ಮೊಲಕ್ಕೆ ಕತ್ತಿ ಬೀಸಿದವ
ಮಳೆಯನ್ನೇ ನಂಬಿಕೊಂಡು ಕಾಡು ಕಟ್ಟಲು ಹೊರಟ ನಮ್ಮ ಬವಣೆಗೀಗ ಒಂದು ಪರಿಹಾರ ಬೇಕಾಗಿತ್ತು. ನಮ್ಮ ಹತ್ತಿರ ಮಳೆಗಾಲದಲ್ಲಿ ಮಳೆ ನೀರಿಂಗಿಸಲು ತೋಡಿದ 20 * 20 * 20ರ ನೀರಿಲ್ಲದ ಹೊಂಡವೊಂದು ಬಿಟ್ಟರೆ ಬೇರೆ ಏನೂ ಇಲ್ಲ. ಮನೆಯಿಂದ ಪ್ರತಿದಿನ ನೀರು ತೆಗೆದುಕೊಂಡು ಹೋಗಿ ಸಾಯುತ್ತಿರುವ ಗಿಡಗಳಿಗೆ ನೀರುಣಿಸುವ ಕೆಲಸ ಕಷ್ಟ. ಅಂತೆಯೇ ಏರಿಯ ಮೇಲೆ ನೆಟ್ಟ 400 ಬಿದಿರು ಹಾಗೂ 100 ಕ್ಯಾಲಿಯಾಂಡ್ರಗಳಲ್ಲಿ ಬಿದಿರು ಮಾತ್ರ ಜೀವ ಹಿಡಿದುಕೊಂಡಿತ್ತು. ಕ್ಯಾಲಿಯಾಂಡ್ರಗಳು ಹೆಚ್ಚಿನವು ಒಣಗಿಹೋದರೂ ಕೆಲವೊಂದು ಬದುಕಲೇ ಬೇಕು ಎಂಬ ಹಠ ತೊಟ್ಟಂತೆ ಲೆಕ್ಕ ಮಾಡುವಷ್ಟು ಎಲೆಗಳನ್ನು ಹಿಡಿದುಕೊಂಡು ಬದುಕುವ ಪ್ರಯತ್ನದಲ್ಲಿದ್ದವು. ಹೊಸದಾಗಿ ಅಗಳದ ಮಣ್ಣು ಎತ್ತಿ ಹಾಕಿದ್ದರಿಂದ ಹಾಗೂ ಮಳೆಯ ಅಭಾವದ ಕಾರಣದಿಂದ ಏರಿಯ ಮೇಲಿನ ಮಣ್ಣಿನಲ್ಲಿ ನೀರು ಹಿಡಿದಿಡುವ ಶಕ್ತಿಯಿನ್ನೂ ಇರಲಿಲ್ಲ. ಅಲ್ಲದೇ ಸುಮಾರು ಸರಾಸರಿ 2.5 ಯಿಂದ 3 ಅಡಿ ಹೊಸ ಮಣ್ಣಿನ ಏರಿಯದು.
ಎಲ್ಲವೂ ನಾವಂದು ಕೊಂಡಂತೆ ನಡೆದರೆ ಪ್ರಪಂಚ ಅದೆಷ್ಟು ಸುಂದರವಾಗಿರುತ್ತದೆ ಎಂಬ ಸ್ವಾರ್ಥ ಎಲ್ಲರಲ್ಲೂ ಇರುತ್ತದೆ. ಕಾಡು ಕಟ್ಟುವ ವಿಚಾರದಲ್ಲಿ ಈ ಸ್ವಾರ್ಥ ನಮಗೆ ಕೊಂಚ ಹೆಚ್ಚೇ ಇತ್ತೇನೋ? ನೆಲದಿಂದ ಹತ್ತಾರು ಟಿಸಿಲೊಡೆದು ಮೇಲೆದ್ದು ಬರುತ್ತಿರುವ ಮತ್ತಿ, ಹುಣಾಲು, ಸಳ್ಳೆ ಗಿಡಗಳು ಪೊದೆಯಾಗಿ ಹಬ್ಬುತ್ತಿದ್ದವು. ಹೆಚ್ಚುವರಿಯಾದ ಟಿಸಿಲುಗಳನ್ನು ಕತ್ತರಿಸುವುದರಿಂದ ಕತ್ತರಿಸದೇ ಬಿಟ್ಟ ಟಿಸಿಲು ಬೇಗ ಬೆಳೆಯುತ್ತದೆ ಎಂಬುದೊಂದು ಸಸ್ಯಶಾಸ್ತ್ರ ವಿಜ್ಞಾನದ ಸತ್ಯ. ಅರಣ್ಯ ಇಲಾಖೆಯವರು ಸಾಗುವಾನಿ ನೆಡುತೋಪನ್ನು ಬೆಳೆಸುವಾಗ ಇದೇ ತಂತ್ರವನ್ನು ಉಪಯೋಗಿಸುತ್ತಾರೆ. ಈ ಕ್ರಮಕ್ಕೆ ಅರಣ್ಯ ಇಲಾಖೆಯ ಭಾಷೆಯಲ್ಲಿ “ಸಿಂಗ್ಲಿಂಗ್” ಎಂದು ಕರೆಯುತ್ತಾರೆ. ಇದರ ಅರಿವಿದ್ದ ನಾನು ಈ ಕ್ರಮಕ್ಕೆ ಮುಂದಾದೆ. ಹರಿತವಾದ ಕತ್ತಿಯಿಂದ ಮುಖ್ಯ ಟೊಂಗೆಗೆ ತೊಂದರೆಯಾಗದಂತೆ ಉಳಿದ ಚಿಕ್ಕ ರೆಂಭೆಗಳನ್ನು ಕತ್ತರಿಸುವ ಕೆಲಸವೂ ಸಾಗಿತು. ಜೊತೆಗೆ ಕಳೆ ಗಿಡಗಳ ಹರಣವೂ ನಡೆದಿತ್ತು. ಆಹಾರದ ಕುರಿತ ಕೆಲವು ಸೂಕ್ಷ್ಮಗಳನ್ನು ಇಲ್ಲಿ ಹೇಳಬೇಕು. ಅದೊಂದು ಮಧ್ಯಾಹ್ನ ಕೆಲಸಗಾರರು ಕೆಲಸ ಮಾಡುತ್ತಿದ್ದರು. ಇವರು ಗಿಡಗಳ ಸಿಂಗ್ಲಿಂಗ್ ಕೆಲಸದಲ್ಲಿ ತೊಡಗಿದ್ದಾಗ ಪಕ್ಕದ ಮಟ್ಟಿಯಿಂದ ಮೊಲವೊಂದು ಎದ್ದು ಓಡಿತು. ಕಾಡುಪ್ರಾಣಿಗಳನ್ನು ತಿನ್ನುವವರಿಗೆ ಜನ್ಮಜಾತವಾಗಿಯೇ ಬೇಟೆಯ ಗುಣಗಳೂ ಬಂದಿರುತ್ತವೆ. ತಕ್ಷಣ ಕೈಯಲ್ಲಿದ್ದ ಕತ್ತಿಯನ್ನು ಮೊಲದ ಕಡೆ ರಭಸವಾಗಿ ಎಸೆದ. ಮೊಲದ ಪುಣ್ಯ ಗುರಿ ತಪ್ಪಿತು! ಅಲ್ಲೇ ಅವರ ಮೇಲ್ವಿಚಾರಕನೂ ಇದ್ದ, ನಾನೂ ಇದ್ದೆ. ನಮ್ಮಿಬ್ಬರ ಉಪಸ್ಥಿತಿಯಲ್ಲೂ ಆ ಕೆಲಸಗಾರನಿಗೆ ತನ್ನೊಳಗಿನ ಬೇಟೆಯ ಚಪಲವನ್ನು ಅದುಮಿಡಲಾಗಲಿಲ್ಲ. ಅಯಾಚಿತವಾಗಿ ಕತ್ತಿಯನ್ನು ಮೊಲವನ್ನು ಕೊಲ್ಲಲು ಬೀಸಿದ್ದ. ಹೀಗೆ ಮೊದಲ ದಿನದ ಕರಾರು ಮೂಲೆಗೆ ಬಿತ್ತು. ನನ್ನ ಕರಾರಿನ ಪ್ರಕಾರ ನಿಯೋಜಿತ ಕಾಡಿನಲ್ಲಿ ಯಾವುದೇ ಪ್ರಾಣಿ-ಪಕ್ಷಿಗಳನ್ನು, ಸರಿಸೃಪಗಳನ್ನು ಅಷ್ಟೇಕೆ ಕೀಟಗಳನ್ನು ಕೊಲ್ಲುವ ಹಾಗಿಲ್ಲ. ಕೆಲಸದಾಳಿನ ಗುರಿ ತಪ್ಪಿದರೂ, ನನ್ನ ಕಣ್ಣ ಮುಂದೆ ನಡೆದ ಘಟನೆಯಿಂದ ಆಘಾತವಾಯಿತು. ಅವರು ಕೆಲಸ ಮಾಡುವಷ್ಟು ಸಮಯವೂ ಅವರ ಜೊತೆಗೆ ಇದ್ದು, ಪ್ರಾಣಿಗಳನ್ನು ಕೊಲ್ಲದೆ ಇರುವ ಹಾಗೆ ನೋಡಿ ನಿರ್ವಹಣೆ ಮಾಡುವುದು ವೈಯಕ್ತಿಕವಾಗಿ ನನಗೆ ಸಾಧ್ಯವಾಗುತ್ತಿರಲಿಲ್ಲ. ಹಾಗೂ ಇದೇ ಅಂಶ ಅಪಾಯಕಾರಿಯಾಗಿತ್ತು. ಈ ಘಟನೆಯಿಂದ ಕೆಲಸಗಾರರ ಮೇಲೆ ಅನುಮಾನ ಹುಟ್ಟಿಕೊಂಡು, ಸೌಹಾರ್ಧತೆ ಕಡಿಮೆಯಾಗುವ ಸಂಭವವೂ ಇತ್ತು. ಮತ್ತೇನು ಬಾನಗಡಿ ಮಾಡಿದ್ದಾರೋ ಎಂದು ವಿವರವಾಗಿ ಇಡೀ ಕಾಡನ್ನು ನೋಡುವ ತೀರ್ಮಾನಕ್ಕೆ ಬಂದೆ. ಮತ್ತೊಂದು ಅನತಿ ದೂರ ಕ್ರಮಿಸುವಷ್ಟರಲ್ಲೇ ಮತ್ತೊಂದು ಆಘಾತ ಕಾದಿತ್ತು. ಬೆಳೆದ ಶ್ರೀಗಂಧದ ಮರವೊಂದು ಯಾರಿಗೂ ಕಾಣದಂತೆ, ಸುಮಾರು 15-20 ಅಡಿ ಎತ್ತರ ಬೆಳೆದಿತ್ತು. ಮೂಲತ: ಶ್ರೀಗಂಧವು ಪರಾವಲಂಬಿ ಸಸ್ಯ. ಈ ಗಿಡದ ಒಂದು ಭಾಗವನ್ನು ಕತ್ತಿಯಿಂದ ಕೊಚ್ಚಿ ಹಾಕಿದ್ದರು. ಬೆಳೆಯದ ಗಂಧ ಯಾತಕ್ಕೂ ಬರುವುದಿಲ್ಲ. ಗಂಧ ಬೆಳೆದಿದೆಯೋ ಇಲ್ಲವೋ ನೋಡಲು ಮರದ ಅರ್ಧಭಾಗವನ್ನೇ ಕಡಿದು ಹಾಕಿದ್ದರು. ಇದು ನನ್ನ ತಾಳ್ಮೆಯನ್ನು ಕೆಣಕಿತು. ಕೆಲಸ ನಿಲ್ಲಿಸಲು ಹೇಳಿದೆ.
ಪ್ರತಿದಿನ ಕೆಲಸಗಾರರೊಂದಿಗೆ ಬೆರೆತು ಒಂದು ತರಹದ ಸ್ನೇಹಮಯ ವಾತವರಣವಿತ್ತು. ಈ ಎರೆಡು ಘಟನೆಯಿಂದ ಸೌಹಾರ್ಧಯುತವಾದ ವಾತಾವರಣಕ್ಕೆ ಧಕ್ಕೆ ಬಂದಿತು. ಮೇಲ್ವಿಚಾರಕನ್ನು ಕರೆದು ವಿಚಾರಣೆ ಮಾಡಲು ಹೇಳಿದೆ. ಎಲ್ಲರೂ ನಾನಲ್ಲ-ತಾನಲ್ಲ ಎಂದು ವರಾತವನ್ನೇ ತೆಗೆದರು. ಸರಿ ಬಿಡಿ, ಇದಕ್ಕೆ ಸರಿಯಾದವರನ್ನೇ ಕರೆಸಿ ವಿಚಾರಿಸುತ್ತೇನೆ. ಸೀದಾ ಡಿ.ಎಫ್.ಓಗೆ ಫೋನ್ ಮಾಡಿ ಕರೆಸುತ್ತೇನೆ ಎಂದು ಧಮಕಿ ಹಾಕಿದೆ. ಅಷ್ಟರಲ್ಲಿ ಆಶ್ಚರ್ಯವೆಂಬಂತೆ, ಅವರಲ್ಲೇ 2 ಗುಂಪುಗಳಾದವು. ಅವರವರಲ್ಲೇ ಜಗಳ ಶುರುವಾಯಿತು. ಶ್ರೀಗಂಧದ ಮರವನ್ನು ಕಡಿದವನು ಯಾರು ಎಲ್ಲರಿಗೂ ಗೊತ್ತು. ಪ್ರಕರಣ ಮುಚ್ಚಿ ಹೋದರೆ ಹೋಗಲಿ ಎಂದು ಎಲ್ಲರ ಅಭಿಮತವಾಗಿತ್ತು. ಅಷ್ಟು ಸುಲಭವಾಗಿ ಪ್ರಕರಣ ಮುಚ್ಚಿ ಹಾಕಲು ನನಗೆ ಸುತಾರಾಂ ಇಷ್ಟವಿರಲಿಲ್ಲ. ಸೌಹಾರ್ಧಯುತವಾಗಿಯೂ ಇರಬೇಕು, ಮುಂದೆ ಹೀಗೆ ಆಗದಂತೆ ತಡೆಯುವ ಜವಾಬ್ದಾರಿಯೂ ಇದ್ದಿದ್ದರಿಂದ, ಇಷ್ಟು ಬೇಗ ಪ್ರಕರಣ ಮುಗಿಸುವುದು ನನಗೂ ಇಷ್ಟವಿರಲಿಲ್ಲ. 10 ನಿಮಿಷ ಸಮಯ ನೀಡುತ್ತೇನೆ. ನೀವೇ ತೀರ್ಮಾನಿಸಿ, ಕಡಿದವನು ಯಾರು ಎಂದು ತಿಳಿಸಿ, ಇಲ್ಲವಾದಲ್ಲಿ ಮುಂದಿನ ಕ್ರಮಕ್ಕೆ ಸಿದ್ಧವಾಗಿ ಎಂದು ಬಲವಾಗಿ ಎಚ್ಚರಿಸಿದೆ. ಅಂತೂ ಮೊಲಕ್ಕೆ ಕತ್ತಿ ಬೀಸಿದವನೇ ಈ ಪ್ರಕರಣವನ್ನು ತನ್ನ ತಲೆಯ ಮೇಲೆ ತೆಗೆದುಕೊಂಡ. ದಯವಿಟ್ಟು ಇಂತವರಿಗೆ ಇಲ್ಲಿ ಅವಕಾಶವಿಲ್ಲ, ನಾಳೆಯಿಂದ ಕೆಲಸಕ್ಕೆ ಬರುವುದು ಬೇಡ ಎಂದು ಖಡಾಖಂಡಿತವಾಗಿ ಹೇಳಿದೆ. ಆ ಮನುಷ್ಯನಿಗೂ ನನ್ನ ಮನಸ್ಸನ್ನು ಬೇಸರಗೊಳಿಸಿದ್ದಕ್ಕೆ ಪಶ್ಚಾತಾಪವಾಗಿರಬೇಕು. ಆಯಿತು, ನಾನೊಬ್ಬ ನಾಳೆಯಿಂದ ಕೆಲಸಕ್ಕೆ ಬರುವುದಿಲ್ಲವೆಂದ. ಅಲ್ಲಿಗೆ ಪ್ರಕರಣಕ್ಕೆ ತೆರೆ ಎಳೆದೆ. ಅಲ್ಲೇ ಮರದ ಬುಡದಲ್ಲಿದ್ದ, ಹಸಿ ಮಣ್ಣನ್ನು ತೊಗಟೆ ಮುಚ್ಚುವ ಹಾಗೆ ಮರಕ್ಕೆ ಮೆತ್ತಿದೆ. ಹೀಗೆ ಮಾಡುವುದರಿಂದ ಗಂಧದ ಮರ ಸಾಯುವ ಸಂಭವ ಕಡಿಮೆ. ತೊಗಟೆ ಕೂಡಿಕೊಂಡು ಮತ್ತೆ ಬದುಕಿಕೊಳ್ಳುವ ಸಂಭವ ಹೆಚ್ಚು. ಇದೇ ಮನುಷ್ಯ-ಪ್ರಾಣಿ ಹಾಗೂ ಸಸ್ಯಗಳಿಗಿರುವ ವ್ಯತ್ಯಾಸ. ಮನುಷ್ಯನಿಗಾದರೆ ಕಡಿದು ಹೋದ ಭಾಗವನ್ನು ಕೂಡಿಸಲು ಆಧುನಿಕ ವೈದ್ಯವಿಜ್ಞಾನದ ಅರಿವಳಿಕೆ ತಜ್ಞರು, ನರತಜ್ಞರು, ಮೂಳೆ-ಕೀಲುತಜ್ಞರು, ಮಾಂಸಖಂಡ ತಜ್ಞರು ಸೇರಿ ಶ್ರಮಿಸಬೇಕಾಗುತ್ತದೆ. ಆದರೂ ಚಿಕಿತ್ಸೆ ಫಲ ನೀಡುವ ಸಂಭವ ಕಡಿಮೆ ಜೊತೆಗೆ ವಿಪರೀತ ಖರ್ಚು. ಗಿಡ-ಮರಗಳಿಗಾದರೆ ಒಂದು ಹಿಡಿ ಹಸಿ ಮಣ್ಣು ಸಾಕು!!
ಒಂದಿಪ್ಪತ್ತು ದಿನಗಳಲ್ಲಿ ಮಳೆಯಿಲ್ಲದಿದ್ದರೂ, ಮಳೆಗಾಲಕ್ಕೆ ಸಂಬಂಧಿಸಿದ ಕೆಲಸಗಳೆಲ್ಲಾ ಒಂದು ಹಂತಕ್ಕೆ ಮುಗಿಯಿತು. ಮೇಲ್ವಿಚಾರಕನಿಗೆ ಲೆಕ್ಕಾಚಾರ ಮಾಡಿ ಕಳುಹಿಸಿದೆ. ಇನ್ನು ಮುಖ್ಯವಾದ ಕೆಲಸವೆಂದರೆ, ನಿರ್ವಹಣೆ ಭಾಗ. ಪ್ರತಿದಿನ ನಿಗಾ ಇಲ್ಲದಿದ್ದರೆ ಎಂತಹ ಸ್ಥಾವರವೂ ಹಾಳಾಗಿ ಹೋಗುತ್ತದೆ. ಮುಖ್ಯದ್ವಾರದ ಗೇಟನ್ನು ಬಂದೋಬಸ್ತು ಮಾಡಲಾಗಿತ್ತು. ಅದರ ಪಕ್ಕದ ದುರ್ಭಲ ಬಿದಿರು ಬೇಲಿಯನ್ನು ಕಿತ್ತೆಸೆದು, ಅಲ್ಲಿ ಕಲ್ಲುಕಂಬ-ತಂತಿ ಹಾಕಿ ಬೇಲಿ ಹಾಕಿದ್ದೆವು. ಖುದ್ಧು ಮಾಲೀಕರೇ ಬೆಂಗಳೂರಿನಿಂದ ಬಲವಾದ ಬೀಗವನ್ನು ತಂದು ಕೊಟ್ಟಿದ್ದರು. ಎಲ್ಲಾ ಸಸೂತ್ರವಾಗಿ ನಡೆಯುತ್ತಿತ್ತು. ಹಾಗಂತ ಕಾಡಿನ ಬಗ್ಗೆ ನಿಗಾ ಕಡಿಮೆ ಮಾಡುವ ಹಾಗಿರಲಿಲ್ಲ. ಒಂದೆರೆಡು ವರ್ಷ ನಿಗಾ ಕಡಿಮೆ ಇತ್ತು. ಆಗ ಸುತ್ತ-ಮುತ್ತಲಿನ ಜನ ಮಳೆಗಾಲದಲ್ಲಿ ಗೊಬ್ಬರಕ್ಕಾಗಿ ಸೊಪ್ಪನ್ನು ಕಡಿಯುತ್ತಿದ್ದರು. ಒಂದು ದಿನ ಅವರನ್ನೆಲ್ಲಾ ಕರೆದು ಮಾತನಾಡಿದೆ. ನನ್ನ ಉದ್ಧೇಶವನ್ನು ಅವರಿಗೆ ವಿವರವಾಗಿ ತಿಳಿಸಿದೆ. ದಯವಿಟ್ಟು ನನ್ನ ಉದ್ಧೇಶದ ಸಫಲತೆಗೆ ಧಕ್ಕೆ ತರಬೇಡಿ ಎಂದು ಮನವಿ ಮಾಡಿದೆ. ಮನವಿಗೆ ಸಕಾರತ್ಮಕವಾಗಿ ಸ್ಪಂದಿಸಿದರು. ಇವೆಲ್ಲಾ ಕಾಡು ಕಟ್ಟುವಲ್ಲಿನ ಚಿಕ್ಕ-ಚಿಕ್ಕ ಗೆಲುವುಗಳೇ ಆಗಿವೆ.
ಅಗಳದ ಸುತ್ತ ಒಳಭಾಗದ ನಮ್ಮ ಜಾಗದಲ್ಲಿ ರಸ್ತೆಯನ್ನು ನಿರ್ಮಿಸಿಕೊಂಡಿದ್ದೇವೆ. ದಿನಾ ಅಲ್ಲಿಗೆ ಭೇಟಿ ನೀಡುವಾಗ ವಾಹನವನ್ನು ಗೇಟಿನ ಹೊರಭಾಗದಲ್ಲೇ ನಿಲ್ಲಿಸಿ ಕಾಡಿನ ಒಳಗೆ ಹೋಗಿಬರುವ ಪರಿಪಾಠವನ್ನು ಇಟ್ಟುಕೊಂಡಿದ್ದೆ. ತಲೆಯ ಮೇಲೆ ನಿಗಿ-ನಿಗಿ ಕೆಂಡದಂತಹ ಬಿಸಿಲು, ಸುಮಾರು ಒಂದುವರೆಯಿಂದ ಎರಡು ಕಿ.ಮಿ. ನಡೆಯುವಷ್ಟರಲ್ಲಿ ಅರ್ಧ ಲೀಟರ್ ನೀರು ಕುಡಿಯುವಷ್ಟಾಗುತ್ತಿತ್ತು. ಆ ದಿನ ಮತ್ತೆ ನೋಡಿದರೆ ಸುಮಾರು 20-25 ದನಗಳು ಮೇಯುತ್ತದ್ದವು. ನನ್ನ ಪ್ರಕಾರ ದನಗಳು ಒಳ ಬರುವ ಎಲ್ಲಾ ದಾರಿಗಳನ್ನು ಕಟ್ಟಿಯಾಗಿತ್ತು. ಆದರೂ ನನ್ನ ನಿರೀಕ್ಷೆಯನ್ನು ಮೀರಿ ಅದು ಹೇಗೆ ದನಗಳು ಹೇಗೆ ಬಂದವು?
ಕೃಷಿಯನ್ನು ಯಂತ್ರಗಳು ಆಕ್ರಮಿಸಿಕೊಂಡು ಎತ್ತುಗಳ ಸಂಖ್ಯೆ ಕಡಿಮೆಯಾದರು, ಈಗಲೂ ಮಲೆನಾಡು ಗಿಡ್ಡ ಎಂಬ ಜಾನುವಾರು ತಳಿ ಜನಪ್ರಿಯವಾಗಿಯೇ ಇದೆ. ವರ್ಷಕ್ಕೊಮ್ಮೆ ಬರುವ ದೀಪಾವಳಿಯಲ್ಲಿ ಈಗಲೂ ಹೆಚ್ಚು ಜನ ಮಲೆನಾಡು ಗಿಡ್ಡ ದನ-ಕರುಗಳ ಪೂಜೆಯನ್ನು ಮಾಡುತ್ತಾರೆ. ಹಾಲಿಗಾಗಿ ಕೆಲವರು ವಿದೇಶಿತಳಿಗಳನ್ನು ಸಾಕಿಕೊಂಡಿದ್ದಾರೆ, ಅವರು ಅದಕ್ಕೇ ಪೂಜೆ ಮಾಡುತ್ತಾರೆ. ಮಲೆನಾಡು ಗಿಡ್ಡ ತಳಿಗಳನ್ನು ಸಾಮಾನ್ಯವಾಗಿ ಹಾಲಿಗಾಗಿ ಸಾಕುವ ಪರಿಪಾಠವಿಲ್ಲ. ಮಲೆನಾಡು ಗಿಡ್ಡದ ಹಾಲಿನ ಇಳುವರಿ ಕಡಿಮೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಈ ಜಾನುವಾರುಗಳ ದೇಹವೇ ಚಿಕ್ಕದು. ಎರಡನೆಯದಾಗಿ ಹೆಚ್ಚು ಹಾಲು ನೀಡುವುದಿಲ್ಲ ಎಂಬ ಕಾರಣಕ್ಕೆ ಇವುಗಳನ್ನು ಸಾಕುವವರು ಹೆಚ್ಚು ಆಹಾರವನ್ನೂ ನೀಡುವುದಿಲ್ಲ. ಹಾಗಾಗಿಯೇ ಕೊಟ್ಟಿಗೆಯಿಂದ ಕಣ್ಣಿ ಕಳಚಿಕೊಂಡ ಈ ಜಾನುವಾರುಗಳು ಹಸಿರನ್ನು ಹುಡುಕಿಕೊಂಡು ಹೋಗುತ್ತವೆ. ಮಳೆಗಾಲವಾದರೆ ಅವುಗಳಿಗೆ ಹಸಿರು ಮೇವು ಸುಲಭವಾಗಿ ಲಭ್ಯವಾಗುತ್ತದೆ. ಇಲ್ಲದಿದ್ದರೆ, ಇನ್ನೊಬ್ಬರ ತೋಟ-ಗದ್ದೆಗಳಿಗೆ ನುಗ್ಗುತ್ತವೆ. ನೀವು ಎಂತಹದೇ ಬೇಲಿ ಮಾಡಿ ನಿಮ್ಮ ಬೆಳೆಯನ್ನು ಬಚಾವು ಮಾಡಿಕೊಳ್ಳಲು ಬಯಸಿದರೂ, ತುಡುಗು ದನಗಳು ನಿಮ್ಮೆಲ್ಲಾ ಪ್ರಯತ್ನಗಳನ್ನು ಮೀರಿ ಹೊಟ್ಟೆ ತುಂಬಿಸಿಕೊಳ್ಳುವ ಕೌಶಲವನ್ನು ರೂಢಿಸಿಕೊಂಡಿರುತ್ತವೆ. ಸಾಕಿದ ಯಜಮಾನ ಹೊಟ್ಟೆ ತುಂಬಾ ಆಹಾರ ನೀಡಿದರೆ, ಸಾಧಾರಣವಾಗಿ ದನಗಳು ತುಡುಗು ಮಾಡುವುದಿಲ್ಲ ಎಂಬುದು ತತ್ವ. ದೀಪಾವಳಿಯಲ್ಲಿ ಬಾಲಕ್ಕೆ ಕುಂಕುಮ ಹಚ್ಚಿ ಪೂಜೆ ಮಾಡಿದರಷ್ಟೇ ಸಾಲದು. ವರ್ಷಪೂರ್ತ ಅವುಗಳ ಹೊಟ್ಟೆ ಹೊರೆಯುವ ಜವಾಬ್ದಾರಿಯೂ ಮಾಲಿಕನದೇ ಆಗಿರುತ್ತದೆ. ಇಂತದೇ ಹಲವು ಪ್ರಕರಣಗಳಲ್ಲಿ ತುಡುಗು ದನಗಳಿಂದಾಗಿ ಘನಘೋರ ಜಗಳಗಳೇ ನಡೆದಿರುವುದು ನಿಮಗೆ ಈ ಭಾಗದಲ್ಲಿ ಹೇರಳವಾಗಿ ಸಿಗುತ್ತದೆ. ಕೆಲವರಂತೂ ರೋಸಿ ದನಗಳ ಬಾಲ-ಕಾಲು ಕಡಿದು ಹಾಕಿದ ಉದಾಹರಣೆಗಳೂ ಕಾಣ ಸಿಗುತ್ತವೆ.