ಕಾವ್ಯಧಾರೆ

ಕವಿತೆಗಳು:ಅಶೋಕ್ ಕುಮಾರ್ ವಳದೂರು, ಸ್ವರೂಪಾನಂದ ಕೆ., ಶಿದ್ರಾಮ ಸುರೇಶ ತಳವಾರ

ಸಂಘರ್ಷ


ಇಂದು ನಿನ್ನೆಗಳದಲ್ಲ ಇದು

ಹುಟ್ಟು ಸಾವೆಂಬ ಭವ -ಭಯ

ಮೊಳಕೆಗೆ ಝರಿ ನೀರಲಿ

ಕೊಳೆಯುವ ಕಳೆಯುವ ಅಂಜಿಕೆ

 

ಮೊಣಕಾಲೂರಿ ದೈನನಾಗಿ

ಪ್ರಪಂಚ ನೋಡಿದಂದಿನಿಂದ

ಸಾಧನೆಯ ಹುಚ್ಚು ಮೇಲೇರುವ ಕೆಚ್ಚು

ಅಂದೇ ಶುರುವಾಯಿತು ನೋಡಿ ಸಂಘರ್ಷ !

 

ಬೀಸುತಿದ್ದ ಗಾಳಿ ಹರಡುತ್ತಿದ್ದ ಬೆಳಕು

ಎಲ್ಲಾ ಸೀಳಿಕೊಂಡು ವೇಗ ಹಿಡಿದ ಕನಸು

ಈ ಮಧ್ಯೆ ಹತೋಟಿ ಕಳಕೊಂಡ ಮನಸ್ಸು

ಜರ್ಜರಿತ  ದೇಹಕ್ಕೆ ಮತ್ತೆ ವಾಪಾಸಾಗದ ಆಯಸ್ಸು !

 

ಬೇಸರಾಗಿ  ಬೇಡದ  ಜೀವಕ್ಕೆ

ಸಮಾಜ ಕಟ್ಟಿದ್ದ ಸಂಗಾತಿ

ಹೊಸ ಜೀವ ಹೊಸ ಮೋಡಿ

ಬೆಂಬಿಡದ ಸಂಸಾರ ಮತ್ತೊಂದು ಸಂಘರ್ಷ !

ಸುಸ್ತಾಗಿ ದುಸ್ತರದಿ ಸುಮ್ಮನಿರಲು

ಮುತ್ತಿಟ್ಟ ನಿವೃತ್ತಿ !

ಬೆಂಬಿಡೆನೆಂದು ಮತ್ತೆ ಹಿಂಬಾಲಿಸಿದೆ

ಜೀವನವನ್ನು ರೂಪುಗೊಳಿಸಿದ ….

ಸ್ವರೂಪಗಳ ಬದಲಿಸಿ ನಿಂತ ಅದೇ ಸಂಘರ್ಷ  !!

–  ಅಶೋಕ್ ಕುಮಾರ್ ವಳದೂರು ( ಅಕುವ )


_______________________
ಬೆಳದಿಂಗಳ ಬಾಲೆ


ಕೈಯಲಿ ಕೈ ಸೇರಿಸಿ ನಡೆದ ಆ ಕ್ಷಣಗಳು ಎಂದಿಗೂ ಶಾಶ್ವತ

ಕಣ್ಣಲಿ ಕಣ್ಣಿಟ್ಟ ಕಂಡ ಕನಸು ಇಂದಿಗೂ ಜೀವಂತ

ನೀ ಕೊಟ್ಟ ಭಾಷೆ,ನಾ ಕೊಟ್ಟ ಮುತ್ತು ಕೈ ಚೆಲ್ಲಿತು

ನಿಟ್ಟುಸಿರಲಿ ಉಸಿರೇ ನಿಂತು ಹೋಯಿತು

 

ನೆನಪುಗಳ ಹೆಜ್ಜೆ ಗುರುತಿನೊಂದಿಗೆ ಮರೆಯಾದೆಯ ಗೆಳತಿ

ಹೆಜ್ಜೆ ಹೆಜ್ಜೆಗೂ ನಿನ್ನ ಗೆಜ್ಜೆ ನಾದವೇ ಕೇಳುತಿದೆ ನನ್ನಲಿ

ಮುದ್ದು ಮಾಡಿ ಸದ್ದು ಮಾಡದೇ ಹೋದೆಯ ಗೆಳತಿ

ಕದ್ದು ಕದ್ದು ಭೇಟಿಯಾದ ನೆನಪುಗಳೇ ಸುಂದರ ಮನದಲಿ

 

ನೋಡದಿದ್ದರೂ ನೋಡಿದ ಹಾಗೆ ಕಳಿಸಿದ ಸಂದೇಶಗಳಿರಲು ಬಳಿಯಲಿ

ನೋಡಿಯೂ ನೋಡದಂತೆ ದೂರ ಸರಿದ ಸನ್ನಿವೇಶವೇ ಕಾಡುತಿದೆ ನನ್ನಲಿ

ತುಟಿಯ ಮೇಲೆ ಬರುವ ಮುನ್ನ, ಕಣ್ ತುಂಬಿತು

ಮಾತು ಮೌನವಾಯಿತು ಕಣ್ಣ ಹನಿ ಮಾತಾಡಿತು

ಮುಕ್ತ ಬಂಧನ ಅವ್ಯಕ್ತ ಭಾವದ ಸಂಯುಕ್ತ ಚೇತನ ನೀ

ದಿಗಂತಗಳ ಆಚೆ ಅನಂತ ಚೇತನಗಳ ಸಂಜೀವಿನಿ ನೀ

ಸಂವೇದನೆ ಸಂಪ್ರೀತಿ ಸಂವೃದ್ದಿಗಳ ಸಂಮ್ಮೆಳನ ನೀ

ಹೆಚ್ಚೇನು ಹೇಳಲಿ ಗೆಳತಿ ಮುಗ್ದ ಹೃದಯ ಹೆಣ್ಣು ನೀ

-ಸ್ವರೂಪ್

——————————
ಅಪ್ಪನ ಮೆಟ್ಟು


ಅಪ್ಪ ಮೆಟ್ಟುತಿದ್ದ ಚಪ್ಪಲಿಯಲಿ

ಮೂಲೋಕ ಕಾಣುತಿಹುದು

ಎತ್ತಿ ನೋಡುತಿರೆ ಎಲ್ಲ !

ಕಲ್ಲು ಮುಳ್ಳುಗಳ ತುಳಿ

ತುಳಿಯುತಲೀ ಇನ್ನಷ್ಟು

ಮತ್ತಷ್ಟು ಸವೆಸಿನಹೀ ಮೆಟ್ಟು !

 

ನಡೆದ ಹೆಜ್ಜೆ ಹೆಜ್ಜೆಯನೂ ಬಿಡದಂತೆ

ನೆನಪಿಸುವುದೀ ಜೋಡುಗಳು ನನಗೆ

ನನ್ನಪ್ಪನ ನೆನಪು ಮರುಕಳಿಸುವಂತೆ !

ನಮ್ಮಪ್ಪನೊಂದಿಗೆ ಕೂಡಿ ಕಳೆದ ಕ್ಷಣಗಳನೆಲ್ಲ

ಬಣ್ಣ ಹಚ್ಚಿ, ಮಾಸದಂತೆ ಒರೆಸಿ, ಜೀವ

ಬೆರೆಸಿಟ್ಟುಕೊಂಡಿಹುದೀ ಜೋಡು !

ನೂರೆಂಟು ಕಲೆ ತಾಕಿದರೂ ತನಗೆ,

ತಾನಷ್ಟೇ ಮೆತ್ತಿಕೊಂಡು ಇರಿಸಿಹುದು

ನನ್ನಪ್ಪನಿಗೊಂದಿಷ್ಟೂ ಹೊಲಸು ತಾಗದಂತೆ !

 

ಕಳೆದಿಹನಿವುಗಳ ಜೊತೆ ಹಲವು ಕಾಲ

ನಮ್ಮಪ್ಪ ಮತ್ತಿನ್ಯಾರ ಜೊತೆಗೂ ಕಳೆಯದಷ್ಟು,

ಅದಕೆ ಇವುಗಳ ಮೇಲೆ ನನಗೆ ತುಂಬ ಕೃತಜ್ಙತೆ !
ಇರಲಿ ಇನ್ನೂ ಕೆಲಕಾಲ ಮೆಟ್ಟಿನಾ

ಗೂಡಿನಲಿ, ಮುಂದೊಂದು ದಿನಮೆಟ್ಟುವಾ

ನೆನಪುಗಳಾ ಕದ ತಟ್ಟುವಾ !

-ಶಿದ್ರಾಮ ಸುರೇಶ ತಳವಾರ

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕವಿತೆಗಳು:ಅಶೋಕ್ ಕುಮಾರ್ ವಳದೂರು, ಸ್ವರೂಪಾನಂದ ಕೆ., ಶಿದ್ರಾಮ ಸುರೇಶ ತಳವಾರ

Leave a Reply

Your email address will not be published.