ತುಡುಗು ದನಗಳ ಕಾಟವನ್ನು ತಡೆಯಲು ಬೇರಾವುದೇ ಉಪಾಯ ಕಾಣಲಿಲ್ಲ. ಇಡೀ ದಿನ ಕಾಯುವುದಂತೂ ಸಾಧ್ಯವಿಲ್ಲ. ನೀರಿನ ಅಭಾವದಿಂದ ಸಾಯುತ್ತಿರುವ ಗಿಡಗಳನ್ನು ಉಳಿಸುವುದು ಹೇಗೆ ಎಂಬುದೇ ಪ್ರಶ್ನೆ. ಬಾವಿಯನ್ನೋ, ಕೊಳವೆ ಬಾವಿಯನ್ನೋ ತೆಗೆಸಲು ತಕ್ಷಣದಲ್ಲಿ ಸಾಧ್ಯವಿಲ್ಲ. ನೀರಿನ ಅಭಾವಕ್ಕೆ ಮೊಟ್ಟಮೊದಲಿಗೆ ಬಲಿಯಾಗುತ್ತಿರುವುದು ಊರಹೊನ್ನೆಯೆಂಬ ಗಿಡಗಳು. ಇವುಗಳನ್ನು ಹೊನ್ನಾವರ-ಕುಮುಟದ ಕಡೆಯಿಂದ ತರಿಸಿದ್ದೆ. ಮೊದಲ ವರ್ಷ ನೀರು ಬೇಡುವ ಸಸ್ಯಗಳವು. ನೀರನ್ನು ಕೊಡದಿದ್ದರೆ ಊರಹೊನ್ನೆ ಗಿಡಗಳು ಬದುಕಲಾರವು. ಈಗ ನೆರೆಯವರಿಗೆ ಕೊಂಚ ಹೊರೆಯಾದರೆ ಹೇಗೆ ಎಂಬ ಯೋಚನೆಯೊಂದು ಬಂತು. ಪಕ್ಕದ ಆಶ್ರಮದವರ ಹತ್ತಿರ 2 ಕೊಳವೆ ಬಾವಿಗಳಿದ್ದವು. ತೀರಾ ನೀರನ್ನು ಕೊಡುವುದಿಲ್ಲ ಎಂದು ಹೇಳಲಾರರು ಎಂದು ಅನಿಸಿತು.
ಡಿಸೆಂಬರ್-ಜನವರಿ ಅಂದರೆ ಹಸುರು ಹಾವುಗಳು ಮೊಟ್ಟೆಯಿಟ್ಟು ಮರಿ ಮಾಡುವ ಕಾಲ. ಎಲ್ಲಾ ಹಾವುಗಳು ವಿಷದ ಹಾವುಗಳಲ್ಲ. ನಾಗರ ಹಾವು, ಕಾಳಿಂಗ ಸರ್ಪ ಇತ್ಯಾದಿಗಳನ್ನು ಸುಲಭವಾಗಿ ವಿಷದ ಹಾವುಗಳೆಂದು ಗುರುತಿಸಬಹುದು. ಹಾಗೆಯೇ ಕೇರೆಹಾವು ಮತ್ತು ಹಸುರು ಹಾವುಗಳು ವಿಷರಹಿತ ಹಾವುಗಳು ಎಂದು ಸುಲಭವಾಗಿ ಸಾಮಾನ್ಯರು ಗುರುತಿಸುತ್ತಾರೆ. ಇತರೆ ಹಾವುಗಳಿಗೆ ಈ ಭಾಗ್ಯವಿಲ್ಲ. ಇಲಿಗಳನ್ನು ತಿಂದುಪಕಾರ ಮಾಡುವ ಹಾವುಗಳನ್ನು ಸಾಮಾನ್ಯವಾಗಿ ಜನ ಬಡಿಗೆಯಿಂದ ಬಡಿದು ಕೊಲ್ಲುತ್ತಾರೆ. ಹಾವುಗಳ ಕುರಿತು ಇರುವ ಅಜ್ಞಾನವೇ ಇದಕ್ಕೆ ಕಾರಣ. ಹಾಗೆಯೇ ಮರಿಯಾದ ಹಾವುಗಳು ಕೆಲವೊಮ್ಮೆ ರಸ್ತೆ ದಾಟುವ ಪ್ರಯತ್ನದಲ್ಲಿರುತ್ತವೆ. ವೇಗವಾಗಿ ಬರುವ ಕಾರೋ, ಇನ್ಯಾವುದೋ ವಾಹನ ಇವುಗಳನ್ನು ಬಲಿ ತೆಗೆದುಕೊಳ್ಳುತ್ತದೆ. ಮಲೆನಾಡಿನ ರಸ್ತೆಗಳಲ್ಲಿ ಹೀಗೆ ಅಪ್ಪಚ್ಚಿಯಾದ ಹಾವುಗಳನ್ನು ಸಾಮಾನ್ಯವಾಗಿ ಕಾಣಬಹುದು. ಸ್ವಲ್ಪ ವೇಗವನ್ನು ಕಡಿಮೆ ಮಾಡಿಕೊಂಡರೆ ಈ ತರಹದ ಅಪಘಾತಗಳನ್ನು ತಪ್ಪಿಸಬಹುದು. ಆದರೆ, ವೇಗದ ಬದುಕಿಗೆ ನಿಯಂತ್ರಣ ಹಾಕುವುದು ಸುಲಭದ ಮಾತಲ್ಲ. ಹಾಗೆಯೇ ಹೆಗ್ಗೋಡಿನ ಸಮೀಪದಲ್ಲೇ ಒಂದು ಹಸುರು ಹಾವು ರಸ್ತೆ ದಾಟುವ ಪ್ರಯತ್ನದಲ್ಲಿತ್ತು. 14 ಅಡಿ ಟಾರು ರಸ್ತೆಯನ್ನು ದಾಟಲು ಆ ಹಾವಿಗೆ ಒಂದೆರೆಡು ನಿಮಿಷವಾದರೂ ಬೇಕು. ಇನ್ಯಾವುದೋ ವಾಹನ ಬಂದು ಹಾವನ್ನು ಅಪ್ಪಚ್ಚಿ ಮಾಡುವ ಸಂಭಾವ್ಯ ಪ್ರಸಂಗವನ್ನು ತಪ್ಪಿಸಲು ರಸ್ತೆಗೆ ಅಡ್ಡಡ್ಡಲಾಗಿ ವಾಹನವನ್ನು ನಿಲ್ಲಿಸಿದೆ. ಎದುರುಗಡೆಯಿಂದ ವೇಗವಾಗಿ ಬಂದ ತುಂಡುಹುಡುಗರ ಮೊಬೈಕ್‍ಗಳು ಇಡೀ ಪ್ರಸಂಗವನ್ನು ಗಮನಿಸದಂತೆ ಬರ್ರನೆ ಹಾದು ಹೋದವು. ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ನನ್ನ ವಾಹನವಾಗಲಿ, ಖುದ್ದು ನಾನೆ ಅಡ್ಡ ನಿಂತದ್ದನ್ನು ಗಮನಿಸುವ ಸ್ಥಿತಿಯಲ್ಲೆ ಅವರಿರಲಿಲ್ಲ. ಹಾವು ರಸ್ತೆ ದಾಟಿ, ವೇಗವನ್ನು ಪಡೆದುಕೊಂಡು ಪೊದೆಯೊಳಕ್ಕೆ ಮರೆಯಾಯಿತು.
ಶರಾವತಿಗೆ ಅಡ್ಡಲಾಗಿ ಆಣೆಕಟ್ಟುಗಳನ್ನು ಕಟ್ಟಿ ವಿದ್ಯುತ್ ಉತ್ಪಾದನೆ ಶುರುವಾದಾಗ, ವಿದ್ಯುತ್ ಕೊಳ್ಳಲು ಜನರು ತಯಾರಿರಲಿಲ್ಲ. ಕಾಡು ಮುಳುಗಿಸಿದವರೇ ನಾಡಿನ ಕತ್ತಲನ್ನು ಓಡಿಸಲು ಮನೆಮನೆಗೆ ಬಂದು ವಿದ್ಯುತ್ ಸಂಪರ್ಕ ತೆಗೆದುಕೊಳ್ಳಿ ಎಂದು ಗೋಗರೆಯುವ ಪರಿಸ್ಥಿತಿ ಇತ್ತು. ಇದು 50 ವರ್ಷದ ಹಿಂದಿನ ಕತೆಯಾದರೆ, ಇವತ್ತಿನ ಕತೆ ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಬೇಡಿಕೆ ಇರುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಎಷ್ಟು ವಿದ್ಯುತ್ ಉತ್ಪಾದನೆಯಾದರೂ ಪೇಟೆ-ಪಟ್ಟಣಗಳ ರಾಕ್ಷಸ ಹಸಿವನ್ನು ಇಂಗಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹಳ್ಳಿಗಳಿಗೆ ವಿದ್ಯುತ್ ಖೋತಾ ಮಾಡಲಾಗುತ್ತದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 2ರ ವರೆಗೆ ಹಳ್ಳಿಗಳಲ್ಲಿ ಸಾಮಾನ್ಯವಾಗಿ ವಿದ್ಯುತ್ ಖೋತಾ ಮಾಡಲಾಗುತ್ತದೆ. ಹಾಗೆಯೇ ಎಲ್ಲಾ ಗ್ರಾಮಪಂಚಾಯ್ತಿಗಳು ಬೀದಿದೀಪಗಳನ್ನು ಅಳವಡಿಸಿಕೊಂಡಿವೆ. ಮಲೆನಾಡಿನಲ್ಲಿ ಒಂದೊಂದು ಮನೆಯ ಎದುರು ಒಂದೊಂದು ಬೀದಿ ದೀಪಗಳಿವೆ. ಬೆಳಗ್ಗೆ 6 ಗಂಟೆಯಿಂದ ವಿದ್ಯುತ್ ಖೋತಾ ಮಾಡುವುದರಿಂದ, ಆಯಾ ಮನೆಯೆದುರು ಇರುವ ಬೀದಿ ದೀಪಗಳನ್ನು ಜನ ಸ್ವಿಚ್ ಆಫ್ ಮಾಡುವುದನ್ನು ಮರೆತುಬಿಡುತ್ತಾರೆ. 2 ಗಂಟೆಗೆ ವಿದ್ಯುತ್ ನೀಡುವುದರಿಂದ ಎಲ್ಲಾ ಬೀದಿ ದೀಪಗಳು ಹಗಲಿನಲ್ಲೆ ಉರಿದು, ವಿದ್ಯುತ್ ಖೋತಾದ ಆಶಯವನ್ನೇ ಬುಡಮೇಲು ಮಾಡುತ್ತವೆ. ಹೀಗೆ ನಾನು ಉಷಾಕಿರಣಕ್ಕೆ ಹೋಗುವ ರಸ್ತೆಯಲ್ಲಿ ಕಡಿಮೆಯೆಂದರೂ 25-30 ಬೀದಿ ದೀಪಗಳಿವೆ. ಎಲ್ಲಾ ದೀಪಗಳು ಹಗಲಿನಲ್ಲೆ ಉರಿಯುತ್ತಿರುತ್ತವೆ. ಎಲ್ಲವನ್ನೂ ಆರಿಸುತ್ತಾ ಹೋಗಬೇಕು. ಇದಕ್ಕೆ ಸಾಕಷ್ಟು ಸಮಯ ತಗಲುತ್ತದೆ. ಅಲ್ಲದೆ ಒಂದು ದಿನ ಬೀದಿ ನಾಯಿಯೊಂದು ಇವನೇನೋ ಕದಿಯಲು ಬಂದ ಎಂದು ತಿಳಿದುಕೊಂಡಿತೋ, ಅಟ್ಟಿಸಿಕೊಂಡು ಬಂತು. ಇದು ಬೀದಿ ದೀಪದ ಕತೆಯಾದರೆ, ನೀರಿನ ನಲ್ಲಿಯದೂ ಇದೆ ಕತೆ. ಎಲ್ಲಾ ನಲ್ಲಿಗಳಲ್ಲೂ ಭರಪೂರ ನೀರು ಹರಿದು ಚರಂಡಿ ಸೇರುತ್ತಿತ್ತು. ನಲ್ಲಿ ನೀರನ್ನು ಕಟ್ಟುತ್ತಾ, ಬೀದಿ ದೀಪವನ್ನು ಆರಿಸುತ್ತಾ ಇದ್ದರೆ ‘ಉಷಾಕಿರಣ’ದ ಕತೆಯೇನು? ಇಲ್ಲಿ ಮುಖ್ಯವಾದ ಅಂಶವನ್ನು ಗಮನಿಸುವುದಾದರೆ ಸಾಮಾನ್ಯರಿಗೂ ಸಾಮಾಜಿಕ ಜವಾಬ್ದಾರಿಯ ಕೊರತೆ. ಎಲ್ಲವನ್ನೂ ಸರ್ಕಾರಗಳೇ ಮಾಡಬೇಕು ಎಂಬ ಧೋರಣೆ. ಕೆಲವೊಮ್ಮೆ ಉದಾಸೀನತೆ. ದಯವಿಟ್ಟು ಬೀದಿದೀಪಗಳನ್ನು ಬೆಳಗ್ಗೆಯೇ ಆರಿಸಿ ಎಂದು ಮನವಿ ಮಾಡಿದ್ದರಿಂದ, ವಿದ್ಯುತ್ ಸೋರುವುದು ಬಹುತೇಕ ಕಡಿಮೆಯಾಯಿತು. ನೀರು ಪೋಲಾಗುವುದು ತಪ್ಪಿತು. ಉಷಾಕಿರಣಕ್ಕೆ ಹೋಗುವ ದಾರಿಯಲ್ಲಿ ಶೆಡ್ತಿಕೆರೆ ಎಂಬ ಊರು ಸಿಗುತ್ತದೆ. ಅಲ್ಲಿನ ವೃತ್ತದಲ್ಲಿ ಒಂದು ದೇವಸ್ಥಾನವಿದೆ. ಬಟ್ಟೆವಿನಾಯಕ ದೇವಸ್ಥಾನ ಎಂದು ಹೆಸರು. ಆ ದೇವಸ್ಥಾನದ ಹೊರಭಾಗದಲ್ಲೊಂದು ಬೀದಿ ದೀಪವಿದೆ. ಅಲ್ಲಿ ಪೂಜೆ ಮಾಡುವ ಭಟ್ಟರನ್ನು ಕಂಡು, ನೋಡಿ ವಿದ್ಯುತ್ ಪೋಲಾಗುತ್ತಿದೆ ಹತ್ತಿರದಲ್ಲಿ ಬೇರೆ ಮನೆಗಳೂ ಇಲ್ಲ. ಆದ್ದರಿಂದ, ದಿನಾ ಬೆಳಗ್ಗೆ ಬೀದಿ ದೀಪವನ್ನು ನೀವೆ ದಯವಿಟ್ಟು ಆರಿಸಬೇಕು ಎಂದೆ. ಅವರು ಹೇಳಿದ ಉತ್ತರ ಆಶ್ಚರ್ಯಕರವಾಗಿತ್ತು. ಅಲ್ಲಿನ ಲೈನ್‍ಮನ್ ಆ ಬೀದಿ ದೀಪ ಉರಿಯುತ್ತಿರಲಿ ಎಂದು ಹೇಳಿದ್ದನಂತೆ. ಯಾಕೆ ಎಂದರೆ, ಲೈನ್‍ಮನ್‍ಗೆ ಯಾರಾದರೂ ಕರೆಂಟ್ ಇಲ್ಲ ಎಂದು ದೂರು ನೀಡಿದರೆ, ಮೊದಲು ಬಂದು ಆ ಬೀದಿ ದೀಪವನ್ನು ನೋಡುತ್ತಾನೆ, ವಿದ್ಯುತ್ ಖೋತಾದ ಸಮಯ ಮುಗಿದ ನಂತರವೂ ಬೀದಿ ದೀಪ ಉರಿಯುತ್ತಿಲ್ಲವೆಂದರೆ, ಲೈನ್ ಟ್ರಬಲ್ ಇದೆ ಎಂದು ಅರ್ಥ. ದೀಪ ಉರಿಯುತ್ತಿದ್ದರೆ, ಬೈಕ್ ಇಳಿಯುವುದೇ ಬೇಡ. ಇಂಥದೊಂದು ವ್ಯವಸ್ಥೆಯನ್ನು ಅಲ್ಲಿನ ಲೈನ್ ಮಾಡಿಕೊಂಡಿದ್ದಾನೆ.
ನೆರೆಯವರ ಹತ್ತಿರ ನೀರು ಪಡೆಯುವುದೆಂದು ತೀರ್ಮಾನ ಮಾಡಿಟ್ಟುಕೊಂಡಿದ್ದೆ. ಎಷ್ಟು ನೀರು ಪಡೆಯುವುದು ಎಂಬುದರ ಬಗ್ಗೆ ನಿಗದಿಯಾಗಿರಲಿಲ್ಲ. ಒಂದೆರೆಡು ಕೊಡಗಳಾದರೆ ಕೊಡಬಹುದು. ಹತ್ತಾರು ಕೊಡಗಳಾದರೆ ಇಲ್ಲವೆನ್ನಬಹುದು. ಈ ಹಂತದಲ್ಲಿ ಮಿತಬಳಕೆಯ ಪಾಠವನ್ನು ಕಲಿಯಲೇ ಬೇಕು. ಇಲಾಖೆಯ ಸ್ನೇಹಿತರೊಬ್ಬರು ಸಲಹೆ ನೀಡಿದರು. 2 ಲೀಟರ್ ನೀರಿನ ಬಾಟಲಿಯ ಬುಡಕ್ಕೆ ಸೂಜಿಯಿಂದ ಸಣ್ಣದೊಂದು ತೂತು ಮಾಡಿ ನೀರು ತುಂಬಿಡಿ. ವಾರಕ್ಕೊಂದು ಬಾರಿ ನೀರು ತುಂಬಿದರೂ ಸಾಕು. ಇದೊಂಥರ ಡ್ರಿಪ್ ಇರಿಗೇಷನ್ ಸಿಸ್ಟಮ್. ಹನಿ ನೀರಾವರಿ ಪದ್ಧತಿ. ಸರಿ, ಬಾಟಲುಗಳನ್ನು ಒಟ್ಟು ಮಾಡಿ, ಅವಕ್ಕೆಲ್ಲ ತೂತು ಮಾಡಲು ಚಿಕ್ಕದೊಂದು ಸೂಜಿಯನ್ನು ಹಿಡಿದುಕೊಂಡು, ನೆರೆಯವರ ಗೇಟಿನೊಳಗೆ ಕಾಲಿಟ್ಟೆ. ಮುಖ್ಯಸ್ಥರೇ ಮುಖಾಮುಖಿಯಾದರು. ಪರಿಚಯದ ನಗುವೊಂದನ್ನು ಬೀರಿದೆ. ಪ್ರತಿಯಾಗಿ ನನಗೊಂದು ನಗು ಸಿಕ್ಕಿತು. ಒಂದು ಸ್ವಲ್ಪ ನೀರು ಬೇಕಿತ್ತಲ್ಲ ಎಂದೆ. ಧಾರಾಳವಾಗಿ ತೆಗೆದುಕೊಂಡು ಹೋಗಿ ಎಂದರು. ಅಬ್ಬಾ! ಗೆದ್ದೆ.
ಪ್ರತಿನಿತ್ಯ 2 ಲೀಟರ್ ಬಾಟಲಿಗಳಲ್ಲಿ ನೀರು ತುಂಬಿಸಿಕೊಂಡು ಬರುವುದು, ಸೊರಗುತ್ತಿರುವ ಗಿಡಗಳಿಗೆ ಹನಿ ನೀರಾವರಿ ಮಾಡುವುದು. ಮೊದಲಿಗೆ ಸೊರಗುತ್ತಿರುವ ಗಿಡಗಳ ಲೆಖ್ಖ ತೆಗೆದುಕೊಂಡಾಗ ಬರೀ 10 ಗಿಡಗಳು ಸಿಕ್ಕವು. ದಿನೇ ದಿನೇ ಇವುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಈ ಪದ್ಧತಿಯಲ್ಲೂ ಕೆಲವೊಂದು ತೊಂದರೆ ಕಂಡು ಬಂದಿತು. ಮಣ್ಣಿನಲ್ಲಿ ಹೂತಿಟ್ಟಿದ್ದರಿಂದ ಸೂಜಿಯಿಂದ ಮಾಡಿದ ತೂತುಗಳು ಮುಚ್ಚಿಹೋಗುತ್ತಿದ್ದವು. ಪ್ರತಿಬಾರಿ ನೀರು ತುಂಬಿ ಪ್ರತಿ ಬಾಟಲಿಯನ್ನು ಎತ್ತಿ ನೋಡಿ, ನೀರು ಜಿನುಗುತ್ತಿದೆಯೇ? ಇಲ್ಲವೆ ನೋಡುವುದು ಸಮಯ ವ್ಯರ್ಥ. ಸರಿ, ಮತ್ತೊಬ್ಬ ಸ್ನೇಹಿತರು ಪೇಟೆಯಲ್ಲಿ ಸಿಗುವ ಪ್ಲಾಸ್ಟಿಕ್ ಮುಚ್ಚುಗೆಯನ್ನು (ಮಲ್ಚಿಂಗ್ ಶೀಟ್) ಗಿಡದ ಬುಡಕ್ಕೆ ಮುಚ್ಚಿ ನೀರು ಹಾಕಿ ಎಂದು ಸಲಹೆ ಕೊಟ್ಟರು. ಪೇಟೆಗೆ ಹೋಗಿ ಮಲ್ಚಿಂಗ್ ಶೀಟ್ ತೋರಿಸಿ ಎಂದರೆ, ಅತ್ಯಂತ ತೆಳುವಾದ ಪ್ಲಾಸ್ಟಿಕ್ ಶೀಟದು. ಈ ಪ್ಲಾಸ್ಟಿಕ್‍ನಿಂದ ಮತ್ತೇನೆನೋ ಉಪದ್ರವವಾಗುವುದಕ್ಕಿಂತ, ಅನ್ಯಮಾರ್ಗಕ್ಕಾಗಿ ತಡಕಾಡಿದೆ. ಸೂರ್ಯಕಿರಣಗಳ ಅವಗೆಂಪು ಕಿರಣಗಳನ್ನು ತಡೆದುಕೊಂಡು ಕನಿಷ್ಟ 5 ವರ್ಷ ಬಾಳಿಕೆ ಬರಬಲ್ಲ ಯು.ವಿ.ಶೀಟ್ ಸಿಕ್ಕಿತು. ಆದರೆ ಸ್ವಲ್ಪ ದುಬಾರಿ. ಸರಿ ಅದನ್ನೇ ಕೊಂಡು ತಂದು 2 * 2 ಅಡಿಗೆ ಕತ್ತರಿಸಿ ಉಪಯೋಗಿಸಿದೆ.
ಯು.ವಿ.ಶೀಟ್‍ನಡಿಯಲ್ಲಿ ನೀರು ಹಾಕಿ, ಹಾಳೆ ಅತ್ತಿತ್ತ ಹಾರದಂತೆ ನಾಲ್ಕಾರು ಕಲ್ಲುಗಳನ್ನಿಟ್ಟರೆ ಆಯಿತು. ಹಾಕಿದ ನೀರು ನೂರಕ್ಕೆ ನೂರರಷ್ಟಲ್ಲದಿದ್ದರೂ, 90%ಕ್ಕಿಂತ ಹೆಚ್ಚು ಭೂಮಿಯಲ್ಲೇ ಇಂಗಿ ಗಿಡಗಳಿಗೆ ಆಹಾರವಾಗುತ್ತದೆ. ಒಂದೊಮ್ಮೆ ಮಧ್ಯದಲ್ಲಿ ನೀರು ನೀಡುವುದಕ್ಕೆ ಆಗದಿದ್ದರೂ ಗಿಡಗಳು ಬೇಗನೆ ಒಣಗುವುದಿಲ್ಲ. ನೀರು ಹಾಕಲು ಶುರು ಮಾಡಿದ ಮೂರ್ನಾಲ್ಕು ದಿನಗಳಲ್ಲೆ ಯು.ವಿ.ಹಾಳೆಯಡಿಯಲ್ಲಿ ಆಶ್ಚರ್ಯಕರ ಬೆಳವಣಿಗೆಗಳಾದವು. ವಿವಿಧ ಜಾತಿಯ ಇರುವೆಗಳು ಭೂಮಿಯಿಂದ ಮೇಲೆದ್ದು ಬಂದು ಮನೆ ಮಾಡಿಕೊಂಡವು. ಅಲ್ಲೇ ಒಂದಿಷ್ಟು ಬೀಜಗಳು ಗಿಡಗಳಾಗಿ ಮೇಲೆ ಬರಲು ಹವಣಿಸಿದವು. ಇದಕ್ಕಿಂತಾ ಅಚ್ಚರಿಯೆಂದರೆ, ನೈರುತ್ಯ ಮೂಲೆಯಲ್ಲಿರುವ ಊರಹೊನ್ನೆ ಗಿಡದ ಬುಡದಲ್ಲೊಂದು ಕೆಂಪು-ಕಂದು ಮಿಶ್ರಿತ ಕಪ್ಪೆಯೊಂದು ಆಶ್ರಯ ಪಡೆಯಿತು. ಜೀವಿವೈವಿಧ್ಯದ ಮಹತ್ವದ ಅರಿವಿರುವವರಿಗೆ ಮಾತ್ರ ಕಪ್ಪೆಯ ಆಗಮನ ಅಚ್ಚರಿ ತರಬಲ್ಲದು. ಅಂಥಹ ಬಿಸಿಲಿನಲ್ಲಿ, ಒಣಭೂಮಿಯಲ್ಲಿ ಕಪ್ಪೆಯ ದರ್ಶನವೆಂದರೆ ಆಶ್ಚರ್ಯದ ಪರಮಾವಧಿಯೇ ಸೈ. ಊಟಕ್ಕೆ ಅದೇನು ತಿನ್ನುತಿತ್ತೋ ಗೊತ್ತಿಲ್ಲ. ಅಂತೂ ಪ್ರತಿದಿನ ಹಾಳೆಯನ್ನು ಎತ್ತುವಾಗ ಇನ್ನಷ್ಟು ಒಳಸೇರಿ ಅಡಗಿಕೊಳ್ಳುತ್ತಿತ್ತು. ಹೀಗೆ ಒಂದು ದಿನ ಅಲ್ಲೊಂದು ನಾಗರ ಹಾವು ಹರಿದಾಡುವುದನ್ನೂ ಕಂಡೆ. ಮತ್ತೊಂದು ದಿನ ಎತ್ತರದ ಮತ್ತಿ ಮರದ ತುದಿಯೊಲ್ಲೊಂದು ಗಿಡುಗವೂ ಕುಳಿತಿತ್ತು. ಹೀಗೆ ಆಹಾರ ಸರಪಳಿಯು ರೂಪುಗೊಳ್ಳುವುದು ಒಟ್ಟಾರೆ ಪರಿಸರದ ದೃಷ್ಟಿಯಿಂದ ತುಂಬಾ ಒಳ್ಳೆಯದು. ದಿನವೂ ಕಾಣುತ್ತಿರುವ ಕಪ್ಪೆಗೊಂದು ಹೆಸರನ್ನೇಕೆ ಇಡಬಾರದು ಎಂದು ನನ್ನನ್ನು ನಾನೇ ಕೇಳಿಕೊಂಡೆ. ಉಷಾಕಿರಣದ ಕಪ್ಪೆಗೆ ‘ಉಪ್ಪೆ’ ಎಂದು ಹೆಸರಿಟ್ಟೆ.
[ಸಹೃದಯರೇ, ಇನ್ನು ಈ ಕತೆಯನ್ನು ಸ್ವಲ್ಪ ದಿನ ಬಿಟ್ಟು ಮುಂದುವರೆಸಲಾಗುವುದು. ಅಡಚಣೆಗಾಗಿ ಕ್ಷಮೆ ಇರಲಿ, ಎಂದಿನಂತೆ ಬೇರೆ ಲೇಖನಗಳು ಈ ಅಂಕಣದಲ್ಲಿ ಪ್ರಕಟಗೊಳ್ಳುವವು]
ಕಾಡು ಕಟ್ಟುವ ಕತೆ ಸಂಚಿಕೆಗಳು ಪರಿಸರ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಮೂಡಿಬಂದಿವೆ. ಈ ಸಂಚಿಕೆ ಬಹಳ ಮುದ ಕೊಟ್ಟಿತು. ಆದಷ್ಟು ಬೇಗ ಮುಂದಿನ ಕತೆ ನಮಗೆ ಸಿಕ್ಕಲಿ.
ಧನ್ಯವಾದಗಳು ಅನಂತ ರಮೇಶ್ ಜೀ, ಒಂದು ಹಂತದಲ್ಲಿ ನಿಲ್ಲಿಸಬೇಕಾದ ಸಂದರ್ಭ ಬಂತು. ಶೀಘ್ರದಲ್ಲಿ ಮುಂದುವರೆಸಲಾಗುವುದು.
ಅಖಿಲೇಶ್ ಚಿಪ್ಳಿಯವರೆ ನಿಮ್ಮ ಕಾಡುಕಟ್ಟುವಕತೆ ಪರಿಸರಪ್ರೀತಿಜತೆಜತೆಗೆನೀತಿಬೋದಕವೂಆಗಿದೆ ಮುಂದಿನಬಾಗದ ನೀರಿಕ್ಷೆಯಲ್ಲಿ