ವಿಜ್ಞಾನ-ಪರಿಸರ

ಕಾಡ ಹಾಡು: ಅಖಿಲೇಶ್ ಚಿಪ್ಪಳಿ


ಎ ಫಾರ್ ಆಪಲ್ ಯಾಕೆ ಅನಿಮಲ್ ಯಾಕಲ್ಲ? ಲಕ್ಷಗಟ್ಟಲೇ ಡೊನೇಷನ್ ತೆತ್ತು, ಅಸಾಧಾರಣವಾದ ಇಂಟರ್‍ಯೂನ ಎದುರಿಸಿ ಪುಟ್ಟಿಗೊಂದು ಸೀಟುಕೊಡಿಸಿ ನಿರಾಳವಾಗುವಂತಿಲ್ಲ. ಕ್ಲಾಸಿಗೆ ಮೊದಲಾಗಿ ಬರಬೇಕು, ಇದು ಎಲ್ಲಾ ತಂದೆ-ತಾಯಿಗಳ ಇಚ್ಛೆ. ಎಲ್.ಕೆ.ಜಿ.ಯಿಂದಲೇ ಟ್ಯೂಷನ್ ಶುರು. ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ  ಮುಂದಿರಬೇಕು. ಬಹುತೇಕ ಖಾಸಗಿ ಶಾಲೆಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಇದೇ ನಿಯಮವಿದೆ. ಖಾಸಗಿ ಶಾಲೆಗಳು ಈ ಅಲಿಖಿತ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಶಸ್ಸುಗಳಿಸುತ್ತಾರೆ. ಪಾಪ ಸರ್ಕಾರಿ ಶಾಲೆಗಳ ಶಿಕ್ಷಕರನ್ನೂ ಸರ್ಕಾರ ಎಲ್ಲಾ ಕೆಲಸಗಳಿಗೂ ಬಳಸಿಕೊಳ್ಳುತ್ತದೆಯಾದ್ದರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾರದ ಶಿಕ್ಷಕರು ಬೈಗುಳದ ಬಾಣವನ್ನೆದುರಿಸಬೇಕಾಗುತ್ತದೆ. ಹಿಂದೆಲ್ಲಾ ಅಷ್ಟು ಕಷ್ಟ ಪಟ್ಟು ಶಾಲೆಯಿಲ್ಲದ ಕಾಲದಲ್ಲಿ ಕಲಿತವರ ಒಂದು ಜನಪ್ರಿಯ ಶೈಲಿಯ ವಾಕ್ಯವೆಂದರೆ ’ನಾವು ಎಷ್ಟು ಕಷ್ಟ ಪಟ್ಟು ಕಲಿತಿದ್ದೆವು ಗೊತ್ತಾ?’. ಈಗಿನ ಕಾಲಕ್ಕೆ ಇದು ಸ್ವಲ್ಪ ಹಿಂದುಮುಂದಾಗಬೇಕು. ಮಗು ಇಷ್ಟ ಪಟ್ಟು ಕಲಿಯುವಂತಾಗಬೇಕು.
ಮೊನ್ನೆ ೨೦ ಮಕ್ಕಳು ಬೆಂಗಳೂರಿನಿಂದ ನಮ್ಮಲ್ಲಿಗೆ ಬಂದಿದ್ದರು. ಹೊಸತನ್ನು ಹುಡುಕುವ, ಕಲಿಯುವ ತುಡಿತವಿದ್ದ ಮಕ್ಕಳವು. ಅವರಿಗೆ ಪೋಷಕರೇ ಶಿಕ್ಷಕರು. ಹೆಚ್ಚಿನ ಒತ್ತಡವಿಲ್ಲದ, ಕಟ್ಟುಪಾಡುಗಳಿಲ್ಲದ, ಕಡ್ಡಾಯ ಹಾಜರಿಯಿಲ್ಲದ ಒಂದು ಹೊಸ ಪ್ರಯೋಗವದು. ಬೆಳಗ್ಗೆ ೬ ಗಂಟೆಗೆ ಪರಿಸರ ಪಾಠ ಕೇಳಲು ಅತ್ಯುತ್ಸಾಹದಿಂದ ಬಂದಿಳಿದರು. ಚಿಕ್ಕವಳಿಗೆ ಬಹುಶ: ೭ ವರ್ಷ ಹಾಗೆಯೇ ದೊಡ್ಡವನಿಗೆ ೧೨. ಅದೇನು? ಇದೇನು? ಅದ್ಯಾಕೆ ಹಾಗೆ? ಹೀಗೆ ಪ್ರಶ್ನೆಗಳು ಯಾವುದೇ ಮಾಲಿನ್ಯವಿಲ್ಲದೆ ಅವರ ತಲೆಯೆಂಬ ಗಣಿಯಿಂದ ತೂರಿ ಬಂದವು. ಮಧ್ಯಂತರದಲ್ಲಿ ಒಂದು ಚಿಟಿಕೆ ಸಕ್ಕರೆ ಕೊಟ್ಟು ತಿನ್ನಲು ಹೇಳಿದೆ. ನೀವು ತಿಂದದ್ದು ಏನು ಎಂದು ಕೇಳಿದಾಗ ’ಸಕ್ಕರೆ’ ಎಂದು ಎಲ್ಲರೂ ಹೇಳಿದರು. ಹಾಗೆಯೇ ಬೇಲಿಸಾಲಿನಲ್ಲಿ ಕಾಣಸಿಗುವ ಕಿರುಗೊಡಸ (ಮಧುನಾಶಿನಿ) ತಿನ್ನಿಸಿದೆ. ಒಗರಾದ ಎಲೆಯನ್ನು ತಿಂದು ಮುಖ ಹಿಂಡಿದರು. ಒಂದು ಚಿಟಿಕೆ ಸಕ್ಕರೆ ಕೊಟ್ಟು ಕೇಳಿದೆ, ರುಚಿ ಹೇಗಿದೆ? ಅಂಕಲ್ ಮಣ್ಣು ತಿಂದ ಹಾಗೆ ಆಗುತ್ತೆ. ಸಿಹಿ ಗೊತ್ತಾಗಲ್ಲ. ಹೆಸರೇ ಹೇಳುವಂತೆ ಮಧುನಾಶಿಗೆ ತಾತ್ಕಾಲಿಕವಾಗಿ ಸಕ್ಕರೆಯ ಸಿಹಿ ಮಾಚುವ ಗುಣವಿದೆ. ಜಗಿದಾಗ ಹೊರಬರುವ ರಸ ನಮ್ಮ ರುಚಿಗ್ರಂಥಿಗಳನ್ನು ತಾತ್ಕಾಲಿಕವಾಗಿ ನಿಷ್ಕೀಯಗೊಳಿಸುತ್ತದೆ. ಇದರಿಂದ ಅಪಾಯವೇನೂ ಇಲ್ಲ. 

ಮಾರನೇ ದಿನ ಹಕ್ಕಿ ತೋರಿಸಲು ಕೆರೆಗಳ ಬಳಿಗೆ ಕರೆದುಕೊಂಡು ಹೋದೆ. ಬರೀ ಟಿ.ವಿ.-ಕಂಪ್ಯೂಟರ್-ಪುಸ್ತಕದಲ್ಲಿ ನೋಡಿದ್ದ ಹಕ್ಕಿಗಳನ್ನು ಅಚ್ಚರಿಯೆಂಬಂತೆ ಗುರುತಿಸಿ ಹೆಸರಿಸಿದರು. ಪುಟ್ಟಿಯೊಬ್ಬಳ ಕೈತುಂಬಾ ಹೂಗಳು, ಮತ್ತೊಬ್ಬನ ಕೈಯಲ್ಲಿ ಸತ್ತ ದನದ ಎಲುಬಿನ ಚೂರು, ಮಗದೊಬ್ಬನ ಕೈಯಲ್ಲೊಂದು ಕೋಲು. ಹಕ್ಕಿಯನ್ನು ನೋಡಲು ಬೈನಾಕ್ಯೂಲರ್ ಹೊತ್ತು ಬಂದ ಮಕ್ಕಳಲ್ಲಿ, ಹಕ್ಕಿ ನೋಡಿದ ಸಾರ್ಥಕತೆ. ಮಿಂಚುಳ್ಳಿಗೆ ’ಕಿಂಗ್‌ಫಿಶರ್’ ಎಂದರು. ಕಾಜಾಣಕ್ಕೆ ’ಬ್ಲಾಕ್ ಡ್ರೋಂಗೋ ಎಂದರು, ಬೆಳ್ಳಕ್ಕಿಗೆ ’ಇಗ್ರೇಟ್’. ಸಾಧ್ಯವಾದಷ್ಟು ನನ್ನ ಜ್ಞಾನವನ್ನು ಅವರಿಗೆರೆದೆ. 

ಮಾರನೇ ದಿನ ಫಾರಂಗೆ ಹೋದಾಗ ಸೂಜಿಮೆಣಸು ತಿಂದು ಬಾಯಿ ಖಾರ ಮಾಡಿಕೊಂಡು ಸಕ್ಕರೆ ಕೇಳಿದರು. ಬೆಳಗಿನ ೬ ಗಂಟೆಗೆ ಸಕ್ಕರೆಯನ್ನು ಎಲ್ಲಿಂದ ತರಲಿ. ಹಾಗೆಯೇ ಹಾ.. . ಹೂ. .. ಎನ್ನುತ್ತಾ ಬಾಟಲಿಯ ನೀರನ್ನು ಕುಡಿದರು. ಅಲ್ಲೇ ಇದ್ದ, ಸಿಂಗಪುರ್ ಚೆರ್ರಿಯ ಹಣ್ಣುಗಳನ್ನು ಕಿತ್ತು ಕೊಟ್ಟೆ, ಕಂಬಳಿಹುಳುವಿನಂತೆ ತೋರುವ ಅಂಬಾರ ಹಣ್ಣು ಎಲ್ಲರಿಗೂ ಇಷ್ಟವಾಯಿತು. ಗಿಡದ ಕಟಿಂಗ್ ಬೇಕು ಎಂದರು. ನೀವು ವಾಪಾಸು ಬೆಂಗಳೂರಿಗೆ ಹೋಗುವಾಗ ಕೊಡುವೆ ಎಂಬ ಭರವಸೆ ಕೊಟ್ಟೆ. ಬಿದಿರಿಗೂ-ಬೆತ್ತಕ್ಕೂ ವ್ಯತ್ಯಾಸ ತಿಳಿದರು. ಒಟ್ಟು ಮೂರು ದಿನದ ಮುಂಜಾವು ಚಿಣ್ಣರ ಆಸರೆಯಲ್ಲಿ ಕಳೆಯಿತು. ನಾಳೆ ಮತ್ತೆ ಬನ್ನಿ ಎಂದು ಆಗ್ರಹಿಸಿದರು. ಆ ದಿನ ಅವರಿಗೆ ಬೇರೆಯ ಪಾಠವಿತ್ತು. ಆದ್ದರಿಂದ, ಹೋಗಲಿಲ್ಲ.  ಇಂದು ಅವರ ಶಿಬಿರದ ಕೊನೆಯ ದಿನ. ಅವರು ಉಳಿದುಕೊಂಡಿದ್ದು ಹೆಗ್ಗೋಡಿನ ಹತ್ತಿರದ ಅಮಟೆಕೊಪ್ಪದ ’ಹೊಂಗಿರಣ’ ಶಾಲೆಯಲ್ಲಿ. ಸಂಜೆ ಅದೇ ಮಕ್ಕಳಿಂದ ನಾಟಕ. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಶಾಲೆಯ ಶಿಕ್ಷಕರಿಗೆ ಬರೆದ ಪದ್ಯವನ್ನು ಕನ್ನಡದಲ್ಲಿ ಕಲಿತು ಸುಶ್ರಾವ್ಯವಾಗಿ ಹಾಡಿದರು. ಕೊಟ್ಟ ಭರವಸೆಯಂತೆ ಅಂಬಾರ ಹಣ್ಣಿನ ಗಿಡದ ಕಟಿಂಗ್ ಕೊಟ್ಟಾಗ ಮಕ್ಕಳ ಮುಖವರಳಿತು.

ಹೀಗೆ ಮುಗ್ಧ ಮನಸುಗಳಿಗೆ ಪ್ರಕೃತಿ ಅಗಾಧವಾದ ಖುಷಿಯನ್ನು ಧಾರೆಯರೆಯುತ್ತದೆ. ರಾಷ್ಟ್ರೀಯ ಉತ್ಪನ್ನಗಳನ್ನು ಹೆಚ್ಚಿಸಲು, ಅಭಿವೃದ್ಧಿಯ ಹೆಸರಿನಲ್ಲಿ ಕಾಡು-ಜೀವಿವೈವಿಧ್ಯಗಳನ್ನು ನಾಶ ಮಾಡಿ ನಾಳಿನ ಮಕ್ಕಳ ಕನಸನ್ನು ಇಂದೇ ಚಿವುಟಿ ಹಾಕುತ್ತಿದ್ದೇವೆ. ಹಿಂದೊಮ್ಮೆ ಕುವೆಂಪುರವರ ನಾಡಗೀತೆ ಕೇಳುವಾಗ, ಕಾಡಿಗೊಂದು ಗೀತೆಯಿಲ್ಲ ಯಾಕೆ? ಎಂಬ ಭಾವನೆ ಬಂತು. ಪದ್ಯರೂಪ ನನ್ನ ಪ್ರಾಕಾರವಲ್ಲವಾದರೂ, ತುಡಿತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ರಾತ್ರಿ ಕುಳಿತು ಬರೆದೆ. ನಾಡಿನ ಖ್ಯಾತ ಸಾಹಿತಿ ಡಾ:ನಾಡಿಯವರು ಮೂಲಾರ್ಥವನ್ನು ಹಾಗೆಯೇ ಉಳಿಸಿ ಕೊಂಚ ತಿದ್ದಿದರು. ಬರೀ ಕಾಡಿಗೆ ಸಂಬಂಧಿಸಿದ ಈ ಹಾಡಿಗೆ ಶಿವಮೊಗ್ಗದ ಜನಪದ ಸಂಗೀತಗಾರ ಶ್ರೀ ಕೆ.ಯುವರಾಜ್ ಸಂಗೀತ ಸಂಯೋಜಿಸಿ ಹಾಡಿದ ಹಾಡು ಈ ಭಾಗದಲ್ಲಿ ಜನಪ್ರಿಯವಾಗಿದೆ. ಉತ್ಸಾಹಿಗಳು ಯಾರಾದರೂ ಇದಕ್ಕೆ ರಾಗ-ಸಂಗೀತ ಹಾಕಿ ಹಾಡಿಕೊಳ್ಳಬಹುದು.

ಕಾಡಿನ ಹಾಡು 
ನಾಡಿನಲ್ಲಿ ನೆಲೆಸಿರುವ ಬುದ್ಧಿವಂತ ಮನಜರೇ, ಕೇಳಿರೊಮ್ಮೆ, ಕೇಳಿರೊಮ್ಮೆ ಕಾಡೀನೀ ಹಾಡನೂ, ಹಾಡ ಕೇಳಿ ಚಿಂತಿಸಿ ನಮ್ಮ ಪರಿಸರ ಉಳಿಸುವ ಬಗೆಯಾ, ಇಂದಿಗೂ ಎಂದಿಗೂ ಉಳಿಯಲೇ ಬೇಕು ನಮ್ಮ ಈ ಸುಂದರ ಮರ-ಗಿಡ-ಬಳ್ಳಿ, ಪ್ರಾಣಿ-ಪಕ್ಷಿಗಳ ಪರಿಸರಾ

ಬುವಿಯ ಮರಗಿಡ ಬಳ್ಳಿಗಳ ಏನೆಂದು ಬಗೆದಿ
ಭೂತಾಯಿಯ ಪಚ್ಚೆಹಸಿರಿನ ಆಭರಣಗಳಿವು ತಿಳಿ                         

ಕಾಡುಗೀಡಗಳಲಿ ಪ್ರಾಣಿಗಳ ಸಹ ಸಂಚಾರ 
ಓಡಿ ಹಾರುವ ನಡೆದು ತೆವಳುವ ಪ್ರಾಣಿ ವಿಹಾರ                            

ಮಣ್ಣಿನಲಿ ನೀರಿನಲಿ ಬದುಕ ಸಾಗಿಸುತ
ಜೀವ ಹಿಡಿದಿರುವ ಇವುಗಳ ಬಗೆ ಬಲ್ಲೆ ಏನು?                             

ಅಲ್ಲಿ ಅರಳಿ ಇಲ್ಲಿ ನೆಲ್ಲಿ ತಿರುಗಿ ನೋಡೇ ಬಸರಿ
ಗೋಣಿ ಮಾವು ಆಲ ತಾರೀ ಹಸಿರು ಕಾಡಿನಲಿ                            

ಹಾರುತಿದೆ ಹದ್ದು ಗಿಡುಗ ಉಲಿಯುತಿದೆ ಕೋಗಿಲೆ
ಕುಟ್ಟುತ್ತಿರುವ ಮರದ ಕುಟಿಕ ನೀರಹಕ್ಕಿ ಕೂಜನ                            

ಕಾ ಎನ್ನುವ ಕಾಗೆಯೂ ಛೀಂ ಎನ್ನುವ ಗುಬ್ಬಿ
ಟೀ ಅನ್ನುವ ಟಿಟ್ಟಿಭ ಬುಸ್ ಎಂದಿತು ಕಾಳಿಂಗ                            

ಬಾನ ತುಂಬ ಹಕ್ಕಿ ಬಳಗ ಕಾಡಿನಲ್ಲಿ ಸಂಗೀತ
ಹಾರಿ ನೆಗೆವ ಜಿಂಕೆ ಮರಿ ನೆಗೆದಾಡುವ ಸಿಂಗಳೀಕ                        

ಇಲಿಯ ತಿಂಬ ಗೂಬೆ ಹಾವು ಜಿಂಕೆಯ ತಿಂಬ ಹುಲಿರಾಯ
ಕೀಟ ತಿಂಬ ಪಿಕಳಾರ ಕಪ್ಪೆ ಎಲ್ಲ ಇಲ್ಲಿ ಗೆಳೆಯರೈ                            

ಹಾರುಬೆಕ್ಕು ಕಾಡುಬೆಕ್ಕು ಗಿಡದ ತುಂಬ ಗಿಳಿ
ಮಂಗಟ್ಟೆ ಬಾವಲಿ ಬೀಜ ಬಿತ್ತುವ ಶ್ರಮಜೀವಿ                            

ಸಿಹಿ ನೇರಳೇ ಒಗರು ಪೇರಳೇ ಹಿಟ್ಟು ರಂಜಲ
ವಾಸ್ತು ಅರಿತ ಗೀಜುಗ ಪೊಟರೆಯಲ್ಲಿ ಕುಟ್ರ                            

ಜುಂ ಎನ್ನುವ ಜೇನು ಪರಾಗಸ್ಪರ್ಶ ತಾನು
ಸಿಹಿಯಾದ ಬೀಜ ಸಂಪಿಗೆ, ಹುಳಿ-ಹುಳಿ ದ್ಯಾವಣಿಗೆ ಕಹಿ-ಕಹಿ ಕೊಡಸೆ                

ನಾಲಿಗೆಗೂ ಸೈ ಔಷಧಕೂ ಸೈ ಕಣ್ಣಿಗದು ಬಲು ಸುಂದರ
ಕಾಡ ಹಾಡ ಕೇಳಲು ಕಿವಿಗೆ ಕೂಡ ಅತಿ ಮಧುರ            

ಮೋಡದಿಂದ ನೀರು ಬಿದ್ದು ಬಿದ್ದೆಲೆಯೆ ಗೊಬ್ಬರ
ಎಲ್ಲವನು ಮೇಳವಿಸಿ ಕಾಡು ಇಲ್ಲಿ ಬೆಳೆಯಲು                            

ಕೋಟಿ ಕೋಟಿ ವರ್ಷದಿಂದ ಇಲ್ಲಿ ಕಾಡು ಸೊಕ್ಕಲು
ಮನುಜ ತಂದ ಕೊಡಲಿಯ ಈ ಕಾಡ ಕಡಿಯಲು                        

ತೆವಳುತಿರುವ ನನ್ನ ಕೊಂದು ಸೊಂಟ ಪಟ್ಟಿ ಮಾಡಿದ
ಈಜುತಿರುವ ನನ್ನ ಸುಲಿದು ಕೈಚೀಲ ಹೊಲಿದನು                            

ಚಳಿಯು ಬಳಿಗೆ ಬಾರದಂತೆ ತುಪ್ಪಳವನು ಧರಿಸಿದ
ಗೋಡೆಗೊಂದು ಕೊಂಬು ಹಚ್ಚಿ ತನ್ನ ಹಿರಿಮೆ ಮೆರೆಸಿದ                        

ದೇವ ಮೂರ್ತಿ ತೊಳೆಯಲೆಂದು ವರಾಹ ರೋಮ ತಿಕ್ಕಿದ
ಮಕ್ಕಳಾಗಲಿಲ್ಲವೆಂದು ಕೊಂಬು ತೇದು ನೆಕ್ಕಿದ                            

ಮಕ್ಕಳಲ್ಲಿ ಧೈರ್ಯಬರಲು ಹುಲಿಯ ಹಲ್ಲ ಕಟ್ಟಿದ
ಬಿಳಿಯ ಆನೆ ದಂತದಿಂದ ಬುದ್ಧನನ್ನ ಮಾಡಿದ                            

ದೇವಮಾನವಗಾಗಿ ಅಗಲ ಕುರ್ಚಿ ಜಿಂಕೆ ಚರ್ಮ ಹೊದಿಸಲು
ಬಂದರಯ್ಯ ಜನರೆಲ್ಲರು ಉಪದೇಶ ಕೇಳಲು                            

ಮರವ ಕಡಿದು ಗುಡಿಯ ಕಟ್ಟಿ ಮೆರೆವರೆಲ್ಲ ಸೋಜಿಗ
ಮರವು ಕೊಡುವ ಶುದ್ಧಗಾಳಿ ಗುಡಿ ಕೊಟ್ಟಿತೆ ಕೇಳುಗ                        

ನಡೆವ ನಾನು ಅಮರ ಉಸಿರಾಡುವ ಮರ ನಶ್ವರ
ಎಂದು ತಿಳಿದ ಮಾನವ ಮೂರ್ಖರಲ್ಲಿ ಮೂರ್ಖನು                        

ಪ್ರಾಣಿ ಪಕ್ಷಿ ಬೇಕೇ ಬೇಕು ಮರಗಿಡ ಇರಲೇ ಬೇಕು
ಆಗ ವಿಶ್ವ ಸುಂದರ ಮಧುರ ಕಾವ್ಯ ಮಂದಿರ            

ಸಾಹಿತ್ಯ: ಅಖಿಲೇಶ್ ಚಿಪ್ಪಳಿ    
ರಾಗಸಂಯೋಜನೆ-ಸಂಗೀತ-ಹಾಡು: ಶ್ರೀ ಕೆ.ಯುವರಾಜ್, ಶಿವಮೊಗ್ಗ
ಸಹಕಾರ: ಡಾ:ನಾ.ಡಿಸೋಜ ಹಾಗೂ ಶ್ರೀ ಬಿ.ವೆಂಕಟಗಿರಿ, ಶಿವಮೊಗ್ಗ

****

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಕಾಡ ಹಾಡು: ಅಖಿಲೇಶ್ ಚಿಪ್ಪಳಿ

  1. Hello sir,elli nadeddau shibira.next batch ideya?3 varshada hindered manna maga kuppali shibirakke hogidda.give more details.Anupama

    1. ಪ್ರಿಯ ಅನುಪಮಾಜೀ,

      ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು. ಹೊಂಗಿರಣ ಶಾಲೆಯಿರುವುದು ಸಾಗರದಿಂದ ಏಳು ಕಿ.ಮಿ. ದೂರದ ಹೆಗ್ಗೋಡಿನ ಸಮೀಪ. ಅದೊಂದು ವಸತಿ ಶಾಲೆ. ೧ ನೇ ತರಗತಿಯಿಂದ ೧೨ ನೇ ತರಗತಿವರೆಗೆ ಮಕ್ಕಳು ಕಲಿಯುತ್ತಾರೆ. ಸ್ಕೂಲಿನ ಬಗ್ಗೆ ಹೆಚ್ಚಿನ ವಿವರಗಳು ಅವರ ವೆಬ್ ಸೈಟ್ ನಲ್ಲಿ ಲಭ್ಯ. http://www.hongirana.edu.in/

  2. ಪ್ರಿಯ ರಾಧಿಕಜೀ

    ನನ್ನ ಊರು ಹೆಸರೇ ಹೇಳುವಂತೆ ಚಿಪ್ಪಳಿ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು. ಹೊಂಗಿರಣ ಶಾಲೆಯಿರುವುದು ಸಾಗರದಿಂದ ಏಳು ಕಿ.ಮಿ. ದೂರದ ಹೆಗ್ಗೋಡಿನ ಸಮೀಪ. ಅದೊಂದು ವಸತಿ ಶಾಲೆ. ೧ ನೇ ತರಗತಿಯಿಂದ ೧೨ ನೇ ತರಗತಿವರೆಗೆ ಮಕ್ಕಳು ಕಲಿಯುತ್ತಾರೆ. ಸ್ಕೂಲಿನ ಬಗ್ಗೆ ಹೆಚ್ಚಿನ ವಿವರಗಳು ಅವರ ವೆಬ್ ಸೈಟ್ ನಲ್ಲಿ ಲಭ್ಯ. http://www.hongirana.edu.in/

  3. ಪ್ರಿಯ ಅಖಿಲೇಶ್, ಕಾಡಿನ ಬಗ್ಗೆ ನಾಡಿನವರಿಗೆ ಅರಿವು ಮೂಡಿಸಿ, ಅದರ ರಕ್ಷಣೆಗೆ ನಿಮ್ಮ ಶಕ್ತ್ಯಾನುಸಾರ ಪ್ರಯತ್ನಿಸುತ್ತಿರುವ  ನಿಮ್ಮಂಥವರು ಇರುವುದಕ್ಕೇ ಇನ್ನೂ ಅಲ್ಪ ಸ್ವಲ್ಪವಾದರೂ ಮಳೆ – ಬೆಳೆ ಆಗುತ್ತಿದೆ ಅನ್ನುವುದು ನನ್ನ ಮನದಾಳದಿಂದ ಮೂಡಿದ ಅಭಿಪ್ರಾಯ! ತುಂಬಾ ಒಳ್ಳೆಯ ಲೇಖನ!

    1. ನಿಮ್ಮ ಅನಿಸಿಕೆಗೆ ಧನ್ಯವಾದಗಳು ಕುರ್ತಕೋಟಿ. ಆದರೆ ಈಗಿನ ಅಭಿವೃದ್ಧಿಯ ಹಪಾಹಪಿಯನ್ನು ನೋಡಿದರೆ, ಮುಂದಿನ ಪೀಳಿಗೆಗೆ ಒಳ್ಳೆಗಾಲ ಇಲ್ಲವೆಂದೇ ತೋರುತ್ತದೆ.

Leave a Reply

Your email address will not be published. Required fields are marked *