ನಡೆದೂ ನಡೆದೂ ಸುಸ್ತಾಗಿತ್ತು ಆಗಲೇ ಸುದೀರ್ಘ ಐದು ಘಂಟೆಗಳ ಕಾಲದ ದುರ್ಗಮ ಹಾದಿ ಸವೆದು ಹೋಗಿತ್ತು, ಅಬ್ಬಾ ಇನ್ನು ನಡೆಯಲಾಗುವುದಿಲ್ಲ ಎಂದು ಏದುಸಿರು ಬಿಡುತ್ತಾ ಕೂತಾಗ ಮೈ ತಾಗಿದ ತಣ್ಣನೆಯ ಮುತ್ತಿನಂತ ಮಂಜಿನ ಹನಿ ಸ್ಪೂರ್ತಿ ನೀಡಿ ಮತ್ತೆ ಮುಂದಡಿಯಿಡಲು ಸಹಕರಿಸಿತ್ತು. ಹಾಗೆಯೇ ಇನ್ನು ಸ್ವಲ್ಪ ದೂರ ಕ್ರಮಿಸಿದ ನಂತರ ಸಿಕ್ಕ ಸೌಂದರ್ಯದ ಗಣಿ ಆರು ಘಂಟೆಗಳ ಕಾಲದ ಹಿಂದಿನ ದುರ್ಗಮ ಹಾದಿಯಲ್ಲಿ ಸಾಗಿದ ಆಯಾಸವನ್ನೆಲ್ಲಾ ಮರೆಸಿ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿತ್ತು.
ಅಯ್ಯೋ ಇದೇನಿದು ಕಥೆ ಸ್ಟಾರ್ಟ್ ಮಾಡೋಕು ಮುಂಚೇನೇ ಕ್ಲೈಮ್ಯಾಕ್ಸ್ ಹೇಳ್ತಾ ಇದಾನಲ್ಲಪ್ಪಾ ಅನ್ಕೋತಾ ಇದಿರಲ್ಲಾ ಸಾರಿ ಸ್ವಲ್ಪ ಕ್ಯೂರಿಯಸ್ ಆಗ್ಲಿ ಅಂತ ಕಥೆ ಪ್ರಾರಂಭದ ನಾಲ್ಕು ಸಾಲಿನಲ್ಲಿ ಕ್ಲೈಮ್ಯಾಕ್ಸ್ ಹೇಳಿದೆ, ತಡೀರಿ ಈಗ ಅದ್ಭುತ ಯಾನದ ಸೊಗಸಾದ ರೋಚಕತೆನ ನಿಮಗೆಲ್ಲಾ ಹೇಳ್ತೀನಿ ಓಕೆ.
ಕಷ್ಟ ಪಟ್ಟು ಏನೋ ಒಂದು ಸಂಶೋಧನೆ ಅಂತ ಮಾಡಿ ಒಂದು ಸಣ್ಣ ಪ್ರಭಂದ ಬರೆದು ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಾಗಿತ್ತು, ಹಾಸ್ಟೆಲ್ ಇಂದ ಹೊರಗೆ ಹಾಕಿದ್ದ ನಮಗೆ ಆಸರೆ ಸಿಕ್ಕಿದ್ದು PhD.ಆ ಮಾಡ್ತಾ ಇದ್ದ ಸ್ನೇಹಿತರ ರೂಂನಲ್ಲಿ, ಕೆಲ್ಸ ಇಲ್ದೆ ಕೂತಿದ್ ನಮಗೆ ಇದ್ ಒಂದೆ ಒಂದು ಕೆಲ್ಸ ಅಂದ್ರೆ ದಿನಕ್ಕೆ ೨ ರಿಂದ ೩ ಸಿನಿಮಾ ನೋಡೊದು, ಯಾವುದೇ ಸಿನಿಮಾ ಸಿಕ್ರು ಪರಮಾನಂದ ಆಗ್ತಿತ್ತು, ೧೪ ಇಂಚಿನ ಲ್ಯಾಪ್ ಟಾಪ್ ಸ್ಕ್ರೀನ್ ದೊಡ್ಡ ಸಿನಿಮಾ ಮಂದಿರದ ಪರದೆನೂ ಮೀರ್‍ಸಿತ್ತು. ಗುಂಪಿನಲ್ಲಿ ಎಲ್ಲರೂ ಕೂತು ಕಾಮೆಂಟ್ ಹೊಡೀತ ನೋಡ್ತಾ ಇದ್ದ ಗುಲಾಬಿ ಟಾಕೀಸ್ ಫಿಲಂ ಕೂಡ ಜೇಮ್ಸ್ ಬಾಂಡ್ ಮೂವಿಗಿಂತ ಇಂಟರೆಸ್ಟಿಂಗ್ ಆಗಿರ್‍ತಿತ್ತು. ಹೀಗೆ ಒಂದು ಸಂಜೆ ಚಹ ಕುಡಿದು ಬಂದ್ ಮೈನಾ ಸಿನಿಮಾ ನೋಡ್ತಾ ಕೂತಿದ್ದಾಗ ತಕ್ಷಣ ಒಂದು ಟ್ರಿಪ್ ಪ್ಲಾನ್ ಆಗಿ ಹೋಯ್ತು… ಹಾ ಏನು ಅಂತ ನೀವ್ ಈಗ ಗೆಸ್ ಮಾಡಿರ್‍ತೀರ ಖಂಡಿತ,…ಯೆಸ್ ಅದೇ ’ದೂದ್ ಸಾಗರ್’ ಜಲಪಾತ.
ಹೀಗೆ ರೆಡಿ ಆದ ಪ್ಲಾನ್ ಸಕ್ಸಸ್ ಆಗಿ ಎಲ್ರೂ ರೆಡಿ ಆಗ್ ಹೋರಟು ಆಯ್ತು. ಊಟದ ವ್ಯವಸ್ಥೆ ಅಲ್ಲಿ ಸರಿಯಾಗ್ ಇಲ್ಲಾ ಅಂತ ೫೦ ಜೋಳದ ರೊಟ್ಟಿ ಜೊತೆಗ್ ಒಂದಿಷ್ಟು ಕೆಂಪು ಖಾರದ ಚಟ್ನಿ, ಚಿಪ್ಸು, ಬಿಸ್ಕೆಟ್ಟು ಮತ್ತು ನೀರು ಎಲ್ಲಾ ತಗೊಂಡು ಧಾರವಾಡದ ರೈಲ್ವೆ ನಿಲ್ದಾಣ ತಲುಪಿದ್ದಾಯ್ತು. ಪಾಪ ಹುಬ್ಬಳ್ಳಿಗೆ ಹೋಗಿದ್ದ ಸಂತ್ಯನ್ನ ಅರ್ಜೆಂಟ್ ಆಗಿ ಮಳೇಲೆ ಸ್ಟ್ರೈಟ್ ಆಗಿ ಧಾರವಾಡದ ರೈಲ್ವೆ ಸ್ಟೇಷನ್ ಗೆ ಬರೋಕೆ ಹೇಳಿ ಅವನು ಕೂಡ ಬಂದಾಗಿತ್ತು. ೧೦.೩೦ರ ಟ್ರೈನ್ ಬರೋ ಸಮಯ ಕೂಡ ಆಗೋಗಿ, ಪೂರ್ತಿ ಖಾಲಿ ಇದ್ದ ಟ್ರೈನ್ ನ ಕಷ್ಟ ಪಟ್ಟು ಹತ್ತಿ ಸೀಟ್ ಹಿಡಿಯೋಷ್ಟರಲ್ಲಿ ಅರ್ದ ಜೀವ ಹೋಗಿತ್ತು. ಆ ಜನರ ನೂಕು ನುಗ್ಲಲ್ಲಿ ಟ್ರೈನ್ ಧಾರವಾಡ ಬಿಟ್ಟಾಗ ೧೧ ಘಂಟೆ ದಾಟಿತ್ತು. ಧಾರವಾಡ ಬಿಟ್ಟ ನಾವು ನೇರವಾಗಿ ಯಾತನಾಮಯ ರೈಲು ಪ್ರಯಾಣದ ನಂತರ ತಲುಪಿದ್ದು ಲೋಂಡಾ ಜಂಕ್ಷನ್.
ಅಲ್ಲಿ ಇಳಿದು ನಾವು ಇನ್ನೊಂದು ಟ್ರೈನ್ ಹತ್ತಬೇಕಿತ್ತು, ಮಳೆ ಅಂತು ತನ್ನ ಪಾಡಿಗ್ ತಾನು ಅಂತ ಸುರಿತಾನೆ ಇತ್ತು. ಹೀಗಿರುವಾಗ ಬಂತು ನೋಡಿ ಮತ್ತೊಂದು ರೈಲು ಗಾಡಿ ನೋಡ್ತೀವಿ ಒಂದು ಸಣ್ಣ ಸೊಳ್ಳೆ ಕೂಡ ಸುಳಿಯೋಕೆ ಸಾದ್ಯ ಆಗದಷ್ಟು ಕಿಕ್ಕಿರಿದು ತುಂಬಿ ಹೋಗಿತ್ತು ಅಬ್ಬಾ ಹರ ಸಾಹಸ ಪಟ್ಟು ಟ್ರೈನ್ ಹತ್ತಿ ನಿಲ್ಲೋಕೆ ಜಾಗ ಮಾಡ್ಕೋಳೋ ಹೊತ್ತಿಗೆ ಅಲ್ಪ ಸ್ವಲ್ಪ ಉಳಿದಿದ್ದ ಜೀವ ಕೂಡ ಹಾರಿ ಹೋಗಿತ್ತು. ಒಂದ್ ಕಾಲಿನ ಮೇಲೆ ಒಬ್ಬರ ಉಸಿರು ಒಬ್ರಿಗೆ ತಾಗೋ ಅಷ್ಟು ಹತ್ರ ನಿಂತು ಸಾಗ್ತ ಇದ್ದ ಟ್ರೈನ್, ಹೊರಗೆ ಮೈ ಕೊರೆಯೋ ಅಂತ ಚಳಿ ಇದ್ರು ನಾವು ಮಾತ್ರ ಬೆವರು ಸುರಿಸ್ತಾ ನಿಂತಿದ್ವಿ. ಇಂತಾ ಇಕ್ಕಟ್ಟಾದ ಜಾಗದಲ್ಲೂ ಅದು ಹೇಗೊ ಜಾಗ ಮಾಡ್ಕೊಂಡು ಕೆಳಗೆ ಕೂತ ವೆಂಕಿ ಏಳೋಕು ಆಗ್ದೆ ಕೂರೋಕು ಆಗ್ದೆ ಪಟ್ಟ ಪಾಡಂತು ಹೇಳೊಕೆ ಸಾದ್ಯಾನೇ ಇಲ್ಲ. ಹೀಗೆ ೨ ಘಂಟೆಗಳ ಯಾತನಾಭರಿತ ಸವಾರಿಯ ನಂತರ ನಾವು ತಲುಪಿದ್ದು ಕರ್ನಾಟಕ ಮತ್ತು ಗೋವಾ ರಾಜ್ಯಗಳ ಗಡಿಯಲ್ಲಿರುವ ಕಾಸ್ಟಲ್ ರಾಕ್ ಎಂಬ ರೈಲ್ವೆ ನಿಲ್ದಾಣಕ್ಕೆ.
ಸಮಯ ಆಗ್ಲೆ ೪.೩೦ ಆಗಿತ್ತು, ಕಾಸ್ಟಲ್ ರಾಕ್ ನಿಲ್ದಾಣದಲ್ಲಿ ಟ್ರೈನ್ ಇಳಿದಿದ್ದು ಕೂಡ ಒಂದು ರೋಚಕ ಅನುಭವಾನೇ.. ಮಳೆ ಈಗ್ಲೂ ತನ್ನಷ್ಟಕ್ಕೆ ತಾನು ಅಂತ ಸೊಬಾನೆ ಹಾಡ್ತಾನೆ ಇತ್ತು, ಆದ್ರು ನಿದ್ದೆ ಕಣ್ಣಲ್ ಕಷ್ಟ ಪಟ್ಟ ಟ್ರೈನ್ ಇಳ್ದಿದ್ದ ನಮಗೆ ಮಳೆ ಕಡೆ ಗಮನ ಕಮ್ಮಿ ಆಗಿಹೋಗಿತ್ತು. ಹಾಗೆ ಆ ಮಳೇಲಿ ನಡಿತಾ ಪ್ಲಾಟ್ ಫಾರ್ಮ್ ಕಡೆ ಹೋಗ್ತಾ ಇದ್ದಾಗ ಬಾರಿ ಶಬ್ದ ಮಾಡಿ ಜಾರಿ ಬಿದ್ದ ಮಾರ್ಟಿನ್ ಎಲ್ಲರ ನಿದ್ದೆನೂ ಹೊಡೆದೋಡಿಸಿ ನಗಿಸಿದ್ದ. ಅಲ್ಲೆ ಕಾಸ್ಟಲ್ ರಾಕ್ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಮೇಲೆ ಕೂತು ಸ್ವಲ್ಪ ಹೊತ್ತು ಸುದಾರಿಸಿಕೊಂಡ್ವಿ, ಹೊರಗೆ ಹೋಗಿದ್ದ ನಾಗು ಮತ್ತು ಬಾಲು ರೆಸ್ಟ್ ತಗೋಳೋಕೆ ಒಂದು ಹಳೇ ಕಟ್ಟಡ ಹುಡುಕಿಕೊಂಡು ಬಂದಿದ್ರು.
ಆ ಕಟ್ಟಡದ ಹತ್ರ ಹೋಗಿ ಮಳೆಗೆ ಒದ್ದೆ ಆಗಿದ್ದ ಬಟ್ಟೆ ಬದಲಿಸಿ, ಒಂದು ಘಂಟೆ ಮಲಗಿ ಅಮೇಲೆ ಎದ್ದು ನಮ್ಮ ಪಯಣ ಪ್ರಾರಂಭ ಮಾಡೋದು ಅಂತ ಮಾತಾಡಿ ಮಲ್ಗಿದ್ ಎರಡೇ ನಿಮಿಷಕ್ಕೆ ಮಾರ್ಟಿನ್ನ ಗೊರಕೆ ಶುರು ಆಗಿತ್ತು. ಹಾಗೆ ಮೊದಲೇ ಸುಸ್ತಾಗಿದ್ದ ಎಲ್ಲರೂ ಮಲಗಿದ್ವಿ. ಬೆಳಗ್ಗೆ ಎದ್ದ ರಘು ಎಲ್ಲರನ್ನೂ ಎಬ್ಬಿಸಿದಾಗ ಸಮಯ ಕರೆಕ್ಟ್ ಆಗಿ ೬.೩೦ ಅಬ್ಬಾ ಲೇಟ್ ಆಯ್ತು ಅಂತ ಎಲ್ಲರು ಎದ್ದು ಬ್ರಶ್ ಮಾಡಿ ಹೊರಡೋ ಹೊತ್ತಿಗೆ ಸಮಯ ೭ ದಾಟಿತ್ತು. ಅಂತು ರೆಡಿ ಆಗಿ ನಮ್ಮ ಪಯಣ ಪ್ರಾರಂಭಿಸೋಕೆ ಅಂತ ಕಾಸ್ಟಲ್ ರಾಕ್ ನಿಲ್ದಾಣದ ಹತ್ರ ಬಂದ್ವಿ. ಕಾಸ್ಟಲ್ ರಾಕ್ ಕರ್ನಾಟಕ ರಾಜ್ಯದ ಗಡಿಯ ಕೊನೆ ರೈಲು ನಿಲ್ದಾಣ ಪಶ್ಚಿಮ ಘಟ್ಟಗಳಿಂದ ಆವೃತ್ತವಾಗಿರುವ ಬಹು ಸುಂದರ ಪುಟ್ಟ ನಿಲ್ದಾಣ, ಎತ್ತ ನೋಡಿದರು ಹಸಿರು, ಸ್ವಚ್ಚಂದ ನೀಲಾಕಾಶ ಬಿಡುವಿಲ್ಲಂದತೆ ಸುರಿಯುವ ಮಳೆ ಹಾಗಿದ್ರೂ ಊರಲ್ಲಿ ಮಬ್ಬು ಮಬ್ಬಾಗಿ ಹರಡಿದ್ದ ಕತ್ತಲು ಇನ್ನೂ ಏಳಾದರೂ ಹರಿದಿರಲಿಲ್ಲ ಆ ಮಬ್ಬು ಬೆಳಕಲ್ಲೇ ಕಾಣ್ತಾ ಇದ್ದ ನಿಸರ್ಗದ ರಮಣೀಯತೆನಾ ಕಣ್ಣು ತುಂಬಿಸಿಕೋತಾ ನಮ್ಮ ಹಾಗೇ ಅನೇಕ ತಂಡೋಪವಾಗಿ ಚಡ್ಡಿ, ಶೂ ದರಿಸಿ ಬಂದಿದ್ದ ಜನರ ಗುಂಪಿನ ಜೊತೆ ಬೆರೆತ ನಮ್ಮ ತಂಡ ಕೂಡ ಆಹ್ಲಾದಕರ ವಾತಾವರಣದಲ್ಲಿ ಸಣ್ಣಗೆ ಚಳಿಗೆ ಮೈ ನಡುಗುತಾ ಇದ್ರೂ ಗಮನಿಸದೆ ರೈಲ್ವೆ ಹಳಿಗಳ ಮೇಲೆ ಪುಟ್ಟ ಪುಟ್ಟ ಹೆಜ್ಜೆ ಹಾಕೊಕೆ ಪ್ರಾರಂಭಿಸಿತು.
ದಟ್ಟ ಹಸಿರಿನ ಕಾನನ, ಮಾನವನ ಗದ್ದಲದ ನಡುವೆಯೇ ಅವನಿಗೆ ಸವಾಲೆಸಿಯುವಂತಿದ್ದ ಕಾನನದ ನೀರವತೆ, ಭವದೆಲ್ಲಾ ಭವಣೆಯನ್ನು ಮರೆಸುವಂತಿತ್ತು. ಜಗದ ಇರುವಿಕೆಯ ಮರೆತಂತೆ ಸೌಮ್ಯವಾಗಿ ಹರೀತಿದ್ದ ಅಸಂಖ್ಯಾತ ಝರಿ – ತೊರೆಗಳು, ಅವುಗಳಿಗೆ ಅಡ್ಡವಾಗಿ ನಿರ್ಮಿಸಿರುವ ಸಣ್ಣ ಸಣ್ಣ ಸೇತುವೆಗಳು ಇವೆಲ್ಲವನ್ನು ನೋಡ್ತಾ ಅಲ್ಲಲ್ಲಿ ಒಬ್ಬೊಬ್ಬರಾಗಿ ನಾನು ನೀನು ಎಂದು ಪೈಪೋಟಿಯ ಮೇಲೆ ಫೋಟೊ ತೆಗಿಸಿಕೊಳ್ಳುತ್ತಾ ನಿಧಾನವಾಗಿ ಸಾಗ್ತಾ ಇರಬೇಕಾದ್ರೆ ಕಂಡ ಒಂದು ಸುಂದರ ಸಣ್ಣ ತೊರೆಯ ಬಳಿ ಕಾಲು ತೊಳೆಯಲೆಂದು ಇಳಿದಾಗ ಸದ್ದಿಲ್ಲದೆ ಹಿಂದಿನಿಂದ ಬರ್‍ತಾ ಇದ್ದ ಮಾರ್ಟಿನ್ ದಪ್ಪನೆ ಜಾರಿ ಬಿದ್ದು ತನ್ನ ಬೀಳೋ ಸರಣಿನಾ ಮುಂದುವರೆಸಿದ್ದಲ್ಲದೆ ಮತ್ತೆ ಎಲ್ರೂ ಹೊಟ್ಟೆ ಹಿಡ್ಕೊಂಡು ನಗೋ ಹಾಗ ಮಾಡಿದ್ದ.
ಮುಂದೆ ನಡಿತಾ ಇದ್ದಾಗ ಸಿಕ್ಕ ಒಂದು ಪುಟ್ಟ ಪಾಳು ಕಟ್ಟಡದ ಬಳಿ ನಿಂತ ನಾವು ಸ್ವಲ್ಪ ಹೊತ್ತು ಸುದಾರಿಸಿಕೊಂಡು ಧಾರವಾಡದಿಂದ ತಂದಿದ್ದ ಬುತ್ತಿ ಗಂಟು ಬಿಚ್ಚಿದ್ವಿ, ಆಗ್ತಾ ಇದ್ದ ಚಳಿಗೆ ಎರಡೆರಡು ರೊಟ್ಟಿ ಜೊತೆಗೆ ತಂದಿದ್ದ ಖಾರವಾದ ಕೆಂಪು ಚಟ್ನಿ ಸಕತ್ತಾಗಿತ್ತು, ತಂದ ರೊಟ್ಟಿ ತಿಂದು ನೀರು ಕುಡಿದು ಸುದಾರಿಸಿಕೊಂಡು ಹೊಟ್ಟೆ ತುಂಬಿದ್ದನ್ನ ಕಾತ್ರಿ ಮಾಡ್ಕೊಂಡು ತಂದ ಬುತ್ತಿ ಗಂಟನ್ನ ಮತ್ತೆ ಗಂಟ್ ಕಟ್ಟಿ ಎಲ್ರೂ ಹೊರಟಿದ್ದಾಯ್ತು. ಪಾಪ ಅವಸರದಿಂದ ಹುಬ್ಬಳ್ಳಿಯಿಂದ ಹಾಗೆ ಬಂದಿದ್ದ ಸಂತ್ಯನಿಗೆ ಶೂ ತರೋದನ್ನ ಮರೆತು ಂದಿದ್ವಿ ರೈಲು ಹಳಿಗಳ ನಡುವೆ ಚಪ್ಪಲಿ ಕಾಲಲ್ಲಿ ನಡಿಯೋಕೆ ಅವನು ಪಡ್ತಾ ಇದ್ದ ಕಷ್ಟನಾ ಹೇಳೋಕೆ ಆಗಲ್ಲ. ಮತ್ತೆ ಹೆಜ್ಜೆಗಳು ದಣಿಯೋ ಹಂತದಲ್ಲಿ ಇದ್ರೂ ತೋರಿಸಿಕೊಳ್ಳದೆ ರೈಲು ಹಳಿಗಳ ಮೇಲೆ ಸಾಗ್ತಾನೆ ಇದ್ವು. ನಿಸರ್ಗದ ನಡುವೆ ಇದ್ದ ನಮಗೆ ಸುರಿತಾನೇ ಇದ್ದ ಮಳೆ ಮೈಮೇಲೆ ಪನ್ನೀರು ಚೆಲ್ಲಿದ ತರಾ ಆಗ್ತಾ ಇತ್ತು, ಚಳಿ ಸುಳಿವೇ ಇಲ್ಲದ ಹಾಗೆ ಎತ್ತಲೋ ಓಡಿ ಹೋಗಿತ್ತು.
ಧೂದ್ ಸಾಗರ್ ಜಲಪಾತಕ್ಕೆ ಎರಡು ಮಾರ್ಗಗಳಿವೆ ಒಂದು ಕರ್ನಾಟಕದ ಭಾಗದ ಕಾಸೆಲ್ ರಾಕ್ ಕಡೆಯಿಂದ ಮತ್ತೊಂದು ಇತರೆ ಸಾರಿಗೆ ಮಾರ್ಗವಾಗಿ ತೆರಳಲು ಬಯಸುವ ಯಾತ್ರಿಗಳಿಗೆ ಬೆಳಗಾವಿಯಿಂದ ಗೋವಾ ರಾಜ್ಯದ ಕೊಲ್ಲೆಂಗೆ ತಲುಪಿ ಅಲ್ಲಿಂದ ಧೂದ್ ಸಾಗರ್ ಜಲಪಾತಕ್ಕೆ. ಎರಡರಲ್ಲಿ ಚಾರಣ ಪ್ರಿಯರಿಗೆ ಸೂಕ್ತ ಮಾರ್ಗವೆಂದರೆ ಕಾಸೆಲ್ ರಾಕ್ ಕಡೆಯಿಂದ, ನಿಜಕ್ಕೂ ಈ ಮಾರ್ಗ ಅತ್ಯದ್ಭುತ. ಒಂದರ ಹಿಂದೊಂದರಂತೆ ಹಸಿರ ಹೊದಿಕೆ ಹೊದ್ದಂತೆ ತೋರುತ್ತಿದ್ದ ಗಿರಿ ಶಿಖರಗಳ ಸಾಲು, ಹಸಿರ ಹಂದರದ ಕೆಳೆಗೆ ಮೈ ಚಾಚಿ ಮಲಗಿದಂತೆ ತೋರುವ ರೈಲು ಮಾರ್ಗ ನಿಜಕ್ಕೂ ವಿಸ್ಮಯದ ಮಡಿಲು. ಒಟ್ಟಿನಲ್ಲಿ ಕೊಲ್ಲೆಂ ಮಾರ್ಗಕ್ಕಿಂತ ನಿಸರ್ಗದ ಸೌಂದರ್ಯ ಸವಿಯಲಿಚ್ಚಿಸುವ ಸಾಹಸ ಪ್ರಿಯ ಚಾರಣಿಗರಿಗೆ ಕಾಸೆಲ್ ರಾಕ್ ಕಡೆಯಿಂದ ಇರುವ ಮಾರ್ಗವೇ ಅತೀ ಸೂಕ್ತ.
ಈ ಮಾರ್ಗದ ಮತ್ತೊಂದು ವಿಶೇಷವೆಂದರೆ ಹಸಿರು ಸೌಂದರ್ಯದ ಗಣಿಯ ನಡು ನಡುವೆ ಸಿಕ್ಕು ಪರಮಾತ್ಮನ ಸೃಷ್ಠಿಗೆ ಸವಾಲೆಂಬಂತೆ ಗೋಚರಿಸುವ ಮಾನವ ನಿರ್ಮಿತ ಸುರಂಗ ಮಾರ್ಗಗಳು. ಒಂದೋ ಎರಡೋ ಸುರಂಗಗಳಲ್ಲ ಬರೋಬ್ಬರಿ ೨೦ ರಿಂದ ೨೫ ಸುರಂಗ ಮಾರ್ಗಗಳು. ಈ ಸುರಂಗಗಳ ನಡುವೆಯೇ ದಿನನಿತ್ಯ ಅನೇಕ ರೈಲುಗಳು ಸಂಚರಿಸುತ್ತವೆ. ಕೆವೊಂದು ಸುರಂಗಗಳು ೩೦ ರಿಂದ ೫೦ ಮೀಟರುಗಳಷ್ಟು ಚಿಕ್ಕದಾಗಿದ್ದರೆ ಮತ್ತೆ ಕೆಲವು ೮೦೦ ಮೀಟರುಗಳಿಂದ ೧ ಕಿ.ಮೀ ಉದ್ದದವು. ಪ್ರತಿಯೊಂದು ಸುರಂಗ ಮಾರ್ಗವೂ ಕೂಡ ನಿಸರ್ಗದ ಒಡಲಾಳದ ಮೌನವ ಹೊತ್ತ ಪೃತಿಬಿಂಬದಂತೆ ಗೋಚರಿಸುತ್ತಿದ್ದವು. ಇಂತಹ ಸುರಂಗ ಮಾರ್ಗಗಳ ನಡುವಿನ ಪಯಣ ಅತೀ ಸುಂದರವಾಗಿತ್ತು.
ಸುರಂಗದ ನಡುವಿನ ಪಯಣ ಸಾಗುತ್ತಲೇ ಇತ್ತು, ಎದುರಾಯಿತು ನೋಡಿ ಮತ್ತೊಂದು ಮಾಯಲೋಕದಂತಿದ್ದ ಸುರಂಗ ಇದು ನಮ್ಮ ಪಯಣದಲ್ಲಿ ಸಿಕ್ಕ ಅತೀ ಭಯಾನಕ ಸುಂದರ ರೋಚಕ ಅನುಭವ ನೀಡೀದ ಸರಿಸುಮಾರು ಒಂದು ಕಿಲೋಮೀಟರುಗಳಷ್ಟು ಉದ್ದದ ಸುರಂಗ ಮಾರ್ಗ. ಅಮವಾಸ್ಯೆಯ ಕಗ್ಗತ್ತಲಿಗೆ ಸವಾಲೆಸದಂತಿತ್ತು ಆ ತಮ ತುಂಬಿದ ಸುರಂಗ ಮಾರ್ಗ. ಇರುಳುಗತ್ತಲೆಯ ಹಾದಿಯಲ್ಲಿ ಸಾಗಿದಂತೆ ಎಂದುಕೊಂಡು ಒಬ್ಬರ ಕೈ ಒಬ್ಬರು ಹಿಡಿದು ಮುಂದಡಿಯಿಟ್ಟೆವು. ಮೊದಲೇ ದಣಿದ ಕಾಲುಗಳು ಬೆದರಿಕೆ ಹುಟ್ಟಿಸುವಂತಿದ್ದ ಕತ್ತಲು, ಬೇರೆಯವರ ಚೀತ್ಕಾರ ಇಂತಹ ಸುಂದರ ಅನುಭವದ ನಡುವೆ ಎಷ್ಟು ನಡೆದರೂ ಕಾಣ ಸಿಗದ ಬೆಳಕು, ಬೆಳಕ ಹುಡುಕ ಹೊರಟ ಪತಂಗದ ತೆರದಿ ಕೈ-ಕೈ ಹಿಡಿದ ನಮ್ಮ ಬೆಳಕ ಹಿಡಿಯುವ ಆಟ ಸಾಗುತ್ತಲೇ ಹೋಗಿತ್ತು, ಅಂತೂ ಬೆಳಕ ಹಿಡಿದಿದ್ದೆವು ಸುರಂಗದ ಅಂತ್ಯಕ್ಕೆ ತಲುಪಿದ್ದೆವು ಬೆಳಕು ಕಣ್ಣ ಮುಂದಿತ್ತು ಹೆಜ್ಜೆ ಸವೆದಿತ್ತು. ಇಷ್ಟು ಹೊತ್ತಿಗಾಗಲೇ ನಮ್ಮ ಪಯಣ ಸರಿಸುಮಾರು ೩ ಘಂಟೆಗಳ ಕಾಲ ಕ್ರಮಿಸಿತ್ತು. ಅತೀ ಸಾಹಸಮಯ ಹಾದಿ ಕ್ರಮಿಸಿದ ನನಗೆ ಒಂದಂಶ ನಿಜಕ್ಕೂ ಸೋಜಿಗವೆನಿಸಿತ್ತು ಅದೇನೆಂದರೆ ೩ ಘಂಟೆಗಳ ಕಾಲದ ಹಾದಿ ಕ್ರಮಿಸಿದ ಕಾಲುಗಳು ಸುರಂಗದ ಕತ್ತಲೆಯ ನಡುವೆ ಹಳಿಗಳ ಮೇಲೆ ತನ್ನ ಲಯ ತಪ್ಪದೆ ಸಾಗಿದ್ದವು ಇದು ನಿಜಕ್ಕು ಈ ಸಂಗತಿ ಅದ್ಭುತವೆನಿಸಿತ್ತು.
ಇಂತಹ ಯಾತನಾಮಯ ಹಾದಿಯ ನಡುವೆ ಸುಮ್ಮನೆ ನಮ್ಮ ತಮಾಷೆಯ ಮಾತುಗಳಿಂದ ಆದ ಒಂದು ಅನಾಹುತವೂ ಕೂಡ ನಮ್ಮ ಪ್ರವಾಸದ ಮರೆಯಲಾಗದ ನೆನಪು. ಸಂತ್ಯ ತಮಾಷೆಗೆಂದು ಆಡಿದ ಮಾತು ನನ್ನ ತಾಳ್ಮೆ ಕೆಡಿಸಿತ್ತು ಕಲ್ಲಿನಲ್ಲಿ ಹೊಡೆಯ ಹೋದ ನನ್ನನ್ನು ಇತರರು ಸಮಾಧಾನ ಪಡಿಸಿದ್ದರು. ಅಂತೂ ಪ್ರವಾಸದ ಅಂತ್ಯದವರೆಗೂ ನಮ್ಮಿಬ್ಬರ ಪಯಣ ಮಾತಿಲ್ಲದೆ ಸಾಗಿದ್ದೂ ನಿಜಕ್ಕೂ ಬೇಸರದ ಸಂಗತಿ.
ಪ್ರವಾಸದ ಇನ್ನು ಕೇಲವು ರೋಚಕ ಹಾಸ್ಯಭರಿತ ಪ್ರಸಂಗಗಳನ್ನು ನಿಮಗೆ ಹೇಳದಿದ್ದರೆ ಈ ಪ್ರವಾಸ ಕಥನ ಬೊರೆ ಹೊಡಿಸಬಹುದು. ನಮ್ಮ ಗುಂಪಿನಲ್ಲಿದ್ದ ವೆಂಕಿ ಅದ್ಭುತ ಕಲಾವಿದ ಛಾಯಾಚಿತ್ರ, ಚಿತ್ರ ರಚನೆ ಮತ್ತು ಮಣ್ಣಿನ ಕಲಾಕೃತಿಗಳ ತಾಯಾರಿಕೆಯಲ್ಲಿ ಅವನದು ಯಾವಾಗಲೂ ಸಿದ್ಧ ಹಸ್ತ ಹಾಗಿದ್ದರೂ ನಮ್ಮ ವೆಂಕಿಯ ಮರೆಗುಳಿತನ ನಿಧಾನ ಪೃವ್ರತ್ತಿ ನಿಜಕ್ಕೂ ಎಲ್ಲರಿಗೂ ಉತ್ತಮ ಮನರಂಜನೆಯನ್ನು ನಮ್ಮ ಪ್ರಯಾಣದುದ್ದಕೂ ನೀಡಿತ್ತು. ಸಿಂಗಲ್ ಫೋಟೋ ತೆಗೆಸಿಕೊಳ್ಳಲು ಹೋದ ಅವನನ್ನು ಅವನೇ ಫೋಟೋದಲ್ಲಿಲ್ಲದಂತೆ ತೆಗೆದು ಮಗುವಂತೆ ಅತ್ತು ಎಲ್ಲರನ್ನೂ ನಗಿಸಿದ್ದ ನಮ್ಮ ಪುಟಾಣಿ (ಕೇವಲ ಗಾತ್ರದಲ್ಲಿ) ವೆಂಕಿ.
ಒಟ್ಟಾಗಿ ಸಾಗುತ್ತಿದ್ದ ನಮ್ಮ ಗುಂಪಿನ ಮ್ಯಾರಾಥಾನ್ ನಡಿಗೆಯಲ್ಲಿ ವೆಂಕಿ ಮತ್ತು ರವಿ ಮೊದಲ ಸ್ಥಾನ ಕಾಯ್ದುಕೊಂಡಿದ್ದರೆ ಸತೀಶ, ಯಲ್ಲಪ್ಪ, ಸಂತ್ಯ, ನಾಗು, ಬಾಲು, ಬಸ್ಯ ಮತ್ತು ನಾನು ನಡುವಿನ ಸ್ಥಾನ ಕಾಯ್ದುಕೊಂಡಿದ್ದೆವು ಇನ್ನು ಕೊನೆಯಲ್ಲಿ ನಮ್ಮ ಹೀರೋಗಳಾದ ರಘು ಮತ್ತು ಮಾರ್ಟಿನ್. ಅಬ್ಬಾ ಇನ್ನೆಷ್ಟು ದೂರ ಅಂತ ಎಲ್ಲಾರು ಗೊಣಗುತ್ತಾ ನೂರು-ನೂರು ಹೆಜ್ಜೆಗಳಿಗೊಮ್ಮೆ ಕೂತು ಧಣಿವಾರಿಸಿಕೊಳ್ಳುತ್ತಾ ಸಾಗ್ತಾ ಇದ್ದ ನಮ್ಮ ಗೆಳೆಯರ ತಂಡಾನ ಕಾಸ್ಟಲ್ ರಾಕ್ ಕಡೆಯಿಂದ ಪ್ರಯಾಣ ಬೆಳಸಿದ್ದ ಕಟ್ಟ ಕಡೇ ತಂಡ ಕೂಡ ಓವರ್ ಟೇಕ್ ಮಾಡಿ ಮುಂದೆ ಹೋಗಿತ್ತು.
******
(ಮುಂದುವರೆಯುವುದು…)
nice..
Nice 🙂
Thanks dear………
Thanks Dear, The words used by u were really gave life to this article, While reading this article my eyes were full of tears,,,,,,,,,i m waiting for next part so please write as soon as possible…….
Hey please write about our hostel life yar (Chetana block, TV Hall, daily activities, cricket in vikas block ground……..u use all these words in ur article…….
Thanks a lot dear,…………..
[…] ಇಲ್ಲಿಯವರೆಗೆ […]