ಪ್ರಶಸ್ತಿ ಅಂಕಣ

ಕಾಡುಪೇಟೆಯ ಕತೆ: ಪ್ರಶಸ್ತಿ


ಬರೆಯಹತ್ತಿದ್ರೆ ಒಂದು ಕಾದಂಬರಿಯಾಗೋವಷ್ಟು ವಿಷಯ ದಕ್ತಿತ್ತೇನೋ ಅವರ ಪ್ರೇಮಕತೆಯಲ್ಲಿ. ಅದು ಸ್ನೇಹವಾ ಪ್ರೇಮವಾ ಅನ್ನೋ ಸಂದಿಗ್ದತೆಯಲ್ಲಿ ಅವನಿದ್ದರೆ ಅದಕ್ಕೊಂದು ಹೆಸರಿಡಲೇಬೇಕಾದ ಅನಿವಾರ್ಯತೆಯಲ್ಲೋ, ಅರ್ಜೆಂಟಿನಲ್ಲೋ ಅವಳಿರಲಿಲ್ಲ. ಸ್ನೇಹವೆಂದರೆ ಖುಷಿಪಟ್ಟು, ಪ್ರೇಮವೆಂದರೆ ಬೇಸರಪಡುವಳೂ ಅಲ್ಲ  ಅವಳು. ಸಮಾಜದ ಕಟ್ಟುಪಾಡುಗಳಿಗೆ ಗೌರವವಿದ್ದರೂ ಯಾರನ್ನೋ ತೃಪ್ತಿಪಡಿಸಲು ಮನ ಮನಗಳ ಭಾವಕ್ಕೊಂದು ಚೌಕಟ್ಟು ಹಾಕೋಕೆ ವೈಯುಕ್ತಿಕ ವಿರೋಧವಿದ್ದರೂ ತನ್ನ ಅವನ ನಡುವಿನ ಮಾತುಕತೆಗಳಿಗೆ ಯಾರೋ ಒಂದು ಸಂಬಂಧದ ಹೆಸರಿಟ್ಟರೆ ಯಾವ ಅಭ್ಯಂತರವೂ ಇರಲಿಲ್ಲ ಅವಳಿಗೆ. ಯಾರನ್ನಾದರೂ ತೀರ ಹಚ್ಚಿಕೊಂಡು ಅವರು ದೂರವಾಗೋ ಕಾಲನ ಆಘಾತಗಳು ಹಲ ಬಾರಿ ಅಪ್ಪಳಿಸಿದ್ದ ಆಕೆಗೆ ನಾಳೆಯೇ ಇಲ್ಲವೆಂಬಂತೆ ಇಂದಿನ ಖುಷಿಯಲ್ಲಿ ಮೀಯುವ ಅಭ್ಯಾಸವಾಗಿಹೋಗಿತ್ತು. ಊರಿನ ಮೂರು ವರ್ಷದ ಬರ ನೋಡಿ ಬೇಸತ್ತು, ಕಾಲೇಜಿನ ತರುವಾತ ಊರಲ್ಲೇ ಇರೋ ಮನಸ್ಸಿದ್ದರೂ ಹೊಟ್ಟೆಪಾಡಿಗಾಗಿ ಪೇಟೆ ಹೊಕ್ಕಿದ್ದ ಅವನಿಗೂ ಊರು,ಪೇಟೆಗಳೆಂಬ ಬೇಧವಿಲ್ಲದೆ ಖುಷಿಯೆಂಬುದು ಎಲ್ಲೆಡೆಯಿದೆ ಎಂದು ಕಾಲಜ್ನಾನಿಯಂತೆ ವ್ಯವಹರಿಸುತ್ತಿದ್ದ ಆಕೆಗೂ ಸ್ನೇಹ ಹುಟ್ಟಿದ್ದು ಅಚ್ಚರಿಯೇ.

ಅವನು ಪೇಟೆಗೆ ಬಂದ ಹೊಸದಿನಗಳು. ಊರಲ್ಲಿ ಉಪವಾಸವಿರೋ ಪರಿಸ್ಥಿತಿಯಿದ್ದರೂ ಸ್ವಾಭಿಮಾನ ಅನ್ನೋದು ಕೊಂಚವೂ ಕಮ್ಮಿಯಾಗಿರಲಿಲ್ಲ. ನೆಂಟರ ಮನೆಯಲ್ಲಿರಲು ಇಷ್ಟಪಡದೇ ಕಾಲೇಜಿನ ಸ್ನೇಹಿತರ ರೂಮಲ್ಲೇ ಉಳಿದು, ಅಲೆದಲೆದು ಒಂದು ಕಂಪೆನಿಯಲ್ಲಿ ಕೆಲಸ ಗಿಟ್ಟಿಸೋಕೆ ಪ್ರಯತ್ನಿಸಿದ್ದ . ಮೊದಲ ತಿಂಗಳ ಸಂಬಳ ಬಂದ ಕೂಡಲೇ ಇಲ್ಲಿಯವರೆಗಿನ ಎಲ್ಲಾ ಬಾಡಿಗೆ ಕೊಟ್ಟುಬಿಡುತ್ತೇನೆ ಎಂಬ ಪ್ರಮಾಣ ಮಾಡಿದ್ದರೂ ಈತನ ಸ್ವಾಭಿಮಾನದ ಅರಿವಿದ್ದ ಅವರ್ಯಾರಿಗೂ ಈತನ ಮೇಲೆ ಅನುಮಾನವಿರಲಿಲ್ಲ. ತಮ್ಮ ಜೀವದ ಗೆಳೆಯನ ಮನೆಯ ಸ್ಥಿತಿಗತಿಗಳ ಅರಿವಿದ್ದ ಅವರೇ ಅವನನ್ನು ಪೇಟೆಗೆ ಬರುವಂತೆಯೂ, ಕೆಲಸ ಸಿಗೋವರೆಗೆ ತಮ್ಮ ರೂಮಲ್ಲಿ ಇರುವಂತೆಯೂ ಒತ್ತಾಯಿಸಿ ಕರೆತಂದಿದ್ದರು. ಅವನ ಕುಲದೈವ ಕಾಡುಪೇಟೆ ಮಹಾಂತೇಶ್ವರನ ದಯೆಯೋ , ತಾಯಿಯ ಆಶೀರ್ವಾದವೋ ಅವನ ಪ್ರತಿಭೆ ಕಂಪೆನಿಯವರಿಗೆ ಇಷ್ಟವಾದ ಫಲವೋ ಗೊತ್ತಿಲ್ಲ. ಪೇಟೆಗೆ ಬಂದು ಜಾಸ್ತಿ ಸೈಕಲ್ ಹೊಡೆಯೋ ಮೊದಲೇ ಒಂದು ಕೆಲಸ ಸಿಕ್ಕಿತ್ತು. ಆ ಕಂಪೆನಿಯದ್ದೇ ಬಸ್ಸಿದೆ, ಮಧ್ಯಾಹ್ನ ಒಳ್ಳೆಯ ಊಟ ಕಡಿಮೆ ದರದಲ್ಲಿ ಸಿಗುತ್ತೆ ಅಂತೆಲ್ಲಾ ಆ ಕಂಪೆನಿಯ ಬಗ್ಗೆ ಗುಣಗಾನ ಕೇಳಿದ್ದ ಅವನಿಗೆ ಅಲ್ಲಿ ಕೆಲಸ ಸಿಕ್ಕಿದ್ದು ಜಾಕ್ ಪಾಟ್ ಹೊಡೆದಷ್ಟೇ ಖುಷಿಯಾಗಿತ್ತು. ಒಂದೇ ವಾರದಲ್ಲಿ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಕೆಲಸಕ್ಕಾಗಿ ಅಲೆಯೋ ಪರಿಯನ್ನು, ಇಲ್ಲೇ ತಿಂಗಳುಗಟ್ಟಲೇ ಕೆಲಸಕ್ಕಾಗಿ ಅಲೆಯುತ್ತಿರುವ ಜನರ ಬವಣೆಯನ್ನು ಕಂಡು ಇವರ ಮಧ್ಯೆ ತನಗೂ ಒಂದು ಕೆಲಸ ಸಿಕ್ಕೀತೇ ಅಂತ ಆಸೆಗಣ್ಣುಗಳಲ್ಲಿ ನಿರೀಕ್ಷಿಸುತ್ತಿದ್ದ ಅವನಿಗೆ ಎಂತಾ ಸಣ್ಣ ಕಂಪೆನಿಯಲ್ಲಿ ಕೆಲಸ ಸಿಕ್ಕಿದ್ದರೂ ಕಾಲೂರಲು ಒಂದು ನೆಲೆ ಸಿಕ್ಕಿದ್ದಕ್ಕಾಗಿ ಖುಷಿಯನ್ನೇ ಪಡುತ್ತಿದ್ದ. ಅಂತದ್ದರಲ್ಲಿ ಇದೊಂತರ ಬಾಯಾರಿ ಸಾಯುವವನಿಗೆ ಬಾಟಲಿನ ಬದಲು ಬಿಂದಿಗೆ ನೀರು ಸಿಕ್ಕಂತಾಗಿತ್ತು.

ಕೆಲಸ ಸಿಕ್ಕಿದ ಮೂರನೇ ದಿನ. ಎಂದಿಗಿಂತ ಸ್ವಲ್ಪ ಮುಂಚೆಯೇ ತನ್ನ ಸ್ಟಾಪಿನಲ್ಲಿ ಬಂದು ಕಾಯುತ್ತಿರುವಂತೆ ಮಳೆ ಶುರುವಾಗಿತ್ತು. ಹಿಂದಿನ ರಾತ್ರಿಯ ಜಿಮುರನ್ನು ನೋಡಿ ಯಾತಕ್ಕೂ ಇರಲಿ ಅಂತ ಛತ್ರಿ ತಂದಿದ್ದ ಇವನ ಮುಂದಾಲೋಚನೆ ಇಲ್ಲಿ ಪ್ರಯೋಜನವಾಗಿತ್ತು. ಅತ್ತಿತ್ತ ನೋಡಿದ. ಹಿಂದಿನ ದಿನ ಪರಿಚಯವಾಗಿದ್ದ ತನ್ನ ಆಫೀಸಿನ ರಾಮ್ ಆಗಲಿ ಪ್ರಮೋದ್ ಆಗಲಿ ಕಾಣಲಿಲ್ಲ.ತಾನಾಗೇ ಮುಂದುವರಿದು ಪರಿಚಯ ಮಾಡಿಕೊಳ್ಳಲು ಹಿಂಜರಿದಿದ್ದರೂ ಎರಡು ದಿನ ಕಂಡಿದ್ದ ಇನ್ನಿಬ್ಬರು ಮಹಿಳಾ ಸಹೋದ್ಯೋಗಿಗಳಾಗಲೀ ಕಾಣಲಿಲ್ಲ. ಜಿಮುರಂತೆ ಶುರುವಾಗಿದ್ದ ಮಳೆ ಜೋರಾಗುವಂತೆ ಕಾಣುತ್ತಿತ್ತು. ನಾನು ನಿಮ್ಮ ಛತ್ರಿ ಕೆಳಗೆ ಬರ್ಬೋದಾ ಅನ್ನೋ ಧ್ವನಿ ಕೇಳಿತು ಹಿಂದ್ಗಡೆಯಿಂದ. ತಿರುಗಿದರೆ ತಮ್ಮ ತಲೆಯ ಮೇಲೆ ತಮ್ಮ ಆಫೀಸಿನದೇ ಬ್ಯಾಗು ಹೊತ್ತು ಮಳೆಯಲ್ಲಿ ಒದ್ದೆಯಾಗದಂತೆ ಕಷ್ಟಪಡುತ್ತಿದ್ದ ಯುವತಿಯನ್ನು ನೋಡಿ ಆಶ್ಚರ್ಯವಾಯ್ತು. ಹಿಂದೆ ಎರಡು ದಿನ ನೋಡಿರದ ಇವ್ರು ನಮ್ಮ ಆಫೀಸು ಬಸ್ಸು ನಿಲ್ಲುವಲ್ಲಿ ನಿಂತಿದ್ದಾರೆ ಅಂದ್ರೆ, ನಮ್ಮ ಆಫೀಸ ಬ್ಯಾಗೇ ಹಾಕಿದ್ದಾರೆ ಅಂದ್ರೆ ನಮ್ಮ ಆಫೀಸವ್ರೇ ಆಗಿರ್ಬೇಕು ಅನಿಸ್ತು. ಯಾರಾದ್ರಾಗ್ಲಿ, ನೆನೆಯೋರ್ಗೆ ಛತ್ರಿ ಕೆಳಗೆ ಕರೆಯೋದ್ರಲ್ಲಿ ತಪ್ಪೇನಿಲ್ಲ ಅಂತ ಅವರು ಒಳಬರಬಹುದೆಂಬಂತೆ ಛತ್ರಿ ಅವಳತ್ತ ಚಾಚಿದ. ಛತ್ರಿಯ ಕೆಳಹೊಕ್ಕ ಆಕೆ ಥ್ಯಾಂಕ್ಸ್ ಆಂದ್ರೆ ಇವನಿಗೆ ವೆಲ್ಕಂ ಅನ್ನಬೇಕಾ ? ಮೆನ್ಷನ್ ನಾಟ್ ಅನ್ನಬೇಕಾ ಅನ್ನೋ ಗೊಂದಲ ಕಾಡಿತು. ಹೇ. ಇದಕ್ಕೇನು ಪರ್ವಾಗಿಲ್ಲ ಬಿಡಿ ಅಂದ. ಅಜ್ನಾತವ್ಯಕ್ತಿಯೊಂದಿಗೆ ಕನ್ನಡದಲ್ಲೇ ಮಾತಾಡೋಕೆ ಪ್ರಯತ್ನಿಸಿದ ಅವಳು ಕನ್ನಡತಿಯೇ ಇರಬೇಕೆಂಬ ವಿಶ್ವಾಸದಿಂದ. ಅವಳ ಮುಗುಳುನಗುವಿನ ಉತ್ತರ ಇವರಿಬ್ಬರ ನಡುವೆ ಇವರೇ ಅರಿಯದಂತೆ ಒಂದು ಸ್ನೇಹಕ್ಕೆ ಬುನಾದಿ ಹಾಕಿತ್ತು.

ಕಂಡ ಮೊದಲ ದಿನವೇನೋ ನಾನು ಇಂಥವ, ನಿಮ್ಮ ಹೆಸರು ಅಂತ ಕೇಳೋಕೆ ಧೈರ್ಯ ತಂದ್ಕೊಳ್ಳೋ ಹೊತ್ತಿಗೇ ಆಫೀಸು ಬಸ್ಸು ಬಂದಿತ್ತು. ಛತ್ರಿ ಕೊಟ್ಟ ಮಾತ್ರಕ್ಕೆ ಅವಳ ಹೆಸರು ಕೇಳಿಬಿಡಬೇಕಾ ? ಹಂಗೇನಾದ್ರೂ ಅವಸರ ಮಾಡಿ ಅವ್ಳೇನಾದ್ರೂ ತಪ್ಪು ತಿಳ್ಕೊಂಡಿದ್ರೆ ಏನ್ಮಾಡ್ತಿದ್ದೆ ಅಂತ ಅವನ ಮನವೇ ಬಯ್ತು ಆಮೇಲವನಿಗೆ. ಎರಡನೆಯ ದಿನವೂ ಇವನ ಕಡೆಯಿಂದ ಒಂದು ಮುಗುಳ್ನಗೆ. ಆಕಡೆಯಿಂದ ಮತ್ತೊಂದು ನಗೆಯ ಪ್ರತ್ಯುತ್ತರ ಬಿಟ್ಟರೆ ಬೇರೇನಿರಲಿಲ್ಲ. ಮೂರನೇ ದಿನ ಇವನೇ ಧೈರ್ಯ ಮಾಡಿ ತನ್ನ ಹೆಸರು ಹೇಳಿ ಅವಳ ಹೆಸರೂ ಕೇಳಿದ್ದ. ಒಂದೇ ಕಂಪೆನಿಯಾದರೂ ಅಕ್ಕ ಪಕ್ಕದ ವಿಭಾಗಗಳೇ ಅಂತ ತಿಳಿಯದ ಇಬ್ಬರಿಗೂ ಅದನ್ನು ತಿಳಿದು ಖುಷಿಯಾಯ್ತು. ಮಾತಿನ ಮಧ್ಯೆ ಇವನ ಕೈಯಲ್ಲಿದ್ದ ತೇಜಸ್ವಿಯವರ ಪುಸ್ತಕ ನೋಡಿದ ಅವಳು ನೀಡಿದ ಪ್ರತಿಕ್ರಿಯೆ ಇವನಿಗೆ ಅಚ್ಚರಿ ಹುಟ್ಟಿಸಿದ್ದಲ್ಲದೇ ಇಬ್ಬರಲ್ಲೂ ಇರುವ ಪುಸ್ತಕ ಪ್ರೇಮವನ್ನು ಪರಸ್ಪರ ಪರಿಚಯಿಸಿತ್ತು. ಅದಾದ ನಂತರದ ದಿನಗಳಲ್ಲಿ ದಿನಾ ಬಸ್ಸಿಗೆ ಕಾಯುವಾಗ ಸಿಗೋದು, ಬಸ್ಸು ಲೇಟಾಗುತ್ತಿದ್ದ ದಿನಗಳೆಲ್ಲಾ ತಾವು ಓದಿದ ಪುಸ್ತಕಗಳ ಬಗ್ಗೆಯೋ, ಓದಬೇಕೆಂದಿರುವ, ಓದುತ್ತಿರುವ ಪುಸ್ತಕಗಳ ಬಗ್ಗೆಯೇ ನಡೆಯುತ್ತಿತ್ತು ಇವರ ಮಾತುಕತೆ.  ಇವರನ್ನು ನೋಡಿದ ಬಸ್ಟಾಪಿನ ಉಳಿದ ಸಹೋದ್ಯೋಗಿಗಳು ಇವ್ರ ಮಾತುಕತೆ ನೋಡಿ ಇವ್ರು ಮುಂಚೆಯಿಂದಾ ಪರಿಚಯವಿದ್ದ ಕಾಲೇಜು ಸ್ನೇಹಿತರಾ ಅಥವಾ ಒಂದೇ ಊರಿನವರಾ ಅನ್ನೋ ಸಂದೇಹ ಪಟ್ಟು ಕೇಳೂ ಬಿಟ್ಟಿದ್ದರು. ಆದ್ರೆ ಮಳೆಯಿಂದ ಶುರುವಾದ ಪರಿಚಯ ಪುಸ್ತಕ ಪ್ರೇಮದಿಂದ ದಿನೇ ದಿನೇ ಗಾಡವಾಗ್ತಿದೆ ಅನ್ನೋದು ಕೇಳಿ ಮೊದ್ಲು ಅಚ್ಚರಿಪಟ್ಟಿದ್ರೂ ಪುಸ್ತಕದ ಹುಳು ಅಂತ್ಲೇ ಹೆಸರು ಪಡೆದಿದ್ದ ಅವಳ ಬಗ್ಗೆ ತಿಳಿದಿದ್ದ ಅವ್ರು ಅದ್ನ ನಗುನಗುತ್ತಾ ಸ್ವೀಕರಿಸಿದ್ರು.  ಒಟ್ನಲ್ಲಿ ಅವ್ರ ಗುಂಪಿನ ಪುಸ್ತಕದ ಹುಳಕ್ಕೊಂದು ಜೊತೆ ಸಿಕ್ಕಿತ್ತು 🙂

ತಾನು ತನ್ನ ಸ್ನೇಹಿತರ ಜೊತೆಗೆ ಪೇಟೆಗೆ ಹೋದಾಗ ಅವಳ ಸ್ನೇಹಿತೆಯರ ಜೊತೆ ಬಂದಿದ್ದ ಅವ್ಳು ಸಿಕ್ಕಿದ್ಲೊಮ್ಮೆ. ಇವ್ನು ಆಶ್ಚರ್ಯದಿಂದ ಹಾಯ್ ಅಂದಾಗ ಅವ್ಳು ಸಹಜವಾಗೇ ಹಾಯ್ ಅಂದ್ಲು.ಹೇ, ಯಾರೋ ಅದು ಅನ್ನೋ ಸಹಜ ಕುತೂಹಲ ಇವನ ಸ್ನೇಹಿತರಿಗೆ. ಇವ್ರು ನನ್ನ ಸಹೋದ್ಯೋಗಿ ಅಂತ ಅವಳ ಪರಿಚಯ ಮಾಡಿಕೊಟ್ಟ. ಅವ್ಳೂ ತನ್ನ ಸ್ನೇಹಿತೆಯರ ಪರಿಚಯ ಮಾಡಿಕೊಟ್ಲು. ಇವ್ರು ಹೋಗಬೇಕೆಂದಿದ್ದ ಚಿತ್ರಕ್ಕೇ ಹೊರಟಿದ್ದ ಆ ಹುಡುಗಿಯರ ಗುಂಪು ಇವರಿಗೆ ಆಶ್ಚರ್ಯ ತಂದಿತ್ತು. ಖಾಲಿ ಹೊರಟಿದ್ದ ಆ ಹುಡುಗರಿಗೆ ಹುಡುಗಿಯರ ಗುಂಪೊಂದು ಸಿಕ್ಕಿ ಸಿನಿಮಾ ಶುರುವಾಗೋವರೆಗೆ ಟೈಂ ಪಾಸೂ ಆಗಿತ್ತು.  ಸಿನಿಮಾ ಮುಗಿದಿದ್ದ ತಡ. ಇವನ ಸ್ನೇಹಿತರ ಇವ್ನಿಗೆ ಕಾಡೋಕೆ ಶುರು ಮಾಡಿದ್ರು. ಬರೀ ಸಹೋದ್ಯೋಗಿ ಅಂತ ಪರಿಚಯ ಮಾಡ್ಕೊಟ್ಟೆ. ಫ್ರೆಂಡಲ್ವಾ ಅಂದ ಒಬ್ಬ. ಹೂಂ ಕಣೋ ಫ್ರೆಂಡೇ ಅಂದ ಇವ. ಬದಲಾಗುತ್ತಿದ್ದ ಇವನ ಮುಖಭಾವ ಕಂಡ ಉಳಿದ ಗೆಳೆಯರು ಕುತೂಹಲ ತಡೆಯಲಾರದೇ ಕಾಲೆಳೆಯೋದು ಮುಂದುವರೆಸಿದ್ರು. ಭಾವೀ ಅತ್ಗೆ ಅನ್ನು ಹಂಗಾದ್ರೆ ಅಂದ ಒಬ್ಬ. ಏ, ಹಂಗೆಲ್ಲಾ ಏನಿಲ್ಲ ಕಣ್ರೋ. ಪರಿಚಯ ಆಗಿ ಸ್ವಲ್ಪ ಸಮಯ ಆಗಿದೆ ಅಷ್ಟೆ. ಅವಳ ನನ್ನ ಕೆಲವು ವಿಚಾರಧಾರೆಗಳು ಹೊಂದೋದ್ರಿಂದ ನಮ್ಮ ಮಧ್ಯೆ ಸ್ನೇಹವಿದ್ಯೇ ಹೊರ್ತು ಪ್ರೀತಿ , ಪ್ರೇಮ ಅಂತೇನಿಲ್ಲ ಅಂದ. ಆದ್ರೆ ಈ ಹುಡುಗ್ರಿಗೆ ಕಾಡೋಕೊಂದು ವಿಷಯ ಬೇಕಾಗಿತ್ತು ಅನ್ನುವಂತೆ ಇವನ ಯಾವ ಮಾತುಗಳ್ನೂ ಒಪ್ಪೋಕೆ ಸಿದ್ದವೇ ಇರ್ಲಿಲ್ಲ. ಅದಾದ ಮೇಲೆ ಯಾವ ಫೋನು ಬಂದ್ರೂ ಅತ್ಗೇದಾ ಅಂತ ಅಣಕಿಸೋಕೆ ಶುರು ಮಾಡಿದ್ರು.

ಅತ್ತ ಅವಳ ಸ್ನೇಹಿತೆಯರೇನು ಕಮ್ಮಿಯಿರಲಿಲ್ಲ. ಅವಳ ಬಾಯಲ್ಲಿ ಇವನ ಸುದ್ದಿ ಕೇಳಿದ ಅವ್ರು ಇವನಿಗೆ ಭಾವ ಅಂತ ಹೆಸ್ರಿಟ್ಟಿದ್ರು. ಅದಾದ ಮೇಲೆ ಇವನನ್ನು ಎಲ್ಲೇ ಕಂಡ್ರು ಅವ್ರು ನಮಸ್ಕಾರ ಭಾವ ಅನ್ನೋದು ಇವನ ಸ್ನೇಹಿತರು ಅವಳಿಗೆ ನಮಸ್ಕಾರ ಅತ್ಗೆ ಅನ್ನೋದು ಕಾಮನ್ನಾಗಿ ಹೋಗಿತ್ತು ! ಆದ್ರೆ ದಿನಾ ಬಸ್ಟಾಂಡಿನಲ್ಲಿ ಸಿಕ್ಕಾಗ ಇದ್ಯಾವುದರ ಅರಿವೇ ಇಲ್ಲದಂತೆ ಹಿಂದಿನ ದಿನ ನಿಲ್ಲಿಸಿದ ಪುಸ್ತಕದ ಚರ್ಚೆಯನ್ನೋ ಇವನೂರಿನ ಮಹಾಂತೇಶ್ವರನ ಚರಿತ್ರೆಯನ್ನೋ ಕೆದಕಿ ಅದರಲ್ಲಿ ವಿಷಯ ಮರೆಸಿ ಬಿಡುತ್ತಿದ್ದ ಅವಳ ಕಂಡ ಇವನಿಗೆ ಅವಳ ಮನಸ್ಸಿನಲ್ಲಿ ಏನಿದೆ ಅನ್ನೋದು ನಿಗೂಢ ಪ್ರಶ್ನೆಯೇ ಆಗಿಬಿಡುತ್ತಿತ್ತು. ನಿಮ್ಮ ಸ್ನೇಹಿತೆಯರು ನಂಗೆ ಭಾವ ಅಂತಿದಾರೆ ಅಂದ ಇವನೊಂದು ದಿನ ತಡೆಯಲಾರದೇ. ಹೇಳೋ ಜನ ನೂರು ಹೇಳ್ತಾರೆ. ಅದಕ್ಕೆ ತಕ್ಕಂತೆ ಕುಣಿತಿರೋಕೆ ಆಗೋತ್ತಾ ನಾವು. ನಿಮಗೇನಾದ್ರೂ ಅಭ್ಯಂತರ ಇದ್ರೆ ನನ್ನ ಸ್ನೇಹಿತೆಯರಿಗೆ ಹಾಗೆ ಕರಿಬೇಡಿ ಅಂತ ಹೇಳ್ತೀನಿ ಸರಿಯಾ ಅಂತ ಸ್ವಲ್ಪ ನಿಷ್ಠುರವಾಗೇ ಹೇಳಿದ್ದಳು. ಮೊದಲು ಬೇಸರವಾದ್ರೂ ತಾನು ಕೇಳಿದ ರೀತಿಯ ಬಗ್ಗೆ ಬೇಸರವಾಯ್ತು ಇವನಿಗೇ. ತನಗೇನೋ ಆಕೆಯ ಬಗ್ಗೆ ಪ್ರೀತಿ ಅಂಕುರಿಸ್ತಾ ಇದೆ. ಆದ್ರೆ ಅವಳ ಮನದಲ್ಲೂ ತನ್ನ ಬಗ್ಗೆ ಪ್ರೀತಿಯಿದ್ಯಾ ಅಂತ ತಿಳಿಯೋ ಪ್ರಯತ್ನ ಮಾಡದೇ ನಿಮ್ಮ ಸ್ನೇಹಿತೆಯರು ಹಾಗೆ ಹೇಳ್ತಿದ್ದಾರೆ ಅಂತ ಪರೋಕ್ಷವಾಗಿ ಕೇಳಬಾರದಿತ್ತು ಎನಿಸಿತವನಿಗೆ. ನನಗೆ ನಿಮ್ಮ ಮೇಲೆ ನಂಗೇ ಅರಿವಿಲ್ಲದಂಗೆ ಪ್ರೀತಿ ಮೂಡ್ತಾ ಇದೆ ಅಂತ ನೇರವಾಗೇ ಹೇಳಬಹುದಿತ್ತಲ್ವಾ ಅಂದ್ಕೊಂಡ ಅವತ್ತು ಆಫೀಸಲ್ಲಿ. ಆದ್ರೇನ್ಮಾಡೋದು ? ಮಾತು ಹೇಳಾಗಿದೆ. ಇನ್ನು ಕ್ಷಮೆ ಕೇಳೋಣವೆಂದ್ರೂ ನಾಳೆಯವರೆಗೆ ಕಾಯಬೇಕು. ಆಫೀಸಲ್ಲೇ ಅವಳ ವಿಭಾಗಕ್ಕೆ  ಹೋಗಿ ಈ ವಿಚಾರದಲ್ಲಿ ಎಲ್ಲರೆದುರಿಗೆ  ಮಾತಾಡಿಸೋದು ಸಭ್ಯತೆ ಅನಿಸೋಲ್ಲ ಅಂತ ಸುಮ್ಮನಾದ. ಮಾರನೆಯ ದಿನಕ್ಕೆ ಹೇಗೆ ಕಾದನೋ ಗೊತ್ತಿಲ್ಲ. ಮಾರನೆಯ ದಿನ ಬಸ್ಟಾಂಡಿನಲ್ಲಿ ಅವಳ ಬರವ ಕಾದ ಅವನಿಗೆ ನಿರಾಸೆ. ಬಂದಿಲ್ಲ ಅವಳು. ಬಸ್ಟಾಪಿನ ಸಹೋದ್ಯೋಗಿಗಳ ಬಳಿ ಹೆಚ್ಚೇನು ಮಾಹಿತಿಯಿರಲಿಲ್ಲ. ಅಂದು ಸಂಜೆ ಇವನಿಗೆ ಎದುರಾದ ಅವಳ ಸ್ನೇಹಿತೆಯರು ಕಂಡರೂ ಕಾಣದಂತೆ ಮುಂದೆ ಹೋಗೋಕೆ ರೆಡಿಯಾಗಿದ್ರು. ಇವನೇ ಮತ್ತೆ ಅಡ್ಡ ಹೋಗಿ ತಡೆದು ನಿಲ್ಲಿಸಿ ಕೇಳಿದ ಅವಳ ಬಗ್ಗೆ. 

ಮೊದಲು ಮಾತನಾಡಲೇ ಮನಸ್ಸಿಲ್ಲದಂತಿದ್ದ ಅವರು ಇವನಿಗೆ  ತಕ್ಷಣವೇ ಬಯ್ಯೋಕೆ ಶುರುಮಾಡಿದ್ರು ಅಲ್ಲಿ. ಅಲ್ರಿ? ಏನಂಡ್ಕಂದೀರ ನಿಮ್ಮನ್ನ ? ನಿಮಗೆ ಈ ಪ್ರೀತಿ ,ಪ್ರೇಮ ಎಲ್ಲಾ ಆಟ ಆಗ್ಬಿಟ್ಟಿದೆ ಅಲ್ವಾ ? ಅವ್ಳನ್ನ ಪ್ರೀತಿಸ್ತಿದೀರ ಅಂದ್ರೆ ಪ್ರೀತಿಸ್ತೀನಿ ಅನ್ಬೇಕಿತ್ತು. ಇಲ್ಲಾ ಅಂದ್ರೆ ಇಲ್ಲಾ ಅನ್ಬೇಕಿತ್ತು. ಅದನ್ನ ಬಿಟ್ಟು ಇಷ್ಟು ದಿನ ಅವಳ ಮನದಲ್ಲಿ ಏನೂ ಹೇಳದೇ ಬರೀ ಗೊಂದಲ ಮೂಡಿಸಿ ಅವ್ಳು ಈಗ ಆ ದುಃಖದಲ್ಲೇ ನಮ್ಮನ್ನು ಬಿಟ್ಟು ಹೋಗದಂಗೆ ಮಾಡ್ಬುಟ್ರಲ್ರಿ. ಅದೆಷ್ಟು ಕಾಲದ ನಂತ್ರ ಅವ್ಳ ಮುಖದಲ್ಲಿ ಖುಷಿ ಕಂಡಿದ್ವಿ ನಾವು. ಒಂದು ವಾರದಿಂದ ನೀವು ಇವತ್ತು ಹೇಳಬಹುದು, ನಾಳೆ ಹೇಳಬಹುದು ಅಂತ ಒಂದೇ ಉಸಿರಲ್ಲಿ ಕಾಯ್ತಾ ಇರ್ತಿದ್ಲು. ನಿಮ್ಮ ಫೋನು ಯಾವಾಗ ಬಂದ್ರೂ ಪ್ರೀತಿಯ ನಿವೇದನೆಗೇ ಫೋನ್ ಮಾಡಿರ್ಬೇಕು ಅಂತ ಆಸೆ ಪಟ್ತಿದ್ಲು. ಆದ್ರೆ ಆಕೆಗೆ ಸಿಕ್ಕಿದ್ದು ಕೊನೆಗೂ ನಿರಾಸೆ ಅಂತ ಇವನಿಗೆ ಒಂದು ಮಾತನಾಡಲೂ ಬಿಡದಂತೆ  ಬಯ್ಯುತ್ತಿದ್ದ ಅವರನ್ನು ಸ್ವಲ್ಪ ತಡೆದ ಅವ. ಓ, ಇದ್ಯಾವ್ದೂ ಗೊತ್ತೇ ಇರಲಿಲ್ಲ ನನಗೆ. ರಿಯಲಿ ಸಾರಿ.  ಅವ್ಳ ಬಗ್ಗೆ ಪ್ರೀತಿಯಿದ್ದುದ್ದು ನಿಜ. ಆದ್ರೆ ಅವಳಲ್ಲೂ ನನ್ನ ಬಗ್ಗೆ ಪ್ರೀತಿ ಇದ್ಯಾ ಇಲ್ವೋ ಅನ್ನೋ ಗೊಂದಲದಲ್ಲೇ ಇದ್ದೆ ನಾನು ಇಷ್ಟು ದಿನ, ಆದ್ರೆ ಅದ್ರಿಂದ ಇಷ್ಟೆಲ್ಲಾ ನೋವಾಗಿರುತ್ತೆ ಅವ್ಳಿಗೆ ಅಂತ ಗೊತ್ತಿರ್ಲಿಲ್ಲ. ಅವ್ಳತ್ರ ಮಾತಾಡಿ ಮೊದ್ಲು ಕ್ಷಮೆ ಕೇಳ್ಬೇಕು ನಾನು. ಎಲ್ಲಿದಾಳೆ ಅವ್ಳು ಅಂದ ಇವ. ಇನ್ನೆಲ್ಲಿರ್ತಾಳೆ. ಬೆಳಗ್ಗೇನೆ ಲಂಡನ್ನಿನ ವಿಮಾನ ಹತ್ತಿ ಹೋಗಾಯ್ತು ಆನ್ ಸೈಟಿಗೆ ಅವಳು. ಇದನ್ನೂ ಹೇಳಿರ್ಲಿಲ್ಲ ಅನ್ನಬೇಡಿ ನಿಮಗೆ ಅಂತ ಮುಖದ ಮೇಲೆ ಹೊಡೆದ ಹಾಗೆ ಹೇಳಿದಾಗ ಇವನಿಗೆ ಕಾಲ ಕೆಳಗಿನ ಭೂಮಿ ಕುಸಿಯುತ್ತಿರುವ ಅನುಭವ. ಕುಸಿ ಕುಸಿದು ಪಾತಾಳಕ್ಕೆ ಹೋಗುತ್ತಿರುವ ಈತ ಆಕೆಯ ಹೆಸರ ಹಿಡಿದು ಕೂಗಿದಂತೆ, ಕುಸಿಯುತ್ತಿದ್ದ ಈತ ಕೊನೆಗೆ ಕಗ್ಗತ್ತಲ ಗರ್ಭದಲ್ಲೇ ಕರಗಿ ಹೋಗೋ ಮುನ್ನ ಯಾರೋ ಇವನ ಭುಜ ಹಿಡಿದು ಅಲ್ಲಾಡಿಸಿದಂತೆ ಆಯ್ತು. ಅವಳೇ ಬಂದಳೇನೋ ಅಂತ ಸುತ್ತ ಕಣ್ಣು ಹಾಯಿಸಿದ್ರೆ ತನ್ನ ಸ್ನೇಹಿತರು ! ಹೇ, ನೀವೆನ್ರೂ ಇಲ್ಲಿ ಅಂತ ಸುತ್ತ ನೋಡಿದ ಅವ ತಾನು ತನ್ನ ರೂಮಲ್ಲಿರೋದನ್ನ ನೋಡಿ ಆಶ್ಚರ್ಯ ಪಟ್ಟ. ಏನ್ರೋ ಇದು. ರಸ್ತೆಯ ಮೇಲಿದ್ದ ನಾನು ರೂಮಿಗೆ ಹೇಗೆ ಬಂದೆ ? ನೀವೆಲ್ಲ ಆಫೀಸಿಗೆ ಹೋಗಿರ್ಲಿಲ್ವಾ ಅಂದ. ಆಫೀಸು . ಇಷ್ಟು ಬೇಗ. ಲೇ ? ಇನ್ನು ಏಳು ಘಂಟೆ ಕಣೋ ಬೆಳಗ್ಗೆ. ಅವಾಗಿಂದ ಅತ್ಗೆ ಹೆಸ್ರು ಹಿಡಿದು ಕನವರಸ್ತಾ ಇದೀಯ.ಕಷ್ಟಪಟ್ಟು ಎಬ್ಬಿಸಿದ್ರೆ ಈಗ ರಸ್ತೆ, ಇಲ್ಲಿಗೆ ಹೆಂಗೆ ಬಂದೆ ಅಂತಿದೀಯ. ಏನಾಗಿದ್ಯೋ ನಿಂಗೆ ಅಂದ್ರು ಅವ್ರು. ಅತ್ಗೆ ನಿನ್ನೆ ಆಫೀಸಿಗೆ ಬಂದಿಲ್ಲ ಅಂತ ಹೇಳಿದ್ನಲ್ಲೋ ಮರ್ತೋಯ್ತ . ಒಂದಿನ ಮಾತಾಡ್ದೇ ಹಿಂಗಾಗಿರ್ಬೇಕು ಅಂದ ಮತ್ತೊಬ್ಬ. ಓ, ಹೌದಲ್ವಾ ? ಅವ್ರ ದನಿ ಕೇಳಿದ್ಮೇಲೆ ಸರಿಯಾಗೋದು ಹುಡ್ಗ. ತಡಿ ಅವ್ರಿಗೆ ಫೋನ್ ಮಾಡೋಣ ಅಂದ ಇನ್ನೊಬ್ಬ. ಅವಳಿಗೆ ಬೆಳಬೆಳಗ್ಗೆ ಬಂದ ಇವನ ಫೋನ್ ನೋಡಿ ಅಚ್ಚರಿ ! ತನ್ನ ಹುಟ್ಟಿದಬ್ಬ ಅಂತ ತಾನು ಹೇಳದಿದ್ರೂ ಇವನಿಗೆ ಹೆಂಗೆ ಗೊತ್ತಾಯ್ತು ಅಂತ ! ಆದ್ರೂ ವಿಷ್ ಮಾಡೋಕೆ ಫೋನ್ ಮಾಡಿದ ಇವನಿಗೆ ಥ್ಯಾಂಕ್ಸ್ ಹೇಳೋಕೆ ಮುಂದಾಗಿದ್ಲು ಅದುವರೆಗೆ ಬಂದ ಫೋನ್ಗಳಿಗೆ ಹೇಳಿ ಹೇಳಿ. ಆದ್ರೆ ಎರಡು ಕ್ಷಣವಾದ್ರೂ ಇವನ ಕಡೆಯಿಂದ ಮಾತೇ ಬರದೇ ಇವನು ವಿಷ್ ಮಾಡೋಕೆ ಮುನ್ನವೇ ಥ್ಯಾಂಕ್ಸ್ ಹೇಳೊಕೆ ಹೊರಟಿದ್ದ ತನ್ನ ಪೆದ್ದುತನಕ್ಕೆ ನಾಚಿದ್ಲು. ಮತ್ತೊಂದು ಕ್ಷಣ ನಿಶ್ಯಬ್ದವೇ ಇದ್ದಾಗ ಅವಳಿಗೆ ಲೈನ್ ಕಟ್ಟಾಯ್ತಾ ಅನ್ನೋ ಅನುಮಾನ. ಹಲೋ. ಹಲೋ..ಹಲೋ.. ಅವಳ ಮೂರನೆಯ ಹಲೋಗೆ ವಾಸ್ತವಕ್ಕೆ ಬಂದ ಇವ. ಓ. ಹಲೋ. ಕಂಗ್ರಾಟ್ಸ್. ಅಲ್ಲಲ್ಲ. ಸಾರಿ. ನಿಮ್ಮತ್ರ ಒಂದ್ವಿಷ್ಯ ಮಾತಾಡೋದಿದೆ. ಬೆಳಗ್ಗೆ ಬಸ್ಟಾಪಲ್ಲಿ ಸಿಕ್ತಿರಲ್ವಾ ಇವತ್ತು ಅಂದ. ಹುಟ್ಟಿದಬ್ಬದ ಶುಭಾಶಯ ಹೇಳೋಕೆ ಕಂಗ್ರಾಟ್ಸ್ ಹೇಳಿದ್ನಾ ? ಸಾರಿ ಯಾಕೆ ಕೇಳ್ದ ಅಂತ ತಲೆಬುಡ ಅರ್ಥವಾಗದ ಗೊಂದಲದಲ್ಲೇ ಇರಬೇಕಾದ್ರೆ . ಅತ್ಗೆ ನಮ್ಮ ಹುಡ್ಗ ನಿಮ್ಮ ಮಾತು ಕೇಳ್ದೇ ಹುಚ್ಚನ ತರ ಆಗ್ಬುಟ್ಟಿದ್ದ. ಈಗ ಮಾತು ಕೇಳಿ ಹುಚ್ಚು ಅರ್ಧ ಇಳಿದಿದೆ ಅಷ್ಟೆ. ಪೂರ್ತಿ ಸರಿಯಾಗಿ ಬಸ್ಟಾಪಲ್ಲಿ ಸಿಕ್ತಾನೆ ಬಿಡಿ ಅಂದಾಗ ಆ ಕಡೆಯಿಂದ ಅವ್ಳು , ಈ ಕಡೆಯಿಂದ ಇವನ ಸ್ನೇಹಿತರೆಲ್ಲಾ ಬಿದ್ದು ಬಿದ್ದು ನಕ್ರು. ಕಾಲದ ಘಳಿಗೆಗಳು ನಿಧಾನವಾಗಿ ಉರುಳುತ್ತಿದ್ರೆ ಭಾವಗಳ ಸೇತುವೆಯಲ್ಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುವ ತವಕದಲ್ಲಿದ್ದ ಜೀವಗಳು ಬಸ್ಟಾಪಿನಲ್ಲಿ ಸಂಧಿಸುವ ಸಮಯಕ್ಕಾಗಿ  ಕಾಯಹತ್ತಿದವು..

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕಾಡುಪೇಟೆಯ ಕತೆ: ಪ್ರಶಸ್ತಿ

Leave a Reply

Your email address will not be published. Required fields are marked *