ಕವಿತೆ ಕಳ್ಳರಿದ್ದಾರೆ ಎಚ್ಚರಿಕೆ!!!: ನಟರಾಜು ಎಸ್. ಎಂ.

ಪಿಯುಸಿಯ ದಿನಗಳವು. ಯಾವುದೋ ಮುದ್ದು ಕನಸಿಗೆ ಬಿದ್ದು ಕವಿತೆ ಬರೆಯಲು ಶುರು ಮಾಡಿದ್ದೆ. ಬರೆದ ಕವಿತೆಯನ್ನು ತರಗತಿಯಲ್ಲಿ ಓದಬೇಕೆಂಬ ಹಪಹಪಿ ಇತ್ತು. ಅಂದು ಕ್ಲಾಸಿಗೆ ಸರ್ ಇನ್ನೂ ಬಾರದಿದ್ದ ಕಾರಣ ಕ್ಲಾಸಿನಲ್ಲಿ ಹರಟುತ್ತಾ ಕುಳಿತ್ತಿದ್ದ ಸಹಪಾಠಿಗಳಿಗೆ ಅಚ್ಚರಿಯಾಗುವಂತೆ ಡಯಾಸ್ ಬಳಿ ನಿಂತು "ಇವತ್ತು ಒಂದೆರಡು ಕವಿತೆ ಓದಬೇಕು ಅಂದುಕೊಂಡಿದ್ದೇನೆ" ಎಂದಿದ್ದೆ. ನನ್ನ ಮಾತಿಗೆ ಗಲಾಟೆಯಲ್ಲಿ ತೊಡಗಿದ್ದ ಕ್ಲಾಸ್ ಒಂದು ಹಂತಕ್ಕೆ ಸೈಲೆಂಟ್ ಆಗಿ ಹೋಗಿತ್ತು. ಹಿಂದಿನ ಬೆಂಚಿನ ಒಂದಿಬ್ಬರು ಗೆಳೆಯರು "ಎಲ್ಲಾ ಸೈಲೆಂಟ್ ಆಗ್ರಪ್ಪಾ ನಟ ಕವಿತೆ ಓದ್ತಾನಂತೆ" ಅಂದ ಕೂಡಲೇ ಇಡೀ ಕ್ಲಾಸ್ ಪಿನ್ ಡ್ರಾಪ್ ಸೈಲೆನ್ಸ್ ಅಂತಾರಲ್ಲ ಆ ಸ್ಥಿತಿಯಲ್ಲಿತ್ತು. ಟೇಬಲ್ ಮೇಲೆ ನನ್ನ ನೋಟ್ ಬುಕ್ ಇಟ್ಟು ಗಂಟಲು ಸರಿ ಮಾಡಿಕೊಂಡು ಕವಿತೆಯ ಶೀರ್ಷಿಕೆ ಹೇಳಿದವನೇ "ಹಾಲ್ಗೆನ್ನೆಯ ಚೆಲುವೆ ಓ ನನ್ನ ನೀರೆ ನನ್ನಯ ಕನಸಿನಲಿ ದಿನ ನಿತ್ಯ ಬಾರೆ" ಎನ್ನುವ ಪ್ರೇಮ ಕವಿತೆಯನ್ನು ಓದುತ್ತಾ ಓದೆ. ಇಡೀ ಕ್ಲಾಸ್ ಸದ್ದು ಮಾಡದೆ ಕವಿತೆ ಕೇಳುತ್ತಿತ್ತು. ಆಗ ನಮ್ಮ ತರಗತಿಯ ಬಾಗಿಲಿನಲ್ಲಿ ಸೆಕೆಂಡ್ ಪಿಯು ಹುಡುಗರು ಸಹ ಬಂದು ನಿಂತು ನಾನು ಓದುತ್ತಿದ್ದ ಕವಿತೆಯನ್ನು ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಿದ್ದರು. ನಾನು ಮೊದಲ ಕವಿತೆ ಓದಿ ಮುಗಿಸಿ ಎರಡನೇ ಕವಿತೆಯನ್ನು ಓದುವ ವೇಳೆಗೆ ಬಾಗಿಲ ಬಳಿ ಫುಲ್ ಜನ. ನಾನು ಕವಿತೆ ಓದಿ ಮುಗಿಸಿದಾಗ ಇಡೀ ಕ್ಲಾಸ್ ರೂಮ್ ಕರಾಡತನದ ಸದ್ದಿನಲ್ಲಿ ತುಂಬಿ ಹೋಗಿತ್ತು. ಆ ದಿನದ ನಂತರ ನಮ್ಮ ಕನ್ನಡ ಸರ್ ಗೆ ಕವಿತೆಯ ವಿಷಯ ತಿಳಿದು ಆಗಾಗ ಕ್ಲಾಸಿನಲ್ಲಿ ಕವಿತೆ ಓದಿಸ್ತಾ ಇದ್ರು. ನಾನು ಕವಿತೆ ಓದುವುದನ್ನ ನೋಡಿ ನನ್ನೊಡನೆ ಹಠಕ್ಕೆ ಬಿದ್ದು ಒಂದು ದಿನ ನಮ್ಮ ಕ್ಲಾಸಿನ ಒಬ್ಬ ಹುಡುಗ "ಸರ್ ನಾನು ಸಹ ಕವಿತೆ ಓದ್ತೀನಿ" ಅಂದಿದ್ದ. ಮಂಡ್ಯ ಕಡೆಯವನಾದ ಆ ಹುಡುಗ ತನ್ನ ಅಜ್ಜಿಯ ಮನೆಯಲ್ಲಿದ್ದುಕೊಂಡು ನಮ್ಮ ಕನಕಪುರದ ರೂರಲ್ ಕಾಲೇಜಿನಲ್ಲಿ ನಮ್ಮ ಜೊತೆ ಓದುತ್ತಿದ್ದ. ಅವನ ಹೆಸರು ಸುದೀಂದ್ರ. 

ಸುದೀಂದ್ರನೆಂದರೆ ಒಂದಷ್ಟು ಲೆಕ್ಚರರ್ ಗಳಿಗೆ ಒಂತರಾ ಪ್ರೀತಿ. ಅದರಲ್ಲೂ ಕನ್ನಡದ ಆ ಸರ್ ಗೆ ಅವನೆಂದರೆ ವಿಶೇಷವಾದ ಪ್ರೀತಿ. ಸುದೀಂದ್ರ ಕವಿತೆ ಓದ್ತೀನಿ ಅಂದಾಗ ಆಯ್ತು ಓದಪ್ಪ ಅಂತ ತುಂಬಾ ಖುಷಿಯಿಂದ ಅವರು ಅವತ್ತು ಕವಿತೆ ಓದಿಸಿದ್ದರು. ಅವನು ಓದಿದ್ದ ಆ ಕವಿತೆಯ ಮೊದಲ ಸಾಲಾದ 'ಬಸ್ಸುಗಳೇ ಹೀಗೆ" ಎನ್ನುವ ಸಾಲನ್ನ ನಾನು ಮರೆಯಲು ಸಾಧ್ಯವೇ ಇಲ್ಲ ಬಿಡಿ. ಅವತ್ತು ಅವನು ಓದಿದ ಆ ಕವಿತೆಯ ಓದಲು ಶುರುವಿಟ್ಟುಕೊಂಡಾಗ ಆ ಕವಿತೆಯ ಲಾಲಿತ್ಯಕ್ಕೆ ಇಡೀ ಕ್ಲಾಸು ಮರುಳಾಗಿ ಹೋಯಿತು. ಅವನು ಕವಿತೆ ಓದಿ ಮುಗಿಸಿದಾಗ ಇಡೀ ಕ್ಲಾಸು ಚಪ್ಪಾಳೆ ತಟ್ಟಿ ಸಂಭ್ರಮಿಸಿತು. ಸರ್ ಕೂಡ ತುಂಬಾ ಖುಷಿಯಾಗಿ ಬೆನ್ನು ತಟ್ಟಿದ್ದರು. ಸರ್ ರ ಆಣತಿಯಂತೆ ಸುದೀಂದ್ರ ಮತ್ತು ನಾನು ಆಗಾಗ ಕವಿತೆಗಳನ್ನು ಕ್ಲಾಸಿನಲ್ಲಿ ಓದ್ತಾ ಇದ್ವಿ. ಅವನು ಕವಿತೆಗಳನ್ನು ಒಂದು ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದ. ನಾನೂ ಒಂದು ನೋಟ್ ಬುಕ್ ನಲ್ಲಿ ಬರೆದಿಟ್ಟುಕೊಂಡಿದ್ದೆ. ಬರೀ ಕವಿತಯಲ್ಲೇ ಅಲ್ಲದೇ ಓದಿನಲ್ಲೂ ಸುದೀಂದ್ರನಿಗೂ ನನಗೂ ಪೈಪೋಟಿ ಇತ್ತು. ನಮ್ಮ ಪಿಯು ಮುಗಿದ ಮೇಲೆ ಸುದೀಂದ್ರ ನನ್ನ ಗೆಳೆಯನಾಗಿದ್ದರೂ ಅವನು ಬೇರೆ ಊರಿನವನಾದ ಕಾರಣ ಅವನೊಡನೆ ಸಂಪರ್ಕದಲ್ಲಿರಲು ಸಾಧ್ಯವಾಗಲೇ ಇಲ್ಲ. ಹೀಗಿರುವಾಗ ರಜೆ ದಿನಗಳಲ್ಲಿ ನಮ್ಮ ಅಂಗಡಿಯಲ್ಲಿ ಯಾಕೋ ಕೊಟ್ಟಿದ್ದ ಹಳೆ ಪುಸ್ತಕದ ರಾಶಿಯಲ್ಲಿ ಒಂದು ಕವಿತೆಯ ಪುಸ್ತಕ ಸಿಕ್ಕಿತ್ತು. ನಾನು ಶ್ರದ್ದೆಯಿಂದ ಆ ಪುಸ್ತಕ ಓದಲು ಶುರು ಮಾಡಿದಾಗ ಕ್ಲಾಸಿನಲ್ಲಿ ಸುದೀಂದ್ರ ಓದಿದ್ದ ಅಷ್ಟೂ ಕವಿತೆಗಳು ಆ ಪುಸ್ತಕದಲ್ಲೇ ಇದ್ದವು. ಲೇಖಕರು ಯಾರು ಎಂದು ಮತ್ತೊಮ್ಮೆ ನೋಡಿದಾಗ ಯಾರೋ ಹಿರಿಯರು ಬರೆದ ಕವಿತೆಗಳವು. ನಮ್ಮ ಕವಿ ಸುದೀಂದ್ರ ತುಂಬಾ ಶ್ರದ್ದೆಯಿಂದ ಅಷ್ಟೂ ಕವಿತೆಗಳನ್ನು ತನ್ನ ಡೈರಿಯಲ್ಲಿ ಬರೆದುಕೊಂಡು ಬಂದು ನಮ್ಮ ಕ್ಲಾಸಿನಲ್ಲಿ ಓದಿದ್ದ ಎನ್ನುವುದ ನೆನೆದಾಗ ನನಗೆ ಸುದೀಂದ್ರ ಮಾಡಿದ ಕಳ್ಳತನವನ್ನು ನೆನೆದು ಸಿಪ್ಪಾಪಟ್ಟೆ ಕೋಪ ಬಂದಿತ್ತು. ಅಚ್ಚರಿಯೆಂದರೆ ಯಾರದೋ ಕವಿತೆಯನ್ನು ಯಾವುದೇ ಅಳುಕಿಲ್ಲದೆ ಆ ಕವಿತೆ ನನ್ನವು ಎನ್ನುತ್ತಾ ಆತ ನಗುಮುಖದಿಂದ ಓದುತ್ತಿದ್ದದ್ದನ್ನು ಆತನನ್ನು ಸರ್ ಉಬ್ಬಿಸುತ್ತಿದ್ದುದ್ದನ್ನು ನೆನೆದಾಗ ಜನ ಮೋಸವನ್ನು ಎಷ್ಟು ನಾಜೂಕಾಗಿ ಮಾಡುತ್ತಾರೆ ಎಂದು ಈಗಲೂ ಅನಿಸುತ್ತದೆ. 

ಕಾಲೇಜಿಗೆ ಬಂದ ಮೇಲೆ ಕವಿತೆಯನ್ನು ಕದಿಯುವವರನ್ನು ಕಂಡಿಲ್ಲವಾದರೂ ಯಾರದೋ ಕವಿತೆಯ ಆಧಾರದ ಮೇಲೆ ಕತೆ ಬರೆದು ಪ್ರಶಸ್ತಿ ಪಡೆದವರನ್ನ ನೋಡಿದ್ದೇನೆ. ಎಫ್ ಬಿ ಗೆ ಬಂದ ಮೇಲಂತೂ ಒಬ್ಬರ ಕವಿತೆಗಳನ್ನು ರಾಜಾರೋಷವಾಗಿ ತಮ್ಮವೇ ಕವಿತೆ ಎನ್ನುವಂತೆ ಕಾಪಿ ಪೇಸ್ಟು ಮಾಡಿಕೊಂಡ ಒಂದಷ್ಟು ಜನ ಕಣ್ಣಿಗೆ ಬಿದ್ದಿದ್ದಾರೆ. ಪಂಜುವಿನ ಸಂಪಾದಕನಾದ ಮೇಲೆ ಪಂಜುವಿನ ಚುಟುಕ ಸ್ಪರ್ಧೆಗೆ ಬೇರೆಯವರ ಕವಿತೆಯನ್ನು ಕದ್ದು ಕಳಿಸಿದವರನ್ನೂ, ಪಂಜುಗಾಗಿ ರವಿ ಬೆಳಗೆರೆಯಂತಹ ದೊಡ್ಡ ಲೇಖಕರ ಬರಹಗಳನ್ನು ತಮ್ಮದೇ ಬರಹ ಎಂದು ಕಳುಹಿಸಿದ ಲೇಖಕರನ್ನು ಸಹ ನೋಡಿದ್ದೇನೆ. ಲೇಖನದ ಒರಿಜಿನಾಲಿಟಿಯನ್ನು ಗೂಗಲ್ ಸರ್ಚ್ ಕೊಟ್ಟು ನೋಡುವ ಪರಿಪಾಠ ಇಂದಿಗೂ ಪಂಜುವಿನಲ್ಲಿ ಚಾಲ್ತಿಯಲ್ಲಿರುವ ಕಾರಣ ಕಳ್ಳ ಮಾಲು ಎಲ್ಲಿಯದು ಎಂದು ತಿಳಿದ ಕ್ಷಣ ಕದ್ದವರನ್ನು ಮುಲಾಜಿಲ್ಲದೆ ಬ್ಲಾಕ್ ಲಿಸ್ಟ್ ಗೆ ಆಡ್ ಮಾಡಿರುವುದಲ್ಲದೇ ಕಣ್ತಪ್ಪಿ ಅಂತಹವರ ಬರಹಗಳು ಪ್ರಕಟವಾಗಿದ್ದರೆ ಪಂಜುವಿನಿಂದ ಆ ಬರಹಗಳನ್ನು ಡಿಲೀಟ್ ಸಹ ಮಾಡಿದ್ದೇನೆ. ಅಚ್ಚರಿ ಎಂದರೆ ಕದ್ದ ಮಾಲುಗಳನ್ನು ಗೂಗಲ್ ನಲ್ಲಿ ಪತ್ತೆ ಹಚ್ಚುತ್ತಾರೆ ಎಂಬುದ ತಿಳಿದ ಕವಿತೆಯ ಕಳ್ಳರು/ ಕಳ್ಳಿಯರು ಇತ್ತೀಚೆಗೆ ಪ್ರಿಂಟ್ ಆಗಿರುವ ಪುಸ್ತಕಗಳಲ್ಲಿನ ಸಾಲುಗಳನ್ನು ಕದಿಯುವ ಪರಿಪಾಠ ಬೆಳೆಸಿಕೊಂಡಿದ್ದಾರಂತೆ. ಅದಕ್ಕೊಂದು ಉದಾಹರಣೆ ಎಂದರೆ…

"ನಾನು ನಿಮ್ಮ ಪತ್ರಿಕೆಯ ಅಭಿಮಾನಿ. ಯಾವ ಸಂಚಿಕೆಯನ್ನೂ ಬಿಡದೇ ಓದುತ್ತೇನೆ. ಈ ಸಲದ ಸಂಚಿಕೆಯ ಪತ್ರಿಕೆಯ ಕವನಗಳನ್ನು ಓದಿದೆ. ಯಾಕೋ ತುಂಬಾ ಬೇಸರವೆನಿಸಿತು. ಈಗಾಗಲೇ ಕೃತಿಚೌರ್ಯಮಾಡಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಛೀಮಾರಿ ಹಾಕಿಸಿಕೊಂಡವರ ಕವನಗಳನ್ನು ಇಂತಹ ಪ್ರತಿಷ್ಟಿತ, ಹೆಸರುವಾಸಿ ಅಂತರ್ಜಾಲ ಪತ್ರಿಕೆಯಲ್ಲಿ ಕಂಡು ಮುಜುಗರವೆನಿಸಿತು. ಈಗಾಗಲೇ ಪ್ರತಿಭಾ ನಂದಕುಮಾರ್, ಜಯಂತ್ ಕಾಯ್ಕಿಣಿ, ಫಾಲ್ಗುಣ ಗೌಡ, ಕಾವ್ಯಾ ಕಡಮೆ ಹಾಗೂ ಇತ್ತೀಚೆಗೆ ಮಯೂರದಲ್ಲಿ ಪ್ರಕಟವಾಗಿದ್ದ ಅಕ್ಷತಾ ಹುಂಚದಕಟ್ಟೆಯವರ ಕವನವನ್ನು ಕದ್ದು ಇಡೀ ಜಿಲ್ಲೆಯಲ್ಲಿ ನಗೆಪಾಟಲಾಗಿದ್ದು ತಮಗೆ ಗೊತ್ತಿರಲಿಕ್ಕಿಲ್ಲ. ಅವರ ಸಂಕಲನದ ಕನಿಷ್ಟ ಹತ್ತು ಕವನಗಳು ಬೇರೆಯವರ ಕವನವನ್ನು ಕದ್ದಿದ್ದು. ಹೀಗಾಗಿ ತಮ್ಮ ಅವಗಾಹನೆಗೆ ಪ್ರತಿಭಾ ನಂದಕುಮಾರ ಹಾಗೂ ಜಯಂತ ಕಾಯ್ಕಿಣಿ ಕವನದೊಂದಿಗೆ ಕೃತಿಚೌರ್ಯವನ್ನೂ ಕಳುಹಿಸಿರುವೆ. ನಿಮಗೆ ಕಳುಹಿಸಿದ ಕವನವೂ ಯಾವುದೋ ಕೃತಿಚೌರ್ಯದ್ದಾಗದಿರಲಿ ಎಂಬ ಹಾರೈಕೆಯೊಂದಿಗೆ…" ಎಂಬ  ಒಂದು ಮೇಲ್ ಸಾಕ್ಷಿ ಸಮೇತ ನಮ್ಮ ಪಂಜುವಿನ ಇ ಮೇಲ್ ಐಡಿಗೆ "ದಯವಿಟ್ಟು ಗಮನಿಸಿ. ಪತ್ರಿಕೆಯ ಘನತೆಗೆ ಕುಂದುಂಟಾಗದಿರಲಿ" ಎಂಬ ಶೀರ್ಷಿಕೆಯೊಂದಿಗೆ ಎರಡು ಮೂರು ವಾರದ ಹಿಂದೆ ಬಂದಾಗ ನಿಜಕ್ಕೂ ಅಚ್ಚರಿಯಾಗಿತ್ತು. 

ಒಂದು ಕ್ಷಣ ಆ ಮೇಲ್ ಗೆ ಏನಂತ  ಉತ್ತರ ಬರೆಯೋದು ಅಂತ ತೋಚಲೇ ಇಲ್ಲ. ಈಗಲೂ ಉತ್ತರ ಕಳಿಸಿಲ್ಲ. ಅವರು ಕಳುಹಿಸಿದ ಸಾಕ್ಷಿಯಂತಿದ್ದ ಕವಿತೆಗಳ ಇಮೇಜ್ ಗಳ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿದಾಗ ನಕಲು ಮಾಡಿದ ಕವಯತ್ರಿ ಮೂಲ ಕವಿತೆಗಳಲ್ಲಿನ ಪ್ರತಿ ಸಾಲನ್ನು ಭಟ್ಟಿ ಇಳಿಸುವ ಬದಲು ಕೆಲವು ಸಾಲುಗಳನ್ನು ಆರಿಸಿ ತಮ್ಮ ಕವಿತೆಯೊಳಗೆ ಆಯಕಟ್ಟಿನ ಜಾಗದಲ್ಲಿ ಕೂರಿಸಿ ಆ ಪದಗಳ ಹಿಂದೆ ಹಾಗು ಮುಂದೆ ಒಂದಷ್ಟು ತಮ್ಮ ಪದಗಳ ಜೋಡಿಸಿದ್ದರು. ಮೂಲ ಮತ್ತು ನಕಲಿಯಂತೆ ಕಂಡ ಕವಿತೆಯನ್ನು ಮತ್ತೊಮ್ಮೆ ಓದಿದಾಗ ಯಾವ ಆಧಾರದ ಮೇಲೆ ಇದನ್ನು ನಕಲಿ ಕವಿತೆ ಎನ್ನುವುದು ಎನಿಸಿತು. ಯಾಕೆಂದರೆ ಹಾಗೆ ನಕಲು ಮಾಡಿದ ಹೊಸ ಕವಿತೆಯನ್ನು ನಮ್ಮಂತಹ ನಿಮ್ಮಂತಹ ಸಾಮಾನ್ಯ ಓದುಗರ ಮುಂದಿಟ್ಟರೆ ಮೂಲ ಲೇಖಕರ ಹೊರತು ನಾವು ನೀವು ಇದು ಒಳ್ಳೆಯ ಕವಿತೆ ಅಂತ ಓದಿ ಸುಮ್ಮನಾಗಬೇಕಾಗುತ್ತದಾ ಹೊರತು ನಕಲಿ ಎಂದು ಆಪಾದಿಸಲಾಗದು. ಯಾಕೆಂದರೆ ಇತ್ತೀಚೆಗೆ ಬಿಡುಗಡೆಯಾದ ಬಾಹುಬಲಿ ಒರಿಜಿನಲ್ ಅಲ್ಲ ಎಷ್ಟೋ ಸಿನಿಮಾಗಳ ದೃಶ್ಯಗಳು ಈ ಸಿನಿಮಾದಲ್ಲಿ ಕಾಪಿ ಮಾಡಲಾಗಿದೆ ಎನ್ನುತ್ತಾರಲ್ಲ ಹಾಗೆ ಅಂತಹುದೇ ರೀತಿಯಲ್ಲಿ ಕಿಲಾಡಿತನದಲ್ಲಿ ಕವಿತೆ ನಕಲಾಗಿರುತ್ತದೆ.   

ಇಂತಹ ನಕಲಿತನಗಳ ಕೃತಿ ಚೌರ್ಯಗಳ ಕುರಿತ ಜಗಳಗಳು ಎಫ್ ಬಿ ಯಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಅಂತಹ ಎರಡು ಮೂರು ಪ್ರಮುಖ ಜಗಳಗಳು ನನ್ನ ಮನಸ್ಸಿನಲ್ಲಿ ಸದಾ ಉಳಿದುಬಿಟ್ಟಿವೆ. ಒಂದು ಜಗಳದ ಬಗ್ಗೆ ಹೇಳಬೇಕೆಂದರೆ ಹುಡುಗನೊಬ್ಬ ಬರೆಯುವ ಚುಟುಕಗಳು ಒರಿಜಿನಲ್ ಅಲ್ಲ. ಕದ್ದ ಮಾಲುಗಳು ಎಂದು ಹೀಗೆ ಮೂರ್ನಾಲ್ಕು ವರುಷಗಳ ಹಿಂದೆ ಒಂದು ದೊಡ್ಡ ಜಗಳ ನಡೆದಿತ್ತು. ಆ ಹುಡುಗ ತುಂಬಾ ಭಾವುಕನಾಗಿ ಅವು ನನ್ನವೇ ಕವಿತೆಗಳು ಅಂತ ಸಮಜಾಯಿಷಿ ನೀಡಿದ್ದ. ಒಮ್ಮೆ ಆ ಹುಡುಗನ ಕವಿತೆಗಳ ನೋಡಿದರೆ ಇವು ಎಲ್ಲಿಂದಲೋ inspire ಆಗಿವೆ ಎನಿಸುತ್ತವೆಯಾದರೂ ಒರಿಜಿನಾಲಿಟಿ ಬಗ್ಗೆ ದೇವರೇ ಬಲ್ಲ. ಹಾಗೆ ನೋಡಿದರೆ ನ್ಯಾನೋ ಕತೆಗಳನ್ನು ಬರೆದ ಕೆಲವರ ಕತೆಗಳನ್ನು ನೋಡಿದಾಗ ಯಾವುದೋ ಉರ್ದು ಬರಹಗಳಿಂದ ಪ್ರೇರಿತ ಅಂತ ನನಗೆ ಎಷ್ಟೋ ಸಲ ಅನಿಸಿದೆ. ಹಾಗಂತ ಅವರ ಬರಹಗಳು ಕದ್ದ ಮಾಲುಗಳು ಅನ್ನಲಾಗದು. ಎಲ್ಲಿಂದಲೋ ಖಂಡಿತಾ ಪ್ರೇರಿತವಾಗಿರಬಹುದು. ಅಂದ ಹಾಗೆ ಒಂದಷ್ಟು ಜನರಿಂದ ಇವನ ಚುಟುಕಗಳು ಒರಿಜಿನಲ್ ಅಲ್ಲ ಎನಿಸಿಕೊಂಡಿದ್ದ ಆ ಹುಡುಗ ಚುಟುಕಗಳ ಬರೆಯುತ್ತಲೇ ಮುಂದೆ ಸಿನಿಮಾ ಒಂದಕ್ಕೆ ಹಾಡು ಸಹ ಬರೆದದ್ದು ಈಗ ಇತಿಹಾಸ. 

ಅಷ್ಟಕ್ಕೂ ಕ್ಲೆಪ್ಟೋಮೇನಿಯಾ ಎಂಬ ಕಾಯಿಲೆಯಂತೆ ಇತ್ತೀಚಿನ ದಿನಗಳಲ್ಲಿ ಕವಿತೆಗಳ ಕದಿಯುತ್ತಿರುವ ವೇಗವನ್ನು ನೋಡಿದರೆ ಕದ್ದ ಕವಿತೆಗಳಿಂದ ಆಗುವ ಲಾಭಗಳೇನು ಅನಿಸುತ್ತದೆ. ಕವಿತೆ ಬರೆದರೆ ಸಾಹಿತಿಯಾಗ್ತಾರೆ, ಸಾಹಿತಿಗಳಿಗೆ ಸಭೆ ಸಮಾರಂಭಗಳಲ್ಲಿ ಸನ್ಮಾನ ಪ್ರಶಸ್ತಿ ಸಿಗುತ್ತದೆ, ಪಠ್ಯಪುಸ್ತಕಗಳಲ್ಲಿ ಕವಿತೆ ಪ್ರಕಟವಾಗುತ್ತವೆ, ಯಾವತ್ತಾದರೂ ಸಾಹಿತ್ಯ ಸಮ್ಮೇಳನದ ಅಥವಾ ಅಕಾಡೆಮಿಗಳ ಅಧ್ಯಕ್ಷರಾಗಬಹುದು, ಸಾಹಿತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, ಜ್ಞಾನಪೀಠ ಪ್ರಶಸ್ತಿಗಳು, ಗವರ್ಮೆಂಟ್ ಸೈಟುಗಳು, ಜನಮನ್ನಣೆಗಳು ಹೀಗೆ ಏನೇನೋ ಸಿಗುತ್ತವೆ ಅನ್ನೋದು ನನ್ನಂತಹ ಸಾಮಾನ್ಯನ ತಿಳಿವಳಿಕೆ. ಅದರಾಚೆಗೆ ನಮ್ಮ ಸುಧೀಂದ್ರ ಯಾರದೋ ಕವಿತೆಗಳ ಕದ್ದು ನಮ್ಮ ಕ್ಲಾಸಿನಲ್ಲಿ ಓದುತ್ತಿದ್ದುದು ಆ ಕಪ್ಪು ಸುಂದರಿಯನ್ನು ಇಂಪ್ರೆಸ್ ಮಾಡೋಕೆ ಅಂತ ನನಗೆ ಗೊತ್ತು. ಇತ್ತೀಚಿನ ದಿನಗಳಲ್ಲಿ ಕವಿತೆ ಕದ್ದು ಕಾಪಿ ಮಾಡಿ ಎಫ್ ಬಿ ವಾಲ್ ನಲ್ಲಿ ಪೇಸ್ಟು ಮಾಡಿ ಪೋಸ್ಟ್ ಮಾಡಿದರೆ ಸಿಗುವ ಲೈಕು ಮತ್ತು ಕಾಮೆಂಟ್ ಗಳಿಗಾಗಿ ಜನ ಹೇಗೆಲ್ಲಾ ಏನೆಲ್ಲಾ ಕದಿತಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಹಾಗೆಯೇ ಅವನು ನನ್ನ ಕವಿತೆ ಕದ್ದಿದ್ದಾನೆ ಇವಳು ನನ್ನ ಕವಿತೆ ಕದ್ದಿದ್ದಾಳೆ ಅನ್ನೋ ಒಂದಷ್ಟು ಎಫ್ ಬಿ ಜಗಳಗಳ ನೋಡಿದರೆ ಈ ಎಫ್ ಬಿ ಯಲ್ಲಿ ಒಂದು ಕವಿತೆಯನ್ನೂ ಹಾಕದೆ ತಮ್ಮ ಪಾಡಿಗೆ ತಾವು ಸಾಹಿತ್ಯ ಕೃಷಿಯಲ್ಲಿ ತೊಡಗಿರೋ ಲೇಖಕರ ಬರಹಗಳೇ ಈ ಕಾಲದಲ್ಲಿ ಸೇಫ್ ಅನಿಸುತ್ತದೆ. ಆದರೂ ಸಿಕ್ಕ ಸಿಕ್ಕವರ ಮೇಲೆ ಆಧಾರಗಳಿಲ್ಲದೆ ಸುಳ್ಳು ಆಪಾದನೆ ಮಾಡದೆ ನಿಜವಾಗಿ ಕದ್ದವರನ್ನ ಸಾಕ್ಷಿ ಸಮೇತ ಹಿಡಿದು ಸಾಮಾಜಿಕ ತಾಣಗಳಲ್ಲಿ ಆ ಕುರಿತು ಬರಹಗಳನ್ನ ಹಂಚಿಕೊಳ್ಳುವುದರಿಂದ ಬಹುಶಃ ಒಂದಷ್ಟು ಕವಿತೆಗಳ ಕಳ್ಳತನಗಳನ್ನು ತಡೆಗಟ್ಟಬಹುದೇನೋ ಗೊತ್ತಿಲ್ಲ. ನಿಮಗೇನಾದರೂ ಕವಿತೆ ಕಳ್ಳತನಗಳನ್ನ ತಡೆಗಟ್ಟೋದು ಹೇಗೆ ಅನ್ನೋ ಹೊಸ ಐಡಿಯಾಗಳಿದ್ದರೆ ಹಂಚಿಕೊಳ್ಳಿ…

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು 

******

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
Soory Hardalli
Soory Hardalli
9 years ago

Dear Mr. Nataraju,

This is not only for Kavithe. I will tell you a real story. While I was an employee of a MNC, I used to look after advertisements to souvenirs and issue payments. Once one souvenir of a high school came to me with the bill. I just turned over the pages and found that one of my artciles, published in the special issue of Prajavani was reproduced in this souvenir and the writer's name was nobody else, but the principal. I complained with that lady, she requested me to excuse her as she found the article was very interesting. One person used to make dramas based on my articles, but no courtesy of getting my permission. This is common in India that the copyright act is very weak.

Rajendra B. Shetty
9 years ago

ನಾನು ಎಷ್ಟೋ ಸಲ ಮಿನಿ ಕಥೆಗಳನ್ನು ಬರೆಯುವಾಗ, ಹಳೆಯ ಕಥೆಗಳನ್ನು ಬರೆಯುತ್ತೇನೆ – ಚಂದಾಮಾಮದಿಂದ ಓದಿದ್ದೋ, ಮಯೂರದಲ್ಲಿ ಓದಿದ್ದೋ. ಇಲ್ಲಿ ಬರೆಯುವ ಶಬ್ದಗಳು / ಶೈಲಿ ನನ್ನದು. ಆದರೆ ಓದಿದ ಕಥೆ ಎಂದು ತಪ್ಪದೆ ತಿಳಿಸುತ್ತೇನೆ. ಇದು ಒಂದು ತರಹದ ಕೃತಿ ಚೌರ್ಯ ಅಲ್ಲವೆ?

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ನಟ್ಟು ಪ್ರಸ್ತುತವಾದ ವಿಷಯವನ್ನೇ ಪ್ರಸ್ತಾಪಿಸಿದಿರಿ…… ಕದ್ದು ಕವಿತೆಗಳ ವಾರಸುದಾರರು ಆಷ್ಟರಮಟ್ಟಿಗೆ "ಕವಿ"ಯಾಗಿರಲಿಕ್ಕೂ ಸಾಕು.  ಆದರೆ, ಕೇಳುವ "ಕಿವಿ"ಗಳು ತುಂಬಾ ಸೂಕ್ಷ್ಮವಾಗಿರುವ ಈ ಸಂಧರ್ಭದಲ್ಲಿ ಖೊಟ್ಟಿ ಕವಿಗಳ ಜೋಳಿಗೆ ಬರಿದಾದರೆ ಆಶ್ಚರ್ಯವಿಲ್ಲ…….

prashasti.p
9 years ago

🙁 🙁 Heege agta irutte eshto sala

RAVI SHANKAR
9 years ago

ನಿಜ, ನನ್ನ blog ನಲ್ಲಿ (www.antyadedege.blogspot.com ) ನಾನು ಬರೆದಿದ್ದ ಕವಿತೆಯೊಂದನ್ನು ಹುಡುಗಿಯೊಬ್ಬಳು ಯತಾವತ್ತು ನಕಲು ಮಾಡಿ facebook ನ ಇನ್ನೊಂದು group ನಲ್ಲಿ ಹಾಕಿದ್ದರು. ಆಕೆಗೆ ಗೊತ್ತಿತ್ತೊ ಇಲ್ಲವೋ , ಆ group ಗೆ ನಾನು ಕೂಡ member ಆಗಿದ್ದರಿಂದ ಮಾಮೂಲಿಯಂತೆ ನನ್ನ fb wallನ ಮೇಲೆ ಮೂಡಿ ಬಂತು . ಒಂದು ಕ್ಷಣ ಅವಾಕ್ಕಾದೆ. ಆದರೆ ಬದಲಾವಣೆ ಎಂದರೆ ನನ್ನ ಕವನದ ಜೊತೆ photo tag ಮಾಡಿದ್ದರು. ನಾನು ಅವರಿಗೆ comment ನಲ್ಲಿ ಹಾಕಿದ್ದೆ. ಈ ಕವನ ನಿಮಗೆ ಎಲ್ಲಿ ಸಿಕ್ಕಿತು . ಕವನದ ನಿಜವಾದ ಕರ್ತೃ ಯಾರು ? ಎಂದು. ಆದರೆ ಅವರಿಂದ ಯಾವುದೇ reply ಬರಲಿಲ್ಲ. ಆದರೆ ಸ್ವಲ್ಪ ದಿನಗಳ ಮಟ್ಟಿಗೆ ಅವರು ಆ group ನಿಂದ ನಾಪತ್ತೆಯಾಗಿದ್ದರು.

ನಿಮ್ಮ ಈ ಅಂಕಣ ಓದಿದ ಮೇಲೆ ನನ್ನ ಅನುಭವ ನೆನಪಿಗೆ ಬಂತು .

Venu Jalibenchi
Venu Jalibenchi
5 years ago

ಕೃತಿ ಚೌರ್ಯ ಎಂಬುದು ಅಂಥಾ ದೊಡ್ಡ ಮಹಾಪಾಪವೇನೂ ಅಲ್ಲ ಎಂಬ ಉದಾಸೀನ ಭಾವ ಕೃತಿ ಚೌರ್ಯ ಮಾಡುವವರ ತಲೆಯಲ್ಲಿ ಹೊಕ್ಕಿರುವುದಂತೂ ಸತ್ಯ ಸರ್…ಈ ವಿಷಯದಲ್ಲಿ ನನಗೂ ಒಂದು ಕಹಿ ಅನುಭವ ಆಗಿದೆ.ನಾನೂ ಕೂಡ ವಾಟ್ಸಾಪ್ ಗ್ರೂಪ್ ನಲ್ಲಿ ನನ್ನ ಕವಿತೆ, ಹನಿಗವನ, ಚುಟುಕು, ಗಜಲ್, ವಚನ,ಲೇಖನ, ಕಥೆ ಹೀಗೆ ನನ್ನ ಸ್ವಂತ ಅನುಭವದ ನೆಲೆಯಲ್ಲಿ ಮೂಡಿಬಂದ ಬರಹಗಳನ್ನು ಹಂಚಿಕೊಳ್ಳುತ್ತಾ ಇರುತ್ತೇನೆ..ಹೀಗಿರುವಾಗ ನನಗೆ ಪುತ್ತೂರು ಜಿಲ್ಲೆಯ ನೆಕ್ಕಿಲಾಡಿಯಲ್ಲಿ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚಿಸುವ ಅವಕಾಶ ಒದಗಿಬಂತು. ಯಶಸ್ವಿಯಾಗಿ ಒಂದು ಗಜಲನ್ನು ಓದಿದೆ.ಅಲ್ಲಿದ್ದ ಹಿರಿಯರಿಂದ ಒಳ್ಳೆಯ ಮೆಚ್ಚುಗೆ ಕೂಡ ಬಂತು.ಅದರಲ್ಲೂ ಆ ಪರಿಸರ ನನಗೆ ಹೊಸ ಅನುಭವ ಮರೆಯಲಾರದ ಅನುಭವ. ಆದರೆ ಕಾರ್ಯಕ್ರಮ ಮುಗಿದ ನಂತರ ನಾನು ವಾಪಾಸು ನನ್ನೂರು ರಾಯಚೂರಿಗೆ ಹೊರಡಲು ನಾನು ಒಬ್ಬನೇ ಉಳಿದಿದ್ದೆ ಕಾರಣ ಆ ಕವಿಗೋಷ್ಠಿಯಲ್ಲಿ ರಾಯಚೂರಿನಿಂದ ಭಾಗವಹಿಸಿದ ಕವಿ ನಾನೊಬ್ಬನೇ ಆಗಿದ್ದೆ.ಸರಿ ಆಗ ನನ್ನ ಜೊತೆಗೆ ಪರಿಚಯ ಮಾಡಿಕೊಂಡು ಸ್ನೇಹಿತರಾದವರು ಮಂಡ್ಯದ ಕಡೆಯವರಾದ (ಹೆಸರು ಬೇಡ) ಅವರು ನನ್ನ ಪರಿಚಯ ಮಾಡಿಕೊಂಡು ತಮ್ಮ ನಂಬರನ್ನು ಕೊಟ್ಟಿದ್ದರು.ಕೆಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಅವರ ಹೆಸರೂ ಇತ್ತು. ಆ ಗ್ರೂಪ್ ಗಳಲ್ಲಿ ನನ್ನ ಎಲ್ಲಾ ಬರಹಗಳೂ ಹರಿದಾಡುತ್ತಿದ್ದವು.ಹೀಗಿರುವಾಗ ಒಮ್ಮೆ ನನಗೆ ಪ್ರತ್ಯೇಕವಾಗಿ ಒಬ್ಬರು ಹಿರಿಯರು ನಿಮ್ಮ ಬರಹವನ್ನು ಯಾರೋ ಒಬ್ಬರು ಕೃತಿಚೌರ್ಯ ಮಾಡಿ ಇನ್ನೊಂದು ಗ್ರೂಪ್ ನಲ್ಲಿ ತಮ್ಮ ಹೆಸರಿನಲ್ಲಿ ಹಾಕಿಕೊಂಡಿದ್ದಾರೆ ನೋಡಿ ಎಂದು ನನ್ನ ಗಮನಕ್ಕೆ ತಂದಿದ್ದರು.ನಾನು ಕೃತಿ ಚೌರ್ಯ ಮಾಡಿದ ಬರಹ ವನ್ನು ಕಳಿಸಿ ಎಂದು ಮೆಸೇಜ್ ಮಾಡಿದೆ.ಅವರು ಕೂಡಲೆ ಕಳಿಸಿದರು.ಅದನ್ನು ನೋಡಿ ನಾನು ದಿಗ್ಭ್ರಾಂತನಾದೆ.ಯಾಕೆಂದರೆ ನನ್ನ ಮೂಲ ಸಾಹಿತ್ಯಕ್ಕೂ ಅದಕ್ಕೂ ಸ್ವಲ್ಪವೂ ವ್ಯತ್ಯಾಸ ಇರಲಿಲ್ಲ. ಮೇಲಾಗಿ ಅದರ ಲೇಖಕರ ಹೆಸರು ನನಗೆ ಪುತ್ತೂರಿನಲ್ಲಿ ಪರಿಚಯವಾಗಿದ್ದವರದೇ ಆಗಿದ್ದು ನೋಡಿ ನನಗೆ ತುಂಬಾ ಕೋಪ ತರಿಸಿತು.ಈ ವ್ಯಕ್ತಿ ಹೀಗೆ ಮಾಡೋದಾ? ಪರಿಚಯವನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುವುದಾ? ಈತ ಕೃತಿ ಚೌರ್ಯ ಮಾಡಿದ ಗ್ರೂಪ್ ನಲ್ಲಿ ಈತ ಮಾಡಿದ ಕೃತ್ಯಕ್ಕೆ ಗುಂಪಿನಲ್ಲಿದ್ದ ಸಾಹಿತ್ಯಾಭಿಮಾನಿಗಳು ತರಾಟೆಗೆ ತೆಗೆದುಕೊಂಡಾಗ ಗ್ರೂಪಿನಿಂದ ಪಲಾಯನ ಮಾಡಿದ್ದ…

ಅದಾಗಿ ಕೆಲವು ದಿವಸಗಳ ನಂತರ ನನಗೆ ಆ ವ್ಯಕ್ತಿಯಿಂದ ಫೋನ್ ಬಂತು.ಹಿಗ್ಗಾಮುಗ್ಗಾ ಬೈಯ್ಯುವ ಮನಸಾಗಿದ್ದರೂ ನೀವು ಮಾಡಿದ್ದು ಸರೀನಾ? ಅಂತ ಕೇಳಿದ್ದೆ.ಅದಕ್ಕಾತ ಅದೇನು ದೊಡ್ಡ ವಿಷಯ ಅಂತ ಮಾತಾಡ್ತೀರಿ ಸರ್..ಏನೋ ಚೆನ್ನಾಗಿದೆ ಅಂತ ಹಾಕ್ಕೊಂಡೆ…ಆಗ ನಾನು ಚೆನ್ನಾಗಿದೆ ಅಂದ್ರೆ ನಿಮ್ಮ ಹೆಸರು ಹಾಕ್ಕೋಬಹುದಾ? ಅದಕ್ಕೆ ಕೃತಿ ಚೌರ್ಯ ಅಂತಾರೆ ಸರ್..ಅಂದಾಗ ಆಯ್ತು ಕ್ಷಮಿಸಿ ಸರ್ ಅಂತ ಹೇಳಿ ಫೋನ್ ಇಟ್ಟರು…

ಹೀಗಿದೆ ನೋಡಿ ಕೃತಿ ಚೌರ್ಯದ ಕಥೆ….

ಎಂ.ಜವರಾಜ್

ಸರ್ ನಿಮ್ಮ ಸರಿಯಾಗಿದೆ. Fbಯಲ್ಲಿ ನಾನು ಬರೆದ ಕೆಲ ಬರಹಗಳನ್ನು ಕೆಲವರು ಕದ್ದು ತಮ್ಮ ಪೇಜಲ್ಲಿ ಪ್ರಕಟಿಸಿಕೊಂಡಿದ್ದಾರೆ. ಕೆಲ ಕವಿತೆಗಳನ್ನು ಸಹ. ಒಂದೆರಡು ವರ್ಷಗಳ ಹಿಂದೆ ದೀಪದ ಬಗ್ಗೆ ಬರೆದಿದ್ದ ಕವಿತೆ ಅನೇಕರ ವಾಲ್ ನಲ್ಲಿ ನೋಡಿದ್ದೆ. ನಾನು ಅದನ್ನು ಪ್ರಶ್ನೆ ಮಾಡುವ ಗೋಜಿಗೆ ಹೋಗಲಿಲ್ಲ. ಇಂಥ ಕವಿತೆಗಳನ್ನು ಇನ್ನಷ್ಟು ಬರೆಯಬಹುದೆಂಬ ಹೆಗ್ಗಳಿಕೆಯಿಂದ. ಹೀಗೆ ಒಬ್ಬರು ತಮ್ಮ fbಯಲ್ಲಿ ಆ ದೀಪದ ಕವಿತೆಯ ಸಾಲನ್ನು ತಮ್ಮ ಬರಹದ ಜೊತೆ ಉದಾಹರಿಸಿ ದಾಖಲಿಸಿದ್ದರು. ಅವರು ಸೃಜನಶೀಲರೆ! ವಿನಯದಿಂದಲೇ ಕೇಳಿದೆ. ಸರ್ ನೀವು ದಾಖಲಿಸಿರುವ ಈ ಕವಿತೆಯ ಸಾಲು ನನ್ನವು ಸೌಜನ್ಯಕ್ಕಾದರು ಇಂಥವರ ಕವಿತೆಯ ಸಾಲು ಅಂತ ಸೇರಿಸಬಹುದಿತ್ತಲ್ಲ ಅಂದೆ. ಅದಕ್ಕೆ ಅವರು ಸರ್ ನನಗೆ ಗೊತ್ತಿಲ್ಲ ಯಾರೋ fbಯಲ್ಲಿ ಹಾಕಿದ್ದರು. ಹೆಸರು ಇರಲಿಲ್ಲ. ಸಾಲುಗಳು ಇಷ್ಟ ಆದವು. ನಾನು ಉದಾಹರಿಸಿದೆನಷ್ಟೆ ಸಾರಿ ಸರ್ ಅಂದರು ನಂತರ ಮುಂದುವರಿಸಿ ಈ ಸಾಲು ಸಾಕಷ್ಟು ಜನರ fbಯಲ್ಲಿ ಇದೆ. ಹೆಸರು ಇಲ್ಲ.ಆದರೆ ಕೆಲವರು ಅದರ ಕೆಳಗೆ ಅವರ ಹೆಸರು ಹಾಕಿಕೊಂಡಿದ್ದರು ಅದಕ್ಕೆ ನಾನು ಕನ್ ಫ್ಯೊಸ್ ಆಗಿ ಹೆಸರು ಸೇರಿಸದೆ ಹಾಗೆ ಉದಾಹರಿಸಿದೆ ಅಂತ ನನಗೆ ರಿಪ್ಲೇ ಕೊಟ್ಟರು. ನಾನು ಆ ಕವಿತೆಯ ಬಗ್ಗೆ ಯೋಚಿಸುವುದನ್ನೆ ಬಿಟ್ಟೆ. ಹಾಗೆ ಇನ್ನೊಂದು ಕನ್ನಡ ನಾಡು ನುಡಿಗೆ ಸಂಬಂಧ ಪಟ್ಟ ವಿಚಾರದ ಲೇಖನವನ್ನು ಮೈಸೂರಿನ ನನ್ನ ಪರಿಚಯವಿದ್ದವರೇ ಅವರ ಲೇಖನಕ್ಕೆ ಮಧ್ಯೆ ಸೇರಿಸಿಕೊಂಡು ತಮ್ಮ ಲೇಖನ ಪೂರೈಸಿಕೊಂಡಿದ್ದರು. ಹೀಗೆ ಕದ್ದು ಮುಚ್ಚಿ ಪ್ರತಿಭಾವಂತರಾಗಲು ಸಾಕಷ್ಟು ಹೆಣಗುವ ಮಂದಿ ಇದ್ದಾರೆ. ಹಾಗಾಗಿ ನಾನು ಒಂದು ಲೇಖನ ಕವಿತೆ fbಯಲ್ಲಿ ಪೋಸ್ಟ್ ಮಾಡಿದ ಮೇಲೆ ಸಾಹಿತ್ಯ ಪ್ರಕಾರದ fb ಮತ್ತು ವಾಟ್ಸಾಪ್ ಗ್ರೂಪ್ ಗೆ ಶೇರ್ ಮಾಡುತ್ತೇನೆ. ಇದು ಸಾಕಷ್ಡು ಜನಕ್ಕೆ ತಿಳಿದಿರುತ್ತದೆ. ಆಗ ಕದ್ದರು ಕಳ್ಳರು ಸಿಕ್ಕಿ ಬೀಳುವ ಸಾಧ್ಯತೆ ಇರುತ್ತದೆ.

Varadendra k
Varadendra k
5 years ago

ಅಷ್ಟಕ್ಕೂ ಕವಿತೆ ಸಾಹಿತ್ಯ ಬರೆಯಲೇಬೇಕೆಂಬ ಮನಸ್ಥಿತಿ ಯಾಕಿರಬೇಕು. ಸಾಹಿತ್ಯಾಸಕ್ತನಾಗಿ ಸಾಹತ್ಯ ಓದಿ ಅಧ್ಯಯನ ಮಾಡಿ, ಆನಂದಿಸಬಹುದು. ಸುಳ್ಳು ಹೆಸರುವಾಸಿಯಾಗಿ ಸಾಧಿಸುವುದಾದರೂ ಏನಿದೆ.

Ashfaq peerzade
5 years ago

ನಮ್ಮ ಜಿಲ್ಲೆಯ ಪ್ರತಿಷ್ಟಿತ ಪತ್ರಿಕೆಯಲ್ಲಿ ಕಥೆಯೊಂದು ಪ್ರಕಟವಾಗಿತ್ತು. ಅದನ್ನು ಓದುತ್ತ ಹೋದಂತೆ ಅದು ನನ್ನದೇ ಲೇಖನ ಎನ್ನುವುದು ಖಾತ್ರಿಯಾಗಿತ್ತು. ಆದರೆ ಅಲ್ಲಿ ಲೇಖಕನ ಹೆಸರು ಮಾತ್ರ ಮಾಯವಾಗಿತ್ತು.ನಾನು ಆ ಪತ್ರಿಕೆಯ ಕಚೇರಿಗೆ ಕರೆ ಮಾಡಿ ಸಂಪಾದಕರೊಂದಿಗೆ ಮತಾಡಿದೆ. ಸಂಪಾದಕರು ಹೆಸರಾಂತ ಸಾಹಿತಿ ಪತ್ರಕರ್ತರು ಆಗಿದ್ದರು. ನನ್ನ ಆ ಕಥೆ ಬಹಳ ದಿನಗಳ ಹಿಂದೆ ಮಾಸಿಕವೊಂದರಲ್ಲಿ ಪ್ರಕಟವಾಗಿದ್ದು ಅದರ ತೆಲೆಬರಹ ಮಾತ್ರ ಬದಲಾಯಿಸಿ ಯಥಾವತ್ತಾಗಿ ಪ್ರಕಟಿಸಿದ ಸಂಪಾದಕರು ಉದ್ದೇಶಪೂರ್ವಕವಾಗಿಯೇ ಲೇಖಕನ ಹೆಸರು ಮರೆಮಾಚಿದಲ್ಲದೇ ಸೌಜನ್ಯಕ್ಕೂ ಕೃಪೆ ಎಂದು ಮಾಸ ಪತ್ರಿಕೆಯ ಹೆಸರು ಸಹ ನಮೂದಿಸಿರಲಿಲ್ಲ. ಈ ರೀತಿ ಮಾಡುವುದು ತಪ್ಪಲ್ವಾ ಸಾರ್ ಎಂದು ಕೃತಿಚೌರ್ಯ ಮಾಡಿದ ಸಂಪಾದಕರಿಗೆ ಕಾಲ ಪ್ರಶ್ನಿಸಿದಾಗ ನಿರುತ್ತರರಾಗಿ ಕಾಲ್ ಕಟ್ಟ ಮಾಡಿದ್ದರು. ಆಮೇಲೆ ಗೊತ್ತಾಯಿತು ಅವರು ತಮ್ಮ ಪತ್ರಿಕೆ ಪುಟಗಳನ್ನು ತುಂಬಿಸಲು ಅಲ್ಲಿ ಇಲ್ಲಿ ಪ್ರಕಟವಾದ ಲೇಖನಗಳನ್ನು ತೆಲೆಬರಹ ಬದಲಾಯಿಸಿ ತಮ್ಮದೆ ಬರಹ ಎನ್ನುವಂತೆ ಪ್ರಕಟಿಸುತ್ತಿದ್ದರು ಅನ್ನುವುದು.

9
0
Would love your thoughts, please comment.x
()
x