ಕಾಡು (ವ) ದಿಟ್ಟೆಯರು!!: ಅಖಿಲೇಶ್ ಚಿಪ್ಪಳಿ


ಲೋಕಾಯುಕ್ತ ಕಚೇರಿಯಲ್ಲೇ ಲಂಚಾವತಾರ. ರೈತರ ಸರಣಿ ಆತ್ಮಹತ್ಯೆಗಳು. ರೈತನ ಪಾಲಿಗೆ ಕಬ್ಬಿನ ಬೆಳೆ ಕಬ್ಬಿಣದ ಶೂಲವಾಗಿ ಪರಿಣಮಿಸಿದ್ದು, ತನ್ಮಧ್ಯೆ ಮಳೆ ಕೊರತೆಯಿಂದ ಉಂಟಾಗಬಹುದಾದ ಬರಗಾಲದ ಛಾಯೆ. ಕ್ರಿಕೇಟ್ ಆಟಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿಯ ವೀಸಾಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಮತ್ತು ರಾಜಾಸ್ಥಾನದ ಮಹಿಳಾ ಮುಖ್ಯಮಂತ್ರಿಯ ಮೇಲೆ ಬಂದ ಗಂಭೀರ ಆರೋಪ. ವ್ಯಾಪಂ ಹಗರಣದ ಸರಣಿ ಸಾವುಗಳು. ಒಟ್ಟಾರೆ ಋಣಾತ್ಮಕ ಅಂಶಗಳೇ ಹೆಚ್ಚು. ಈ ಮಧ್ಯದಲ್ಲೂ ಅನೇಕ ಮಹಿಳೆಯರು ಭೂಆರೋಗ್ಯದ ಕುರಿತು ಚಿಂತಿಸಿ, ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.

ಸಮುದ್ರದಾಳದಲ್ಲಿ ಜಲವಾಸಿಗಳ ಅಧ್ಯಯನ ಮಾಡಿದ ಸಿಲ್ವಿಯಾ ಎರಲ್ ಇರಬಹುದು, ಕೀಟನಾಶಕಗಳ ದುಷ್ಪರಿಣಾಮಗಳ ವಿರುದ್ಧ ಹೋರಾಡಿದ ರಚೆಲ್ ಕಾರ್ಸನ್ ಇರಬಹುದು ಅಥವಾ ಚಿಂಪಾಜಿಗಳ ಅಧ್ಯಯನ ಮಾಡುತ್ತಿರುವ ಜೇನ್ ಗುಡಾಲ್‍ರಂತಹ ವಿದೇಶಿಯರಿರಬಹುದು ಅಥವಾ ನಮ್ಮವರೇ ಆದ ಸಾಲುಮರದ ತಿಮ್ಮಕ್ಕ, ತುಳಸಿ ಗೌಡ್ತಿ ಇರಬಹುದು. ಪರಿಸರಕ್ಕಾಗಿ ಇಡೀ ಜೀವಮಾನವನ್ನೇ ಮುಡಿಪಾಗಿಟ್ಟ ಇವರೆಲ್ಲಾ ಎಲ್ಲಾ ಕಾಲದ ಎಲ್ಲಾ ಜನಾಂಗಕ್ಕೂ ಸ್ಪೂರ್ತಿ ನೀಡುವವರೇ ಆಗಿದ್ದಾರೆ. ಇವರ ಸಾಲಿನಲ್ಲೇ ಪರಿಸರಕ್ಕಾಗಿ ದುಡಿಯುತ್ತಿರುವ ಕೆಲವು ಉದಾಹರಣೆಗಳನ್ನು ನೋಡೋಣ.

ಹಾಲಿವುಡ್ ನಟಿ ಏಂಜಲೀನಾ ಜೂಲಿ ಯಾರಿಗೆ ತಾನೆ ಗೊತ್ತಿಲ್ಲ.  ಅಭಿನಯದಿಂದಲೇ ಕೋಟಿಗಟ್ಟಲೆ ಹಣ ಸಂಪಾದಿಸಿದಾಕೆ. ಜೊತೆಗೆ ಅಪರೂಪದ ಸಾಮಾಜಿಕ ಪ್ರಜ್ಞೆ, ಕಳಕಳಿ ಇರುವಾಕೆ. ಬಿಳಿ-ಕರಿ ತಾರತಮ್ಯವನ್ನು ಮೆಟ್ಟಿ ಕರಿಯ ಜನಾಂಗದ ಕೂಸುಗಳನ್ನು ದತ್ತು ತೆಗೆದುಕೊಂಡು ಸಾಕುತ್ತಿರುವ ದಿಟ್ಟೆ. ಕಾಂಬೋಡಿಯಾ ದೇಶದ ಮಡಾಕ್ಸ್ ಎಂಬ ಹುಡುಗನನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾಳೆ. ಕಾಂಬೋಡಿಯಾದಂತಹ ಅತ್ಯಂತ ಹಿಂದುಳಿದ ದೇಶದಲ್ಲಿ ಸಾಮಾಜಿಕ ಅರಾಜಕತೆಯ ಜೊತೆಗೆ ಅಲ್ಲಿನ ವನ್ಯಸಂಪತ್ತನ್ನು ಲೂಟಿ ಹೊಡೆಯುವ ಕಾಡುಗಳ್ಳರ ಸಂಖ್ಯೆಯೂ ಹೆಚ್ಚು. ದತ್ತು ಮಗನಿಗಾಗಿ ಜೂಲಿ 2003ರಲ್ಲಿ ಕಾಂಬೋಡಿಯಾದ ರಕ್ಷಿತಾರಣ್ಯದ ಹೊರಭಾಗದಲ್ಲಿ ಮನೆಯೊಂದನ್ನು ಖರೀದಿಸುತ್ತಾಳೆ. ಆಗ ಅಲ್ಲಿನ ವನ್ಯಜೀವಿಗಳ ಪರಿಸ್ಥಿತಿ ತೀರಾ ಶೋಚನಿಯ ಮಟ್ಟ ತಲುಪಿರುತ್ತದೆ. ಬೇಟೆಗಾರರು ಅಲ್ಲಿನ ಕರಡಿ, ಆನೆ, ಹುಲಿಗಳನ್ನು ಎಗ್ಗಿಲ್ಲದೆ ಬೇಟೆಯಾಡಿ, ವನ್ಯಜೀವಿಗಳನ್ನು ಅವಸಾನದ ಅಂಚಿಗೆ ತಂದಿಟ್ಟಿರುತ್ತಾರೆ. ಅಲ್ಲಿನ ಸರ್ಕಾರದ ಜೊತೆ ಮಾತನಾಡಿ ಜೂಲಿ ಸಂರಕ್ಷಿತ ಅರಣ್ಯದ ಹೊರಭಾಗದ 60 ಸಾವಿರ ಹೆಕ್ಟರ್ ಭೂಮಿಯನ್ನು ಖರೀದಿಸುತ್ತಾಳೆ. ಇದಕ್ಕೆ ಮಡಾಕ್ಸ್-ಜೂಲಿ-ಪಿಟ್ ಯೋಜನೆ ಎಂಬ ಹೆಸರು ಕೊಟ್ಟು ಅಷ್ಟೂ ಪ್ರದೇಶಗಳನ್ನು ಸಂರಕ್ಷಿಸುವ ಪಣ ತೊಡುತ್ತಾಳೆ. ಬೇಟೆಗಾರರನ್ನೇ ಮನವೊಲಿಸಿ, ಕಾಡುಕಾಯುವ ಕೆಲಸಕ್ಕೆ ಹಚ್ಚುತ್ತಾಳೆ. ಮೂಲಭೂತ ಸೌಕರ್ಯದಿಂದ ವಂಚಿತವಾದ ಅಲ್ಲಿನ ಹತ್ತು ಹಳ್ಳಿಗಳಿಗೆ ರಸ್ತೆ, ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಿಸುತ್ತಾಳೆ. ಇಂತದೊಂದು ಅಪರೂಪದ ಕೆಲಸಕ್ಕಾಗಿ ಅಲ್ಲಿನ ಸರ್ಕಾರ ಜೂಲಿಗೆ ಕಾಂಬೋಡಿಯಾದ ಪೌರತ್ವವನ್ನು ನೀಡಿ ಗೌರವಿಸುತ್ತದೆ. ಇದು ಹಾಲಿವುಡ್ ನಟಿಯ ಸಾಹಸಗಾಥೆ. ಇತ್ತ ನಮ್ಮ ದೇಶದ ಕೆಲ ದಿಟ್ಟ ಮಹಿಳೆಯರ ಸಾಧನೆಯನ್ನು ತುಸು ನೋಡೋಣ.

1981ನೇ ಇಸವಿ, ಬಿಹಾರದ ಬಾಗಲಪುರ ಪ್ರಾಂತ್ಯಕ್ಕೆ ಹೋಗಲು ಗಂಡಸರೂ ನಡುಗುತ್ತಿದ್ದ ಕಾಲ. ಮಾಂಸಕ್ಕಾಗಿ ಅಲ್ಲಿ ಆಮೆಗಳ ಬೃಹತ್ ಕಳ್ಳ ಸಾಗಾಣಿಕೆ ನಡೆಯುತ್ತಿತ್ತು. 22 ವರ್ಷದ ಜೆ.ವಿಜಯ ಎಂಬಾಕೆ ಆ ಪ್ರಾಂತ್ಯಕ್ಕೆ ಬೇಟಿ ಮಾಡಿ, ಅಲ್ಲಿ ಕಪ್ಪು-ಬಿಳುಪು ಫೋಟೊಗಳನ್ನು ತೆಗೆದು “ಇಂಡಿಯಾ ಟುಡೇ’ಯಲ್ಲಿ ಪ್ರಕಟಿಸುತ್ತಾಳೆ. ಇದನ್ನು ಓದಿದ ಓದುಗರ ಹಾಗೂ ಆಗಿನ ಪ್ರಧಾನಿಯಾದ ಇಂದಿರಾರ ಆತ್ಮಸಾಕ್ಷಿಯೇ ಅಲುಗಾಡಿ ಹೋಗುತ್ತದೆ. ಕೇರಳದ ದಟ್ಟಕಾಡಿನ ಗುಹೆಗಳಲ್ಲಿ ನಿಗೂಢವಾಗಿ ವಾಸಿಸುತ್ತಿರುವ ಆಮೆಗಳ ಕುರಿತು ಅಧ್ಯಯನ ಮಾಡಲು ಹೋದಾಗ ವಿಜಯಳ ಜೊತೆಗಿದ್ದದ್ದು ಕಾದರ್ ಎಂಬ ಆದಿವಾಸಿ ಜನಾಂಗ ಮಾತ್ರ. ಭಾರತದ ಖ್ಯಾತ ಸರ್ಪ ವಿಜ್ಞಾನಿ ರೋಮೆಲಸ್ ವಿಟೇಕರ್ ವಿಜಿ ಕುರಿತು ಹೇಳಿದ ಮಾತುಗಳಿವು. “ಅತ್ಯಂತ ಸಾಹಸ ಪ್ರವೃತ್ತಿ ಹೊಂದಿದ ಭಾರತದ ಮೊಟ್ಟ ಮೊದಲ ಮಹಿಳಾ ಸರಿಸೃಪ ವಿಜ್ಞಾನಿ ಈ ಜೆ.ವಿಜಯ. ನಾನು ಕಾಡು ನೋಡುವುದಕ್ಕಿಂತ ತುಂಬಾ ಮೊದಲೇ ದಟ್ಟಕಾಡಿನಲ್ಲಿ ನಟ್ಟಿರುಳಿನಲ್ಲಿ ಆಮೆಗಳ ಕುರಿತು ಅಧ್ಯಯನಗೊಂಡ ಸಾಹಸಿ ಈಕೆ. ಆದರೆ ವಿಜಯರ ಬಗ್ಗೆ ಹೊರಪ್ರಪಂಚಕ್ಕೆ ತಿಳಿದಿರುವುದು ತುಂಬಾ ಕಡಿಮೆ. ಕಾಡಿನ ಜಂತುಗಳಿಗೆ ಹೆದರದೆ-ಬೆದರದೆ, ಅಂಜದೆ-ಅಳುಕದೆ ತದೇಕಚಿತ್ತದಿಂದ ಅವರು ಕೈಗೊಳ್ಳುತ್ತಿದ್ದ ಅಧ್ಯಯನ ತಾದ್ಯಾತ್ಮತೆಯ ಹಿಂದೆ ಅಪಾರ ತ್ಯಾಗವಿದೆ. ಹಿಡಿದದ್ದನ್ನು ಸಾಧಿಸಲೇಬೇಕು ಎಂಬ ಛಲ ಇದೆ. ವಿಜಯರ ತರಹದ ಸಾಹಸ ಪ್ರವೃತ್ತಿಯ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗುವಂತಿದೆ”.

ರಾಜಸ್ಥಾನದ ಬಿಷ್ಣೋಯ್ ಜನಾಂಗದ ಬಗ್ಗೆ ಕೇಳಿರಬಹುದು. ಕಾಡಿನ ಜಿಂಕೆಗಳಿಗೆ ತಿನ್ನಲು ತಾವು ಕಷ್ಟಪಟ್ಟು ಬೆಳೆಸಿದ ಬೆಳೆಯನ್ನೇ ಆಹಾರವಾಗಿ ನೀಡುತ್ತಾರೆ. ಅನಾಥ ಜಿಂಕೆಮರಿಗಳಿಗೆ ಅಲ್ಲಿನ ಮಹಿಳೆಯರು ಮೊಲೆಹಾಲು ಕುಡಿಸುತ್ತಾರೆ. ಆದರೆ ಸುದ್ಧಿಯಾಗುವುದು ಮಾತ್ರ ಹಂತಕ ವಿಲನ್ ಬಾಲಿವುಡ್ ಸ್ಟಾರ್ ಸಲ್ಮಾನ್‍ನಂತವರೇ ಆಗಿರುವುದು ವಿಪರ್ಯಾಸ. 

1980ನೇ ಇಸವಿ. ಹೆಣ್ಣು ಮಕ್ಕಳು ವನ್ಯಜೀವಿ ಅಧ್ಯಯನ ಮಾಡಲು ವಿಶ್ವವಿದ್ಯಾನಿಲಯಗಳಿಗೆ ಸೇರುತ್ತಿದ್ದದೇ ಅಪರೂಪ. ವನ್ಯಜೀವಿಗಳ ಬಗ್ಗೆ ತಿಳಿಯುವುದು, ರಕ್ಷಣೆ ಮುಂತಾದವುಗಳು ಕೆಲಸಕ್ಕೆ ಬಾರದವುಗಳು ಎಂದು ತಿಳಿಯುತ್ತಿದ್ದ ಕಾಲವದು. ಗಾಜಲಾ ಶಹಬುದ್ಧೀನ್ ಎಂಬ ಹೆಣ್ಣುಮಗಳಿಗೆ ವನ್ಯಜೀವಿಗಳ ಬಗ್ಗೆ ವಿಪರೀತ ಆಸಕ್ತಿ. ಮನೆಯಲ್ಲಿ ತಂದೆಯ ತೀವ್ರ ವಿರೋಧ. ದೆಹಲಿಯಲ್ಲಿ ವಾಸಿಸುವ ಗಾಜಲಾಗೆ ಪ್ರವೇಶ ಸಿಕ್ಕಿದ್ದು ದೂರದ ಕೇರಳದಲ್ಲಿ. ತಾಯಿಗೆ ಮಗಳ ಆಸಕ್ತಿ ಇಷ್ಟವಾಗಿತ್ತು. ತಂದೆಯದು ಒಪ್ಪಿಗೆ ಸಿಗಲಿಲ್ಲ. ಅಂತೂ ಹಠ ಮಾಡಿ ಮೊಟ್ಟಮೊದಲ ಬಾರಿಗೆ ಒಬ್ಬಳೇ ಕೇರಳಕ್ಕೆ ರೈಲಿನ ಮೂಲಕ ಹೊರಡುತ್ತಾಳೆ. ಹೊರಡುವಾಗ ತಂದೆಯ ಆರ್ಶೀವಾದವಿರಲಿ, ಕನಿಷ್ಟ ಮುಗುಳ್ನಗೆಯೂ ಸಿಗುವುದಿಲ್ಲ. ತಂದೆ ಮಾತನಾಡಲೇ ಇಲ್ಲ. ಬೋಪಾಲ್‍ವರೆಗೂ ಅಳುತ್ತಲೇ ತೆರಳುವ ಗಾಜಲಾ ಕೇರಳದ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುತ್ತಾಳೆ. ತಂದೆಯ ಹಠ ಇಲ್ಲೂ ಬಿಡುವುದಿಲ್ಲ. ಸಾಕಷ್ಟು ಸ್ಥಿತಿವಂತರಾಗಿದ್ದರೂ, ತಂದೆ ಮಗಳಿಗೆ ಓದಲು ಹಣ ಕಳಿಸುವುದಿಲ್ಲ. ಸ್ನೇಹಿತರಿಂದ ಸಾಲ ಮಾಡಿಕೊಂಡು ತನ್ನ ಓದನ್ನು ಮುಗಿಸುತ್ತಾಳೆ ಗಾಜಲಾ.

ಪುರುಷ ಪ್ರಧಾನ ಸಮಾಜದಲ್ಲಿ, ಮಹಿಳಾ ಅಧಿಕಾರಿಗಳ ಪಾಡು ಕೆಲವೊಮ್ಮೆ ಸಂಧಿಗ್ದಕ್ಕೆ ಸಿಲುಕುತ್ತದೆ. ಅರಣ್ಯದಲ್ಲಿ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ವನ್ಯಜೀವಿಗಳಿಗಿಂತ ಮಾನವನೇ ಅಪಾಯಕಾರಿಯಾಗಿ ಕಾಡಿದ ನಿದರ್ಶನಗಳುಂಟು. ಗರ್ಭಿಣಿಯಾದಾಗಲೂ ಮಹಿಳಾ ರೇಂಜರ್‍ಗಳು ಬೆಲ್ಟ್ ತೊಡಬೇಕು ಎಂಬ ಅಮಾನವೀಯ ಅಂಶವೂ ಇಲ್ಲಿದೆ. ಇದೆಲ್ಲಾ ಓದಿದವರ ಮಾತಾಯಿತು. ಆಧುನಿಕ ಸಮಾಜ ಗ್ರಹಿಸುವಂತೆ ತೀರಾ ಹಿಂದುಳಿದ ಆದಿವಾಸಿ ಮಹಿಳೆಯರೂ ಕಾಡು ರಕ್ಷಣೆಯಲ್ಲಿ ತಮ್ಮ ಪಾತ್ರ ನಿರ್ವಹಿಸದ್ದನ್ನು ಇಲ್ಲಿ ನೋಡೋಣ.
ಹಿಮಾಲಯದಲ್ಲಿ ಇರುವ ಒಂದು ಹಳ್ಳಿಯ ಹೆಸರು ಮಂಡಲ್. 1973ರಲ್ಲಿ ಕಡಿತಲೆಯಾಗಲಿರುವ 300 ಮರಗಳನ್ನು ಉಳಿಸಿದ ಕೀರ್ತಿ ಈ ಹಳ್ಳಿಯ ಮಹಿಳೆಯರದ್ದು. ಕೃಷಿ ಕೆಲಸಕ್ಕೆ ಬೇಕಾಗುವ ಉಪಕರಣಗಳಿಗಾಗಿ ಇಡೀ ಊರಿನಿಂದ ಹತ್ತು ಮರಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಕೇಳಿಕೊಳ್ಳಲಾಗಿತ್ತು. ಅರಣ್ಯ ಇಲಾಖೆ ಮರ ಕಡಿತಲೆಗೆ ಅವಕಾಶ ನೀಡಲಿಲ್ಲ. ಅದೇ ಇಲಾಖೆ ಟೆನ್ನಿಸ್ ಬ್ಯಾಟ್ ತಯಾರಿಸಲು ಕೋರಿದ ಒಬ್ಬ ಕಂಟ್ರಾಕ್ಟರ್‍ಗೆ 300 ಮರಗಳನ್ನು ಕಡಿಯಲು ಅನುಮತಿ ನೀಡಿತು. ಮರ ಕಡಿಯಲು ಬಂದಾಗ ಇಡೀ ಹಳ್ಳಿಯ ಮಹಿಳೆಯರು ಮರಗಳನ್ನು ಅಪ್ಪಿಕೊಂಡರು 300 ಮರಗಳನ್ನು ಉಳಿಸಿದರು. ಇದನ್ನೇ ಚಿಪ್ಕೋ ಚಳುವಳಿ ಕರೆಯಲಾಯಿತು. ಆಮೇಲೆ ಇದು ನಮ್ಮಲ್ಲೂ ಅಪ್ಪಿಕೋ ಚಳುವಳಿಯ ರೂಪ ತಳೆದದ್ದು ಇತಿಹಾಸ.

ಒಡಿಶಾದಲ್ಲಿನ ನಯಾಗೃಹ್ ಜಿಲ್ಲೆಯಲ್ಲಿರುವ ಕೋಂದ್ ಆದಿವಾಸಿಗಳಿಗೆ ದಂಗೇಜ್‍ಹೆರಿ ಅಂತಲೂ ಕರೆಯುತ್ತಾರೆ. 1970ರಲ್ಲಿ ಕೈಗಾರಿಕೆಗಳು ಬಂದು 30 ಮನೆಗಳಿರುವ ಈ ಹಳ್ಳಿಯ ಹಸಿರನ್ನು ಸಂಪೂರ್ಣ ನಿರ್ನಾಮ ಮಾಡದ್ದವು. ಅಳಿದುಳಿದ ಬೆಟ್ಟಗಳಲ್ಲಿ ಹಸಿರು ಹಚ್ಚುವ ಕಾಯಕವನ್ನು ಅಲ್ಲಿನ ಮಹಿಳೆಯರು ಕೈಗೆತ್ತಿಕೊಂಡರು. ಚೆನ್ನಾಗಿ ಬೆಳೆದ ಹಸಿರಿನ ಮೇಲೆ ಕಾಡುಗಳ್ಳರ ಕಣ್ಣು ಬಿತ್ತು. ಅನೇಕ ಮರಗಳನ್ನು ಕಡಿದು ಸಾಗಿಸುವ ಪ್ರಯತ್ನ ನಡೆಯಿತು. ಸ್ಥಳೀಯ ಅರಣ್ಯ ಇಲಾಖೆಯೂ ಕೈಚೆಲ್ಲಿ ಕುಳಿತಾಗ, ಕ್ರೋಧಗೊಂಡ ಮಹಿಳೆಯರು ಮನೆಯಲ್ಲಿರುವ ಕತ್ತಿ-ಕುಡುಗೋಲು ಹಿಡಿದು ಮರಗಳ್ಳರನ್ನು ಎದುರಿಸಿದರು. ನಂತರದಲ್ಲಿ ಮಾ ಗೋದಾದೇವಿ ಮಹಿಳಾ ಸಮಿತಿಯನ್ನು ರಚಿಸಿಕೊಂಡು ತಾವೇ ಬೆಳೆಸಿದ 80 ಹೆಕ್ಟರ್ ಕಾಡನ್ನು ಕಾಯ್ದು ರಕ್ಷಿಸಿಕೊಂಡಿದ್ದಾರೆ. 

ನಮ್ಮಲ್ಲೂ ಅಂಬಾನಿ-ಅದಾನಿಗಳಿದ್ದಾರೆ, ಬರೀ ಕ್ರಿಕೇಟ್ ಆಟದಿಂದಲೇ ಕೋಟಿಗಟ್ಟಲೆ ಪೇರಿಸಿದ ಮಹಾನುಭಾವರಿದ್ದಾರೆ, ಬಾಲಿವುಡ್‍ನಲ್ಲೇ ಅನೇಕ ಕೋಟಿ ಬಾಳುವರಿದ್ದಾರೆ. ಹುಟ್ಟಿನಿಂದಲೇ ಶ್ರೀಮಂತವಾದ ಅನೇಕರಿದ್ದಾರೆ. ಅದೇಕೋ ಅವರಿಗೆಲ್ಲಾ ಮತ್ತೂ ಮತ್ತೂ ಹಣ ತರುವ ಪೆಪ್ಸಿ-ಕೋಲಾ ಜಾಹಿರಾತೇ ಹೆಚ್ಚು ಪ್ರಿಯವಾಗಿದೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Mahanthesha
Mahanthesha
8 years ago

Ankana tumba chennagide….spurtidayakavagide…

Akhilesh Chipli
Akhilesh Chipli
8 years ago

ಧನ್ಯವಾದಗಳು ಮಹಾಂತೇಶ್ ಜೀ

2
0
Would love your thoughts, please comment.x
()
x