ಸಂಜೆಯ ಜಿಟಿಪಿಟಿ ಮಳೆ ಹನಿಯುತ್ತಿತ್ತು. ರಸ್ತೆಯ ಗುಂಡಿಗಳೆಲ್ಲ ನೀರು ತುಂಬಿ ಸಮೃದ್ಧವಾಗಿದ್ದವು, ಅವು ಮೋಟಾರು ವಾಹನಗಳ ಬರುವಿಕೆಗೆ ಕಾಯುತ್ತ ಕೆಸರೆರೆಚಾಟಕ್ಕೆ ಸನ್ನದ್ಧವಾಗಿದ್ದವು. ಗಿಡಮರಗಳೆಲ್ಲವೂ ಮಳೆಯಲ್ಲಿ ತೊಯ್ದು ಹಸುರಿನಿಂದ ಕಂಗೊಳಿಸುತ್ತಿದ್ದವು. ರಸ್ತೆಯಲ್ಲಿ ಜನಸಂಚಾರ ಬಹಳ ವಿರಳವಾಗಿತ್ತು. ಅಲ್ಲೊಂದು ಓಬಿರಾಯನ ಕಾಲದ ಮುರುಕಲು ಬಸ್ ಸ್ಟಾಪ್. ಊರಿಗೆ ಹೊಸ ರಸ್ತೆ ಬಂದ ಮೇಲೆ ಈ ರಸ್ತೆಯಲ್ಲಿ ಊರಿನವರ ಕೆಲ ವಾಹನಗಳ ಬಿಟ್ಟರೆ ಬಸ್ಸುಗಳಾವುವೂ ಓಡುತ್ತಿರಲಿಲ್ಲ.
ಹೀಗಾಗಿ ಆ ಬಸ್ ಸ್ಟಾಪನ್ನು ಕೇಳುವರಾರೂ ಇಲ್ಲದೆ ಅವಸಾನದತ್ತ ಸಾಗಿತ್ತು. ಅದೇ ಬಸ್ ಸ್ಟಾಪಿನ ನೀರು ಸೋರದ ಮೂಲೆಯೊಂದರಲ್ಲಿ ಆಕೃತಿಗಳೆರಡು ಕುಳಿತಿದ್ದವು ಸಿಮೆಂಟು ಬೆಂಚಿನ ಮೇಲೆ. ಅವನು ಮತ್ತು ಅವಳು. ಅವರ ನಡುವೆ ಬಹಳ ಹೊತ್ತಿನಿಂದ ಮಾತಿರಲಿಲ್ಲ. ಹರಿದ ಶೀಟಿನ ಮೇಲಿನ ಹನಿಗಳ ತಟಪಟ ಸದ್ದು, ಸುಯ್ಯೆಂದು ತಣ್ಣನೆ ಗಾಳಿ ಬೀಸುವ ಸದ್ದು, ದೂರದಲ್ಲೆಲ್ಲೋ ಕಪ್ಪೆ ನಲಿದಾಡುವ ಸದ್ದು ಎಲ್ಲವೂ ಭೋರ್ಗರೆಯುವಷ್ಟರ ಮಟ್ಟಿಗೆ ಮೌನ ಅವರಲ್ಲಿ ಆವರಿಸಿತ್ತು. ಆಗಸದಿ ಕೆಂಪೇರತೊಡಗಿತ್ತು. ಇನ್ನು ಸ್ವಲ್ಪ ಹೊತ್ತಿನಲ್ಲಿ ಕತ್ತಲಾಗುವ ಸೂಚನೆಯನ್ನರಿತ ಹಕ್ಕಿಗಳು ತಂತಮ್ಮ ಗೂಡುಗಳಿಗೆ ಮರಳ ಹತ್ತಿದವು.
ಇಡೀ ಜಗತ್ತೇ ಸೂರ್ಯನಿಂದ ಎರವಲು ಪಡೆದ ಹೊಂಬಣ್ಣದ ಹುಡಿಯಲ್ಲಿ ಅದ್ದಿ ತೆಗೆದಂತಿತ್ತು. ಅವನು ಮತ್ತು ಅವಳು ಇನ್ನೂ ಕುಳಿತೇ ಇದ್ದರು. ಅವರ ಕಣ್ಣುಗಳು ಶೂನ್ಯಾಕಾಶವ ದಿಟ್ಟಿಸುತ್ತಿದ್ದರೆ, ಮನಸು ಮನ್ವಂತರದಾಚೆ ದಾಟಿ ಹೋಗಿತ್ತು. ಸುತ್ತಲೂ ಕತ್ತಲಾವರಿಸುತ್ತಿದ್ದಂತೆ ಅವರು ಎದ್ದು ಹೊರಟರು. ಮಳೆ ಹನಿಯುತ್ತಲೆ ಇತ್ತು. ರಸ್ತೆ ನಿರ್ಜನವಾಗಿತ್ತು, ಆ ನಿರ್ಜನ ರಸ್ತೆಯಲ್ಲಿ ಸಣ್ಣದಾಗಿ ನೆನೆಯುತ್ತಾ ಕೈ ಕೈ ಸೋಕಿಸಿಕೊಂಡು ಇಬ್ಬರೂ ನಡೆದರು. ಆಲ್ಲಿ ರಸ್ತೆಯಲಿ ಗೂಡಂಗಡಿ ಮುಂದೆ ಒಂದಷ್ಟು ಮಂದಿ ನಿಂತಿದ್ದರು. ಅವನು ಮತ್ತು ಅವಳು ಮುಂಚಿನಂತೆ ಇನ್ಯಾರಿಗೂ ಹೆದರುವ ಪ್ರಮೇಯವೇ ಇಲ್ಲವೆಂದು ಆ ಮಂದಿಯ ಕಣ್ಣು ಕುಕ್ಕುವ ನೋಟಗಳಿಗೆ ಸೆಡ್ಡು ಹೊಡೆದು ಗೂಡಂಗಡಿ ಮುಂದೆ ಯಾರೂ ಇರಲೇ ಇಲ್ಲವೆಂಬಂತೆ ತಮ್ಮ ಪಾಡಿಗೆ ತಾವು ನಡೆದರು, ಹಿಂದೆಯೇ ಗೂಡಂಗಡಿ ಮಂದಿಯ ಗುಸುಗುಸು ಪ್ರಾರಂಭವಾಯಿತು.
ರಸ್ತೆ ಬದಿಯ ಬೀದಿದೀಪಗಳು ಉರಿದವು. ಸಾಲಾಗಿ ನಿಂತ ಆ ಮರ್ಕ್ಯುರಿ ದೀಪಗಳ ಕೆಳಗೆ ತುಂತುರು ಮಳೆಯನ್ನೂ ಲೆಕ್ಕಿಸದೆ ಹುಳ ಹುಪ್ಪಟೆಗಳು ಜಮಾಯಿಸಿದ್ದವು. ಅವನು ಮತ್ತು ಅವಳು ರಸ್ತೆಯುದ್ದಕ್ಕೂ ನಡೆಯುತ್ತಾ ಒಮ್ಮೆ ಕತ್ತಲಲಿ ಕರಗುತ್ತಾ, ಒಮ್ಮೆ ಮರ್ಕ್ಯುರಿ ಬೆಳಕಲ್ಲಿ ಮೂಡುತ್ತಾ, ಮತ್ತೆ ಕರಗುತ್ತಾ, ಮತ್ತೆ ಮೂಡುತ್ತಾ ಸಾಗುತ್ತಿದ್ದಂತೆ ತೋರುತ್ತಿತ್ತು ದೂರದಿಂದ. ಕೊನೆಗೂ ಬಂದೇಬಿಟ್ಟಿತು ಆ ಕವಲುದಾರಿ. ಇಲ್ಲಿಂದ ಅವಳದು ಒಂದು ದಾರಿಯಾದರೆ ಅವನದು ಮತ್ತೊಂದು. ಇಲ್ಲೇ ಅವರ ಕುಟುಂಬಗಳೆರಡೂ ಕಿತ್ತಾಡಿಕೊಂಡಿದ್ದು ಆವತ್ತು. ಅವಳು ಅವನ ಎದೆಯೆತ್ತರಕೆ ಬರುತ್ತಿದ್ದ ತನ್ನ ತಲೆಯನ್ನು ಅವನೆದೆ ಮೇಲಿಟ್ಟು ಗಾಢವಾಗಿ ಅದೇ ಕೊನೆ ಬಾರಿಯೆಂಬಂತೆ ಅವನ ಅಪ್ಪಿದಳು, ಅವನೂ ಅವಳ ಅಪ್ಪಿದ. ಅವಳು ತಲೆಯೆತ್ತರಿಸಿ ಅವನೆಡೆ ನೋಡಿದಳು, ಹಾಗೆ ನೋಡಿದವಳ ಕಣ್ಣಲಿ ಮಿಂಚಿತ್ತು.
ಈಗ ಹನಿಯುವುದು ನಿಂತಿತ್ತು. ಎರಡು ಜೀವಗಳು ಕವಲುದಾರಿಯಿಂದಾಚೆ ಅಗಲಿ ತಂತಮ್ಮ ಮನೆ ಸೇರಿದರು. ಗೋಡೆ ಗಡಿಯಾರ ಹತ್ತು ಸಲ ಢಣ್ ಢಣ್ ಎಂದು ಹೊಡೆದುಕೊಳ್ಳುವಷ್ಟರಲ್ಲಿ ಆ ಘಳಿಗೆಗಾಗಿ ಕಾದು ಕಾದು ಬಸವಳಿದಿದ್ದ ಅವಳಿಗೆ ಒಂದು ಯುಗ ಕಳೆದ ಅನುಭವವಾಗಿತ್ತು. ಅವಳು ತನ್ನ ಕೋಣೆ ಸೇರಿ ಡ್ರಾಯರಿನಿಂದ ಒಂದು ಚಿಕ್ಕ ಸೀಸೆಯನ್ನು ತೆಗೆದು ಕತ್ತಲ್ಲಿದ್ದ ಶಿಲುಬೆಯನ್ನು ಹಿಡಿದು ಅವನನ್ನೂ, ದೇವರನ್ನೂ ನೆನೆದಳು ಮನದಿ. ಅದೇ ಸಮಯಕ್ಕೆ ಅತ್ತ ಕಡೆ ಕವಲುದಾರಿಯಾಚಿನ ಅವನ ಮನೆಯಲ್ಲಿ ಅವನೂ ತನ್ನ ಕೋಣೆಯಲ್ಲಿ ಅವಳನ್ನೇ ನೆನೆಯುತ್ತಾ ತಾವು ಮೊದಲೆ ನಿರ್ಧರಿಸಿದಂತೆ ಜೇಬಿನಿಂದ ಸೀಸೆಯೊಂದ ಹೊರತೆಗೆದನು. ಎಷ್ಟು ಹೊತ್ತಾದರೂ ಕೋಣೆಯೊಳಗಿಂದ ಉತ್ತರ ಬಾರದ್ದರಿಂದ ಎರಡೂ ಕಡೆ ಮನೆಯವರು ಬಾಗಿಲು ಮುರಿದು ಒಳನುಗ್ಗಿದರು. ಅವಳು ಆಸ್ಪತ್ರೆಯಲ್ಲಿ ತೀರಿಕೊಂಡಳು! ಅವನು ಅರ್ಧ ಸೀಸೆ ಮಾತ್ರ ಕುಡಿದಿದ್ದರಿಂದ ಅವನನ್ನು ಉಳಿಸಲು ಸಾಧ್ಯವಾಯಿತೆಂದು ಡಾಕ್ಟರು ನಿಟ್ಟುಸಿರಿಟ್ಟರು. ಕೆಲ ದಿನಗಳ ತರುವಾಯ…
ಅವಳ ಮನೆಯವರು ಅವಳ ಕಾರ್ಯಕೆ ಓಡಾಡುತ್ತಿದ್ದರೆ, ಅವನ ಮನೆಯವರು ಅವನಿಗೆ ಹೆಣ್ಣು ಗೊತ್ತು ಮಾಡಿ ಮದುವೆಶಾಸ್ತ್ರಕೆ ಅಣಿಯಾಗುತ್ತಿದ್ದರು. ಅವಳ ಸಮಾಧಿಯ ಮೇಲೆ ಅವನ ಲಗ್ನದ ಸಂಭ್ರಮ ಮನೆ ಮಾಡಿತ್ತು.
-ಹರ್ಷ ಮೂರ್ತಿ
ಎಂಥಹ ವಿಪರ್ಯಾಸ. ಮನ ಕಲುಕಿದ ಕಥೆ. ತುಂಬಾ ಹಿಡಿಸಿತು.
odige haagoo mecchugege dhanyavaadagalu ganesh avre.. 🙂
"ಅವಳ ಸಮಾಧಿಯ ಮೇಲೆ ಅವನ ಲಗ್ನದ ಸಂಭ್ರಮ ಮನೆ ಮಾಡಿತ್ತು.. " ವಾಹ್ ಹರ್ಷ ..
ಮನಮೀಟಿತು.. ಕಥಾ ನಿರೂಪಣೆ ಕತೆಗೆ ಮತ್ತಷ್ಟು ಜೀವವನ್ನು ತುಂಬಿದೆ ..
thanx maga..
ಹಲವು ಕಡೆ ನಡೆಯುವ ಮನ ಕುಲುಕುವ ವ್ಯಥೆಯ ಕಥನ ಇದು. ಮಾರ್ಮಿಕವಾಗಿ ಬರೆದುಕೊಟ್ಟಿದ್ದೀರಾ.
Badarinath ಅವರೇ ಧನ್ಯವಾದಗಳು ತಮ್ಮ ಓದಿಗೆ..
ಅಂತಃಕರಣ ತಟ್ಟುತ್ತದೆ ಹರ್ಷಜೀ..
ಸಾವಿನ ನಂತರ ಯಾವುದೂ ನಮ್ಮ ದಾಗಿರುವುದಿಲ್ಲ.. ಅವರವರ ಬದುಕು ಅವರವರಿಗೆ ಇಂಪಾರ್ಟೆಂಟ್..
ade alve viparyasa sushmaaji..
avalu sattiddoo nija.. avanu badukiruvudoo nija..
question enoondre preeti avalondige sattoyta? illaa avanondige badukitaa?
ಎಂಥಹ ವಿಪರ್ಯಾಸ. ಮನ ಕಲುಕಿದ ಕಥೆ. ತುಂಬಾ ಹಿಡಿಸಿತು.
writing shaili hidisitu.
ಓದಿದ್ದಕ್ಕೆ ಮತ್ತು ಮೆಚ್ಛುಗೆಗೆ ಧನ್ಯವಾದಗಳು!!
Tumba Chenagi Niroopane Madiddira, Priti jotege Saavu 2dannu Vimarshege Hacchuvantide E Story…gud
dhanyavaada sachin naik avare..
ಜಿಟಿಪಿಟಿ ಮಳೆಯ ಸಂಜೆಯಲ್ಲಿ ಶುರುವಾಗಿ, ಮಳೆ ನಿಂತು ಹೋದ ಮೇಲೆ ಬಾನು ಹೊಂಬಣ್ಣಕ್ಕೆ ತಿರುಗಿ, ಕತ್ತಲಾಗಿ, ಮನೆ ದೀಪಗಳು ಬೆಳಗುವವರೆಗೆ ಒಂದೆರಡು ಕಡೆ 'ಅವನು' 'ಅವಳು' ಗೋಚರಿಸುವ ಈ ಚಿಕ್ಕ ಚೊಕ್ಕ 'ಕಥೆಯಲ್ಲ ವಾಸ್ತವ'ದ ಕಹಿಸತ್ಯ ಕೊನೆಯ ಸಾಲಿನಲ್ಲಿದೆ – ಅವಳ ಸಮಾಧಿಯ ಮೇಲೆ ಅವನ ಲಗ್ನದ ಸಂಭ್ರಮ ಮನೆ ಮಾಡಿತ್ತು.
ಬರೆದ ರೀತಿ ತುಂಬಾ ಹಿಡಿಸಿತು.
dhanyavaadagalu sir
ಹೇಳಿದ ಕಥೆಗಿಂತಲೂ, ಕಥೆ ಹೇಳುವ ರೀತಿ ಹಿಡಿಸಿತು. ಇನ್ನೂ ಹೊಸ ಹೊಸ ಕಥೆಗಳ ನಿರೀಕ್ಷೆಯಲ್ಲಿ ಇರುವೆ.
dhanyavaadagalu sir!!