿಗೂ ಹಾವು ಮಂಗಸಿ ಇದ್ದಂತೆ. ಸದಾ ಜಗಳ ಮಾಡಿಕೊಂಡೆ ಒಟ್ಟಿಗೆ ಇರುತ್ತಿದ್ದರು. ಹೀಗಿದ್ದಾಗ ಶರಣ ಮಂಜನಿಗೆ ನೀನು ಬ್ಯಾಡ ಅಂದ. ಆಗ ಮಂಜಾ ಯ್ಯಾಕಾ,, ನಾನು ಯ್ಯಾಕ ಆಗಬಾರದು. ಎಂದು ಹಟ ಹಿಡಿದನು. ಇವನ ಹಟದಿಂದಾಗಿ ಎಲ್ಲರು ಒಪ್ಪಬೇಕಾಯಿತು. ಒಂದು ತಟ್ಟಿನ ಚೀಲ ಹಾಸಿ ಕಾಮಣ್ಣನ ಮುಂದೆ ಹೆಣದಂತೆ ಮಂಜನ್ನ ಮಲಗಿಸಿದರು. ಅವನ ಸುತ್ತ ಎಲ್ಲರೂ ಕೂತು ಬಾಯಿ ಬಡಿದುಕೊಳ್ಳುತ್ತಾ ಅತ್ತಂತೆ ನಟಿಸತೊಡಗಿದರು. ಒಬ್ಬೊಬ್ಬರು ಒಂದೊಂದು ಡೈಲಾಗ್ ಹೇಳ್ತಾ ಇದ್ರು. ‘ನಿನ್ನೆ ಚೊಲೊ ಇದ್ದೆಲ್ಲೊ,,ಇವತ್ತು ಹೆಣ ಆಗ್ಬಿಟ್ಟಿ’ ‘ನಿನಗಾ ಹೋಳಿಗಿ ಬೇಕಂದದ್ದಿ,,,ತರದ್ರಾಗ ನೆಗದ ಬಿದ್ದೆಲ್ಲೊ’ ಹೀಗೆ ಒಬ್ಬೊಬ್ಬರು ಒಂದೊಂದು ಹೇಳುತ್ತಾ ಬಾಯಿಬಡಿದುಕೊಳ್ಳುತ್ತಿದ್ದರು. ಇವೆಲ್ಲವನ್ನು ಕೇಳಿಸಿಕೊಳ್ಳುತ್ತಾ ಮಂಜಾ ಮಿಸುಕಾಡದೆ ಎಚ್ಚರವಿದ್ದರೂ ಕಣ್ಣು ಬಿಡದಂತೆ ಮಲಗಿದ್ದ. ಮತ್ತೆ ಡೈಲಾಗ್ ಶುರು ಮಾಡಿದ ಶರಣಾ ‘ನಂತಾಕ ನೂರು ರುಪಾಯಿ ಇಸಗೊಂಡು,,,ವಾಪಸ್ ಕೊಡಲಾರ್ದ ನೆಗದ ಬಿದ್ದೆಲ್ಲೊ ಅಂತ ಹೇಳಿದ’ ಮೊದಲೆ ಶರಣನ ಮ್ಯಾಲೆ ಮಂಜಾಗ ಸಿಟ್ಟು ಇತ್ತು. ಅವನ ಆ ಡೈಲಾಗ್ ಹೇಳ್ತಿದ್ದಂತೆ ಮಂಜನಿಗೆ ಸಿಟ್ಟು ಬಂತು ಪಟ್ ಅಂತ ಮೇಲೆದ್ದು ‘ನಾನ್ಯಾವಾಗ ನೂರ ರೂಪಾಯಿ ಇಸಗೊಂಡಿನೆಲೆ’ ಅಂತ ಹೇಳಿ ಶರಣನ ಅಂಗಿ ಪಟ್ಟಿಯನ್ನು ಹಿಡಿದುಬಿಟ್ಟ. ಆಗ ಸುತ್ತ ಇದ್ದ ಹುಡುಗರು ಬಿಡಿಸಿಕೊಂಡರು. ಮಂಜನನ್ನು ದೂರ ಕರೆದುಕೊಂಡು ಹೋಗಿ ‘ಲೇ ಇವು ಕಾಮಣ್ಣನ ಮುಂದ ಹೇಳಾ ಡೈಲಾಗ್ ಅಷ್ಟ,,,ನೀನು ಕರೆವಂದ್ರ ಅನಕಂಡಿಯಾ?’ ಎಂದೆಲ್ಲಾ ಹೇಳಿ ಸಮಾಧಾನ ಮಾಡಿದರು. ಎಲ್ಲರು ಬುದ್ದಿ ಹೇಳಿದ ಮೇಲೆ ಮಂಜಾ ಸಮಾಧಾನ ಆದ. ಆನ ಎಲ್ಲಾ ಬಂದು ಬಂದು ನೋಡಿ ಹೋದ್ರು. ಕತ್ತಲಾಗತಾ ಬಂತು. ಕಾಮಣ್ಣನ್ನ ರಾತ್ರಿ 12 ಗಂಟೆಗೆ ಸುಡೋದು ಅಂತ ಎಲ್ಲಾ ಸೇರಿ ನಿರ್ಧಾರ ಮಾಡಿದರು. ಆದರೆ ಕಾಮಣ್ಣನ್ನ ಸುಡಲು ಕಟ್ಟಿಗೆಗಳು ಸ್ವಲ್ಪ ಮಾತ್ರ ಇದ್ದವು. ಅಷ್ಟು ಕಟ್ಟಿಗೆಯಿಂದ ಸುಡಲು ಆಗದು ಹೇಗಾದ್ರು ಮಾಡಿ ಇನ್ನಷ್ಟು ಕಟ್ಟಿಗೆ ಸೇರಿಸಬೇಕೆಂದು ಮಾತನಾಡಿದರು. ರಾತ್ರಿ ಹತ್ತು ಗಂಟೆಯಾಯಿತು ಕಟ್ಟಿಗೆಯನ್ನು ಕದಿಯಲು ಹೊರಟರು. ಒಟ್ಟು ಆರು ಜನ ಕಟ್ಟಿಗೆ ಕದಿಯಲು ಹೋದರು. ಉಳಿದವರು ಕಾಮಣ್ಣನ ಮುಂದೆ ಕುಳಿತರು. ರಾಮವ್ವ ಎನ್ನುವ ಮುದುಕಿಯ ಮನೆಯ ಕಟ್ಟಿಗೆಗಳನ್ನು ಕದಿಯಲು, ರಾಮವ್ವನ ಮನೆಗೆ ಹೋದರು. ರಾಮವ್ವ ಬಲು ಗಟಿವಾಣಿ ಹೆಂಗಸು. ದೊಡ್ಡದಾದ ದನದ ಅಂಕಣದ ಮುಂದೆ ಸಿಕ್ಕಾಪಟ್ಟೆ ಕಟ್ಟಿಗಿ ಒಟ್ಟಿದ್ದಳು. ಅವುಗಳನ್ನು ಕದಿಯಲು ಹೋದ ಹುಡುಗರು, ರಾಮವ್ವನ ಮನೆಯವರೆಲ್ಲ ಮಲಗಿರುವುದನ್ನು ಖಾತ್ರಿ ಮಾಡಿಕೊಂಡು ಮೆಲ್ಲಗೆ ಕಟ್ಟಿಗೆಯ ಬಳಿಗೆ ಹೋದರು. ಕಟ್ಟಿಗೆ ಮೇಲಿರುವ ತಟ್ಟಿನ ಚೀಲಗಳನ್ನ ಮೆಲ್ಲಗೆ ಸರಿಸಿದರು. ಒಂದೊಂದಾಗಿ ಕಟ್ಟಿಗೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಆರೂ ಜನ ಒಂದೇ ಕಡೆ ನಿಲ್ಲದೆ, ಒಬ್ಬರ ಕೈಯಿಂದ ಒಬ್ಬರಿಗೆ ಸಾಗಿಸುವಂತೆ ಸಾಲಾಗಿ ನಿಂತಿದ್ದರು. ಕಟ್ಟಿಗೆಯ ಹತ್ತಿರ ಮಂಜ ನಿಂತಿದ್ದನು. ಮಂಜ ನಿಧಾನವಾಗಿ ಕಟ್ಟಿಗೆಯನ್ನು ಕೊಡುತ್ತಿದ್ದನು. ಆಗ ಶರಣ’ಲೇ ಜಲ್ದಿ ಕೊಡ ಲೇ’ ಅಂತಾ ಕಟ್ಟಿಗೆಯನ್ನು ಎಳೆದುಕೊಂಡನು. ಕಟ್ಟಿಗೆ ಕೈಜಾರಿ ಮಂಜನ ಕಾಲ ಮೇಲೆ ಬಿದ್ದಿತು. ಕಟ್ಟಿಗೆ ಕಾಲ ಮೇಲೆ ಬಿದ್ದ ಕೂಡಲೆ ಮಂಜಾ ಜೋರಾಗಿ ಕಿರಿಚಿದನು. ಅವನು ಕಿರಿಚಿದ ಶಬ್ದಕ್ಕೆ ರಾಮವ್ವನ ಮನೆಯವರು ಎದ್ದು ಹೊರಗೆ ಬಂದರು. ಬಾಗಿಲು ತೆಗೆಯುವ ಶಬ್ದ ಆಗುತ್ತಿದ್ದಂತೆ ಕಟ್ಟಿಗೆಯನ್ನು ಬಿಟ್ಟು ಎಲ್ಲರೂ ಓಡಿದರು. ತಪ್ಪಿಸಿಕೊಳ್ಳುವ ರಬಸದಲ್ಲಿ ಶರಣ ಮತ್ತು ಮಂಜ ಅಲ್ಲೆ ಇರುವ ದನದ ಕೊಟ್ಟಿಗೆ ಒಳಗೆ ಹೋಗಿ ಅಡಗಿಕೊಂಡರು. ಇನ್ನುಳಿದ ನಾಲ್ಕು ಜನ ಮಕ್ಕಳು ಕೈಗೆ ಸಿಕ್ಕಷ್ಟು ಕಟ್ಟಿಗೆ ತಗೊಂಡು ಓಡಿ ಹೋದರು. ಮನೆಯಿಂದ ಹೊರಬಂದ ರಾಮವ್ವ ‘ಯಾವಾನೊ ಅವ್ನು ಹಡಿಬಿಟ್ಟಿ, ಕಟಿಗಿ ಕಳವು ಮಾಡ್ತೀರ್ಯಾ, ನಿಮ್ಮ ಬಾಯಾಗ ಮಣ್ಣ ಆಕ’ ಎಂದು ಬೈಯುತ್ತಾ ಹೊರಬಂದಳು. ಆದರೆ ಆಕೆಯ ಕಣ್ಣಿಗೆ ಯಾರೂ ಬೀಳಲಿಲ್ಲ. ಕೆಳಗ ಬಿದ್ದಿರೋ ಕಟ್ಟಿಗಿಗಳನ್ನು ಬೈಯುತ್ತಲೆ ಎತ್ತಿಟ್ಟಳು. ‘ಮತ್ತೆ ಬರ್ರಿ, ನಿಮ್ ಕಾಲು ಮುರುದು ಕೈಯಾಗ ಕೊಡತೀನಿ’ ಎನ್ನುತ್ತಾ ದನದ ಕೊಟ್ಟಿಗೆಗೆ ಬೀಗ ಜಡಿದಳು. ದನದ ಕೊಟ್ಟಿಗೆ ಒಳಗೆ ಇಬ್ಬರು ಹುಡುಗರು ಹೋಗಿರುವುದು ಆಕೆಗೆ ಗೊತ್ತಾಗಲೇ ಇಲ್ಲ. ಕೊಟ್ಟಿಗೆಯಲ್ಲಿ ನಾಲ್ಕು ದನಗಳು, ಸಾಕಸ್ಟು ಹುಲ್ಲು, ಮನೆ ಬಳಕೆಯ ಹಳೆಯ, ಮುರಿದ ವಸ್ತುಗಳು, ಹೀಗೆ ಹಲವಾರು ಸಾಮಗ್ರಿಗಳು ಇದ್ದವು ಕೊಟ್ಟಿಗೆಯೂ ವಿಶಾಲವಾಗಿ ಇತ್ತು. ದನದ ಕೊಟ್ಟಿಗೆ ಒಳಗೆ ಯಾರಾದರು ಹೋಗಿರಬಹುದು ಎಂಬ ಅನುಮಾನ ಆಕೆಗೆ ಬರಲೇ ಇಲ್ಲ. ಅತ್ತಿತ್ತ ಕಣ್ಣಾಡಿಸುತ್ತಾ ಸ್ವಲ್ಪ ಹೊತ್ತು ಅಲ್ಲೆ ಹೊರಗೆ ಕಟ್ಟಿಗೆಗಳನ್ನು ಕಾಯುತ್ತಾ ನಿಂತಳು. ನಿಂತು ನಿಂತು ಸಾಕಾಗಿ ಮನೆಯ ಒಳಗೆ ಹೋದಳು. ದನದ ಕೊಟ್ಟಿಗೆಯಲ್ಲಿ ಅಡಗಿದ ಶರಣ ಮತ್ತು ಮಂಜಾ ಹೊರಬರಲಾಗದೆ. ಒಳಗಡೆಯೇ ಜಗಳ ಮಾಡಿಕೊಂಡು ಒಬ್ಬರಿಗೊಬ್ಬರು ಬೈದುಕೊಳ್ಳುತ್ತಾ, ಬೆಳಕಾಗುವವರೆಗು ಅಲ್ಲೆ ಇರಬೇಕಾಯಿತು. ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ರಾಮವ್ವ ಬಂದು ದನದ ಕೊಟ್ಟಿಗೆಯ ಬೀಗ ತೆಗೆದಳು. ಬೀಗ ತೆಗೆದ ಸದ್ದಿಗೆ ಎಚ್ಚತ್ತ ಶರಣ ಮತ್ತು ಮಂಜಾ ಹೇಗಾದರು ಮಾಡಿ ರಾಮವ್ವನ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಯೋಚಿಸಿದರು. ದನದ ಕೊಟ್ಟಿಗೆಯಲ್ಲಿ ಯಾರಾದರು ಇರಬಹುದು ಎಂಬ ಅನುಮಾನವೆ ಇಲ್ಲದ ಕಾರಣ, ರಾಮವ್ವ ಬೀಗ ತೆಗೆದು ನೇರವಾಗಿ ಒಳ ಬರದೆ ದನಗಳಿಗೆಂದು ನೀರು ತರಲು ಮನೆಯ ಒಳಗೆ ಹೋದಳು. ರಾಮವ್ವ ಒಳಗಡೆ ಬರದಿರುವುದು ಒಳಗಿರುವ ಶರಣ ಮತ್ತು ಮಂಜನಿಗೆ ಜೀವ ಬಂದತಾಯಿತು. ಆಕೆ ಅತ್ತ ಹೋದಾಗ ಮೆಲ್ಲಗೆ ಹೊರ ಬಂದು ‘ಅಬ್ಬಾ ಬದುಕಿದೆವು’ ಎನ್ನುತ್ತಾ ಓಡಿ ಹೋದರು. ನೇರವಾಗಿ ಕಾಮಣ್ಣನನ್ನು ಕೂಡಿಸಿದ ಜಾಗಕ್ಕೆ ಹೋದರು. ಇವರು ಹೋಗುವ ಹೊತ್ತಿಗಾಗಲೆ ಕಾಮಣ್ಣ ಬೂದಿ ಆಗಿ ಹೋಗಿದ್ದ. ಜನರೆಲ್ಲ ಕಾಮಣ್ಣನ ಬೂದಿ ಒಯ್ಯಲು ಬಂದಿದ್ದರು. ಇನ್ನು ಕೆಲವರು ಅಲ್ಲೆ ಉಳಾಗಡ್ಡಿ, ಗೆಣಸು, ಬೊಳ್ಳಳ್ಳಿ ಗಳನ್ನು ಸುಡಲು ಕಳಿತಿದ್ದರು. ಇದನ್ನು ಕಂಡ ಮಂಜಾ ಶರಣ ಕಣ್ಣು ಕಣ್ಣು ಬಿಡುತ್ತಾ ನೋಡುತ್ತಾ ನಿಂತರು. ಹೀಗೆ ಇವರ ಈ ವರ್ಷದ ಕಾಮಣ್ಣನ ಕಥೆ ಮುಗಿಯಿತು.
ರೇಣುಕಾ ಕೋಡಗುಂಟಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *