ಕಲೆ-ಸಂಸ್ಕೃತಿ

ಕಾಖಂಡಕಿಯ ವಿಶಿಷ್ಟ ಕಾರಹುಣ್ಣಿಮೆ: ನಾರಾಯಣ ಬಾಬಾನಗರ

ದಿನಾಂಕ 8-6-2015 ಸೋಮವಾರದಂದು ಕಾಖಂಡಕಿಯಲ್ಲಿ ಕಾರಹುಣ್ಣಿಮೆಯ ಸಂಭ್ರಮ. ತನ್ನಿಮಿತ್ಯ ಈ ಲೇಖನ.

ಕರಿ ಆಡಿಸು…ಶೌರ್ಯ ಪ್ರದರ್ಶಿಸು…!!
ಹೂಂಕರಿಸುವ ಎತ್ತು, ಮುಂಗಾಲುಗಳಿಂದ ಮಣ್ಣನ್ನು ಹಿಂದಕ್ಕೆ ಚಿಮ್ಮುತ್ತಾ ಎದುರಿಗೆ ನಿಂತವನನ್ನು ಕೆಂಗಣ್ಣಿನಿಂದ ನೋಡುತ್ತ ನಿಂತಿದೆ. ಎತ್ತಿನ ಮುಂದೆ ನಿಂತವನು ‘ಬಾ ಇರಿ. . ! ನೋಡೋಣ’ ಎನ್ನುವಂತೆ ಸವಾಲೆಸೆದು ಕಾದಿದ್ದಾನೆ. ಸುತ್ತಲೂ ಸಾವಿರಾರು ಜನ ನೋಡುತ್ತ ಸಾಕ್ಷಿಯಾಗಿದ್ದಾರೆ. 

ಇದು  ಕಾಖಂಡಕಿಯ ಗ್ರಾಮದಲ್ಲಿ ನಡೆಯುವ ವಿಶಿಷ್ಟ ಕಾರಹುಣ್ಣಿಮೆಯ ದೃಷ್ಯ. ರಾಜ್ಯಾದ್ಯಂತ ಕಾರಹುಣ್ಣಿಮೆಯ ಸಂಭ್ರಮ ನಡೆದರೆ, ಅವತ್ತು ಈ ಊರಲ್ಲಿ ಕಾರಹುಣ್ಣಿಮೆಯ ಆಚರಣೆ ನಡೆಯುವುದೇ ಇಲ್ಲ. ರಾಜ್ಯದ ಕಾರಹುಣ್ಣಿಮೆ ಆಚರಣೆಯಾದ ಏಳು ದಿನಗಳ ಅನಂತರ ಕಾಖಂಡಕಿಯಲ್ಲಿ ಕಾರಹುಣ್ಣಿಮೆಯ ಆಚರಣೆ ನಡೆಯುತ್ತದೆ. ಹೀಗೇಕೆ?ಅದಕ್ಕೊಂದು ಹಿನ್ನೆಲೆ ಇದೆ. 
ಇತಹಾಸ ಏನು ಹೇಳುತ್ತದೆ?  

ಕಾರಹುಣ್ಣಿಮೆಯ ದಿವಸ ಊರ ಅಗಸಿ ಬಾಗಲಿಗೆ ಕೊಬ್ಬರಿ ಬಟ್ಟಲುಗಳನ್ನು ಕಟ್ಟಿ ಅದರಲ್ಲಿ ಕಾಳುಗಳನ್ನು ಕಟ್ಟಿರುತ್ತಾರೆ. ಇದನ್ನು ಕರಿ ಎನ್ನುವರು. ಎರಡು ಎತ್ತಗಳನ್ನು ಕೊಬ್ಬರಿ ಬಟ್ಟಲು ಕಟ್ಟಿದ ದಾರವನ್ನು ಹರಿದುಕೊಂಡು ಹೋಗುವಂತೆ ಓಡಿಸಲಾಗುತ್ತದೆ. ಅದರ ಮೂಲಕ ಹಿಂಗಾರಿನ ಬೆಳೆ ಸಮೃದ್ಧಿಯಾಗಿ ಬೆಳೆಯುತ್ತದೆಯೋ ಅಥವಾ ಮುಂಗಾರಿನ ಬೆಳೆ ಸಮೃದ್ಧವಾಗಿ ಬೆಳೆ ಬೆಳೆಯುತ್ತದೆಯೋ ಎಂಬ ಭವಿಷ್ಯವನ್ನು ಅರ್ಥೈಸಿಕೊಳ್ಳುತ್ತಾರೆ ರೈತರು. 

ಬಹಳಷ್ಟು ವರುಷಗಳ ಹಿಂದೆ ಕಾಖಂಡಕಿ ಊರಿನ ಯುವಕನೊಬ್ಬ, ಸುತ್ತಲಿನ ಏಳು ಊರಿನ ಕರಿ ಹರಿದುಕೊಂಡು ಓಡಿ ಬಂದ. ಹುಡುಕಾಟದ ಅನಂತರ ಅವನು ಸಿಕ್ಕಿದ್ದು ಏಳು ದಿನಗಳ ಮೇಲೆ. ಅಂದಿನಿಂದ ತಮ್ಮೂರಿನ ಕರಿ ಕಳೆದುಕೊಂಡ ಸುತ್ತಲಿನ ಏಳು ಗ್ರಾಮಗಳಲ್ಲಿ ಈವರೆಗೂ ಕಾರಹುಣ್ಣಿಮೆಯ ಆಚರಣೆಯೇ ಇಲ್ಲ. ಇದು ಜನಜನಿತ ಕಥೆ . ಹೀಗಾಗಿ ಏಳು ದಿನಗಳ ಅನಂತರ ಶೌರ್ಯದ ಸಂಕೇತವಾಗಿ ಕಾಖಂಡಕಿಯಲ್ಲಿ ಕಾರಹುಣ್ಣಿಮೆಯನ್ನು ಆಚರಿಸಲಾಗುತ್ತದೆ. 

ಕರಿ ಆಡುವ ಆಟ…
 ಇಲ್ಲಿ ಕರಿ ಆಡುವ ಆಟ ನಡೆಯುತ್ತದೆ. ಅವತ್ತು ಬೆಳಗಿನಿಂದಲೇ ಸಂಭ್ರಮದ ವಾತಾವರಣ ಆವರಿಸಿಕೊಳ್ಳುತ್ತದೆ. ರೈತರೆಲ್ಲಾ ಎತ್ತುಗಳಿಗೆ-ಹಸುಗಳಿಗೆ ಬೆಳಗಿನಿಂದ ಬಣ್ಣ ಹಚ್ಚಿ ಸಿಂಗಾರಗೊಳಿಸುವರು. ಈರುಳ್ಳಿಯನ್ನು ದುಂಡಗೆ ಹೋಳಿ, ಹೋಳನ್ನು ಬಣ್ಣದಲ್ಲಿ ಅದ್ದಿ ದನಕರುಗಳ ಮೇಲೆ ಒತ್ತುವರು. ನೋಡಲು ಚಿತ್ತಾರದಂತೆ ಕಾಣುವುದು. ಗೊಂಡೆ ಹಾಕಿ, ಹವಳದ ಸರಗಳನ್ನು ಹಾಕಿ ರೈತರು ಆನಂದಿಸುವರು. ಕೊರಳಲ್ಲಿ ಗೆಜ್ಜೆ ಸರಗಳನ್ನು ಕಟ್ಟಿ ನಿನಾದದ ಸವಿಯನ್ನು ಉಣ್ಣುವರು. 

ಉಳ್ಳವರು ತಮ್ಮ ಎತ್ತುಗಳನ್ನು ಮೆರವಣಿಗೆಗೆ ಸನ್ನದ್ಧಗೊಳಿಸುವರು. ಕರಡಿ ಮಜಲು,ಸನಾದಿಯ ತಾಳದೊಂದಿಗೆ ಕುಣಿಯುವವರ ಹೆಜ್ಜೆ ಮೇಳೈಸಿ ಹರುಷದ ಕೇ. . ಕೇ. . ಮುಗಿಲು ಮುಟ್ಟುತ್ತದೆ. ಮೆರವಣಿಗೆಯ ಸಡಗರ ಮುಗಿಯುತ್ತಿದ್ದಂತೆಯೇ ಕರಿ ಆಟಕ್ಕೆ ವೇದಿಕೆ ಸಿದ್ಧವಾಗಿರುತ್ತದೆ. ಊರ ಅಗಸಿಯ ಮುಂದೆ ಯುವಕರ ತಂಡ ಇರಿಯುವ ಎತ್ತುಗಳನ್ನು ಹಿಡಿದು ತರುತ್ತಾರೆ. ಒಂದೊಂದು ಎತ್ತಿಗೆ ನಾಲ್ಕೈದು ಹಗ್ಗಗಳನ್ನು ಕಟ್ಟಿರುತ್ತಾರೆ. ಎದೆಯ ಗುಂಡಿಗೆ ಗಟ್ಟಿಯಿದ್ದವನು ಎತ್ತಿನ ಮುಂದೆ ಬರುತ್ತಾನೆ. ಇರಿಯಲು ಬರುವಂತೆ ಕೆಣಕುತ್ತಾನೆ. ಇದನ್ನು ಕರಿ ಆಡಿಸುವುದೆನ್ನುತ್ತಾರೆ. ಹಾಗೆ ಕರಿ ಆಡಿಸಲು ಬರುವವನು ಮೈಯೆಲ್ಲಾ ಕಣ್ಣಾಗಿರಬೇಕು. ಬೇರೆ ಬೇರೆ ದಿಕ್ಕುಗಳಿಂದ ಓಡುತ್ತ ನೆಗೆಯುತ್ತ ಬರುವ ಎತ್ತುಗಳ ಕಡೆಗೆ ಲಕ್ಷ್ಯವಿರಬೇಕು. ಮೈಮರೆತರೆ ಓಡಿ ಬರುವ ಎತ್ತುಗಳು ಎತ್ತಿ ನಭದೆಡೆಗೆ ಚಿಮ್ಮುತ್ತವೆ. ಈ ಆಟ ಸುಮಾರು ಎರಡು ಗಂಟೆಗಳವರೆಗೆ ರೋಮಾಂಚಕಾರಿಯಾಗಿ ನಡೆಯುತ್ತದೆ. ಈ ಅವಧಿಯಲ್ಲಿ ಅಗಸಿಯ ಮುಂದಿನ ಮೈದಾನದಲ್ಲೆಲ್ಲ ನೋಡಿದ ಕಡೆಗೆಲ್ಲಾ ಎತ್ತುಗಳ ಓಡಾಟ,ನೆಗೆದಾಟ,ಹಗ್ಗಗಳ ತೊಡರುವಿಕೆ,ಬಣ್ಣ ಬಣ್ಣದ ಅಂಗಿಗಳನ್ನು ತೊಟ್ಟು ಹಗ್ಗ ಹಿಡಿದುಕೊಂಡು ಬರುವ ಯುವಕರ ತಂಡ…ಈ ದೃಷ್ಯಗಳೇ ತುಂಬಿಕೊಳ್ಳುತ್ತವೆ. 

ಕೆಲವೊಂದು ಎತ್ತುಗಳು ದಶಕ ವರುಷಗಳಿಂದ ನಿರಂತರವಾಗಿ ಕರಿ ಆಟದಲ್ಲಿ ಭಾಗವಹಿಸಿದ ಉದಾಹರಣೆಗಳು ಕಾಣ ಸಿಗುತ್ತವೆ. ಅಂತಹ ಎತ್ತುಗಳ ಮೇಲೆ ಸವಿವರವಿರುವ ಬಟ್ಟೆಯ ಝೂಲವನ್ನೂ ಕಾಣಬಹುದು. ಕಾರಹುಣ್ಣಿಮೆಯಲ್ಲಿ ಕರಿಯಾಡಿಸಲೆಂದೇ ಹೋರಿಗಳನ್ನು ಕಟ್ಟಿ ಮೇಯಿಸುವವರೂ ಇದ್ದಾರೆ. 

ರೋಚಕ ಈ ಆಟವನ್ನು ಕಣ್ತುಂಬಿಕೊಳ್ಳಲು ದೂರ ದೂರದಿಂದ ಜನರು ಬರುತ್ತಾರೆ. ನೆರೆಯ ಮಹಾರಾಷ್ಟ್ರದ ಜನರೂ ಆಗಮಿಸುತ್ತಾರೆ. ಮಾಳಿಗೆಗಳ ಮೇಲೆ ಕುಳಿತು ವೀಕ್ಷಿಸುತ್ತಾರೆ. 
ಅನಂತರ ಊರ ಗೌಡರ ಎತ್ತುಗಳಿಂದ ಕರಿ ಹರಿಯುವ ಮೂಲಕ ತೆರೆ ಎಳೆಯಲಾಗುತ್ತದೆ. ಕರಿ ಹರಿಯಲು ಎತ್ತುಗಳನ್ನು ಹಿಂಬರಿಕೆಯಾಗಿ ನಡೆಸುತ್ತಾ ಕರೆತರುವುದು ಇಲ್ಲಿನ ಇನ್ನೊಂದು ವಿಶೇಷ. 

ವಿಶಿಷ್ಟವಾಗಿ ನಡೆಯುವ ಈ ರೋಚಕ ಆಟವನ್ನು ನೀವೂ ಒಂದು ಸಲ ನೋಡಿ ಆನಂದಿಸಿ. 

ತಲುಪುವುದು ಹೇಗೆ?
 ಜಿಲ್ಲಾ ಕೇಂದ್ರದಿಂದ 31 ಕಿ. ಮಿ ಅಂತರದಲ್ಲಿ ಕಾಖಂಡಕಿ ಇದೆ. ವಿಜಯಪುರದಿಂದ ಹೋಗಲು ಬಸ್ ಗಳ ಸೌಕರ್ಯವಿದೆ. ಬಬಲೇಶ್ವರ ಹೋಬಳಿಯಿಂದ ಖಾಸಗಿ ವಾಹನಗಳ ಲಭ್ಯತೆಯಿದೆ. 
-ನಾರಾಯಣ ಬಾಬಾನಗರ 

 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕಾಖಂಡಕಿಯ ವಿಶಿಷ್ಟ ಕಾರಹುಣ್ಣಿಮೆ: ನಾರಾಯಣ ಬಾಬಾನಗರ

Leave a Reply

Your email address will not be published. Required fields are marked *