ಕಳೆದ ವಾರದ ಒಂದು ಮುಂಜಾನೆ ನನ್ನ ರೂಮಿನಿಂದ ಒಂದಷ್ಟು ದೂರದಲ್ಲಿರೋ ಪ್ಲಾಟಿನಲ್ಲಿ ಯಾರೋ ಕಿರುಚಿದ ಸದ್ದಾಯಿತು. ಆ ಸದ್ದು ನಿದ್ದೆಗಣ್ಣಿನಲ್ಲಿ ನನ್ನೊಳಗೆ ಒಂದು ಆತಂಕವನ್ನು ಸೃಷ್ಟಿಸಿದರೂ ಹೊರಗೆ ನಲ್ಲಿಯಲ್ಲಿ ಬೀಳುವ ನೀರು ಹಿಡಿಯುವ ಅಕ್ಕ ಪಕ್ಕದ ಮನೆಯ ಹೆಂಗಸರು ಆ ಪ್ಲಾಟಿನಲ್ಲಿ ಏನೂ ನಡೆದೇ ಇಲ್ಲವೇನೋ ಎಂಬುವಂತೆ ತಮ್ಮ ಬಕೆಟ್ ಗಳಿಗೆ ನೀರು ತುಂಬಿಕೊಳ್ಳುತ್ತಿರುವ ಸದ್ದು ಕೇಳಿ ನಾನು ಹಾಸಿಗೆ ಮೇಲೆ ಹಾಗೆಯೇ ಸುಮ್ಮನೆ ಕಣ್ಮುಚ್ಚಿದೆ. ಆ ಪ್ಲಾಟಿನಿಂದ ಕೇಳಿ ಬರುತ್ತಿದ್ದ ಆ ಕಿರುಚುವ ದನಿ ಕ್ಷಣ ಕ್ಷಣಕ್ಕೂ ತಾರಕ್ಕೇರುತ್ತಿತ್ತು. ಹೊರಗೆ ಹೋಗಿ ಅಲ್ಲಿ ಏನಾಗುತ್ತಿದೆ ನೋಡೋಣ ಎಂದು ಕಣ್ಣುಬಿಟ್ಟವನಿಗೆ ಬೀದಿನಲ್ಲಿ ನೀರು ಹಿಡಿಯುತ್ತಿದ್ದ ಅಕ್ಕಪಕ್ಕದ ಮನೆಯ ಹೆಂಗಸರ ಮಾತುಗಳು ಅಲ್ಲಿ ಏನೂ ನಡೆದೇ ಇಲ್ಲವೇನೋ ಎಂಬಂತಹ ಒಂದು ಅಸ್ಪಷ್ಟ ಚಿತ್ರವನ್ನು ನನ್ನೊಳಗೆ ಮೂಡಿಸಿದ್ದವು. ಆ ಅಸ್ಪಷ್ಟತೆಗೆ ಒಂದು ಆಕಾರ ನೀಡದ ನಾನು ಸುಮ್ಮನೆ ಹಾಸಿಗೆ ಮೇಲೆ ಮಲಗೇ ಇದ್ದೆ. ಒಂದಷ್ಟು ಹೊತ್ತಿನ ನಂತರ ಯಾವುದೋ ಸೈಕಲ್ ಗಳ ಸದ್ದಾಗಿ ಒಂದೆರಡು ಗಂಡು ದನಿಗಳೂ ಕೇಳಿ. ಜೊತೆಗೆ ಹಿಂಬದಿ ಗೇರ್ ಹಾಕಿದಾಗ ಬರುವ ಯಾವುದೋ ಕಾರಿನ ಸಂಗೀತವೂ ಕೇಳಿಸಿತ್ತು. ನಂತರ ಆ ಕಾರು ಅಲ್ಲಿಂದ ಹೊರಟು ಹೋದ ಸದ್ದಾದ ಮೇಲೆ ಆ ಪ್ಲಾಟಿನಲ್ಲಿ ಕಿರುಚುತ್ತಿರುವ ಸದ್ದೂ ಸಹ ನಿಂತು ಹೋಯಿತು. ಆ ಕಾರು ಹೋದ ಮೇಲೆ "ಅಯ್ಯೋ ಪಾಪ ಅದೇನು ಕುಡಿದುಬಿಟ್ಟಿದ್ದನೋ ಅವಯ್ಯ" ಅನ್ನುವಂತಹ ನೀರು ಹಿಡಿಯುವ ಹೆಂಗಸರ ಮಾತು ಆಗ ನನಗೆ ಮತ್ತೆ ಅಸ್ಪಷ್ಟವಾಗಿ ಕೇಳಿಸಿದವು. ಏನು ಕುಡಿದಿದ್ದನೋ ಅವಯ್ಯ ಅನ್ನುವ ಮಾತು ಕಿವಿಗೆ ಬಿದ್ದ ತಕ್ಷಣ ಯಾಕೋ ನಾನೊಮ್ಮೆ ಕಿಟಿಕಿ ತೆಗೆದು ಆ ಪ್ಲಾಟಿನ ಕಡೆ ದಿಟ್ಟಿಸಬೇಕಾಗಿತ್ತು. ಏನಾಯಿತು ಅಂತ ಆ ಹೆಂಗಸರನ್ನು ಕೇಳಬೇಕಾಗಿತ್ತು ಅನಿಸಿತ್ತು.
ನನ್ನೊಳಗಿನ ಆ ಕ್ಷಣದ ಆ ಅನ್ನಿಸುವಿಕೆ ಅನ್ನಿಸುವಿಕೆಯ ಹಾಗೆ ಉಳಿದು ನಂತರ ನಾನು ಎದ್ದು ರೆಡಿಯಾಗಿ ಒಂದಷ್ಟು ಹೊತ್ತು ಕುಳಿತು ಓದಿ ಆಫೀಸಿಗೆ ಹೋಗುವ ಸಮಯದಲ್ಲಿ ಪಕ್ಕದ ಮನೆಯ ದೀದಿ ಗೇಟಿನ ಬಳಿ ಬಟ್ಟೆ ಒಣಗಿ ಹಾಕುತ್ತಿದ್ದುದ ಕಂಡು "ದೀದಿ ಬೆಳಿಗ್ಗೆ ಯಾರೋ ಆ ಪ್ಲಾಟಿನಲ್ಲಿ ಕಿರುಚಿದ ಹಾಗೆ ಸದ್ದು ಕೇಳಿಸುತ್ತಿತ್ತಲ್ಲ" ಅಂತ ಕೇಳಿದೆ. ಅದಕ್ಕೆ ಆಕೆ "ಆ ಬಿಲ್ಡಿಂಗ್ ನ ಸೆಕ್ಯುರಿಟಿ ಗಾರ್ಡ್ ನಿನ್ನೆ ತಾನೆ ಡ್ಯೂಟಿಗೆ ಸೇರಿದ್ದನಂತೆ. ನಿನ್ನೆ ನೈಟ್ ಡ್ಯೂಟಿ ಮಾಡಿ ಬೆಳಿಗ್ಗೆ ಎದ್ದು ಕಡ್ಲೆ ಪುರಿ ತಿಂದು ನೀರು ಅಂತ ತಿಳ್ಕೊಂಡು ಅಲ್ಲೇ ಇದ್ದ ಬಾಟಲ್ ನಲ್ಲಿದ್ದ ಆಸಿಡ್ ಕುಡಿದುಬಿಟ್ಟು ಹಂಗೆ ಬೆಳಿಗ್ಗೆ ಬಚಾವೋ ಬಚಾವೋ ಅಂತ ಕಿರುಚುತ್ತಾ ಇದ್ದ" ಅಂದಳು. ಯಾಕೋ ಅವಳ ಮಾತು ಕೇಳಿ ಒಂತರಾ ಸಂಕಟ ಆಯಿತು. ಯಾವ ಬಡವರ ಮನೆಯ ಮಗನೋ ಎಂಬುದ ನೆನೆದು ಇನ್ನೂ ಸಂಕಟವಾಯಿತು. ಆ ಪ್ಲಾಟಿನಲ್ಲಿ ವಾಸಿಸುವ ಒಬ್ಬ ಡಾಕ್ಟರ್ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ವಿಭಾಗದ ಬಳಿಯೇ ಆ ಡಾಕ್ಟರ್ ಚೇಂಬರ್ ಸಹ ಇರುವ ಕಾರಣ ರಿಕ್ಷಾ ಹಿಡಿದು ಆಫೀಸಿಗೆ ಹೋದವನೇ ಸೀದಾ ಆ ಡಾಕ್ಟರ್ ಬಳಿ ಹೋಗಿ "ಬೆಳಿಗ್ಗೆ ಆಸಿಡ್ ಕುಡಿದಿದ್ದ ಆ ವ್ಯಕ್ತಿಯ ಆರೋಗ್ಯ ಹೇಗಿದೆ" ಎಂದು ಕೇಳಿದ್ದೆ. ಅದಕ್ಕೆ ಅವರು "ಯಾರು ನಮ್ಮ ಸೆಕ್ಯೂರಿಟಿ ಗಾರ್ಡ? ನಿನ್ನೆ ತಾನೆ ಡ್ಯೂಟಿಗೆ ಸೇರಿದ್ದ. ಬೆಳಿಗ್ಗೆ ಹಾಗೆ ಬೈ ಮಿಸ್ಟೇಕ್ ಆಸಿಡ್ ಕುಡಿದುಬಿಟ್ಟಿದ್ದಾನೆ. ಕಂಡೀಷನ್ ನಾಟ್ ಗುಡ್. ಅವನು ಬ್ಲಡ್ ವಾಮಿಟ್ ಮಾಡಿಕೊಳ್ಳುತ್ತಿದ್ದ ಕಾರಣ ಅವನನ್ನು ಬೇರೆ ಕಡೆ ರೆಫರ್ ಮಾಡಿದ್ದಾರಂತೆ" ಎಂದರು. ಆಸ್ಪತ್ರೆಯ ವಾರ್ಡ್ ನಲ್ಲಿ ಇದ್ದಿದ್ರೆ ಒಂದು ರೌಂಡ್ ಹೋಗಿ ನೋಡಿಕೊಂಡು ಬರಬಹುದಾಗಿತ್ತು ಎಂದುಕೊಂಡಿದ್ದವನಿಗೆ ಅವರ ಮಾತು ಕೇಳಿ ಬೇಸರವಾಯಿತು. ಜೊತೆಗೆ ಅವನು ಬದುಕುವುದು ಕಷ್ಟ ಎನ್ನುವುದನ್ನು ಕೇಳಿಸಿಕೊಂಡು ಮನಸಿಗೆ ಮಂಕು ಕವಿದ ಹಾಗೆ ಅನಿಸಿ ಆಫೀಸಿನ ಕಡೆ ಹೆಜ್ಜೆ ಇಟ್ಟಿದ್ದೆ.
ಆಫೀಸಿಗೆ ಹೋದವನೇ ಆಸಿಡ್ ಕುಡಿದ ವ್ಯಕ್ತಿಗೆ ಮಾಡಬಹುದಾದ ಪ್ರಥಮ ಚಿಕಿತ್ಸೆಗಳೇನು ಎಂಬುದನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ದೆ. ಆ ಕ್ಷಣಕ್ಕೆ ನಾನು ಆರನೇ ಕ್ಲಾಸಿನಲ್ಲಿದ್ದಾಗ ಯಾರೋ ಬಂದು ನಮ್ಮ ಶಾಲೆಯಲ್ಲಿ ಪ್ರಥಮ ಚಿಕಿತ್ಸೆಯ ಕುರಿತು ನಮಗೆ ಪಾಠ ಮಾಡಿ ನಮ್ಮಿಂದ ಪರೀಕ್ಷೆ ಬರೆಸಿದ್ದುದು ನೆನಪಾಯಿತು. ಪೇಷೆಂಟ್ ವಾಂತಿ ಮಾಡಿಕೊಳ್ತಾ ಇಲ್ಲ ಸ್ಟೇಬಲ್ ಆಗಿ ಇದ್ದಾನೆ ಅಂದ್ರೆ ನೀರು ಕುಡಿಸಿ ಹಾಲು ಸಹ ಕುಡಿಯಲು ಕೊಟ್ಟು ತಕ್ಷಣ ಆಸ್ಪತ್ರೆಗೆ ಸೇರಿಸಬೇಕು ಎಂಬುವ ಮಾತುಗಳು ಗೂಗಲ್ ಸರ್ಚ್ ನಲ್ಲಿ ಸಿಕ್ಕವು. ಆ ಪೇಷೆಂಟ್ ಹಾಗೆ ಕಿರುಚಿಕೊಳ್ಳುವಾಗ ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದ ಎಂಬುದನ್ನು ಕೇಳಿದ್ದ ಕಾರಣ ಅವನಿಗೆ ಪ್ರಥಮ ಚಿಕಿತ್ಸೆ ಮಾಡಿ ಪ್ರಯೋಜನವಿರುತ್ತಿಲ್ಲ ಎನಿಸಿದರೂ ಅವನು ಆಸಿಡ್ ಕುಡಿದ ತಕ್ಷಣ ಅವನನ್ನು ಯಾರಾದರೂ ನೋಡಿಕೊಂಡಿದ್ದರೆ ಬಹುಶಃ ಅವನಿಗೆ ಒಳ್ಳೆಯದಾಗುತ್ತಿತ್ತೇನೋ ಎಂಬಂತಹ ಆಶಾಭಾವನೆ ನನ್ನೊಳಗೆ ಪದೇ ಪದೇ ಮೂಡುತ್ತಿತ್ತು. ಆತ ಹಾಗೆ ಕಿರುಚಿಕೊಳ್ಳುತ್ತಿದ್ದುದ್ದನ್ನು ನಾನು ಒಮ್ಮೆಯಾದರೂ ಎದ್ದು ಹೋಗಿ ನೋಡಿದ್ದರೆ ಅವನಿಗೆ ಪ್ರಥಮ ಚಿಕಿತ್ಸೆ ನೀಡಿ ಅವನನ್ನು ಬೇಗ ಆಸ್ಪತ್ರೆಗೆ ಸೇರಿಸಬಹುದಾಗಿತ್ತು ಎನಿಸುತ್ತಿತ್ತು. ಆದರೆ ಕಾಲ ಮಿಂಚಿ ಹೋಗಿದ್ದ ಕಾರಣ ಚಿಂತಿಸಿ ಪ್ರಯೋಜನವಿರಲಿಲ್ಲ.
ಸಂಜೆ ಆಫೀಸಿನಿಂದ ಮನೆಗೆ ಬರುವಾಗ ಆ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಆ ಪ್ಲಾಟಿನ ಒಳ ಹೊಕ್ಕು ಅಲ್ಲಿ ಕುಳಿತ್ತಿದ್ದ ಸೆಕ್ಯುರಿಟಿಗೆ "ಬೆಳಿಗ್ಗೆ ಆಯಪ್ಪ ಆಸಿಡ್ ಕುಡಿದಿದ್ದನಂತಲ್ಲ. ಹೇಗಿದ್ದಾನೆ ಈಗ? ಆಸ್ಪತ್ರೆಯಿಂದ ಯಾರಾದರೂ ಫೋನ್ ಮಾಡಿದ್ದರಾ?" ಅಂತೆಲ್ಲಾ ಕೇಳಿದ್ದೆ. ಅದಕ್ಕೆ ಆತ "ಅವನ ಕತೆ ಅಷ್ಟೆ ಸರ್. ಬಹುಶಃ ಬದುಕೋದಿಲ್ಲ ಅನಿಸುತ್ತೆ. ಯಾವುದೋ ನರ್ಸಿಂಗ್ ಹೋಂ ನಲ್ಲಿ ಅಡ್ಮಿಟ್ ಮಾಡಿದ್ದಾರಂತೆ ಲಕ್ಷ ಖರ್ಚಾಗುತ್ತಂತೆ. ಪ್ಲಾಟ್ ನವರು ಐದು ಸಾವಿರ ಕೊಟ್ಟು ಕೈ ತೊಳೆದುಕೊಂಡ್ರು. ಸೆಕ್ಯುರಿಟಿ ಏಜೆಂನ್ಸಿಯವರು ಏನು ಮಾಡುತ್ತಾರೋ ನೋಡಬೇಕು." ಎಂದಿದ್ದ. ಅವನ ಮಾತು ಕೇಳಿ "ಆಸಿಡ್ ನ ಯಾಕಪ್ಪ ಅಲ್ಲಿ ಇಲ್ಲಿ ಇಡ್ತೀರ?" ಎಂದು ಹೇಳಿ ಮನೆ ಕಡೆಗೆ ಹೆಜ್ಜೆ ಇಡುವಾಗ ಮನೆ ಹೊಕ್ಕುವಾಗ ಬೆಳಿಗ್ಗೆ ಮಾತಿಗೆ ಸಿಕ್ಕಿದ್ದ ಅದೇ ದೀದಿ ಮತ್ತೆ ಮಾತಿಗೆ ಸಿಕ್ಕಿ "ಅಯ್ಯೋ ಪಾಪ.. ಆಯಪ್ಪ ಬದುಕೋದು ಕಷ್ಟ ಅಂತೆ" ಎನ್ನುವ ಮಾತುಗಳನ್ನಾಡುತ್ತಿದ್ದಳು. ಅವಳ ಮಾತು ಕೇಳಿಸಿಕೊಂಡು "ಎಲ್ಲಾ ಬ್ಯಾಡ್ ಲಕ್" ಎಂದುಕೊಂಡು ರೂಮಿಗೆ ಬಂದವನು ಸುಮ್ಮನೆ ಮೌನಕ್ಕೆ ಶರಣಾದೆ. ನಾನು ಮೌನಕ್ಕೆ ಶರಣಾದಷ್ಟು ಬೆಳಗಿನ ಅವನ ಕೂಗು ನನ್ನ ಕಿವಿಯಲ್ಲಿ ಗುಂಯ್ ಗುಟ್ಟಿದ ಅನುಭವವಾಗಿ ನಾನು ಬೆಳಿಗ್ಗೆ ಎದ್ದು ಒಮ್ಮೆ ಆ ಪ್ಲಾಟಿನ ಬಳಿ ಹೋಗದಿದ್ದುದ್ದಕ್ಕೆ ಯಾವುದೋ ಪಾಪ ಪ್ರಜ್ಞೆ ನನ್ನನ್ನು ಕಾಡತೊಡಗಿತು. ಆ ಕ್ಷಣಕ್ಕೆ ಯಾರೋ ಮುಖ ಮೂತಿ ಪರಿಚಯ ಇಲ್ಲದವನು ಆಸಿಡ್ ಕುಡಿದು ಏನೋ ಆದ ಅಂದ್ರೆ ನನಗೆ ಯಾಕೆ ಈ ತರಹ ಅನಿಸುತ್ತಿದೆ ಅನಿಸಿತು. ನನಗನಿಸಿದ್ದನ್ನು ನನ್ನ ಗೆಳತಿಗೆ ಫೋನ್ ಮಾಡಿ ಹೇಳಿಕೊಂಡೆ. "ಆಯಪ್ಪ ಹಾಗೆ ಕಿರುಚಿಕೊಳ್ಳುವಾಗ ಬೆಳಿಗ್ಗೆ ನೀವು ಎದ್ದು ಒಂದು ಸಾರಿ ನೋಡಬೇಕಾಗುತ್ತು ರೀ." ಎಂದಳು ನನ್ನ ಗೆಳತಿ. ಹೌದು ನೋಡಬೇಕಾಗಿತ್ತು. ಅಲ್ಲಿಗೆ ಹೋಗದೆ ತಪ್ಪು ಮಾಡಿದೆ ಎಂದುಕೊಂಡು ಸುಮ್ಮನಾದೆ. ನಾನು ಸುಮ್ಮನಾದರೂ ಆ ವ್ಯಕ್ತಿಯ ಕೂಗು ನನಗೆ ಕೇಳಿಸಿದ ಅನುಭವವಾಗುತ್ತಲೇ ಇತ್ತು.
ಯಾಕೋ ಗೊತ್ತಿಲ್ಲ. ನನಗೆ ಮೊದಲಿನಿಂದಲೂ ಹಾಗೆಯೇ. ಸಾವಿನ ದವಡೆಗೆ ಸಿಲುಕುತ್ತಾರಲ್ಲ ಅವರ ಕಂಡರೆ ಯಾಕೋ ನನ್ನ ಮನಸ್ಸು ಹೀಗೆ ಮಿಡಿಯುವುದಕ್ಕೆ ಶುರು ಮಾಡಿ ಬಿಡುತ್ತದೆ. ಯಾಕೆಂದರೆ ಒಂದು ಸಾವು ಒಂದು ಕುಟುಂಬದಲ್ಲಿ ಏನೆಲ್ಲಾ ನೋವ ತುಂಬಬಹುದು ಎಂಬುದರ ಸ್ಪಷ್ಟ ಅರಿವು ನನಗಿದೆ. ಅಚ್ಚರಿಯೆಂದರೆ ಹೆಚ್ಚು ಸಲ ಸಾವಿನ ದವಡೆಗೆ ಸಿಲುಕಿದವರಿಗೆ ಒಂದು ಪುಟ್ಟ ಹಸ್ತದ ನೆರವು ಸಿಕ್ಕರೆ ಅವರು ಬದುಕಿ ಬಿಡುತ್ತಾರೆ. ಹಾಗೆ ಬದುಕಿ ಬಿಡುವವರು ಆಮೇಲೆ ಬದುಕಿ ಬಾಳುವುದ ನೋಡಿದಾಗ ಆಗುವ ಖುಷಿಯೇ ಬೇರೆ. ಆ ಅವರ ಖುಷಿಯ ನೋಡುವುದಕ್ಕಾಗಿ ಅವರ ಕಷ್ಟಗಳಿಗೆ ಮಿಡಿಯುವ ಸಹಾಯ ಹಸ್ತಗಳ ಅವಶ್ಯಕತೆ ಇಂದಿನ ದಿನಗಳಲ್ಲಿ ಖಂಡಿತಾ ಇದೆ. ಅಂತಹ ಸಹಾಯ ಹಸ್ತಗಳು ಊರುಗಳಲ್ಲಿ ಹಿಂದೆ ತುಂಬಾ ಸಿಗುತ್ತಿದ್ದವು. ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ನಮ್ಮೂರಿನಲ್ಲಿ ಗಂಡ ಹೆಂಡತಿಯ ಪುಟ್ಟ ಜಗಳವೇ ಆಗಿದ್ದರೂ ಅಕ್ಕ ಪಕ್ಕದ ಮನೆಯವರೆಲ್ಲಾ "ನಿಂಗೇನೋ ಬಂದಿರೋದು. ಅವೈದ್ಲುನಾ ಯಾಕೋ ಹಂಗ್ ಹೊಡ್ದೀಯೆ. ನಿನ್ ಕೈ ಸೇದೋಗ ಹೆಂಗ್ ಹೊಡದವ್ನೇ ನೋಡು." ಎಂದು ಬಯ್ಯುತ್ತಲೇ ಜಗಳ ಬಿಡಿಸುವ ಹಿರಿಯರಿದ್ದರು. ಯಾರಿಗೋ ಹೊಟ್ಟೆ ನೋವು ಬಂತು ಅಂದರೆ, ಇನ್ಯಾರೋ ಆತ್ಮಹತ್ಯೆಯ ಪ್ರಯತ್ನಪಟ್ಟರೆ, ಯಾರಿಗೋ ಹಾವು ಕಚ್ಚಿತು ಎಂದರೆ, ತಮಗೆ ಸಾಧ್ಯವಾದ ರೀತಿಯಲ್ಲಿ ಊರಿನ ಜನ ಸಹಾಯಕ್ಕೆ ನಿಲ್ಲುತ್ತಿದ್ದರು. ಬಹುಶಃ ಈಗಲೂ ಕೆಲವು ಹಿರಿಯರು ಸಹಾಯಕ್ಕೆ ನಿಲ್ಲುತ್ತಾರೆ ಎನ್ನಬಹುದು. ಹಾಗೆಯೇ ಊರಿಗೆ ಆಕಸ್ಮಾತ್ ಕಳ್ಳರು ಬಂದಿದ್ದಾರೆ ಅಂದ್ರೆ "ಯಾವಾನ್ಲಾ ಅವ್ನು.." ಎಂದು ಕೈಗೆ ಸಿಕ್ಕ ದೊಣ್ಣೆಯನ್ನೋ ಮಚ್ಚನ್ನೋ ಹಿಡಿದು ಬರುವ ಜನ ಊರಿನಲ್ಲಿ ಒಂದು ಕಾಲಕ್ಕೆ ಇದ್ದರು. ಆದರೆ ಪಟ್ಟಣಗಳಲ್ಲಿ ಪಕ್ಕದ ಮನೆಯವರ ಹೆಸರೇನು ಎನ್ನುವುದು ಸಹ ಗೊತ್ತಿಲ್ಲದ ಹಾಗೆ ಬದುಕಿ ಬಿಡುವ ಎಷ್ಟೋ ಜನ ಪಕ್ಕದ ಮನೆಯಲ್ಲಿ ಏನಾದರು ಅವಘಡವಾದರೆ, ರಸ್ತೆಯಲ್ಲಿ ಯಾರೋ ಅಪಘಾತಕ್ಕೀಡಾಗಿ ಬಿದ್ದಿದ್ದರೆ ತಕ್ಷಣಕ್ಕೆ ಸ್ಪಂದಿಸೋದು ಕೇರ್ ಮಾಡೋ ತುಂಬಾ ತುಂಬಾ ಕಮ್ಮಿ. ಹಾಗಂತ ಪಟ್ಟಣಿಗರು ತುಂಬಾ ಕೆಟ್ಟವರು ಹಳ್ಳಿಯವರು ತುಂಬಾ ಒಳ್ಳೆಯವರು ಅಂತಲ್ಲ. ಒಂದು ಅವಘಡಕ್ಕೆ ತಕ್ಷಣಕ್ಕೆ ಸ್ಪಂದಿಸುವ, ನಮಗೆ ತೋಚಿದ ರೀತಿಯಲ್ಲಿ ಸಹಾಯಕ್ಕೆ ನಿಲ್ಲುವ ಗುಣ ಹಳ್ಳಿಯವರಿಗೆ ಒಂಚೂರು ಹೆಚ್ಚು ರೂಢಿಯಾಗಿರುತ್ತದೆ. ಕೆಲವರಿಗೆ ಹಾಗೆ ಸ್ಪಂದಿಸುವ ಗುಣ ತುಂಬಾ ಚಿಕ್ಕ ವಯಸ್ಸಿಗೆ ರೂಢಿಯಾಗಿರುತ್ತದೆ. ಅಂತಹವರಿಂದ ಒಬ್ಬರ ಸಹಾಯಕ್ಕೆ ಹೇಗೆ ನಿಲ್ಲಬೇಕು ಎನ್ನುವುದ ನಾವು ಕಲಿಯಬೇಕಿದೆ. ಅದರಲ್ಲೂ ಒಂದು ಜಿಲ್ಲೆಯ ಯಾವುದೋ ಭಾಗದಲ್ಲಿ ಯಾವುದೇ ತರಹದ ಔಟ್ ಬ್ರೇಕ್ ಆದರೂ ರಜೆ ದಿನಗಳೆನ್ನುವುದನ್ನೂ ಲೆಕ್ಕಸದೆ ಅಲ್ಲಿನ ಇನ್ ವೆಸ್ಟಿಗೇಷನ್ ಗೆಂದು ಓಡುವ ನಾನು ನನ್ನದೇ ಸುತ್ತಮುತ್ತಲಿನ ಜನರ ನೋವುಗಳಿಗೆ ಸ್ಪಂದಿಸುವುದ ಇನ್ನೂ ಹೆಚ್ಚು ಕಲಿಯಬೇಕಿದೆ.
*****
Aat baduki uliyali… .
ನಟಣ್ಣ ಮುಳುಗುತ್ತಿದ್ದವನಿಗೆ ಉಲ್ಲುಕಡ್ಡಿಯೂ ಸಹಾಯ ಮಾಡುತ್ತದೆ. ನಮ್ಮ ಹಳ್ಳಿಗರಲ್ಲಿ ಈಗಲೂ ಒಬ್ಬರಿಗೊಬ್ಬರು ಸಹಾಯ ಮಾಡುವ ಮನಸ್ಸು ಇದೆ. ಎಷ್ಟೇ ಆದರೂ ಹಳ್ಳಿಯ ಜೀವನವೇ ಚಂದ.
ನಗರಗಳಲ್ಲಿ ನಾವು ವಿಲಕ್ಷಣ ನಿರ್ಲಿಪ್ತತೆಯೊಳಗೆ ಲೀನವಾಗಿ ಬಿಡುತ್ತೇವೆ. ಅದೂ ಎಷ್ಟರ ಮಟ್ಟಕ್ಕೆ ಎಂದರೆ ನಮ್ಮನ್ನು ನಾವು ಮನುಷ್ಯರೂ ಎಂಬುದನ್ನೂ ಮರೆತುಬಿಡುವಷ್ಟು.!!
ಬದುಕಿ ಬದುಕುವಂತಿದ್ದರೆ ಆತ ಬದುಕಲಿ. ಬದುಕಿಯೂ ಸತ್ತಂತಿರುವುದಾದರೆ ಆತ ಸಾಯುವುದೇ ಲೇಸು.!!
🙁
ಆಧುನಿಕ ಜಗತ್ತಿನಲ್ಲಿಯ ಭರಾಟೆ
ಮಾನವೀಯತೆಯನ್ನು ನುಂಗಿ ಹಾಕುತ್ತಿದೆ.
ಪಾಪ ಯಾರ ಮಗನೋ?
ಆತ ಬದುಕಿ ಮತ್ತೆ ಮೊದಲಿನಂತಾಗಲಿ.
ಸೆಕ್ಯುರಿಟಿ ಗಾರ್ಡ್ ಬದುಕುಳಿಯಲಿ….. ಅಂತ ಹಾರೈಸುತ್ತೇನೆ..ನಸೀಮಾ..ಜೀ
ಇಂದಿನ ಯಾಂತ್ರೀಕೃತ ಜಗತ್ತಿನಲ್ಲಿ ಎಲ್ಲರೂ ಯಂತ್ರಗಳಂತೆ ಆಗಿಬಿಟ್ಟಿದ್ದಾರೆ…ಸಂವೇದನೆಗಳು ದೂರವಾಗುತ್ತಿವೆ. ಸ್ವಾರ್ಥವೇ ನಮ್ಮನ್ನಾಳುತ್ತಿದೆ.
ಮಾನವೀಯ ಗುಣ ಎಲ್ಲರಲ್ಲೂ ಕಡಿಮೆ ಆಗ್ತಾ ಇದೆ..ಈಗೀಗ ಹಳ್ಳಿಗಳಲ್ಲೂ ಕೂಡ..ಕಷ್ಟಕ್ಕೆ ಸ್ಪಂದಿಸುವ ನಿಮ್ಮ ಗುಣ ಶ್ಲಾಘನೀಯ…
ಮನ ಕಲಕುವ ಬರಹ ನಟಣ್ಣ. ಹೀಗೆ ಆಗುವುದು ಸಹಜ. ನಮಗ್ಯಾಕೆ ಬೇರೆಯವರ ಉಸಾಬರಿ ಅಂತ ಒಮ್ಮೊಮ್ಮೆ ಸುಮ್ಮನಿರುತ್ತೇವೆ, ಕೆಲವೊಮ್ಮೆ ನಮ್ಮ ಕೆಲಸಗಳ ತರಾತುರಿಯಲ್ಲಿ ಏನಾಗಿದೆ ಅಂತ ನೋಡಲೂ ಹೋಗುವುದಿಲ್ಲ. ಆಮೇಲೆ ಪಶ್ಚಾತ್ತಾಪ ಪಡುತ್ತೇವೆ. ಮಾನವನ ಸಹಜ ಗುಣ ಇದು. ನಿಮ್ಮ ತುಡಿತದ ಅರಿವಾಯಿತು. ಆತ ಬದುಕಿ ಉಳಿಯಲಿ.
ಎಲ್ಲರಿಗೂ ಶುಭವಾಗಲಿ.
ಓದಿ ತುಂಬಾ ಬೇಜಾರಾಯ್ತು 🙁