ಒಂದಾನೊಂದು ಕಾಲದಲ್ಲಿ ದೊಡ್ಡ ಪಟ್ಟಣದಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿಯಿದ್ದ. ಒಂದು ದಿನ ವ್ಯಾಪಾರ ನಿಮಿತ್ತ ಬೇರೆ ಊರಿಗೆ ಹೋಗಲು ಕಾಡಿನ ಮಾರ್ಗವಾಗಿ ಹೊರಟ. ಅಲ್ಲೊಂದು ದಟ್ಟ ಕಾಡು, ಹಕ್ಕಿಗಳ ಕಲರವ, ಮಂಗಗಳ ಕೂಗು, ಜಿಂಕೆಗಳ ನೆಗೆದಾಟ, ನವಿಲಿನ ಕೇಕೆ ಹೀಗೆ ಆ ಕಾಡೊಂದು ಸ್ವರ್ಗಸದೃಶವಾಗಿತ್ತು. ಕಾಡಿನ ಸೌಂದರ್ಯ ಆ ವ್ಯಾಪಾರಿಯನ್ನು ದಂಗುಗೊಳಿಸಿತ್ತು. ಆಗ ವ್ಯಾಪಾರಿಯ ಕಣ್ಣಿಗೊಂದು ಸುಂದರವಾದ ಪಕ್ಷಿ ಕಣ್ಣಿಗೆ ಬಿತ್ತು. ನಾನಾ ತರಹದ ಗಾಢ ಬಣ್ಣಗಳಿಂದ ಕೂಡಿದ ಹಕ್ಕಿಯನ್ನು ನೋಡಿದ ವ್ಯಾಪಾರಿ ಹಕ್ಕಿ ಎಲ್ಲೆಲ್ಲಿ ಹಾರುತ್ತಾ ಹೋಗುತ್ತಿದೆ ಎಂಬುದನ್ನು ಗಮನಿಸುತ್ತಾ ಅದರ ಹಿಂದೆ ಹೋದ. ಹೀಗೆ ಆ ಸುಂದರ ಹಕ್ಕಿಯ ಬಗ್ಗೆ ಅತೀವ ಆಕರ್ಷಣೆ ಆ ವ್ಯಾಪಾರಿಗೆ ಬೆಳೆಯಿತು. ಹೇಗಾದರೂ ಮಾಡಿ ಆ ಹಕ್ಕಿಯನ್ನು ಹಿಡಿದು ಮನೆಗೆ ತೆಗೆದುಕೊಂಡು ಹೋಗಬೇಕು ಎಂದು ಕೊಂಡ. ಆದರೆ ಹಾರುತ್ತಿರುವ ಹಕ್ಕಿಯನ್ನು ವ್ಯಾಪಾರಿಯಿಂದ ಹಿಡಿಯಲು ಸಾಧ್ಯವಿರಲಿಲ್ಲ. ಇಷ್ಟರಲ್ಲಿ ಕಾಡಿನಲ್ಲೇ ವಾಸಿಸುವ ಆದಿವಾಸಿ ಜನಾಂಗದವರು ವ್ಯಾಪಾರಿಗೆ ಎದುರಾದರು. ವ್ಯಾಪಾರಿ ತನ್ನ ಅಳಲನ್ನು ಅವರೊಡನೆ ತೋಡಿಕೊಂಡ. ಹೇಗಾದರೂ ಮಾಡಿ ಹಕ್ಕಿಯನ್ನು ಹಿಡಿದುಕೊಡಿ ಎಂದು ದುಂಬಾಲು ಬಿದ್ದ. ಆಗ ವನವಾಸಿಗಳು ಹೇಳಿದರು, ಈ ಹಕ್ಕಿಯನ್ನು ಪಂಜರದಲ್ಲಿ ಸಾಕಲು ಸಾಧ್ಯವಿಲ್ಲ, ಹಾಗಾಗಿ ಹಿಡಿದುಕೊಡುವುದಿಲ್ಲ. ಆದರೆ, ವ್ಯಾಪಾರಿಗೆ ಆ ಹಕ್ಕಿಯಿಲ್ಲದೇ ಬದುಕೇ ಇಲ್ಲ ಎಂಬಂತಾಗಿತ್ತು. ವನವಾಸಿಗಳೊಂದಿಗೆ ವ್ಯಾಪಾರ ಶುರು ಮಾಡಿದ. ಹಕ್ಕಿಯನ್ನು ಹಿಡಿದುಕೊಟ್ಟರೆ ನೀವು ಕೇಳಿದ್ದನು ಕೊಡುತ್ತೇನೆ ಎಂದ. ವನವಾಸಿಗಳ ನೀತಿ ವ್ಯಾಪಾರಿ ನೀಡಿದ ಆಮಿಷದ ಎದುರು ನಿಲ್ಲಲಿಲ್ಲ. ಆಯಿತು ಎಂದರು. ವನವಾಸಿಗಳಿಗೆ ಹಕ್ಕಿಯನ್ನು ಹಿಡಿಯುವುದು ಕಷ್ಟವಾಗಲಿಲ್ಲ. ಬಲೆಹಾಕಿ ಹಕ್ಕಿಗೆ ಅಪಾಯವಾಗದಂತೆ ಹಿಡಿದುಕೊಂಡು ವ್ಯಾಪಾರಿಯ ಮುಂದೆ ಬಂದರು. ವ್ಯಾಪಾರಿಗೆ ಸ್ವರ್ಗ ಸಿಕ್ಕಷ್ಟೇ ಸಂತೋಷವಾಗಿತ್ತು. ವನವಾಸಿಗಳು ಕೇಳಿದ್ದನ್ನೆಲ್ಲಾ ಕೊಟ್ಟು ಕಳುಹಿಸಿದ.
ಆ ಹಕ್ಕಿ ಎಷ್ಟು ಸುಂದರವಾಗಿತ್ತೋ ಅದರ ಕಂಠವೂ ಅಷ್ಟೇ ಮಧುರವಾಗಿತ್ತು. ಹಕ್ಕಿಯನ್ನು ಮನೆಗೆ ತೆಗೆದುಕೊಂಡು ಹೋದ ವ್ಯಾಪಾರಿ ಅದಕ್ಕೊಂದು ಚಿನ್ನದ ಪಂಜರವನ್ನು ಮಾಡಿ ಅದರಲ್ಲಿಟ್ಟ. ತಿನ್ನಲು ನಾನಾ ತರಹದ ಹಣ್ಣುಗಳನ್ನು ನೀಡಿದ. ವನವಾಸಿಗಳು ಹೇಳಿದಂತೆ ಹಕ್ಕಿ ಪಂಜರದಲ್ಲಿ ಸಾಯಲಿಲ್ಲ. ಆದರೆ, ಪ್ರತಿದಿನ ಕೊರಗುತ್ತಿತ್ತು. ವ್ಯಾಪಾರಿಯ ಹತ್ತಿರ ನನ್ನನ್ನು ಬಿಟ್ಟು ಬಿಡು ಎಂದು ಕೇಳಿಕೊಳ್ಳುತ್ತಿತ್ತು. ಆದರೆ, ಪಕ್ಷಿಯ ಮೋಹ ವ್ಯಾಪಾರಿಯನ್ನು ಬಂಧಿಸಿತ್ತು. ನೀನು ಏನೇ ಕೇಳಿದರೂ ಕೊಡುವೆ ಆದರೆ ಪಂಜರದಿಂದ ಬಿಡು ಎಂದು ಮಾತ್ರ ಕೇಳಬೇಡ ಎಂದ. ಹೀಗೆ ಅನೇಕ ದಿನಗಳು ಕಳೆದವು. ವರ್ಷಗಳು ಉರುಳಿದವು. ಹಕ್ಕಿಗೆ ತನ್ನ ಮೂಲ ನೆಲೆ ನೆನಪಾಗುತ್ತಿತ್ತು. ಅದು ಕಣ್ಣು ಮುಚ್ಚಿಕೊಂಡು ತನ್ನ ಹಳೆಯ ಸಂತಸದ ದಿನಗಳನ್ನು ನೆನಪಿಸಿಕೊಳ್ಳುತ್ತಿತ್ತು. ಸ್ವರ್ಗಸದೃಶ ಆ ಕಾಡಿನಲ್ಲಿ ಹರಿಯುವ ನದಿಗಳು ಮತ್ತು ಅದರ ಜುಳು-ಜುಳು ನಿನಾದ. ನದಿಯಲ್ಲಿನ ಮೀನುಗಳು, ವಟಗುಟ್ಟುವ ಕಪ್ಪೆಗಳು, ಚಿತ್ತಾರದಂತೆ ಹಾರುವ ಪತಂಗಗಳು, ಮರದಿಂದ ಮರಕ್ಕೆ ಜಿಗಿಯುವ ಮಂಗಗಳು, ಹಾರುವ ಇನ್ನಿತರ ಬಾನಾಡಿಗಳು ಹೀಗೆ, ಸ್ವತಂತ್ರವಾಗಿ ಆಕಾಶದುದ್ದಕ್ಕೂ ಹಾರಾಡಿಕೊಂಡು ಸಂತಸದಿಂದ ಇದ್ದ ನನ್ನನ್ನು ಇವನು ಹೀಗೆ ಬಂಧಿಸಿಟ್ಟು ಹಾರುವ ಸ್ವತಂತ್ರವನ್ನೇ ಕಸಿದುಕೊಂಡಿದ್ದಾನೆ ಎಂದು ಮರುಗುವುದು. ದು:ಖದಿಂದ, ಖೇದದಿಂದಿರುವುದು, ವ್ಯಾಪಾರಿ ನೀಡುವ ನಾಡಿನ ಹಣ್ಣುಗಳಲ್ಲಿ ಯಾವ ರುಚಿ ಇರುತ್ತದೆ. ನಮ್ಮಂತ ಬಾನಾಡಿಗಳಿಗೆ ಕಾಡಿನ ವೈವಿಧ್ಯಮಯ ಹಣ್ಣುಗಳೇ ಚೆಂದ. ವರ್ಷಗಳೇ ಕಳೆದವು ಇಂತಹ ಹಣ್ಣುಗಳನ್ನು ತಿಂದು. ನನ್ನ ಸಹಚರರು ನಾನಿಲ್ಲದೇ ಹೇಗಿದ್ದಾರೋ ಎಂದು ಚಿಂತಿಸುವುದು.
ಹೀಗೆ ದಿನ ಕಳೆಯುತ್ತಿರಲು, ಒಂದು ದಿನ ವ್ಯಾಪಾರಿಗೆ ಮತ್ತೆ ವ್ಯಾಪಾರಕ್ಕಾಗಿ ಹೊರಗಡೆ ಹೋಗಬೇಕಾದ ಅನಿವಾರ್ಯತೆ ಬಂತು. ಈ ಹಕ್ಕಿಯನ್ನು ಹಿಡಿದ ಕಾಡಿನ ದಾರಿಯಲ್ಲೇ ವ್ಯಾಪಾರಿ ಸಾಗಬೇಕು. ಹೀಗೆಂದು ವ್ಯಾಪಾರಿ ಹಕ್ಕಿಗೆ ಹೇಳಿದ. ಆಗ ಸಂತಸಗೊಂಡ ಹಕ್ಕಿ ನನ್ನನ್ನು ಅಲ್ಲಿ ಕರೆದುಕೊಂಡು ಹೋಗಿ ಬಿಡು ಎಂದು ಅಲವತ್ತುಕೊಂಡಿತು. ವ್ಯಾಪಾರಿ ಒಪ್ಪಲಿಲ್ಲ. ನಿನ್ನನ್ನು ಬಿಡುವ ಪ್ರಶ್ನೆಯೇ ಇಲ್ಲ. ಆದರೆ, ನಿನಗೇನಾದರೂ ಬೇಕಾದರೆ ತೆಗೆದುಕೊಂಡು ಬರುತ್ತೇನೆ ಎಂದ. ಆಗ ಹಕ್ಕಿ ಒಂದು ವಿನಂತಿ ಮಾಡಿತು. ನನ್ನ ಸಹಚರರು ಆ ಕಾಡಿನಲ್ಲೇ ಇದ್ದಾರೆ. ಅವರಿಗೆ ನನ್ನ ವಿಷಯವನ್ನು ತಿಳಿಸು. ದು:ಖದಿಂದಿರುವ ಅವರಿಗೆ ಸ್ವಲ್ಪ ಸಮಾಧಾನವಾದರೂ ಆಗಲಿ ಎಂದಿತು. ವ್ಯಾಪಾರಿ ಒಪ್ಪಿಕೊಂಡು ಆಗಲಿ ಎಂದ.
ಹಾಗೆಯೇ ಆ ವ್ಯಾಪಾರಿ ಕಾಡಿಗೆ ಹೋದ. ತಾನು ಬಂಧಿಸಿಟ್ಟ ಹಕ್ಕಿಯ ತರಹದ ಹಕ್ಕಿಗಳನ್ನು ಹುಡುಕುತ್ತಾ ಹೊರಟ. ಕಾಡುಮೇಡುಗಳನ್ನು ಅಲೆದ. ಕಡೆಗೊಂದು ಬಾರಿ ಅಂತಹ ಪಕ್ಷಿ ಕಾಣಿಸಿತು. ಜೋರಾಗಿ ಕೂಗಿದ. ಒಂದು ಮುಖ್ಯವಾದ ಸಮಾಚಾರ ತಿಳಿಸಲಿಕ್ಕಿದೆ ಎಂದ. ಹಾರುತ್ತಿದ್ದ ಹಕ್ಕಿ ಇವನ ಕೂಗಿಗೆ ತಿರುಗಿ ನೋಡಿತು. ಹತ್ತಿರದ ಮರದಲ್ಲಿ ಬಂದು ಕುಳಿತು ಏನು ಎಂದು ಕೇಳಿತು. ಈಗ ಕೆಲ ವರ್ಷಗಳ ಹಿಂದೆ ಇದೇ ಕಾಡಿನಿಂದ ನಿಮ್ಮದೇ ತರಹದ ಒಂದು ಪಕ್ಷಿಯನ್ನು ಹಿಡಿದುಕೊಂಡು ಹೋಗಿದ್ದೆ. ಅದನ್ನು ಚಿನ್ನದ ಪಂಜರದಲ್ಲಿಟ್ಟು ಸಾಕಿದ್ದೇನೆ. ನಿತ್ಯವೂ ವಿವಿಧ ರೀತಿಯ ದುಬಾರಿ ಹಣ್ಣುಗಳನ್ನು ನೀಡುತ್ತೇನೆ. ನಿನ್ನ ಜೊತೆಗಾರ ನನ್ನ ಬಳಿ ಸಂತೋಷದಿಂದ ಇದೆ ಎಂದ. ಇದನ್ನು ಕೇಳುತ್ತಿದ್ದಂತೆ ಆ ಪಕ್ಷಿ ಮರದಿಂದ ದೊಪ್ಪನೆ ಕೆಳಗೆ ಬಿತ್ತು. ಹೊಟ್ಟೆ ಮೇಲಾಗಿ, ಕಾಲು ಸೆಟೆದುಕೊಂಡು, ವ್ಯಾಪಾರಿ ಹತ್ತಿರ ಹೋಗಿ ನೋಡಿದ, ಪಕ್ಷಿಯಲ್ಲಿ ಚಲನೆಯಿಲ್ಲ. ಪಾಪ ಹಕ್ಕಿ ಸತ್ತೇ ಹೋಯಿತು ಎಂದು ಮರುಗುತ್ತಾ, ಇನ್ನೊಂದು ಹಕ್ಕಿಯನ್ನು ಹುಡುಕಲು ಹೋದ. ಆದರೆ, ಎಲ್ಲಿ ನೋಡಿದರು ಅಂತಹ ಇನ್ನೊಂದು ಹಕ್ಕಿ ಕಂಡುಬರಲಿಲ್ಲ. ವಾಪಾಸು ಊರಿಗೆ ಬಂದ.
ಊರಿಗೆ ಬರುವಾಗ ರಾತ್ರಿಯಾಗಿತ್ತು. ಚಿನ್ನದ ಪಂಜರದಲ್ಲಿ ಹಕ್ಕಿ ನಿದ್ದೆ ಹೋಗಿತ್ತು. ಬೆಳಗ್ಗೆ ಎದ್ದ ವ್ಯಾಪಾರಿ ಪಂಜರದ ಹತ್ತಿರ ಬಂದ. ಹಕ್ಕಿ ಎದ್ದಿತ್ತು. ಹಕ್ಕಿಗೆ ಕುತೂಹಲವಿತ್ತು. ನನ್ನ ಕಡೆಯವರು ಯಾರಾದರೂ ಸಿಕ್ಕಿದ್ದರಾ ಎಂದು ವ್ಯಾಪಾರಿಯನ್ನು ಕೇಳಿತು. ಒಂದೇ ಒಂದು ಹಕ್ಕಿ ಸಿಕ್ಕಿತ್ತು. ಆದರೆ, ಆದರೆ, ಎಂದು ತಡವರಿಸಿದ. ಏನಾಯ್ತು ಹೇಳು ಎಂದು ಹಕ್ಕಿ ಒತ್ತಾಯ ಮಾಡಿತು. ನಿನ್ನನ್ನು ಚಿನ್ನದ ಪಂಜರದಲ್ಲಿಟ್ಟು ಕೆಲವು ವರ್ಷಗಳಿಂದ ಸಾಕುತ್ತಿದ್ದೇನೆ. ದುಬಾರಿಯಾದ ಹಣ್ಣುಗಳನ್ನೂ ನೀಡುತ್ತಿದ್ದೇನೆ ಎಂದೆ. ತಕ್ಷಣ ಮರದಿಂದ ನಿನ್ನ ಸಹಚರ ದೊಪ್ಪನೆ ಬಿದ್ದು, ಕಾಲು ಮೇಲೆ ಮಾಡಿಕೊಂಡಿತು. ಹತ್ತಿರ ಹೋಗಿ ನೋಡಿದರೆ ಹಕ್ಕಿ ಸತ್ತೇ ಹೋಗಿತ್ತು ಎಂದ. ಇದನ್ನು ಕೇಳುತ್ತಿದ್ದಂತೆ, ಪಂಜರದ ಹಕ್ಕಿಯೂ ತಾನು ಕುಳಿತ ಮೇಲಿನ ಕಡ್ಡಿಯಿಂದ ದೊಪ್ಪನೆ ಪಂಜರದಲ್ಲೇ ಬಿತ್ತು. ಹೊಟ್ಟೆ ಮೇಲೆ ಮಾಡಿಕೊಂಡು ಕಾಲು ಸೆಟೆದುಕೊಂಡು, ಹಕ್ಕಿಯಲ್ಲಿ ಚಲನೆಯಿಲ್ಲ. ವ್ಯಾಪಾರಿಗೆ ಆಘಾತವಾಯಿತು. ಈ ಹಕ್ಕಿಯೂ ಸತ್ತು ಹೋಯಿತು. ಛೇ! ನಾನು ಇದರ ಸಹಚರ ಸತ್ತುಹೋದ ಸುದ್ದಿಯನ್ನು ಹೇಳಲೇಬಾರದಿತ್ತು ಎಂದುಕೊಂಡು, ಕೆಲಸದವಳಿಗೆ ಹಕ್ಕಿಯನ್ನು ತೆಗೆದು ಹೊರಗೆ ಹಾಕು ಎಂದ.
ಕೆಲಸದವಳು ಬಂದು ಪಂಜರದ ಬೀಗ ತೆಗೆದು ಹಕ್ಕಿಯನ್ನು ಹಿಡಿದುಕೊಂಡು ತಂದು ಅಂಗಳದಲ್ಲಿ ಹಾಕುತ್ತಲೇ ಹಕ್ಕಿ ಪಟ-ಪಟ ರೆಕ್ಕೆ ಬಡಿದುಕೊಂಡು ಹಾರಿತು. ಹತ್ತಿರದ ಮರದ ಮೇಲೆ ಕುಳಿತು ಹೇಳಿತು. ನನ್ನವರು ಪಂಜರದಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ನಿನ್ನ ಯಜಮಾನನ ಮೂಲಕ ಹೇಳಿಕಳುಹಿಸಿದ್ದಾರೆ. ಚಿನ್ನದ ಪಂಜರದ ಹಕ್ಕಿ ಹಾರಿಹೋಯಿತು ಎಂದು ಹೇಳು ಎನ್ನುತ್ತಾ, ತನ್ನ ಮೂಲ ನೆಲೆಯ ಕಡೆಗೆ ಹಾರಿಹೋಯಿತು.
[ಇಂಟರ್‌ನೆಟ್‌ನಲ್ಲಿ ಸಿಕ್ಕಿದ ಈ ಕತೆಯನ್ನು ಭಾವಾನುವಾದ ಮಾಡಲಾಗಿದೆ. ಕತೆಯ ನೀತಿ: ಸದಾ ಸ್ವಾತಂತ್ರ್ಯವನ್ನು ಬಯಸುವ ನಾವು ಬೇರೆ ಪ್ರಾಣಿಗಳನ್ನು ಬಂಧಿಸಿಡುವುದು ತಪ್ಪು]
****