ವಿಜ್ಞಾನ-ಪರಿಸರ

ಕಾನು ಕುರಿಮರಿ: ಅಖಿಲೇಶ್ ಚಿಪ್ಪಳಿ

ಫೋಟೊದಲ್ಲಿರುವ ಊರ್ಧ್ವಮುಖಿ ಯಾರೆಂದು ನಿಮಗೆ ಸುಲಭವಾಗಿ ಅರ್ಥವಾಗಿರಬಹುದು. ಅದೇ ಲೇಖನ ಬರೆಯುವ ಮನುಷ್ಯ – ಅಖಿಲೇಶ್ ಚಿಪ್ಪಳಿ. ಆದರೆ, ಎತ್ತಿಕೊಂಡಿರುವ ಆ ಚಿಕ್ಕ, ಸುಂದರ ಪ್ರಾಣಿ ಯಾವುದೆಂದು ಗೊತ್ತಾ? ಇದರ ಹಿಂದಿನ ಕತೆಯೇ ಈ ವಾರದ ಸರಕು.

ವನ್ಯಜೀವಿ ಹತ್ಯೆ ಅಂದರೆ ಪ್ರತಿಷ್ಟಿತ ಬೇಟೆ ಎಂಬ ಅಮಾನವೀಯ ಕಾರ್ಯ ಜನಪ್ರಿಯವಾದ ಕಾಲವೊಂದಿತ್ತು. ರಾಜ-ಮಹಾರಾಜರು ತಮ್ಮ ತಿಕ್ಕಲು ತೆವಲಿಗೋಸ್ಕರ ಕಾಡಿನ ಪ್ರಾಣಿಗಳನ್ನು ಹತ್ಯೆ ಮಾಡುತ್ತಿದ್ದರು. ರಾಮಾಯಣದಂತಹ ಪುರಾಣ ಗ್ರಂಥಗಳಲ್ಲೂ ಬೇಟೆಯ ಬಗ್ಗೆ ಉಲ್ಲೇಖಗಳಿವೆ. ಸೀತೆ ಬಂಗಾರದ ಜಿಂಕೆ ಬೇಕು ಎಂದಿದ್ದಕ್ಕೆ ಅಲ್ಲವೆ ರಾಮಾಯಣದಲ್ಲಿ ರಾವಣನ ಕೊನೆಯಾದದ್ದು. ಹಾಗೆಯೆ ಹುಲಿ-ಜಿಂಕೆ ಇನ್ನಿತರ ಪ್ರಾಣಿಗಳ ಚರ್ಮ ಮತ್ತು ಕೋಡುಗಳು ಅಂದದರಮನೆಯ ಚಿತ್ತಾರದ ಗೋಡೆಯ ಮೇಲೆ ರಾರಾಜಿಸುವಂತೆ ಪ್ರದರ್ಶಿತವಾದವು. ಹಿಂದೊಮ್ಮೆ ಒಬ್ಬರ ಮನೆಗೆ ಹೋಗಿದ್ದೆ. ಅಲ್ಲಿಯೂ ಗೋಡೆಯ ಮೇಲೆ ಕಾಡುಕೋಣ ಮತ್ತು ಜಿಂಕೆಯ ಕೋಡಿನ ಜೊತೆಯಲ್ಲಿ ಅಪರಿಚಿತವಾದ, ನಾನು ಎಲ್ಲಿಯೂ ನೋಡದ ಸುಮಾರು ಐದಂಗುಲ ಉದ್ದದ ಚೂಪಾದ ಕೋಡಿನ ಜೊತೆಯಿತ್ತು. ಇದು ಯಾವ ಪ್ರಾಣಿಯ ಕೋಡಿನ ಜೋಡಿ ಎಂದು ಕೇಳಿದೆ. 

ಈಗೊಂದು ವರ್ಷದ ಹಿಂದೆ ಒಂದು ದಿನ ವಿಪರೀತ ಕೆಲಸಗಳನ್ನು ಮುಗಿಸಿ ಮಧ್ಯಾಹ್ನ ಊಟಕ್ಕೆ ಹೋಗುವಾಗಲೇ ೩ ಗಂಟೆಯಾಗಿತ್ತು. ಹೊಟ್ಟೆಯೊಳಗಿನ ಬಕಾಸುರ ಬೆಂಕಿಯುಗುಳುತ್ತಿದ್ದ, ದಡಬಡನೆ ಕೈ ತೊಳೆದು ತುತ್ತು ಬಾಯಿಗಿಡುವ ಸಮಯದಲ್ಲೇ ಸ್ನೇಹಿತರೊಬ್ಬರು ಕಿವಿ ನೆಟ್ಟಗಾಗುವ ವಿಷಯ ಹೇಳಿದರು. ಕಾಡುಕುರಿಯ ಮರಿಯೊಂದನ್ನು ಅದ್ಯಾರೊ ಮಾರಲು ತಂದಿದ್ದರು. ಕಾನುಕುರಿ ಮರಿಯನ್ನು ಕೊಂಡವರು ಬಹುಷ: ಅದರ ಬಗ್ಗೆ ಗೊತ್ತಿಲ್ಲದವರಿರಬೇಕು. ಅಷ್ಟಕ್ಕೂ ಅವರು ಏತಕ್ಕೆ ಕೊಂಡಿದ್ದರು ಎಂಬುದು ಗೊತ್ತಿಲ್ಲ. ಆದರೆ ಅದಕ್ಕೆ ತೀವ್ರ ಸ್ವರೂಪದ ಪೆಟ್ಟಾಗಿದೆ. ನಿಲ್ಲಲು ಆಗುತ್ತಿಲ್ಲ. ಐದೇ ನಿಮಿಷದಲ್ಲಿ ಊಟದ ಶಾಸ್ತ್ರ ಮಾಡಿ, ಕಾನುಕುರಿಮರಿಯನ್ನು ನೋಡಲು ಹೋಗಿದ್ದಾಯಿತು.

ಅವರ ಹಿತ್ತಿಲ ಮನೆಯ ಒಂದು ಕೋಣೆಯಲ್ಲಿ ಪುಟ್ಟದಾದ ನೋಡಲು ಆಗ ತಾನೆ ಹುಟ್ಟಿದ ಮಲೆನಾಡು ಗಿಡ್ಡ ದನದ ಕರುವಿನಂತಹುದು ಬಾಗಿಲು ತೆಗೆದ ಕೂಡಲೇ ದಿಗ್ಗನೇಳಲು ಹವಣಿಸಿತು. ಹಿಂದಿನ ಕಾಲುಗಳು ಸಹಕಾರ ನೀಡಲಿಲ್ಲ ಮತ್ತು ಎದ್ದು ಓಡಲು ಆಗಲಿಲ್ಲ. ನಿಧಾನವಾಗಿ ಹತ್ತಿರ ಹೋಗಿ ನೋಡಿದರೆ ಅಸಲಿಗೆ ಅದಕ್ಕೆ ಏಳಲು ಆಗುತ್ತಿಲ್ಲ. ಅತ್ಯಂತ ಜೋಪಾನವಾಗಿ ಲಾಲಿ ಹಾಡುವಾಗ ತಾಯಿ ಮಗುವನ್ನೆತ್ತಿಕೊಳ್ಳುವಂತೆ ಎತ್ತಿಕೊಂಡು ಬೆಳಕಿಗೆ ತಂದೆವು. ಆಹಾ! ಅಂತಹ ಒಂದು ಸುಂದರ ಪ್ರಾಣಿಯನ್ನು ನಾನು ಈ ತನಕ ನೋಡಿರಲಿಲ್ಲ. ತುಂಬ ಹಗುರವಾದ ದೇಹದ ಮೇಲೆ ಒತ್ತೊತ್ತಾಗಿ ಬೆಳೆದ ನುಣುಪಾದ ಬೂದುಗೂದಲು. ಭಯ-ಮಿಶ್ರಿತ ಕಪ್ಪುಕಂಗಳು, ಚೂಪಾದ ಮೂತಿ, ಸಣ್ಣ ಕೆಂಪು ದಾಸವಾಳ ಹೂವಿನ ಅರ್ಧ ಸೈಜಿನಷ್ಟು ಚಿಕ್ಕದಾದ ಬೂದುಗಿವಿ. ಬೂದು-ಬಿಳಿ ಮಿಶ್ರಿತ ಚೋಟುದ್ದ ಬಾಲ. ತೆಳುವಾದ ಕಟ್ಟಿಗೆಯಂತಹ ಕಾಲು, ಆ ಕಾಲಿನಲ್ಲಿ ಸಣ್ಣ ಕವಡೆಯಷ್ಟೇ ಸೈಜಿನ ಬಿಡಿಯಾದ ತಲಾ ಎರೆಡು ಗೊರಸುಗಳು. ನೀವು ಊಹಿಸಿದ ಹಾಗೆ ಅದ್ಯಾರೋ ಕಟುಕ ಈ ಮರಿಯನ್ನು ಕೊಲ್ಲಲು ದೊಣ್ಣೆ ಬೀಸಿದ್ದ. ಮರಿಯ ದೇಹದ ಹಿಂಭಾಗ ಸ್ವಾಧೀನದಲ್ಲಿಲ್ಲ.

ನಮ್ಮ ಸುಪರ್ಧಿಗೆ ಸಿಕ್ಕ ಈ ಚಿಕ್ಕದಾದ ಮತ್ತು ಪೆಟ್ಟುತಿಂದ ತಬ್ಬಲಿಯನ್ನು ಏನು ಮಾಡುವುದು ಎಂಬುದು ಈಗ ನಮ್ಮ ಮುಂದಿರುವ ಸವಾಲು. ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿರಬೇಕು ಹಾಗಾಗಿ ಮರಿಗೆ ನಿಲ್ಲಲು ಆಗುತ್ತಿಲ್ಲ ಎಂಬುದು ನಮ್ಮ ತರ್ಕ. ಸರಿ, ಹೊಟ್ಟೆಗೆ ಏನಾದರೂ ಹಾಕಬೇಕು, ಬೇಕಾಬಿಟ್ಟಿ ಬಿಡುವಂತಿಲ್ಲ, ಯಾವುದಾದರೂ ನಾಯಿ ಏಕೆ? ಬರೀ ಪೇಟೆಯ ಹೆಗ್ಗಣವೇ ಸಾಕು ನಿಸ್ಸಾಯಕ ಈ ಪ್ರಾಣಿಯನ್ನು ತಿಂದು ಮುಗಿಸಲು. ಸ್ನೇಹಿತರ ಫಾರಂಗೆ ತೆಗೆದುಕೊಂಡು ಹೋದೆವು. ಅಲ್ಲಿ ಬೇಕಾದ ವ್ಯವಸ್ಥೆಯನ್ನು ಕಲ್ಪಿಸುವುದು ಸುಲಭ. ಇಂತಹ ವಿಚಾರದಲ್ಲಿ ಹೆಗಡೆಯವರದೂ ಅತೀವ ಆಸಕ್ತಿ ಹೊಂದಿದ ಮನ:ಸ್ಥಿತಿ. ಅಲ್ಲಿ ತೆಗೆದುಕೊಂಡು ಹೋದೆವು. ಬಿದಿರಿನ ಸಣ್ಣ ಅಟ್ಟಣಿಗೆಯನ್ನು ನಿರ್ಮಿಸಿ ನಿಲ್ಲಿಸಿದ್ದು ಆಯಿತು. ನಡೆಯಲಾರದಂತಿದ್ದರೂ ಚಟುವಟಿಕೆಯಲ್ಲಿ ಎನೂ ಕಡಿಮೆಯಿರಲಿಲ್ಲ. ಹೊಟ್ಟೆಗೆ ಸಿಕ್ಕರೆ ಕುರಿ ಹಾಲನ್ನೇ ನೀಡುವ ಇಲ್ಲವಾದಲ್ಲಿ ದನದ ಹಾಲನ್ನು ನಿಪ್ಪಲ್ ಇರುವ ಬಾಟಲಿಯಲ್ಲಿ ಹಾಕಿ ಕುಡಿಸಿದರಾಯಿತು ಬದುಕಲು ಏನೂ ತೊಂದರೆಯಿಲ್ಲ. ಫಾರಂನಲ್ಲಿ ಎಲ್ಲರಿಗೂ ಖುಷಿಯಾಗಿತ್ತು. ಸೊಂಟ ಮುರಿದ ಸಣ್ಣ ಅತಿಥಿ ಎಲ್ಲರ ಮನ ಗೆದ್ದಿದ್ದ ನನಗೊಂದು ಸಂಶಯ ಕಾಡುತ್ತಲೇ ಇತ್ತು. ಬಹುಷ: ಹೊಟ್ಟೆಯ ಕೆಳಭಾಗದಲ್ಲಿ ಎಲ್ಲೋ ಹೊಡೆತ ಬಿದ್ದಿರಬೇಕು. ಪದೇ ಪದೇ ಮೂತ್ರ ಮಾಡುತ್ತಿತ್ತು. ಎತ್ತಿಕೊಂಡ ನನ್ನ ಅಂಗಿಯ ಮೇಲೆ ಮೂತ್ರ ಮಾಡಿದ ಕಮಟು ವಾಸನೆಯಿತ್ತು. ಅವುಚಿ ಹಿಡಿದು ಕೊಂಡಾಗ ನನ್ನ ಕೈ ಮೇಲೂ ಮೂತ್ರ ಮಾಡಿತ್ತು. ಸೋಪು ಹಾಕಿ ಕೈ ತೊಳೆಯುವವರೆಗೆ ಅದರ ಮೂತ್ರದ ಕಮಟು ಹೋಗಿರಲಿಲ್ಲ.

ಸಾಮಾನ್ಯವಾಗಿ ಪ್ರಾಣಿಶಾಸ್ತ್ರಜ್ಞರಿಗೆ ಥಿಯರಿ ಭಾಗ ಗೊತ್ತಿರುತ್ತದೆಯಷ್ಟೆ. ಹಾಗೆ ಜಾನುವಾರು ಡಾಕ್ಟರುಗಳಿಗೆ ವನ್ಯಜೀವಿಗಳ ಬಗ್ಗೆ ತಿಳಿದಿರಿವುದು ಅಷ್ಟಕಷ್ಟೆ. ಚಿಕಿತ್ಸೆ ನೀಡುವುದು ಕಷ್ಟಸಾಧ್ಯ. ಉಳಿದಂತೆ ಮರಿಯ ಆರೋಗ್ಯ ಚೆನ್ನಾಗಿಯೇ ಇದೆ. ಬಾಕಿ ವ್ಯವಸ್ಥೆಯನ್ನೆಲ್ಲಾ ಮಾಡಿಯಾಯಿತು. ತುಸು ಹಾಲು ಕುಡಿಯಿತು. ಸಣ್ಣಗೆ ನರಳಿದಂತೆ ಕೂಗಿತು ಕೂಡ. ಇಷ್ಟು ಮಾಡುವ ಹೊತ್ತಿಗೆ ರಾತ್ರಿ ಒಂಬತ್ತಾಯಿತು. ಮರುದಿವಸ ಜಾನುವಾರು ಡಾಕ್ಟರಿಗೆ ತೋರಿಸುವುದೋ ಅಥವಾ ವನ್ಯಜೀವಿ ಶಿವಮೊಗ್ಗ ವಿಭಾಗಕ್ಕೆ ಕಳುಹಿಸುವುದೋ ತೀರ್ಮಾನ ಮಾಡುವುದೆಂದು ನಿರ್ಧರಿಸಿ ಮನೆಗೆ ಬಂದೆವು.

ಗೋಡೆಯ ಮೇಲೆ ಐದಂಗುಲವಿದ್ದ ಕೋಡು ಕಾನುಕುರಿಯದು ಎಂದರು. ಮನುಷ್ಯನ ಅಭಿರುಚಿಗಳು ಎಂತೆಂತವಿರುತ್ತವೆ ನೋಡಿ. ಕಾನುಕುರಿ ಮಾಂಸ ತಿನ್ನುವವನಿಗೆ ಕೋಡು ವೇಷ್ಟ್. ತಿನ್ನದ ಈ ಮನುಷ್ಯನಿಗೆ ಅವೇ ಕೋಡುಗಳು ಅಲಂಕಾರಕ್ಕಾಗಿ ಬೇಕು. ಈಗಲೂ ಬಹಳಷ್ಟು ಮನೆಗಳಲ್ಲಿ ಜಿಂಕೆ, ಕಾಡುಕೋಣ, ಕಾನು ಕುರಿ ಕೋಡುಗಳು ರಾರಾಜಿಸುತ್ತವೆ. ವನ್ಯಜೀವಿ ಸಂರಕ್ಷಣೆಯ ಆಶಯವನ್ನು ಗೇಲಿ ಮಾಡುತ್ತಿರುತ್ತವೆ.

ಬೆಳಿಗ್ಗೆ ಅಷ್ಟೊತ್ತಿಗೆ ಎದ್ದು, ಫಾರಂ ಕಡೆ ಹೋಗಿ ನೋಡಿದರೆ ಬಿದಿರಿನ ಅಟ್ಟಣಿಗೆ ಮೇಲೆ ತಲೆ ವಾಲಿದ ಆ ಚಿಕ್ಕ ಕಾಡುಕುರಿಮರಿಯಯ ಶರೀರದಲ್ಲಿ ಉಸಿರೇ ಇಲ್ಲ. ಕ್ರೂರಿ ಮನುಷ್ಯನ ದುರಾಸೆಗೆದುರಾಗಿ ಬದುಕಲು ಹೋರಾಟ ನಡೆಸಿ ವಿಫಲವಾದ ಆ ಮೃತ ಶರೀರವನ್ನು ಅಲ್ಲೇ ಹೂತು ಹಾಕಿದೆವು. ಅದರ ನೆನಪಿಗಾಗಿಯೇ ಈ ಫ್ರೋಫೈಲ್ ಫೋಟೊ!!

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಕಾನು ಕುರಿಮರಿ: ಅಖಿಲೇಶ್ ಚಿಪ್ಪಳಿ

Leave a Reply

Your email address will not be published. Required fields are marked *