ಕಥಾಲೋಕ

ಕಾಣದ ಕರಡಿ: ದೊಡ್ಡಮನಿ.ಎಂ.ಮಂಜುನಾಥ

ನೂರೆಂಟು ತೂತು ಬಿದ್ದು ಹರಿದ ಬನಿಯನ್ ಹಾಕಿಕೊಂಡು, ಕಿತ್ತು ಹೋದ ಹವಾಯಿ ಚಪ್ಪಲಿಗೆ ಪಿನ್ನು ಹಾಕುತ್ತ, ಮನೆಯ ಅಂಗಳದಲ್ಲಿ ಕೂತಿದ್ದ ಬಳೆಗಾರ ಶಿವಪ್ಪನಿಗೆ ಕುಂಟ್ಲಿಂಗ ಒಂದೇ ಉಸಿರಿನಲ್ಲಿ ಕುಂಟಿಕೊಂಡು ತನ್ನತ್ತ  ಓಡಿ ಬರುವುದನ್ನು  ಕಂಡೊಡನೆ ಮನಸಿಗೆ  ಗಲಿಬಿಲಿಯಾಯಿತು. ಎದೆ ಉಸಿರು ಬಿಡುತ್ತ ನಿಂತ ಕುಂಟ ಲಿಂಗನನ್ನು ಎದ್ದು ನಿಂತು ಏನಾಯ್ತೋ ಕುಂಟ್ಯ ಹಿಂಗ್ಯಾಕ್ ಓಡಿ ಬಂದಿ ? ಎನ್ನುವಷ್ಟರಲ್ಲಿ ಸರೋಜಳ ಸಾವಿನ ವಿಷಯವನ್ನು ಸರಾಗವಾಗಿ ಕುಂಟ ಲಿಂಗ ಒದರಿಬಿಟ್ಟ, ಇದನೆಲ್ಲ ಕೇಳುತ್ತಾ ಕುಸಿದು ಬೀಳುವಷ್ಟು ನಿಶ್ಯಕ್ತನಾದರು ತಡ ಮಾಡದೆ ಉಕ್ಕಿ ಬರುವ ದುಃಖವನ್ನು ನುಂಗಿ ಇವ ಹೇಳಿದ್ದೆಲ್ಲಾ ಸುಳ್ಳಾಗಲಿ ಎಂದು ಇದ್ದ ಬದ್ದ ದೇವರನೆಲ್ಲ ನೆನಪಿಸಿಕೊಳ್ಳುತ್ತಾ ನದಿಯ ಕಡೆ ಓಡಿದ. ಕುಂಟ್ಲಿಂಗ ಸಹ ಅವನ ಹೆಜ್ಜೆಗಳನ್ನ ಹಿಂಬಾಲಿಸಿದ. 

 *  *  * * 

ಕೆಲವು ವರ್ಷಗಳ ಹಿಂದೊಮ್ಮೆ ಬಸ್ ಸಂಪರ್ಕವೇ ಇಲ್ಲದ ಈ ಪುಟ್ಟ ಹಳ್ಳಿಗೆ ಮರಳು ಹೊತ್ತು ಸಾಗುವ ಲಾರಿಯೊಂದರಲ್ಲಿ ಕುಂಟ್ಲಿಂಗ ಅದೆಲ್ಲಿಂದಲೋ ಬಂದು ಇಳಿದಿದ್ದ, ಹೊಳೆ ದಂಡೆಗೆ ಸಮೀಪವಿರುವ ಶಿವಲಿಂಗೇಶ್ವರನ ದೇವಸ್ಥಾನದಲ್ಲಿ ಪೂಜಾರಿ ಕೊಡುತ್ತಿದ್ದ ಪ್ರಸಾದ ಪಡೆದು ಹೊಟ್ಟೆ ತುಂಬಿಸಿಕೊಂಡು ರಾತ್ರಿ ಹಗಲುಗಳನ್ನು ಅಲ್ಲಿಯೇ ಕಳೆಯುತ್ತಿದ್ದ, ಬರಬರುತ್ತಾ ತನ್ನೊಬ್ಬ ಅನಾಥ,  ಊರೂರು ತಿರುಗುವ ಅಲೆಮಾರಿ,ಎಂದೆಲ್ಲ ಹೇಳಿಕೊಂಡು ಊರಿನ ಜನರ ಅನುಕಂಪ ಗಿಟ್ಟಿಸಿಕೊಂಡಿದ್ದ, ಅವರಿವರ ಹೊಲಮನೆಯ ಕೆಲಸ ಮಾಡಿ ಅವರು ಕೊಡುತ್ತಿದ್ದ ಬಿಡಿಗಾಸು ಸೇರಿಸಿಕೊಂಡು, ಆಗಾಗ ಮರಳು ಸಾಗಿಸುವ ಲಾರಿಗಳನ್ನ ಕ್ಲೀನ್ ಮಾಡಿ ಲಾರಿ ಡ್ರೈವರ್ ಗಳಿಂದ ಹಣ ಪಡೆದು ವಾರಕ್ಕೆ ಒಮ್ಮೆಯಾದರು ದೂರದ ಪಟ್ಟಣಕ್ಕೆ ಇಂಗ್ಲಿಷ್ ಚಿತ್ರಗಳನ್ನು ಹಾಕಿದ ಟೆಂಟ್  ಹುಡುಕಿಕೊಂಡು ಹೋಗಿ ಪಿಕ್ಚರ್ ನೋಡಿ ಬರುತ್ತಿದ್ದ, ಕುಂಟ್ಲಿಂಗನಿಗೆ ಇಂಗ್ಲಿಷ್ ಚಿತ್ರಗಳ ಮೇಲೆ ಬಾರಿ ವ್ಯಾಮೋಹ, ಹಳ್ಳಿಯ ಯಾರೊಬ್ಬರಿಗೂ ಅದು ಗೊತ್ತಿರಲಿಲ್ಲ, ಯಾರಿಗೂ ಗೊತ್ತಾಗದಷ್ಟು ಜಾಗರುಕತೆಯಿಂದಿರುತ್ತಿದ್ದ,  ಅವನ ಒಳ್ಳೆ ತನಗಳನ್ನ ಕಂಡ ದೇವಸ್ಥಾನದ ಕಾರ್ಯದರ್ಶಿಗಳು ಮತ್ತು ಪೂಜಾರಿ ದೇವಸ್ಥಾನಕ್ಕೊಬ್ಬ ಕಾವಲುಗಾರ ಸಿಕ್ಕಂತಾಯಿತು ಎಂದು ದೇವಸ್ಥಾನದ ಕಾಂಪೌಂಡ್ ಗೆ ಅಂಟಿಕೊಂಡಿದ್ದ ಸಣ್ಣ ಹಂಚಿನ ಛಾವಣಿಯ ಮನೆಯನ್ನೇ ಅವನ ವಾಸಕ್ಕೆಂದು ಕೊಟ್ಟಿದ್ದರು, ಅದರಂತೆಯೇ ಕುಂಟ್ಲಿಂಗ ಕೂಡ ತನ್ನ ಮೇಲೆ ಊರಿನ ಜನರಿಟ್ಟಿದ್ದ ನಂಬಿಕೆ ಪ್ರೀತಿ ವಿಶ್ವಾಸವನ್ನ  ಉಳಿಸಿಕೊಂಡಿದ್ದ. ಕುಂಟ್ಲಿಂಗನ ಮೂಲ ಹೆಸರು ಹಳ್ಳಿಯ ಜನರಿಗೆ ಗೊತ್ತಿರಲಿಲ್ಲ ಇವನು ಮಾತ್ರ ಲಿಂಗರಾಜು ಎಂದು ಹೇಳಿಕೊಂಡು ತಿರುಗುತ್ತಿದ್ದ , ಅವನು ಹುಟ್ಟು ಕುಂಟನೇನು ಆಗಿರಲಿಲ್ಲ ಕಾಡಿನಲ್ಲಿ ಒಮ್ಮೆ ಜೇನು ಹಿಡಿಯಲು ಹೋಗಿ ಮರದಿಂದ ಕೆಳಕ್ಕೆ ಬಿದ್ದು ಬಲಗಾಲಿಗೆ ಬಾರಿ ಪೆಟ್ಟು ಬಿದ್ದಿತ್ತು,  ಅಂದು ಅವನು ಯಾವುದೇ ಸರಿಯಾದ ಚಿಕಿತ್ಸೆ ಪಡೆಯದೇ ಬಿಟ್ಟಿದಕ್ಕೆ ಕುಂಟುತ್ತಾ ನಡೆಯಲು ಶುರುಮಾಡಿದ ಅಂದಿನಿಂದಲೇ ಅವನಿಗೆ ಕುಂಟ್ಲಿಂಗ ಎಂಬ ಹೆಸರು ಬಂದಿತ್ತು . 

 *  *  * * 

ನದಿಯಿಂದ ಫರ್ಲಾಂಗು ದೂರದ ಪೊದೆಗಳ ನಡುವೆ ಬಿದ್ದಿದ್ದ ಹೆಣವನ್ನು ಗುಂಪು ಸೇರಿದ್ದ ಜನರಲ್ಲಿ ಕೆಲವರು ಗುರುತಿಸಿದ್ದರು, ಅರೆನಗ್ನ ಸ್ಥಿತಿಯಲ್ಲಿದ್ದ ದೇಹಕ್ಕೆ ಯಾರೋ ಒಬ್ಬ ಪುಣ್ಯಾತ್ಮ ತಾನುಟ್ಟ ಪಂಚೆಯನ್ನೇ ಬಿಚ್ಚಿ ಸತ್ತ ಯುವತಿಯ ಮೇಲೆ ಹೊದ್ದಿಸಿದ್ದ, ಸತ್ತದ್ದು ಬಳೆ ಮಾರುವ ಶಿವಪ್ಪನ ಮಗಳು ಸರೋಜ, ಮೊನ್ನೆ ಮೊನ್ನೆಯಷ್ಟೇ ಮೈನೆರೆದ ಹಸಿ ಮೈ ಹುಡುಗಿ, ಪಾಪದ ಹುಡುಗಿ, ತಾಯಿಯ ಪ್ರೀತಿ ಕಾಣದೆ ಅಪ್ಪನ ಆಸರೆಯಲ್ಲಿ ಬೆಳೆದ ಮುಗ್ಧ ಹೆಣ್ಣು.,  ಸೂರ್ಯನುದಯದ್ಹೊತ್ತಿಗಾಗಲೇ ಎದ್ದು ಅಪ್ಪ ಬೇಡವೆಂದರೂ ಬಟ್ಟೆ ಒಗೆಯಲು ನದಿ ತೀರಕ್ಕೆ ಬಂದವಳು ಒಂದೆರಡು ಗಂಟೆಯೊಳಗೆ ನಿರ್ಜೀವ ಶವವಾಗಿ ಬಿದ್ದಿದ್ದಳು.  

ಶವದ ಸುತ್ತಾ ನಿಂತಿದ್ದ  ಹಳ್ಳಿಯ ಮುಗ್ಧ ಜನರ ಗುಮಾನಿ ಹೋಗಿದ್ದು ಮತ್ತದೇ ಕಾಣದ ಕರಡಿಯ ಮೇಲೆ, ಕಳೆದ ಒಂದು ತಿಂಗಳ ಹಿಂದೆಯಷ್ಟೇ ಹೊಲಕಾಯಲು ಹೋಗಿದ್ದ ಚನ್ನವ್ವ ತನ್ನ ಹೊಲದಲ್ಲೇ   ಸಾವನಪ್ಪಿದ್ದಳು, ಅತಿ ಸಣ್ಣ ವಯಸ್ಸಿನಲ್ಲಿ ಮದುವೆಯಾಗಿ, ಮದುವೆಯಾದ ಕೆಲವೇ ದಿನಗಳ ನಂತರ ರಸ್ತೆ ಅಪಘಾತಕ್ಕೆ ಗಂಡನನ್ನು ಕಳೆದುಕೊಂಡ ದುರ್ಧೈವಿ, ಚನ್ನವ್ವ ಗಂಡನ ಒಡೆತನದಲ್ಲಿದ್ದ ಮೂರು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಳು, ಯಾರ ಮುಂದೆಯೂ ಕೈ ಒಡ್ಡದೆ ಗಂಡಸರ ಸರಿಸಮನಾಗಿ ಹೊಲದಲ್ಲಿ ಒಬ್ಬಳೇ ದುಡಿಯುತ್ತಿದ್ದ ಗಟ್ಟಿಗಿತ್ತಿ,ಅವಶ್ಯಕತೆ ಇದ್ದಾಗ ಮಾತ್ರ ಒಂದೆರಡು ಆಳುಗಳನ್ನಿಟ್ಟು ಕೆಲಸ ಮಾಡಿಸುತ್ತಿದ್ದಳು ಸರ್ಕಾರದಿಂದ ಅನುದಾನ ಪಡೆದು ಹೊಲದಲ್ಲಿ ಬೋರೆ ವೆಲ್  ಕೊರೆಸಿ ಅದಕ್ಕೆ ಹೊಂದಿಕೊಳ್ಳುವಂತೆ ಸಣ್ಣದೊಂದು ಶೆಡ್ ಕೂಡ ಕಟ್ಟಿಸಿದ್ದಳು. ಅದೆಷ್ಟೋ ರಾತ್ರಿಗಳನ್ನು ಚನ್ನವ್ವ  ಅದೇ  ಶೆಡ್ ನಲ್ಲಿ ನಿರ್ಭಯವಾಗಿ ಹೊಲಕಾಯುತ್ತಾ ಕಳೆದಿದ್ದಳು, ಬದುಕು ಆಕೆಗೆ ಒಂಟಿಯಾಗಿ ಬದುಕುವುದನ್ನ ಕಲಿಸಿತ್ತು. 

ಅದೊಂದು ರಾತ್ರಿ ಪಸಲು ಬಂದು ನಿಂತ ಹೊಲವನ್ನು ತಾನೇ ಕಾವಲು ಕಾಯಲು ಹೋಗಿದ್ದಳು. ಹೋಗುವಾಗ ದಾರಿಯಲ್ಲಿ ಎದುರಿಗೆ ಸಿಕ್ಕ ಕುಂಟ್ಲಿಂಗನ ಮಾತಾಡಿಸಿಕೊಂಡು  ಹೋಗಿದ್ದಳು, ಆದರೆ ಆಕೆಯ ದುರಾದೃಷ್ಟ ಅದೇ ಅವಳ ಕೊನೆಯ ರಾತ್ರಿಯಾಗಿತ್ತು, ಚನ್ನವ್ವ ಉಳಿದು ಕೊಂಡ ಶೆಡ್ ನಿಂದ ಅನಾತಿ ದೂರದ ಆಳೆತ್ತರವಾಗಿ ಬೆಳೆದು ನಿಂತಿದ್ದ ಕಬ್ಬಿನ ಗದ್ದೆಯಲ್ಲಿ ಅವಳ ಶವ ಅನಾಥವಾಗಿ ಬಿದ್ದಿತ್ತು. ನರಹದ್ದುಗಳ ಪಾಲಾಗಿದ್ದ ಹೆಣವನ್ನು ಮೊದಲು ಕಂಡ ಕುಂಟ್ಲಿಂಗ ಊರಿನ ಜನರಿಗೆ ಚನ್ನವ್ವನ ಸಾವಿನ ಸುದ್ದಿ ಮುಟ್ಟಿಸಿದ. ಚನ್ನವ್ವನ ಈ ನಿಗೂಢ ಸಾವಿಗೆ ಮರುಕಗೊಂಡ ಹಳ್ಳಿಯ ಜನ ಸಾವಿನ ಕಾರಣ ಹುಡುಕಲೋದಾಗ, ಸಂಜೆಯೊಮ್ಮೆ ಕಂಡ ಕರಡಿಯೇ ರಾತ್ರಿ  ಹೊಲಕ್ಕೆ ನುಗ್ಗಿ ಒಂಟಿ ಚನ್ನವ್ವನ ಮೇಲೆ ಆಕ್ರಮಣ ಮಾಡಿ ಕೊಂದು ಹಾಕಿರುವುದಾಗಿ ಮೈ ಮೇಲೆ ಇದ್ದ ಉಗುರುಗಳಿಂದ ಪರಚಿದ ಗಾಯಗಳನ್ನು ತೋರಿಸುತ್ತಾ ಕುಂಟ್ಲಿಂಗ ಎಲ್ಲರಿಗೂ ಕರಡಿಯೇ ಇದಕ್ಕೆ ಕಾರಣವೆಂದು ಮನವರಿಕೆ ಮಾಡಿಬಿಟ್ಟಿದ್ದ. ಅನಾಹುತಕ್ಕೆ ಈಡಾದ ಚನ್ನವ್ವನ ಅಂತ್ಯಸಂಸ್ಕಾರವನ್ನು ಊರಿನ ಜನರೇ ನೆರವೇರಿಸಿದ್ದರು. ಅಂದು ಚನ್ನವ್ವನ್ನ ಈ ಅಗಲಿಕಿಗೆ ತನ್ನ ರಕ್ತ ಸಂಬಂಧಿಯನ್ನೇ ಕಳೆದುಕೊಂಡಷ್ಟು ಕುಂಟ್ಲಿಂಗ ಮುಗಿಲು ಮುಟ್ಟುವಂತೆ ಅತ್ತು ಬಿಟ್ಟಿದ್ದ, ಚನ್ನವ್ವ ಇವನನ್ನು ತಮ್ಮನಿಗಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಂಡಿದ್ದಳು.  

 ಈ ಘಟನೆ ನಡೆದ  ಮರುದಿನವೇ ಊರಿನ ಕೆಲವು ಪ್ರಮುಖರೆಲ್ಲ ಸಂಬಂಧ ಪಟ್ಟ ಫಾರೆಸ್ಟ್ ಆಫೀಸ್ ಗೆ ಹೋಗಿ ಕರಡಿಯನ್ನು ಹಿಡಿಯುವಂತೆ ಮನವಿ ಮಾಡಿಕೊಂಡು ಬಂದಿದ್ದರು. ಪ್ರತಿಯಾಗಿ ತತ್ ಕ್ಷಣವೇ ಎಚ್ಚೆದ್ದುಕೊಂಡ ಹನ್ನೆರಡು ಜನರನ್ನೊಳಗೊಂಡ ಅರಣ್ಯಾಧಿಕಾರಿಗಳ ತಂಡವೊಂದು ಸತತ ಒಂದುವಾರಗಳ  ಕಾಲ ಹಳ್ಳಿಯಿಂದಾಚೆಗಿನ ಗದ್ದೆ ತೋಟ ಅರೆ ಕಾಡುಗಳಲ್ಲಿ ಬೀಡು ಬಿಟ್ಟು ಕಾರ್ಯಾಚರಣೆ ನಡೆಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂದುಕೊಂಡು ಅರಣ್ಯಾಧಿಕಾರಿಗಳು ಮತ್ತು ಅವರ ಸಿಬ್ಬಂದಿಗಳು ಹಿಂತಿರುಗಿದ್ದರು. ಇತ್ತೀಚೆಗಂತೂ ಒಬ್ಬೊಬ್ಬೊರೆ ಓಡಾಡುವುದನ್ನು ಜನರು ನಿಲ್ಲಿಸಿದ್ದರು, ಮೂರ್ನಾಲ್ಕು ಜನರ ಗುಂಪಾಗಿ ಕೈಯಲ್ಲಿ ದೊಣ್ಣೆ, ಕುಡುಗೋಲುಗಳನ್ನು ಹಿಡಿದುಕೊಂಡೇ ತಮ್ಮ ತಮ್ಮ  ಹೊಲಗಳಿಗೆ ಹೋಗಿ ಬರುತ್ತಿದ್ದರು, ಊರಿನ ಜನರ ಮನದಲ್ಲಿ ಒಂದು ರೀತಿಯ ಜೀವ ಭಯ ಉದ್ಭವಿಸಿ ಬಿಟ್ಟಿತ್ತು. ಅಂದಿನಿಂದ ಎಲ್ಲರ ತಲೆಯಲ್ಲೂ ಬರೀ ಕಾಣದ ಆ ಕರಡಿಯ ಚಿಂತೆಯೇ  ಕಾಡುತ್ತಿತ್ತು, 

  *  *  * * 

ಆತಂಕದಲ್ಲೇ ಓಡಿ ಬಂದ ಶಿವಪ್ಪ ಗುಂಪು ಕಟ್ಟಿದ ಜನರೆನ್ನೆಲ್ಲ ಸರಿಸಿ ತನ್ನ ಮಗಳ ನಿರ್ಜೀವತೆಯನ್ನು ಕಂಡು ಕರುಳು ಕಿತ್ತು ಬರುವಂತೆ ಒಂದೇ ಸಮನೆ ಕೈಗಳಿಂದ ಹಣೆ ಜಜ್ಜಿಕೊಂಡು ಅಳ ತೊಡಗಿದ, ಅಲ್ಲಿದ್ದ ಜನರು ಆತನನ್ನು ಹಿಡಿದು ಸಮಾಧಾನ ಪಡಿಸದಿದ್ದರೆ ಅಲ್ಲೇ ಹರಿಯುತ್ತಿದ್ದ ನದಿಗೆ ಬಿದ್ದು ಸಾಯುವವನಿದ್ದ. ಮಗಳ ಮೇಲಿನ ಪ್ರೀತಿ ಅವಳಿಲ್ಲದೆ ಅವನಿಗೆ ಬದುಕಬೇಕೆನಿಸಲಿಲ್ಲ. ಮಗಳ ನ್ನು  ಕಳೆದುಕೊಂಡ ದುಃಖ ಸಂಕಟ ಬಳೆಗಾರ ಶಿವಪ್ಪನನ್ನು ಪ್ರತಿ ಕ್ಷಣವೂ ಕೊಲ್ಲುತ್ತಿತ್ತು, ಸರೋಜ ಸಾವಿಗೀಡಾಗಿದ್ದು ಮತ್ತದೇ ಕಾಣದ ಕರಡಿಯಿಂದ ಎಂದು ಗುಂಪಿನಲ್ಲಿದ್ದ ಕುಂಟ್ಲಿಂಗ ಸಂಶಯ ವ್ಯಕ್ತ ಪಡಿಸುತ್ತಾ ಇನ್ನೊಬ್ಬನೊಂದಿಗೆ ಮಾತಾಡಿದಾಗ, ಕಾಣದ ಆ ಕರಡಿಯನ್ನು ಸಿಗಿದು ಸೀಳಿ ಊರ ಹೆಬ್ಬಾಗಿಲಿಗೆ ತೋರಣ ಮಾಡಬೇಕೆಂಬ ಶಿವಪ್ಪನ ಆಕ್ರೋಶಕ್ಕೆ ಎಲ್ಲೆ ಇರಲಿಲ್ಲ ಆದರೆ ಏನನ್ನೂ ಮಾಡಲಾಗದ ಸ್ಥಿತಿ ಶಿವಪ್ಪನದು. 

ತಾಯಿ ಇಲ್ಲದ ಮಗಳನ್ನು ಹೂವಿನಂತೆ ಸಾಕಿ ಬೆಳೆಸಿದ್ದ,  ಮುಂಬರುವ ಮೂರೂ ತಿಂಗಳಲ್ಲಿ ಸರೋಜಳ ಮದುವೆ ಮಾಡುವವನಿದ್ದ, ಅದಕ್ಕಾಗಿ ಎಲ್ಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಸರೋಜಳಿಗೆ ಬಂಗಾರದ ಬಳೆಗಳನ್ನ ಮಾಡಿಸಿ, ಕೈಗೆ ಹಾಕಿ ಕೊಳ್ಳಲು ಕೊಟ್ಟಿದ್ದ, ಆದರೆ ಅವಳು ಹಾಕಿಕೊಂಡಿರಲಿಲ್ಲ ಬದಲಿಗೆ ಅಪ್ಪ ಮಾರುವ ಹಸಿರು ಗಾಜಿನ ಬಳೆಗಳನ್ನೆ ಕೈ ತುಂಬಾ ಹಾಕಿಕೊಂಡು, ಮನೆ ತುಂಬಾ ನವಿಲಿನಂತೆ ಕುಣಿಯುತ್ತಿದ್ದಳು, ಇದ್ದ ಒಬ್ಬ ಮಗಳೇ ಶಿವಪ್ಪನಿಗೆ ಎಲ್ಲಾ ಆಗಿದ್ದಳು, ಮಗಳೇ ಸರ್ವಸ್ವ ಎಂದುಕೊಂಡಿದ್ದ ಶಿವಪ್ಪನಿಗೆ ಅವಳ ನೆನಪುಗಳು ಕ್ಷಣ ಕ್ಷಣವೂ ಮನಸ್ಸಿಗೆ ಈಟಿಯಿಂದ ಚುಚ್ಚಿದಂತಾಗಿ ನೋವಿನಿಂದ ನರಳುತ್ತಿದ್ದ. ಇದ್ದ ಒಬ್ಬಳೇ ಮಗಳನ್ನು ಮಣ್ಣಲ್ಲಿಟ್ಟು ಭಾರವಾದ ಮನಸ್ಸಿನಿಂದ ಮನಗೆ ಹಿಂತಿರುಗಿದ.. 

ಸಂಜೆ ಹೊತ್ತಿಗಾಗಲೇ ಬಳೆಗಾರ ಶಿವಪ್ಪನ ಮನೆಯಲ್ಲಿ ಸರೋಜಳ ನಂದಾದೀಪ ಕತ್ತಲಾದಷ್ಟು ಹೆಚ್ಚು ಪ್ರಕಾಶವಾಗಿ ಉರಿಯುತ್ತಿತ್ತು, ಆ ದೀಪದ ಎದುರಿನ ತೊಲೆಯೊಂದಕ್ಕೆ ಬಳೆಗಾರ ಶಿವಪ್ಪನ ದೇಹ ಶರಣಾಗಿತ್ತು. ಇಷ್ಟೆಲ್ಲಾ ಆದರೂ ಕೂಡ ಆ ಹಳ್ಳಿಯ ಜನರೊಬ್ಬರೂ ಪೋಲಿಸ್ ಸ್ಟೇಷನ್ ಕಡೆ ಮುಖ ಮಾಡಲಿಲ್ಲ ಬದಲಿಗೆ ಹಳ್ಳಿಯ ಪ್ರತಿಯೊಬ್ಬರ ಮನೆಯಿಂದ ಒಬ್ಬೊಬ್ಬರಂತೆ ತಲಾ ಹತ್ತತ್ತು ಗುಂಪುಗಳಾಗಿ ಊರಿನ ನಾಲ್ಕು ದಿಕ್ಕುಗಳ ಕಡೆ "ಕಾಣದ ಕರಡಿಯ ಬೇಟೆಗಾಗಿ ಹೊರಟು ನಿಂತರು, "ಯಾರಿಗೂ ಕಾಣದ ಆ ಕಪ್ಪು ಕರಡಿ ಮಾತ್ರ ಹಳ್ಳಿಯಲ್ಲಿಯೇ, ಜನರ ಮಧ್ಯೆ ರಾಜಾರೋಷವಾಗಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಮುಂದಿನ ಬಲಿಗಾಗಿ ಕುಂಟುತ್ತಾ ಹೊಂಚು ಹಾಕುತ್ತಿತ್ತು".   


ಚಿತ್ರ:ಅರುಣ್ ನಂದಗಿರಿ

 

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಕಾಣದ ಕರಡಿ: ದೊಡ್ಡಮನಿ.ಎಂ.ಮಂಜುನಾಥ

  1. ಇಂಗ್ಲೀಷ್ ಚಿತ್ರದ ಪ್ರಭಾವ. ನಿರೀಕ್ಷೆಯ ಕೊನೆ. ಕುತೂಹಲದಿಂದ ಓದಿಸಿಕೊಂಡು ಹೋಯಿತು. ಬರವಣಿಗೆ ಚೆನ್ನಾಗಿದೆ. ಮುಂದುವರಿಸಿ. ಶುಭವಾಗಲಿ.

    1. ಯಾವುದೇ ಇಂಗ್ಲಿಷ್ ಚಿತ್ರಗಳ ಪ್ರಭಾವವಲ್ಲಾ …….  ಕರ್ನಾಟಕದಲ್ಲಿ ಕಂಡು ಬಂದ ಸೈಕೋ ಕಿಲ್ಲರ್ ಗಳ ಒಂದು ಬಿಂಬವಷ್ಟೇ…..  
      ಧನ್ಯವಾದಗಳು ಸರ್ 

Leave a Reply

Your email address will not be published. Required fields are marked *