ಮನುಷ್ಯನ ಭಾವನೆಗಳು ಸಾರ್ವತ್ರಿಕ. ಆದರೆ ಅವುಗಳ ಅಭಿವ್ಯಕ್ತಿ ಬದಲಾಗುತ್ತದೆ – ಬೇರೆ ಬೇರೆ ದೇಶಗಳಲ್ಲಿ, ಭಾಷೆಗಳಲ್ಲಿ, ಕಾಲಘಟ್ಟಗಳಲ್ಲಿ ಕಾಣಬರುವ ರೀತಿಯಲ್ಲಿ ಭಿನ್ನತೆಯಿರುತ್ತದೆ. ಇದನ್ನು ‘ಕಾಂಟೆಕ್ಸ್ಟ್’ ಅಂತೀನಿ ನಾನು. ಈ ಕಾಂಟೆಕ್ಸ್ಟ್ ಗೊತ್ತಿದ್ದಾಗ ಮಾತ್ರ ಕೆಲವು ಪಾತ್ರಗಳು, ಸನ್ನಿವೇಶಗಳು, ಚಿತ್ರಗಳನ್ನು ಅಪ್ಪ್ರಿಶಿಯೇಟ್ ಮಾಡಲಿಕ್ಕೆ ಸಾಧ್ಯ! ಇದಕ್ಕೆ ಉದಾಹರಣೆಯಾಗಿ ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಎರಡು ಮಹಾನ್ ಚಿತ್ರಗಳ ಬಗ್ಗೆ ಹೇಳಲು ಇಷ್ಟಪಡುತ್ತೇನೆ – “೧೨ ಆಂಗ್ರಿ ಮೆನ್” ಹಾಗು “ದಿ ಗುಡ್, ದಿ ಬ್ಯಾಡ್ ಅಂಡ್ ದಿ ಅಗ್ಲಿ”. ಪ್ರತಿಯೊಬ್ಬ ಚಿತ್ರಪ್ರೇಮಿಯು ನೋಡಲೇಬೇಕಾದ ಚಿತ್ರಗಳಿವು.
೧೨ ಆಂಗ್ರಿ ಮೆನ್ – ೧೯೫೭ ಅಲ್ಲಿ ತೆರೆಕಂಡ ಸಿಡ್ನಿ ಲುಮೆಟ್ ನಿರ್ದೇಶನದ ಈ ಇಡೀ ಚಿತ್ರ ಕೇವಲ ಒಂದು ಜ್ಯೂರಿ ರೂಮಿನಲ್ಲಿ ನಡೆಯುತ್ತದೆ. ತನ್ನ ತಂದೆಯನ್ನು ಕೊಂದ ಆಪಾದನೆಯನ್ನು ಹೊತ್ತ ಯುವಕನ ಕೇಸ್ ಬಗ್ಗೆ ಹನ್ನೆರಡು ಜನ ಜ್ಯೂರರ್ಸ್ ವಿಚಾರಣೆ ನಡೆಸುವುದೇ ಈ ಚಿತ್ರದ ಕಥೆ. ಮೇಲ್ನೋಟಕ್ಕೆ ಎಲ್ಲಾ ಸಾಕ್ಷಿ ಆಧಾರಗಳೂ ಆ ಯುವಕ ತಪ್ಪಿತಸ್ಥ ಎಂದು ತೋರುತ್ತವೆ. ಆದರೆ ಜ್ಯೂರರ್ ನಂ. ೮ (ಹೆನ್ರಿ ಫೊಂಡ) ಆ ಯುವಕನನ್ನು ಸಾವಿನ ದವಡೆಗೆ ನೂಕುವ ಮೊದಲು ಕನಿಷ್ಠ ಪಕ್ಷ ಸ್ವಲ್ಪ ಹೊತ್ತಾದರೂ ಮಾತಾಡಬೇಕು ಅಂತ ಹೇಳುತ್ತಾನೆ. ಹೀಗೆ ಹೇಳಿದಾಗ ಎಲ್ಲರಿಂದ ತೀವ್ರ ವಿರೋಧ ವ್ಯಕ್ತವಾದರೂ, ಕೇಸ್ ನ ಬಗ್ಗೆ ಮಾತಾಡುತ್ತಾ ಹೋದಂತೆ, ಎಷ್ಟೋ ಲೂಪ್ ಹೋಲ್ ಗಳು ಸಿಗುತ್ತವೆ. ಬೇರೆ ಬೇರೆ ಉದ್ಯೋಗ, ಸಾಮಾಜಿಕ, ಅರ್ಥಿಕ ಸ್ಥಾನಮಾನಗಳಿಂದ ಬಂದ ಈ ಹನ್ನೆರಡು ಜನಕ್ಕೆ ಹೇಗೆ ತಮ್ಮದೇ ಪ್ರಿಜುಡೀಸ್ ಗಳು ನಿಷ್ಪಕ್ಷಪಾತವಾಗಿ ಈ ಕೇಸ್ ಅನ್ನು ನೋಡದಂತೆ ತಡೆದಿದ್ದವು ಅಂತ ಮನವರಿಕೆ ಆಗುತ್ತದೆ. ಒಬ್ಬೊಬ್ಬರಾಗಿ ಆ ಹುಡುಗ ತಪ್ಪಿತಸ್ಥ ಅಲ್ಲ ಅನ್ನುವ ತೀರ್ಮಾನಕ್ಕೆ ಬರುತ್ತಾರೆ – ಜ್ಯೂರರ್ ನಂ. ೩ (ಲೀ ಜೆ ಕಾಬ್ಬ್) ಒಬ್ಬನನ್ನು ಬಿಟ್ಟು – ಇವನು ಆರಂಭದಿಂದಲೂ ಎಲ್ಲರ ಮೇಲೆ ಕೂಗಾಡುತ್ತಾ, ಕಿರುಚಾಡುತ್ತಾ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಾನೆ, ಯಾರ ಮಾತನ್ನು ಕೇಳುವ ವ್ಯವಧಾನವೂ ಇರುವುದಿಲ್ಲ ಇವನಿಗೆ – ಒಮ್ಮೆ ತಾಳ್ಮೆ ಕಳೆದುಕೊಂಡು ಹೆನ್ರಿ ಫೊಂಡ ಅನ್ನು ಹೊಡೆಯಲು ಕೂಡಾ ಹೋಗುತ್ತಾನೆ. ಕಡೆಯಲ್ಲಿ ತನ್ನ ತಪ್ಪಿನ ಅರಿವಾಗಿ ಆಪಾದಿತನನ್ನು ನಿರಪರಾಧಿ ಎಂದು ಒಪ್ಪುತ್ತಾನೆ, ಹಾಗು ತನ್ನ ವೈಯಕ್ತಿಕ ಹತಾಶೆಗಳಿಂದ ಒಬ್ಬನ ಸಾವಿಗೆ ಕಾರಣ ಆಗಿಬಿಡುತ್ತಿದ್ದೆನಲ್ಲಾ ಅನ್ನೋ ಪಶ್ಚಾತ್ತಾಪದಿಂದ ಚೇರ್ ಮೇಲೆ ಕುಸಿದು ಕೂರುತ್ತಾನೆ.
ಕಾಂಟೆಕ್ಸ್ಟ್: ಕ್ಲೈಮಾಕ್ಸ್ ಹತ್ತಿರದಲ್ಲಿ, ಎಲ್ಲರೂ ಎದ್ದು ಹೋದ ಮೇಲೆ, ದುಃಖಿಸುತ್ತಿರುವ ಕಾಬ್ಬ್ ಎದುರು ಮೌನದಿಂದ ಉಪಸ್ಥಿತನಿದ್ದು ಫೊಂಡ ಆಸರೆ ನೀಡುತ್ತಾನೆ (ಇದು ಟಿಪಿಕಲ್ ಅಮೆರಿಕನ್ ಬಿಹೇವಿಯರ್. ಒಬ್ಬರಿಗೆ ತಮ್ಮದೇ ಆದ ಸ್ಪೇಸ್ ಕೊಡುವುದು. ಆತುರದಿಂದ ಕೆರ್ಚೀಫ್ ತೆಗೆದು ಕೊಡುವುದು, ‘ಅಯ್ಯೋ ನಮ್ ಹತ್ರ ಹೇಳ್ಕೊಳೀಪಾ ಮನಸ್ಸು ಹಗುರ ಆಗುತ್ತೆ’ ಅನ್ನೋದು ಅಲ್ಲಿನ ಜಾಯಮಾನ ಅಲ್ಲ) ಫೊಂಡ ತನ್ನ ಮೌನದಿಂದ, ತನ್ನ ಇರುವಿಕೆಯಿಂದ ಕಾಬ್ಬ್ ಎಡೆಗೆ ಕ್ಷಮೆಯನ್ನು, ದಯೆಯನ್ನು, ಆಸರೆಯನ್ನು ತೋರುತ್ತಾನೆ. ಕಡೆಯದಾಗಿ ಕಾಬ್ಬ್ ಕೋಟ್ ಹಾಕಿಕೊಳ್ಳಲು ಸಹಾಯ ಮಾಡುತ್ತಾನೆ. (ಕೋಟ್ ತೆಗೆದುಕೊಳ್ಳುವುದು, ಕೋಟ್ ಹಾಕಿಕೊಳ್ಳಲು ಸಹಾಯ ಮಾಡುವುದು – ಸಾಮಾಜಿಕ ಶಿಷ್ಟಾಚಾರ ಅಲ್ಲಿ) ಈ ಒಂದು ಚಿಕ್ಕ ಜೆಶ್ಚರ್ ಇಂದ ಗೌರವವನ್ನು ಸೂಚಿಸುತ್ತಾನೆ. ತನ್ನ ದೊಡ್ಡತನವನ್ನು ಮೆರೆಯುತ್ತಾನೆ.
ದಿ ಗುಡ್, ದಿ ಬ್ಯಾಡ್ ಅಂಡ್ ದಿ ಅಗ್ಲಿ: ೧೯೬೬ರಲ್ಲಿ ಬಂದ ಸರ್ಜಿಯೋ ಲಿಯೋನ್ ನಿರ್ದೇಶನದ ‘ವೆಸ್ಟೆರ್ನ್’ (ಆಡುಮಾತಿನಲ್ಲಿ ಈ ಚಿತ್ರಗಳನ್ನು ‘ಕೌಬಾಯ್’ ಫಿಲಂಸ್ ಅಂತನೂ ಕರಿತಾರೆ) ಈ ಜಾನ್ರೆಯ ಅತ್ಯುತ್ತಮ ಚಿತ್ರ. ‘ಅಮೆರಿಕನ್ ಸಿವಿಲ್ ವಾರ್’ ಸಂಧರ್ಭದಲ್ಲಿ ಮೂರು ವ್ಯಕ್ತಿಗಳು ಒಂದು ಸ್ಮಶಾನದಲ್ಲಿ ಹೂತಿಟ್ಟಿರುವ ಚಿನ್ನವನ್ನು ಹುಡುಕಲು ಹವಣಿಸುವ ಕಥಾಹಂದರವನ್ನು ಹೊಂದಿದೆ ಈ ಚಿತ್ರ. ಒಂದು ಕಡೆ ನಾಡಿನಾದ್ಯಂತ ಭೀಕರ ಯುದ್ಧ, ಇನ್ನೊಂದು ಕಡೆ ಯಾರೂ ಯಾರನ್ನೂ ನಂಬಲಾರದ ಪರಿಸ್ಥಿತಿ, ಪದೇ ಪದೇ ಬದಲಾಗುವ ನಿಷ್ಠೆಗಳು. ಬೆರಗುಗೊಳಿಸುವ ಛಾಯಾಗ್ರಹಣ, ಇಂದಿಗೂ ಟ್ರೆಂಡ್ ಸೆಟ್ಟಿಂಗ್ ಆಗಿರುವ ಹಿನ್ನೆಲೆ ಸಂಗೀತ, ಚಿಂದಿ ಆಕ್ಷನ್ ದೃಶ್ಯಗಳು, ತುಂಬಾ ನಗು ತರಿಸುವ ಸನ್ನಿವೇಶಗಳು, ಇಂದಿಗೂ ಮರೆಯಲಾಗದ ಡೈಲಾಗ್ ಗಳು – ಈ ಚಿತ್ರದ ಹೈಲೈಟ್ಸ್. ಈ ಚಿತ್ರದ ಕ್ಲೈಮಾಕ್ಸ್ ಅಂತೂ ಎಷ್ಟು ಸಲ ನೋಡಿದ್ದರೂ, ಮತ್ತೆ ನೋಡಿದಾಗ ಅಷ್ಟೇ ರೋಮಾಂಚನವಾಗುತ್ತದೆ.
ಕಾಂಟೆಕ್ಸ್ಟ್: ಇದರಲ್ಲಿ ಕ್ಲಿಂಟ್ ಈಸ್ಟ್ ವುಡ್ ದು ಅನಾಮಿಕ ‘ದಿ ಗುಡ್’ ಪಾತ್ರ. ಎಲ್ಲಿಂದಲೋ ಬಂದ ಆಗಂತುಕ. ಗನ್ ಬಳಸುವುದರಲ್ಲಿ ನಿಸ್ಸೀಮ. ಇವನೊಬ್ಬ ಬೌನ್ಟಿ ಹಂಟರ್. ಅಪರಾಧಿಗಳನ್ನು ಹಿಡಿದುಕೊಟ್ಟು ಬಹುಮಾನ ಪಡೆಯುವುದೇ ಇವನ ವೃತ್ತಿ. ಅಂಥಾ ಒಬ್ಬ ಅಪರಾಧಿಯ (‘ದಿ ಅಗ್ಲಿ’) ಜೊತೆ ಇವನದು ಒಂದು ಒಪ್ಪಂದ. ‘ಅಗ್ಲಿ’ಯನ್ನು ಹಿಡಿದುಕೊಟ್ಟು ಬಹುಮಾನವನ್ನು ಪಡೆಯುವುದು, ಹಾಗು ಅವನನ್ನು ಪಾರುಮಾಡಲು ನೆರವಾಗುವುದು, ನಂತರ ಬಹುಮಾನದ ಹಣ ಇಬ್ಬರೂ ಹಂಚಿಕೊಳ್ಳುವುದು. ಈಗ ‘ಅಗ್ಲಿ’ಗೆ ಇನ್ನೂ ದೊಡ್ಡ ಮೊತ್ತದ ಬಹುಮಾನ ಘೋಷಿಸಲಾಗುತ್ತದೆ. ಆಮೇಲೆ ಇದೇ ಆಟವನ್ನು ಮತ್ತೆ ರಿಪೀಟ್ ಮಾಡುವುದು. ನಮ್ಮ ಈಗಿನ ಸಾಮಾಜಿಕ ದೃಷ್ಟಿಕೋನದಿಂದ ನೋಡಿದರೆ ಇವನನ್ನು ರೀತಿಯಿಂದಲೂ ‘ಗುಡ್’ ಅಂತ ಕರೆಯೋಕೆ ಆಗಲ್ಲ. ಆದರೆ ಸುಮಾರು ನೂರೈವತ್ತು ವರ್ಷಗಳ ಹಿಂದಿನ ಆ ಕಾಲದಲ್ಲಿ, ಆ ಪ್ರದೇಶದಲ್ಲಿ ಅವನು ಕೆಟ್ಟವನು ಅಂತ ಅನಿಸಿಕೊಳ್ಳಲ್ಲ. ಯುದ್ಧದಿಂದ ಛಿದ್ರಗೊಂಡಿರುವ ನರಮೇಧ ನಡೆದಿರುವ ಒಂದು ಊರಲ್ಲಿ ಹೋಗುತ್ತಿರುವಾಗ ‘ಗುಡ್’ ಒಬ್ಬ ಗಾಯಗೊಂಡ ಸೈನಿಕನನ್ನು ನೋಡುತ್ತಾನೆ. ಯಾರನ್ನೂ ನಂಬುವಂತಿಲ್ಲ ನೋಡಿ, ಅವನ ಹತ್ತಿರ ಬಂದು ಗುಂಡು ಹೊಕ್ಕಿರುವ ಜಾಗವನ್ನು ಬೆರಳಿನಿಂದ ತಿವಿಯುತ್ತಾನೆ. ಅವನು ನಿಜಕ್ಕೂ ಗಾಯಗೊಂಡಿದ್ದಾನೆ ಅಂತ ಖಾತರಿಪಡಿಸಿಕೊಂಡ ಮೇಲೆ, ಆ ಸೈನಿಕ ಬದುಕಿ ಉಳಿಯಲಾರ ಅಂತ ಗೊತ್ತಾಗುತ್ತದೆ. ಆ ಕಡೆಯ ಕ್ಷಣದಲ್ಲಿ ಅವನ ಬಾಯಿಗೆ ಸಿಗಾರ್ ಕೊಡುತ್ತಾನೆ (ಸಿಗರೆಟ್ ಆಫರ್ ಮಾಡೋದು ಕೂಡಾ ಶಿಷ್ಟಾಚಾರ ಅಲ್ಲಿ) ಸಾಯುವ ಮುನ್ನ ಅತೀವ ಚಳಿಯಿಂದ ನಡುಗುತ್ತಿರುವ ಆ ಸೈನಿಕನಿಗೆ ತನ್ನ ಕೋಟ್ ಬಿಚ್ಚಿಕೊಟ್ಟು ಮೌನದಿಂದ ಮುಂದೆ ನಡೆಯುತ್ತಾನೆ. ಮಾರುದ್ದ ಇರಲಿ, ಏನೂ ಸಂಭಾಷಣೆ ಇಲ್ಲ, ಕಣ್ಣ ತುಂಬಾ ನೀರು ತುಂಬಿಕೊಂಡು ಭಾವುಕತೆಯನ್ನು ತೋರಿಸುವುದಿಲ್ಲ, ಅದೆಲ್ಲಾ ಬಿಡಿ, ಮುಖಭಾವದಲ್ಲಿ ಬದಲಾವಣೆಯ ಒಂದು ಸುಳಿವೂ ಸಿಗುವುದಿಲ್ಲ. ಆದರೆ ಆ ಸಣ್ಣ ಜೆಶ್ಚರ್ ಇಂದ ಪರಿಸ್ಥಿತಿ, ಕಾಲಮಾನ ಮೀರಿ ಮಾನವೀಯತೆ ತೋರುತ್ತಾನೆ. ಇವನನ್ನು ‘ಗುಡ್’ ಅನ್ನದೇ ಇರಕ್ಕೆ ಆಗುತ್ತಾ?
-ವಾಸುಕಿ ರಾಘವನ್
Good Bad Ugly is my fav Movie, thanks for more explanation on movie
`ಗುಡ್ ಬ್ಯಾಡ್ ಅಗ್ಲಿ’ ನನ್ನ ಮೆಚ್ಚಿನ ಸಿನೆಮಾದಲ್ಲೊಂದು. ನೀವು ಹೇಳಿದಂತೆ ಇದರ ಹಿನ್ನಲೆ ಸಂಗೀತ ಕೌಬಾಯ್ ಸಿನೆಮಾಗಳಿಗೆ ಟ್ರೆಂಡ್ ಸೆಟ್ ಮಾಡಿದಂತ ಸಿನೆಮಾ ಇದು. ಇದರ ಜೊತೆಗೆ ಮತ್ತೊಂದು ಸಂಗತಿ, ಟೊರಂಟಿನೋ,ನ ‘ಇಂಗ್ಲೋರಿಯಸ್ ಬಾಸ್ಟರ್ದ್ಸ್ ಒಂದು ದೃಶ್ಯ ಇದೇ ಸಿನೆಮಾದಿಂದ ಸ್ಪೂರ್ತಿಗೊಂಡಿರುವಂತಹದ್ದು. ಇದರಲ್ಲಿ ಗುಡ್ ,ಬ್ಯಾಡ್ ಮತ್ತು ಅಗ್ಲಿ ಮೂರು ಗುಣಗಳ ನುಡುವಿನ ಸಂಘರ್ಷವನ್ನು ತೆಳು ಹಾಸ್ಯದ ಮೂಲಕ ಅಮೇರಿಕನ್ ಶಿಷ್ಟಾಚಾರಗಳ ಚೌಕಟ್ತಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ವಾಸುಕಿ ರಾಘವನ್ ಅವ್ರೆ-ಸಿನೆಮಾಗಳ ಬಗ್ಗೆ ಅದರಲ್ಲೂ ಹಳೆಯ ಆಂಗ್ಲ ಚಿತ್ರಗಳು ನನಗೆ ಬಹು ಇಷ್ಟ-ಮೊನ್ನೆ ಮೊನ್ನೆ ನೀವ್ ಬರೆದ ಈ ಚಿತ್ರವನ್ನು ನೋಡಿದೆ-ಅದರ ಬಗ್ಗೆ ಬರೆಯಬೇಕು ಅಂತ ತಯಾರಿ ಮಾಡಿ ಇಟ್ಟಿರುವೆ..
ನಾನು ನೋಡಿದ ಉತ್ತಮ ಚಿತ್ರಗಳ ಬಗ್ಗೆ ಈಗಾಗಲೇ ಇಲ್ಲಿ ಬರೆದಿರುವೆ.
ಆ ಸರಣಿ ಇನ್ನೂ ಮುಂದುವರೆಯುತ್ತಿದೆ,,
ಈ ದಿನ ಸ್ವಲ್ಪ ಹೊತ್ತಿಗೆ ಮುಂಚೆ ವಿಜಯ ಕರ್ನಾಟಕದಲ್ಲಿ ಬ್ಲಾಗಿಲು ಅಂಕಣದಲ್ಲಿ ನಿಮ್ಮ ಈ ಬರಹ9`ಗುಡ್ ಬ್ಯಾಡ್ ಅಗ್ಲಿ’) ನೋಡಿ ಓದಿ ಅದರಲ್ಲಿ ನೀವು ಈ ಚಿತ್ರದ (`ಗುಡ್ ಬ್ಯಾಡ್ ಅಗ್ಲಿ’)ಬಗ್ಗೆ ಬರೆದದ್ದು ಓದಿ ಇಲ್ಲಿ(ನೆಟ್ನಲ್ಲಿ)ಹುಡುಕಿ ಪೂರ್ತಿ ಬರಹ ಓದಿ ಪ್ರತಿಕ್ರಿಯಿಸುತ್ತಿರುವೆ..
ನಿಮ್ಮ ನನ್ನ ಆಲೋಚನಾ ಸರಣಿ- ಸಿನೆಮ ಅಭಿರುಚಿ ಸಮಾನ ಅನಿಸುತ್ತಿದೆ..!!
ಈ ಸಿನೆಮಾಗಳ ಬಗ್ಗೆ ಬರೆಯಲೇ ಒಂದು ಪ್ರತ್ಯೇಕ ಬ್ಲಾಗ್ ಮಾಡುವ ಬಗ್ಗೆ ಯೊಚಿಸುತ್ತಿರುವೆ..
ಅದೂ ಆಗಬಹ್ದು..
ನಿಮ್ಮಿಂದ ಇನ್ನಸ್ಟು ಸಿನೆಮ ಸಂಬಂಧಿ ಬರಹಗಳನ್ನು ನಿರೀಕ್ಷಿಸುವೆ..
>>>>ಅಂದ್ ಹಾಗೆ ಈ ಚಿತ್ರ `ಗುಡ್ ಬ್ಯಾಡ್ ಅಗ್ಲಿ’ ಟ್ರಿಯಲಾಜಿ ಆಗಿ ಮೂಡಿ ಬಂದಿದೆ..ಮತ್ತು ಇದೇ ಕೊನೆಯ ಚಿತ್ರ
http://en.wikipedia.org/wiki/The_Good,_the_Bad_and_the_Ugly
It is the third film in the Dollars Trilogy following A Fistful of Dollars (1964) and For a Few Dollars More (1965). The plot revolves around threegunslingers competing to find a fortune in buried Confederate gold amid the violent chaos of gunfights, hangings, American Civil War battles and prison camps.[4] The film was a co-production between companies in Italy, Spain and West Germany.
ಶುಭವಾಗಲಿ..
ವೆಂಕಟೇಶ ಮಡಿವಾಳ-ಬೆಂಗಳೂರು..
\।/
ತಾಣಕ್ಕೆ ತಡವಾಗಿ ಬರುತ್ತಿದ್ದೇನೆ. ನೀವು ಹೇಳುವ ಕಾ೦ಟೆಕ್ಶ್ಟ್ ಬಹಳ ಪ್ರಮುಖವಾದುದು. ಅದರ ಬಗ್ಗೆ ಐಡಿಯ ಇಲ್ಲದಿದ್ದರೆ ಬಿಗ್ ಪಿಕ್ಚರ್ ಸಿಗೋದು ಕಷ್ಟ. ಎರಡೂ ಚಿತ್ರಗಳು ನನ್ನ ಫೇವರಿಟ್. ಹೆನ್ರಿ ಫೊ೦ಡ ಜತೆಗೆ ಸೆರ್ಗಿ ಲಿಯೋನ್ ಸೇರಿಸಿದರೆ ಅದು ಒನ್ಸ್ ಅಪೋನ್ ಟೈಮ್ ಇನ್ ವೆಸ್ಟ್ ಚಿತ್ರ ಆಗುತ್ತದೆ. ಸೂಪರ್ ಚಿತ್ರ. ಶೋಲೆಯ ಲಾ೦ಗ್ ಶಾಟ್ ಸೀನ್ ಗಳು ಒರಿಜಿನಲ್ ಆಗಿ ಅಲ್ಲಿ ನೋಡಬಹುದು. ಈ ಕಾ೦ಟೆಕ್ಸ್ಟ್ ನಲ್ಲಿ ನೋಡಿದರೆ ಶೋಲೆಯ ವ್ಯಾಲ್ಯೂ ಕಡಿಮೆ ಆಗುತ್ತಾ ಹೋಗುತ್ತದೆ 😉
ಫಾರ್ ಎ ಫ್ಯೂ ಡಾಲರ್ಸ್ ಮೋರ್ ನ ಎನ್ಯೋ ಮೋರಿಕನ್ ಮೋಹಕ ಸ೦ಗೀತಗಾರನ ಮೋಡಿ ಬ೦ಧನ ಚಿತ್ರದ ಬಣ್ಣ ಒಲವಿನ ಬಣ್ಣ ಹಾಡಿನಲ್ಲಿ ಬ೦ದಿದೆ.