ಕಾಕ್ರೋಚ್ ಎಫೆಕ್ಟ್ ಮತ್ತು ಹನಿಯನ್ ಗಿಬ್ಬನ್: ಅಖಿಲೇಶ್ ಚಿಪ್ಪಳಿ

ಯಾರ ಬಾಯಲ್ಲಿ ನೋಡಿದರೂ ಒಂದೇ ಮಾತು. ಸೆಕೆ-ಸೆಕೆ-ಸೆಕೆ-ಉರಿ. ಮಳೆ ಯಾವಾಗ ಬರುತ್ತೋ? ಇತ್ಯಾದಿಗಳು. ರಾತ್ರಿಯಿಡೀ ನಿದ್ದೆಯಿಲ್ಲ. ವಿಪರೀತ ಸೆಖೆ ಮತ್ತು ಸೊಳ್ಳೆ. ಮೇಲುಗಡೆ ಮತ್ಸ್ಯಯಂತ್ರ ತಿರುಗದಿದ್ದರೆ ನಿದ್ದೆಯಿಲ್ಲ. ಬೆಳಗ್ಗೆ ಎದ್ದಾಗ ಕಣ್ಣೆಲ್ಲಾ ಉರಿ. ಎಷ್ಟು ನೀರು ಕುಡಿದರೂ ಕಡಿಮೆ. ದಾಹ. ವಿಪರೀತ ದಾಹ. ಕಳೆದೆರೆಡು ಮೂರು ದಶಕಗಳಿಂದ ಹವಾಮಾನ ಏರುಪೇರಾಗುತ್ತಿದೆ ಎಂಬ ಕೂಗು ಶುರುವಾಗಿ ಇದೀಗ ಅದೇ ಕೂಗು ಮುಗಿಲು ಮುಟ್ಟುತ್ತಿದೆ. ಊರ್ಧ್ವಮುಖಿಯ ಅವಾಂತರಗಳು ಹೆಚ್ಚಾದಷ್ಟು ವಾತಾವರಣದಲ್ಲಿ ಬಿಸಿಯೇರಿಕೆಯಾಗುತ್ತದೆ. ಒಟ್ಟಾರೆಯಾಗಿ ಭೂಮಿಯ ಬಿಸಿಯನ್ನು ಕಡಿಮೆ ಮಾಡಬೇಕೆಂಬ ಉದ್ಧೇಶದಿಂದ ಪ್ರಪಂಚದ ಎಲ್ಲಾ ರಾಷ್ಟ್ರಗಳ ವಿಜ್ಞಾನಿಗಳು, ತಜ್ಞರು, ರಾಜಕೀಯಸ್ಥರು ಸೇರಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ವಾತಾವರಣದಲ್ಲಿನ ಇಂಗಾಲಾಮ್ಲವನ್ನು ಹೀರಿಕೊಂಡು ಆಮ್ಲಜನಕವನ್ನು ನೀಡುವ ಅರಣ್ಯಗಳನ್ನು ಬೆಳೆಸಬೇಕು ಎಂಬುದೇ ಒಟ್ಟು ತಾತ್ಪರ್ಯವಾಗಿದೆ. ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕ್ಯಾಪ್ & ಟ್ರೇಡ್ ಹೆಸರಿನ  ಯೋಜನೆಯೊಂದನ್ನು ಕಳೆದ ವರ್ಷದ ಆದಿಯಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು. ಈ ಯೋಜನೆಯಲ್ಲಿ ಕಾರ್ಖಾನೆಗಳಿಂದ ನಿಗದಿತ ಪ್ರಮಾಣದಲ್ಲಿ ಮಾತ್ರ ಇಂಗಾಲಾಮ್ಲವನ್ನು ಹೊರಸೂಸಲು ಅನುಮತಿ ನೀಡಲಾಗಿತ್ತು. ಅಂದರೆ ನಮ್ಮಲ್ಲಿಯ ಪಡಿತರ ಯೋಜನೆಗೆ ಹೋಲಿಸಬಹುದು. ಒಂದು ಕುಟುಂಬಕ್ಕೆ ಇಂತಿಷ್ಟು ಅಕ್ಕಿ-ಸಕ್ಕರೆ ನೀಡುತ್ತಾರಲ್ಲ ಹಾಗೆ. ಯಾವ ಕಾರ್ಖಾನೆಯಿಂದ ನಿಗದಿತ ಅಥವಾ ಪಡಿತರಕ್ಕಿಂತ ಹೆಚ್ಚು ಇಂಗಾಲಾಮ್ಲ ಹೊರಹಾಕಿದಲ್ಲಿ ಬದಲಿಗೆ ಆ ಕಾರ್ಖಾನೆಗಳು ತೆರಿಗೆ ರೂಪದ ಶುಲ್ಕವನ್ನು ನೀಡಬೇಕಾಗುತ್ತದೆ. ಈ ಹಣವನ್ನು ಸರ್ಕಾರಗಳು ಅರಣ್ಯ ಬೆಳೆಸುವ ಯೋಜನೆಗಳಿಗೆ ಬಳಸಿಕೊಳ್ಳುತ್ತಾರೆ. ಭಾರತದಲ್ಲೂ ಇದೇ ತರಹದ ಯೋಜನೆಯಿದೆ. ಇದಕ್ಕೆ ರೆಡ್ ಪ್ಲಸ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಯೋಜನೆಯೂ ಕೂಡ ಪರಿಸರವನ್ನು ಉಳಿಸಿ-ಬೆಳೆಸುವ ಯೋಜನೆಯಾಗಿದ್ದು, ಇಂಗಾಲಾಮ್ಲ ವ್ಯವಹಾರವೆಂದು ಅಥವಾ ಕಾರ್ಬನ್ ಟ್ರೇಡಿಂಗ್ ಎಂದು ಕರೆಯುತ್ತಾರೆ.

ಪರ್‍ಯಾಯವಾಗಿ ಅರಣ್ಯ ಬೆಳೆಸುವ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕಾರ್ಪೊರೇಟ್ ಪ್ರಪಂಚ ತನ್ನ ಅನುಕೂಲಕ್ಕಾಗಿ ಹೇಗೆ ಬಳಸುತ್ತದೆ ಎಂಬುದನ್ನು ಕೊಂಚ ನೋಡೋಣ. ಕ್ಯಾಪ್ & ಟ್ರೇಡ್ ಅಥವಾ ರೆಡ್ ಪ್ಲಸ್ ಯೋಜನೆಯು ಹಾಲಿ ಇರುವ ಅರಣ್ಯ ಪ್ರದೇಶಕ್ಕೆ ಅನ್ವಯಿಸುವುದಿಲ್ಲ. ಅಂದರೆ ಹೊಸದಾಗಿ ಅರಣ್ಯ ಬೆಳೆಸಲು ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ಕ್ಯಾಲಿಫೋರ್ನಿಯಾದಲ್ಲಿರುವ ಸಿರಿಯಾ ಫೆಸಿಫಿಕ್ ಇಂಡಸ್ಟ್ರೀಸ್ ಎಂಬ ಕಂಪನಿಯಿಂದ ಭೂಬಿಸಿಯೇರಿಕೆಗೆ ಕಾರಣವಾಗುವ ಹಸಿರು ಅನಿಲ ಮತ್ತು ಇಂಗಾಲಾಮ್ಲ ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಯಥಾಪ್ರಕಾರ ಆ ಕಂಪನಿಯು ಇಂಗಾಲ ತೆರಿಗೆಯನ್ನು ನೀಡಬೇಕಾಗುತ್ತದೆ ಹಾಗೂ ನೀಡುತ್ತಿದೆ ಕೂಡ. ಕಂಪನಿಯ ಹೊಸ ಯೋಜನೆಯೆಂದರೆ, ತಾನೇ ಅರಣ್ಯ ಬೆಳೆಸುವುದರ ಮೂಲಕ ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕುವುದು. ಜನ ಮೆಚ್ಚುವಂತಹ ಯೋಜನೆಯಿದು. ಆದರೆ ಕಂಪನಿಯ ಒಳ ಹುನ್ನಾರ ಬೇರೆಯೇ ಇದೆ. ಕ್ಯಾಲಿಫೋರ್ನಿಯಾದಲ್ಲಿರುವ ಹಳೆಯ ಅಪರೂಪದ ಮರಗಳನ್ನು ಕಡಿದು, ಹೊಸದಾಗಿ ಗಿಡ ನೆಡುವ ಯೋಜನೆ. ವೈವಿಧ್ಯವುಳ್ಳ ಅರಣ್ಯವನ್ನು ನೆಲಸಮ ಮಾಡಿ ಹೊಸದಾಗಿ ಏಕಜಾತಿಯ ನೆಡುತೋಪು ಬೆಳೆಸುವುದರ ಮೂಲಕ ಲಾಭ ಮಾಡಿಕೊಳ್ಳುವ ಯೋಚನೆಯಲ್ಲಿದೆ. ಹೈಸ್ಕೂಲ್ ಮಕ್ಕಳಿಗೂ ಗೊತ್ತು, ವಯಸ್ಸಾದ ಮರಗಳು ಹೆಚ್ಚು ಇಂಗಾಲಾಮ್ಲವನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಈ ಕ್ಯಾಪ್ & ಟ್ರೇಡ್ ಯೋಜನೆಯಲ್ಲಿ ಹಳೆಯ ಮರಗಳು ಇದರ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ವಯಸ್ಸಾದ ಮರಗಳನ್ನು ಕಡಿದರೆ, ಬರುವ ನಾಟದಿಂದಲೂ ಲಾಭ ಮತ್ತು ಹೊಸದಾಗಿ ಅರಣ್ಯ ಬೆಳೆಸುವುದರಿಂದಲೂ ಲಾಭ. ಒಂದೇ ಏಟಿಗೆ ೨ ಮಾವಿನಕಾಯಿ ಬೀಳಿಸುವ ಹುನ್ನಾರ ಹಾಕಿದೆ ಸಿರಿಯಾ ಫೆಸಿಫಿಕ್ ಇಂಡಸ್ಟ್ರೀಸ್ ಎಂಬ ಕಂಪನಿ. ಇದಕ್ಕಾಗಿ ಹೊಸದೊಂದು ಘೋಷವಾಕ್ಯವನ್ನು ಕಂಪನಿ ರಚನೆ ಮಾಡಿದೆ. ಹಳೇ ಮರ ಕಡಿಯಿರಿ, ಭೂಬಿಸಿ ತಡೆಯಿರಿ.

ಕ್ಯಾಲಿಫೋರ್ನಿಯಾದ್ದು ಈ ಕತೆಯಾದರೆ, ಮಧ್ಯ ಅಮೇರಿಕಾದ ಕತೆ ಮತ್ತೊಂದು ಬಗೆಯದು. ಮಧ್ಯ ಅಮೇರಿಕಾದ ಮಿಲಿಟರಿ ಮತ್ತು ಮಾದಕ ವಸ್ತು ಕಳ್ಳಸಾಗಾಣಿಕೆದಾರರ ಮಧ್ಯೆ ಯುದ್ಧ ನಡೆಯುತ್ತಿದೆ. ಮಾದಕ ವಸ್ತುಗಳ ಮಾಫಿಯಾ ಪ್ರಪಂಚ ಬಲಿಷ್ಟವಾಗಿದೆ. ನಮ್ಮಲ್ಲೂ ಕಾಡು ಕಡಿದು ಜೋಳ-ಶುಂಠಿ ಬೆಳೆಯ ಮಧ್ಯದಲ್ಲಿ ಗಾಂಜಾ ಬೆಳೆಯುತ್ತಾರೆ. ಹೀಗೆ ಅಲ್ಲೂ ಕೂಡ ಕಾಡು ಕಡಿದು, ದಟ್ಟಾರಣ್ಯದ ಮಧ್ಯದಲ್ಲಿ ಕೊಕೇನ್ ಗಿಡಗಳನ್ನು ಬೆಳೆಯಲಾಗುತ್ತದೆ. ದಟ್ಟಾರಣ್ಯವೆಂದರೆ ವಾಹನಗಳು ಹೋಗಲು ರಸ್ತೆಗಳಿಲ್ಲದ ಜಾಗ. ಇದಕ್ಕಾಗಿ ಕಳ್ಳ ಸಾಗಾಣಿಕೆದಾರರು ಕಾಡಿನ ಮಧ್ಯದಲ್ಲಿ ರಸ್ತೆಗಳನ್ನು ನಿರ್ಮಿಸುತ್ತಾರೆ. ಇದರಿಂದಾಗಿ ಮಧ್ಯ ಅಮೇರಿಕಾದ ದಟ್ಟಾರಣ್ಯಗಳಿಗೆ ಕುತ್ತು ಬಂದಿದೆ. ಕಳ್ಳ ಸಾಗಣಿಕೆದಾರರನ್ನು ಹೇಗಾದರೂ ಮಾಡಿ ಮಟ್ಟ ಹಾಕಲೇಬೇಕೆಂದು ಮಿಲಿಟರಿಯವರ ತೀರ್ಮಾನ. ಮಿಲಿಟರಿ ಪಡೆಗಳು ಕೂಡ ತಮ್ಮ ಹೆಲಿಕಾಪ್ಟರ್‌ಗಳನ್ನು ಇಳಿಸಲು ಮರಗಳನ್ನು ಸವರುತ್ತಾರೆ. ಕೊಯಿಲು ಮಾಡಿದ ಫಸಲನ್ನು ಮೆಕ್ಸಿಕೊ ಮತ್ತು ದಕ್ಷಿಣ ಅಮೇರಿಕಾಕ್ಕೆ ಸಾಗಿಸಲು ಕಳ್ಳಸಾಗಾಣಿಕೆದಾರರು ಚಿಕ್ಕ-ಚಿಕ್ಕ ವಿಮಾನ ನಿಲ್ದಾಣಗಳನ್ನು ರೂಪಿಸಿಕೊಂಡಿದ್ದಾರೆ. ಹೇಗಿದೆ ಮಾದಕ ವಸ್ತುಗಳ ವಹಿವಾಟು. 

ಮಾದಕವಸ್ತು ಮಾಫಿಯಾವನ್ನು ಮಟ್ಟ ಹಾಕಲು ಮಿಲಿಟರಿ ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದರೂ, ಮಾಫಿಯಾದ ಆಟಾಟೋಪ ಕಡಿಮೆಯಾಗಿಲ್ಲ, ಬದಲಾಗಿ ಸ್ಥಳವನ್ನು ಬದಲಿಸಿ ಬೆಳೆಯಲಾಗುತ್ತಿದೆ. ಮೆಕ್ಸಿಕೊದ ಅಧ್ಯಕ್ಷ ಫೆಲಿಪ್ ಕಾಲ್ಡ್‌ರಾನ್ ತಮ್ಮ ದೇಶದ ಮಾದಕ ವಹಿವಾಟನ್ನು ಹತ್ತಿಕ್ಕುವ ಪ್ರಯತ್ನ ಮಾಡಿದಾಗ, ಮಾಪಿಯಾ ತನ್ನ ಜಾಗವನ್ನು ಗ್ವಾಟೆಮಾಲಕ್ಕೆ ಬದಲಾಯಿಸಿತು. ಇದರಿಂದಾಗಿ ಗ್ವಾಟೆಮಾಲದ ಅರಣ್ಯಗಳು ನಾಶವಾದವು. ಈ ತರಹದ ಮನೋವೃತ್ತಿಗೆ ಇಂಗ್ಲೀಷ್‌ನಲ್ಲಿ ಕಾಕ್ರೋಚ್ ಎಫೆಕ್ಟ್ ಎನ್ನುತ್ತಾರೆ. ಅಂದರೆ ನೀವು ಒಂದು ಜಿರಳೆಯನ್ನು ನಿಮ್ಮ ಮನೆಯಿಂದ ಹೊರ ಹಾಕಿದರೆ ಅದು ತಾನು ವಾಸಿಸಲು ಅಥವಾ ಬದುಕಲು ಇನ್ನೊಂದು ಮನೆಯನ್ನು ಹುಡುಕಿಕೊಳ್ಳುತ್ತದೆ. ಮಾದಕವಸ್ತುಗಳ ಮಾಫಿಯಾದ ಈ ಮನೋಭಾವವೂ ಕೂಡ ಜಿರಳೆಯ ಮನೋಭಾವದಂತೆ ಇದೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ನಮ್ಮ ರಾಜಕಾರಣಿಗಳನ್ನು ಮರದಿಂದ ಮರಕ್ಕೆ ಹಾರುವ ಕೋತಿಗೆ ಹೋಲಿಸುತ್ತಾರಲ್ಲ. ಹಾಗೆ ಮಾಫಿಯಾ ಪ್ರಪಂಚವನ್ನು ಜಿರಳೆಗೆ ಹೋಲಿಸಲಾಗಿದೆ.

ಹೊಂಡುರಾಸ್‌ನ ವಿಶ್ವಪಾರಂಪಾರಿಕ ತಾಣವಾದ ರಿಯೋ ಪ್ಲಾಟಿನೋ ಬಯೋಸ್ಪಿಯರ್ ರಿಸರ್ವ್ವನ್ನೂ ಹಾಳುಗೆಡವಲಾಗಿದೆ. ಮಾದಕ ವಸ್ತುಗಳಿಗಾಗಿ ಅಲ್ಲಿನ ಅಮೂಲ್ಯ ಅರಣ್ಯ ನಾಶವಾಗಿದೆ. ಇನ್ನೂ ಆಘಾತಕಾರಿ ವಿಷಯವೆಂದರೆ, ಮಾದಕವಸ್ತುಗಳನ್ನು ಮಾರಾಟ ಮಾಡಿ ಬಂದ ಕಳ್ಳಹಣವನ್ನು ಕಳ್ಳಸಾಗಾಣಿಕೆದಾರರು ಪಶುಸಂಗೋಪನೆ ಮತ್ತು ಪಾಮ್ ಎಣ್ಣೆಗಾಗಿ ಪಾಮ್ ತೋಟಗಳ ಮೇಲೆ ಹೂಡಿಕೆ ಮಾಡತೊಡಗಿದ್ದು, ಪಶು ಸಂಗೋಪನೆ ಮತ್ತು ಪಾಮ್ ತೋಟಗಳು ಜಗತ್ತಿನಲ್ಲಿ ಅತಿಹೆಚ್ಚು ಅರಣ್ಯ ನಾಶ ಮಾಡಿದ ಕುಖ್ಯಾತಿಗೆ ಒಳಗಾಗಿವೆ. ಸಾವಿರಗಟ್ಟಲೆ ದನಗಳನ್ನು ಮೇಯಿಸಲು ಅರಣ್ಯಗಳನ್ನು ಕಡಿದು ಬಯಲು ಮಾಡಲಾಗುತ್ತದೆ. ಹಾಗೆಯೇ ಪಾಮ್ ತೋಟಗಳನ್ನು ಬೆಳೆಸಲು ಇಂಡೊನೇಷಿಯಾ ಮತ್ತು ಮಲೇಷಿಯಾದ ಮಳೆಕಾಡುಗಳನ್ನು ಸವರಿ ಹಾಕಲಾಗಿದೆ.

ಜಗತ್ತಿಗೆ ಬೇಕಾದ ೯೦% ಪಾಮ್ ಎಣ್ಣೆಯನ್ನು ಇಂಡೊನೇಷಿಯಾ ಮತ್ತು ಮಲೇಷಿಯಾಗಳಲ್ಲಿ ತಯಾರು ಮಾಡಲಾಗುತ್ತದೆ. ನೀವು ತಿನ್ನುವ ಪ್ರತಿ ಆಹಾರದಲ್ಲೂ ಪಾಮ್ ಎಣ್ಣೆಯ ವಾಸನೆಯಿದೆ ಎನ್ನಬಹುದು. ನಾವು ದಿನನಿತ್ಯ ಬಳಸುವ ಸೋಪು, ಪೇಸ್ಟ್, ಐಸ್‌ಕ್ರೀಮ್, ಕಿಟ್-ಕ್ಯಾಟ್, ಕ್ಯಾಡ್‌ಬರಿ ಇತ್ಯಾದಿಗಳಿಗೆ ಇಂಡೊನೇಷಿಯಾದ ಕಾಡುಗಳನ್ನು ಕಡಿದು ಮಾಡಿದ ಪಾಮ್ ತೋಟದ ಎಣ್ಣೆಯನ್ನು ಉಪಯೋಗಿಸಲಾಗುತ್ತದೆ. ೧೯೭೮ರಲ್ಲಿ ಇಂಡೊನೇಷಿಯಾದ ಕಾಡುಗಳಲ್ಲಿ ೧೦೦೦ ಸುಮಾತ್ರನ್ ಹುಲಿಗಳಿದ್ದವು. ಈಗ ಹುಲಿಗಳ ಸಂಖ್ಯೆ ೪೦೦ಕ್ಕೆ ಇಳಿದಿದೆ. ಅತ್ಯಂತ ಅಪರೂಪದ ವಾನರ ಪ್ರಭೇದವಾದ ಒರಂಗುಟಾನ್ ಸಂತತಿ ಇನ್ನಾರು ವರ್ಷಗಳಲ್ಲಿ ನಮ್ಮ ಕಣ್ಣೆದುರೇ ಅಳಿದುಹೋಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಅಲ್ಲಿನ ಕಾಡುಗಳಲ್ಲೀಗ ಬರೀ ೨೦೦ ಸುಮಾತ್ರನ್ ಘೆಂಡಾಮೃಗಗಳಿವೆ, ೨೫೦೦ರಷ್ಟಿರುವ ಆನೆಗಳ ಸಂತತಿಯೂ ಅಪಾಯದಲ್ಲಿದೆ. ತಜ್ಞರ ವರದಿಯ ಪ್ರಕಾರ ಇದೇ ರೀತಿಯಲ್ಲಿ ಅಲ್ಲಿನ ಅರಣ್ಯ ನಾಶ ಮುಂದುವರೆಯುತ್ತಿದ್ದರೆ, ೨೦೨೨ರ ಹೊತ್ತಿಗೆ ಇಂಡೊನೇಷಿಯಾದ ೯೮% ಮಳೆಕಾಡು ನಾಶವಾಗಿ ಜಗತ್ತಿನ ಅತಿದೊಡ್ಡ ಇಂಗಾಲಾಮ್ಲ ಮಾಲಿನ್ಯ ಮಾಡುವ ದೇಶವಾಗಿ ಇಂಡೊನೇಷಿಯಾ ಹೊರಹೊಮ್ಮಲಿದೆ.  ಇತ್ತ ಚೀನಾ ದೇಶದ ಹಸಿವಿಗೆ ಇನ್ನೊಂದು ವಾನರ ಪ್ರಭೇದ ನಾಶದಂಚಿಗೆ ಬಂದು ನಿಂತಿದೆ. ಪ್ರಪಂಚದ ಅತೀ ಅಪರೂಪದ ವಾನರ ಸಂತತಿಯ ಹೆಸರು ಹನಿಯನ್ ಗಿಬ್ಬನ್ಸ್. ಇವು ವಾಸಿಸುವ ಏಕಮೇವ ಹನಿಯನ್ ದ್ವೀಪ ಪ್ರದೇಶದಲ್ಲಿ ಮಾತ್ರ ವಾಸಿಸುತ್ತವೆ. ಪ್ರತಿನಿತ್ಯ ಈ ದ್ವೀಪದ ೨ ಲಕ್ಷ ಘನ ಮೀಟರ್ ಅರಣ್ಯ ಪ್ರದೇಶವನ್ನು ಅಭಿವೃದ್ದಿಯ ಹೆಸರಿನಲ್ಲಿ ನಾಶಮಾಡಲಾಗುತ್ತಿದೆ. ಈ ದ್ವೀಪದಲ್ಲಿ ಈಗಿರುವ ಈ ಅಪರೂಪದ ವಾನರ ಸಂಖ್ಯೆ ಬರೀ ೨೩. ಬರೀ ಹಣ್ಣು ತಿಂದು ಬದುಕುವ ಇವು ಅತ್ಯಂತ ಮಧುರವಾಗಿ ಹಾಡುತ್ತವೆ. ಸಂತಾನೋತ್ಪತ್ತಿ ಸಮಯದಲ್ಲಿ ಹಾಡುವ ಇವುಗಳ ಹಾಡನ್ನು ಯುಗಳ ಗೀತೆಯೆಂದು ಕರೆಯುತ್ತಾರೆ. ಹುಟ್ಟಿದಾಗಿನಿಂದ ಪ್ರತಿ ಹಂತದಲ್ಲೂ ಇವು ತಮ್ಮ ಬಣ್ಣವನ್ನು ಬದಲಿಸಿಕೊಳ್ಳುವ ಗುಣ ಹೊಂದಿದ ಅಪರೂಪದ ಏಕೈಕ ವಾನರ ಸಂತತಿಯಾಗಿದೆ. ವರದಿಯ ಪ್ರಕಾರ ಹನಿಯನ್ ದ್ವೀಪದಲ್ಲಿರುವ ೨೩ ಹನಿಯನ್ ಗಿಬ್ಬನ್ಸ್ ವಾನರ ಸಂತತಿ ಪ್ರಪಂಚದ ಇನ್ಯಾವುದೇ ಭಾಗದಲ್ಲೂ ಇಲ್ಲ ಹಾಗೂ ಮೃಗಾಲಯಗಳಲ್ಲೂ ಇವು ಕಂಡು ಬಂದಿಲ್ಲ. ಬಾವನ್‌ಗ್ಲಿಂಗ್ ರಾಷ್ಟ್ರೀಯ ಉದ್ಯಾನವನದ ೨೧೦೦ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಇವು ಕಂಡು ಬರುತ್ತವೆ. ೧೯೫೦ರಲ್ಲಿ ಇವುಗಳ ಸಂಖ್ಯೆ ೨೦೦೦ದಷ್ಟಿತ್ತು. ಎಗ್ಗಿಲ್ಲದ ಬೆಳೆದು ಆಕ್ರಮಿಸಿದ ರಬ್ಬರ್ ತೋಟಗಳ ಹಾವಳಿಯಿಂದಾಗಿ ೧೯೯೩ರಲ್ಲಿ ಇವುಗಳ ಸಂಖ್ಯೆ ೬೦ಕ್ಕೆ ಇಳಿಯಿತು. ಇನ್ನೂ ಆಘಾತಕಾರಿ ಸಂಗತಿಯೆಂದರೆ ೨೦೦೩ರಲ್ಲಿ ಇವುಗಳ ಸಂಖ್ಯೆ ೧೫ಕ್ಕೆ ಇಳಿಯಿತು. ಅದೃಷ್ಟವೋ ಎಂಬಂತೆ ೨-೩ ವರ್ಷಗಳಿಗೊಮ್ಮೆ ಮರಿ ಹಾಕುವ ಇವುಗಳ ಸಂತತಿ ಕ್ರಮೇಣ ಹೆಚ್ಚಾಗಿ ಇದೀಗ ೨೩ಕ್ಕೆ ತಲುಪಿದೆ. ಚೀನಾದವರು ಏನನ್ನೂ ಬೇಕಾದರೂ ತಿನ್ನುವ ಹಾಗೂ ಮೂಢನಂಬಿಕೆಗಳನ್ನು ನಂಬುವ ಜನ. ಹನಿಯನ್ ಗಿಬ್ಬನ್ಸ್ ವಾನರ ದೇಹ ಪಾರಂಪಾರಿಕ ಔಷಧಗಳಲ್ಲಿ ಬಳಕೆಯಾಗುತ್ತದೆ. ಇಡೀ ಕೋತಿಯನ್ನು ಅರೆದು, ಒಣಗಿಸಿ ಪೌಡರ್ ಮಾಡಿಟ್ಟುಕೊಂಡು ವಿವಿಧ ರೋಗಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ. ಇದರ ಬಳಕೆಯಿಂದ ನಪುಂಸಕತನ ದೂರವಾಗುತ್ತದೆ ಎಂಬ ನಂಬಿಗೆ ಅಲ್ಲಿ ಗಾಢವಾಗಿದೆ. ಮಾನವನ ಸಂತತಿ ಬೆಳೆಯಲು ಈ ಅಪರೂಪದ ಪ್ರಾಣಿವರ್ಗ ನಿಶೇಷ್ಯವಾಗುವುದರಲ್ಲಿದೆ. ಈ ವಾನರ ಸಂತತಿಯೇನಾದರೂ ಅಳಿದಲ್ಲಿ ಮಾನವನ ದೌರ್ಜನ್ಯಕ್ಕೆ ಬಲಿಯಾದ ಮೊದಲ ವಾನರ ಸಂತತಿಯಾಗುತ್ತದೆ ಹಾಗೂ ಮಾನವನ ಮೇರು ದೌರ್ಜನ್ಯಕ್ಕೆ ಸಾಕ್ಷಿಯಾಗುತ್ತದೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Anitha Naresh Manchi
Anitha Naresh Manchi
9 years ago

ಪ್ರಕೃತಿಯ ಮೇಲೆ ನಮ್ಮ ಅತ್ಯಾಚಾರ ನಮ್ಮ ಮೂಲಕ್ಕೆ ಕೊಡಲಿಯೇಟು ಎನ್ನುವುದು ನಮ್ಮ ತಲೆಗೆ ಯಾವಾಗ ಹೊಳೆಯುತ್ತದೋ .. ಇಲ್ಲದಿದ್ದರೆ ಒಂದಾನೊಂದು ಕಾಲದಲ್ಲಿ ಇಲ್ಲಿ ಜೀವಿಗಳಿದ್ದವು ಎಂದು ಹೇಳಲು ಯಾರೂ ಉಳಿಯಲಾರರು ..:( 

Narayan Sankaran
Narayan Sankaran
9 years ago

Hope it is still not too late to save the hanian gibbon. Article is enlightning, Thanks Akhileshji.  

2
0
Would love your thoughts, please comment.x
()
x