ಪ್ರಶಸ್ತಿ ಅಂಕಣ

ಕಾಣದ ಕಣ್ಣಿಗೊಂದು: ಪ್ರಶಸ್ತಿ ಪಿ.

ಬೆಳಗ್ಗೆ ಹೊಂಬಿಸಿಲಿನೊಂದಿಗೆ ಮಗುವ ನಗುವಿನಂತೆ ಸೌಮ್ಯವಾಗಿದ್ದ ವರುಣದೇವ ಸಂಜೆಯಾಗುತ್ತಿದ್ದಂತೆ ಕಾಳಿಯಂತೆ ಆರ್ಭಟಿಸತೊಡಗಿದ್ದ. ಒಂದಾನೊಂದು ಕಾಲದ ಕೆರೆಗಳನ್ನೇ ಆಪೋಷನ ತೆಗೆದುಕೊಂಡು ಎದ್ದು ನಿಂತ ಅಪಾರ್ಟುಮೆಂಟುಗಳನ್ನೆಲ್ಲಾ ಮತ್ತೆ ಕೆರೆಗಳನ್ನಾಗಿಸಿಯೇ ಬಿಡೋ ಸಂಕಲ್ಪದಲ್ಲಿದ್ದಾನಾ ಇವನಿಂದು ಎಂಬ ಭಯ ರಸ್ತೆಗಳಲ್ಲಿ ಹರಿಯುತ್ತಿದ್ದ ಮೊಣಕಾಲುದ್ದದ ನೀರ ನೋಡಿ ಕಾಡುತ್ತಿತ್ತು. ಹಿಂದಿನ ದಿನವಷ್ಟೇ ಹೊಸದಾಗಿ ಮಾಡಿದ ಟಾರ್ ರೋಡನ್ನೆಲ್ಲಾ ಅಗೆದು, ಮುಚ್ಚದೇ ಹಾಗೇ ಬಿಟ್ಟ ಗ್ಯಾಸ್ ಕೇಬಲ್ಲಿನವರಿಗೆ ಬಸ್ಸಿನ ಚಕ್ರ ಹೂತು ಕುಂತ ಡ್ರೈವರ್ರು ಶಾಪ ಹಾಕುತ್ತಿದ್ದ. ಹೊಂಡಗಳ ತಪ್ಪಿಸಿ ಸರಿ ರಸ್ತೆಯಲ್ಲಿ ನಡೆಸಲೋಸುಗ ನಿಧಾನವಾದ ಟ್ರಾಫಿಕ್ಕಿನ ಮಧ್ಯೆ ಹೀಗೆ ಸಿಕ್ಕಿಬಿದ್ದ ವಾಹನಗಳೂ ಸೇರಿ ಯದ್ವಾ ತದ್ವಾ ಜ್ಯಾಮಾಗಿತ್ತು. ಅರ್ಧ ಘಂಟೆಯಾದ್ರೂ ನೂರು ಮೀಟರ್ ದೂರ ಹೋಗದ ಬಸ್ಸಿನ ಮೇಲೆ ಸಿಟ್ಟುಗೊಂಡು ನಡೆದಾದ್ರೂ ಹೋಗೋಣವೆಂದ್ರೆ ಹೊರಗಡೆ ಬಡಿಯುತ್ತಿದ್ದ ಗುಡುಗು ಸಿಡಿಲುಗಳಿಗಿಂತಲೂ ನಿಂತ ನೀರಿನದೇ ಹೆದರಿಕೆ. ರಸ್ತೆ ಮೇಲೆ ಅಗೆದ ಗುಂಡಿಗಳ ಎಲ್ಲಿ ಮುಚ್ಚಿದ್ದಾರೆ, ಎಲ್ಲಿ ಮುಚ್ಚಿಲ್ಲ ಎಂಬುದು ಮೊಣಕಾಲುದ್ದ ನಿಂತ ಕೆಂಪು ನೀರಿನಡಿ ಕಾಣದೇ ಯಾವುದಾದರೂ ಗುಂಡಿಗೆ ಕಾಲಿಟ್ಟರೆ ಗತಿಯೇನು ಎಂಬ ಭಯ. ಪುಟ್ಪಾತಿನ ಮೇಲೂ ಅಲ್ಲಲ್ಲಿ ಚಪ್ಪಡಿಗಳಿಲ್ಲದೆ ಕಾಲಿಕ್ಕಿದವರು ಸೀದಾ ಕೆಳಗಿದ್ದ ಡ್ರೈನೇಜಿಗೆ ಹೋಗಿ ನೀರ ರಭಸಕ್ಕೆ ಉಸಿರುಗಟ್ಟಿ ಸಾಯುವ ಸಂಭವವಿದ್ದರೂ ಎತ್ತರವಿದ್ದ ಫುಟ್ಪಾತಿನ ಮೇಲೆ ಹರಿವ ನೀರು ಕಮ್ಮಿಯಿದ್ದರಿಂದ ಮನೆ ಸೇರಲು ಅದೊಂದೇ ಸಾಧ್ಯತೆಯೆನಿಸುತ್ತಿತ್ತು. ಸರಿ, ಬಸ್ಸಿಳಿದು ಫುಟ್ಪಾತಿನ ಕಡೆ ನಡೆಯೋಣವೆಂದ್ರೆ ಬಸ್ಸು ಪುಟ್ಪಾತುಗಳ ನಡುವೆಲ್ಲಾ ನೆಲ ಕಾಣದಷ್ಟು ಕೆಂಪು ನೀರು. ರಸ್ತೆಯೆಂದುಕೊಂಡು ಹೊಂಡಕ್ಕೆ ಕಾಲಿಟ್ಟರೆ ನಾ ಪಾತಾಳಕ್ಕೆ ಹೋಗದಿದ್ದರೂ ಸೊಂಟದಷ್ಟು ನೀರಿನಲ್ಲಿ ಸ್ನಾನವಾಗುವುದಂತೂ ಖಚಿತ. ಏನು ಮಾಡುವುದೆಂಬ ಗೊಂದಲದಲ್ಲಿದ್ದಾಗಲೇ ಕಂಡಳವಳು. 

ಹೊಸದಾಗಿ ತಗೊಂಡ ಕ್ಯಾಮೆರಾ ಮೊಬೈಲಿನ ಮಾಯೆಯೋ, ತನ್ನೊಳಗೇ ಸುಪ್ತವಾಗಿದ್ದ ನೋಡುಗನ ಕಣ್ಣಿಗೊಂದು ಪರಿಕರ ಸಿಕ್ಕ ಖುಷಿಗೋ ಈತನಿಗೆ ಕಂಡದ್ದೆಲ್ಲಾ ಅದ್ಭುತವೆನಿಸುತ್ತಿತ್ತು. ಕೆಂಪು, ಕೇಸರಿ ಚದುರಂಗಿಗಳ ಮೇಲೆ ಇನ್ನೂ ಕುಳಿತ ನಿಂತ ಮಳೆಯ ಬಿಂದುಗಳು, ತಿಳಿಗುಲಾಬಿ ಬಣ್ಣದ ಪೇಪರ್ ಹೂವುಗಳ ಮುಮ್ಮೇಳದಲ್ಲಿ ಪಿಂಕಾಗೇ ಕಾಣುತ್ತಿರುವ ಆಗಸ , ನಿಂತ ಮಳೆನೀರಿನಲ್ಲಿನ ಕಾಣುತ್ತಿರುವ ಕಾಮನಬಿಲ್ಲಿನ ಪ್ರತಿಫಲನ.. ಹೀಗೆ ಇಂದು ಕಣ್ಣು ಹಾಯಿಸಿದಲ್ಲೆಲ್ಲಾ ದೃಶ್ಯಕಾವ್ಯ ಎಂದು ಮನದಲ್ಲೇ ಉದ್ಘರಿಸುತ್ತಿದ್ದ. ಕ್ಯಾಮೆರಾ ಮೊಬೈಲ್ ತಗೊಂಡ ಮೇಲೆ ಬೀಳೋ ಮಳೆಹನಿಯಿಂದ ಹಿಡಿದು ಸುಡುವ ಬಿಸಿಲ ಪರಿಯ ತನಕ  ಕಂಡದ್ದೆಲ್ಲಾ ಚೆಂದವೆನಿಸುತ್ತಿದ್ಯೋ ಅಥವಾ ನಾ ಮುಂಚೆಯಿಂದಾ ಹಿಂಗೇ ಇದ್ದನಾ ಎಂಬೊಂದು ಆಲೋಚನೆ ಬಂತೊಮ್ಮೆ ಮಳೆ ನಿಲ್ಲುತ್ತಿದ್ದಂತೇ ಗೂಡಿಗೆ ಮರಳುತ್ತಿದ್ದ ಹಕ್ಕಿಗಳ ಆಕಾರ ಕಂಡಾಗ.  ಅದಕ್ಕೊಂದು ಉತ್ತರ ಸಿಕ್ಕದೇ ಹಾಗೇ ನಿಂತ ಮಳೆ ನೀರಿನ ಮೇಲೆ ಚೆಲ್ಲಿದ ಪೆಟ್ರೋಲ ಹನಿಗಳು ಮೂಡಿಸಿದ ಚಿತ್ತಾರಗಳ ಆಕಾರಗಳ ಗಮನಿಸುತ್ತಾ ಮನೆಗೆ ನಡೆದು ಬರುತ್ತಿದ್ದನಿಗೆ ಮುಂದಿದ್ದ ನೀರಿನಲ್ಲಿ ಮೂಡುತ್ತಿದ್ದ ಪ್ರತಿಬಿಂಬಗಳೊಂದಿಗೆ ಬಿಂಬಕ್ಕೆ ಕಾರಣವಾದ ಆಕೃತಿಗಳನ್ನೂ ಸೆರೆಹಿಡಿದರೆ ಹೇಗೆಂಬ ಕಲ್ಪನೆ ಮೂಡಿತು. ಬರುತ್ತಿದ್ದ ಕಾರಿನೊಂದಿಗೆ ಅದರ ಬಿಂಬವನ್ನೂ ತೆಗೆವ ಪ್ರಯತ್ನದಲ್ಲಿದ್ದಾಗಲೇ ಕಂಡಳವಳು. 

ಶಾಂತ ನೀರಿನ ಮೇಲೆ ಕಾಲಿಟ್ಟು ಆಚೆ ದಾಟೋ ಅವಳ ಪ್ರಯತ್ನದಲ್ಲಿ ನೀರು ಕಲಕಿ ನನ್ನ ಪ್ರಯತ್ನ ಹಾಳಾಗಿ ಹೋಗಿತ್ತು. ನನ್ನ ತಪಸ್ಸ ಕೆಡಿಸಬಂದ ಈ ಮೇನಕೆಯ ಚಿತ್ರವನ್ನಾದರೂ ತೆಗೆಯುವ ಎಂಬ ಪ್ರಯತ್ನದಲ್ಲಿದ್ದಾಗ ಆಕೆಯೇ ಇತ್ತ ತಿರುಗಬೇಕೇ ? ಗೊತ್ತಿಲ್ಲದಂತೆ ಚಿತ್ರ ತೆಗೆಯಬೇಕೆಂದಿದ್ದ ಹುಡುಗಿಯೇ ನಮ್ಮತ್ತ ತಿರುಗಿ ದಿಟ್ಟಿಸುತ್ತಿರುವಾಗ ಇನ್ನೂ ಆಕೆಯ ಚಿತ್ರ ತೆಗೆಯಲು ಹೇಗೆ ಸಾಧ್ಯ ? ! ಆದರೂ ತೆಗೆವ ಪ್ರಯತ್ನದಲ್ಲಿದ್ದಾಗ ಹಿಂದಿನಿಂದ ಇನ್ನೊಂದು ಕಾರು ನಮ್ಮಿಬ್ಬರ ಮಧ್ಯೆ ಹಾದು ಹೋಗಿತ್ತು. ಅವಳು ತನ್ನ ಚಿತ್ರ ತೆಗೆವ ಪ್ರಯತ್ನ ಮಾಡುತ್ತಿದ್ದಾನೆಂದು ನನ್ನ ದುರುಗುಟ್ಟುತ್ತಿದ್ದಳೇ, ಕೋಪಗೊಂಡಿದ್ದಳೇ, ಖುಷಿಪಟ್ಟಳೇ, ಅಥವಾ ನನ್ನ ನೋಡಿಯೇ ಇರಲಿಲ್ಲವೇ ಎಂಬುದ ಇದ್ದ ದೂರದಿಂದ ಹೇಳಲು ಸಾಧ್ಯವಿರಲಿಲ್ಲ.  ದೂರ ಮತ್ತು ಸುಳಿದ ಯೋಚನಾಲಹರಿಗಳ ಮಧ್ಯೆ ಅವಳ ಮುಖವೇ ಸರಿಯಾಗಿ ಕಂಡಿರಲಿಲ್ಲ. ಆಲೋಚನೆಗಳಿಂದ ವಾಸ್ತವಕ್ಕೆ ಬರುವಾಗ ಆವಳೇ ಅಲ್ಲಿರಲಿಲ್ಲ. ಹೋಗಲಿ  ,ತೆಗೆದ ಚಿತ್ರವನ್ನಾದರೂ ಜೂಮ್ ಮಾಡಿ ನೋಡೋಣವೆಂದರೆ ಅದರಲ್ಲಿ ಬಂದಿದ್ದು ಅವಳಿಗೆ ಅಡ್ಡವಾಗಿ ವೇಗವಾಗಿ ಸಾಗಿಹೋದ ಕಾರ ಭೂತವಷ್ಟೆ !

ಅಂದು ಪ್ರತಿಫಲನದಲ್ಲಿ ಕಂಡು ಮರೆಯಾದವಳು ಇಂದು ಮತ್ತೊಮ್ಮೆ ಮಳೆಯಲ್ಲೇ ಕಂಡಳೇ ? ಹೌದು. ಅವಳಂತೇ ಇದ್ದಾಳೆ. ಇಂದಾದರೂ ಹತ್ತಿರ ಹೋಗಿ ಅಂದು ಫೋಟೋ ತೆಗೆಯ ಹೊರಟಿದ್ದು ನಿಮ್ಮದಲ್ಲ,ಹೇಳದೇ ಕೇಳದೇ ನಿಮ್ಮ ಫೋಟೋ ತೆಗೆಯಹೊರಟೆ ಅಂತೇನಾದ್ರೂ ಸಿಟ್ಟಾದ್ರೆ ಕ್ಷಮಿಸಿ ಅಂತೇನಾದ್ರೋ ಹೇಳಬೇಕಂತ ಇವನ ಮನ ತುಡಿಯುತ್ತಿತ್ತು. ಆದ್ರೆ ಆಕೆ ಫುಟಪಾತಿನಲ್ಲಿ , ಈತ ನೀರ ಮಧ್ಯದ ಟ್ರಾಫಿಕ್ಕಿನಲ್ಲಿ ಸಿಕ್ಕ ಬಸ್ಸಿನಲ್ಲಿ. ಇವರ ಮಧ್ಯದ ಎಂಟತ್ತು ಹೆಜ್ಜೆಗಳ ಹಾದಿ ಮಳೆಯ ಕಾರಣ ವಿಪರೀತ ದೂರವೆನಿಸುತ್ತಿತ್ತು. ಮಧ್ಯೆ ನಿಂತ ನೀರು ಸಪ್ತ ಸಾಗರವಷ್ಟು ವಿಶಾಲವೆಂಬೋ ಭಾವದಿ ಕಾಡುತ್ತಿತ್ತು ! ಅಂತೂ ಧೈರ್ಯ ಮಾಡಿ ಇಳಿದವನ ಕಾಲಿಗೆ ಹರಿಯುತ್ತಿದ್ದ ನೀರಲ್ಲೇನೋ ತಾಗಿದಂತಾಯ್ತು. ಏನಪ್ಪಾ ಅಂತ ದಿಟ್ಟಿಸಿದ್ರೆ ಹರಿವ ನೀರಲ್ಲೊಂದು ಮುರಿದ ಕೊಂಬೆ. ದೇಗುಲಗಳ ಎದುರಿಗೆ ಬೇಡುತ್ತಿದ್ದ ಭಿಕ್ಷುಕರಿಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದ ನನಗೆ ಹೊಡೆಯಲು ಅವರ ಕೈಗಳೇ ಈ ಕೊಂಬೆಯಾಗಿ ಬಂದಿದ್ಯೋ ? ಈ ಕೊಂಬೆಯೀಗ ನನ್ನ ಕಾಲ ಕಟ್ಟಿ ಯಾವುದೋ ಗುಂಡಿಯೊಳಗೆ ತಳ್ಳಿ ಉಸಿರುಗಟ್ಟಿಸಿ ಕೊಂದುಬಿಡುತ್ತದೇನೋ ಎನಿಸಿತೊಮ್ಮೆ. ಛೇ ! ತನ್ನ ಕಲ್ಪನೆಗೆ ತಾನೇ ಬೆಚ್ಚಿಬಿದ್ದ ಇವ ಯಾವುದೋ ಬಸ್ಸಿನ ಹಾರ್ನಿನೊಂದಿಗೆ ಮತ್ತೆ ತನ್ನ ವಾಸ್ತವಕ್ಕೆ ಬರುವಷ್ಟರಲ್ಲಿ ಕೊಂಬೆ ತನ್ನ ಪಾಡಿಗೆ ಕಾಣದಂತೆ ಎಲ್ಲೋ ಹರಿದುಹೋಗಿತ್ತು ಮುಂದೆ.  ಗಾಡಿಗಳು ಮುಂದೆ ಹೋಗೋಲ್ಲವೆಂದು ಗೊತ್ತಿದ್ರೂ ಹಾರ್ನು ಮಾಡೋದ್ಯಾಕೆ ಜನ ಅಂತ ಕರ್ಕಶ ಧ್ವನಿಗೆ ಬೈದುಕೊಳ್ಳುತ್ತಿದ್ದಾಗಲೇ ಅಗತ್ಯವಿಲ್ಲದಿದ್ದರೂ, ಸಂಬಳ ಸಾಲದೆಂದಿದ್ರೂ ಸಾಲ ಮಾಡಾದ್ರೂ ಕಾರು ಕೊಳ್ಳೋ ಬಯಕೆಯಾಗೆ ನಿನಗೆ , ಅದೂ ಹೀಗೇ ಅಲ್ಲವೇ ಎಂಬ ಮಾತೊಂದು ಅವನಂತರಾಳದಲ್ಲಿ ಧ್ವನಿಸಿದಂತಾಯ್ತು. ತನ್ನೊಳಗೆ ಇಂದು ಹರಿದಾಡುತ್ತಿದ್ದ ವಿಚಾರಧಾರೆಗೆ ತಾನೇ ಅಚ್ಚರಿಪಡುತ್ತಾ ಇದ್ದಿರಬಹುದಾದ ಹೊಂಡವ ತಪ್ಪಿಸುತ್ತಾ ಪುಟ್ಪಾತ ತಲುಪುವಷ್ಟರಲ್ಲೇ ಆಕೆ ಮುಂದೆ ಸಾಗಿಯಾಗಿತ್ತು. ಫುಟ್ ಪಾತಿನಲ್ಲಿನ ಹೊಂಡಗಳು ಇಂತಲ್ಲೇ ಇದೆಯೆಂಬ ಲೆಕ್ಕಾಚಾರ ಗೊತ್ತಿರುವಂತೆ ನೀರ ಮಧ್ಯೆಯಲ್ಲಿ ದಾಪುಗಾಲು ಹಾಕುತ್ತಿದ್ದ, ನೀರಿಲ್ಲದ ಜಾಗದಿಂದ ಮತ್ತೊಂದು ನೀರಿಲ್ಲದ ಜಾಗಕ್ಕೆ ಲಾಂಗ್ ಜಂಪ್ ಮಾಡುತ್ತಾ ಮುಂದೆ ಸಾಗುತ್ತಿದ್ದ ಅವಳ ಆಕೃತಿ ಬೀಳುತ್ತಿದ್ದ ಆಲೀಕಲ್ಲಿನ ಮಳೆಯ ಆರ್ಭಟಕ್ಕೆ ಕೆಲ ಕ್ಷಣಗಳಲ್ಲೇ ಮರೆಯಾಯಿತು. ಇಂದಲ್ಲಾ ನಾಳೆ ಮತ್ತೊಮ್ಮೆ ಸಿಕ್ಕಾಳೆಂಬ ಭರವಸೆಯಲ್ಲಿ ಇವನೂ ಮುಂದೆ ಹೆಜ್ಜೆ ಹಾಕಿದ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *