ಆಷಾಢದ ಒಂದು ದಿನ ಹೊರಡಲು ನಿರ್ಧರಿಸಿ ಕೌದಿಯೊಳಗೆ ಮುಖವಿಟ್ಟು ಮಲಗಿದ. ಬಣ್ಣ-ಬಣ್ಣದ ಚೌಕಡಿಯೊಳಗೆ ಚಂದಮಾಮನ ಚಿತ್ರದಂತೆ ಗುಂಗುರು ಗುಂಗುರವಾಗಿ ನೂರಾರು ಆಲೋಚನೆಗಳು. ಸಗಣಿ ಸಾರಿಸಿದ್ದ ತಂವಟು ವಾಸನೆಯ ಕೋಣೆಯೊಳಗೆ ಬೀಡಿ ತುಂಡುಗಳೇ ನೆಲಹಾಸಿಗೆ. ಗುದ್ದು ಮುಚ್ಚಿದಷ್ಟು ನೆಲಗೆಬರಿ ತೂತು ಮಾಡುವ ಇಲಿಗಳು ಹಾಡಹಗಲಲ್ಲಿ ನಿರ್ಭಿಡೆಯಿಂದ ಓಡಾಡುತ್ತಲಿದ್ದವು. ಸತತ ಒಂಭತ್ತು ಸಲ ಪ್ರಯತ್ನಿಸಿ ಮೇಲೇರಿದ್ದ ಮಹ್ಮದನ ಕಾಲದ ಜೇಡ, ಜಂತಿ ತುಂಬೆಲ್ಲ ತನ್ನ ಹರಕು-ಮುರುಕು ಸಂಸ್ಥಾನಗಳ ಬಲೆ ಹೆಣೆದಿತ್ತು. ಹೂಸದಾಗಿ ಬಾಡಿಗೆಗೆ ಬಂದಾಗ ಸುಣ್ಣದ ಗೋಡೆಗೆ ಹಸಿರು ಡಿಸ್ಟೆಂಪರ್ ಹಚ್ಚಿದ್ದ ಗುರುತಿಗೆ ಬಣ್ಣದ ಹೆಕ್ಕಳಿ-ಹೆಕ್ಕಳಿ ಕಿತ್ತು ಬೀಳುತ್ತಿತ್ತು. ಕಿಟಕಿಯಾಚೆ ಕಾಣುವ ರಸ್ತೆಯಲ್ಲಿ ಕೈಗಲ್ಲಳತೆ ದೂರಕ್ಕೆ ಮೇಲ್ಮುಖವಾಗಿ ನಡೆದರ.., ಬಲಮಗ್ಗುಲಿಗೆ ಒಂದು ವ್ಯಟ ಬಿಲ್ಡಿಂಗ್ ಇದೆ. ಹುಚ್ಚರ ದವಾಖಾನೆ. ಇವರ ಅವರ ಹಾದರದ ಕತೆಗಳ ಹೇಳುವ ಹೆಂಗಸನ್ನು ನಾಲ್ಕೈದು ಜನ ಒತ್ತಾಯದಿಂದ ದರದರ ಎಳೆಯುತ್ತಾ ದವಾಖಾನೆಗೆ ಒಯುತ್ತಿರುವರು. ಅಯ್ಯ ನಿನ್ನ ಮಾರೀ ಮಣ್ಣಾಗಡಗಲ್ಲೀ, ನನ್ನೆಲ್ಲಿ ಎಳಕೂಂಡ ಹೊಂಟೀರೇ ಬಾವಾಗೋಳ’. ಅವರೆಲ್ಲ ಸಂಭಾಳಿಸುವುದರಲ್ಲಿ ಸೋತವರ ಥರ ಸಣ್ಣವರಾಗಿ ಏನೊಂದು ಮಾತಾಡದೆ ನಡೆದಿದ್ದರು. ‘ನಿಮ್ಮ ಹೆಂಡತೇರು ಗರತೇರನ್ನ ಕಾಯ ಹೋಗ್ರೀ, ನನ್ನೇನು ಹಿಡದೀರಿ’ ಕೊಸರಾಡಿ ಕಸಿದುಕೊಂಡು ಕರೀ ಹರದ ಎತ್ತಿನ ಉಮೇದಿನಂತೆ ಓಡುತ್ತಿದ್ದಳು. ನೆನೆಗುದಿಗೆ ಬಿದ್ದ ಗಂಡಸರು ಅಡ್ಡಡ್ಡ ಬಿದ್ದು ಹಿಡಿಯಲು ಓಡಿದರೆ… ಅವಳು ಮುಂದೆ ನಿಂತು ಸೆಡ್ಡು ಹೊಡೆಯುತ್ತಲಿದ್ದಳು. ಕೈ-ಕಾಲು ಕಟ್ಟಿ ಎತ್ತಿ ಆಟೋವೊಂದರಲ್ಲಿ ಹಾಕಿಕೊಂಡು ಹೋದರು. ನಿಂತು ನೋಡುತ್ತಲಿದ್ದವರ ನಡುವಿನಿಂದ ಸಿಡಿದು ಬಂದ ಗೌತಮಿ ಬಾಗಿಲು ಬಡಿದಳು.
‘ಒಳಗೆ ಬಾರವ್ವಾ, ಯಾಕಿಷ್ಟು ಹೊತ್ತು ಮಾಡಿದಿ?’
ಶ್ರೀಸಾಮಾನ್ಯ ಹೆಣ್ಣು ಮಗಳ ಸೂಕ್ಷ್ಮ ಲಕ್ಷಣಗಳೆಲ್ಲವನ್ನೂ ಧಿಕ್ಕರಿಸಿದ್ದ, ಮೊನಚು ಮೈ-ಮಾಟದ ಉಬ್ಬು ತಗ್ಗುಗಳನ್ನು ಲೆಕ್ಕಿಸದೆ ಗಂಡಸಿನಂತೆ ಎದೆ ಸೆಟೆಸಿ ನಡೆದಾಡುವ ಗೌತಮಿ, ಸಣ್ಣ ಸ್ಟೂಲನ್ನು ಕಾಲಲ್ಲೆಳೆದುಕೊಂಡು ಕುಂತಳು.
‘ನಿಮ್ಮ ಮಾವ ಕೋರ್ಟ ಮುದ್ದತ್ತಿಗೆ ಬಂದಿದ್ದರು. ಕೇಸ ನಿಕಾಲ್ ಆಧಾಂಗ ಆಯ್ತು ಅಂದ್ರು’ ಮತ್ತ ನಿನಗ ಮದುವೀ ಮಾಡೋ ತಯಾರಿ ನಡೆದದ ಅಂತಿದ್ರು.
‘ಹೂಂ ನಂಬಿಕೆ ಬರೋದು ನಾನು ಅವರ ಚೌಕಟ್ಟಿನೊಳಗೆ ಬಂದ ಮ್ಯಾಲೆ ಅನ್ನೋದ ಅವರ ಇಂಗಿತ’. ಕತೆ ಹೊಡೆಯುವ ಮೊದಲು ಬಾಯಿ ಹಾಕಿ ಮಾತು ತುಂಡರಿಸಿದಳು.
‘ನಾವೆಲ್ಲ ಮದುವಿ ಅದರೆ….?
‘ನಿನು ಬೇಕಾದ್ರ ಆಗು. ನನಗೆ ನನ್ನ ಭವಿಷ್ಯ ಕಣ್ಮುಂದ ನಿಚ್ಚಳ ಕಾಣಸತೈತಿ, ಏನೊಂದು ಕೆಲಸಕ್ಕೆ ಹೋದರು ವ್ಯವಸ್ಥೆ ಸರಿಯಿಲ್ಲ ಅನ್ನಿಸ್ತದ. ಗುಂಪುಗಾರಿಕೆ ಮಾಡ್ತೇನಿ ಅನ್ನೋ ಸಬೂಬು ಹೇಳಿ ಕೆಲಸದಿಂದ ಕಿತ್ತೊಗಿತಿದ್ದಾರ… ಇಂಥಾ ವ್ಯಾಳಾದಾಗ ನನಗೆ ಮದುವಿ ಬೇಕಾ? ಅಚಾನಕ್ ಯಾರದೋ ಭಿಡೇಕ್ಕ ಬಿದ್ದು ಮ್ಯಾರಜ್ ಮಾಡಕೇಂಡ್ರ ಮುಗೀತು ಕತಿ, ವ್ಯವಸ್ಥೆಗೆ ಅಸ್ತು.
ಕಿಟಕಿಯಾಚೆ ನೋಡುತ್ತಲಿದ್ದ ಸಿದ್ದಾರ್ಥ ನಿಟ್ಟುಸಿರಿನೊಂದಿಗೆ ಸಿಗರೇಟ್ ಹಚ್ಚಿದ. ಸಣ್ಣ ಮೌನದೊಂದಿಗೆ ಗೌತಮಿ ಮುಗುಳ್ನಗುತ್ತ ಕಾಲೇಜಿನ ದಿನಗಳ ನೆನಪಿಸಿದಳು. ವಾವ್… ನಾವೆಲ್ಲ ಒಬ್ಬರಿಗೊಬ್ಬರು ಕಲೆತದ್ದು, ಆ ದಿನದ ಸಂಪಿನೊಂದಿಗೆ ಅಲ್ಲಾ! ನಮ್ಮ ಸಂಗಾತಿಗಳೆಲ್ಲ ದೂರ-ದೂರ ಹೋದರು ಸೈತ್ ನಮ್ಮಿಬ್ಬರ ಗೆಳೆತನ ಕಡೀಲಿಲ್ಲ… ಕಾಮ್ರೇಡ್ ಕುಲಕರ್ಣಿ ಒಂದು ಮಾತು ಹೇಳಿದ್ದರು ನೆನಪದ ಏನು? “ನಾವ್ಯಾರು ನಾಯಕರಲ್ಲ, ನಾವು ಸಂಘಟನೆಗೆ ಬದ್ಧರು’.
‘ಅದು ಹತ್ತು ವರ್ಷದ ಹಿಂದಿನ ಮಾತು’ ಉದಾಸೀನ ಮಾತಿನ ತುಂಬ ಹೊಗೆ ತುಂಬಿಕೊಂಡಿತ್ತು. ಆದರೆ ಅವಳ ನೆನಪು ಗರಿಗೆದರಿತ್ತು. ‘ಹಾಂ ಆಹೊತ್ತು ನಿನೊಂದ ಪದ್ಯ ಓದಿದ್ದೀ-
‘ಸುಡು ಬಿಸಿಲಲ್ಲಿ ಸುಟ್ಟು ಕರಕಲಾದವರ
ನೆತ್ತಿಯ ಮ್ಯಾಲಿವರ ಉದರ’.
ಖಬರಿರಲಿ ಮೈಮ್ಯಾಲ ಕದರ
ಕಿತ್ತು ಬಿಟ್ಟೇವು ನೆದರ.
ಎಚ್ಚರ ಎಚ್ಚರ ಎಚ್ಚರ.
“ಗೌತಮಿ ಅದೊಂದು ಆವೇಶದ ಹುರುಪಿನ್ಯಾಗ ಬರದದ್ದು. ಹದಿಹರೆಯದ ಉತ್ಕಟತೆ… ಈ ಹಾಡು, ಕತೆ ಕವನ ಬರೆಯೋದಕ್ಕೆ ಅರ್ಥ ಇಲ್ಲ. ಮುರುದ್ ಕಟ್ಟಲಿಕ್ಕ್ ತಯಾರಾಗಿ ಹೊಂಡಬೇಕು, ಸಂಘಟಿಸಬೇಕು. ಅದೀರಲಿ ‘ಬರ್ಕವೈಟ ಕಂಡ ಭಾರತ; ಓದಿದಿಯೇನು?’
‘ಇಲ್ಲ’
ಯಾರೋ ಬಾಗಿಲ ಮುಂದೆ ಬಂದ ಸೌಂಡಿಗೆ ಎದ್ದು ನೋಡಿದರೆ ಶಿವನಿಂಗ ಮಾಮ ಬಂದಿದ್ದ. ಕೈಯಾಗಿನ ಸಿಗರೇಟು ಕಿಡಕಿ ಹೊರಗ ಬಿತ್ತು. ಗೌತಮಿ ಏನೋ ನೆಪ ಹೇಳಿದಳು. ಇಬ್ಬರಲ್ಲೂ ಮೌನದೊಳು ಹಲ್ಲು ಕಡಿಯೋ ಯುದ್ದ ನಡೆದಿತ್ತು.
‘ಸಿದ್ದಲಿಂಗ…. ಓದೋದು ಮುಗದ ಮ್ಯಾಲ ಎಲ್ಯಾರ ನಾಕರಿಗಿ ಅರ್ಜಿ ಹಾಕಿದ್ದೀಯೇನು? ಇಲ್ಲ, ಇಲ್ಲೇ ಯಾವುದರ ಕಂಪನ್ಯಾಗ ಕೆಲಸ ಮಾಡಲಿಕ್ಕತ್ತೀಯೇನು?’ ಶಿವನಿಂಗ ಮಾಮ ಕೇಳಿದ. ಬದುಕಿನ ಪ್ರಶ್ನಾಕ್ಕ ಸುಳುಹುಗಳ ಹುಡುಕಿ ಉತ್ತರ ಕೊಡಲಿಕ್ಕೂ ಆಗದೆ ವಿಲಿವಿಲಿ ಒದ್ದಾಡಿದ. ‘ನಿನ್ನ ಮ್ಯಾಲ ಭರೋಸ ಇಟ್ಕೋಂಡು ಕುಂತಿರೋ ನಿಮ್ಮ ಅಪ್ಪ ಅವ್ವಗ ಏನ ಹೇಳ್ತಿ?’ ‘ಇಲ್ಲ ನನಗ ಈ ನೌಕರಿ ಧಂದೆ ಕೆಲಸಗಳ ಯಾವವು ಬ್ಯಾಡ’ ನಿಷ್ಠುರನಾಗಿ ಹೇಳಿದ. ‘ಸಂಕಲ್ಪದ ಮರ್ಮ ನಿಮಗೆ ತಿಳಿಯದು. ನಾನೊಬ್ಬ ರಾಷ್ಟ್ರದ…..’ ಎಂದೇನೋ ಮಾತುಗಳ ತಡವರಿಸುತ್ತ ಶಬ್ದಗಳ ಲೆಕ್ಕÀ ಹಾಕುತ್ತಿದ್ದವನ ಕೊಳ್ಳ ಪಟ್ಟೇ ಹಿಡಿದು ಎರಡು ರಮ್ಮಂತ ಬಿಗಿದು ‘ನಿನ್ನ ಈ ಗುಂಪುಗಾರಿಕಿ, ಪುಡಾರಿತನ, ಪುಂಡಾಟಿಕೆ ಎಲ್ಲ ಕಟ್ಟಿಟ್ಟು ಊರಿಗಿ ನಡಿ’ ಎಂದ. ಕನಸಿನ ಮ್ಯಾಲ ಕನಸುಗಳ ಕಟಗೊಂಡಿದ್ದ ಸಿದ್ಧಾರ್ಥ ‘ನಾ ಬರೋಲ್ಲ’ ಎಂದು ವಾದಿಸುತ್ತಲೇ ಎದ್ದ. ಇವನ ಪೂರ್ವಾಪರ ತಿಳಿದಿದ್ದ ಶಿವನಿಂಗಪ್ಪ ತಾನೇ ಮುಂದಾಗಿ ಸಾಮಾನು ಹೊಂದಿಸಿ ಗಂಟು ಕಟ್ಟಿಟ್ಟು…
ಹೊಂಡಿನ್ನ ಎದ್ದೇಳು, ಗಂಟು ಕಟ್ಟಿಕೊಂಡು ಮನೀಗೆ ನಡೀ.. ತುಟ್ಟೀ ಕಾಲದಾಗ ಪ್ಯಾಟೀಯೊಳಗ ಕೈ ಕಟಗೊಂಡು ಕುಂತರ, ಅದನ್ನ ಬಾಳೇವು ಅನ್ನೋದಿಲ್ಲ ಹೊರಡು’. ಸಿದ್ಧಾರ್ಥ ತನ್ನೆಲ್ಲ ಪ್ರಚೋದನಕಾರಿ ಭಾವನೆಗಳನ್ನು ಅದುಮಿಕೊಂಡು, ಮುಕಳಿ ಸುಟ್ಟ ಬೆಕ್ಕಿನಂಗ ಬಾಲ ಮುದುರಿಕೊಂಡು ಸೋದರಮಾವನ ಸಂಗಡ ಹಾದಿ ಹಿಡಿದ…
*** *** *** ***
ನಿಚ್ಚಳ ಗೋಚರಿಸುತ್ತಿದ್ದ ತನ್ನ ಭವಿಷ್ಯತ್ತಿನ ಕನಸು ಸಂಸಾರವಾಗಿತ್ತು. ಸಿದ್ದ, ಸಿದ್ದಲಿಂಗನಾಗಿದ್ದಂವ ಸಿದ್ದಾರ್ಥನಾಗಿದ್ದು ಸಂಘಟನೆ ಸೇರಿದ ಮ್ಯಾಲ. ತನ್ನೊಳಗೆ ತುಂಬಿಕೊಂಡಿದ್ದ ಸುಸ್ಥಿರ ಸಮಾಜದ ಚಿಂತನೆಗಳು, ಆ ಹಳ್ಳಿಗೆ ಹೋದ ಮ್ಯಾಲ ಮಣ್ಣುಪಾಲಾದವು ಅನ್ನೋ ಅಳುಕೊಂದು ಕಾಡುತ್ತಿತ್ತು.
ಸಾಲಾಪುರ ಅಂದ್ರ ಸುದ್ದಾಂ ಸುದ್ದ ಮುಗ್ಧ ಹಳ್ಳಿಯಾಗಿತ್ತು ಸಿದ್ದಾರ್ಥ ಊರು ಬಿಡೋ ಕಾಲಕ್ಕ. ಎಂಟ-ಹತ್ತು ವರ್ಷಗಳ ಮ್ಯಾಲ ಊರಿಗೆ ಬಂದಾಗ ಊರಂತೂರಿನ ದಿಕ್ಕುದೆಸಿ, ಆಕಾರ, ಬಣ್ಣಗಳೆಲ್ಲ ಬದಲಾಗಿದ್ದವು. ಕಾಂಕ್ರಿಟ ಮನಿಗಳು, ಉದ್ದಾನುದ್ದ ಏರಟೆಲ್ ಟವರ್, ಕಾಲೇಜು ಹಿಂಗೆಲ್ಲ ಹಿಗ್ಗಿಸಿಕೊಂಡಿದ್ದ ಊರೊಳಗೆ ಮುದಿ ಮಂದಿಯದ್ದು ಒಂದ ರಗಳಿ… ‘ಮಳೀ ಬೆಳೀ ಆಸರ ತಪ್ಪಿರೋ ಕಾಲಕ್ಕ, ಸೇತಗಿ (ಒಕ್ಕಲುತನ) ಮ್ಯಾಲ ಮನಸು ಇಟುಕೊಂಡ ಯಾಕ ಬಂದೀ ಮತ್ತ?’ ಅಷ್ಟಿಷ್ಟು ಕಲಿತವರೆಲ್ಲ ನೌಕರಿ ಅಂತ ಊರು ಬಿಡತಿರಬೇಕಾದ್ರ ಸಾಲ್ಯಾಗ ನಂಬರ ತಗೊಂಡ ಪಾಸಾದ ಹೊಡುಗ ರೈತಾಪಿ ಮಾಡ್ತೀನಿ ಅಂತ ಬಂದಿದಾನ ಅಂದ ಮ್ಯಾಲ ಅಲ್ಲಿ ಏನೋ ಎಡವಟ್ಟ ಆಗೇದ – ಅನ್ನೋ ತರ್ಕದ ನೂರಾರು ಕತಿಗಳ ಗುಲ್ಲೆದ್ದಿತ್ತು. ಹತ್ತು ಸಿಗರೇಟ್ ಸೇದುತ್ತಿದ್ದಂವ ಚೌಕಡಿಯೊಳಗಿನ ಮರ್ಯಾದೆಗೆ ಅಂಜಿ ಎರಡಕ್ಕಿಳಿಸಿದ್ದ. ಒಂದು ಸಂಜೆ ಮುಂದಲ ವಾಕಿಂಗ್ ವ್ಯಾಳ್ಯಾಕ್ಕ, ಇನ್ನೊಂದು ಮುಂಜಾಲೆ ಮಗದುಮ ಸಾಹೆಬನ ಚಾದಂಗಡಿ ಕೌಣೆಳ್ಳೀನ ಮರೆಯಲ್ಲಿ. ಮಾತು ಮರೆತವನಂತಿದ್ದ ಸಿದ್ದಾರ್ಥನ ಹೊಗೆ ಸುರುಳಿಯಾಗಿ ಉರಳಿ ಹೋದಂತೆ ಲಹರಿಯ ಚಿಂತನೆಗಳು ಕೆದಕುತ್ತಿದ್ದವು. ತನ್ನೂರಿನ ಸಾಮಾಜಿಕ ವೈಪರೀತ್ಯ, ಶೋಷಣೆ, ರಾಜಕಾರಣದ ಕುಹಕತೆ, ನಿರುದ್ಯೋಗ, ಸಮಾನತೆ, ಜಮೀನ್ದಾರರ ಅಟ್ಟಹಾಸ, ಹಿಂಗ ಮಾತು ಹೊಂಡುತ್ತಿದ್ದ ಹಾಗೆ ಮಕ್ತುಮ್ಮನ ಸುಪ್ತ ಪ್ರಜ್ಞೆಯಲ್ಲೆಲ್ಲೋ ಹುದುಗಿಕೊಂಡಿದ್ದ ಕ್ರಾಂತಿಕಾರಿ ಮನಸ್ಸನ್ನು ಚಿವುಟಿದಂತಾಗಿತ್ತು.
‘ಸರ ನೀವು ಶಹರದಾಗ ಓದಿದರೂ…ಮತ್ತ ಯಾವ ಸುಖಕ್ಕ ಹಳ್ಳಿಗೆ ಬಂದಿದ್ದಿರೀ?’ ಮಗದುಮ್ ಕೇಳಿದ.
‘ಅದೊಂದು ಸಣ್ಣ ಕಾರಣಕ್ಕ ನನ್ನ ಕಟ್ಟಿ ಹಾಕಿದರು. ತಂದಿ/ತಾಯಿ ಅನ್ನೋ ಸೆಂಟಿಮೆಂಟಿನ ಬೇಲಿಯೊಳಗೆ ನನ್ನ ಪ್ರಜ್ಞೆಯನ್ನ ಸುಟ್ಟು ಹಾಕಿದರು.’ ದಿನಕಳೆದಂತೆ ಇಬ್ಬರ ಸಂಬಂಧ ಬಿಗಿಯಾಗುತ್ತಾ ಹೋಯಿತು. ಬ್ಯಾಸಗೆಯ ಒಂದು ದಿನ ಮಧ್ಯಾಹ್ನ ಮುರದು ಕಟ್ಟುವ ಆವೇಶದಲ್ಲಿ ಮಗದುಮ್ ಮಲಗಿದ್ದ. ಅದೊಂದು ವಿಚಿತ್ರವಾದ ಕನಸು…
ಊರು ಸೀಮೆಯ ಭೂಮಿಯನ್ನು ಒಕ್ಕಲಿಗರು ಏಕತ್ರವಾಗಿ ಹದಗೊಳಿಸುತ್ತಿರುವಾಗ ಮಳೆ ಬಂತು. ಅವರೆಲ್ಲರೂ…. ಸೀಮೆ, ಬದು, ಬಾರ್ಡರ್, ಬೇಲಿ, ಹದ್ದು, ಸರಹದ್ದುಗಳಿಲ್ಲದ ಬಯಲು ನೆಲದಲ್ಲಿದ್ದಾರೆ. ಅಲ್ಲಿ ಭೂಮಿ ಇಲ್ಲದವರು ಇಲ್ಲ, ಜಮೀನ್ದಾರರೂ ಇಲ್ಲ. ಅಯ್ಯನೋರಿಂದ ಆಯಾಗಾರತನಕ ಯಾರೂ ಮ್ಯಾಲ್ಲಿಲ್ಲ ಇನ್ಯಾರೂ ಕೆಳಗಿಲ್ಲ. ಗೆರಿ ಕೊರಿದಿಟ್ಟ ಶ್ರಮಿಕನ ಬದುಕದು. ಊರಂತೂರಿಗೆ ಪ್ರತಿಯೊಬ್ಬನೂ ಹಿರೀಕ. ಮುಪ್ಪಿನ ಮಂದಿ ಹಾವು-ಏಣಿ, ಗಿಡಮಂಗ್ಯಾನಾಟ, ಚಿನ್ನಿ-ಫನ್ನಿ, ಗುಂಡಾ, ಗಜ್ಜಗಾ ಆಡುತ್ತಿದ್ದರು. ಅಲ್ಲಿ ಕೋರ್ಟು-ಕಛೇರಿ ಕೊಂಡವಾಡುಗಳೇ ಇಲ್ಲ. ಬುದ್ದದೇವನ ಮುಂದೆ ಕಪ್ಪು ಜನ ಕೈಮುಗಿದು ಹೋಗುತ್ತಿದ್ದರು. ಅವರೆಲ್ಲರ ಬಣ್ಣ, ಮೈಕಟ್ಟು, ಆಕಾರ, ಇರುವಿಕೆಯ ವಿನಯ ಒಂದೇ ಅಚ್ಚಿನಲ್ಲಿ ಅದ್ದಿ ತಗದಂತಿತ್ತು. ಸಮೂಹದ ಸಾಮಾನ್ಯನೂ ಗೌರವಾನ್ವಿತ ವ್ಯಕ್ತಿ. ಆ ನಾಯಕ ಅವನೊಬ್ಬ ಕತ್ತೆಗಳ ಮಾಲೀಕ, ಊರವರ ಅರಿಬೆ ತೊಳೆಯುವ ಅಗಸ. ಮಂದ ಬೆಳಕಿನ ಅಮಲು ಕಣ್ಣೆವೆಯ ಮ್ಯಾಲಿತ್ತು. ಕನಸುಗಳೇ ಕಾಣದಾಗಿದ್ದ ಅವರಲ್ಲೊಬ್ಬ ‘ನಾನು’ ಸೇರಿದನು. ನಾನು, ನನ್ನದು ಎಂದು ಬಲಹೀನರ ಬಗ್ಗು ಬಡಿದು… ನೆತ್ತರು ಹರಿದಷ್ಟು ಭೂಮಿಗೆ ಬೇಲಿ ಕಟ್ಟಿಕೊಂಡನು. ದಬ್ಬಾಳಿಕೆ, ಶೋಷಣೆ, ದೌರ್ಜನ್ಯದ ಪಾಳೆಯ ಸುರುವಾಯಿತು.
ಮಕ್ತುಮ್‍ನ ಕನಸೊಡೆದು ಎದ್ದು ಕುಳಿತ. ತನ್ನ ತಾನು ಹದಗೊಳಿಸಿಕೊಂಡು ಒಂದು ದಿನ ಸಿದ್ದಾರ್ಥನನ್ನು ಕೇಳಿದ, ‘ಈ ವ್ಯವಸ್ಥೆ, ನ್ಯಾಯ-ಅನ್ಯಾಯಗಳಿಗೆಲ್ಲ ಪರ್ಯಾಯವೇನು? ಚೌಕಟ್ಟನ್ನು ಮುರಿದು ಕಟ್ಟಬೇಕು. ಅದಕ್ಕಾಗಿ ಯುವಕರನ್ನು ಸಂಘಟಿಸಬೇಕು. ಬಂದೂಕು ಹಿಡಿದಾದರೂ, ರಕ್ತ ಕೊಟ್ಟಾದರೂ, ಬದಲಾವಣೆ ತರಬೇಕು’ ಕೇಳಿದ ಪ್ರಶ್ನೆಗೆ ತಾನೆ ಉತ್ತರ ಹೇಳುತ್ತ ಹುರಿಗೊಳಿಸಿಕೋಂಡು ಬಿಟ್ಟಿದ್ದ. ಒಂದು ದಿವಸ ಹೊರಡಲನುವಾದ ಅವನ ಬೆನ್ನ ಚಪ್ಪರಿಸಿ ಸಿದ್ದಾರ್ಥ ಗೌತಮಿಯ ವಿಳಾಸದೊಂದಿಗೆ ಸಂಪೂರ್ಣ ವಿಶ್ವಾಸಿಕನಾಗಿ ಕಳಿಸಿಕೊಟ್ಟಿದ್ದ. ಅಪ್ಪ-ಅವ್ವ ಎರಡೂ ಈಟೇಈಟು ಮೂತಿ ಮಾಡಿಕೊಂಡು ‘ಹೋಗಿ ಛಲೋ ಹೆಸರು ಮಾಡು’ ಇದರ ಸುತ್ತ ತಮ್ಮ ಬುದ್ದಿ ಮಾತು ಹೆಣೆದಿದ್ದರು.
*** *** *** ***
ಗೌತಮಿಯ ಪತ್ರಿಕಾಲಯದಲ್ಲಿ ಮಕ್ತುಮ್ ಕಾಯುತ್ತ ಕುಳಿತ್ತಿದ್ದ. ದೋನ್ಶೇ ಕಿಲೋಮೀಟರ್ ದೂರದಿಂದ ಬಂದವನ ಬಗಲಲ್ಲಿ ಜೋಳಿಗೆ ಇತ್ತು. ನಾಲ್ಕಾರು ಪುಸ್ತಕ, ಹವಾಯಿ ಚಪ್ಪಲಿ, ನೀರು ಹಚ್ಚೀ ನೀಟಾಗಿ ತಲೆ ಬಾಚಿಕೊಂಡು, ಕೈ-ಕಪ್ಪ ನೆಹರು ಶರ್ಟ್ ಕರೀ ಬಣ್ಣದ ಪ್ಯಾಂಟ್ ಹಿಂಗ ಒಂದಕ್ಕೊಂದು ಹೊಂದಾಣಿಕೆ ಇಲ್ಲದೆ ಅಸಂಬದ್ಧವಾಗಿತ್ತು ಅವನ ದಿರಿಸು. ಜಗದ ಜೀವನಕ್ಕೆ ಹೊರತಾದವನಂತೆ ಒಂದು ತೆರನಾದ ಹುಮ್ಮಸ್ಸಿನ, ಆವೇಶದ, ಕೆಚ್ಚೆದೆಯ ಕಳೆಯಲ್ಲಿ ಅನ್ಯಮನಸ್ಕನಾಗಿದ್ದ. ಅವ್ವನ ಕಣ್ತುಂಬ ನೀರು ತುಂಬಿತ್ತು. ಇವನ ತಲೆ ತುಂಬ ಸಿದ್ಧಾರ್ಥ ಬೋಧಿಸಿದ್ದ ಸಿದ್ಧಾಂತಗಳೇ ತುಂಬಿದ್ದವು. ‘ನಿನಗಂತೂ ದೇವರ ಮ್ಯಾಲ ನಂಬಿಕೆ ಇಲ್ಲ, ಮಾಬುಸುಭಾನಿ ನಿನ್ನ ಕಾಯತಾನು. ನಿನಗ ಬೇಶ ಕೆಲಸ ಸಿಕ್ಕರ ಬರೋ ಉರುಸಿನ್ಯಾಗ ದೀಡ್ ನಮಸ್ಕಾರ ಹಾಕ್ತಿನಿ.. ನಮ್ಮದೀಟು ನೆನಪಿರಲಿ. ನಿನ್ನಪ್ಪ ಅಳ್ಳೆದೆ ಗಂಡಸು, ಹೊದಕೂಡಲೇ ನೀನಿರೋ ಜಾಗಾದ ಪತ್ತಾ ಕಳಿಸು’ ಅವ್ವ ತನ್ನ ಸೆರಗು ನೀರೊಳಗೆ ಅದ್ದಿ ಬಸ್ ಸ್ಟ್ಯಾಂಡ್ ತನಕ ಬಂದು ಟಾಟಾ ಹೇಳಿದ್ದಳು. ಮುಗುಮ್ಮಾಗಿ ಕುಳಿತಿದ್ದ ಬಾಬಾ, ‘ಹುಷಾರು, ಇವತ್ತಿನ ಕಾಲಮಾನ ಬರೋಬ್ಬರಿ ಇಲ್ಲಾ… ಆಜು-ಬಾಜು ಸಂಭಾಳಿಸಿಕೊಂಡಿರು, ನಾನು ಈ ತನಕ ಯಾರ ಕಡೀಂದಲೂ ಬೆರಳ ಮಾಡಿಸಿಕೊಂಡವನಲ್ಲ, ಹೆಸರು ತಗೊಂಡು ಬಾ, ವರಸಬ್ಯಾಡ…’ ನಾಲ್ಕ ಅಕ್ಷರ ಓದಿದವ ಊರು ಬಿಡಬೇಕು ಅನ್ನೊದು ಸಂಸ್ಕøತಿನ ಆಗಿರುವಾಗ ಮಗದುಮನು ಪ್ಯಾಟೀಲಿರಬೆಕು, ದೊಡ್ಡಮನಶ್ಯಾ ಆಗಬೇಕು, ನಾಲ್ಕಾರು ಮಂದಿಯೊಳಗೆ ಒಡ್ಯಾಡಬೇಕು, ತನ್ನ ಜಿಂದಿಗಿ ತಾನು ಕಟ್ಟಿಕೊಳ್ಳಲಿ ಅನ್ನುವ ಭರವಸೆಯಲ್ಲಿ ಮುದುಕರಿಬ್ಬರೂ ಮಗನಿಗೆ ವಿದಾಯ ಹೇಳಿದರು.
ಮಗದುಮನ ಮುಂದೆ ತಲೆ ತುಂಬ ಸೆರಗ ಹೊತ್ತು, ಒಂದರಗಟ್ಟಿಯಗಲ ಕುಂಕುಮ ಇಟ್ಟಿದ್ದ ಮುತ್ತೈದೆ ನಿಂತಿದ್ದಳು. ‘ಕೂಸ ಬಾ ಇಲ್ಲಿ ನಿನಗೊಂದು ಮಜಕೂರ ಹೇಳೋದದ’. ಏನನ್ನೆಲ್ಲಾ ತೋರಿಸುವವರಂಗೆ ಹೊರಗ ಕರಕೊಂಡ ಬಂದು ಆಪೀಸಿನ ಮೆಟ್ಟಿಲು ಮ್ಯಾಲ ಕೂಡಿಸಿದಳು.
‘ಹೆಂಗ ಹೇಳೋದು ನಿನಗ…. ನಿಮ್ಮಪ್ಪ-ಅವ್ವ ಇಬ್ಬರೂ ಸತ್ತರಂತ ನೋಡು’
ಸಂಬಂಧವಿಲ್ಲದ ಹೆಣಮಗಳು ಖಾಸಗಿಯಾಗಿ ತನ್ನ ಮನೀ ಬಗ್ಗೆ ಹೇಳತಿರೋದು ಅಂದ್ರ ಈಕೇ ಬದುಕಿನ ಲೆಕ್ಕಾಚಾರದ ಹಳಿ ತಪ್ಪೆದ… ಅನ್ನೋದು ಖಾತ್ರಿಯಾಯಿತು.
‘ಯಾಕ ನನ್ನ ಮ್ಯಾಲ ಸಂಶಯ ಎನು? ಸತ್ತವರ ಹೆಣದ ಮುಂದ ಅಳಲಿಕ್ಕ ಯಾರು ಇಲ್ಲದ್ದಕ್ಕ ನನ್ನ ಕರಿಲಾಕ ಬಂದಿದ್ದರು… ಅದಕ್ಕ ನಾ ಗರತೇರ ಥರಾ ತಯಾರಾಗಿ ಬಂದೀನಿ. ನೀನೂ ಲಗು-ಲಗು ಹೊಂಡು, ಹೊಂಡು, ಹೊಸ ಅರಿಬಿ ಹಾಕ್ಕೊಂಡು ತಯ್ಯಾರಾಗು, ಗೋಳ್ಯಾಡಕೊಂಡು ರೋಂಯ್ಯೋ… ಅಂತ ಅಳಬೇಕು. ಇನ್ನು ಎನೇನೋ ಹೇಳೋಳಿದ್ದಳು ಎದುರಿಗೆ ಗೌತಮಿ ಬಂದಾಗ ಆ ಹುಚ್ಚಿ ಧಡಕ್ಕನೆ ಎದ್ದು ‘ಅಯ್ಯ ಬಂತವ್ವ ಕರೀ ಸೆರಗು ನಾ ಹೊಕ್ಕೇನಿ ನೀ ಲಗು ತಯ್ಯಾರಾಗು’ ಕಥೆಯ ಓಂ ಪ್ರಥಮದಲ್ಲಿ ಕಂಡ ಹುಚ್ಚಿ ಹಾಡುತ್ತ ನಗಾಡುತ್ತಾ ಹೊರಟು ಹೋದಳು.
‘ನಿವು ಸಾಲಾಪುರದವರು, ಮಕ್ತುಮ್ ಏನು?’
‘ಹೌದ್ರೀ ಮೆಡಮ್ ಸಿದ್ಧಾರ್ಥ ಅವರು ಕಳಿಸ್ಯಾರು’
ಮಕ್ತುಮ್ ಬಂದಾಗಿನಿಂದ ಯಾರು ಏನೂ ಕ್ಯಾರೇ ಅಂದಿರಲಿಲ್ಲ. ಆಫೀಸಿನ ಮೂಲೆಯ ಖುರ್ಚಿಯೊಂದರ ಮೇಲೆ ಬ್ಯಾಗಿಟ್ಟು ಅತ್ತಿಂದಿತ್ತ ಸುಳಿದಾಡುತ್ತಿದ್ದ. ಇಳಿ ಹೊತ್ತಿಗೆ ಮೆಡಮ್ ಇವನಿದ್ದಲ್ಲಿಗೆ ಬಂದವರು ಹೆಗಲ ಮೇಲೆ ಕೈಹಾಕಿ ಹರಟ ತೊಡಗಿದರು. (ಮೊದಲ ಸಲ ಹೆಂಗಸೊಬ್ಬಳು ಅವನೊಂದಿಗೆ ಅಷ್ಟು ಆತ್ಮೀಯವಾಗಿ ನಡೆದುಕೊಂಡದ್ದು.) ಸರಾಗವಾಗಿ ಸಿದ್ಧಾರ್ಥ ಅಷ್ಟು ದಿನ ಹೇಳಿದ್ದ ಮಾತುಗಳನ್ನೆಲ್ಲ ಇವಳು ತನ್ನದೇ ಧಾಟಿಯಲ್ಲಿ ಆವೇಶ, ಆಕ್ರೋಶಗಳ ಏರಿಳತದಲ್ಲಿ ನಿಂತ ನೀರಿನ ಬುಡ ಅಲ್ಲಾಡಿಸಲು ಹುರಿದುಂಬಿಸುತ್ತಿದ್ದಳು. ಸಡಿಲಿಸಲಾಗದ ನರನಾಡಿಗಳಲ್ಲಿ ಮೈ-ಮನಸ್ಸು ಬಿಗುಪುಗೊಳಿಸಿ ಎದೆ ಸೆಟೆಸಿ ನಿಂತುಕೊಂಡೇ ಇದ್ದ ಮಕ್ತುಮ್.
ಅದೇ ಆಷಾಡದ ಸುರುವಾತಿಗೆ ಶಾಲಾ-ಕಾಲೇಜು ಸೇರಿದ್ದ ಹುಡುಗರು ಪುಸ್ತಕ, ಪೆನ್ನು, ಹೊಸ ದಿರಿಸು ಬ್ಯಾಗುಗಳ ಹೊರೆ ಹೊತ್ತು ಹೊಸ ತರಗತಿಗೆ ಹೊರಟಿದ್ದರು. ಎದೆ ಸೆರಗು ಚೆಲ್ಲಿ ಧಾವಿಸುತ್ತಿದ್ದ ಹುಚ್ಚಿಯನ್ನು ಕಂಡು ಒಂದಿಬ್ಬರು ಹೆದರಿದರೆ, ಒಂದಷ್ಟು ಮಂದಿ ನಗೆಚಾಟಗಿ ಮಾಡುತ್ತಿದ್ದರು. ಮಕ್ತುಮ್ ಮನದ ಹೆಜ್ಜೆ ಮಜಲಲ್ಲಿ ಮುಳ್ಳ ಹೆಜ್ಜೆ ಕುಣಿಯುತ್ತಿದ್ದ. ಆಯ ತಪ್ಪಿ ಬಿದ್ದರೆ ರೊಟಗೊಳಕೆ ಮಳ್ಳಲ್ಲಿ ಬೀಳುವನು. ಹುಚ್ಚಿ ತೇಕುತ್ತ ನಿಂತಳು ‘ಯೆ ಹುಡುಗಾ ನಾಳೀ ಮೀನ ಮಹೂರ್ತದಾಗ ನನ್ನ ಮದುವೀ ಐತಿ… ಬಾ ಲಗೂಣ, ನಮ್ಮಪ್ಪ ನಿನ್ನ ಊಟಕ್ಕ ಕರಕೊಂಡ ಬಾ ಅಂದಾನು. ನಡೀ ಹೊಗೂಣು. ಮಗದುಮ್ ಅವಳ ಮಾತು ನಿರ್ಲಕ್ಷಿಸುತ್ತ ಬ್ಯಾಗು ಹೆಗಲೇರಿಸಿಕೊಂಡು ಹೊರಟ.. ಹುಚ್ಚಿ ಕೇಳಿದಳು-
‘ಎಲ್ಲಿ ಹೊಂಟಿದಿ?’
‘ಕಾಡಿಗೆ’
ನೀನು ಹೊಂಟಿ… ಹೋಗು. ನನ್ನ ಮದುವೀಗೆ ಯಾರು ಬರೋದಿಲ್ಲ?
‘ಬದಲಾವಣೆಗೆ ಬಂದೂಕೊಂದೇ ಮಾರ್ಗ ಎಂದು ಸಂಕಲ್ಪಿಸಿಕೊಂಡಿದ್ದ ಮಗದುಮ್‍ನ ಅಡ್ಡಗಟ್ಟಿದ ಹುಚ್ಚಿ- ‘ನೋಡ್ ತಮ್ಮ ಸುಡುಗಾಡಕ್ಕ ಹೆಣ ಭಾಳ ಬಂದಾವು, ಸುಡೋರು ದಿಕ್ಕಿಲ್ಲ’ ಎಂದಳು. ಅವಳನ್ನು ಲೆಕ್ಕಿಸದೆ ಇವನು ಸರಸರನೆ ನಡೆದು ಹೋದ. ಕಣ್ಮರೆಯಾಗುವ ತಿರುವಿನಂಚಿನಲ್ಲಿದ್ದಾಗ ಹುಚ್ಚಿ ಜೋರಾಗಿ ಕೂಗುತ್ತಿದ್ದಳು.
ಜನಕ್ಕೆ ಮರಳೋ
ಜಾತ್ರೆಗೆಮರಳೋ
ಶಂಟಕ್ಕೆಮರಳೋ ಶಂಭೋಲಿಂಗ…….
*****