ಅಪ್ಪ,
ಚಿಕ್ಕಂದಿನಲ್ಲಿ ಈ ಎರಡು ಅಕ್ಷರಗಳು ನನ್ನ ಮನಸ್ಸಿನಲ್ಲಿ ನೆಲೆಯೂರುವಂತೆ ನೀನು ಮಾಡಲಿಲ್ಲ, ನಾ ತೊದಲು ನುಡಿವಾಗ ನೀ ಬಂದು ಮುದ್ದಾಡಲಿಲ್ಲ, ನಡಿಗೆ ಕಲಿವ ಬರದಲ್ಲಿ ಬಿದ್ದಾಗ ನೀ ಬಂದು ನನ್ನ ಎತ್ತಿ ಸಂತೈಸಲಿಲ್ಲ, ಅಮ್ಮ ನನ್ನ ಹೊಡೆವಾಗ ನೀ ಬಂದು ಬಿಡಿಸಲು ಇಲ್ಲ, ಹಾಗೆಂದು ನಾನೆಂದಿಗೂ ನೀನು ಬೇಕೆಂದು ಬಯಸಲಿಲ್ಲ, ಒಂದುವೇಳೆ ಮನಸ್ಸು ನಿನ್ನ ಬಯಸಿದರು ಅದರ ಆಸೆಯನ್ನು ಶಮನಗೊಳಿಸುವಲ್ಲಿ ನಾನು ಯಶಸ್ವಿಯಾದೆ.
ಆದರೂ ಅಪ್ಪ ನಿನ್ನಿಂದ ಅನುಭವಿಸಿದ ನೋವುಗಳಿಗೆ ಲೆಕ್ಕವಿಲ್ಲ, ಹೇಗೆಂದು ಕೇಳುವೆಯ? ಪುಟ್ಟ ಮಗುವೊಂದು ತನ್ನ ತಂದೆಯ ಕೈ ಹಿಡಿದು ಹೋಗುತ್ತಿರುವಾಗ ನನ್ನಲ್ಲಿ ಆಗುತಿದ್ದ ತಳಮಳ ನಾ ವಿವರಿಸಲಾರೆ, ನನ್ನ ಗೆಳತಿಯ ತಂದೆ ಅವಳಿಗಾಗಿ ತೋರುತಿದ್ದ ಆಸ್ಥೆ ಕಂಡು ನೀನೆಷ್ಟೊಂದು ಕಲ್ಲು ಮನಸ್ಸಿನವನೆಂದು ಕರುಬುತಿದ್ದೆ. ಯಾರಾದರು ನಿನ್ನ ಬಗ್ಗೆ ಕೇಳಿದಾಗ ನೀನು ನಮ್ಮನ್ನು ಕೈ ಬಿಟ್ಟವನೆಂದು ಹೇಳಲಾರದೆ ನರಳುತಿದ್ದೆ. ನೀನು ನಮ್ಮೊಡನೆ ಇಲ್ಲವೆಂದು ತಿಳಿದವರು ತೋರುತ್ತಿದ್ದ ಸುಳ್ಳು ಅನುಕಂಪವನ್ನು ನೋಡಿದಾಗ ಮನಸ್ಸು ನಿನ್ನ ಬಗ್ಗೆ ಕಿಡಿ ಕಾರುತಿತ್ತು. ಕೆಲವೊಮ್ಮೆ ಅಮ್ಮ ನಿನ್ನ ಮೇಲಿನ ಕೋಪಕ್ಕೆ ನನ್ನನ್ನು ಗುರಿ ಮಾಡಿದಾಗ ನಿನ್ನ ಮಗಳಾಗಿ ಹುಟ್ಟಲು ನಾನು ಮಾಡಿದ ಪಾಪವೇನೋ ಎನಿಸುತಿತ್ತು. ಗಂಡು ದಿಕ್ಕಿಲ್ಲದ ಮನೆಯೆಂದು ನೆಂಟರಿಷ್ಟರು ನಮ್ಮನ್ನು ಅವಮಾನಿಸಿ ಅಸಹಾಯಕರನ್ನಾಗಿ ಮಾಡುತಿದ್ದ ಗಳಿಗೆಗಳನ್ನು ನೆನೆಸಿಕೊಂಡರೆ ಈಗಲು ನನ್ನಲ್ಲಿರುವ ನಿನ್ನದೇ ರಕ್ತ ಕುದಿಯುತ್ತದೆ. ಇಷ್ಟೆಲ್ಲಾ ಆದರೂ ಮನಸ್ಸು ನಿನ್ನ ಬಗ್ಗೆ ಕನಿಕರಿಸುತ್ತದೆ ಏಕೆ ಗೊತ್ತಾ? ದೇವತೆಯಂಥ ಅಮ್ಮನೊಂದಿಗೆ ಬದುಕುವ ಪುಣ್ಯ ನಿಂಗಿಲ್ಲದೆ ಹೋಯಿತೆಂದು, ನೀನು ಆಕೆಗೆ ಎಷ್ಟೇ ಮೋಸ ಮಾಡಿದರು ನಿನ್ನಿಂದ ಎಷ್ಟೇ ನೋವು ಅನುತಾಪಗಳನ್ನು ಅನುಭವಿಸಿದ್ದರು ಮಕ್ಕಳ ಮನಸಲ್ಲಿ ನಿನ್ನ ಬಗ್ಗೆ ಗೌರವ ಹುಟ್ಟಿಸಲು ಪ್ರಯತ್ನಿಸುತಿದ್ದಳು ಆ ತಾಯಿ.
ಅಪ್ಪಾ, ನಿನಗೆ ಗೊತ್ತಾ ನಿನ್ನನ್ನು ನಾನೆಷ್ಟೇ ದೂಷಿಸಿದರು ಅಂದು ನೀನು ಈ ಲೋಕವನ್ನು ತ್ಯಜಿಸಿದ ವಿಷಯ ವರ್ಷಗಳ ಮೇಲೆ ಯಾರೋ ಮೂರನೆಯವರಿಂದ ತಿಳಿದಾಗ ನನಗೆ ತಿಳಿಯದೆ ಹೃದಯ ನಿನಗಾಗಿ ರೋದಿಸಿತ್ತು, ನೀನೊಂದು ದಿನ ಬರುವೆ, ನಮ್ಮೊಡನಿರಲು ಹಾತೊರೆಯುವೆ, ಅಂದು ನಿನ್ನ ಮೇಲೆ ನನ್ನಿಷ್ಟು ವರ್ಷಗಳ ಪ್ರತಿಕಾರ ತೀರಿಸಿ ಕೊನೆಗೆ ನಿನ್ನ ಮಗಳಾಗಿ ನಮ್ಮ ಕುಟುಂಬವನ್ನು ನಿನ್ನೊಡನೆ ಪೂರ್ಣ ಗೊಳಿಸಬೇಕೆಂದಿದ್ದ ಮನಸ್ಸಿಗೆ ಬಾರಿ ಆಘಾತವಾಗಿತ್ತು, ಕೊನೆಗೆ ನಿನ್ನ ಅಗಲಿಕೆಯ ಸುದ್ದಿಯನ್ನು ನಾನೇ ಅಮ್ಮನಿಗೆ ಹೇಳಬೇಕಾದಾಗ ಮತ್ತೂ ಹಿಂಸೆಯಾಗಿತ್ತು.
ಇವಿಷ್ಟನ್ನು ಯಾರ ಬಳಿಯೂ ಹೇಳಲಾರದೆ ಮನದೊಳಗೆ ಬಚ್ಚಿಡಲಾರದೆ ಇಂದು ಬರವಣಿಗೆಯ ಮೂಲಕ ನಿನ್ನ ಆತ್ಮಕ್ಕೆ ತಿಳಿಸುತಿದ್ದೇನೆ, ಈ ಜನ್ಮಕ್ಕೆ ನನ್ನ ನಿನ್ನ ಬಂಧ ಸುಳಿವಿಲ್ಲದೆ ಅಳಿಸಿಹೋಯಿತು. ಮತ್ತೊಂದು ಜನ್ಮವೆಂದಿಂದರೆ ನಿನಗೆ ಮತ್ತೆ ತಂದೆಯ ಸ್ಥಾನ ಸಿಕ್ಕರೆ ದಯವಿಟ್ಟು ಅದನ್ನು ಪರಿಪೂರ್ಣಗೊಳಿಸು ಏಕೆಂದರೆ ಆ ಸ್ಥಾನ ಹೆಣ್ಣಿನ ಜೀವಕ್ಕೆ ಅತಿ ಅಮೂಲ್ಯವಾದದ್ದು, ಪ್ರತಿಯೊಬ್ಬ ಹೆಣ್ಣಿಗೂ ಅವಳ ಮೊದಲ ಹೀರೋ ಅವಳ 'ತಂದೆ' ಆತನೇ ಅವಳ ವೈರಿಯಾದರೆ ಆಕೆ ಮತ್ಯಾವ ಗಂಡನ್ನು ಸುಲಭವಾಗಿ ನಂಬಲಾರಳು.
-ಇಂತಿ
ನಿನ್ನ ಪ್ರೀತಿಯಿಂದ, ನಿನ್ನಿಂದ ವಂಚಿತಳಾದ,
ಕೇವಲ ನೀನಿತ್ತ ಜನ್ಮಕ್ಕಾಗಿ ನಿನ್ನನ್ನು 'ಅಪ್ಪಾ' ಎಂದು ಕರೆಯುವ,
ದುರ್ಭಾಗ್ಯ ಮಗಳು…..
*****
ಹೆಣ್ಣು ಮಗುವಿನ ಮೇಲೆ ಅಪಾರ ಪ್ರೀತಿ ಇರುವ ನನಗೆ ನಿನ್ನ ಬರಹ ಓದಿ ಅಳುವೇ ಬಂದುಬಿಡ್ತಮ್ಮಾ.. ಅಪ್ಪನಾಗಿ ಈ ರೀತಿ ಮಾಡಿದವನಿಗೆ ಕ್ಷಮೆಯೇ ಇಲ್ಲ.. ನಿನ್ನ ಉಳಿದ ಬದುಕನ್ನು ಧೈರ್ಯವಾಗಿ ಎದುರಿಸು.. ದೇವರು ನಿನಗೆ ಶಕ್ತಿಯನ್ನು ಕೊಡಲಿ..