ಕಾಡಿನಲ್ಲಿ ಹೊರಡುವಾಗಿದ್ದ ಸಂತಸ ಹೊರ ಬಂದಾಗ ಮಾಯವಾಗಿ ಮಂಕು ಕವಿಯುತ್ತಿದೆ. ಹೌದು ಶ್ರೀ ಕೃಷ್ಣ ಆಲನಹಳ್ಳಿಯವರ ಕಾಡು ಕಾದಂಬರಿ ಓದಿದ ನಂತರ ಉಂಟಾದ ಭಾವ ಅದು. ಇಲ್ಲಿ ಭಾರತದ ಆರ್ಥಿಕತೆಯ ಬೆನ್ನೆಲುಬಾದ ಹಳ್ಳಿಗಳು ಸಾಮಾಜಿಕ ಸ್ತರ ವಿನ್ಯಾಸದ ನೆಲೆಯಲ್ಲಿ ರೂಪುಗೊಂಡ ದರುಣ ಬದುಕಿನ ಕ್ರೌರ್ಯದ ದಾಖಲೆಯಿದೆ. ಜಾತಿ, ಮತ, ವರ್ಗ, ಸಂಘರ್ಷಗಳ ಚಿತ್ರಣವಿದೆ “ ಕಿಟ್ಟಿ” ಎಂಬ ಪೋರನ ಮುಖಾಂತರ ಕಾದಂಬರಿಯು ತನ್ನನ್ನು ಬಿಚ್ಚಕೊಳ್ಳುತ್ತಾ ಸಾಗುತ್ತದೆ. ಇಡೀ ಕಾದಂಬರಿಯಲ್ಲಿ ಕಮಲಮ್ಮ ಮತ್ತು ಕಿಟ್ಟಿಯ ಪಾತ್ರಗಳು ಮಾನವೀಯತೆಗಾಗಿ ಮಿಡಿಯುವ ತುಡಿತಗಳಾಗಿದ್ದು, ಕಿಟ್ಟಿಯ ಮುಗ್ದತೆಯ ಜೀವಂತಿಕೆಯ ಪ್ರತೀಕವಾಗಿ ಕಾಣಿಸುತ್ತದೆ.
ಹಾಳು ಹನುವನ ಗುಡಿ, ಹಿಂಸೆ, ಮೌಢ್ಯ, ಅಸಮಾಧನ, ಕ್ರೌರ್ಯದ ಪ್ರತೀಕಾರ, ಜನಗಳ ಸ್ವಭಾವ, ಪಂಚಾಯತಿ ಕಟ್ಟೆ ಅನೈತಿಕ ಸಂಬಂಧಗಳ ತಾಣ ಇವೆಲ್ಲ ಓದುಗನಿಗೆ ಹಳ್ಳಿಯ ಚಿತ್ರಣವನ್ನು ಕಣ್ಣಿಗೆ ಕಟ್ಟಿ ಬಿಡುತ್ತವೆ. ಸುಮಾರು 25-30 ವರ್ಷಗಳ ಹಿಂದೆ ಹಳ್ಳಿಯಲ್ಲಿ ಶ್ರೀಮಂತಿಕೆಯ ಅಳತೆಯನ್ನು ಅನೈತಿಕ ಸಂಬಂಧಗಳ ಎಣಿಕೆಯ ಆಧಾರದ ಮೇಲೆ ಮಾಡಲಾಗುತ್ತಿತ್ತು. ಹಳ್ಳಿಯ ಗೌಡ ಅಥವಾ ಸಾಹುಕಾರರು ಯಾವತ್ತೂ ಏಕ ಪತ್ನಿ ವೃತಸ್ಥರಾಗುತ್ತಿರಲಿಲ್ಲ. ಕಾರಣ ಅದು ಅವರ ಶ್ರೀಮಂತಿಕಯ ಪ್ರಶ್ನೆಯಾಗಿರುತ್ತಿತ್ತು, ಅದರೆ ಇವತ್ತು ಅಂತಹ ಧೋರಣೆಗಳು ಕೊಂಚ ಸಡಿಲಗೊಂಡು ಬದಲಾಗಿರುವುದನ್ನು ಗುರುತಿಸಬಹುದು. ನೈತಿಕ ಅನೈತಿಕಗಳ ನಿಲುವಳು ಗಂಡು ಮತ್ತು ಹೆಣ್ಣಿನ ಸಂಧರ್ಭಗಳಲ್ಲಿ ಹೇಗೆ ಬದಲಾಗುತ್ತವೆ ಎಂಬುವುದನ್ನು ಇಲ್ಲಿ ಸೂಕ್ಮವಾಗಿ ವಿವರಿಸಲಾಗಿದೆ.
ಪ್ರಸ್ತುತ ಕಾದಂಬರಿಯಲ್ಲಿ ಹಳ್ಳಿಯ ವಿವಾಹಿತ ಗಂಡೊಬ್ಬ ವಿವಾಹೇತರ ಸಂಬಂಧ ಕಟ್ಟಿಕೊಳ್ಳುವಲ್ಲಿ ಅಧಿಕೃತ ಪರವಾನಿಗಿಯಿದ್ದು, ಅದೇ ವಿವಾಹಿತ ಅಥವಾ ವಿಧೆವೆಯಾದ ಸ್ತ್ರೀಯೊಬ್ಬಳು ಅಂತಹ ಸಂಬಂಧದಲ್ಲಿ ತೊಡಗಿದ್ದರೆ ಅದು ಹಾದರ ಎಂದು ಪರಿಗಣಿಸುವ ನಿರ್ಣಯಗಳು ಉಪರ್ಯಾಸವೆನಿಸಿದರೂ ಅಂದಿನ ಕಾಲಕ್ಕೆ ಅದು ಸಹಕ ಎನ್ನುವುದನ್ನು ಮನದಟ್ಟು ಮೂಡಿಸುತ್ತವೆ. ಈ ಹಿನ್ನೆಲೆಯಲ್ಲಿಯೆ ಆಯ್ನೋರು ತನ್ನ ವಿಧವಾ ತಂಗಿ “ ಸಾವಿತ್ರಮ್ಮ” ಅನೈತಕ ಸಂಬಂಧದಿಂದ ಬಸಿರಾಗಿ ಆತ್ಮಹತ್ಯೆ ಮಾಡಿಕೊಂಡಾಗ ಗೌಪ್ಯವಾಗಿ ಅವಳ ಅಂತ್ಯ ಸಂಸ್ಕಾರ ಮುಗಿಸುವನು, ಅದೇ ಆಯ್ನೋರು “ಕಾಳಿ” ಎಂಬ ಹೊಲೆಯರ ಹೆಣ್ಣೊಬ್ಬಳೊಮದಿಗೆ ಹೊಂದಿರುವ ಸಂಬಂಧ ನ್ಯಾಯವಾ ಎಂದು ಯೋಚಿಸುವ ಗೋಜಿಗೂ ಹೋಗಲಾರದ್ದು ವಿಚಿತ್ರವೇ..
ತನಗಾಗಿ ಪ್ರೀತಿ ತೋರದ ಗಂಡ ಚಂದ್ರೇಗೌಡನಿಗಾಗಿ ಹಾತೋರೆದು ಮಾಟ ಮಂತ್ರದ ಮೊರೆಹೋಗಿ ಪ್ರತಿ ರಾತ್ರಿ ಕಣ್ಣೀರು ಸುರಿಸುತ್ತಾ ಮಲಗುವ ಕಮಲವ್ವನಪಾತ್ರ ನನಗೆ ಉನ್ನತ ಸ್ಥಾನದಲ್ಲಿ ಗೋಚರವಾಗುತ್ತದೆ. ಬಸಕ್ಕನೊಂದಿಗಿನ ಚಂದ್ರೇಗೌಡನ ಅನೈತಿಕ ಸಂಬಂಧ ಹೆಣ್ಣೇ ಹೆಣ್ಣಿಗೆ ಶತ್ರು ಎಂಬತೆ ಇದೆ. ನಾಗಿಯ ಚಿಕ್ಕಮ್ಮ ಕಲ್ಯಾಣಿ ಓಡಿಹೋದಗ ಸೀತಾರಾಮಯ್ಯನವರಿಗೆ “ಕುಲಗೇಡಿ ರಂಡೆ ವೋದ್ರೆ ವೋದ್ಲು ಬುಡಣ್ಣೀ, ಇನ್ನೋಬ್ಬಳು ಬತ್ತಾಳೆ’’ ಎಂಬ ಚಂದ್ರೇಗೌಡನ ಮಾತಿನಲ್ಲಿ ಪುರಷ ಪ್ರಧಾನತೆಯ ಗತ್ತು ಕಾಣಿಸುತ್ತದೆ. ಹಳ್ಳಿಯ ಆಚರಣೆಯಾದ ಓಕುಳಿ ಮತ್ತು ಹೆಂಡ ಕಟ್ಟುವ ಮನೋರಂಜನಾ ತಾಣಗಳೂ ಕೂಡಾ ಪ್ರತೀಕಾರದ ತಾಣಗಳಾಗಿರುವುದು ಅಶ್ಚರ್ಯವೇ..
ಅತ್ತೇ ಯಾಕೆ ದಿನಾ ರಾತ್ರಿ ಅಳುತ್ತಾಳೆ, ಮಾವ ರಾತ್ರಿ ಎಲ್ಲಿ ಹೋಗುತ್ತಾನೆ, ಆಯ್ನೋರು ಯಾಕೆ ಕಾಳಿ ಜೊತೆ ಬೆತ್ತಲೆ ಮಲಗಿದ್ದ, ಕಲ್ಯಾಣಿ ಯಾಕೆ ಆಳು ಹನುಮನೊಂದಿಗೆ ಓಡಿ ಹೋದಳು, ಗಂಡ ಇದ್ರೂ ಕೆಂಚನ ಜೊತೆಗಿದ್ದುದ್ದಕ್ಕೆ ದೇವಿಗ್ಯಕೆ ಪಂಚಾಯ್ತಿಯಿಲ್ಲಿ ಬೈದರು? “ ಇಂತಹ ಪ್ರಶ್ನೆಗಳು ಅಪ್ರಬುದ್ದನಾದ ಕಿಟ್ಟಿಗೆ ಕಾಡುವುದು ಸಮಾನ್ಯ ಅಲ್ಲಲ್ಲಿ ಬರುವ ಸಾವಿನ ಸಂಧರ್ಭಗಳು ಮುಂಚಿರವಾಗಿಯೇ ಕಾದಂಬರಿಯ ದುರಂತ ಅಂತ್ಯಕ್ಕೆ ಮುನ್ಸೂಚನೆಗಳಂತಿವೆ.
ಹಾಗೇ ಓದಿಕೊಂಡು ಹೋಗುವಾಗ ಮುಂದೇನಾದೀತು ಎನ್ನುವ ಕುತೂಹಲದಲ್ಲಿರುವಾಗಲೆ ಎಲ್ಲ ಮುಗಿದು ಕಥೆಯೆ ಅಂತ್ಯವಾಗುವುದು, ಕೊನೆಯಲ್ಲಿ ಓದುಗನ ಮನಸ್ಸಿನಲ್ಲೇಳುವ ಕ್ರೌರ್ಯದ ಅಸಮಾಧಾನಕ್ಕೆ ಅಂತ್ಯಗಾಣಿಸದೇ ಬಿಟ್ಟಿದ್ದು ಲೇಖಕರ ಮಿತಿಯೇ ಸರಿ…
-ಸ್ನೇಹಲತಾ ಗೌನಳ್ಳಿ
ಸ್ನೇಹತಲಾ ಗೌನಳ್ಳಿ ಕಲಬುರ್ಗಿ ಜಿಲ್ಲೆಯ ಚಿಂಚೋಳಿಯವರು. ಓದಿದ್ದು ಎಮ್ ಎ.ಬಿ.ಎಡ್. ಎಮ್ ಎ ಯನ್ನು ಕರ್ನಾಟಕ ಕೇಂದ್ರಿಯ ವಿಶ್ವವಿಧ್ಯಾಲಯದಿಂದ ಮುಗಿಸಿದ್ದು. ಸಧ್ಯ ಚಿಂಚೋಳಿಯ ಹೆಲೆನ್ಸ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಸಾಹಿತ್ಯವೆಂದರೆ ತುಂಬಾ ಇಷ್ಟ.