ವಿಜ್ಞಾನ-ಪರಿಸರ

ಕಾಡು(ವ) ಕಟ್ಟುವ ಕತೆ!! ಭಾಗ-3: ಅಖಿಲೇಶ್ ಚಿಪ್ಪಳಿ


2013-14ರ ಸಾಲಿನಲ್ಲಿ ನೆಟ್ಟ ಗಿಡಗಳನ್ನು ದನಗಳು ಮೇಯ್ದುಕೊಂಡು ಹೋಗಿದ್ದವು ಎಂದು ಈ ಮೊದಲೇ ವಿವರಿಸಿಲಾಗಿದೆ. 2014-15ರ ಸಾಲಿಗೆ ಒಂದಿಷ್ಟು ಗಿಡಗಳನ್ನು ನೆಟ್ಟು ರಕ್ಷಿಸಲೇ ಬೇಕೆಂಬ ಪಣತೊಟ್ಟು ಕೆಲಸ ಶುರು ಮಾಡಿದೆವು. ತಂಪಿನ ಚಾವಣೆಯಿಲ್ಲದ ಖುಷ್ಕಿ ರೂಪದ ಆ ಪ್ರದೇಶದಲ್ಲಿ ಯುಪಟೋರಿಯಂ ಕಳೆಗಳು ಹೇರಳವಾಗಿ ಬೆಳೆದುಕೊಂಡಿದ್ದವು. ಮರಗಳ ಮೇಲ್ಚಾವಣಿ ದಟ್ಟವಾಗಿದ್ದಲ್ಲಿ ಯುಪಟೋರಿಯಂ ಹಾವಳಿ ಕಡಿಮೆ. ಬಿಸಿಲು ಬೀಳುವ ಜಾಗದಲ್ಲಿ ಹೇರಳವಾಗಿ ಬೆಳೆಯುತ್ತವೆ. ಈ ರಾಕ್ಷಸ ಕಳೆಗಳು ಬೆಳೆಯಲು ನೀರು-ಗೊಬ್ಬರಗಳ ಅಗತ್ಯವಿಲ್ಲ. ಅಷ್ಟೇನು ಗಟ್ಟಿಯಲ್ಲದ ಈ ಕಳೆಗಿಡವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಲಾಭವೂ ಉಂಟು. ಮಳೆಗಾಲ ಮುಗಿಯುವುದರೊಳಗಾಗಿ ಇವುಗಳನ್ನು ಕತ್ತರಿಸಿ, ಗೊಬ್ಬರಕ್ಕೆ ಉಪಯೋಗಿಸಬಹುದು. ಬೇರು ಸಮೇತ ಕಿತ್ತು ಹಾಕಿದರೆ ಮುಂದಿನ ವರ್ಷದಲ್ಲಿ ಇದರ ಪ್ರಮಾಣ ಕಡಿಮೆ ಆಗುವುದು. ಜಾಗತೀಕರಣವೆಂಬ ಬೃಹತ್ ಸಿನಿಮಾದ ಇಂಟರ್‍ವೆಲ್‍ಗೂ ಮೊದಲೇ ಈ ದೇಶದಲ್ಲಿ ಕೂಲಿಗಳ ಸಮಸ್ಯೆ ಹೆಚ್ಚಾಗಿದೆ ಎಂಬುದು ಹಲವರ ಅಂಬೋಣ. ಹೊಸ-ಹೊಸ ಕ್ಷೇತ್ರಗಳಿಗೆ ಯುವಕರು ತೆರೆದುಕೊಳ್ಳುತ್ತಾ ಸಾಗಿದಂತೆ, ಹಳ್ಳಿಗಳಲ್ಲಿ ಕೂಲಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇಲ್ಲಿ ಇನ್ನೂ ಒಂದು ಗಣಿತವಿದೆ. ಕೃಷಿ-ತೋಟಗಾರಿಕೆ ಕ್ಷೇತ್ರಗಳನ್ನು ಬಹಳ ವ್ಯವಸ್ಥಿತವಾಗಿ ಸೊರಗಿಸಿ, ಅದರ ಘನತೆಯನ್ನು ಕುಗ್ಗಿಸುವುದು. 

ಕೃಷಿಯೆಂದರೆ ಯಾರಿಗೂ ಬೇಡವಾದ ಒಂದು ಉದ್ಯೋಗ ಎಂಬುದನ್ನು ಸಾರ್ವತ್ರಿಕಗೊಳಿಸುವುದು. ಒಳಸುರಿಗಳ ದರಗಳನ್ನು ವಿಪರೀತ ಹೆಚ್ಚಿಸುವುದು. ಒಟ್ಟಾರೆಯಾಗಿ ಕೃಷಿಯೆಂದರೆ ಜೀವನ ಭದ್ರತೆಯಿಲ್ಲದ ಒಂದು ಉದ್ಯೋಗ ಎಂದು ಪ್ರತಿಯೊಬ್ಬರು ಭಾವಿಸುವಂತೆ ಮಾಡುವುದು ಮೊದಲ ಹಂತ. ಇದು ಮೇಲ್ನೋಟಕ್ಕೆ ಸುಲಭದಲ್ಲಿ ಅರ್ಥವಾಗುವ ಗಣಿತವಲ್ಲ. ಗೊತ್ತಿಲ್ಲದೆಯೋ ಅಥವಾ ಪ್ರಜ್ಞಾಪೂರ್ವಕವಾಗಿಯೋ ಸರ್ಕಾರಗಳು ಈ ಕೆಲಸವನ್ನು ಮಾಡುತ್ತವೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಥೇಟ್ ವಿದೇಶಿ ಏಜಂಟರಂತೆ ವರ್ತಿಸುತ್ತಾರೆ. ರೈತ-ರೈತರ ಮಧ್ಯೆ ಅನಾರೋಗ್ಯಕರ ಪೈಪೋಟಿಯನ್ನು ಎಬ್ಬಿಸುತ್ತಾರೆ. ಹಳ್ಳಿಗಳೆಲ್ಲಾ ಕೃಷಿಯಿಲ್ಲದೇ ಬಿಕೋ ಎನ್ನುವಂತೆ ರೂಪಿತವಾದಾಗ ಅಂತಾರಾಷ್ಟ್ರೀಯ ಕಂಪನಿಗಳು, ಕಾರ್ಪೊರೇಟ್ ಸಂಸ್ಥೆಗಳು ಇಲ್ಲಿಯ ಕೃಷಿಭೂಮಿಯನ್ನು ಸದುಪಯೋಗ ಮಾಡಲು ಹಾತೊರೆದು ಬರುತ್ತಾರೆ. ಹೇಗೂ ರೈತರೇ ಕೃಷಿಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಆದ್ದರಿಂದ ಈ ಅಂತಾರಾಷ್ಟ್ರೀಯ ಕಂಪನಿಗಳಿಗೆ ಕೃಷಿಭೂಮಿಯನ್ನು ನೀಡಿ ಕೈತೊಳೆದು ಕೊಳ್ಳುವುದು ಲೇಸು ಎಂಬುದು ಸರ್ಕಾರದ ಉದ್ಧೇಶವಾದರೆ ತಪ್ಪೆಣಿಸುವಂತೆ ಇಲ್ಲ. ಈ ತರಹದ ಪ್ರಕ್ರಿಯೆ ಇದೀಗ ವೇಗವನ್ನು ಪಡೆದುಕೊಂಡಿದೆ ಎನ್ನುವುದೇ ಆತಂಕದ ವಿಷಯ. ಮಲೆನಾಡಿನ ಕೃಷಿ ಪದ್ಧತಿಗೂ ಹಾಗೂ ಬಯಲುಸೀಮೆಯ ಕೃಷಿ ಪದ್ಧತಿಗೂ ಸಾಕಷ್ಟು ವ್ಯತ್ಯಾಸವಿದೆ. ಮಲೆನಾಡಿನ ಕೃಷಿಯೆಂದರೆ ಕಾಡನ್ನು ಅವಲಂಬಿಸಿದ ಪದ್ಧತಿ. ಇಲ್ಲಿ ಪ್ರತಿಯೊಂದಕ್ಕೂ ಕೃಷಿ ಕಾಡನ್ನು ಅವಲಂಬಿಸಿಕೊಂಡಿದೆ. ಕಾಡು ಸಮೃದ್ಧವಾಗಿದ್ದರೆ ಕೃಷಿಯೂ ಸಮೃದ್ಧವಾಗಿರುತ್ತದೆ ಎಂಬುದು ಲಾಗಾಯ್ತಿನಿಂದ ನಡೆದುಕೊಂಡು ಬಂದ ರೈತರ ಪಾರಂಪಾರಿಕ ಲೆಕ್ಕಾಚಾರ. ಬತ್ತದ ಗದ್ದೆಯಲ್ಲಿ ಕಳೆ ಹೆಚ್ಚಾದರೆ, ಇಂತಹ ಮರದ ಕೊರಡಿನಿಂದ ಬತ್ತದ ಗದ್ದೆಯನ್ನು ಸೊರಗಿಸಬೇಕು ಎಂಬುದು ಪಾರಂಪಾರಿಕ ವಿಜ್ಞಾನ. ಬೆಳೆಯುತ್ತಿರುವ ಬತ್ತಕ್ಕೆ ಚುಕ್ಕಿರೋಗ ಬಂದರೆ ಇಂತಹ ಸೊಪ್ಪನ್ನು ಮುಷ್ಟಿಯಷ್ಟು ಅರೆದು ನೀರಿನಲ್ಲಿ ಬೆರೆಸಬೇಕು ಎಂಬುದು ಪಾರಂಪಾರಿಕವಾಗಿ ರೈತರು ಕಂಡುಕೊಂಡ ಸುಲಭದ ಕೃಷಿ ವಿಜ್ಞಾನ. ಬಿಳಿಚುಕ್ಕಿರೋಗಕ್ಕೆ ಮದ್ದಾಗಿ ಒಂದು ಹಿಡಿಯಷ್ಟು ಮುಕ್ಕಡ್ಕ ಸೊಪ್ಪನ್ನು ಕೊಂಚ ಕೈಯಲ್ಲೆ ನುರಿದು ಅದನ್ನು ಗದ್ದೆಗೆ ನೀರು ಹೋಗುವ ಬದುವಿನಲ್ಲಿ ಇಟ್ಟರಾಯಿತು. ಮೂರೇ ದಿನದಲ್ಲಿ ಬಿಳಿಚುಕ್ಕಿ ರೋಗ ಮಾಯವಾಗುತ್ತದೆ. ಹೊಂಗೆ ಮರದ ಕೊರಡಿನಿಂದ ಬತ್ತದ ಗದ್ದೆಯನ್ನು ಸೊರಗಿಸಿದರೆ, ಮೂರ್ನಾಲ್ಕು ಜಾತಿಯ ಕಳೆಗಳು ಹೇಳ ಹೆಸರಿಲ್ಲದಂತೆ ಮಾಯವಾಗುತ್ತವೆ. 

ಇದನ್ನೆಲ್ಲಾ ಯಾವುದೇ ಆಧುನಿಕ ಲ್ಯಾಬಿನಲ್ಲಿ ಕಂಡು ಹಿಡಿದದ್ದಲ್ಲ. ರೈತಾಪಿ ಜನಗಳ ಪಾರಂಪಾರಿಕ ಜ್ಞಾನವಿದು. ಬರೀ ಗಾಳಿ ಬೀಸುವ ದಿಕ್ಕು, ಆಕಾಶ ನೋಡಿಯೇ ಈ ಬಾರಿಯ ಹವಾಮಾನ ಈ ತರಹ ಇರುತ್ತದೆ ಎಂಬು ಕರಾರುವಕ್ಕಾಗಿ ಹೇಳಬಲ್ಲರು. ಬಸರೀಮರದಲ್ಲಿ ಬಿಡುವ ಹೂವಿನ ಪ್ರಮಾಣದಿಂದಲೇ ಆ ಋತುವಿನಲ್ಲಿ ಮಳೆ ಎಷ್ಟಾಗಬಹುದು ಎಂದು ಹೇಳಬಲ್ಲರು. ಇದೆಲ್ಲಾ ಮೂರು ಹೊತ್ತು ಪ್ರಕೃತಿಯ ಮಧ್ಯದಲ್ಲಿದ್ದು ಅರಿತ ಅನುಭವದ ಪಾಠಗಳು. ಮಣ್ಣಿನಲ್ಲಿರುವ ದೋಷಪೂರಿತ ಸೂಕ್ಷ್ಮಾಣುಗಳನ್ನು ಮಟ್ಟ ಹಾಕುವುದು ಹೇಗೆ ಎಂದು ಇವರಿಗೆ ಗೊತ್ತು. ಇವರ ಗದ್ದೆ ದಾಟಿ ಕೆಳಗಿನ ಗದ್ದೆಗೆ ಹೋಗುವ ನೀರು ಪರಿಶುದ್ಧವಾಗಿಯೇ ಇರಬೇಕು ಎಂಬ ಜ್ಞಾನವುಳ್ಳವರು. 

ಆಧುನಿಕ ಕೃಷಿ ಬಂದು ಇವೆಲ್ಲಾ ಜ್ಞಾನಗಳನ್ನು ಒಂದೇಟಿಗೆ ನುಂಗಿ ಹಾಕಿತು, ಬಿಳಿಚುಕ್ಕಿ ರೋಗಕ್ಕೆ ಇಂತಹ ರಾಸಾಯನಿಕ ಸಿಂಪರಣೆ ಮಾಡಬೇಕು ಇಲ್ಲದಿದ್ದರೆ ಬೆಳೆ ಕಳೆದುಕೊಳ್ಳುತ್ತೀಯಾ ಎಂದು ಬೆದರಿಸಿದ ಕೃಷಿ ಅಧಿಕಾರಿಯ ಮಾತೇ ಹೆದರಿದ ರೈತನಿಗೆ ವೇದವಾಕ್ಯವಾಯಿತು. ಕಾಡಿನಲ್ಲಿರುವ ಮುಕ್ಕಡ್ಕ ಸೊಪ್ಪು ವೈಕುಂಠ ಸೇರಿತು. ಬಾಯಿಂದ ಬಾಯಿಗೆ ಜನಪದ ರೀತಿಯಲ್ಲಿ ದಾಟಿದ ಪಾರಂಪಾರಿಕವಾದ ಅದೆಷ್ಟೋ ಜ್ಞಾನವನ್ನು ಇವತ್ತಿನ ಆಧುನಿಕ ಸಮಾಜ ಕಳೆದುಕೊಂಡಿದೆ. ಉಗುರಿನಲ್ಲಿ ಹೋಗುವುದಕ್ಕೆ ಬುಲ್ಡೋಜರನ್ನು ನೆಚ್ಚಿಕೊಂಡಿದ್ದೇವೆ. ಒಳಸುರಿಗಳ ಹೊಡೆತಕ್ಕೆ ರೈತ ನಲುಗಿಹೋಗಿದ್ದಾನೆ. ಅನಿವಾರ್ಯವಾಗಿ ಸುಲಭಕ್ಕೆ ಹರಿಯದ ಹಗ್ಗವನ್ನು ಹುಡುಕುತ್ತಿದ್ದಾನೆ.

2015 ಮುಂದಡಿಯಿಟ್ಟು ಬಂದೇ ಬಂತು. ಜನವರಿ-ಫೆಬ್ರುವರಿಯೆಂದರೆ, ಎಲ್ಲಾ ರೈತರಿಗೂ ಸುಗ್ಗಿಯ ಕಾಲ. ಕೂಲಿಯಾಳುಗಳ ಕೊರತೆಯ ನಡುವೆಯೇ ಸುಗ್ಗಿ ಶುರುವಾಯಿತು. ಬತ್ತ ಕೊಯ್ದ ರೈತ, ಒಂದೆರೆಡು ಬಿಸಿಲು ಗದ್ದೆಯಲ್ಲೇ ಒಣಗಲಿ ಎಂದು ಬಿಟ್ಟಿದ್ದ, ಅಟ್ಟ ಹಾಕಿದ ಅಡಕೆಯವರು ಅಂಗಳದ ತುಂಬಾ ಅಡಕೆಯನ್ನು ಒಣಗಿಸಿದ್ದರು. ದೂರದಲ್ಲಿ ಕ್ಷೀಣವಾದ ಗುಡು-ಗುಡು ಸದ್ದು ಕೇಳಿ ಆತಂಕ ಪಟ್ಟರು. ಹಿಂದೆಯೇ ಶುಭ್ರವಾಗಿದ್ದ ಮೋಡ ಕಾಳಮೇಘ ಸ್ವರೂಪ ಪಡೆಯಿತು. ಹಿಂದೆಯೇ ಧೋ ಎಂಬ ಮಳೆ. ಮುನ್ಸೂಚನೆಯಿಲ್ಲದೆ ಸುರಿದ ಮಳೆಗೆ ಹೆಚ್ಚೂ-ಕಡಿಮೆ ಅಷ್ಟೂ ಫಸಲು ನಾಶವಾಯಿತು. ಇಡೀ ವರ್ಷದ ಶ್ರಮ ಒಂದೇಟಿಗೆ ಮಣ್ಣಾಯಿತು. ಇಲ್ಲಿಯ ಜನರ ಮುಗ್ಧತೆ ಹಾಗೂ ತಾಳ್ಮೆಗೆ ಆ ದೇವನೂ ಮೆಚ್ಚಬೇಕು. ಅಕಾಲಿಕ ಮಳೆಗೆ, ಅತಿವೃಷ್ಠಿಗೆ, ಅನಾವೃಷ್ಠಿಗೆ ಆಧುನಿಕ ಮನುಷ್ಯನ ಅಭಿವೃದ್ಧಿ ಧೋರಣೆಗಳೇ ಬಹುತೇಕ ಕಾರಣವೆಂಬುದನ್ನು ಅರಿಯದ ಬಡ ರೈತ, ಪೃಕೃತಿ ಮುನಿದರೆ ಏನು ಮಾಡುವುದು ಎಂದು ಆಕಾಶದ ಕಡೆ ನೋಡಿ ನಿಟ್ಟುಸಿರು ಬಿಡುತ್ತಾನೆ. ಗದ್ದೆಗೆ ಹಂದಿ ಕಾಟ ಜಾಸ್ತಿಯಾದರೆ, ಕಲ್ಕುಟಗನಿಗೋ, ಮಾರೆಮ್ಮನಿಗೋ ಜೋಡಿ ಕಾಯಿ ಒಡೆದು ಹರಕೆ ತೀರಿಸುತ್ತಾನೆ. ಬೇಕಾಬಿಟ್ಟಿ ಕಾಡು ಹಾಳು ಮಾಡಿದ್ದರಿಂದ, ಕಾಡಿನಲ್ಲಿ ಆಹಾರ ಸಿಗದ ಹಂದಿಗಳು ಗದ್ದೆಯನ್ನು ಹಾಳು ಮಾಡುತ್ತವೆ ಎಂಬ ಅರಿವಿಲ್ಲದ ರೈತನ ಸ್ಥಿತಿಯಿದು. 

ಜನಸಂಖ್ಯೆ ಈಗಿನ ವೇಗದಲ್ಲೇ ಹೆಚ್ಚಾಗುತ್ತಿದ್ದರೆ, ಮಾನವ-ವನ್ಯಜೀವಿಗಳ ಸಂಘರ್ಷ ತಾರಕಕ್ಕೆ ಮುಟ್ಟುತ್ತದೆ. ಬದುಕುಳಿಯುವ ಹೋರಾಟದಲ್ಲಿ ಅಂತಿಮ ಗೆಲುವು ಮಾನವನದೇ ಆಗುವುದರಿಂದ, ತ್ವರಿತದಲ್ಲಿ ವನ್ಯಜೀವಿಗಳ ಸಂತತಿ ವಿನಾಶಕ್ಕೆ ಈಡಾಗುತ್ತದೆ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬುದೊಂದು ಸಾರ್ವತ್ರಿಕ ನಿಲುವು ಆಗಿದೆ. ಆದರೆ ಈ ನಿಲುವು ಅಭಿವೃದ್ಧಿಗೆ ಪೂರಕವಾಗಿಯೇ ಹೆಚ್ಚು-ಹೆಚ್ಚು ಬಳಕೆಯಾಗುತ್ತಿದೆ. ಪ್ರಾಣಿಗಳ ಜೊತೆಯೂ ಹೊಂದಾಣಿಕೆಯ ಬದುಕು ಸಾಧ್ಯ ಎಂಬುದನ್ನು ಸಾಬೀತು ಮಾಡುವ ಹಲವು ಪ್ರಯತ್ನಗಳು ಜಗತ್ತಿನ ವಿವಿಧ ದೇಶಗಳಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದೆ. ವರ್ಷಪೂರ್ತಿ ಕಾಡಿನಲ್ಲಿ ಆಹಾರ ಲಭ್ಯವಿದ್ದರೆ, ಕಾಡು ಪ್ರಾಣಿಗಳು ಮನುಷ್ಯ ಪ್ರದೇಶಕ್ಕೆ ನುಗ್ಗಿ ಲಗ್ಗೆ ಹಾಕುವುದು ಕಡಿಮೆಯಾಗುತ್ತದೆ. ಇದಕ್ಕಾಗಿ ಕಾಡು ಕಟ್ಟಬೇಕು. ಹಣ್ಣು-ಹಂಪಲು, ಹೂ ಬಿಡುವ ಗಿಡಮರಗಳನ್ನು ಹೆಚ್ಚು ನೆಡುವುದರ ಮೂಲಕ ಕಾಲದ ಬದಲಾವಣೆಗೆ ನಾವೂ ತೆರೆದುಕೊಳ್ಳಬೇಕಾಗುತ್ತದೆ.

ನಾವು ಬೆಳೆಸುತ್ತಿರುವ ಕಾಡು ನಿಧಾನಕ್ಕೆ ಈ ಕ್ರಮಕ್ಕೆ ಸಜ್ಜಾಗುತ್ತಿದೆ. ಅಕೇಶಿಯಾ ಮತ್ತು ನೀಲಗಿರಿ ಕಳೆಗಳು ಹತ್ತಾರು ವರ್ಷದಿಂದ ಈ ಜಾಗದ ಸಾರವನ್ನು ಹೀರಿ ತೆಗೆದು ಹಾಕಿವೆ. ಮಣ್ಣಿನ ಆರೋಗ್ಯ ನಿಶ್ಚಿತವಾಗಿ ಹಾಳಾಗಿದೆ. ನೀವು ಏನೇ ಬೆಳೆಯುವದಾದರೂ ಮೊದಲು ಮಣ್ಣಿನ ಆರೋಗ್ಯ ಸರಿಯಿರಬೇಕು. ಈ ಕೆಲಸವೂ ಒಂದೆರೆಡು ದಿನದಲ್ಲಿ ಆಗುವಂತದಲ್ಲ. ಅಲ್ಲಿ ಈಗಾಗಲೇ ಬೆಳೆಯುತ್ತಿರುವ ನೈಸರ್ಗಿಕ ಗಿಡಗಳ ಎಲೆಗಳುದುರಿ, ಮಣ್ಣಿನ ಸೂಕ್ಷಾಣುಜೀವಿಗಳಿಗೆ ಆಹಾರವಾಗಬೇಕು. ಪೆಡುಸಾದ ಮಣ್ಣಿಗೆ ಮತ್ತೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಮರಳಿ ಬರಬೇಕು. ನೈಸರ್ಗಿಕ ಕಾಡನ್ನು ಬೆಳೆಸುವುದೆಂದರೆ, ಮ್ಯಾಗಿಯ ಟೂ ಮಿನಿಟ್ ಮ್ಯಾಜಿಕ್‍ನಂತೆ ಅಲ್ಲ. ಹಕ್ಕಿ-ಪಕ್ಷಿಗಳು ಬಂದು ಗೂಡು ಕಟ್ಟಬೇಕು. ಅವು ಎಲ್ಲಿಂದಲೋ ಎತ್ತಿಕೊಂಡು ಬಂದ ಬೀಜಗಳು ಹಿಕ್ಕೆಯ ಸಾರವನ್ನು ಹೀರಿಕೊಂಡೇ ಬೆಳೆಯಬೇಕು.

ಫೆಬ್ರುವರಿಯಲ್ಲಿ ಒಂದಿಷ್ಟು ಭೂಮಿಯನ್ನು ತಂಪು ಮಾಡಿದ ಮಳೆ ಮತ್ತೆ ಜೂನ್ ತಿಂಗಳಲ್ಲಿ ಬರಬೇಕಿತ್ತು. ಸಾಧಾರಣ ವಾಡಿಕೆಯಂತೆ ಜೂನ್ 10ಕ್ಕೆ ಮಳೆಗಾಲ ಶುರುವಾಗಬೇಕು. ನೋಡಿದರೆ ಜೂನ್ 15 ಕಳೆದರೂ ನೆತ್ತಿಯ ಮೇಲೆ ಕೆಂಗಣ್ಣು ಬಿಟ್ಟು ಕುಳಿತೇ ಇದ್ದಾನೆ. 20 ಎಕರೆಗೂ ಸುತ್ತಲೂ ಅಗಳ, ಅಗಳದ ಏರಿಯ ಮೇಲೆ ಅಗಳದಿಂದ ಎತ್ತಿ ಹಾಕಿದ ಮಣ್ಣು. ಇದರ ಪಕ್ಕದಲ್ಲೇ ಓಡಿಯಾಡಲು ನಾವೇ ನಿರ್ಮಿಸಿಕೊಂಡ ರಸ್ತೆ. ರಸ್ತೆಯ ಚರಂಡಿಯ ಪಕ್ಕದಲ್ಲಿ ಸರಿಯಾಗಿ 5 ಅಡಿ ಬಿಟ್ಟು 20 ಅಡಿಗೊಂದರಂತೆ ಗುಂಡಿ ತೋಡಿಸಿ ಇಡಲಾಗಿತ್ತು. ವಿವಿಧ ಜಾತಿಯ ಸುಮಾರು 1000 ಗಿಡಗಳನ್ನು ಅರಣ್ಯ ಇಲಾಖೆಯಿಂದ ಖರೀದಿಸಿ ಇಟ್ಟಾಗಿತ್ತು. ಜೂನ್ ಹದಿನೇಳು ಶುಭಸೂಚನೆಯಂತೆ ಆಕಾಶದಲ್ಲಿ ಕರಿಮೋಡಗಳು ದಟ್ಟೈಸತೊಡಗಿದವು. ಮಾರನೇ ದಿನ ಮಳೆಯೂ ಬಂತು. ಗಿಡ ನೆಡಲಿಕ್ಕೆ ತೊಂದರೆಯಿಲ್ಲ. ಗಂಡಾಳು-ಹೆಣ್ಣಾಳು ಸೇರಿ ಸುಮಾರು 20 ಜನ ಕೆಲಸ ಶುರು ಮಾಡಿದರು. ಅರಣ್ಯ ಇಲಾಖೆಯ ನರ್ಸರಿಯಿಂದ ಆಯ್ದಿಟ್ಟ ಗಿಡಗಳು ಬಂದವು. ಸಾಲುಧೂಪ, ಮಹಾಗನಿ, ಹಲಸು, ಮಾವು, ದೇವದಾರು ಇತ್ಯಾದಿಗಳ ಬೇರುಗಳು ಪ್ಲಾಸ್ಟಿಕ್ ಕೊಟ್ಟೆಯಿಂದ ನೆಲಕ್ಕೆ ಇಳಿದವು. ಅಗಳದ ಏರಿಯ ಮೇಲೆ ಬಿದಿರು ಹಾಕುವುದೆಂದು ಮೊದಲೇ ತೀರ್ಮಾನಿಸಿದ್ದೆ, ಮಧ್ಯದಲ್ಲಿ ಕ್ಯಾಲಿಯಾಂಡ್ರ ನೆಟ್ಟರೆ ಬೇಗ ಬೆಳೆಯುವ ಇವು ಒಂದಿಷ್ಟು ಹಸಿರು ಹೊದಿಕೆ ಮಾಡುತ್ತವೆ ಎಂಬ ಒಳತೋಟಿಯಿಂದ ಈ ತೀರ್ಮಾನ ತೆಗೆದುಕೊಂಡಿದ್ದೆ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕಾಡು(ವ) ಕಟ್ಟುವ ಕತೆ!! ಭಾಗ-3: ಅಖಿಲೇಶ್ ಚಿಪ್ಪಳಿ

  1. ಕಾಡು ಕಟ್ಟುವ ಕಥೆ ಮೂರು ಸಂಚಿಕೆಗಳಲ್ಲೂ ಕಾಡುವ ಕಥೆಯಾಗಿ ಬರುತ್ತಿದೆ. ಒಳ್ಳೆಯ ಕೆಲಸಗಳಿಗೆ ಒದಗುವ ಅಡೆತಡೆಗಳು ನಿಮ್ಮ ಧೃತಿಗೆಡಿಸದಿರುವುದು ಒಂದು ಆಶ್ಚರ್ಯದ ಸಂಗತಿ.

Leave a Reply

Your email address will not be published. Required fields are marked *