ಕೆಂಪು ನಕ್ಷತ್ರದ ಹೂ
ತೇಲುವ
ಬೆಳ್ಳಿ ಮೋಡಗಳ
ಜೀವಗಳಲಿ ಸಂಗ್ರಾಮ
ಕೆಂಪುಮಳೆ ಬಿದ್ದರೆ
ತರಗೆಲೆ ತುಂತುರ
ಹನಿಯೊಳಗೆ ಬೆಳಕು..!
ನಕ್ಷತ್ರದ ಹೂಗಳಲಿ
ಸಂಭ್ರಮ
ಎದೆಯ ನೋವ
ರಕ್ತದೊಳಗೆ
ಕಾಡು ಜನರಿಗೆ
ಹರ್ಷ
ಕೆಂಪು ನಕ್ಷತ್ರದ ಹೂವು
ಮಳೆ ಇಬ್ಬನಿಗಳ
ರಂಬಿಸುವ
ಅನಂತ
ಆಕಾಶವೇಕೆ ಶೂನ್ಯ?
ಪ್ರಭುತ್ವ ಜೀವಗಳಲಿ
ಬಿನ್ನತೆ ಏತಕೆ?
ಹಸಿರುಬೇಟೆ ಹೆಸರಲಿ
ನಿತ್ಯ ಮಾರಣ ಹೋಮ
ತರಗಲೆಯೊಳಗೆ
ಬಲಿಯಾದವರೆಲ್ಲ
ಮಳೆಕಾಡ
ನೆಲದೆದೆಯ ಒಂದೇ
ರಕ್ತದ ಸಹೋದರರು
ಕಾಡು ಮಲೆಗಳಲಿ
ವಿಶಿಷ್ಟತೆಯ ಸೊಗಸು
ದಮನಿಯೊಳಗೆ
ಲುಪ್ತವಾಗಿ
ಕೊರೆಯುತ್ತಿದೆ
ಹಸಿವಿನ
ಹಸಿರು ವನರಾಜಿಗಳ
ಬೇರು ಕಿತ್ತು
ನಿತ್ಯ ಅನುಮತಿಯಲಿ
ಮಹಾನ್ ಕ್ರೂರ ಹತ್ಯೆ
ಓ.. ಎಂತಹ ಅನ್ಯಾಯ!
ಕೂಂಬಿಂಗ್
ಹೆಸರಲಿ
ಒಕ್ಕಲೆಬ್ಬಿಸುವ
ಆಪರೇಷನ್
ಹಂಟಿಂಗ್ ಕೈಗಳಿಗೆ
ಬುದ್ದನೇಕೆ ಒಲಿಯಲಿಲ್ಲ?
-ಸಿಪಿಲೆ ನಂದಿನಿ.
1
ನಾ
ಸಂತೆಯಲ್ಲಿ ಮೌನ ಮೌನ
ಗದ್ದಲದೊಳಗೂ ಕವಿತೆ
ಸದ್ದು ಮಾಡುತಿದೆ;
ಮಾತಾಡದಿರೆ ಮೌನವಲ್ಲ
ಅನ್ನುವ ಸತ್ಯ ಅರಿವಾಗಿದೆ!
2
ತನ್ನೊಳಗೆ ಸಿಕ್ಕಿದ
ಬೇರನ್ನು ಅಪ್ಪಿದ ಮಣ್ಣು
ಸಂತೈಸಿತು ಮೃದುವಾಗಿ
ಅದರ ಆರೈಕೆಯಲಿ
ಮಿಂದೆದ್ದ ಬೇರು ನಕ್ಕಿತು ಹೊಸ ಹೂವಾಗಿ!
3
ಎಲೆಯ ಮೇಲಿನ ಹನಿ ನೀನು
ಅಂಟಿಯೂ ಅಂಟದಂತೆ
ಎದೆಗೂಡಿನ ಹಾಡು ನೀನು
ಒಳಗಿದ್ದರೂ ತುಟಿಗೆ ಬಾರದಂತೆ!
4
ಸಾವಿಗೂ ಸಾಲ ಹೇಳಿದ್ದೇನೆ
ನಾಳೆ ಬಾ ಎಂದು
ನಾಳೆ ನೀ ಬರುವ ಸಣ್ಣ
ನಿರೀಕ್ಷೆ ನನ್ನಲಿಂದು!
5
ಮನಸ್ಸು
ಕಡಲು
ನೂರು ನದಿಗಳ
ಪಡೆದರೂ
ಜೀವನ ಉಪ್ಪುಪ್ಪು!
-ಸಂತೆಬೆನ್ನೂರು ಫೈಜ್ನಟ್ರಾಜ್
ಭೂಮಿ
ಇರುವ ಒಂದೇ ಭೂಮಿಯ
ಒಂದು ತುದಿಯಲ್ಲಿ
ಯುದ್ಧಗಳು ನಡೆಯುತ್ತಿವೆ
ಗುಂಡುಗಳು ಸಿಡಿಯುತ್ತಿವೆ
ತುಂಬಾ ಸಲೀಸಾಗಿ
ಜೀವಗಳು ಬಲಿಯಾಗುತ್ತವೆ.
ಇರುವ ಒಂದೇ ಭೂಮಿಯ
ಇನ್ನೊಂದು ಮೂಲೆಯಲ್ಲಿ
ರೈತ ತನ್ನ ಹೊಲಕ್ಕೆ ನೀರುಣಿಸಿದ್ದಾನೆ
ಸಸಿಗಳು ಚಿಗುರಿವೆ
ಹೂವುಗಳು ಅರಳಿವೆ
ಅಷ್ಟೇ ಸರಳವಾಗಿ ಗಾಳಿಯೊಂದಿಗೆ
ಪರಿಮಳವು ಬೆರೆತಿದೆ.
***
ಲೋಕ
ದೇವರನ್ನು ಸ್ಮರಿಸುತ್ತ
ಬಡತನದಲ್ಲಿಯೇ ಬದುಕಿದ ಅಪ್ಪ
ಕೊನೆಗೊಂದು ದಿನ
ಹರಕು ಚಾಪೆಯ ಮೇಲೆ ಸತ್ತ
ತಾಜಾ ಹಣ್ಣುಗಳನ್ನು ಸೇವಿಸುತ್ತ
ಹವಾನಿಯಂತ್ರಿತ ಕಾರಿನಲ್ಲಿ ಸಂಚರಿಸುತ್ತಿದ್ದ
ಮಠದ ಶ್ರೀ ಗಳು
ಸುಪ್ಪತ್ತಿಗೆಯ ಮೇಲೆ
ಮಲಗಿದ್ದಲ್ಲಿಯೇ ಇಹಲೋಕ ತ್ಯಜಿಸಿದರು.
***
ಪಾಪ – ಪುಣ್ಯ
ಹಸಿದವನ ಕನಸು ಅನ್ನ
ಪಾಪಿಯ ಕನಸು ಪುಣ್ಯ
ಹಸಿದವನು ಮಣ್ಣಿನ ಮೇಲೆ ನಡೆಯುವನು
ಅನ್ನ ಸಿಕ್ಕರೆ ತಿನ್ನುವುದು
ಪಾಪಿಯು ಪಾಪಗಳ ಹೊತ್ತು ನಡೆಯುವನು
ಪುಣ್ಯವನ್ನೇ ಬಯಸುವುದು
ಭೂಮಿಯ ಮೇಲಿನ ಪುಣ್ಯವೇ ಅನ್ನ
ಹಸಿವಿನ ಶಾಪವೇ ಪಾಪ
***
– ನವೀನ್ ಮಧುಗಿರಿ
ಹನಿಗವನಗಳು
1. ಸೆರೆ
ಭೂಮಿಗೆ ಬಾನಿನಾಸರೆ
ಬಾನಿಗೆ ಸೂರ್ಯನಾಸರೆ
ಆದರೆ! ನಾನು ಮಾತ್ರ
ಹೆಂಡತಿಯ ಕೈಸೆರೆ!
2.ಪ್ರೀತಿ ಪರೀಧಿ
ಪ್ರೀತಿಯಿಲ್ಲದ ಹೃದಯ
ಗೃಹಣ ಹಿಡಿದ ಸೂರ್ಯನಂತೆ
ಎಲ್ಲವೂ ಕಪ್ಪು ಕಪ್ಪು
3. ಅಂತರ
ಭೂಮಿ ವಿಶಾಲ
ಭಾನು ವಿಶಾಲ
ಸಮುದ್ರ ಇನ್ನೂ ವಿಶಾಲ
ಆದರೆ! ಎಲ್ಲಕ್ಕಿಂತ ವಿಶಾಲ
ನನ್ನವಳ ಹೃದಯಾಲಯ!
– ನಾಗರಾಜ ಎಸ್. ಹಣಗಿ
*****
One thought on “ಕವಿತೆಗಳು: ಸಿಪಿಲೆ ನಂದಿನಿ, ಸಂತೆಬೆನ್ನೂರು ಫೈಜ್ನಟ್ರಾಜ್, ನವೀನ್ ಮಧುಗಿರಿ, ನಾಗರಾಜ ಎಸ್. ಹಣಗಿ”