ಕಷ್ಟಕರವಾದ ಸಂಬಂಧಗಳು- ಏನು ಮಾಡುವುದು?: ಸಹನಾ ಪ್ರಸಾದ್

“ಅಯ್ಯೊ, ಇನ್ನೂ ಈ ಕೆಲಸದವಳ ಜತೆ ಹೆಣಗಾಡ್ತಾ ಇದೀಯ? ಇಷ್ಟು ಒದ್ದಾಡುತ್ತಾ ಇರೊ ಬದಲು ಬಿಡಿಸಿ ಬೇರೆಯವರನ್ನು ಇಟ್ಟುಕೊಳ್ಳಬಾರದಾ?” ಗೆಳತಿಯನ್ನು ತರಾಟೆಗೆ ತೆಗೆದುಕೊಂಡೆ. ಬಂದರೂ ನೂರು ಕುಂಟು ನೆಪ ತೆಗೆದು ಅರ್ಧಂಬರ್ಧ ಕೆಲಸ ಮಾಡಿ ಓಡಿಹೋಗುವುದು, ಸಣ್ಣಪುಟ್ಟ ಕಳ್ಳತನಗಳು, ಆಗಾಗ್ಗೆ ದುಡ್ಡು ಕೇಳುವುದು…ಇವಳ ಗುಣಗಾನ ಕೇಳಿ ನನಗೂ ತಲೆ ಚಿಟ್ಟು ಹಿಡಿದಿತ್ತು. ಈಗ ಸುಮಾರು ದಿನಗಳ ನಂತರ ಇವಳ ಮನೆಗೆ ಭೇಟಿ ಇತ್ತರೆ, ಮತ್ತೆ ಈ ಹೆಂಗಸು ಕಸ ಪರಿಕೆ ಹಿಡಿದಿದ್ದಾಳೆ. “ಏನಮ್ಮಾ, ನಿನ್ನ ಚಾಳಿ ಏನಾದರೂ ಬದಲಾವಣೆ ಆಯ್ತಾ, ಇಲ್ಲ ಹಾಗೆ ಇದೆಯೊ?” ಎಂದು ರೇಗಿಸಿದರೆ, ಸೆರಗು ಕಟ್ಟಿ, ಜಗಳಕ್ಕೇ ಬಂದಳು.

ಅವಳಿಂದ ತಪ್ಪಿಸಿಕೊಂಡು ಗೆಳತಿಯ ಜತೆ ಮಾತು ತೆಗೆದೆ. ಪೆಚ್ಚು ಮೋರೆ ಮಾಡಿ ಬೇಸರಗೊಂಡಳು “ಏನು ಮಾಡಲೇ, ಬಹಳ ವರುಷದಿಂದ ಮನೆ ಕೆಲಸ ಮಾಡುತ್ತಿದ್ದಾಳೆ. ಇನ್ನು ಇವಳನ್ನು ಬಿಡಿಸಿದರೆ ಮತ್ತೆ ಹುಡುಕಾಟ ಶುರು ಮಾಡಬೇಕು. ಹೊಸಬಳು ಒಳ್ಳೆಯವಳಾಗಿರುತ್ತಾಳೆ ಅಂತ ಏನು ಗ್ಯಾರೆಂಟಿ? ಮತ್ತೆ ಅವಳಿಗೆ ಟ್ರೇನ್ ಮಾಡು, ಎಲ್ಲ ಹೇಳಿಕೊಡು, ಅವಳ ರೀತಿನೀತಿ ಸಹಿಸಿಕೊ…ಅದರ ಬದಲು ಇವಳ ಜತೆ ಅಡ್ಜಸ್ಟ್ ಮಾಡುವುದೇ ಉತ್ತಮ ಅಲ್ವಾ? ಹಳೇ ಗಂಡನ ಪಾದವೇ ಗತಿ, ಅನ್ನೊ ಹಾಗೆ? ಹೇಗಿದ್ದರೂ ಇವಳಿಗೆ ಸಾಲ, ಬಟ್ಟೆಬರೆ, ಊಟ ತಿಂಡಿ ಎಲ್ಲಾ ಕೊಟ್ಟು ಇವಳಿಗಾಗಿ ಬಹಳ ಕಷ್ಟ ಪಟ್ಟಿದೀನಿ, ಅದೆಲ್ಲಾ ವ್ಯರ್ಥ ಆಗುವುದು ಯಾಕೆ?” ಅವಳ ಮಾತಲ್ಲಡಗಿರುವ ಸತ್ಯ ಮನವರಿಕೆಯಾದಾಗ ಸುಮ್ಮನಾದೆ.

“ನೋನ್ ಡೆವಿಲ್ ಇಸ್ ಬೆಟ್ಟರ್ ದಾನ್ ಅನ್ನೂನ್!” ಅನ್ನೊ ಗಾದೆ ಮಾತು ಎಲ್ಲರೂ ಕೇಳಿರುತ್ತಾರೆ. ಎಷ್ಟೋ ಸಲ ನಮ್ಮ ಸಂಬಂಧಗಳೂ ಇದೇ ರೀತಿ ಅಲ್ಲವೇ? ಇರುವುದು ಬಿಟ್ಟುಬಿಟ್ಟರೆ ಹೊಸತು ಸಿಗುವುದೊ ಇಲ್ಲವೋ. ಸಿಕ್ಕರೂ ಎಂತಹುದೋ ಏನೊ ಅನ್ನುವ ಯೋಚನೆ ಬಹಳ ಸಲ ಬರುತ್ತದೆ. ಬಹಳಷ್ಟು ಜನ ಇದರ ಸುಳಿಯಲ್ಲೇ ಸಿಕ್ಕು ನುಜ್ಜುಗುಜ್ಜಾದರೂ ಸರಿ ಇರುವ ಬೆಸುಗೆ ಕಡಿದುಕೊಳ್ಳಲಾರೆ ಅಂತ “ಅಡ್ಜಸ್ಟ್” ಮಾಡಿಕೊಳ್ಳುವುದರಲ್ಲೇ ಜೀವನ ಕಳೆದಿರುತ್ತಾರೆ. ಇದು ಎಲ್ಲಾ ರೀತಿಯ ನಂಟುಗಳಿಗೂ ಅನ್ವಯಿಸುತ್ತಾದರೂ, ದಾಂಪತ್ಯ ಜೀವನದಲ್ಲಿ ಬಹಳ ಮುಖ್ಯವಾದುದು. ಎಷ್ಟೇ ಓದಿರಲಿ, ಒಳ್ಳೆ ಕೆಲಸ, ಕೈ ತುಂಬಾ ಪಗಾರವಿರಲಿ, ನಮ್ಮ ಹೆಣ್ಣು ಮಕ್ಕಳು ವಿರಸ , ಅಸಹನೆ, ಮನಸ್ಥಾಪ ತುಂಬಿದ ಸಂಸಾರದಲ್ಲಿ ತೊಳಲಾಡುತ್ತಾರೆ ಹೊರೆತು, ಹೊರಬರುವುದಿಲ್ಲ. ನಮ್ಮ ಸಂಸ್ಕ್ರುತಿ, ಸಂಪ್ರದಾಯ ಎಂದು ನಾವು ಎಷ್ಟೇ ಸಮರ್ಥಿಸಿಕೊಂಡರೂ ಮೇಲೆ ಹೇಳಿದ ಕಾರಣಗಳು ಪ್ರಧಾನ್ಯ ಎನ್ನುವುದು ಅಲ್ಲಗಳೆಯಲಾಗುವುದಿಲ್ಲ.

ಜತೆಗೆ ಬದುಕುತ್ತಾ, ಗುದ್ದಾಡುತ್ತಾ, ಪ್ರೀತಿ ಮಾಡುತ್ತಾ, ಮನೆಯ ಇತರ ಸದ್ಯಸರೊಡನೆ ಹೊಂದಾಣಿಕೆ ಮಾಡಿಕೊಳ್ಳುತ್ತಾ. ಅವರ ವಿಶ್ವಾಸ ಗಳಿಸಲೆತ್ನಿಸುತ್ತಾ ಹೆಂಗಸರ ಇಡೀ ಜೀವನ ಕಳೆದುಹೋಗಿರುತ್ತೆ. ಬಹಳಷ್ಟು ನಂಟುಗಳು ಬೆಸೆದುಕೊಂಡು, ಒಂದಕ್ಕೊಂದು ಅಂಟಿಕೊಂಡು ಏನೇನೋ ಗೋಜಲಾಗಿಬಿಟ್ಟಿರುತ್ತದೆ. ಮಕ್ಕಳು ಮರಿ ಇದ್ದರಂತೂ ಪರಿಸ್ಥಿತಿ ಇನ್ನು ಗಂಭೀರವಾಗಿಬಿಡುತ್ತದೆ. ಬಿಡುವುದಕ್ಕಿಂತ ಕಟ್ಟಿಕೊಂಡು ಇರುವುದೇ ಮೇಲು ಅನಿಸಿದರೆ ಅದು ಸೋಜಿಗವಲ್ಲ. ಒಂದು ಸಲ ಒಬ್ಬಾತನಿಗೆ ಯಾರೋ ಕೇಳಿದರಂತೆ, “ನಿಮ್ಮ ಸುಧೀರ್ಘ ದಾಂಪತ್ಯ ಜೀವನದ ಗುಟ್ಟೇನು” ಎಂದು. ಅದಕ್ಕಾತ “ಯಾರು ಮೊದಲು ಹೊರ ಹೋಗುವರೋ ಅವರು ಮಕ್ಕಳನ್ನು ಕರೆದುಕೊಂಡು ಹೋಗಬೇಕು ಅಂತ ನಮ್ಮಿಬ್ಬರ ಮಧ್ಯೆ ಒಪ್ಪಂದವಾಗಿತ್ತು!” ಎಂದನಂತೆ. ಹಾಸ್ಯದ ಹಿಂದೆ ಇಲ್ಲಿ ಕೆಲವು ಕಟು ಸತ್ಯಗಳೂ ಅಡಗಿವೆ.

ಬಿಟ್ಟು ಹೋಗುವುದು ಎಲ್ಲಿಗೆ? ಯಾರ ಬಳಿ? ಎಂಬುದು ಮೊದಲ. ಅತ್ಯಂತ ಮುಖ್ಯವಾದ ಪ್ರಶ್ನೆ. ಎಲ್ಲರ ಬೆನ್ನ ಹಿಂದೆಯೂ ತವರು ಮನೆ, ಅಕ್ಕ-ತಂಗಿ, ಅಣ್ಣ-ತಮ್ಮ, ಗೆಳೆಯ, ಗೆಳತಿಯರ ಬೆಂಬಲ ಇರುವುದಿಲ್ಲ. ಉದ್ಯೊಗಸ್ಥ ಮಹಿಳೆಯರಿಗೂ ಇದೊಂದು ತಲೆ ಬಿಸಿಯ ಸಂಗತಿಯೇ. ಇದಾದ ಮೇಲೆ “ಸಮಾಜ”ದ ಕಟುನುಡಿ ಎದಿರಿಸುವುದು ಸಾಮಾನ್ಯವೇ? ಇದು ಹೆಣ್ಣು, ಗಂಡು ಇಬ್ಬರಿಗೂ ಅನ್ವಯಿಸುವಂತಹ ವಿಚಾರ. ತಮ್ಮ ಮನೆಯಲ್ಲಿ ಏನೇ ಹುಳುಕಿರಲಿ, ಅದನ್ನು ಬದಿಗಿಟ್ಟು, ಪರರ ಮನೆಯಲ್ಲಿ ಇಣುಕುವುದು ನಮ್ಮ ಜಾಯಮಾನ. ಸಂಸಾರದಲ್ಲಿ ಬಿರುಕು ಮೂಡಿದ ತಕ್ಷಣವೇ ಹೊರಗಿನವರ ನಾಲಿಗೆಗೆ ಚಾಲನೆ ದೊರಕುತ್ತದೆ. ಇವರಿಂದ ರಕ್ಷಣೆ ಪಡೆಯಲು ಮನೆಯೇ ಸೂಕ್ತ.

“ನೀ ಮನೆ ಬಿಟ್ಟು ಹೊರನಡಿ”ಎಂದು ಗಂಡ ಎನ್ನುವುದು ನಾವು ಹಿಂದಿನ ಕಾಲದಲ್ಲಿ ಬಹಳ ಚಲನಚಿತ್ರಗಳಲ್ಲಿ, ಕತೆ, ಕಾದಂಬರಿಗಳಲ್ಲಿ ನೊಡಿ, ಓದಿ, ನಿಜ ಜೀವನದಲ್ಲೂ ಕೆಲವೊಮ್ಮೆ ನೋಡಿದೀವಿ. ಅದಕ್ಕೆ ಸರಿಯಾಗಿ ಆಗ “ಧೋ” ಎಂದು ಸುರೀತಾ ಇದ್ದರೆ, ಆ ಸನ್ನಿವೇಶಕ್ಕೆ ಒಂದು ಮೆರಗು. ಆದರೆ ನಿಜವಾಗಿ ಇದು ನಡೆದರೆ ಅನುಭವಿಸುವುದು ಹೆಂಗಸರಿಗಂತೂ ಬಹಳ ತ್ರಾಸದಾಯಕ. ಈಗ ಇದೆಲ್ಲಾ ತಡೆಯುವುದಕ್ಕೆ ಸುಮಾರು ಕಾನೂನು, ವ್ಯವಸ್ಥೆ, ನಿಯಮಗಳು ಬಂದಿವೆಯಾದರೂ, ಎಷ್ಟು ಪ್ರಕರಣಗಳು ದಾಖಲೆಯಾಗುತ್ತವೆ ಅನ್ನುವುದು ಸ್ಪಷ್ಟವಿಲ್ಲ.

ಹಳಸಿದ. ದುರ್ಭರವಾಗುತ್ತಿರುವ ಸಂಬಂಧಗಳಿಂದ ದೂರವಾಗುವುದು ಸುಲಭವಲ್ಲ. ತುಂಬಾ ಪ್ರಯತ್ನ ಪಟ್ಟರೂ, ಎಷ್ಟೆ ಶ್ರಮ ವಹಿಸಿದರೂ ಕೆಲವು ಸರಿ ಹೋಗುವುದಿಲ್ಲ. ಯಾವುದೊ ಭ್ರಮೆಯಲ್ಲಿ, ಹಳೇ ನೆನಪುಗಳಲ್ಲಿ, ಮುಂದೆ ಎಂದಾದರೂ ಸರಿ ಹೋಗಬಹುದು ಎನ್ನುವ ಆಸೆಯಲ್ಲಿ ದಿನ ದೂಡುವುದೇ ಕೆಲವರು ಕಂಡು ಕೊಂಡ ದಾರಿ. ಸಮಾಜಕ್ಕಾಗಿ, ತಂದೆ ತಾಯಿಯರಿಗಾಗಿ, ಕುಟುಂಬದ “ಮಾನ- ಮರ್ಯಾದೆ” ಗಾಗಿ, ಮಕ್ಕಳಿಗಾಗಿ ಎಂದು ತಮ್ಮನ್ನು ತಾವೇ ಸಾಂತ್ವಾನಗೊಳಿಸಿಕೊಳ್ಳುತ್ತಾ ಬದುಕುವ ಅನೇಕರನ್ನು ನಾವು ನಿತ್ಯ ನೋಡುತ್ತಲೇ ಇರುತ್ತೇವೆ., ಜೀವಕ್ಕೆ, ಮನಸ್ಸಿಗೆ ಅಪಾಯವಿಲ್ಲದಿದ್ದರೆ, ಕೆಲವೊಮ್ಮೆ ಇದು ಸರಿ ಕೂಡ. ಆದರೆ ಬುದ್ಧಿ ಸ್ಥಿಮಿತದಲ್ಲಿಲ್ಲದರು, ವಂಚನೆ, ಮೋಸ ಮಾಡುವವರು, ನಮ್ಮ ಮನಸ್ಸಿನ ವಿರುದ್ಧ ನಡೆಯುವಂತೆ ಬಲವಂತ ಮಾಡುವರು, ಪದೇ ಪದೇ ನಮಗೆ ವಿಶ್ವಾಸ ದ್ರೋಹ ಮಾಡುವರು ಇಂತಹವರ ಬಳಿಯಿಂದ ಕಷ್ಟವಾದರೂ ಸರಿ, ಆದಷ್ಟು ಬೇಗ ಹೊರನಡೆಯುವುದೇ ಮೇಲು.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x