ಈ ಕವಿತೆ ಒಮ್ಮೊಮ್ಮೆ ಅದೆಷ್ಟು ಜಿಗುಟು ಮತ್ತುಅಂಟಂಟು ಅಂದ್ರೆ ಹಲಸಿನ ಹಣ್ಣಿನ ಮೇಣದ ತರ. ಮತ್ತೆ ಮತ್ತೆ ತಿಕ್ಕಿದಷ್ಟೂ ಅಂಟಿಕೊಳ್ಳುತ್ತಾ, ಬಿಡದೇ ಕಾಡುತ್ತಾ , ಸತಾಯಿಸುತ್ತಾ, ಹಿಂದೆ ಮುಂದೆ ಸುತ್ತಿ ಸುಳಿದು ಯಾವುದೋ ಭಾವನಾ ತೀರಕ್ಕೆ ಲಗ್ಗೆಯಿಡುತ್ತಾ ತನ್ನನ್ನು ತಾನು ಮರೆವಿಗೆ ನೂಕಿಬಿಡುತ್ತದೆ. ಅರೆ ಕ್ಷಣವೂ ಬಿಟ್ಟೂ ಬಿಡದ ಆತ್ಮಸಂಗಾತಿಯಂತೆ ಪಕ್ಕಕ್ಕಿರುತ್ತದೆ. ಕವಿತೆ ಯಾವೊತ್ತೂ ನನ್ನ ಕೈ ಬಿಡಲಾರದು ಎಂಬ ಗುಂಗಿನಲ್ಲೇ, ತುಸು ಹೆಚ್ಚೇ ಹಚ್ಚಿಕೊಂಡು, ಯಾವುದಕ್ಕೂ ವಿನಾಕಾರಣ ತಲೆ ಕೆಡಿಸಿಕೊಳ್ಳದೇ, ಕವಿತೆಯನ್ನು ನನ್ನ ತೆಕ್ಕೆಯೊಳಗಿಟ್ಟೋ. . ಅಥವಾ ಕವಿತೆಯ ತೆಕ್ಕೆಯೊಳಗೆ ತಾನು ಬಿದ್ದೋ, ಒಟ್ಟಿನಲ್ಲಿ ಕವಿತೆಯ ಸಾಂಗತ್ಯದಲ್ಲಿ ಬದುಕು ಸುಖಿ ಅಂತ ಗುನುಗಿಕೊಳ್ಳುತ್ತಿರುವಾಗಲೇ. . ಹಾದಿಯುದ್ದಕ್ಕೂ ಜತೆಗೂಡಿ ಹೆಜ್ಜೆ ಹಾಕಿದ ಕವಿತೆ, ಯಾವುದೋ ಇಳಿಜಾರಿನಲ್ಲಿ ಕಳೆದು ಹೋಗಿ ಬಿಟ್ಟಿದೆ. ಅಥವಾ ಆವರಿಸಿಕೊಂಡ ಯಾವುದೋ ಹಾಳು ಮರೆವಿನಲ್ಲಿ, ಕವಿತೆಯ ಕೈಯ ನಾನೇ ಬಿಟ್ಟು ದೂರ ಸಾಗಿ ಬಂದಿರುವೆನೋ ಅರ್ಥವಾಗುತ್ತಿಲ್ಲ. ಅಂತೂ ಇಂತು ಕವಿತೆ ನಾಪತ್ತೆಯಾಗಿದೆ. ಕವಿತೆ ಈ ಕ್ಷಣ ನನ್ನ ಜೊತೆಗಿಲ್ಲ.
ಹಾಗಂತ ಕವಿತೆ ಇರದ ಊರಿನಲ್ಲಿ ನಾ ಬದುಕಲು ಸಾಧ್ಯವೇ?. ಕವಿತೆ ಇರದ ಗಳಿಗೆಯನ್ನು ಊಹಿಸಲು ಸಾಧ್ಯವೇ?. ಜೀವ ಚೈತನ್ಯದಿಂದ ಉಕ್ಕಿ ಹರಿಯುತ್ತಿದ್ದ ಭಾವಗಳೆಲ್ಲಾ ಬರಡು ಬರಡಾಗಿವೆ. ಪ್ರಪಂಚ ಇಷ್ಟೊಂದು ನೋವಿನಲ್ಲಿ ತುಂಬಿದೆಯಾ ಅಂತ ಖೇದವಾಗುತ್ತಿದೆ. ಪ್ರತಿದಿನ, ಪ್ರತಿ ಕ್ಷಣ ನೋವಿನ ಸಂಗತಿಗಳೇ. ಅಲ್ಲಿ ಕೊಲೆ, ರಕ್ತಪಾತ, ಹಾದರ, ಅತ್ಯಾಚಾರ, ಆತ್ಮಹತ್ಯೆ. ಅಯ್ಯೋ. . ! ಬದುಕು ಎಷ್ಟೊಂದು ಕೆಟ್ಟದ್ದು ಮತ್ತು ಘೋರವಾಗಿದೆಯಲ್ಲಾ. . ?. ಇವರೆಲ್ಲರ ಎದೆಯೊಳಗೆ ಭಾವದ ಸೆಲೆಗಳೇ ಇರಲಿಲ್ಲವೇ?. ಒಂದೇ ಒಂದು ಗುಟುಕು ಭಾವದೊರತೆ ಸಾಕಿತ್ತಲ್ಲವೇ. . ? ಅತ್ಯಾಚಾರಿಗೆ ಆಚಾರ ತುಂಬಿಸಲು, ಆತ್ಮಹತ್ಯೆ ಮಾಡಿಕೊಂಡವರಿಗೆ ಚೈತನ್ಯ ಮರುಕಳಿಸಿ ಜೀವದಾಯಿನಿಯಾಗಲು, ಬಂದೂಕು ಬಾಂಬು ಹಿಡಿದ ಕೈಗಳಲ್ಲಿ ಪೆನ್ನು ಹಿಡಿದು ಅಕ್ಷರದ ಹೂವರಳಿಸಲು. ಅಬ್ಭಾ! ಎದೆ ನಡುಗುತ್ತಿದೆ. ಕಣ್ಣೆದುರಿಗೆ ಭಯಾನಕ ಭವಿಷ್ಯದ ನೆರಳು ಸೋಕಿ ಹೋದಂತಾಗುತ್ತಿದೆ. ಕವಿತೆ ಇರದ ಊರಿನಲ್ಲಿ ಮಾತ್ರ ಇಂತಹ ಅವಘಡಗಳು ಸಂಭವಿಸುತ್ತಿವೆಯಾ. . ಅಂತ ಒಂದು ಅನುಮಾನ ಕೂಡ ಸುಳಿದು ಹೋಗುತ್ತದೆ.
ಯಾಕೆಂದರೆ ಕವಿತೆ ಕಪಟವಿಲ್ಲದ್ದು ಅಂತ ಬಲ್ಲವರು ನುಡಿದಿದ್ದಾರೆ. ಜಗತ್ತಿನ ಎಲ್ಲಾ ಸಂಕಟಗಳಿಗೆ ಮೂಕ ಸಾಕ್ಷಿಯಾಗುತ್ತಾ ಹೃದಯ ಬಿಕ್ಕಿ ಬಿಕ್ಕಿ ಮೊರೆಯುತ್ತಿದೆ. ಕವಿತೆ ಪಕ್ಕಕ್ಕಿದ್ದರೆ ಎಲ್ಲವನ್ನೂ ಹೇಳಿಕೊಂಡು ನಿರಾಳವಾಗಿ ಬಿಡುತ್ತಿದ್ದೆನೇನೋ. ಮನೆಯ ಬಾಗಿಲು ತೆರೆಯಲೇ ಭಯವಾಗುವಷ್ಟು ಆತಂಕ ಕಾಡುತ್ತಿದೆ. ಅಕ್ಕ ಪಕ್ಕದ ಊರಿನ ಭಯವಿಹ್ವಲ ಸಂಗತಿಗಳು, ಯಾವ ಕ್ಷಣ ಎಲ್ಲಿ ಇಲ್ಲಿಗೂ ಬಂದೆರಗಿ ಬಿಡಬಹುದೆಂಬ ಗುಮಾನಿಯಲ್ಲೇ ಬದುಕು ಕಳೆಯುವಂತಾಗಿದೆ. ಇಷ್ಟಕ್ಕೆಲ್ಲಾ ಕಾರಣ ಈ ಕವಿತೆ. ಹೇಳದೇ ಕೇಳದೇ ಕಣ್ತಪ್ಪಿಸಿಕೊಂಡು ಪರಾರಿಯಾಗಿ ಬಿಟ್ಟಿದೆ. ಕವಿತೆಯ ಬಗಲಲ್ಲಿ ನಾನು ಎಷ್ಟು ನಿಶ್ಚಿಂತಳು ಎಂಬುದು ಈಗ ಕವಿತೆಯ ಅನುಪಸ್ಥಿತಿಯಲ್ಲಿ ನನಗೆ ಮನವರಿಕೆಯಾಗುತ್ತಿದೆ. ಆದರೆ ಒಂದಂತೂ ದಿಟ. ಕವಿತೆಯ ಮೇಲೆ ನಾ ಎಷ್ಟೇ ಹರಿ ಹಾಯ್ದರೂ, ಕೋಪಗೊಂಡರೂ, ಮುನಿಸಿಕೊಂಡರೂ. . ಕವಿತೆ ಮತ್ತೆ ನನ್ನ ಹತ್ತಿರ ಕುಳಿತು ತಲೆ ನೇವರಿಸಿ, ಜಗದ ಸಂಕಟಗಳಿಗೆ, ನೋವುಗಳಿಗೆ, ಕಂಬನಿ ಮಿಡಿಯುತ್ತಾ, ಅಕ್ಷರದ ಮುಲಾಮು ಲೇಪಿಸುತ್ತಾ ನಿರಾಳವಾಗುವುದನ್ನ ತಾಳ್ಮೆಯಿಂದ ಕಲಿಸಿ ಕೊಟ್ಟೆ ಕೊಡುತ್ತದೆ. ಈಗ ಅದೆಲ್ಲಿಯೋ ಅಳುವ ಮಗುವ ರಮಿಸಲು, ಅವಳ ಕಣ್ಣೀರಿಗೆ ಸಾಂತ್ವಾನವಾಗಲು, ಮತ್ಯಾರದೋ ಬದುಕಿನ ಸಂಕಟಕ್ಕೆ ಕಿವಿಯಾಗಲು ಕವಿತೆ ತೆರಳಿರಬಹುದೆಂಬ ಬಲವಾದ ನಂಬಿಕೆಯಂತೂ ನನಗೆ ಇದ್ದೇ ಇದೆ. ಕವಿತೆಯ ಬಲದಿಂದಷ್ಟೇ ಬದುಕು ಚಲಿಸುತ್ತಿದೆಯೆಂಬುದು ನನಗಂತೂ ಅರಿವಿಗೆ ಬಂದ ಸಂಗತಿ.
ಈ ಚುಮು ಚುಮು ನಸುಕಿನಲ್ಲಿ ಚಳಿ ಕೊರೆಯುತ್ತಿದೆ. ಸಣ್ಣಗೆ ಬಿಸಿಲೇರುತ್ತಿದೆ. ಹೊರಗೆ ಅಂಗಳದಲ್ಲಿ ಯಾವುದೋ ಕೆಲಸಕ್ಕೆ ಕೈ ಹಚ್ಚಿಕೊಳ್ಳುತ್ತಾ, ಬಿಸಿಲು ಬಿದ್ದ ಕಡೆಯೇ ಬೆನ್ನು ಮಾಡಿ ನಿಲ್ಲಬೇಕೆಂದು ಅನ್ನಿಸುತ್ತಿರುವಾಗಲೇ. . ಆ ಹೂ ಬಿಸಿಲಲ್ಲಿ ಸಣ್ಣ ರೆಂಬೆಯ ಮೇಲೆ ಬಣ್ಣ ಬಣ್ಣದ ರೆಕ್ಕೆಯ ಚಿಟ್ಟೆಯೊಂದು ಮೆಲ್ಲಗೆ ರೆಕ್ಕೆ ಕದಲಿಸುತ್ತಾ ಹಾಗೇ ಎಷ್ಟೋ ಹೊತ್ತಿನಿಂದ ಅದೇ ಭಂಗಿಯಲ್ಲಿ ಕುಳಿತು ಕೊಂಡಿದೆ. ಅಹಾ! ರೆಕ್ಕೆಯ ಕದಲುವಿಕೆಯಲ್ಲೇ ನಾ ಅಂದಾಜಿಸಬಲ್ಲೆ. ಕವಿತೆ ಯಾವುದೋ ಭಾವನಾ ತೀರಕ್ಕೆ ಯಾನ ಕೈಗೊಂಡು, ಕವಿತೆಯೊಂದಿಗೆ ಮೌನ ಸಂವಾದಕ್ಕಿಳಿದಿದೆ ಅಂತ. ಚಿಟ್ಟೆಯ ರೆಕ್ಕೆಯಲ್ಲಿ ಕುಳಿತು ಗುನುಗುವ ಕವಿತೆ, ಸಧ್ಯ! ನನ್ನ ಮನೆಯ ಅಂಗಳದವರೆಗೆ ಬಂದು ಕುಳಿತ್ತಿದೆಯೆಂಬುದು ನಿಚ್ಚಳವಾಗುತ್ತಿದೆ. ಎಷ್ಟೋ ಹೊತ್ತಿನವರೆಗೂ ನಾನೂ ಇದೇ ಗುಂಗಿನಲ್ಲಿ ಚಿಟ್ಟೆಯನ್ನು ನೋಡುತ್ತಾ ಕುಳಿತುಕೊಂಡಿರುವೆನಲ್ಲಾ. . !. ನನಗೂ ರೆಕ್ಕೆ ಬಂದಂತೆನ್ನಿಸುತ್ತಿದೆ. ಕವಿತೆಯೊಂದು ಎಲ್ಲರ ಜೀವಗಳಲ್ಲಿ ಮಿಡುಕಾಡುವ ಭಾವವಾಗಲಿ. ಕವಿತೆ ಬದುಕು ಹಸನುಗೊಳಿಸಬಹುದು ಅಂತ ನೆನೆದುಕೊಳ್ಳುತ್ತಲೇ ಕವಿತೆಯೊಂದಿಗೆ ಒಳಗಡಿಯಿಡುತ್ತಿರುವೆ. ಬದುಕು ಸುಂದರ ಅಂತ ಅನ್ನಿಸುತ್ತಿದೆ ಈ ಹೊತ್ತಲ್ಲಿ.
-ಸ್ಮಿತಾ ಅಮೃತರಾಜ್. ಸಂಪಾಜೆ.
ಸಮಾಜದ ಕೆಲವು ಕ್ರೌರ್ಯವನ್ನು ಕುರಿತು ಜಗತ್ತಿನ ದಷ್ಟ ಪ್ರವೃತ್ತಿಯನ್ನು ಹೀಯಾಳಿಸುವ ನಿಟ್ಟಿನಲ್ಲಿ ನಾನು ಬರೆದ ಕೆಲವು ಕವನಗಳು ನನ್ನ ಸುತ್ತಲಿನ ಕೆಲವು ಜನ ‘ಏ ಈತ ನಮ್ಮನ್ನೇ ಕುರಿತು ಬರೆದಿರುವನೆಂಬ ಮೌಡ್ಯದಿಂದ ನನ್ನನ್ನು ದ್ವೇಷಿಸಿ ಕೊನೆಗೆ ನನ್ನನ್ನೇ ಸಮಾಜದೆದುರು ಕೆಟ್ಟವನಂತೆ ಬಿಂಬಿಸಿದ್ದೆಲ್ಲವನ್ನು ನೆನೆದಾಗ ಇನ್ನು ಮುಂದೆ ಈ ಕವಿತೆ ಕಾವ್ಯಗಳ ಸಹವಾಸವೇ ಬೇಡವೆಂದು ಮೌನಿಯಾಗಿ ಇರಬೇಕೆಂದುಕೊಂಡರೂ ಅದಾವ ಮಾಯೆ ನನ್ನ ಅಂಗೈಗೆ ಲೇಖನಿಯನಿಟ್ಟು ಬರೆಯಲು ಪ್ರೇರೇಪಣೆ ನೀಡುವುದೋ ತಿಳಿಯುತ್ತಿರಲಿಲ್ಲ.
ನಿಮ್ಮ ಈ ಕವಿತೆಯ ಜಾಡು ಹಿಡಿದು ಎಂಬ ಬರವಣಿಗೆ ನನ್ನೆಲ್ಲ ಪ್ರಶ್ನೆಗಳಿಗೂ ಉತ್ತರದಂತಿದೆ. ಧನ್ಯವಾದಗಳು