ಕಳ್ಳನ ಕಥೆ: ಶ್ರೀಮಂತ ಯನಗುಂಟಿ

Shrimanth Yanagunty
ಮೂಲ: ರಸ್ಕಿನ್ ಬಾಂಡ್
ಕನ್ನಡಕ್ಕೆ: ಶ್ರೀಮಂತ ಯನಗುಂಟಿ

ರೋಮಿಗೆ ಭೇಟಿಯಾದಾಗ ನಾನಿನ್ನೂ ಕಳ್ಳನಾಗಿದ್ದೆ. ಕೇವಲ ಹದಿನೈದು ವರ್ಷದವನಾಗಿದ್ದರೂ ಕಳ್ಳತನದಲ್ಲಿ ನಾನೊಂದು ಅನುಭವಿ ಮತ್ತು ಯಶಸ್ವೀ ಹಸ್ತವಾಗಿದ್ದೆ. 

ನಾನು ರೋಮಿಯ ಬಳಿ ಹೋದಾಗ ಅವನು ಕುಸ್ತಿ ಪಂದ್ಯವನ್ನು ವಿಕ್ಷೀಸುತ್ತಿದ್ದ. ಅವನು ಇಪ್ಪತ್ತೈದು ವರ್ಷದವನಿರಬಹುದು. ನನ್ನ ಉದ್ದೇಶಕ್ಕೆ ಸರಳವಾಗಿ ಸರಿಹೊಂದುವ ಹಾಗೆ ಕಾಣಿಸಿದ. ಈ ಯುವಕನ ವಿಶ್ವಾಸವನ್ನು ಗೆಲ್ಲಬಲ್ಲೆ ಎಂದು ನನಗೆ ಖಚಿತವಾಯಿತು. 

"ನೀನು ಸ್ವಲ್ಪ ಕುಸ್ತಿ ಪಟುವಿನ ಹಾಗೆ ಕಾಣಿಸುತ್ತಿಯ", ನಾನು ಹೇಳಿದೆ. ಮಂಜುಗಡ್ಡೆಯನ್ನು ಕರಗಿಸಲು ಯಾವುದೇ ಹೊಗಳಿಕೆಯ ಅಗತ್ಯವಿಲ್ಲ. 

"ನೀನೂ ಸಹ", ಅವನು ತಿರುಗಿ ಹೇಳಿದ. ನನಗೆ ತುಸು ಗೊಂದಲವಾದಂತಾಯಿತು. ಕಾರಣ, ನಾನು ಹಾಗಿರಲಿಲ್ಲ. ತೆಳ್ಳಗೆ ಹಾಗೂ ಕೇವಲ ಎಲುಬಿನ ಜೀವವಾಗಿದ್ದೆ.

"ಸರಿ", ನಾನು ಸಹಜವಾಗಿ ಹೇಳಿದೆ, "ನಾನು ಸ್ವಲ್ಪ ಹಾಗೆಯೇ ಇದ್ದಿನಿ".

"ನಿನ್ನ ಹೆಸರು?", ರೋಮಿ ಕೇಳಿದ.

"ಹರಿಸಿಂಗ್", ನಾನು ಸುಳ್ಳು ಹೇಳಿದೆ. ಪ್ರತೀ ತಿಂಗಳು ಪೋಲಿಸರ ಮತ್ತು ನನ್ನ ಹಳೆಯ ಉದ್ಯಮಿಗಳ ಎದುರಿಗೆ ನಾನು ಹೊಸ ಹೊಸ ಹೆಸರನ್ನು ಪಡೆಯುತ್ತಿದ್ದೆ.

ಈ ಎಲ್ಲಾ ಔಪಚಾರಿಕತೆಯ ನಂತರ ರೋಮಿ ಪಂದ್ಯದಲ್ಲಿ ಹೊಡೆದಾಡುತ್ತಿದ್ದ, ಒಬ್ಬರನ್ನೊಬ್ಬರು ಎಸೆದಾಡುತ್ತಿದ್ದ ಕುಸ್ತಿಪಟುಗಳ ಕುರಿತ ವಿವರಣೆಯಲ್ಲಿ ತೊಡಗಿದ. ಸ್ವಲ್ಪ ಸಮಯದ ನಂತರ ಅವನು ಹೊರಗೆ ಹೋದ ಕೂಡಲೆ ಅವನನ್ನು ಹಿಂಬಾಲಿಸಿದೆ.

"ನಮಸ್ಕಾರ ಮತ್ತೊಮ್ಮೆ", ಹಿಂಬಾಲಿಸುತ್ತಿದ್ದ ನನ್ನನ್ನು ನೋಡಿ ಅವನು ಹೇಳಿದ.

ನಾನು ನನ್ನ ದೊಡ್ಡದಾದ ನಗುವನ್ನು ಬೀರುತ್ತ, "ನಾನು ನಿಮ್ಮ ಬಳಿ ಕೆಲಸ ಮಾಡಬೇಕೆಂದಿದ್ದೆನೆ", ಎಂದು ಹೇಳಿದೆ.

"ಆದರೆ ನನಗೆ ಸ್ವಲ್ಪ ಸಮಯದವರೆಗೆ ಯಾವುದೇ ರೀತಿಯ ಹಣವನ್ನು ಕೊಡಲು ಆಗುವುದಿಲ್ಲ". ಅವನು ನಮ್ರತೆಯಿಂದ ಹೇಳಿದ.

ಆ ಬಗ್ಗೆ ನಾನು ಸ್ವಲ್ಪ ಯೋಚಿಸಿದೆ. ಬಹುಶಃ ನಾನು ನನ್ನ ಮನುಷ್ಯನನ್ನು ತಪ್ಪಾಗಿ ನಿರ್ಣಯಿಸಿದ್ದೆ.

"ನನಗೆ ಊಟ ಹಾಕುತ್ತಿರಾ?" ನಾನು ಕೇಳಿದೆ.

"ನಿನಗೆ ಅಡುಗೆ ಮಾಡಲು ಬರುತ್ತಾ?", ಅವನು ಕೇಳಿದ.

"ನಾನು ಅಡುಗೆ ಮಾಡಬಲ್ಲೆ", ಮತ್ತೆ ನಾನು ಸುಳ್ಳು ಹೇಳಿದೆ.

"ಒಂದು ವೇಳೆ ನೀನು ಅಡುಗೆ ಮಾಡುವಿಯಾದರೆ ನಾನು ನಿನಗೆ ಊಟ ಕೊಡಬಲ್ಲೆ".

ಡೆಲ್ಲಿ ಸ್ವೀಟ್ ಅಂಗಡಿಯ ಮೇಲಿದ್ದ ಅವನ ಕೋಣೆಗೆ ಕರೆದುಕೊಂಡು ಹೋಗಿ ಅಲ್ಲಿ ಮೇಲೆ ಮಲಗಬಹುದೆಂದು ಹೇಳಿದ. ಆದರೆ ಆ ರಾತ್ರಿ ನಾನು ಮಾಡಿದ ಅಡುಗೆ ಬಹುಶಃ ಭಯಂಕರವಾಗಿತ್ತೆನೋ. ಯಾಕೆಂದರೆ ರೋಮಿ ಅದನ್ನು ನಾಯಿಗಳಿಗೆ ಹಾಕಿ ನನ್ನನ್ನು ಹೋಗಿ ಮಲಗಲು ತಿಳಿಸಿದ. ಆದರೂ ನಾನು ದೊಡ್ಡದಾದ ನಗೆ ಚೆಲ್ಲುತ್ತ ಅಲ್ಲೇ ನಿಂತುಕೊಂಡೆ, ರೋಮಿ ನಗಲಿಲ್ಲ. 

ನಂತರ ಅವನು, ಚಿಂತಿಸಬೇಡ ನಾನೇ ನಿನಗೆ ಅಡುಗೆ ಮಾಡುವುದನ್ನು ಕಲಿಸುತ್ತೆನೆ ಎಂದು ಹೇಳಿದ. ಅಷ್ಟೇ ಅಲ್ಲದೆ ನನ್ನ ಹೆಸರನ್ನು ಸಹ ಬರೆಯುವುದನ್ನು ಕಲಿಸಿ, ನಂತರ ಎಲ್ಲಾ ವಾಕ್ಯಗಳನ್ನು ಹಾಗೂ ಸಂಖ್ಯೆಗಳನ್ನೂ ಬರೆಯುವುದನ್ನು ಕಲಿಸುತ್ತೆನೆಂದು ಹೇಳಿದ. ನಾನು ಕೃತಜ್ಞನಾದೆ. ಒಬ್ಬ ವಿದ್ಯಾವಂತ ವ್ಯಕ್ತಿಯಂತೆ ಬರೆಯುವುದನ್ನು ಕಲಿತರೆ ಸಾಧಿಸುವುದಕ್ಕೆ ಯಾವುದೇ ಮೀತಿ ಇರುವುದಿಲ್ಲ ಎಂಬುದು ನನಗೆ ಗೊತ್ತಿತ್ತು.

ರೋಮಿಯ ಸಲುವಾಗಿ ಕೆಲಸ ಮಾಡುವುದು ತುಂಬಾ ಸಂತೋಷದಾಯಕವಾಗಿತ್ತು. ನಾನು ಬೆಳಿಗ್ಗೆ ಚಹ ಮಾಡುತ್ತಿದ್ದೆ. ನಂತರ ದಿನಕ್ಕೆ ಬೇಕಾದ ಸಮಾನುಗಳನ್ನು ಸಹಜವಾಗಿ ಎರಡು-ಮೂರು ರೂಪಾಯಿ ಲಾಭ ಮಾಡಿಕೊಳ್ಳುತ್ತ ತಂದಿಡುತ್ತಿದ್ದೆ. 

ಈ ರೀತಿ ನಾನು ಹಣ ಉಳಿಸಿಕೊಳ್ಳುವುದು ರೋಮಿಗೆ ತಿಳಿಯಿತು. ಆದರೂ ಅವನು ಅದರಿಂದ ಚಿಂತಿತನಾದಂತೆ ಕಾಣಿಸಲಿಲ್ಲ.

ರೋಮಿ ಹಾಗೂ ಹೀಗೂ ಹಣ ಮಾಡುತ್ತಿದ್ದ. ಒಂದು ವಾರ ಸಾಲ ತರುತ್ತಿದ್ದ. ಮುಂದಿನ ವಾರ ತೀರಿಸುತ್ತಿದ್ದ. ಮುಂದಿನ ಚೆಕ್ ಬಗ್ಗೆ ಚಿಂತೆ ಮಾಡುತ್ತಿದ್ದ. ಅದು ಬರುತ್ತಲೇ ಹೊರಗೆ ಹೋಗಿ ಖರ್ಚು ಮಾಡಿ ಖುಷಿಪಡುತ್ತಿದ್ದ. ಅವನು ಹಣಕ್ಕಾಗಿ ಬಾಂಬೆ ಮತ್ತು ಡೆಲ್ಲಿಯ ನಿಯತಕಾಲಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದ. ಬದುಕನ್ನು ನಡೆಸುವ ಒಂದು ವಿಭಿನ್ನ ಮಾರ್ಗ.

ಒಂದು ಸಂಜೆ ಪುಸ್ತಕವನ್ನು ಮುದ್ರಣಗಾರರಿಗೆ ಮಾರಿದೆನೆಂದು ಹೇಳುತ್ತ ಒಂದು ಸಣ್ಣ ನೋಟಿನ ಕಂತೆಯನ್ನು ಹಿಡಿದುಕೊಂಡು ಮನೆಗೆ ಬಂದ. ಆ ರಾತ್ರಿ ಅವನು ಹಣವನ್ನು ಒಂದು ಕಾಗದದ ಕವಚದೊಳಗಿಟ್ಟು ದಿಂಬಿನ ಕೆಳಗಿಟ್ಟಿದ್ದನ್ನು ನೋಡಿದೆ.

ನಾನು ರೋಮಿಯ ಬಳಿ ಸುಮಾರು ಒಂದು ತಿಂಗಳಿಂದ ಕೆಲಸ ಮಾಡುತ್ತಿದ್ದೆ. ಅಂಗಡಿಗೆ ಹೋಗಿ ಬರುತ್ತ ಸ್ವಲ್ಪ ಹಣವನ್ನು ಉಳಿಸಿಕೊಂಡದ್ದು ಬಿಟ್ಟರೆ ನನ್ನ ನಿಜವಾದ ಕೃತ್ಯದ ಯಾವ ಪಾಲನ್ನೂ ಮಾಡಿರಲಿಲ್ಲ. ಹಾಗೆ ಮಾಡುವುದಕ್ಕೆ ನನಗೆ ಬಹಳಷ್ಟು ಅವಕಾಶಗಳಿದ್ದವು. ನನಗೆ ತೃಪ್ತಿಯಾಗುವ ಹಾಗೆ ಬಂದು ಹೋಗಬಹುದಿತ್ತು. ಹಾಗೂ ನಾನು ಭೇಟಿಯಾದವರಲ್ಲೇ ರೋಮಿ ಒಬ್ಬ ಅತಿಯಾಗಿ ನಂಬುವ ಮನುಷ್ಯನಾಗಿದ್ದ.

ಇದಕ್ಕಾಗಿಯೇ ರೋಮಿಯನ್ನು ದರೋಡೆ ಮಾಡುವುದು ಕಠಿಣವಾಗಿತ್ತು. ಒಬ್ಬ ಅತಿಯಾಸೆ ಇರುವ ವ್ಯಕ್ತಿಯನ್ನು ದರೋಡೆ ಮಾಡುವುದು ನನಗೆ ಸುಲಭವಾಗಿತ್ತು. 

ಯಾಕೆಂದರೆ ಅವನು ದರೋಡೆಗೆ ಅರ್ಹನಾಗಿರುತ್ತಾನೆ. ಆದರೆ ಒಬ್ಬ ಒಳ್ಳೆಯ ವ್ಯಕ್ತಿಯನ್ನು ದರೋಡೆ ಮಾಡುವುದು ಬಹಳ ಕಷ್ಟಕರವಾದದ್ದು. ಅದರಲ್ಲೂ ಒಂದು ವೇಳೆ ತಾನು ದರೋಡೆಯಾಗುತ್ತಿರುವುದನ್ನು ಅವನು ಗಮನಿಸದಿದ್ದರೆ ಇಡೀ ದರೋಡೆಯಲ್ಲಿನ ಉತ್ಸಾಹ, ಸಂತೋಷಗಳೆಲ್ಲ ಗಾಳಿಯಲ್ಲಿ ತೇಲಿ ಹೋದಂತೆ.

ಸರಿ, ಈಗ ನನ್ನ ನಿಜವಾದ ಕೆಲಸಕ್ಕಿಳಿಯಬೇಕಾದ ಸಮಯ ಎಂದು ನನಗೆ ನಾನು ಹೇಳಿಕೊಂಡೆ. ಒಂದು ವೇಳೆ ನಾನು ಆ ಹಣವನ್ನು ತೆಗೆದುಕೊಳ್ಳದಿದ್ದರೆ ರೋಮಿ ಅದನ್ನು ತನ್ನ ಸ್ನೇಹಿತರೆಂದು ಕರೆಸಿಕೊಳ್ಳುವವರಿಗಾಗಿ ವ್ಯರ್ಥಿಸಿಬಿಡುತ್ತಾನೆ. ಅಲ್ಲದೆ, ಅವನು ನನಗೆ ಸಂಬಳವನ್ನೂ ಕೊಡುವುದಿಲ್ಲ. 

ರೋಮಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದ. ಚಂದ್ರನ ಬೆಳಕಿನ ಕಿರಣವೊಂದು ಕಿರುಕಿಡಕಿಯ ಮೂಲಕ ಅವನ ಹಾಸಿಗೆಯನ್ನು ತಲುಪಿತ್ತು. ನಾನು ಸಂದರ್ಭಕ್ಕಾಗಿ ಕಾಯುತ್ತ ಕುಳಿತೆ. ಒಂದು ವೇಳೆ ಹಣವನ್ನು ತೆಗೆದುಕೊಂಡರೆ ನಾನು ಲಕ್ನೌಗೆ ತೆರಳುವ 10:30 ರ ವೇಗದ ರೈಲನ್ನು ಹಿಡಿಯಬಹುದು. ನನ್ನ ಹೊದಿಕೆಯಿಂದ ಜಾರುತ್ತ ಆ ಹಾಸಿಗೆಯ ಕಡೆಗೆ ತೆವಳಿದೆ.

ನನ್ನ ಕೈ ನೋಟುಗಳನ್ನು ಹುಡುಕುತ್ತ ದಿಂಬಿನ ಕೆಳಗೆ ನುಗ್ಗಿತು. ನೋಟಿನ ಕವಚ ಸಿಕ್ಕ ಕೂಡಲೆ ಸದ್ದೇ ಮಾಡದೆ ಅದನ್ನು ಎಳೆದುಕೊಂಡೆ. ರೋಮಿ ನಿದ್ದೆಗಣ್ಣಲ್ಲಿ ನೋಡಿ ಇನ್ನೊಂದು ಕಡೆ ಇನ್ನೊಂದು ಕಡೆ ಹೊರಳಿದ. ಗೊಂದಲಗೊಂಡು ತಕ್ಷಣ ಆ ಕೋಣೆಯಿಂದ ಹೊರಬಿದ್ದೆ.

ರಸ್ತೆಯ ಮೇಲೆ ಒಮ್ಮೆಲೇ ಓಡಲಾರಂಭಿಸಿದೆ. ಹಣವನ್ನು ನನ್ನ ಅಂಗಿಯ ಒಳಗಿನ ಜೇಬಿನಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದೆ. ರೋಮಿಯ ಮನೆಯಿಂದ ತುಸು ದೂರ ಬಂದಾಗ ನಡೆಯುವುದನ್ನು ನಿಧಾನಿಸಿ, ನನ್ನ ಜೇಬಿನಿಂದ ಹಣದ ಕವಚವನ್ನು ತೆಗೆದುಕೊಂಡು ಎಣಿಸಿದೆ. ಐವತ್ತು ರೂಪಾಯಿ ನೋಟಿನ ಸುಮಾರು ಏಳು ನೂರು ರೂಪಾಯಿಗಳು. ಎರಡು ವಾರಗಳವರೆಗೆ ರಾಜನ ಹಾಗೆ ಬದುಕಬಹುದು!

ರೈಲು ನಿಲ್ದಾಣ ತಲುಪಿದ ಕೂಡಲೇ ನಾನು ಟಿಕೆಟ್ ಕೋಣೆಯ ಹತ್ತಿರ ನಿಂತುಕೊಳ್ಳದೆ (ನನ್ನ ಜೀವನದಲ್ಲೇ ಟಿಕೆಟ್‍ಗಳನ್ನು ಕೊಂಡಿರಲಿಲ್ಲ) ನೇರವಾಗಿ ಪ್ಲಾಟ್‍ಫಾರ್ಮಿಗೆ ಧಾವಿಸಿದೆ. ಲಕ್ನೌ ಎಕ್ಸಪ್ರೆಸ್ ಅದಾಗಲೇ ನಿಧಾನವಾಗಿ ವೇಗವನ್ನು ಪಡೆದುಕೊಳ್ಳುತ್ತಿತ್ತು. ಯಾವುದೋ ಒಂದು ಬೋಗಿಯೊಳಗೆ ಹಾರುವುದಕ್ಕೆ ನಾನು ಸಮರ್ಥನಾಗಿದ್ದೆ-ಆದರೆ ನಾನು ಹಿಂಜರಿದೆ-ಯಾವ ಕಾರಣವೊ ಗೊತ್ತಿಲ್ಲ. ಕೊನೆಗೂ ಹೋಗುವ ಅವಕಾಶವನ್ನು ತಪ್ಪಿಸಿಕೊಂಡೆ.

ರೈಲು ಹೋದ ನಂತರ ಮರಭೂಮಿಯ ಹಾಗೆ ಕಾಣಿಸುತ್ತಿದ್ದ ಆ ಪ್ಲಾಟ್‍ಫಾರ್ಮಿನ ಮೇಲೆ ನಾನೊಬ್ಬನೇ ನಿಂತಿದ್ದೆ. ರಾತ್ರಿಯನ್ನು ಎಲ್ಲಿ ಕಳೆಯಬೇಕೆಂಬ ಯಾವ ಯೋಚನೆಯೂ ನನ್ನಲ್ಲಿರಲಿಲ್ಲ. ಸ್ನೇಹಿತರಿರುವುದು ಸಹಾಯಕ್ಕಿಂತಲೂ ಹೆಚ್ಚಾಗಿ ತೊಂದರೆ ಕೊಡುವುದಕ್ಕೆಂದು ತಿಳಿದಿದ್ದರಿಂದ ಯಾವ ಸ್ನೇಹಿತರೂ ಇರಲಿಲ್ಲ. ಹಾಗೂ ಸಮೀಪದ ಯಾವುದೋ ಒಂದು ವಸತಿಗೃಹದಲ್ಲಿ ಇರುವುದರ ಮೂಲಕ ಜನರಲ್ಲಿ ಕುತೂಹಲವನ್ನು ಸೃಷ್ಟಿಸುವ ಬಯಕೆಯೂ ಇರಲಿಲ್ಲ. ನನಗೆ ಚೆನ್ನಾಗಿ ಗೊತ್ತಿದ್ದ ಒಬ್ಬನೇ ಒಬ್ಬ ವ್ಯಕ್ತಿಯೆಂದರೆ ನಾನು ಯಾರನ್ನು ದರೋಡೆ ಮಾಡಿದ್ದೆನೋ ಅವನು ಮಾತ್ರ. ನಿಲ್ದಾಣವನ್ನು ಬಿಡುತ್ತ ನಾನು ನಿಧಾನವಾಗಿ ಮಾರುಕಟ್ಟೆಯ ಮೂಲಕ ನಡೆದೆ.

ನನ್ನ ವೃತ್ತಿಯ ಸ್ವಲ್ಪವೇ ಸಮಯದಲ್ಲಿ ತಮ್ಮ ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಂಡದ್ದು ಗೊತ್ತಾದ ಕೂಡಲೇ ಕಂಡು ಬರುತ್ತಿದ್ದ ಜನರ ಮುಖಗಳನ್ನು ನಾನು ಅಧ್ಯಯನ ಮಾಡಿದ್ದೆ. ಅತಿಯಾಸೆಯ ವ್ಯಕ್ತಿ ಆತಂಕಿತನಾಗುತ್ತಿದ್ದ, ಶ್ರೀಮಂತ ವ್ಯಕ್ತಿ ಸಿಟ್ಟಾಗುತ್ತಿದ್ದ, ಬಡವರು ಹೋಗಲಿ ಬಿಡು ಎಂದು ಸುಮ್ಮನಾಗುತ್ತಿದ್ದರು. ಆದರೆ ರೋಮಿ ತಾನು ಕಳೆದುಕೊಂಡದ್ದನ್ನು ಗೊತ್ತಾದರೆ ಕೇವಲ ಒಂದು ನೋವಿನ ಎಳೆಯನ್ನು ಮಾತ್ರ ವ್ಯಕ್ತಪಡಿಸುತ್ತಾನೆ ಎಂದು ನನಗೆ ಗೊತ್ತಿತ್ತು. ಅದೂ ಸಹ ಹಣವನ್ನು ಕಳೆದುಕೊಂಡದಕ್ಕಲ್ಲ, ನಂಬಿಕೆಯನ್ನು ಕಳೆದುಕೊಂಡದ್ದಕ್ಕಾಗಿ. 

ರಾತ್ರಿ ಚಳಿಯಿಂದ ಕೂಡಿತ್ತು. ಉತ್ತರ ಭಾರತದಲ್ಲಿ ನವೆಂಬರ್ ರಾತ್ರಿಗಳು ತೀರಾ ಚಳಿಯಿಂದಿರುತ್ತವೆ. ಅದರಲ್ಲೂ ಮಳೆಯ ಸಿಂಚನ ಮತ್ತಷ್ಟು ನನಗೆ ಅನನುಕೂಲತೆ ಕಲ್ಪಿಸಿತು. ನಾನು ಗಡಿಯಾರವನ್ನು ತೂಗು ಹಾಕಿದ್ದ ಕಟ್ಟಡವೊಂದರ ಆಶ್ರಯದಲ್ಲಿ ಕುಳಿತೆ. ಕೆಲವು ಭಿಕ್ಷುಕರು ಮತ್ತು ನಿರಾಶ್ರಿತರು ನನ್ನ ಪಕ್ಕ ಅವರ ಹೊದಿಕೆಗಳನ್ನು ಬಿಗಿಯಾಗಿ ಸುತ್ತಿಕೊಂಡು ಮಲಗಿದ್ದರು. ಗಡಿಯಾರ ಮಧ್ಯರಾತ್ರಿಯನ್ನು ತೋರಿಸಿತು. ನನಗೆ ನೋಟುಗಳ ನೆನಪಾಯಿತು. ಅವು ಮಳೆಯಲ್ಲಿ ನೆನೆದಿದ್ದವು. ಬೆಳಿಗ್ಗೆಯಾದರೆ ಅವನು ಬಹುಶಃ ಐದು ರೂಪಾಯಿ ಕೊಟ್ಟಿರುತ್ತಿದ್ದ. ಆದರೆ ಈಗ ಅದೆಲ್ಲಾ ನನ್ನಲ್ಲಿಯೇ ಇದೆ. ಅಡುಗೆ ಮಾಡುವ ತಾಪತ್ರಯ ಇಲ್ಲ, ಮಾರುಕಟ್ಟೆಗೆ ಓಡುವ ಕೆಲಸವಿಲ್ಲ, ಅಥವ ವಾಕ್ಯಗಳನ್ನು ಕಲಿಯುವ ಗೋಜಿಲ್ಲ.

ವಾಕ್ಯಗಳು! ಕಳ್ಳತನದ ರೋಮಾಂಚನದಲ್ಲಿ ನಾನು ಅವುಗಳ ಬಗ್ಗೆ ಮರೆತೇ ಬಿಟ್ಟಿದ್ದೆ.

ಸಂಪೂರ್ಣ ವಾಕ್ಯಗಳನ್ನು ಬರೆಯುವುದು ಒಂದು ದಿನ ನನಗೆ ನೂರಕ್ಕಿಂತಲೂ ಹೆಚ್ಚಿನ ಹಣ ತಂದು ಕೊಡುವುದೆಂದು ಗೊತ್ತಿತ್ತು. 

ಕಳ್ಳತನ ಮಾಡುವುದು ಬಹಳ ಸುಲಭವಾದದ್ದು. ಆದರೆ ನಿಜವಾಗಿಯೂ ಒಬ್ಬ ದೊಡ್ಡ ವ್ಯಕ್ತಿಯಾಗುವುದು, ಜ್ಞಾನ ಮತ್ತು ಗೌರವಯುತ ವ್ಯಕ್ತಿಯಾಗುವುದು ಬೇರೆಯದ್ದೇ. ಕೇವಲ ಓದುವುದನ್ನು ಮತ್ತು ಬರೆಯುವುದನ್ನು ಕಲಿಯುವುದಕ್ಕಾದರೂ ನಾನು ರೋಮಿಯ ಬಳಿ ಮತ್ತೆ ಹೋಗಲೇಬೇಕು. ನನಗೆ ನಾನೇ ಹೇಳಿಕೊಂಡೆ.

ನಾನು ಅವಸರವಸರವಾಗಿ ಕೋಣೆಗೆ ಬಂದೆ. ಏನಾದರೂ ಕಳ್ಳತನ ಮಾಡುವುದಕ್ಕಿಂತಲೂ ಕಳ್ಳತನ ಮಾಡಿದ್ದನ್ನು ಗೊತ್ತೇ ಆಗದಂತೆ ಕಳ್ಳತನಕ್ಕೊಳಗಾದವನಿಗೆ ಮರಳಿಸುವುದು ಬಹಳಷ್ಟು ಕಷ್ಟಕರವಾದ್ದರಿಂದ ನಾನು ಮಾನಸಿಕವಾಗಿ ಬಲಹೀನನಾಗಿದ್ದೆ.

ನಾನು ನಿಧಾನವಾಗಿ ಬಾಗಿಲನ್ನು ತೆಗೆದು ಮೋಡಗುಂದಿದ ಚಂದ್ರನ ಬೆಳಕಿನಲ್ಲಿ ಬಾಗಿಲಲ್ಲೇ ನಿಂತೆ. ರೋಮಿ ಇನ್ನೂ ಮಲಗಿದ್ದ. ಹಾಸಿಗೆಯ ಮೇಲಿನ ದಿಂಬಿನತ್ತ ತೆವಳಿದೆ. ನನ್ನ ಒಂದು ಕೈ ನೋಟಿನ ಕವಚದೊಂದಿಗೆ ಹೊರಬಂತು. ಅವನ ಉಸಿರು ನನ್ನ ಕೈ ಮೇಲೆ ಹರಿದಾಡಿತು. ಕೆಲವು ಕ್ಷಣಗಳವರೆಗೆ ನಾನು ಸ್ತಬ್ಧನಾಗಿ ಉಳಿದೆ. ನಂತರ ನನ್ನ ಬೆರಳುಗಳು ದಿಂಬಿನ ಅಂಚನ್ನು ತಲುಪಿದವು. ನಾನು ಹಣವನ್ನು ಅದರಡಿಗೆ ಜಾರಿಸಿದೆ.

ನಾನು ಮರುದಿನ ಬೆಳಿಗ್ಗೆ ತಡವಾಗಿ ಎದ್ದೆ. ರೋಮಿ ಅದಾಗಲೇ ಚಹ ಮಾಡಿದ್ದ. ಒಂದು ಕೈ ನನ್ನತ್ತ ಚಾಚಿದ. ಬೆರಳುಗಳ ನಡುವೆ ಐವತ್ತು ರೂ ನೋಟಿತ್ತು.

ನನ್ನ ಹೃದಯ ಮುಳುಗಿ ಹೋಯಿತು.

"ನಿನ್ನೆ ನಾನು ಸ್ವಲ್ಪ ಹಣ ಸಂಪಾದಿಸಿದೆ". ಅವನು ಹೇಳಿದ, "ಈಗ ನಾನು ನಿರಂತರವಾಗಿ ನಿನಗೆ ಸಂಬಳ ಕೊಡಲು ನಮರ್ಥನಾಗಿದ್ದೆನೆ".

ನನ್ನಲ್ಲಿ ಮತ್ತೆ ಉತ್ಸಾಹ ಮೂಡಿತು. ಆದರೆ ಆ ನೋಟು ತೆಗೆದುಕೊಂಡಾಗ ಕಳೆದ ರಾತ್ರಿಯ ಮಳೆಯಿಂದಾಗಿ ಅದಿನ್ನೂ ಒದ್ದೆಯಾಗಿರುವುದು ನನ್ನ ಗಮನಕ್ಕೆ ಬಂತು. ಹಾಗಾದರೆ ನಾನು ಮಾಡಿದ್ದೆನೆಂದು ಅವನಿಗೆ ಗೊತ್ತಾಗಿದೆ. ಆದರೂ ಅವನ ತುಟಿಗಳಾಗಲಿ, ಕಣ್ಣುಗಳಾಗಲಿ ಏನನ್ನೂ ಬಹಿರಂಗಪಡಿಸಲಿಲ್ಲ.

"ಇವತ್ತು ನಾವು ವಾಕ್ಯಗಳನ್ನು ಬರೆಯುವುದನ್ನು ಕಲಿಯಲು ಆರಂಭಿಸೋಣ", ಅವನು ಹೇಳಿದ.

ಬಹಳಷ್ಟು ಖುಷಿ ಮತ್ತು ಆತ್ಮಿಯತೆಯಿಂದ ನಾನು ರೋಮಿಯತ್ತ ನೋಡಿ ನಕ್ಕೆ, ಆ ನಗು ತಾನೇ ತಾನಾಗಿ ಬಂತು, ಯಾವುದೇ ಪ್ರಯತ್ನವಿಲ್ಲದೆ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ತಿರುಪತಿ ಭಂಗಿ
ತಿರುಪತಿ ಭಂಗಿ
6 years ago

ಮನ ಕಲಕುವಂತ ಕತೆ. ರೋಮಿಗಿಂತ ಕಳ್ಳನೆ ಇಷ್ಟವಾದ 

shreemanth
shreemanth
6 years ago

Hahaha, thanks to Ruskin Bond. Inthaha katheyanna kottaddakke. Bahalashtu sala nammalle e vyavastheyindagi nammalle hudugiruva manaviyate mattu niyattanna eledu hora tarabekaguttade. 

2
0
Would love your thoughts, please comment.x
()
x