ವಾಸುಕಿ ಕಾಲಂ

ಕಾಣೆಯಾದ ಕೈನಿ: ವಾಸುಕಿ ರಾಘವನ್


ಮಂತ್ರಿ ಮಾಲ್ ಇಂದ ಹೊರಗೆ ಬಂದಾಗ ರಾತ್ರಿ ಎಂಟೂ ಇಪ್ಪತ್ತು ಆಗಿತ್ತು. ಹಿಂದಿನ ದಿನ ಆಲ್ಟರೇಶನ್ನಿಗೆ ಕೊಟ್ಟಿದ್ದ ಪ್ಯಾಂಟ್ ಇಸ್ಕೊಂಡು ಬರೋಕೆ ಕೇವಲ ಹದಿಮೂರು ನಿಮಿಷ ತೆಗೆದುಕೊಂಡಿತ್ತು. ಕೈಯಲ್ಲಿದ್ದ ಹೆಲ್ಮೆಟ್ಟನ್ನು ಗುರಾಣಿಯಂತೆ ಬಳಸಿ, ಸಂಪಿಗೆ ರೋಡಿನ ನಾನ್ ಸ್ಟಾಪ್ ವಾಹನಗಳೆಂಬ ಚಕ್ರವ್ಯೂಹವನ್ನು ಭೇದಿಸಿಕೊಂಡು ಗೋಕುಲ್ ಹೋಟೆಲ್ ಮುಂದೆ ಬಂದೆ. ಹಿತವಾದ ಬೆಂಗಳೂರಿನ ತಂಗಾಳಿ ಮುಖಕ್ಕೆ ಬಡಿದು ಆ ದಿನದ ಸುಸ್ತೆಲ್ಲಾ ಒಂದು ಕ್ಷಣ ಮಾಯವಾದಂತೆ ಅನಿಸಿತು. ನಾನು ಗಾಡಿ ನಿಲ್ಲಿಸಿದ್ದ ಜಾಗಕ್ಕೆ ಬಂದು ನಿಂತಾಗ ಅಲ್ಲಿನ ದೃಶ್ಯ ನೋಡಿ ಬೆಚ್ಚಿಬಿದ್ದೆ. ಗಾಡಿ ನಿಲ್ಲಿಸಿದ್ದ ಜಾಗದಲ್ಲೀಗ ಒಂದು ಕಪ್ಪು ನಾಯಿ ಬಾಲ ನೆಕ್ಕುತ್ತಾ ಮಲಗಿತ್ತು.

ಮಂತ್ರಿ ಮಾಲ್ ಗೆ ಹೋಗಬೇಕಿದ್ದವನು ಇಲ್ಲಿ ಯಾಕೆ ಗಾಡಿ ನಿಲ್ಲಿಸಿದ್ದ ಅಂತೀರಾ? ಇಪ್ಪತ್ತು ರುಪಾಯಿ ಪಾರ್ಕಿಂಗ್ ಚಾರ್ಜ್ ಉಳಿಸಿಬಿಡೋಣ ಅಂತ ಯೋಚಿಸುವಷ್ಟು ಜಿಪುಣ ನಾನಲ್ಲ. ಆದರೆ ಒಳಗಡೆ ಪಾರ್ಕಿಂಗ್ ಗೆ ಜಾಗ ಹುಡುಕಬೇಕು, ಅಲ್ಲಿಂದ ಲಿಫ್ಟ್ ಇರೋ ಕಡೆ ನಡೆದು ಹೋಗಬೇಕು, ವಾಪಸ್ ಬರೋವಾಗ ಜಾಸ್ತಿ ಗಾಡಿಗಳಿದ್ದರೆ ಹೊರಗೆ ಬರೋಕೆ ಜಾಸ್ತಿ ಹೊತ್ತಾಗಬಹುದು – ಇಷ್ಟೆಲ್ಲಾ ಟೈಮ್ ಯಾಕೆ ವೇಸ್ಟ್ ಮಾಡಬೇಕು, ಅದೇ ಹತ್ತು ನಿಮಿಷದಲ್ಲಿ ಮೂರ್ನಾಕು ಬ್ಲಾಗ್ ಪೋಸ್ಟ್ ಓದಬಹುದಲ್ಲಾ ಅಂತ ಲೆಕ್ಕಾಚಾರ ಹಾಕೋ ವಿಚಿತ್ರ ಸ್ವಭಾವ ನನ್ನದು. ಎಲ್ಲೋ ಟೈಮ್ ಉಳಿಸೋಕೆ ಹೋಗಿ ಈ ಫಜೀತಿಗೆ ಸಿಕ್ಕಿಹಾಕ್ಕೊಳ್ಳೋ ಹಾಗಾಯ್ತಲ್ಲ ಅಂತ ನಂಗೆ ನಾನೇ ಬೈದುಕೊಂಡೆ.

ಅಷ್ಟೊತ್ತಿಗೆ ನಾನು ಗಾಡಿ ನಿಲ್ಲಿಸಿದ್ದ ಜಾಗದ ಎದುರಿಗಿರುವ ಜಿಮ್ ಇಂದ ಒಬ್ಬ ಧಡೂತಿ ಆಸಾಮಿ ಹೊರಬಂದ. ಮುಖದಿಂದ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಂಡ ಅವನು, ದಿಕ್ಕುತೋಚದೆ ನಿಂತಿದ್ದ ನನ್ನನು ನೋಡಿ ಅಲ್ಲಿಂದಲೇ “ಏನಾಯ್ತು?” ಅಂದ. ನಾನು ಅವನ ಹತ್ತಿರ ಹೋಗಿ “ಇಲ್ಲೇ ಕೈನಿ ನಿಲ್ಲಿಸಿ ಹೋಗಿದ್ದೆ, ಎಲ್ಲೋ ಕಾಣ್ತಾ ಇಲ್ಲ, ಯಾವ್ ಪೋಲಿಸ್ ಸ್ಟೇಷನ್ ಅಲ್ಲಿ ಕಂಪ್ಲೇಂಟ್ ಕೊಡಬೇಕು ಗೊತ್ತಾ?” ಅಂತ ಕೇಳಿದೆ. “ಎಲ್ಲಿ ನಿಲ್ಸಿದ್ರ ಹೇಳಿ?” ಅಂದ ಇನ್ನೊಮ್ಮೆ ಬೆವರು ಒರೆಸಿಕೊಳ್ಳುತ್ತಾ. ನಾನು ಬಾಲ ನೆಕ್ಕುತ್ತಾ ಮಲಗಿದ್ದ ನಾಯಿಯ ಕಡೆ ತೋರಿಸಿದೆ. “ಒಹ್ ಅಲ್ಲಾ, ಅದು ನೋ ಪಾರ್ಕಿಂಗು ಇವರೇ, ಪೋಲಿಸ್ ಎತ್ತಾಕೊಂಡು ಹೋಗಿರ್ತಾರೆ, ಶಿವಾನಂದ ಹತ್ರ ಹೋಗಬೇಕು ನೀವು, ಒಂಭತ್ತಕ್ಕೆ ಕ್ಲೋಸ್” ಅಂತ ಹೇಳಿ ಡೈರೆಕ್ಷನ್ಸ್ ಕೊಟ್ಟ! ಅದ್ಯಾಕೆ ಕಾಲ ಕೆಟ್ಟೋಗಿದೆ ಅಂತಾರೋ ಜನ – ಮೊದಲೆಲ್ಲಾ ಗಾಡಿ ಕಾಣೆ ಆದ್ರೆ ಅದು ಹೆಚ್ಚೂಕಮ್ಮಿ ಕಳ್ಳರ ಕೆಲಸ ಆಗಿರುತ್ತಿತ್ತು, ಈಗ ಪೋಲಿಸ್ ಅವರೇ ಎತ್ತಾಕ್ಕೊಂಡು ಹೋಗಿರ್ತಾರೆ ಅನ್ನೋ ಅಷ್ಟು ಇಂಪ್ರೂವ್ ಆಗಿದೆ – ಅಂತ ಹೇಳಿಕೊಂಡು ನನ್ನನ್ನು ನಾನೇ ನಗಿಸುವ ವ್ಯರ್ಥ ಪ್ರಯತ್ನ ಮಾಡಿದೆ.

ಪೋಲಿಸ್ ಚೆಕ್ ಪಾಯಿಂಟ್ ತಲುಪೋ ಹೊತ್ತಿಗೆ ಒಂಭತ್ತಕ್ಕೆ ಹತ್ತು ನಿಮಿಷ ಬಾಕಿ ಇತ್ತು. ದೂರದ ಬೀದಿದೀಪದ ಕೆಳಗೆ ಒಂದಷ್ಟು ಗಾಡಿಗಳು ಅನಾಥವಾಗಿ ಮಲಗಿಕೊಂಡಿದ್ದವು. ಆ ಬೀದಿದೀಪದ ಕಡೆಗೆ ದಢದಢ ಹೆಜ್ಜೆ ಹಾಕಿದೆ. ತನ್ನ ಕೈಬೆರಳುಗಳ ಮಧ್ಯೆ ನೂರು ರೂಪಾಯಿಗಳ ನೋಟುಗಳನ್ನು ಉದ್ದುದ್ದ ಮಡಚಿಟ್ಟುಕೊಂಡಿದ್ದ ಒಬ್ಬ ವ್ಯಕ್ತಿ, ದಪ್ಪನೆಯ ಕೀ ಬಂಚ್ ಹಿಡಿದುಕೊಂಡಿದ್ದ ಇನ್ನೊಬ್ಬನ ಜೊತೆ ಹರಟುತ್ತಾ ನಿಂತಿದ್ದ. ಏದುಸಿರು ಬಿಡುತ್ತಾ ಅವರ ಹತ್ತಿರ ಹೋಗಿ “ಕೈನೆಟಿಕ್ಕು, ಬ್ಲಾಕ್ ಕಾಲರ್… “ ಅಂತ ಬಡಬಡಿಸಿದೆ. “ಅದಾ ನೋಡಿ… ” ಅಂತ ಒಬ್ಬ ಆ ಕಡೆ ಕೈ ತೋರಿಸಿದ. ನನ್ನ ಪಾಪದ ಕೈನಿ ನಿರ್ಲಿಪ್ತವಾಗಿ ಅಲ್ಲಿ ನಿಂತಿತ್ತು. “ಮುನ್ನೂರು ಕೊಡಿ” ಅಂದ ದಪ್ಪ ಕೀ ಚೈನ್ ಹಿಡಿದುಕೊಂಡವ. “ಮುನ್ನೂರಾ? ಸ್ವಲ್ಪ ಕಮ್ಮಿ ಮಾಡ್ಕೊಳಿ” ಅಂದೆ. “ಆಗಲ್ಲ ಸಾರ್, ಇವೆಲ್ಲಾ ಫಿಕ್ಸೆಡ್” ಅಂದು ನೂರರ ನೋಟುಗಳನ್ನು ಹಿಡಿದುಕೊಂಡವ ಮೆಲ್ಲಗೆ ನಕ್ಕ. ಮುನ್ನೂರು ಕೊಟ್ಟು ಗಾಡಿ ಬಿಡಿಸಿಕೊಂಡು ಹೊರಟೆ.

ಮೊದಲೆಲ್ಲಾ ಪೋಲಿಸಿನವರು ಚೌಕಾಶಿ ಮಾಡೋದಕ್ಕೆ ತಯಾರಿರುತ್ತಿದ್ದರು, ಜೊತೆಗೆ “ಏನ್ರೀ, ಎಜುಕೇಟೆಡ್ಸ್ ಥರ ಕಾಣ್ತೀರ, ನೀವೇ ಹಿಂಗೆ ಮಾಡಿದ್ರೆ ಹೆಂಗೆ… “ ಅಂತೆಲ್ಲ ಬಿಟ್ಟಿ ಉಪದೇಶ ಕೊಡ್ತಿದ್ರು. ಈಗ ಹಂಗಿಲ್ಲ. ಈ ಕೆಲಸವನ್ನ ಔಟ್ ಸೋರ್ಸ್ ಮಾಡಿಬಿಟ್ಟಿದ್ದಾರೆ. ಫೈನ್ ಕಟ್ಟಕ್ಕೆ ಸ್ಟೇಷನ್ ಗೆ ಹೋದಾಗಲೂ ಸೀಟ್ ಆಫರ್ ಮಾಡಿ, ಕೂತ್ಕೊಳಿ ಸರ್ ಅಂತಾರೆ. ನಿಮಗೆ ಬುದ್ಧಿ ಹೇಳಿ ನಮಗೇನಾಗಬೇಕು, ಫೈನ್ ಹಣ ಸಿಕ್ಕರೆ ಸಾಕು ಅನ್ನುವಂತೆ ಇರುತ್ತದೆ ಅವರ ಧೋರಣೆ. ಇಲ್ಲೂ ಈಗ ಕಾರ್ಪೊರೇಟ್ ಕಲ್ಚರ್ ಮಯ. ಇನ್ನೊಂದು ಸ್ವಲ್ಪ ದಿನದಲ್ಲಿ “ಇಟ್ ವಾಸ್ ಎ ಪ್ಲೆಶರ್ ಸರ್ವಿಂಗ್ ಯು, ಹೋಪ್ ಟು ಸೀ ಯು ಸೂನ್, ಹ್ಯಾವ್ ಅ ಗುಡ್ ಡೇ ಸರ್” ಅಂತ ಹೇಳಕ್ಕೆ ಶುರು ಮಾಡಿದರೂ ಆಶ್ಚರ್ಯ ಇಲ್ಲ.

ಹೀಗೆ ಏನೇನೋ ಯೋಚಿಸಿಕೊಂಡು ಬರೋವಾಗ “ನಾನು ‘ನೋ ಪಾರ್ಕಿಂಗ್’ ಇತ್ತೋ ಇಲ್ವೋ ನೋಡಿಕೊಂಡೇ ಗಾಡಿ ಪಾರ್ಕ್ ಮಾಡಿದ್ದೆ ಆಲ್ವಾ” ಅಂತ ಅನಿಸಿತು. ತಕ್ಷಣ ಗೋಕುಲ್ ಹೋಟೆಲ್ ಕಡೆಗೆ ಗಾಡಿ ತಿರುಗಿಸಿದೆ. ಟ್ರಾಫಿಕ್ ಪೋಲಿಸಿನವರು ಫೈನ್ ಕಲೆಕ್ಟ್ ಮಾಡ್ತಾರಲ್ಲ, ಅದು ಸರಕಾರಕ್ಕೆ ಸೇರುತ್ತದೋ, ಅದನ್ನವರು ತಮ್ಮ ಡಿಪಾರ್ಟ್ಮೆಂಟಿನ ಯಾವುದೋ ಖರ್ಚಿಗೋ, ತಮ್ಮ ಜೇಬಿಗೋ ಬಳಸಿಕೊಳ್ಳುತ್ತಾರೋ ಗೊತ್ತಿಲ್ಲ. ಗಮ್ಯ ಯಾವುದೇ ಆಗಿರಲಿ, ಅಕಸ್ಮಾತ್ ಒಂದು ದಿನ ಯಾರೂ ರೂಲ್ಸ್ ಬ್ರೇಕ್ ಮಾಡದೇ ಇರೋ ಹಾಗೆ ಆಗಿಬಿಟ್ಟರೆ, ದಿಢೀರ್ ಹಣದ ಕೊರತೆ ಉಂಟಾಗಿಬಿಡುತ್ತದೆ. ಹಾಗಾಗಿ ಜನರು ತಪ್ಪು ಮಾಡುವಂತೆ ನೋಡಿಕೊಳ್ಳುವುದೂ ಕೂಡ ಟ್ರಾಫಿಕ್ ಡಿಪಾರ್ಟ್ಮೆಂಟ್ ಅವರ ಜವಾಬ್ದಾರಿ ಆಲ್ವಾ ಅಂತಲೂ ಅನಿಸಿತು. ಗೋಕುಲ್ ಹೋಟೆಲ್ ರೋಡಿನ ಜಿಮ್ ಎದುರು ಗಾಡಿ ನಿಲ್ಲಿಸಿದೆ, ನಡೆದಿದ್ದ ವಿಷಯ ಏನು ಅಂತ ಗೊತ್ತಾಯಿತು. ನಾನು ಗಾಡಿ ನಿಲ್ಲಿಸಿದ್ದಲ್ಲಿನ ಎಡಗಡೆಯ ಮರದ ಮೇಲೆ, “ಎಡಗಡೆ ನಿಲ್ಲುಸುವಂತಿಲ್ಲ” ಅಂತ ಬೋರ್ಡ್ ಹಾಕಿದ್ದರು. ನಾನು ದಡ್ಡ, ಬಲಗಡೆ ನಿಲ್ಲಿಸಬಹುದು ಅಂತ ಅರ್ಥ ಮಾಡಿಕೊಂಡಿದ್ದೆ. ಆದರೆ ನಾನು ನಿಂತಿದ್ದ ಜಾಗದ ಬಲಗಡೆ ಇರುವ ಮರದ ಮೇಲೂ ಎಡಗಡೆ ನಿಲ್ಲಿಸಬಾರದು ಅಂತ ಬೋರ್ಡ್ ಇತ್ತು, ಅದರ ಬಲಗಡೆ ಇದ್ದ ಮರಗಳ ಮೇಲೂ ಕೂಡ! ಪೋಲಿಸಿನವರು ಸಿನಿಮಾಗಳಲ್ಲಿ ಮಾತ್ರ ಪೆದ್ದರು, ನಿಜಜೀವನದಲ್ಲಿ ಬಹಳ ಚಾಣಾಕ್ಷರು ಅಂತ ಮನದಟ್ಟಾಯಿತು. ಗಾಡಿ ಸ್ಟಾರ್ಟ್ ಮಾಡಿ ಸಂಪಿಗೆ ರೋಡ್ ಕಡೆಗೆ ತಿರುಗಿದೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಕಾಣೆಯಾದ ಕೈನಿ: ವಾಸುಕಿ ರಾಘವನ್

  1. ಬುದ್ಧಿವಂತರನ್ನೆ ಭೇಸ್ತು ಬೀಳಿಸಿದ ಪೊಲೀಸರು. ಭೇಷ್!!

Leave a Reply

Your email address will not be published. Required fields are marked *