ಲೇಖನ

ಕಾದಿದೆ ಈ ಮನ ಪ್ರಮೋಷನ್ ಗಾಗಿ: ಚೈತ್ರ ಎಸ್.ಪಿ.

ಎಂದಿಗೂ ವೈವಾಹಿಕ ಜೀವನದ ಕನಸು ಕಂಡವಳಲ್ಲ. ಇಂದು ಕಂಡೆ. ಒಬ್ಬ ಪರಿಪೂರ್ಣ ಮಹಿಳೆಯಾಗಿ ನಾನು ನನ್ನ ಪೂರ್ಣ ಪೂರ್ಣವಾಗಿ ತನ್ನ ಜೀವನವನ್ನು ಸಂತೊಷದಿಂದ ಕಳೆಯುವ ಕನಸ ಕಂಡೆ. ಸಣ್ಣ ಸಣ್ಣ ಕನಸುಗಳು. ಅದು ನಸುಕಿನ ಮಂಜಿನಲ್ಲಿ ಅವನ ಬಿಟ್ಟೇಳಲು ಮನಸ್ಸಿಲ್ಲದಿದ್ದರೂ ತಬ್ಬಿದ ಅವನ ಕೈಯನ್ನು ಬಿಡಿಸಿ ಅವನ ಕಾಲುಗಳಿಗೊಂದು ಸಿಹಿ ಮುತ್ತಿಟ್ಟು ದಿನದ ಕೆಲಸ ಪ್ರಾರಂಭ ಮಾಡುವುದೇ ಅಗಿರಬಹುದು. ಮಾತೃ ಸಮಾನವಾಗಿ ನೋಡುವ ನನ್ನ ಪ್ರೀತಿಯ ಗೋವುಗಳ ಸೇವೆಗೆ ಅವನು ಕೊಟ್ಟ ಪ್ರೋತ್ಸಾಹಕ್ಕೆ ಪ್ರತಿಯಾಗಿ ನಾ ಅವುಗಳೊಂದಿಗೆ ಕಳೆಯಬೇಕೆಂದು ಅಂದುಕೊಡಿರುವ ಆ ಕ್ಷಣಗಳಿರಬಹುದು. ಅಪ್ಪ-ಅಮ್ಮನಿಗಿಂತ ಹೆಚ್ಚಾದ ಅತ್ತೆ-ಮಾವಂದಿರ ಸೇವೆ ಮಾಡಬೇಕೆಂದಿರಬಹುದಿರಬಹುದು. ನನ್ನ ಪ್ರೀತಿಯ ಕಾಟನ್ ಲಂಗ ತೊಟ್ಟು, ದಪ್ಪದ ಗೆಜ್ಜೆ ತೊಟ್ಟು ದೊಡ್ಡ ಹಳ್ಳಿಯ ಮನೆಯಲ್ಲಿ ಒಳಗಿಂದ ಹೊರಗೆ ಅವನನ್ನು ಕಾಡಿಸುತ್ತಾ ಅಮ್ಮನ ಹಿಂದೆ ಸುತ್ತುವ ಮಗಳಂತೆ ಓಡಾಡುವುದಿರಬಹುದು ! 

ಅಬ್ಬಾ !! ಹೆಚ್ಚಾಯಿತೇನೋ ನನ್ನ ಕನಸುಗಳು. ಇನ್ನೂ ಇವೆ, ಅಡಿಗೆಯಲ್ಲಿ ಏನೂ ಇರದ ಆಸಕ್ತಿ ಇಂದು ಎಲ್ಲರಿಗೂ ಹದ ಹೇಳುವ ಮಟ್ಟಿಗೆ ಬಂದಿದೆ. ಮುಂಜಾನೆದ್ದು ಘಮ-ಘಮಿಸುವ ಟೀ ಕುಡಿಯುತ್ತಾ ಕುಳಿತವನ ತುಟಿಯಂಚಲ್ಲಿ ಬೆಳಗಿನ ಜಾವದ ರಸಿಕತೆಗೆ ಸಾಕ್ಷಿಯಾದ ಹೂ ಮುತ್ತಿನ ಘಮವಿನ್ನೂ ಆರಿರುವುದಿಲ್ಲ. ಆಗಿನ್ನೂ ಸ್ನಾನದ ಹಸಿ ಮೈಯಲ್ಲಿ ಬಂದ ನನ್ನನ್ನು ಕಂಡ ಅವನ ಮನಸ್ಸಲ್ಲೇನೋ ಹೇಳಲಾಗದ ಭಾವ. ಅವನಿಷ್ಟದ ತಿಂಡಿ ಮಾಡಿಟ್ಟು, ಕೆಲಸಕ್ಕೆಂದು ಹೋಗುವ ಅವನ ತಯಾರಿಯೊಂದಿಗೆ, ಸಂಜೆಯ ವರೆಗೆ ಅವನ ಬಿಟ್ಟಿರಲಾಗದೆ ಒದ್ದಾಡುವ ನನ್ನ ಮನಸ್ಸ ಅರಿತ ಅವ ಬಂದು ಮುದ್ದಾಡುವಾಗ ಈ ಜೀವ ನಿನಗಾಗೇ ಎಂದು ಕೂಗಿ ಹೇಳುವ ಮನಸ್ಸು. 

ಅವನ ಕನಸುಗಳಿಗೆ ಮೆಟ್ಟಿಲಾಗುವ ,ಅವನ ಆಸೆಗಳಿಗೆಲ್ಲಾ ಭಾವ, ಅವನ ಸಂತೋಷಕ್ಕೆಲ್ಲಾ ಸಾಕ್ಷಿ, ದುಃಖಕ್ಕೆ ಮಡಿಲು. ಸಿಟ್ಟಿಗೆ ಬೀಸುವ ತಂಗಾಳಿಯಾಗಿ, ಕಷ್ಟಕ್ಕೆ ಹೆಗಲಾಗಿ, ಮನ್ಮಥನಿಗೆ ರತಿಯಾಗಿ ಅವನ ಅರ್ಧಾಂಗಿಯಾಗಿ ಉಳಿದ ಜೀವನದ ಸಾರ್ಥಕ್ಯ ಪಡೆಯುವ ಆಸೆ ಹುಟ್ಟಿದೆ. ಯಾರಲ್ಲೂ ಬಗ್ಗದ ವ್ಯಕ್ತಿತ್ವದ ಆತ ನನ್ನ ಪ್ರೀತಿಗೆ ಸೋತ. ನನ್ನ ಮಗುವಂತೆ ಕಂಡ. ತಪ್ಪನ್ನು ಕ್ಷಮಿಸಿ ತಿದ್ದಿದ. ಯೋಚಿಸಲೂ ಪಡುತ್ತಿದ್ದ ಕಷ್ಟಕ್ಕೆ ಮರುಗಿದ. ಇದಕ್ಕೆ ಪ್ರತಿಯಾಗಿ ಏನು ಕೊಡಬೇಕೆಂದೇ ತಿಳಿಯದೇ ಕೊಟ್ಟೆ, ನನ್ನಿಂದಾಗುವಷ್ಟು ಪ್ರೀತಿ.

ಸಂಜೆ ಬಂದ ಅವನ ದಣಿದ ಮನಸ್ಸಿಗೆ ಕಿವಿಯಾಗಬೇಕು. ಹಸಿದ ಹೊಟ್ಟೆಗೆ ಆಹಾರವಾಗಬೇಕು. ಬೆಳಗಿನಿಂದ ನನ್ನ ಜವಾಬ್ದಾರಿಯಲ್ಲಿದ್ದ ನನ್ನ ಮನೆ, ಅಪ್ಪ-ಅಮ್ಮಂದಿರನ್ನು ಕ್ಷೇಮವಾಗಿ ಅವನ ಕಣ್ಣ ಮುಂದಿರಿಸಿದಾಗ ಅವನ ಕಣ್ಣಿನ ಆ ತೃಪ್ತಿಯನ್ನು ಕಾಣಬೇಕು. ಅವನ ದಣಿದ ದೇಹಕ್ಕೆ ತಂಪಾಗುವಷ್ಟು ಮಧುವ ಉಣಬಡಿಸಬೇಕು. ರಾತ್ರಿ ಕನಸಲ್ಲೂ ನನ್ನ ನೆನೆಸುವಷ್ಟು ಪ್ರೀತಿಸಬೇಕು. ಹೀಗೇ, ಏನೇನೋ ಅತಿರೇಕಗಳು ನನ್ನವು. ಆದರೆ ಪ್ರಾಕ್ಟಿಕಲ್ ಲೈಫ಼್ ಅನ್ನೋದೇ ಬೇರೆ ಇರಬಹುದು. ನಾ ಕಂಡ ಕನಸುಗಳೆಲ್ಲಾ ಸಾಕಾರವಾಗದೇ ಇರಬಹುದು ಎಂಬ ನೆಲೆಯಿಂದಲೂ ನಾ ಯೋಚಿಸಿದರೆ ಆಗ ಏನೂ ಹೊಳೆಯದೆ ಎಲ್ಲಾ ಶೂನ್ಯವಾಗುತ್ತದೆ. ಕತ್ತಲ ರಾತ್ರಿ, ನೀರಸ ಬದುಕು, ಹಳ್ಳಿಯ ಏಕತಾನತೆ ಬೋರ್ ಹೊಡೆಸಬಹುದು. ಇದೆಲ್ಲವ ಮೀರಿ ನಿಂತು ನನ್ನ ಬದಕಿನ ಕನಸನ್ನು ಸಾಕಾರವಾಗಿಸುವ ಹೊಣೆ ನನ್ನಲ್ಲಿದೆ. ನನ್ನೊಳಗಿನ ಹೆಣ್ಣು ಪ್ರೊಮೋಶನ್ ಗಾಗಿ ಕಾಯುತ್ತಾ ಇದ್ದಾಳೆ !!


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕಾದಿದೆ ಈ ಮನ ಪ್ರಮೋಷನ್ ಗಾಗಿ: ಚೈತ್ರ ಎಸ್.ಪಿ.

Leave a Reply

Your email address will not be published. Required fields are marked *