ಮೊದಲು ಓದುಗನಾಗು

ಕವಿ ನಾರಾಯಣಪ್ಪ ಅವರ ‘ಎದೆಯೊಳಗಿನ ಇಬ್ಬನಿ’: ಸುರೇಶ ಎಲ್. ರಾಜಮಾನೆ, ರನ್ನಬೆಳಗಲಿ

ಕೃತಿ ; ಎದೆಯೊಳಗಿನ ಇಬ್ಬನಿ
ಗಜಲ್ & ಮುಕ್ತಕಗಳ ಸಂಕಲನ

ಲೇಖಕರು;-ದೊಡ್ಡಕಲ್ಲಹಳ್ಳಿ ನಾರಾಯಣಪ್ಪ.

ದೊಡ್ಡಕಲ್ಲಹಳ್ಳಿ ನಾರಾಯಣಪ್ಪಾ ಅವರು ಮೊನ್ನೆ ಅರಸೀಕೆರೆಯ ಕಮ್ಮಟದಲ್ಲಿ ಬೇಟಿಯಾದ ನೆನಪಿಗಾಗಿ ತಮ್ಮ ಕಾವ್ಯಖಜಾನೆಯ ಒಂದು ವಿಸ್ಮಯಕಾರಿ ಹೊತ್ತಿಗೆಯನ್ನು ನೀಡಿದ್ದರು. ಅದನ್ನು ಸವಿಯಲು ಸಮಯ ಸಿಕ್ಕಿರಲಿಲ್ಲ…
ಆದರೆ..

ಕವಿ ನಾರಾಯಣಪ್ಪ ಅವರ
'ಎದೆಯೊಳಗಿನ ಇಬ್ಬನಿ' ಇಂದು ಮುಂಜಾನೆಯ ಮಂಜು ಕರಗುವಷ್ಟರಲ್ಲಿ ಓದಿ ಮುಗಿಸಿದೆ. ನನ್ನೆದೆಗೆ ಮಂಜು ಕವಿಯಿತು. ಗಜಲ್ ಮತ್ತು ಮುಕ್ತಕಗಳನ್ನೊಳಗೊಂಡ ಈ ಹೊತ್ತಿಗೆ ಸಮಯವನ್ನೇನು ಹೆಚ್ಚು ತೆಗೆದುಕೊಳ್ಳಲಿಲ್ಲ ಆದರೆ, ಓದಿ ಅರ್ಥೈಸಿಕೊಳ್ಳಲು ಸ್ವಲ್ಪ ಸಮಯ ಬೇಕೆ ಬೇಕು. 
ಮೂವತ್ತಾರು ಗಜಲ್ಗಳು ಮತ್ತ್ಯಾರೋ ಕರೆದರೆಂದು ಓಡಿಹೋಗದಂತೆ ಹಿಡಿದುಕೊಳ್ಳುತ್ತವೆ. ಹತ್ತು ಮುಕ್ತಕಗಳು ಹೊತ್ತನ್ನೇ ಮರೆಸುತ್ತವೆ.

ಲಾರಿ ಕಾರಿನ ಮೇಲ್ಹರಿದು ಚಲ್ಲಾಪಿಲ್ಲಿಯಾಗಿ ಬಿದ್ದಿವೆ ದೇಹಗಳು/ ನಗುತ್ತಿವೆ ಮಧುಮಗಳ ಕೈಯಲ್ಲಿ ಮದರಂಗಿ ಹೂಗಳು

8ನೇ ಗಜಲ್ ನಲ್ಲಿರುವ ಈ ಸಾಲುಗಳು ನನ್ನನ್ನು ಬಹುವಾಗಿ ಕಾಡಿದವು. ಸಾವಿನಲ್ಲಿಯೂ ಜೀವ ತುಂಬುವ ಕಲೆ , ಸಾವಿಗೂ ನೋವಿಗೂ ,ಹಾಗೂ ಸದ್ಯದ ಪರಿಸ್ಥಿತಿಯಲಿ ಸಾಗುವ ಹಾದಿಗೂ ತುಂಬಾ ಸೊಗಸಾದ ಜೋಡನೆ ಇದಾಗಿದೆ. ಹೆಚ್ಚಿನ ಗಜಲ್ ಗಳು ಗಲ್ ಗಲ್ ಗೆಜ್ಜೆಸದ್ದಿಗೆ ಜೋತುಬೀಳದೇ ಹೂತುಹೋಗಿರುವ ನೋವನ್ನು ಅತಿಯಾದ ಆಳದವರೆಗೂ ಕರೆದುಕೊಂಡುಹೋಗಿ ಓರೆಗಚ್ಚಿ ಪ್ರಶ್ನಿಸುವ ಹಾಗು ಅದರ ಹುಚ್ಚುಬಿಡಿಸುವ ಕೆಲಸ ಅನೇಕ ಗಜಲ್ ಗಳಲ್ಲಿ ಕಾಣುತ್ತದೆ.

ಅವರೇ ಪರಿಚಯಿಸಿದ ಒಂದು ಹೊಸ ಶಬ್ದ 'ಅಂತರಂಗದ ಕೋರ್ಟು' ಎಂಬುದು ಬಲು ಇಷ್ಟವಾಯ್ತು. ಸಮಸ್ಯೆಗಳ ಸುಳಿಗೆ ಸಿಲುಕಿದವರು ಅಲೆದಾಡುವ ಪರಿ ಕಂಡು ಸಾಕಾಗಿರುವ ಅವರ ಮನದ ನೋವುಗಳನ್ನು, ಸಮಾಜದ ತಪ್ಪುಗಳನ್ನು, ಪ್ರಶ್ನಿಸುವ ಸಾದ್ಯತೆ ಇದ್ದರೂ ಪರಿಹಾರ ಸಿಗುವದು ಕಷ್ಟ ಎನ್ನುವ ಸನ್ನಿವೇಶಗಳು ಕಣ್ಮುಂದಿರುವಾಗ ನಮ್ಮಲ್ಲಿರುವ ನೋವುಗಳನ್ನು, ಪ್ರಶ್ನೆಗಳನ್ನು ನಮ್ಮ ಅಂತರಂಗದಲ್ಲೊಮ್ಮೆ ವಾದಗಳಿಗೊಡ್ಡಿಕೊಂಡು ನೋಡಿ ಮನಸುಬಿಚ್ಚಿ ಹೇಳಿ ನ್ಯಾಯದೇವತೆಯ ಮೊರೆ ಇಟ್ಟು ನಮ್ಮ ಅಳನ್ನಾದರು ತೋಡಿಕೊಂಡು ಹಗುರಾಗುವ ಪ್ರಕ್ರಿಯೇ  ಗಜಲ್ ಗಳಲ್ಲಿ ಕಾಣಸಿಗುತ್ತದೆ ಮತ್ತು ಅಷ್ಟೇ ಸಮಾಧಾನವನ್ನೂ ಮನಸಿಗೆ ನೀಡುತ್ತದೆ.

ಗಜಲ್ 32, 
ದೇವರನ್ನು ನಂಬಿ ಸಮಯ ವ್ಯರ್ಥ ಮಾಡುವ ಬದಲು ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಹೋಗಲಿ ಕಲ್ಲು ದೇವರಿಗೆ ಏನೆಲ್ಲಾ ಮಾಡುವ ನಾವು ಕಲ್ಲಾಗಿ ಕುಳಿತವರ, ಕೈಕಾಲೇ ಇಲ್ಲದವರ, ಕೈಚಾಚಿ ಬೇಡುವವರೆಡೆಗೊಮ್ಮೆ ಏಕೆ ಕಣ್ತೆರೆದು ನೋಡಬಾರದು ಎಂಬ ವಾಸ್ತವದ ನಿಲುವು ಕಾಣುತ್ತದೆ.
ನಾರಾಯಣಪ್ಪ ಅವರು ಹೇಳ್ತಾರೆ,

ನಿಂತು ನಿಂತು ಸಾಯಲಾರೆ ಇನ್ನು ನಿನ್ನ ಮುಂದೆ ಹೀಗೆ/ ಬೇಕಾದರೇ ಬರಲಿ ಅವನು ನನ್ನ ಕೇರಿಗೆ,

ವ್ಹಾವ್!! ಎಂತಹ ರೋಮಾಂಚನಗೊಳಿಸುವ ಸಾಲುಗಳಿವು. ಸಮಾಜದ ಆಡಂಬರಗಳಿಗೆ ಸೆಡ್ಡು ಹೊಡೆದು ನಿಲ್ಲುವ ಅವರ ಕಾವ್ಯ ಶಕ್ತಿ ಅಗಾಧವಾದದ್ದು. ಅವರ ಬರವಣಿಗೆಯ ದಾರಿಯನ್ನು ಪರಿಚಯಿಸುತ್ತ ಹೇಳುತ್ತಾರೆ

ಬೆನ್ನು ತಟ್ಟಿದ ನಿಮ್ಮ ಕೈಯಲ್ಲಿ ಕೆರವಿತ್ತೆಂದು ಬಲ್ಲೆ
ಕೆರ ಹೊಲೆದವನ ಋಣಕ್ಕಾಗಿ ಬರೆಯುತ್ತೇನೆ.

ನಿಜವಾದ ನೋವಿನ ಅರಿವಿದ್ದವರಿಗೆ ಮತ್ತು ಅದನ್ನು ಸಂತೈಸಿ ಮುನ್ನಡೆಸಿದವರ ಅರಿವೂ ಇದ್ದವರು ಮಾತ್ರ ಹೀಗೆ ಬರೆಯಲು ಸಾದ್ಯ.(ಗಜಲ್ 36) ಇದರೊಟ್ಟಿಗೆ ಮುಕ್ತಕಗಳಲ್ಲಿ ತುಂಬಾ ಸುಂದರವಾದ ಭಾವಗಳನ್ನು ಕಟ್ಟಿ ನಮ್ಮೆದುರು ತೆರೆದಿಟ್ಟಿದ್ದಾರೆ ಅವರ ಮುಕ್ತಕಗಳಲ್ಲಿ ನನಗಿಷ್ಟವಾದವುಗಳನ್ನು ಇಲ್ಲಿಟ್ಟಿದ್ದೇನೆ.

ಹಸಿವಿನಲ್ಲಿ ಹುಟ್ಟಿದ 
ಕಾವ್ಯ
ಅನ್ನವಾಗಲಿಲ್ಲ.

ನಿನ್ನ ನಗು ನನ್ನ ಕನಸಿನ 
ಗೋರಿಯ ಮೇಲೆ
ಚೆಲ್ಲಿದ
ವ್ಯರ್ಥ ಬೆಳದಿಂಗಳು.

ಕಾಲ ಸದಾ ಸಿದ್ದವಾಗಿರುತ್ತದೆ
ಗಾಯಕ್ಕೆ ನೆನಪಿನ
ಉಪ್ಪು ಸವರಲು.

ಹೀಗೆ ಚಿಂತನೆಗೆ ಹಚ್ಚುವ, ಕವಿತೆಯ ಸಾಲುಗಳೋಂದಿಗೆ ಹಿತವಾಗಿ ಬಾಳುವ ದಾರಿಯನ್ನು, ಹಾಗೂ ತುಂಬಾ ಕ್ರೂರಿಯಾದ ಈ ಜಗತ್ತಲ್ಲಿ ನಮ್ಮಷ್ಟಕ್ಕೆ ನಾವಿರುವ, ನಮ್ಮನ್ನು ನಾವೇ ಅರ್ಥೈಸಿಕೊಳ್ಳುವ ದಿಕ್ಕನ್ನು, ಹಾಗು ಸತ್ತುಹೋಗಿರೋ ಎಷ್ಟೋ ಐತಿಹಾಸಿಕ, ಸಾಂಸ್ಕೃತಿಕ ನಿಲುವುಗಳನ್ನು ಹೆಕ್ಕಿ ತೆಗೆದು ಜೀವ ತುಂಬುವಲ್ಲಿ ಯಶ್ವಿಯಾಗಿರುವ ಇರುವ ಇವರ ಕಾವ್ಯ ಪ್ರೌಢಿಮೆಯನ್ನು ಒಮ್ಮೆ ಎಲ್ಲರೂ ಸವಿಯಲೇ ಬೇಕು.

-ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಕವಿ ನಾರಾಯಣಪ್ಪ ಅವರ ‘ಎದೆಯೊಳಗಿನ ಇಬ್ಬನಿ’: ಸುರೇಶ ಎಲ್. ರಾಜಮಾನೆ, ರನ್ನಬೆಳಗಲಿ

  1. ಸೋಮು ಕುದರಿಹಾಳ ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು ಗಂಗಾವತಿ says:

     ಸುರೇಶ್ ರಾಜಮಾನೆಯವರು ಬರೆದ ಅಭಿಪ್ರಾಯ ತುಂಬಾ ಚೆನ್ನಾಗಿದೆ. ಪದ್ಯಗಳ ಬಗ್ಗೆ ತಮ್ಮದೇ ಮನೋಭೂಮಿಕೆಯಲ್ಲಿ ಮೊಳೆತ ಭಾವಗಳನ್ನು ಪಲ್ಲವಿಸಿದ್ದಾರೆ. 

Leave a Reply

Your email address will not be published. Required fields are marked *