ಮಾಡಿದ್ದೇ ಕೆಲಸವನ್ನು ಸದಾ ಮಾಡ್ತಾ ಇರು ಅಂದ್ರೆ ಏನೂ ಮಾಡದೇ ಆದ್ರೂ ಇರ್ತೀನಿ,ಆದ್ರೆ ಅದನ್ನ ಮಾಡೋಲ್ಲ ಅಂತಿದ್ದವನು ಅವ. ಹೊಸತನಕ್ಕೆ ತುಡಿದು ಇರೋದನ್ನ ಕಳೆದುಕೊಳ್ಳುವುದಕ್ಕಿಂತ ಇದ್ದುದರಲ್ಲೇ ಖುಷಿಯಾಗಿರೋದು ಮೇಲು ಅನ್ನುವವಳು ಅವಳು. ಭಾರತ-ಪಾಕಿಸ್ತಾನಗಳಂತಹ ಭಿನ್ನ ವಿಚಾರಧಾರೆಯಿದ್ರೂ ಇವರ ಮಧ್ಯೆ ಅದೆಂತದೋ ಒಂದು ಲವ್ವಿರೋದು ಹೆಂಗೆ ಅನ್ನೋದು ಬೇರೆ ಅವ್ರಿಗೆ ಹೋಗ್ಲಿ ಸ್ವತಃ ಅವ್ರಿಗೇ ಅಚ್ಚರಿಯ ವಿಷಯವಾಗಿತ್ತು. ಎಡಪಂಥ ಬಲಪಂಥ ಅಂತ ಪ್ರತಿದಿನಾ ಕಚ್ಚಾಡೋರು ಹೆಗಲ ಮೇಲೆ ಕೈಹಾಕಿಕೊಂಡ್ರು ಓಡಾಡ್ತಿದ್ರೆ ಹೆಂಗೆ ಅಚ್ಚರಿಯಾಗುತ್ತೋ ಆ ತರಹದ ಆಶ್ಚರ್ಯ ಇವ್ರನ್ನ ಕಂಡವರದ್ದೆಲ್ಲಾ ಆಗಿರ್ತಿತ್ತು. ಅಫ್ಜಲ್ ಗುರುವಿಗೆ ಜೈಕಾರ ಹಾಕದ, ಅಸಹಿಷ್ಣುತೆಯ ಬಗ್ಗೆ ಹೂಂಕರಿಸಿದ, ಮೋದಿ ಸ್ತುತಿ ಮಾಡದ ಇವರಂಗೆ ಬದುಕೋಕು ಸಾಧ್ಯವಾ ಅಂತ ಎರಡೂ ಪಂಥಗಳ ಜನ ಎಷ್ಟೋ ಸಲ ಯೋಚಿಸಿದ್ದಿದೆ. ಇಂಡಿಯ ಅನ್ನೋದು ಪ್ರಗತಿಪರ ಚಿಂತನೆ, ಭಾರತ, ಹಿಂದೂಸ್ತಾನ ಅನ್ನೋದರ ಹಿಂದೆ ಮನುವಾದ ಅಡಗಿದೆ ಎಂಬ ಬುದ್ದಿಜೀವಿಗಳಿಗೂ , ಅಮೇರಿಕಾದಲ್ಲಿ ತಯಾರಾದ ರಾಕೆಟ್ಟು, ವಿಮಾನ, ಕಂಪ್ಯೂಟರ್ ತಂತ್ರಜ್ಞಾನಗಳೆಲ್ಲಾ ಭಾರತದಿಂದ್ಲೇ ಕದ್ಕೊಂಡು ಹೋಗಿದ್ದು, ಜೀನ್ಸ್ ಪ್ಯಾಂಟ್ ಹಾಕ್ತಿರೋದ್ರಿಂದ್ಲೇ ನಮ್ಮ ಸಂಸ್ಕೃತಿ ಹಾಳಾಗ್ತಿರೋದು ಎನ್ನೋ ಸಂಸ್ಕೃತಿವಾದಿಗಳ ಮಧ್ಯೆ ಯಾರ ಗುಂಪೂ ಸೇರದ ಇವರ ನಿಲುವು ಅನೇಕರಿಗೆ ನಿಗೂಢವೆನಿಸುತ್ತಿತ್ತು ! ಅಭಿವೃದ್ಧಿ, ರಾಷ್ಟ್ರೀಯತೆ, ದೇಶಪ್ರೇಮವೆಲ್ಲಾ ತಮ್ಮ ಪಕ್ಷದೇ ಸ್ವತ್ತು ಎಂಬಂತೆ ಬಿಂಬಿಸೋ ರಾಜಕಾರಣಿಗಳೆಂದರೆ ಇವರಿಗೆ ದಿವ್ಯ ನಿರ್ಲಕ್ಷ್ಯ. ನಾವು ಯಾರದ್ದೋ ಕಾಪಿ ಯಾಕಾಗಬೇಕು, ನಾವು ನಾವೇ ಎಂಬ ಇವರ ಲಕ್ಶ್ಯವೇನಿದ್ದರೂ ವಾಸ್ತವ, ಭವಿಷ್ಯಗಳತ್ತ ಮಾತ್ರ. ಸಂತಸ-ಸಂಕಷ್ಟಗಳೇನೇ ಇದ್ದರೂ ವಾಸ್ತವದಲ್ಲೇ ಖುಷಿಯಾಗಿರೋ ಪ್ರಕೃತಿಯಂತೆ ಅವಳಾದರೆ, ಇಂದಿಗೆ ತೃಪ್ತಿಯಾಗದೇ ಹೊಸ ನಾಳೆಗೆ ಹಂಬಲಿಸುವ ಪುರುಷನಂತೆ ಅವನು.
ಕಾಲೇಜಲ್ಲೊಂದು ಕಥಾ ಸ್ಪರ್ಧೆ. ಬಣ್ಣ ಬಣ್ಣದ ಕಥೆಗಳು ಬಂದಿದ್ದವಲ್ಲಿ. ಹುಟ್ಟಾ ಕಥೆಗಾರರ ಕಥೆ, ಕುವೆಂಪು, ತೇಜಸ್ವಿ, ಭೈರಪ್ಪ,ಅನಂತಮೂರ್ತಿಯವರ ಕೃತಿಗಳಿಂದ ಸ್ಪೂರ್ತಿ ಪಡೆದ ಕತೆ, ಬಹುಮಾನಕ್ಕೆಂತಲೇ ನಿದ್ದೆಗೆಟ್ಟು, ತಿದ್ದಿ ತೀಡಿ ಕಳಿಸಿದ ಕಥೆ, ತಮ್ಮದೇ ಜೀವನದ ಸೋಲು-ಗೆಲುವುಗಳ ಪಾತ್ರಗಳನ್ನಾಗಿಸಿದ ಕಥೆ, ಕ್ರಾಂತಿಯಾಗ್ಬೇಕು, ಬೆಂಕಿ ಹಚ್ಬೇಕು ಅನ್ನೋ ಕತೆ,ಘೋರ ಕಾಡ ಮಧ್ಯದ ಮಧ್ಯರಾತ್ರಿಯ ಅನುಭವದ ಕತೆ, ಭೂತದ ಕತೆ, ರಾಜಕೀಯದ ಕತೆ.. ಹೀಗೆ ದೇಶದೆಲ್ಲಾ ವಿಚಾರಗಳೂ ಕತೆಯಾಗಿದ್ದವಲ್ಲಿ. ಅಲ್ಲಿವನ ನವಿಲುಗರಿಯ ಕತೆಗೆ ಮೊದಲ ಬಹುಮಾನ ಬಂದದ್ದು ಮೆಚ್ಚುಗೆಗಳಿಗಿಂತಲೂ ಹೆಚ್ಚು ಹೊಟ್ಟೆಕಿಚ್ಚುಗಳನ್ನು ಗಳಿಸಿತ್ತು ! ಕಾಡೊಂದರಲ್ಲಿ ಜಿಂಕೆಮರಿಗೆ ಆಕಸ್ಮಿಕವಾಗಿ ಸಿಗೋ ನವಿಲುಗರಿಯ ಸುತ್ತ ಓಡೋ ಆ ಕತೆಯನ್ನೋದಿ ಸಖತ್ ಖುಷಿಯಾದ ಅವಳು ಮುಂದಿನ ತಿಂಗಳು ನಡೆಯಲಿದ್ದ ಅಂತರಕಾಲೇಜು ಕಥಾಸ್ಪರ್ಧೆಗೆ ಅದನ್ನೇ ಕಳಿಸುವಂತೆ ಹೇಳಿದ್ದಳು. ಆದರೆ ಬರೆದದ್ದನ್ನೇ ಬರೆಯುವುದೆಂದರೆ , ಮಾಡುವುದನ್ನೇ ಮಾಡುವುದು ಅವನಿಗೆ ದಿನಾ ಕಹಿಬೇವಿನ ಕಷಾಯ ಕುಡಿಯುವಷ್ಟೇ ಕಷ್ಟ. ಎಕ್ಸಾಮಲ್ಲಿ ಕಾಪಿ ಮಾಡು ಅಂತ ಹೇಳ್ತಿಲ್ಲ ನಿಂಗೆ, ಇದು ಸ್ಪರ್ಧೆ. ಇಲ್ಲಿ ಗೆಲ್ಲುವಂತದ್ದೇ ಗೆಲ್ಲೋದು,ಹುಚ್ಚು ಹೊಸ ಪ್ರಯತ್ನಗಳಲ್ಲ ಅಂದ್ರೆ ಅವ ಒಪ್ಪಲೊಲ್ಲ.ಅದೇ ಕಥೆಯನ್ನ ಒಂಚೂರು ಬದಲಾಯಿಸಿ ಜಿಂಕೆ ಮರಿಯ ಕತೆಯೆಂತಲೂ , ನವಿಲಾರಣ್ಯ ಎಂತಲೋ ಬರಿಯೆಂದರೆ ಅದಕ್ಕೂ ಒಪ್ಪಿರಲಿಲ್ಲ ಅವ. ಅಂತರಿಕ್ಷಯಾನದ ಬಗ್ಗೆಗೊಂದು ಬರೆದಿದ್ದ. ಆ ಕತೆಗೆ ಮೊದಲ ಬಹುಮಾನವಿರಲಿ ಸಮಾಧಾನಕರ ಬಹುಮಾನವೂ ಬಂದಿರಲಿಲ್ಲವೆಂಬುದು ಅವಳಿಗೆ ಎಷ್ಟು ಬೇಸರವಾಗಿತ್ತೋ ಅಷ್ಟೇ ಖುಷಿಯನ್ನು ಅವನ ಹಿಂದೆ ಬಿಟ್ಟು ನಗುವವರಿಗೂ ತಂದುಕೊಟ್ಟಿತ್ತು ! ಅರಳು ಹುರಿದಂತೆ ಮಾತನಾಡುವ ಅವನಿಗೆ ಪ್ರತೀ ವರ್ಷದ ಚರ್ಚಾ ಸ್ಪರ್ಧೆಯಲ್ಲೂ ಒಂದು ಬಹುಮಾನ ಇದ್ದಿದ್ದೇ. ನೀನು ಯಾವುದಾದ್ರೂ ಬಾನುಲಿಯ ಉದ್ಘೋಷಕನಾಗೋ, ನಿನ್ನಿಷ್ಟದ ಕೆಲಸ ಮಾಡ್ಕೊಂಡು ಆರಾಮಾಗಿರಬಹುದು ಅಂದಿದ್ಳು ಅವಳು. ಇವನೇ ಮನಸ್ಸು ಮಾಡಿರಲಿಲ್ಲ.
ಡಿಗ್ರಿ ಮುಗಿಸೋ ಹೊತ್ತಿಗೆ ಎಲ್ಲರಂತೆ ಇವರಿಗೂ ಓದಿಗೆ ತಕ್ಕ ಕೆಲಸದ ಅವಕಾಶ ಸಿಕ್ಕಿತ್ತು. ಒಳ್ಳೆಯ ಕೆಲಸ ಸಿಕ್ಕಿದೆ , ಇನ್ನೇನು ಲೈಫು ಸೆಟಲ್ ಆಯ್ತಲ್ಲ ಅಂತ ಅವಳು ಅನ್ನುತಿದ್ರೆ ಇವನಿಗೆ ಇನ್ನೂ ಓದಬೇಕೆಂಬ ಹಂಬಲ. ನಾನು ಮಾಡು ಅಂದಿದ್ದನ್ನು ಹೆಂಗಿದ್ರೂ ಮಾಡಲ್ಲ ನೀನು , ನಿನ್ನಿಷ್ಟದ ಹಾಗಿರು ಅಂತ ಬೇಸತ್ತಿದ್ದ ಅವಳು ಸಿಕ್ಕ ಕೆಲಸ ಸೇರಿ ದೂರ ಹೊರಟಿದ್ದಳು. ಓದಿದ, ಮತ್ತೂ ಓದಿದ. ಸಂಶೋಧನೆ ಮಾಡಬೇಕು ಅಂತಲೂ ಮುಂತಾದ. ತಾ ತಗೊಂಡ ಹೊಸ ವಿಷಯದಲ್ಲಿ ಹೆಜ್ಜೆ ಹೆಜ್ಜೆಗೂ ಸೋಲು ಎದುರಾದಾಗೆಲ್ಲಾ, ಇದು ಸುಲಭದಲ್ಲಿ ಆಗೋ ವಿಷಯವಲ್ಲ ಬಿಡಪ್ಪ, ಸುಲಭದ್ದೇನಾದ್ರೂ, ಸಿದ್ದ ಮಾದರಿಯ ತರಹದ್ದೇನಾದ್ರೂ ತಗೋಬಾರ್ದಿತ್ತ ಅಂತ ಗೈಡೇ ಹೇಳಿದ್ರೂ ಕೂಡ ಅವನಿಗೆ ತಾ ನಡೆದ ಹಾದಿಯ ಬಗ್ಗೆ ಬೇಸರವಿಲ್ಲ. ಹೊಸತನದ ತುಡಿತದ ಬಗ್ಗೆ ತಿರಸ್ಕಾರವಿಲ್ಲ. ಹೊಸ ಹೊಸದೆನ್ನುತ್ತಾ ಬರೆದ ಕತೆಗಳ ಬಂಡಲ ಧೂಳು ಕೊಡಹುವಾಗೆಲ್ಲಾ ಮತ್ತೆ ಅವಳೇ ನೆನಪಾಗುತ್ತಾಳೆ. ನಿಮ್ಮ ಕತೆಗಳನ್ನ ಅದೇಗ್ರಿ ಸಂಕಲನ ಮಾಡೋದು ? ಒಂದಿದ್ದಂಗೆ ಒಂದಿಲ್ವಲ್ರಿ . ಈಗ ಬಿಕರಿಯಾಗ್ತಿರೋ ಯಾವ ತತ್ವಗಳೂ ಇಲ್ವಲ್ರಿ ಇದ್ರಲ್ಲಿ. ಜನಪ್ರಿಯವಾಗಿರೋ ಅಂತದ್ದು,ರೋಚಕವಾಗಿರುವಂತದ್ದೇನಾದ್
ರೂ ಬರೆದು ಕೊಡಿ, ಬೇಕಾದ್ರೆ ಪ್ರಕಟಿಸೋಣ ಅಂತ ಫೋನಿಟ್ಟ ಪ್ರಕಾಶಕರೆಲ್ಲರ ಹಿಂದೆ ಅವಳ ನುಡಿ ನೆನಪಾದದ್ದಿದೆ. ಹೊಸದೇನೋ ಮಾಡೋಕೋಗ್ಬೇಡ್ವೋ, ನಿನ್ನತನ ಕಳೆದೋಗುತ್ತೆ ಅನ್ನೋ ಅವಳ ಮಾತುಗಳು ಪ್ರತೀ ಸೋಲಲ್ಲೂ ನೆನಪಾಗುತ್ತಿತ್ತವನಿಗೆ. ಆದ್ರೆ ಪ್ರತೀ ಸಲ ಸೋಲು ಮಕಾಡೆ ಬೀಳಿಸಿದಾಗಲೂ ಧೂಳು ಕೊಡವಿ ಮೇಲೆಳುವಂತೆ ಮಾಡ್ತಿದ್ದಿದ್ದು ಆ ಮಾತೇ.
ಎಂದೋ ಬರೆದಿಟ್ಟಿದ್ದ ಅಂತರಿಕ್ಷದ ಕತೆಯನ್ನು ನೋಡಿದ ತನ್ನ ಗೆಳೆಯ ತನಗೇ ತಿಳಿಯದಂತೆ ಪತ್ರಿಕೆಗೆ ಕಳಿಸಿದ್ದು, ಅದರಲ್ಲಿ ಪ್ರಕಟವಾಗಿದ್ದ ಕಥೆಯನ್ನು ನೋಡಿ ಬೆಳಗಿನಿಂದ ಬರುತ್ತಿರೋ ಅಭಿನಂದನಾ ಕರೆಗಳ ನಡುವೆ ಅವನಿಗೆ ಆಕೆಯ ನೆನಪು ಕಾಡ್ತಾ ಇದೆ. ಅದರ ಬೆನ್ನಲ್ಲೇ ನಿಮ್ಮ ಕತೆಗಳನ್ನ ಸಂಕಲನ ಮಾಡ್ಬೇಕು ಅಂತಿದೀವಿ ಕೊಡ್ತೀರಾ ಅಂತ ಮುಂಚೆ ತಿರಸ್ಕರಿಸಿದ್ದ ಪ್ರಕಾಶಕರೇ ಫೋನ್ ಮಾಡಿದಾಗ ಏನು ಹೇಳಬೇಕೆಂದು ತಿಳಿಯದ ಗೊಂದಲದಿಂದ ಮೂಕನಾಗಿದ್ದ. ಸದ್ಯಕ್ಕೆ ಆ ಆಸೆಯಿಲ್ಲ. ಪಕ್ವವಾಗಬೇಕಿದೆ ನಾನಿನ್ನೂ. ಪ್ರಕಟಿಸಬೇಕೆಂಬ ಬಯಕೆಯಾದ್ರೆ ಖಂಡಿತಾ ತಿಳಿಸುತ್ತೇನೆಂಬ ಮಾತೊಂದಿಗೆ ಫೋನಿಟ್ಟಿದ್ದ.ಹೊಸತನಕ್ಕೆ ತಕ್ಷಣದ ಸೋಲಾದ್ರೂ ಅದು ಹೊಸತನದ ಸಾವಲ್ಲ, ತಾತ್ಕಾಲಿಕ ಹಿನ್ನಡೆಯಷ್ಟೇ ಎಂದು ತಾನೆಂದೂ ನಂಬುತ್ತಿದ್ದುದರ ಬಗ್ಗೆ ಅವಳ ಜೊತೆ ಮತ್ತೆ ಮಾತನಾಡಬೇಕೆಂಬ ಬಯಕೆಯಾಗುತ್ತಿದೆ. ಆದ್ರೆ ಅವಳ ಪತ್ತೆಯಿಲ್ಲ. ತನ್ನ ರಿಸರ್ಚ್ ಪೇಪರ್ ಅಂತರಾಷ್ಟ್ರೀಯ ಪತ್ರಿಕೆಯಲ್ಲಿ ಬಂದ ಖುಷಿಯನ್ನು, ಸಂಶೋಧನೆಯನ್ನು ಗುರುತಿಸಿದ ಸರ್ಕಾರ ಕೆಲಸವೊಂದನ್ನು ನೀಡುತ್ತಿರೋ ಬಗ್ಗೆ ತಿಳಿಸುವ ಕನವರಿಕೆಯಾಗುತ್ತಿದೆ. ಆದ್ರೆ ಪ್ರತಿ ಸೋಲನ್ನೂ ಸವಾಲಾಗಿ ಸ್ವೀಕರಿಸುವಂತೆ ಮಾಡಿದ ನುಡಿಗಳ ಒಡತಿ ಅವಳೆಲ್ಲಿದ್ದಾಳೆಂಬ ಸುಳಿವಿಲ್ಲ. ಆಕೆಯಿರೋ ಊರಿಗೇ ಹೊರಟಿದ್ದೇನೆ, ಮರುದಿನವೇ ಆಕೆ ಸಿಗುವಳೆಂಬ ಕಲ್ಪನೆಯೂ ಇಲ್ಲದ ಆತ ಹೊರಟಿದ್ದಾನೆ, ಆಕೆಯದೆಂದು ತಿಳಿದಿರದ ಹೊಸ ಊರ, ಹೊಸ ಕೆಲಸದ, ಹೊಸತನದ ತುಡಿತದೊಂದಿಗೆ. ನೋವುಗಳ ನಿನ್ನೆಯಾಚೆ, ಸಮಭಾವದ ಇಂದಿನಾಚೆ ಹೊಸತನದ ನಾಳೆಯಿದ್ದೇ ಇದೆಯೆಂಬ ಭರವಸೆಯೊಂದಿಗೆ
ನಿಮ್ಮ ಭರಹಗಳಲ್ಲೂ ಒಂದಿಷ್ಟು ಹೊಸತನ ಇದೆ . ಚೆನ್ನಾಗಿದೆ..
🙂
ಧನ್ಯವಾದಗಳು ಚಂದನ್ ಮತ್ತು ಚೈತ್ರ ಅವರೇ 🙂