ಮನ್ನೆ ರವಿವಾರ ಮಧ್ಯಾನಾ ಉರಿ ಉರಿ ಬಿಸಲ ಝಳಾ ತಡಕೊಳ್ಳಾರ್ದಕ್ಕ ಬಾಗಿಲಿಗೆ ತಲಿಕೊಟ್ಟ ಮಲಕೊಂಡ್ಡಿದ್ದೆ, ಹಿಂಗ ಜಂಪ ಹತ್ತ್ಲಿಕತ್ತಿತ್ತು ಅಷ್ಟರಾಗ ತಂಪಸೂಸ ಗಾಳಿ ಬಿಸಲಿಕತ್ತು. ಕಣ್ಣ ತಗದು ನೋಡೊದ್ರಾಗ ಮಳಿ ಬರೊಹಂಗಾಗಿ ಜೋರ ಮಾಡ ಹಾಕಿತ್ತು. ಇನ್ನೆನು ಹಿತ್ತಲಕ್ಕ ಹೋಗಿ ಒಣಗಿದ್ದ ಅರಬಿ ತಕ್ಕೊಂಡ ಬರೊದ್ರಾಗ ಹನಿ ಹನಿ ಮಳಿ ಶುರು ಆಗೆಬಿಡ್ತು. ನೋಡ್ ನೋಡೊದ್ರಾಗ ದಪ್ಪ ದಪ್ಪ ಹನಿ ಜೊಡಿ ಆಣಿಕಲ್ಲು ಬಿಳಿಕ್ಕತ್ವು.ಕಣ್ಣ ಮುಚ್ಚಿ ಕಣ್ಣ ತಗಿಯೋದ್ರಾಗ ಅಂಗಳದ ತುಂಬ ಬೆಳ್ಳಗ ಮಲ್ಲಿಗಿ ಹೂವಿನ ರಾಶಿ ಹಾಸಿಧಂಗ ಆಣಿಕಲ್ಲಿನ ರಾಶಿನ ತುಂಬಿತ್ತು.
ಅಷ್ಟರಾಗ ಆರು ವರ್ಷದ ನನ್ನ ಮಗಾ ಆಶ್ಚರ್ಯದಿಂದ ಒಳಗ ಓಡಿ ಬಂದು "ಅಮ್ಮಾ ಸ್ಕಾಯ್ ನ್ಯಾಗಿಂದ ಐಸ್ ಕ್ಯುಬ್ ಬಿಳಿಕತ್ತಾವ,ಅವನ್ನ ಮ್ಯಾಲಿಂದ ಯಾರ ಒಗಿಲಿಕತ್ತಾರ, ಸ್ಕಾಯ್ ನ್ಯಾಗ ಫ್ರೀಜ್ ಅದಯೆನಮ್ಮ ,ಮತ್ತ ನಮಗ ಕಾಣಸವಲ್ತಲ್ಲಾ ಅಂತ ಒಮ್ಮೆ ಪ್ರಶ್ನೆಗಳನ್ನ ಕೇಳಿಕ ಶುರುಮಾಡಿದಾ,
ಅವನ ಆ ಮುಗ್ಧ ಮಾತಿಗೆ ನಗು ಬಂತು,ಮತ್ತ ಈಗಿನ ಕಾಲದ ಹುಡುಗರ ಕುತುಹಲಕಾರಿ ಮನೋಭಾವ ನೋಡಿ ನನ್ನ ಮನಸ್ಸು ನನ್ನ ಬಾಲ್ಯದ ದಿನಗಳೊಳಗ ಜಾರಿತು.ನನಗ ನೆನಪಿದ್ದ ಪ್ರಕಾರ ನಾ ನಮ್ಮ ಅಮ್ಮಗ ಇಂಥಾ ಪ್ರಶ್ನೆಗಳನ್ನ ಮಾಡಿಲ್ಲಾ.ಆಣಿಕಲ್ಲ ಮಳಿ ಆದಾಗ ಒಮ್ಮೆ ಅಮ್ಮನ ಕಡೆ ಸಿಸ್ತ ಬಯ್ಸ್ಕೊಂಡಿದ್ದ ಮಾತ್ರ ನೆನಪದ.ಖರೆ ಆಣಿಕಲ್ಲ ಮಳಿ ಒಳಗ ಆಡೊದಂದ್ರ ಭಾಳ ಮಸ್ತ ಇರತದ,ನಾವಂತು ವಠಾರದಾಗ ಒಂದ ಎಂಟ ಮಂದಿ ವಾರಗಿ ಹುಡುಗುರ ಮತ್ತ ಹುಡ್ಗ್ಯಾರ ಇದ್ವಿ.ಮಳಿ ಹನಿ ಬಿಳೊದ ತಡಾ ಎಲ್ಲಾರು ಹುಯ್ಯ ಅಂತ ಅಂಗಳದಾಗ “ಕಳ್ಳೆ ಮಳ್ಳೆ ಕಪಾಟ ಮಳ್ಳೆ” ಅಂತ ಹಾಡ್ಕೊತ ಸುತ್ತಲ ತಿರುಗಿಕ್ಕೊತ ಒಬ್ಬರಿಗೊಬ್ಬರು ಡಿಕ್ಕಿ ಹಾಯ್ಕೊತ,ಆಣಿಕಲ್ಲ ಆರಿಸ್ಕೊಂಡ ತಿನ್ಕೊತ,ಪೂರ್ತಿ ಮಳ್ಯಾಗ ತೊಯ್ಸ್ಕೊಂಡ್ ಮಸ್ತ ಮಜಾ ಮಾಡತಿದ್ವಿ.ಭಾಳಷ್ಟ ಹಾಳಿ ದೋಣಿ ಮಾಡಿ ಅದರಾಗ ಬಣ್ಣ ಬಣ್ಣದ ಥರ್ಮೊಕೊಲ ಬಾಲ್ಸ ಹಾಕಿ ನೀರಾಗ ಬಿಡತಿದ್ವಿ.ಕಡೀಕೆ ಎಲ್ಲಾರ ಅಮ್ಮಂದ್ರು ಬಂದು ರಟ್ಟಿ ಹಿಡದು,ಕಿವಿ ಹಿಡದು ಬಯ್ಕೊತ ಎಳಕೊಂಡ ಹೋಗೊತನಕ ನೀರಾಗ ಆಟಾ ಆಡತಿದ್ವಿ.
ಈ ಮಳಿಯೋಳಗ ನೆನಿಸ್ಕೊಳ್ಳೊ ಅನುಭವ ಆಯಾ ವಯಸ್ಸಿಗೆ ತಕ್ಕಂಗ ಬದಲಾಗತಿರ್ತದ ಅಂತ ನಂಗನಿಸ್ತದ.ನಮ್ಮ ಕಾಲೇಜಿನ ದಿವಸಗಳೊಳಗ ಮಾಡ ಹಾಕಿ ಮಳಿ ಬರೊಹಂಗಾಗಿದ್ರು ಮುದ್ದಾಮ ಸವಕಾಶ ನಡಕೊತ ಹೋಗತಿದ್ವಿ.ಜೊರಾಗಿ ಮಳಿ ಶುರುವಾದ್ರು,ಎಲ್ಲೂ ಗಿಡದಮರೆಗೆ ಸುದ್ಧಾ ಹೋಗಿ ನಿಂದರತಿದ್ದಿಲ್ಲಾ. ಖರೆ ಆವಾಗ ನಾವ ಎಷ್ಟ ಛಂದ ಮಳಿಗಾಲಾನಾ ಎಂಜಾಯ್ ಮಾಡತಿದ್ವಿ ಅಂದ್ರ ಇಡಿ ರಸ್ತೆ ತುಂಬ ನಮ್ಮದ ದರ್ಬಾರ ಇರತಿತ್ತು,ವೆಹಿಕಲ್ಲ ಹಾರ್ನ ಹಾಕಿದ್ರು ಕೇಳಸಲಾರದಷ್ಟು ನಮ್ಮದ ಆದ ಲೋಕದಾಗ ಇರತಿದ್ವಿ.ಗಾಡಿ ಮ್ಯಾಲೆ ಹೊಗೋವರು ನಮ್ಮನ್ನ ಮಸ್ತ ಬಯ್ಕೊತ ಹೋಗತಿದ್ರು.ಆದ್ರು ನಮಗ ಎನು ಅನಿಸ್ತಿದ್ದಿಲ್ಲಾ. ನಾವ ಕಾಲೇಜಿನಿಂದ ನಡಕೊಂಡ ಹೋಗೊ ರಸ್ತೆಯೊಳಗ ದೊಡ್ಡ ದೊಡ್ಡ ಬ್ಯಾರೆ ಬ್ಯಾರೆ ಬಣ್ಣದ ಗುಲಮೊಹರ್ ಗಿಡಾ ಇದ್ವು.ಈ ಆಣಿಕಲ್ಲ ಮಳಿ ಎಪ್ರಿಲ್ ಮತ್ತ ಮೇ ತಿಂಗಳದಾಗ ಆಗತದ ಆ ಹೊತ್ತನ್ಯಾಗ ಗುಲಮೊಹರ್ ಗಿಡದಾಗ ಹೂವು ಬಿಡೊದು,ಬಿಸೋ ಗಾಳಿಗೆ ಇಡಿ ರಸ್ತೆ ತುಂಬ ಬಿದ್ದ ಹೂವಿನ ರಾಶಿ, ತಂಪು ತಂಪಾದ ವಾತಾವರಣ, ಆ ಜಡಿ ಮಳಿಯೊಳಗ ನೆನೆಪಾಗೊ" ಟಿಪ್ ಟಿಪ್ ಬರಸಾ ಪಾನಿ, ಪಾನಿ ಮೆ ಆಗ ಲಗಾಯಿ"…" ಆಗ ಲಗಿ ದಿಲ್ ಮೆ ತೊ ದಿಲ್ ಕೊ ತೆರಿ ಯಾದ ಆಯಿ" ಹಾಡು, ಜೋಡಿ ಜೀವದ ಗೆಳತಿಯರಿದ್ರು ಯಾವುದೊ ಬೆಚ್ಚನೆ ಸನಿಹದ ಬಯಸೊ ಮನಸ್ಸು,ಆ ಹೊತ್ತಿನ್ಯಾಗ ಜಗತ್ತು ಎಷ್ಟ ಛಂದ ಇತ್ತಂದ್ರ ಮಾತನ್ಯಾಗ ಹೇಳಿಕ್ಕು ಆಗಂಗಿಲ್ಲಾ.
ಹಂಗ ಮಳಿಯೊಳಗ ತೋಯ್ಸ್ಕೊತ,ಆವಾಗಿನ್ನು ಈ ಶೇವಪೂರಿ ಪಾನಿಪೂರಿ,ಗೋಬಿಮಂಚೂರಿದು ಹಾವಳಿ ಇರಲಿಲ್ಲಾ. ಡಬ್ಬಿ ಅಂಗಡಿಯೋಳಗಿನ ಅಜ್ಜ ಮಾಡಿಕೊಡೊ ಯಾಲಕ್ಕಿ ಚಹಾ ಕುಡಕೊತ ಅದರ ಜೋಡಿ ಹಿಟ್ಟ ಹಚ್ಚಿ ಕರದ ಶೇಂಗಾ ತಿನಕೊತ ಮಜಾ ಮಾಡತಿದ್ವಿ.ಅಂಗಡಿ ಅಜ್ಜನ ಕಡೆ "ಖೋಡಿಗೋಳ ಮಳ್ಯಾಗ ತೋಯ್ಸ್ಕೊಂಡ ಎನರೆ ಅನಾಹುತ ಮಾಡಕೊತಿರಿ ಲಗುನ ಮನಿಗೆ ಹೊಗ್ರಿ ಸಂಜ್ಯಾತು ಅಂತ ಬಯ್ಸ್ಕೊತಿದ್ವಿ.ಮತ್ತ ತಿರಗಿ ಆಂವಗ "ಅಜ್ಜಾ ನಿನಗೇನ ಗೊತ್ತದ ಮಳ್ಯಾಗ ತೊಯ್ಸ್ಕೊಂಡ್ರ ಎಷ್ಟ ಮಜಾ ಸಿಗತದಂತ" ಅಂತಿದ್ವಿ,ಅದಕ್ಕ ಅಜ್ಜಾ "ಎಲ್ಲಾ ಗೊತ್ತದ ಹೊಗ್ರೆ ಪೋರಿಗೊಳ ನಾ ಮಾಡಿ ಮುಗಿಸಿದ್ದನ್ನ ನೀವ ಮಾಡ್ಲಿಕತ್ತಿರಿ,ಹೊಗ್ರಿನ್ನ ಮನಿಗೆ ಅಂತ ಜಬರಿಸಿ ಕಳಸ್ತಿದ್ದಾ.ಮನಿಗೆ ಹೋದಕುಡಲೆ ಅಮ್ಮನ ಮಂತ್ರಪುಷ್ಪ ಶುರು ಆಗತಿತ್ತು," ಮೂರುಸಂಜ್ಯಾದ್ರು ನಿನ್ನ ಕಾಲೇಜ್ ಮುಗಿಯಂಗಿಲ್ಲಾ, ತಲಿಮ್ಯಾಲೆ ಹದಿನೆಂಟ ವಯಸ್ಸಾದ್ರು ಮಳಿ ಬಂದಕೂಡ್ಲೆ ನಡು ರಸ್ತೆದಾಗ ಮಂಗ್ಯಾನಂಗ ಕುಣಕೋತ ಬರ್ತಿರಿ,ಒಂಚೂರು ಸೊನ್ನಿಸೂಕ್ಷ್ಮ ಇಲ್ಲಾ, ಅಂತ ಬಯ್ದದ್ದು ಕಿವಿ ಮ್ಯಾಲೆ ಬಿಳತಿದ್ದಿಲ್ಲಾ.ಅದನ್ನೆಲ್ಲಾ ಈಗ ನೆನಪ ಮಾಡಕೊಂಡ್ರ ಎಷ್ಟ ಖುಶಿ ಆಗತದ.ನಮಗ ಸಿಕ್ಕ ಜೀವನದ ಆ ಸುಂದರ ಅವಕಾಶನ ತೄಪ್ತಿಯಾಗಿ ಅನುಭವಿಸಿದ್ವಿ ಅನಿಸ್ತದ.
ನನ್ನ ಗತ ನೆನಪಿಗೆ ಜಾರಿ ಹೊಗಿದ್ದ ಮನಸು ನನ್ನ ಮಗಳ ಧ್ವನಿ ಗೆ ವಾಪಸ ವಾಸ್ತವಕ್ಕ ಬಂತು,ನನ್ನ ಮಗಾ ಮತ್ತ ಮಗಳು "ಕೊಲಾವರಿ ಕೊಲಾವರಿ " ಹಾಡ ಹಾಡಕೊತ,ಡ್ಯಾನ್ಸ ಮಾಡಕೊತ,ಮಳ್ಯಾಗ ತೊಯ್ಸ್ಕೊಳಿಕತ್ತಿದ್ರು. ಎಷ್ಟ ವಿಚಿತ್ರ ಅಲ್ಲಾ ಕಾಲಾ ಹೆಂಗ ಬದಲಾಗತದ ನಾವ ಹಾಡತಿದ್ದ "ಕಳ್ಳೆ ಮಳ್ಳೆ ಕಪಾಟ ಮಳ್ಳೆ " ಹಾಡು ಕಣ್ಮರಿಯಾಗಿ ಹೋಗೆದ. ಆ ಹಾಡು ಅದ ಅಂತನು ಈಗಿನ್ ಮಕ್ಕಳಿಗೆ ಗೊತ್ತಿಲ್ಲ ಅನಿಸ್ತದ.ಕಾಲಾ ಎಷ್ಟೆ ಬದಲಾಗಲಿ ಆದ್ರ ಈ ಮಳೆಗಾಲದ ಸೊಗಸು ಯಾವತ್ತು ಬದಲಾಗಂಗಿಲ್ಲಾ. ನನ್ನ ಪ್ರಕಾರಾ ಈ ಮಳೆಗಾಲದ ಸೊಗಸನ್ನ ಅನುಭವಿಸೊ ಅವಕಾಶಾನ ಯಾರು ತಪ್ಪಿಸ್ಕೊಬಾರದು. ಹಿಸ್ಟರಿ ರಿಪೀಟ್ಸ್ ಅಂತಾರಲ್ಲಾ ಹಂಗ "ಆವಾಗ ನಾ ನಮ್ಮ ಅಮ್ಮನ ಕಡೆಯಿಂದ ಬಯ್ಸ್ಕೊತಿದ್ದೆ, ಈಗ ನಾನ ನನ್ನ ಮಕ್ಕಳಿಗೆ ಬಯ್ಕೊತ ಒಳಗ ಕರಕೊಂಡ ಹೊದೆ. ಅದಕ್ಕ ನನ್ನ ಮಗಾ " ಅಮ್ಮಾ ಮಳಿಯೊಳಗ ಆಟಾ ಆಡೊದ ಎಷ್ಟ ಮಸ್ತ ಇರತದ ನಿಂಗೇನ ಗೊತ್ತಮ್ಮಾ ಅಂತ ಅಂದಾ,ಫಕ್ಕನ ನಂಗ ಅಜ್ಜನ ನೆನಪಾತು,ಈಗ ಅಂವ ಇಲ್ಲಾ, ಇದ್ರ ಅಂವಗ ನನ್ನ ಮಗಾ ನಂಗ ಅಂದ ಮಾತನ್ನ ಹೋಗಿ ಹೇಳ್ತಿದ್ದೆ.ಹೊರಗ ಮಳಿ ನಿಂತು ವಾತಾವರಣ ಶಾಂತ ಆಗಿತ್ತು,ಆದ್ರ ಅದು ನನ್ನ ಮನಿಸಿನ್ಯಾಗ ಅರಳಿಸಿದ ನೆನಪಿನ ಹೂವುಗಳಿಂದ ಮನಸ್ಸು ಹೂವಿನಂಗ ಹಗುರ ಆಗಿತ್ತು….
*****
good one. u r right rAin do have its effect agewise…
ಲೇಖನ ಓದಿ ಮಳೆಯಲ್ಲಿ ತೋಯ್ದಷ್ಟೆ ಖುಷಿ ಆತು.
Super!
ನಿಮ್ಮ ಮಳೆ ಲೇಖನ ಓದಿ ತಂಪು ತಂಪು ಕೂಲ್ ಕೂಲ್ ಅಯ್ತ್ರಿ…:)
ಮಳೆ ಮಳೆ…ಇಲ್ಲಿ ಬಂದಿಲ್ಲ. ಚಂದದ ಬರಹ
ಮಳೆಯ ಬಗ್ಗೆ ಮನಮೋಹಕ ಲಹರಿ -ಇಷ್ಟವಾಯಿತು