ಕಾಗೆಯ ಕೊಳಲು: ರೇಣುಕಾ ಕೋಡಗುಂಟಿ


ಅದೊಂದು ದಟ್ಟ ಅರಣ್ಯ. ಆ ಅರಣ್ಯದ ಒಂದು ಭಾಗವು ಗುಂಪು ಗುಂಪಾದ ಹಚ್ಚ ಹಸಿರಿನಿಂದ ಕೂಡಿತ್ತು. ಅಲ್ಲಿ ಎಲ್ಲಾ ಬಗೆಯ ಮರಗಳು ಬೆಳೆದು ನಿಂತು ತಂಪು ಸೂಸುತ್ತಾ, ಹೂವುಗಳ ಪರಿಮಳ ಬೀರುತ್ತಾ ಕಣ್ಣಿಗೆ ಮುದ ನೀಡುವಂತಿದ್ದವು. ಆ ಗಿಡಗಳ ಕಾಲ ಅಡಿಯಲ್ಲಿ ನೀರಿನ ಸಣ್ಣ ಹಳ್ಳ ಜುಳು ಜುಳು ಸದ್ದು ಮಾಡುತ್ತಾ ಹರಿಯುತ್ತಿತ್ತು. ಇದರೊಂದಿಗೆ ಹಕ್ಕಿಗಳ ಕಲರವವೂ ಜೊತೆಗೂಡಿ ಸಂಗೀತ ಹೊಮ್ಮಿದಂತಿತ್ತು. ಅರಣ್ಯದ ಈ ಒಂದು ಭಾಗವು ಹಕ್ಕಿಗಳಿಗೆ ಮೀಸಲಾಗಿತ್ತು. ಎಲ್ಲಾ ಬಗೆಯ ಹಕ್ಕಿಗಳು ಅಲ್ಲಿ ನೆಲೆಸಿದ್ದವು.

ಒಂದು ದಿನ ಹಕ್ಕಿಗಳೆಲ್ಲವು ಸೇರಿ ಒಂದು ದಿನ ಎಲ್ಲರು ಸೇರಿ ಹಬ್ಬವನ್ನು ಮಾಡೋಣ ಎಂದು ಮಾತನಾಡಿದವು. ಮತ್ತು ಅಂದು ಆಸಕ್ತಿವುಳ್ಳ ಹಕ್ಕಿಗಳು ತಮ್ಮಲ್ಲಿದ್ದ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಇದೆ ಎಂದು ನಿರ್ಧರಿಸಲಾಯಿತು. ಹಬ್ಬದ ಸಂಭ್ರಮಕ್ಕಾಗಿ ಹಕ್ಕಿಗಳೆಲ್ಲ ಸಂತಸ ಸಡಗರದಿಂದ ವೇದಿಕೆಯೊಂದನ್ನು ಸಿದ್ಧಪಡಿಸಿ ಬಗೆಬಗೆಯ ಆಹಾರಗಳನ್ನು ಏರ್ಪಡಿಸಿದ್ದವು.

ಹಬ್ಬದ ದಿನ ಬಂದಿತು ಅಂದು ಎಲ್ಲಾ ಹಕ್ಕಿಗಳು ಬಹಳ ಸಂತೋಷದಿಂದ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದವು. ಹಕ್ಕಿಗಳಿಗೆಲ್ಲ ನಾಯಕನಾಗಿದ್ದ ನವಿಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿತ್ತು. ಕೆಂಬೂತ ನಿರೂಪಣೆ ಕೆಲಸವನ್ನು ವಹಿಸಿಕೊಂಡಿತ್ತು. ಮತ್ತು ಚಂದ್ರಮುಕುಟ ಹಕ್ಕಿ, ನೀಲಕಂಠ ಹಕ್ಕಿ ಎರಡೂ ಸ್ಪರ್ಧೆಯ ನಿರ್ಣಾಯಕರ ಕೆಲಸವನ್ನು ವಹಿಸಿಕೊಂಡಿದ್ದವು. ಹದ್ದುಗಳು ಹಾಗು ಗೂಬೆಗಳು ಕಾರ್ಯಕ್ರಮದ ಸಂಘಟನಾಕಾರರಾಗಿ ಕಾರ್ಯಕ್ರಮದ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದವು.

ಪ್ರತಿಭಾ ಪ್ರದರ್ಶನ ಆರಂಭವಾಯಿತು ಮೊದಲಿಗೆ ಎರಡು ಸಣ್ಣ ಮಿಂಚುಳ್ಳಿಗಳು ಬಂದು ಪ್ರಾರ್ಥನೆ ಗೀತೆ ಹೇಳಿದವು. ನಂತರ ಗಿಳಿಯು ಬಂದು ನೃತ್ಯವನ್ನು ಮಾಡಿತು. ಕೋಗಿಲೆಯೊಂದು ಹಾಡನ್ನು ಹಾಡಿತು, ನವರಂಗ ಹಕ್ಕಿಯು ವಾದ್ಯವನ್ನು ನುಡಿಸಿತು. ಕೊಕ್ಕರೆಯೊಂದು ತನ್ನ ಭಿನ್ನ ನಡಿಗೆಯನ್ನು ಪ್ರದರ್ಶಿಸಿ ಎಲ್ಲರನ್ನು ನಗಿಸಿತು. ಕವುಜಗ ಹಕ್ಕಿಯು ನಗೆಹನಿಯನ್ನು ಹೇಳಿತು. ಟುವ್ವಿ ಹಕ್ಕಿ ಮಿಮಿಕ್ರಿ ಮಾಡಿತು. ಪಾರಿವಾಳ ಯೋಗಾಸನ ಮಾಡಿತು. ಗುಬ್ಬಿಯು ತನ್ನ ಕಾಲಿನಿಂದ ಬಣ್ಣವನ್ನು ಬಳಸಿ ಚಿತ್ರವನ್ನು ಬಿಡಿಸಿತು. ಇವರೆಲ್ಲರು ಪ್ರದರ್ಶನ ನೀಡುವುದನ್ನು ಕಂಡ ಕಾಗೆಯೊಂದು ಉತ್ಸಾಹಗೊಂಡು ತಾನು ಹಾಡನ್ನು ಹಾಡುವುದಾಗಿ ಬಂದು ವೇದಿಕೆಯ ಮೇಲೆ ಬಂದು ನಿಂತಿತು.

ಕಾಗೆಯು ಹಾಡನ್ನು ಹಾಡಲು ಪ್ರಾರಂಭಿಸಿತು ಆಗ ಅಲ್ಲಿದ್ದ ಹಕ್ಕಿಗಳು ‘ಛೇ ಎಷ್ಟೊಂದು ಕರ್ಕಶವಾಗಿದೆ ಕೇಳಲಾಗದು’ ಎನ್ನುತ್ತಾ ಮೂಗು ಮುರಿದವು. ಇನ್ನು ಕೆಲವು ಹಕ್ಕಿಗಳು ಕಿವಿಯನ್ನು ಮುಚ್ಚಿಕೊಂಡು ‘ಇದುವರೆಗು ನಾವು ಎಲ್ಲಾ ಪ್ರದರ್ಶನಗಳಿಂದ ಎಷ್ಟೊಂದು ಖುಷಿಯಾಗಿ ಇದ್ದೆವು, ಈ ಕಾಗೆ ಬಂದು ತನ್ನ ಕೆಟ್ಟ ದನಿಯಿಂದ ಹಾಡಿ, ನಮ್ಮ ಸಂತೋಷವನ್ನು ಹಾಳು ಮಾಡಿತು’ ಎನ್ನುತ್ತಾ ಕಾಗೆಗೆ ಬೈದವು. ಇದನ್ನು ಕಂಡ ಕಾಗೆಗೆ ಅವಮಾನ ಆಯಿತು ಮನಸ್ಸಿಗೆ ನೋವಾಗಿ ವೇದಿಕೆಯಲ್ಲೆ ಅಳಲು ಪ್ರಾರಂಭಿಸಿತು. ವೇದಿಕೆ ಮೇಲಿದ್ದ ಹಕ್ಕಿಗಳು ಸಮಾಧಾನಿಸಲು ಮುಂದಾದವು. ಆದರೂ ಕಾಗೆ ಅವರ ಮಾತಿಗೆ ಅವಕಾಶ ಕೊಡದೆ ತನ್ನ ರೆಕ್ಕೆಗಳನ್ನು ಬಿಚ್ಚಿ ಅಲ್ಲಿಂದ ಹಾರಿ ಹೋಯಿತು. ನೋವಿನಲ್ಲಿ ಎಲ್ಲಿಗೆ ಹೋಗುತ್ತಿರುವೆನೆಂಬ ಅರಿವು ಇಲ್ಲದೆ ಕಾಗೆ ತುಂಬಾ ದೂರ ಹಾರಿ ಬಂದಿತು.

ಅಲ್ಲಿ ಒಬ್ಬ ಮುದುಕ ಬಿದಿರಿನಿಂದ ಸಣ್ಣ ಸಣ್ಣ ಕೊಳಲುಗಳನ್ನು ತಯಾರಿಸುತ್ತಾ ಕುಳಿತಿದ್ದನು. ಒಂದು ಕೊಳನ್ನು ಹಿಡಿದು ಆತ ಕೊಳಲನೂದಿದಾಗ ಕಾಗೆ ಆ ಧ್ವನಿಯತ್ತ ನೋಟ ಬೀರಿತು. ಆಗ ಮುದುಕ ಕಾಗೆಯ ಕಣ್ಣಿಗೆ ಬಿದ್ದನು. ಇಂಪಾಗಿರುವ ಆ ಕೊಳಲ ದನಿಯನ್ನು ಕೇಳಿ ಕಾಗೆಯು ಕುತೂಹಲದಿಂದ ಕೆಳಗೆ ಇಳಿದು ಆ ಮುದುಕನ ಬಳಿ ಬಂದಿತು. ತನಗಾದ ಅವಮಾನದ ಕಥೆಯನ್ನು ಹೇಳಿ, ತನಗೂ ಕೊಳಲನ್ನು ಊದಲು ಕಲಿಸುವಂತೆ ಆತನಲ್ಲಿ ಬೇಡಿಕೊಂಡಿತು. ಮುದುಕನು ಒಪ್ಪಿ ಕಾಗೆಗಾಗಿಯೇ ಒಂದು ವಿಶೇಷವಾದ ಸಣ್ಣ ಕೊಳಲನ್ನು ತಯಾರಿಸಿ ಕೊಳಲನ್ನು ಊದವುದನ್ನು ಕಲಿಸಿದನು. ಕಲಿತ ಮೇಲೆ ಕಾಗೆ, ಆ ಕೊಳಲನ್ನು ತನ್ನ ಎರಡೂ ಕಾಲುಗಳಲ್ಲಿ ಹಿಡಿದುಕೊಂಡು ಮೊದಲು ತಾನಿದ್ದ ಪ್ರದೇಶಕ್ಕೆ ಹೋಯಿತು.

ಒಂದು ಮರದ ಮೇಲೆ ಕುಳಿತು ಕೊಳಲನ್ನು ನುಡಿಸಲು ಪ್ರಾರಂಭಿಸಿತು. ಆ ಧ್ವನಿಯನ್ನು ಕೇಳಿದ ಹಕ್ಕಿಗಳು ಇದೇನಿದು ಇಷ್ಟೊಂದು ಇಂಪಾಗಿದೆ. ಇದುವರೆಗೂ ಇಂತಹ ಮಧುರವಾದ ಸ್ವರವನ್ನು ಕೇಳಿಯೇ ಇಲ್ಲವಲ್ಲ ಎಂದು ಅಚ್ಚರಿಯಿಂದ ಆ ಧ್ವನಿಯನ್ನು ಹರಸುತ್ತಾ ಹಕ್ಕಿಗಳೆಲ್ಲ ಹೋದವು. ಅಲ್ಲಿ ತಮ್ಮಿಂದ ಅವಮಾನಕ್ಕೊಳಗಾದ ಕಾಗೆ ಕೊಳಲನ್ನು ನುಡಿಸುತ್ತಿರುವುದನ್ನು ಕಂಡು ಎಲ್ಲಾ ಹಕ್ಕಿಗಳು ಬೆಪ್ಪಾದವು. ಅನಂತರ ಕಾಗೆಯ ಬಳಿ ಹೋಗಿ ಎಷ್ಟೊಂದು ಚೆನ್ನಾಗಿ ನುಡಿಸುವೆ, ಕೇಳಲು ತುಂಬಾ ಇಂಪಾಗಿದೆ ಮತ್ತು ಇದು ತುಂಬಾ ವಿಶೇಷವಾಗಿದೆ. ಅಂದು ನಿನಗೆ ನಮ್ಮಿಂದ ಆದ ತಪ್ಪನ್ನು ಮನ್ನಿಸು, ನಿನಗಾಗಿ ವಿಶೇಷವಾದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ, ನೀನು ಅದರಲ್ಲಿ ಈ ಕೊಳಲನ್ನು ನುಡಿಸಿ ನಮ್ಮೆಲ್ಲರನ್ನು ರಂಜಿಸಬೇಕು ಎಂದು ಕೇಳಿಕೊಂಡವು. ಕಾಗೆ ಅವರ ಮಾತಿಗೆ ಸಮ್ಮತಿ ಸೂಚಿಸಿತು.

ಕಾಗೆಯ ಕೊಳಲುವಾದನಕ್ಕಾಗಿಯೇ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅಂದು ಎಲ್ಲಾ ಹಕ್ಕಿಗಳು ಕೊಳಲು ವಾದನವನ್ನು ಬಹಳ ಸಂತೋಷದಿಂದ ಕೇಳಿದವು ಮತ್ತು ಕೊಳಲು ನುಡಿಸಿದ ಕಾಗೆಗೆ ಸನ್ಮಾನ ಮಾಡಿದವು.

ರೇಣುಕಾ ಕೋಡಗುಂಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Varadendra k
Varadendra k
4 years ago

ಬಹಳ ಉತ್ತಮವಾದ ಮತ್ತು ಅರ್ಥಗರ್ಭಿತ ಕಥೆ. ಅವಮಾನವನ್ನು ಮುಂದೆ ಇಟ್ಟುಕೊಂಡು ಛಲ ಬೆಳೆಸಿಕೊಳ್ಳಬೇಕೆಂಬ ನೀತಿಯುಳ್ಳ ಕಥೆ. ಕಾಗೆಯ ಕಥೆಗಳು ಎಂದೆಂದಿಗೂ ಮಾನವನಿಗೆ ತನ್ನು ಗುಣಗಳಿಂದ ಪಾಠ ಕಲಿಸುತ್ತಲೇ ಬಂದಿದೆ. ಅದರ ಸಾಲಿಗೆ ಸಹೋದರಿ ರೇಣುಕಾ ಕೋಡಗುಂಟಿಯವರ ಕಥೆ ಸೇರ್ಪಡೆ ಆಗುತ್ತಿದೆ. ಅಭಿನಂದನೆಗಳು.

1
0
Would love your thoughts, please comment.x
()
x