“ಕಲ್ಲರಳಿ ಹೂವಾಗಿ, ಎಲ್ಲರಿ ಗೂ ಬೇಕಾಗಿ,
ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ
ಬಲ್ಲವರು ಹೇಳಿ ಸರ್ವಜ್ಞ”
ಸರ್ವಜ್ಞನಿಂದ ಹಂಸಲೇಖಾವರೆಗೂ ಕಲ್ಲರಳಿ ಹೂವಾಗುವ ರೂಪಕ ಕನ್ನಡದ ಕವಿಗಳನ್ನು ಸದಾ ಕಾಡಿದಂತಿದೆ. ಸುಣ್ಣದ ಕಲ್ಲುಗಳು ನೀರಿನೊಂದಿಗೆ ಬೆರೆತು ಅರಳುವುದು ಸರ್ವಜ್ಞನಿಗೆ ಕಲ್ಲರಳಿ ಹೂವಾಗುವ ಹಾಗೆ ಕಂಡಿತು. ಕಾಡಿನ ಬಂಡೆಗಳ ಮೇಲೆ ಬೆಳೆಯುವ ಈ ಚಿತ್ರದಲ್ಲಿರುವ ಕಲ್ಲು ಹೂವಿನ ಗಿಡಗಳು ಸರ್ವಜ್ಞನ ಸಾಲುಗಳಿಗೆ ಸರಿಹೊಂದುವಂತಿವೆ. ಹಿಮಾಲಯದ ತಪ್ಪಲಿನಲ್ಲಿ, ಪೂರ್ವಾಂಚಲದ ಕಾಡುಗಳಲ್ಲಿ ಬೆಳೆಯುವ ಈ ಬಗೆಯ ಸಸ್ಯಗಳಿಗೆ ಕೆಲವೆಡೆ “ಪಥ್ಥರ್ ಪೋಡಿ” ಎನ್ನುತ್ತಾರೆ. ಸಂಸ್ಕೃತದಲ್ಲಿ “ಶಿಲಾಪುಷ್ಪ” ಎಂಬ ಹೆಸರೂ ಇದೆ. ಡಿಡಿಮೋಕಾರ್ಪಸ್ ಸೈನೋಇಂಡಿಕಸ್ (Didymocarpus sinoindicus) ಎಂಬುದು ಇತ್ತೀಚೆಗಷ್ಟೇ ಭಾರತ ಹಾಗೂ ಚೀನಾದ ವಿಜ್ಞಾನಿಗಳು ಈ ಹೊಸ ಪ್ರಬೇಧದ ಶಿಲಾಪುಷ್ಪಗಳಿಗೆ ಇಟ್ಟ ಸಸ್ಯಶಾಸ್ತ್ರೀಯ ಹೆಸರು.
ಕಲ್ಲುಬಂಡೆಗಲ್ಲುಗಳ ಮೇಲಷ್ಟೇ ಬೆಳೆಯುವ ಈ ಸಸ್ಯ ಪ್ರಬೇಧ ಗೆಸ್ನೆರಿಯೇಸಿಯೇ (Gesneriaceae) ಎಂಬ ಕುಟುಂಬಕ್ಕೆ ಸೇರಿದ್ದು. ವಿಕಾಸದ ಹಾದಿಯಲ್ಲಿ ಹಿಂತಿರುಗಿ ನೋಡಿದರೆ ಇದು ನಮ್ಮ ಮನೆಯಂಗಳದ ತುಳಸೀ ಗಿಡಗಳ ದೂರದ ಸಂಬಂಧಿ. ಈ ಗೇಣುದ್ದದ ಗಿಡ ಹೆಚ್ಚು ಮಳೆಯಾಗುವ ಪ್ರದೇಶದ ಬಂಡೆಗಳಲ್ಲಿ ಹಬ್ಬಿ ನಿಂತ ಹಾವಸೆಗಳ ಮೇಲೆ ಬೆಳೆಯುತ್ತವೆ. ಮುಂಗಾರಿನ ಆರಂಭದಲ್ಲಿ ಚಿಗುರಿ ಬೆಳೆದು, ಮಳೆಗಾಲ ಮುಗಿಯುವಷ್ಟರಲ್ಲಿ ಕೆನೆಬಣ್ಣದ ಹೂವರಳಿಸಿ, ಹಣ್ಣಾಗಿ, ಬೀಜ ಪ್ರಸಾರ ಮಾಡಿ ಮತ್ತೆ ಮರೆಯಾಗುತ್ತವೆ. ಬಟ್ಟಲಿನಂತಹ ಪುಷ್ಪಪಾತ್ರೆಯ ಒಳಗಿನಿಂದ ಕೊಳವೆ ಯಾಕಾರದ ಪುಟ್ಟ ಹೂವರಳುತ್ತವೆ. ಹೂವಿನ ಶಿಖರಾಗ್ರದಲ್ಲಿ ಅರಳಿನಿಂತ ಐದು ಮುಕುಟದಳ ಮಧ್ಯೆ ಇರುವ ನೇರಳೆ ಬಣ್ಣದ ಚಿತ್ತಾರ ಪರಾಗಸ್ಪರ್ಶಕ್ಕೆ ಕೀಟಗಳನ್ನು ಆಹ್ವಾನಿಸುತ್ತದೆ.
ಡಿಡಿಮೋಕಾರ್ಪಸ್ ಗುಂಪಿಗೆ ಸೇರಿದ ಸುಮಾರು ನೂರಕ್ಕೂ ಅಧಿಕ ಪ್ರಭೇದಗಳನ್ನು ಈವರೆಗೆ ಗುರುತಿಸಲಾಗಿದೆ. ಹೆಚ್ಚಿನವು ದಕ್ಷಿಣ ಏಷಿಯಾದ ಬೆಟ್ಟ, ಜಲಪಾತ, ಮಳೆಕಾಡಿನಂತಹ ತೇವಾಂಶವಿರುವ ಜಾಗಗಳಲ್ಲಿ ಕಲ್ಲುಬಂಡೆಗಳ ನಡುವೆ ಬೆಳೆಯುವಂಥವು. ಪರಿಸರದಲ್ಲಿ ಸ್ವಲ್ಪವೇ ಬದಲಾದರೂ ಇವುಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ರಸ್ತೆ, ಅಣೆಕಟ್ಟು ಇತ್ಯಾದಿ ಅಭಿವೃದ್ದಿ ಚಟುವಟಿಕೆಗಳಿಂದಾಗಿ ಶಿಲಾಪುಷ್ಪದ ಬಹುತೇಕ ಪ್ರಬೇಧಗಳು ಈಗಾಗಲೇ ಅಳಿವಿನಂಚಿನಲ್ಲಿವೆ. ಕೆಲವು ಪ್ರಭೇದಗಳ ಸಸ್ಯಗಳ ಎಲೆಗಳನ್ನು ಸ್ಥಳೀಯರು ಚಹಾದಂತೆ ಕುದಿಸಿ ಕುಡಿಯುತ್ತಾರೆ. ಮೂತ್ರಪಿಂಡಕ್ಕೆ ಸಂಬಂಧಿಸಿದ ರೋಗಗಳಿಗೆ ಔಷಧವಾಗಿಯೂ ಇದು ಬಳಕೆಯಾಗುತ್ತದೆ. ನೇಪಾಳದಲ್ಲಿ ಬೆಳೆಯುವ ಕೆಂಬಣ್ಣದ ಹೂಬಿಡುವ ಪ್ರಬೇಧವೊಂದರಿಂದ ಸ್ಥಳೀಯರು ಕುಂಕುಮವನ್ನೂ ತಯಾರಿಸುತ್ತಾರೆ. ಹಂಸಲೇಖ ಈ ಕೆಳಗಿನ ಸಾಲುಗಳನ್ನು ಬರೆದಿದ್ದು ಕಲ್ಲಿನ ಮೇಲಿನ ಹಾವಸೆಗಳನ್ನೇ ಮಣ್ಣಿನಂತೆ ಬಳಸಿಕೊಂಡು ಬೆಳೆಯುವ, ಕುಂಕುಮವಾಗಿಯೂ ಬಳಕೆಯಾಗುವ ಶಿಲಾಪುಷ್ಪಗಳ ಕುರಿತಾಗಿಯೇ ಇದ್ದೀತು ಎನ್ನಿಸುವುದರಲ್ಲಿ ಆಶ್ಚರ್ಯವಿಲ್ಲ!
ಕಲ್ಲರಳಿ… ಹೂವಾಗಿ
ಹೂವರಳಿ… ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅರಿಶಿನ ಕುಂಕುಮ ಸಿರಿಗಾಗಿ
ಝುಂ ಎಂದಳು ಎದೆಯಲಿ ಪದವಾಗೀ!
ಇತ್ತೀಚೆಗಷ್ಟೇ ವೈಜ್ಞಾನಿಕವಾಗಿ ಹೆಸರಿಸಲ್ಪಟ್ಟ ಈ ಹೊಸ ಪ್ರಭೇದದ ಕಲ್ಲು ಹೂವಿಗೆ ಕುತೂಹಲಕಾರಿ ಇತಿಹಾಸವಿದೆ. 1949 ರಲ್ಲಿ ಬ್ರಿಟಿಷ್ ಸಸ್ಯಶಾಸ್ತ್ರಜ್ಞ ಕಿಂಗ್ ಡನ್ ವಾರ್ಡ್ ಎಂಬಾತ ನಾಗಾಲ್ಯಾಂಡಿನ ಕಾಡುಗಳಲ್ಲಿ ಅಲೆಯುತ್ತಿರುವಾಗ ಹೊಸ ಬಗೆಯ ಗಿಡಗಳನ್ನು ಕಂಡ. ಅವನಲ್ಲಿ ಹೋದಾಗ ಮಳೆಗಾಲ ಮುಗಿಯುತ್ತ ಬಂದಿತ್ತು; ಗಿಡದ ತುಂಬಾ ಕಾಯಿಗಳಷ್ಟೇ ಇದ್ದವು. ಅದರ ಎಲೆಗಳಿಗೆ ತುಳಸಿಯಂತಹ ಪರಿಮಳವಿದ್ದುದನ್ನು ಗಮನಿಸಿದ. ಆದರೆ ಹೂವುಗಳನ್ನು ನೋಡದೇ ಗಿಡಗಳನ್ನು ಸರಿಯಾಗಿ ಗುರುತಿಸಲಾಗದು. ಸಿಕ್ಕಿದ್ದನ್ನೇ ಒಣಗಿಸಿ ತನ್ನ ಜೋಳಿಗೆಯಲ್ಲಿಟ್ಟುಕೊಂಡು ಇಂಗ್ಲೆಂಡಿಗೆ ಹಿಂತಿರುಗಿ ಹೋಗಿದ್ದ. ಎಪ್ಪತ್ತು ವರ್ಷಗಳಿಂದ ಆ ಒಣಗಿದೆಲೆಗಳು ಲಂಡನ್ನಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಮ್ಮಿನ ಕಪಾಟುಗಳಲ್ಲಿ ಹೆಸರಿಲ್ಲದೇ ಭದ್ರವಾಗಿ ಅಡಗಿ ಕುಳಿತಿದ್ದವು. ಕಳೆದ ವರ್ಷ ಮಳೆಗಾಲದಲ್ಲಿ ನಾಗಾಲ್ಯಾಂಡಿನ ಸಾರಾಮತಿ ಎಂಬ ಕಡಿದಾದ ಬೆಟ್ಟದಲ್ಲಿ ಹೂವುಗಳನ್ನರಸಿ ಹೊರಟಿದ್ದ ಭಾರತೀಯ ಸಸ್ಯವಿಜ್ಞಾನಿಗಳ ಕಣ್ಣಿಗೆ ಬಿತ್ತು. ಈ ಗಿಡದ ಗುಣಲಕ್ಷಣಗಳನ್ನೂ, ವಿಕಾಸದ ವಿವರಗಳನ್ನೂ ಅಧ್ಯಯನ ಮಾಡಿ ಲೇಖನ ಬರೆಯುವಷ್ಟರಲ್ಲಿ ಕಾಕತಾಳೀಯವೆಂಬಂತೆ ಅತ್ತ ಗಡಿಯಾಚೆಗಿನ ಚೀನಾದ ವಿಜ್ಞಾನಿಗಳಿಗೂ ಇದೇ ಬಗೆಯ ಶಿಲಾಪುಷ್ಪದ ಗಿಡಗಳು ಸಿಕ್ಕವು. ಬೆಟ್ಟದೊಡಲಿನ ಪುಟ್ಟ ಹೂವಿಗೆ ಗಡಿಗಳ ಹಂಗಿಲ್ಲವಷ್ಟೇ! ಭಾರತ ಹಾಗೂ ಚೀನಾದ ವಿಜ್ಞಾನಿಗಳು ಜಂಟಿಯಾಗಿ ಇನ್ನಷ್ಟು ಅಧ್ಯಯನ ನಡೆಸಿ ಈ ಹೊಸ ಪ್ರಬೇಧದ ಸಸ್ಯಗಳಿಗೆ ‘ಡಿಡಿಮೋಕಾರ್ಪಸ್ ಸೈನೋಇಂಡಿಕಸ್’ ಎಂದು ಸಸ್ಯಶಾಸ್ತ್ರೀಯವಾಗಿ ನಾಮಕರಣ ಮಾಡಿದರು. ’ಸೈನೋಇಂಡಿಕಸ್’ ಎಂದರೆ ಲ್ಯಾಟಿನ್ ನಲ್ಲಿ ಭಾರತ ಹಾಗೂ ಚೀನಾ ಎಂದರ್ಥ.
ಬೇಂದ್ರೆಯಜ್ಜನ ‘ನಾಕುತಂತಿ’ಯಲ್ಲಿ ಹೀಗೊಂದು ಪದ್ಯವಿದೆ:
ಕಲ್ಲರಳಿ ಹೂವಾಗಿ | ಕೆಮ್ಮಣ್ಣ ಮನೆ ತೊಳಗಿ
ನಮ್ಮ ನಿಮ್ಮನ್ನ ಬರ ಮಾಡಿ | ಮನಮನ
ಕಮ್ಮಗಿರಿಸ್ಯಾವ, ಕಲ್ಲರಳಿ ||
ದೇಶವಿದೇಶಗಳ ನಡುವೆ ಗಡಿರೇಖೆಗಳಿಗಾಗಿ ವೈಮನಸ್ಸು ಮೂಡಿರುವ ಈ ಹೊತ್ತಲ್ಲಿ, ಎರೆಡೂ ದೇಶಗಳ ಹೆಸರು ಹೊತ್ತು, ಗಡಿಮೀರಿ ಶತಮಾನಗಳಿಂದ ಬೆಳೆಯುತ್ತಿರುವ ಈ ಶಿಲಾಪುಷ್ಪದ ಸಸ್ಯ ನಮ್ಮೆಲ್ಲರ ನಡುವೆ ಸಾಮರಸ್ಯದ ಕಂಪು ಮೂಡಿಸಲಿ ಎಂದು ಆಶಿಸೋಣ.
ಚಿತ್ರಗಳು:
ಚಿತ್ರ 1 : ಶಿಲಾಪುಷ್ಪಗಳು ಬೆಟ್ಟ, ಜಲಪಾತ, ಮಳೆಕಾಡಿನಂತಹ ಹೆಚ್ಚು ತೇವಾಂಶವಿರುವ ಜಾಗಗಳ ಕಲ್ಲುಬಂಡೆಗಳ ನಡುವೆ ಬೆಳೆಯುತ್ತವೆ.
ಚಿತ್ರ 1-3: ಡಿಡಿಮೋಕಾರ್ಪಸ್ ಸೈನೋಇಂಡಿಕಸ್
ಸಂಪಾದಕರ ಟಿಪ್ಪಣಿ: ಪ್ರಸನ್ನ ಆಡುವಳ್ಳಿಯವರು ಸಸ್ಯಶಾಸ್ತ್ರದಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಲೇಖನ ಅವರದೇ ಸಂಶೋಧನೆಗಳ ಆಧಾರಿತ. ಪ್ರಸನ್ನರವರು ಲೇಖನದಲ್ಲೆಲ್ಲೂ ತಾವು ಮತ್ತು ತಮ್ಮ ಟೀಮ್ ಕಂಡುಹಿಡಿದಿರುವ ಈ ಶಿಲಾಪುಷ್ಪದ ಕುರಿತು ಒಂದು ವಾಕ್ಯ ಕೂಡ ಬರೆದಿಲ್ಲ. ಆದರೆ ಪ್ರಸಿದ್ದ ಇಂಗ್ಲೀಷ್ ಮ್ಯಾಗಜಿನ್ ಗಳಲ್ಲಿ ಇವರ ಈ ಸಂಶೋಧನೆಯ ಕುರಿತು ಲೇಖನಗಳು ಪ್ರಕಟವಾಗಿವೆ. ಇಂತಹುದೊಂದು ಹೊಸ ಶಿಲಾಪುಪ್ಷವನ್ನು ಪ್ರಸನ್ನರವರು ನಮ್ಮ ಕನ್ನಡಿಗರು ಮತ್ತು ನಮ್ಮ ಪಂಜು ಬಳಗದವರು ಎನ್ನುವುದು ನಮ್ಮ ಹೆಮ್ಮೆ.
Nice article sir.
ಚೆಂದ ಮೂಡಿದೆ ಲೇಖನ…ಅಭಿನಂದನೆಗಳು
ಪ್ರಸನ್ನ ಆಡುವಳ್ಳಿಯವರಿಗೆ ಅಭಿನಂದನೆಗಳು.