ಎಸ್.ಎಸ್.ಎಲ್.ಸಿ, ಹಾಗೂ ಪಿ.ಯೂಸಿ ಪರೀಕ್ಷೆಗಳೆಲ್ಲಾ ಮುಗಿದು, ಸಿ.ಇ.ಟಿ ಯೂ ಮುಗಿಯಿತು.. ರಜೆಯೆಲ್ಲಾ ಅರ್ಧ ಖಾಲಿಯಾಗುತ್ತಾ ಬಂತು. ಕಾತರಿಯಿಂದ ಕಾಯುತ್ತಿದ್ದ ಮನಸುಗಳಿಗೆ ಇನ್ನೇನು ರಿಸಲ್ಟಿನ ಭಯ. ಒಂದು ಕಡೆ ತಾನೇ ಇಡೀ ಶಾಲೆಗೆ, ಕಾಲೇಜಿಗೆ ಮೊದಲ ರ್‍ಯಾಂಕ್ ಬಂದೇ ಬರುತ್ತೇನೆಂಬ ಭರವಸೆಯ ಮನಸ್ಸುಗಳಿದ್ದರೆ, ಇನ್ನೊಂದು ಕಡೆ ಅಯ್ಯೋ ದೇವರೆ ಇದೊಂದು ಸಲ ಪಾಸ್ ಮಾಡಪ್ಪ ಎಂದು ಬೇಡಿಕೊಳ್ಳುವ ಮನಸುಗಳು.. ಬದುಕಿನ ಒಂದೊಂದು ಮೆಟ್ಟಿಲುಗಳನ್ನೇ ಹತ್ತುತ್ತಾ ಹತ್ತುತ್ತಾ ಗುರಿಮುಟ್ಟುವ ತವಕದಲ್ಲಿ ಯುವಜನತೆಯು ದಾರಿಯನ್ನು ಹುಡುಕುತ್ತಿದೆ.. ಆಯ್ಕೆ ಮಾಡಿಕೊಳ್ಳಲಿದೆ. ಇಷ್ಟದ ವಿಷಯವೂ ಈ ಸಲ ಕಷ್ಟ ಬಂದಿದೆ. ಎಂದು ಹೇಳೋ ಕೆಲವು ಮುಖಗಳು, ಏನೂ ಓದಿರಲಿಲ್ಲ ಆದರೂ ಪರೀಕ್ಷೆ ಚನ್ನಾಗಿಯೇ ಆಯಿತು ಎಂದು ಸಂತಸ ಪಡುವ ಕಂಗಳಿಗೆ ಲೆಕ್ಕವೇ ಇಲ್ಲ. ಒಂದೊಮ್ಮೆ ಇದೆಲ್ಲವೂ ಮುಗಿದರೆ ಸಾಕು ಎಂಬ ಪಾಲಕರ ಗೊಂದಲಗಳು. ನನ್ನ ಮಗಳು ಅಷ್ಟು ಅಂಕ ಪಡೆದಿದ್ದಾಳೆ ಇಷ್ಟು ಅಂಕ ಪಡೆದಿದ್ದಾಳೆ ಎಂದು ನೆಂಟರಿಷ್ಟರ, ಪರಿಚಯಸ್ಥರ ಮುಂದೆ ಹೊಗಳಿಕೊಳ್ಳಲು ಕಾಯುತ್ತಿರುವ ಅವರ ಮನಸ್ಸಿಗೂ ಒಂದಷ್ಟು ಆತಂಕ..
ಇಷ್ಟು ದಿನ ಜೊತೆಗಿದ್ದ ಗೆಳತಿಯನ್ನು ಬಿಟ್ಟು ಹೋಗೋ ಬೇಸರ. ಮುಂದೆ ಎಲ್ಲಿ ಹೋಗುವುದೋ ಎಂಬ ಗೊಂದಲ. ಯಾವ ಕಾಲೇಜು ಸೇರಿಕೊಳ್ಳಬೇಕೆಂದು ಅಂತರ್ಜಾಲದಲ್ಲಿ ಹುಡುಕಿ ನಿರ್ಧರಿಸಿದ ಆತ್ಮವಿಶ್ವಾಸಿಗಳು. ನಮ್ಮನೆ ಮಗಳು ಓದಿದರೆ ತುಂಬಾ ಜಾಣೆ ಎಂದು ಹೇಳಿಕೊಳ್ಳುವ ಅಪ್ಪ ಅಮ್ಮಂದಿರ ಸಾಲುಗಳಿಗೂ ಕಡಿಮೆಯಿಲ್ಲ.. ಮ್ಯಾನೇಜ್‌ಮೆಂಟ್ ಸೀಟುಗಳೆಂಬ ಹೆಸರಿನಲ್ಲಿ ಲಕ್ಷಗಟ್ಟಲೆ ಹಣವನ್ನು ತೆಗೆದುಕೊಳ್ಳಲು ಮತ್ತಷ್ಟು ಕಾಯುತ್ತಿರುವ ಹಲವು ಖಾಸಗಿ ಕಾಲೇಜುಗಳು. ಇವೆಲ್ಲದರ ನಡುವೆ ಬದುಕಿನ ತಿರುವನ್ನು ನಿರ್ಧರಿಸೋ ಕೋರ್ಸುಗಳು..ವರುಷದಿಂದ ವರುಷಕ್ಕೆ ಕೋರ್ಸುಗಳು ಬದಲಾದರೂ, ಈ ಗೊಂದಲಗಳು ಮಾತ್ರ ಎಂದಿಗೂ ಪೂರ್ಣವಿರಾಮವಿಲ್ಲದೇ ಇರುವಂಥದ್ದು. ಕೋಚಿಂಗ್ ಕ್ಲಾಸ್‌ಗಳಿಗೆಂದು ಹಲವಾರು ಸಾವಿರಗಳನ್ನು ಕಟ್ಟಿ ಹೋಗುತ್ತಿರುವವರು ಒಂದು ಕಡೆ, ಫೀಸನ್ನು ಹಾಗೋ ಹೀಗೋ ಕಟ್ಟಿ, ಪಾರ್ಟ್ ಟೀಮ್ ಕೆಲಸ ಮಾಡಿಕೊಂಡು ತಡರಾತ್ರಿಯವೆರೆಗೂ ಕುಳಿತು ಓದುವ ಪ್ರತಿಭಾನ್ವಿತರ ಗುಂಪುಗಳಿಗೇನೂ ಕಡಿಮೆಯಿಲ್ಲ. ಕಾಫೀ ಚೀಟಿ ಮಾಡಿಕೊಂಡು ಡಿಬಾರ್ ಆದ ವ್ಯಕ್ತಿಗಳು ಹೆಚ್ಚಲ್ಲದಿದ್ದರೂ ಕಡಿಮೆಯಾದರೂ ಇದ್ದೇ ಇರುತ್ತಾರೆ.
ಅಪ್ಪ ಅಮ್ಮಂದಿರ ಒಂದಷ್ಟು ಕನಸುಗಳು.. ಅದರ ಒತ್ತಡದ ಹೊರೆ ಮಕ್ಕಳ ಮೇಲೆ.. ನೀನು ಇದೇ ಕೋರ್ಸನ್ನು ಓದಬೇಕು.. ಆ ಕೋರ್ಸು ಓದಿದರೆ ಅಷ್ಟೊಂದು ದೊಡ್ಡ ಕೆಲಸ ಸಿಗುವುದಿಲ್ಲ ಎಂಬ ಪೂರ್ವಾರ್ಜಿತ ನಿಲುವುಗಳಿಂದ ಎಲ್ಲವನ್ನೂ ಕಟ್ಟಿ ಹಾಕಿಬಿಡುತ್ತಾರೆ. ಇಷ್ಟವಿಲ್ಲದ ಕೋರ್ಸನ್ನು ಆಯ್ಕೆ ಮಾಡಿಕೊಂಡವರು ಮುಗಿಸಲಾಗದೇ ಕಷ್ಟಪಡುತ್ತಾರೆ.. ಬೆಲೆ ಇಲ್ಲದ ಕ್ಷೇತ್ರ ಯಾವುದಿದೆ ಹೇಳಿ. ಚನ್ನಾಗಿ ಓದಿದರೆ, ವಿಷಯದ ಆಳವನ್ನು ಅರಿತರೆ ಎಲ್ಲಾ ವಿಷಯಗಳೂ ಚಂದವೇ. ಆಸಕ್ತಿ ಇರಬೇಕಷ್ಟೇ.. ಯಾರಿಗೆ ಗೊತ್ತು..ಯಾರು ಯಾವ ಕ್ಷೇತ್ರದಲ್ಲಿ ತಾರೆಯಾಗುತ್ತಾರೆಯೋ ಎಂಬುದು. ಮುಂದುವರೆಯುವುದು ಮಾತ್ರ ಅವರ ಕೆಲಸ.. ಮತ್ತೆ ಮತ್ತೆ ಬದುಕು ಎಲ್ಲವನ್ನೂ ಕೊಡಲಾರದು. ಅವಕಾಶವನ್ನೂ ಸಹ. ಎಲ್ಲೋ ಅಡಗಿಸಿಟ್ಟ ಕನಸುಗಳಿಗೆ ರೆಕ್ಕೆ ಬರುವುದೋ, ಅಥವಾ ಚಾಪೆಯಡಿ ನುಸುಳಿಕೊಂಡು ಹೋಗುವುದೋ ಯಾರಿಗೂ ಗೊತ್ತಿಲ್ಲ. ಮತ್ತೆ ಮತ್ತೆ ಬದುಕು ಪರಿಪೂರ್ಣವಾಗಿದೆ.
ಎಲ್ಲರ ಕನಸಿನ ಅಂಗಳದಲ್ಲಿ ನಿಂತು ಬಾನಲ್ಲಿ ಬಂದ ಹುಣ್ಣಿಮೆಯ ಚಂದಿರನೂ ಬಿಳಿಯಾಗಿಯೇ ಇರುತ್ತಾನೆಂದು ನಿರೀಕ್ಷೆಗಳು. ಕಳೆದು ಹೋಗುವ ದಿನಗಳನ್ನು ಕಟ್ಟಿ ಹಾಕಿ ಕೂರಿಸುವ ಮಷಿನ್‌ಗಳು ಇನ್ನೂ ಯಾವುದೂ ಬಂದಿಲ್ಲ.. ಪ್ರತೀ ವರುಷವೂ ಒಂದು ಬ್ಯಾಚನ್ನು ಬೀಳ್ಕೊಡುವ ಶಾಲಾ ಕಾಲೇಜಿನ ಗೋಡೆಗಳು ಮೌನತಾಳಿ ಕುಳಿತುಬಿಟ್ಟಿವೆ. ಬೇಸಿಗೆ ರಜೆಯ ಮೋಜು ಮಸ್ತಿಯಲ್ಲಿ ಕಳೆದುಹೋಗುವ ಪುಟ್ಟ ಹೃದಯಗಳ ಖುಷಿಯು ಅವರ್ಣನೀಯ. ಹಾಸ್ಟೇಲಿನ ಅಡುಗೆಯ ಆಂಟಿಗೂ ಹಲವಾರು ವಿದ್ಯಾರ್ಥಿಗಳನ್ನು ಬೀಳ್ಕೊಟ್ಟ ನೆನಪು. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ದಾಟುವಾಗ ಕನಸುಗಳ ಚಿಗುರು. ರಿಸಲ್ಟ್ ಬಂದ ಕ್ಷಣದಿಂದಲೇ ಆ ಪ್ರಶ್ನೆಗಳಿಗಿಂತಲೂ, ಜನರು ಕೇಳುವ ಹಲವಾರು ಪ್ರಶ್ನೆಗೆ ಉತ್ತರಿಸುವುದೇ ಕಷ್ಟ. ಹೊಗಳಿಕೆಗಳೋ ಟೀಕೆಗಳೋ ಆ ಸಮಯಕ್ಕೆ ನಡೆದುಹೋಗುತ್ತದೆ.. ಆಯ್ಕೆ ಮಾಡಿಕೊಂಡ ಹಾದಿ ಮಾತ್ರ ಕಲ್ಲುಮುಳ್ಳುಗಳಿಲ್ಲದೇ ಸಾಗಬೇಕೆಂದು ಎಲ್ಲರದ್ದೂ ನಿರೀಕ್ಷೆಗಳು..
*****
ಬರವಣಿಗೆ ತುಂಬಾ ಚೆನ್ನಾಗಿದೆ. ಇಷ್ಟ ಆಯ್ತು.
dhanyavadagalu 🙂
ವಾಸ್ತವ ಸತ್ಯ, ಉತ್ತಮ ನಿರೂಪಣೆ. ಚೆನ್ನಾಗಿದೆ.
ಶುಭವಾಗಲಿ.
dhanyavaadagalu 🙂