ನಾನು ಕವಿಯಲ್ಲ ಪ್ರೇಮಿ..!
ನಿನ್ನಷ್ಟಕ್ಕೆ ನೀನು ಹೊಸೆ
ನನ್ನಿಷ್ಟಕ್ಕೆ ನಾನು ಬರೆವೆ!
ನಿನ್ನದು ಚಿಂತನ ಕಾವ್ಯ
ನನ್ನದು ಒಲವಿನ ಪದ್ಯ
ಮುಂದಿನ ಚರಣಗಳಿಗೆ ನಿನ್ನದು
ಪದಗಳ ಹುಡುಕಾಟದ ಪರದಾಟ
ನನ್ನದೇನಿಲ್ಲ ಪೂರಾ ಪದ್ಯವೂ
ಎದೆಯಾಳದಿಂದ ಬಂದ ಖುಷಿ-ಕಣ್ಣೀರುಗಳ ಸಮ್ಮಿಲನ
ನೀನು ಬರೆಯುವುದೆಲ್ಲ ನಿನಗೋ? ಕೃತಿಗಳ ಸಂಖ್ಯೆಗೋ?
ಜನರಿಗೋ? ಜನಪ್ರಿಯತೆಗೋ? ಗೊತ್ತಿಲ್ಲ!
ನಾನು ಬರೆಯುವುದು ಮಾತ್ರ ಬರೀ ನನಗೆ
ನನ್ನ ಕಣ್ಣೀರು-ಖುಷಿಗೆ.. ಅವಳ ಮರೆಯಬಾರದೆಂಬ ಕಾಳಜಿಗೆ!
ನಿನ್ನ ಕವಿತೆಗಳನ್ನೋದಿ ಮೆಚ್ಚಿಕೊಂಡದ್ದು
ಬೆನ್ನುತಟ್ಟಿದ್ದು ಬರೀ ಸಾಹಿತ್ಯ ವಲಯ
ನನ್ನ ಪದ್ಯಗಳನ್ನೋದಿ ಮೆಚ್ಚಿಕೊಂಡದ್ದು ಬೆನ್ನುತಟ್ಟಿದ್ದು
ಯಾರು ಗೊತ್ತೇನು? ನನ್ನ ಅಸಂಖ್ಯ ಕಣ್ಣಹನಿಗಳ ಬಳಗ!
ನೀನು ಕಂಡಿದ್ದೆಲ್ಲವೂ ಕವಿತೆಯಾಗಬಹುದು
ಅನಿಸಿದ್ದೆಲ್ಲವೂ ಕಾವ್ಯವಾಗುವುದು
ನನ್ನದಾಗಲ್ಲ ಅವಳ ನೆನಪಷ್ಟೇ ಸಾಕು
ನೋಡು ನಿನ್ನ ಕಾವ್ಯಗಳನ್ನೆಲ್ಲ ಕೆಡವಿ ಬೀಳಿಸುವಷ್ಟಿವೆ!
ನಿನ್ನ ಕವಿತೆಗಳೆಲ್ಲವೂ ಮಾರುಕಟ್ಟೆಯಲ್ಲಿ
ಮಾರಾಟದ ಸರಕು!
ನನ್ನ ಪದ್ಯಗಳು ಹಾಗಲ್ಲ ನನ್ನೊಳಗೇ
ನನ್ನೊಬ್ಬನ ಸ್ವತ್ತು!
ನಿನ್ನ ಕವಿತೆಗಳೆಲ್ಲವೂ ಮತ್ತೊಬ್ಬರ
ಸಂಕಟ-ಸಂಭ್ರಮಗಳನ್ನೆಲ್ಲ ಕದ್ದ ಕಳ್ಳ ಮಾಲು!
ನನ್ನ ಪದ್ಯಗಳು ನನ್ನವೇ..
ನನ್ನ ಸ್ವಂತ ಮುದ್ದು ಜಾಣ ಪೆದ್ದು!
ನಿನ್ನ ಕವಿತೆಗಳಲ್ಲಿ ಗುಡುಗು ಸಿಡಿಲುಗಳ
ಅರ್ಭಟವೂ ಇದೆ
ನನ್ನ ಪದ್ಯಗಳಲ್ಲಿ ಬರೀ
ಮಳೆ ಮತ್ತು ಮಣ್ಣಿನ ಘಮವಷ್ಟೇ..
ನಿನ್ನ ಕವಿತೆಗಳಲ್ಲಿ ಕೆಟ್ಟದ್ದು-ಒಳ್ಳೆಯದು
ಲಾಭ-ನಷ್ಟ ಸುಖ-ದುಃಖ
ನನ್ನ ಪದ್ಯಗಳ ತುಂಬೆಲ್ಲ
ನಾನು ಅವಳು ಮತ್ತು ನಮ್ಮೊಲವ ನೆನಪು!
ಕೊನೆಯಲ್ಲಿ ನನ್ನ ಪ್ರಶ್ನೆಗಳು
ನೀನಿಷ್ಟು ದಿನ ಬ(ಕೊ)ರೆದದ್ದು ಯಾತಕ್ಕೆ?
ಯಾರಿಗೆ? ನಿನಗಾ? ನಿನ್ನವರಿಗಾ?
ನಾನು ಬರೆಯುವುದು ಬಿಕ್ಕುವುದು
ಬರೀ ನನಗಷ್ಟೇ ನನ್ನ ನೆಮ್ಮದಿಗೆ!
ಕೊನೆಯದಾಗಿ ಹೇಳುವೆ
ಆಕಾಶವಾಣಿಯ ವಾರ್ತೆಯಂತೆ
ಕನ್ನಡ ವಾಹಿನಿಯ ಮುಖ್ಯಾಂಶದಂತೆ
ನಿನ್ನ ಕಲ್ಪನೆಯ ಕಿವಿಬಿಚ್ಚಿ ಕೇಳಿಸಿಕೋ..
ನಿನ್ನಷ್ಟಕ್ಕೆ ನೀನು ಹೊಸೆ
ನನ್ನಿಷ್ಟಕ್ಕೆ ನಾನು ಬರೆವೆ!
ನಿನ್ನದು ಚಿಂತನೆಗಳ ಕಾವ್ಯ
ನನ್ನದು ಒಲವಿನ ಪದ್ಯ!
~ನವೀನ್ ಮಧುಗಿರಿ
ಬೆಳಕಿನ ಹಾದಿಯೊಳು ನಡೆಯಬೇಕು
ಮೌನದಲೆ ಎಲ್ಲವನು ಏಕೆ ಹೇಳುವೆ ಗೆಳತಿ
ಮನಬಿಚ್ಚಿ ಹಾಡಿನ್ನು ಎದೆಯ ನೋವ
ಮೂಡಣದಿ ಆ ರವಿಯು ಕವಿಯಾಗಿ ಅನುದಿನವು
ಬುವಿಯೆದೆಗೆ ಬೆಳಗುನುಡಿ ಬರೆಯುತಿಹನು
ಜುಳುಜುಳನೆ ಹರಿಯುತಿಹ ಒಲುಮೆಯ ಕಣಿವೆಯೊಳು
ಕಣ್ಕಿರಣ ಮಿಟುಕಿಸುತ ಕರೆಯುತಿಹನು
ಸಂಜೆಬಾನೊಳು ಚಂದ್ರ ಚುಕ್ಕಿಗಳ ಸನಿಹದೊಳು
ಪ್ರೇಮತಿಂಗಳ ಕವಿತೆ ಹಾಡುತಿಹನು
ವೃಂದಾವನದೊಳಗೆ ರಾಧೆ-ಕೃಷ್ಣರ ನಿತ್ಯ
ವೇಣುವೀಣೆಯ ಮಿಲನ ನೋಡುತಿಹನು
ಒಲವದುವು ಕ್ಷಣಕ್ಷಣವು ನಿತ್ಯನೂತನ ಗೆಳತಿ
ರವಿ-ಬುವಿಯ ನೋಡಿ ನಾವ್ ಕಲಿಯಬೇಕು
ಹುಸಿಮುನಿಸ ಮರೆತಿನ್ನು ಹೊಸಕನಸ ಕೈಯಿಡಿದು
ಬೆಳಕಿನ ಹಾದಿಯೊಳು ನಡೆಯಬೇಕು
ಮೌನದಲೆ ಎಲ್ಲವನು ಏಕೆ ಹೇಳುವೆ ಗೆಳತಿ
ಮನಬಿಚ್ಚಿ ಹಾಡಿನ್ನು ಎದೆಯ ನೋವ
~ಎನ್.ಕೃಷ್ಣಮೂರ್ತಿ, ಭದ್ರಾವತಿ
ಆತ್ಮೀಯರೇ, ಒಂದೇಡೆ ಡಾ.ಚಂದ್ರಶೇಖರ ಕಂಬಾರರ 'ಪ್ರೇಮವೆಂಬುದು ಬೆಂಕಿಯಿದ್ದಂತೆ ; ಸುಡುತ್ತದೆ ಬೆಳಕು ನೀಡುವುದಿಲ್ಲ' ಎಂಬ ಮಾತು ಇವೆರಡು ಕವನಗಳನ್ನೋದಿದಾಗ ನನಗೆ ನೆನಪಾದದ್ದು ಯಾಕೆಂದು ತಿಳಿಯದೇ ಮತ್ತೋಮ್ಮೆ ಈ ಕವನಗಳನ್ನು ಓದಿದೆನು….ಕವಿಮಿತ್ರರಿಗೆ ಅಬಿನಂಧನೆಗಳು…ಶುಭದಿನ
ಧನ್ಯವಾದಗಳು ಸ್ನೇಹಿತ ಸಿದ್ಧರಾಮ ಅವರಿಗೆ…
ಎರಡೂ ಕವನಗಳು ಚೆನ್ನಾಗಿವೆ.