ಕಲ್ಲಂಗಡಿ ಹಣ್ಣು!: ಎಸ್.ಜಿ.ಶಿವಶಂಕರ್

Shivashankar SG

ಅನಂತಯ್ಯ ಬಾಗಿಲು ತೆಗೆದು ಮನೆಯೊಳಗೆ ಕಾಲಿಟ್ಟಾಗ ಮೌನ ಸ್ವಾಗತಿಸಿತು. ಅನಂತಯ್ಯನವರಿಗೆ ಹಿತವೆನಿಸಲಿಲ್ಲ. ಒಂದು ತಿಂಗಳು ಜನರಿಂದ ಗಿಜಿಗುಟ್ಟುತ್ತಿದ್ದ ಮನೆ ಖಾಲಿಖಾಲಿಯಾಗಿ ಕಂಡಿತು. ಇಪ್ಪತ್ತೈದು ವರ್ಷಗಳಿಂದ ವಾಸಿಸುತ್ತಿದ್ದ ಮನೆಯನ್ನು ಮೊದಲ ಬಾರಿಗೆ ನೋಡುತ್ತಿರುವವರಂತೆ ಅನಂತಯ್ಯ ಮನೆಯನ್ನು ನೋಡಿದರು. ಮನೆಯಲ್ಲಿನ ವಸ್ತುಗಳನ್ನು ನೋಡುವಾಗ ಅದನ್ನು ಉಪಯೋಗಿಸಿದವರ ಚಿತ್ರ ಮನಸ್ಸಿಗೆ ಬರುತ್ತಿತ್ತು.

ಅನಂತಯ್ಯ  ಡ್ರಾಯಿಂಗ್ ರೂಮಿಗೆ ಬಂದರು. ಅಸ್ಥವ್ಯಸ್ಥವಾಗಿದ್ದ ದಿವಾನದ ಹಾಸುಗಳು ಕಂಡವು. ಮೊಮ್ಮಕ್ಕಳು ಅದರ ಮೇಲೆ ಹತ್ತಿ, ಇಳಿದು, ಕುಣಿದಾಡಿದ್ದು ಕಣ್ಮುಂದೆ ಬಂತು. ವರಾಂಡಕ್ಕೆ ಬಂದರೆ, ಅದರ ತುಂಬ ತುಂಬಿದ್ದ ಷೂಸ್ ಮತ್ತು ಚಪ್ಪಲಿಗಳ ರಾಶಿ ಕಾಣೆಯಾಗಿತ್ತು. ಅನಂತಯ್ಯ ಇಡೀ ಮನೆಯನ್ನು ಒಮ್ಮೆ ಅವಲೋಕಿಸಿದರು. ಮಲಗುವ ಕೋಣೆಗಳನ್ನು ಹೊಕ್ಕು ನೋಡಿದರು. ಎಲ್ಲೆಡೆ ನೀರವತೆ. ಮನೆಯ ಮುಂದಿನ ರಸ್ತೆಯಲ್ಲಿ ಹರಿದಾಡುವ ವಾಹನಗಳ ಶಬ್ದವನ್ನು ಬಿಟ್ಟರೆ ಮನೆ ಬಿಕೋ ಎನ್ನುತ್ತಿತ್ತು.

ಹಿಂದಿನ ದಿನ ಮಧ್ಯ ರಾತ್ರಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಅವರ ಸಂಸಾರದ ಜಾತ್ರೆ ಸೇರಿತ್ತು. ಮಗ-ಸೊಸೆ, ಅವರ ಮಕ್ಕಳು, ಮಗಳು-ಅಳಿಯ, ಅವರ ಮಕ್ಕಳು, ಸೊಸೆಯ ತಂದೆ-ತಾಯಿ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಅದೇ ರೀತಿ ಅಳಿಯನ ಬಂಧು-ಬಳಗ ಎಲ್ಲಾ ಸೇರಿ ಸುಮಾರು ಐವತ್ತು ಜನರಿದ್ದರು.

ಕಳೆದ ಒಂದು ತಿಂಗಳು ಕಾಲ ಹೇಗೆ ಕಳೆಯಿತೆಂಬುದು ಅನಂತಯ್ಯನವರ ಅರಿವಿಗೇ ಬಂದಿರಲಿಲ್ಲ! ಅಷ್ಟು ವೇಗವಾಗಿ ಕಾಲ ಕಳೆದಿತ್ತು. ಒಂದು ತಿಂಗಳು ಒಂದೇ ದಿನದಂತೆ ಕಳೆದಿತ್ತು. ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು, ಅವರನ್ನು ಭೇಟಿ ಮಾಡಲು ಬಂದ ಬಂಧುಗಳು, ಎಲ್ಲಾ ಸೇರಿ ಸುತ್ತಿದ ಜಾಗಗಳು, ಪಿಕ್-ನಿಕ್ಕುಗಳು, ಮದುವೆಗಳು…ಓಹ್! ಒಂದೇ..ಎರಡೇ..? ಒಂದೇ ತಿಂಗಳಲ್ಲಿ ಅದೆಷ್ಟು ಕಡೆ ತಿರುಗಿದ್ದು..? ಅದೆಷ್ಟು ದೂರ ಪ್ರಯಾಣಿಸಿದ್ದು…? ಈಗದೆಲ್ಲಾ ನೆನಪಷ್ಟೇ! ಈಗ ಯಾರೂ ಇಲ್ಲ! ಎಲ್ಲಾ ಹಾರಿದ್ದರು-ವಿದೇಶಗಳಿಗೆ! ಇನ್ನವರು ಬರುವುದು ಎರಡೋ ಇಲ್ಲಾ ಮೂರು ವರ್ಷಗಳ ನಂತರವೋ..?
ಅನ್ಯಮನಸ್ಕರಾಗಿ ಅನಂತಯ್ಯ ಅಡಿಗೆ ಮನೆಗೆ ಬಂದರು. ಹೋಗುವ ಗಡಿಬಿಡಿಯಲ್ಲಿ ಅಸ್ಥ್ಯವ್ಯಸ್ಥವಾಗಿ ಹರಡಿಕೊಂಡಿದ್ದ ಪಾತ್ರೆಗಳು ಮತ್ತದೇ ಕತೆಯನ್ನು ನೆನೆಪಿಸಿದವು. ಸಿಂಕ್ ತುಂಬಿದ್ದ ತಟ್ಟೆ-ಲೋಟಗಳು ಹೊರಡುವಾಗಿನ ಗಡಿಬಿಡಿ ಸ್ಥಿತಿಯನ್ನು ಸಾರುತ್ತಿದ್ದವು. ಇನ್ನು ನಾಳೆ ಮುನಿಯಮ್ಮ ಬರುವತನಕ ಈ ಪಾತ್ರೆಗಳಿಗೆ ಮುಕ್ತಿ ದೊರೆಯುವುದಿಲ್ಲ ಎಂದುಕೊಂಡು ಈಚೆ ಬಂದರು.

ಡೈನಿಂಗ್ ಹಾಲಿನಲ್ಲಿ ಟೇಬಲ್ಲಿನ ಮೇಲೆ ಹರಡಿದ್ದ ಉಪ್ಪಿನ ಕಾಯಿ ಬಾಟಲುಗಳು, ಟೊಮ್ಯಾಟೋ ಸಾಸಿನ ಶೀಷೆ, ಬಾಯಿ ತೆರೆದಿದ್ದ ಉಪ್ಪಿನ ಜಾಡಿ, ಹೆಚ್ಚಿಟ್ಟ್ಟ ಮಾವಿನ ಕಾಯಿ ಹೋಳುಗಳು-ಎಲ್ಲಾ ಹದಿನೆಂಟು ಗಂಟೆಗಳ ಹಿಂದೆ ವಿದೇಶಕ್ಕೆ ಹಾರಿದ ಹಕ್ಕಿಗಳ ಕತೆಯನ್ನು ಹೇಳುತ್ತಿದ್ದವು.

ಕಿಚನ್ನಿನ ಸಿಂಕಿನಲ್ಲಿದ್ದ ಪಾತ್ರೆಗಳನ್ನು ಕಂಡಾಗಲೇ ಅನಂತಯ್ಯನವರಿಗೆ ಕಸಿವಿಸಿಯಾಗಿತ್ತು. ಹಾಗೆ ಪಾತ್ರೆಗಳನ್ನು ಗುಡ್ಡೆ ಹಾಕಿಡುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಪತ್ನಿಗೂ ಅವರಿಗೂ ಅಗಾಗ್ಗೆ ಈ ವಿಷಯಕ್ಕೇ ಶೀತಲ ಸಮರವೂ ನಡೆಯುತ್ತಿತ್ತು! ಸಿಂಕಿನಲ್ಲ್ಲಿರುವ ಪಾತ್ರೆಗಳನ್ನು ನೋಡಿದಾಗಲೇ ಅವನ್ನು ತೊಳೆದು ಸ್ವಚ್ಛಮಾಬಿಡಲೆ ಎನಿಸಿತು!್ತ ಆದರೆ ಪಾತ್ರೆಗಳ ಸಂಖ್ಯೆ ಹೆಚ್ಚಿಗೆ ಇದ್ದುದರಿಂದ ಅದು ತಮ್ಮ ಕೈಲಾಗದ ಕೆಲಸ ಎಂದು ಸುಮ್ಮನಾಗಿದ್ದರು. ಈಗ ಕನಿಷ್ಟ ಡೈನಿಂಗ್ ಟೇಬಲ್ಲಿನ ಮೇಲಿರುವ ವಸ್ತುಗಳನ್ನಾದರೂ ಎತ್ತಿಡೋಣ ಎನ್ನಿಸಿತು. ಅದಕ್ಕೂ ಮುಂಚೆ ರೂಮಿಗೆ ಹೋಗಿ ಬಟ್ಟೆ ಬದಲಿಸಿ ಬರೋಣ ಎನಿಸಿ ತಮ್ಮ ರೂಮಿಗೆ ನಡೆದರು. 
ಪ್ಯಾಂಟು, ಷರ್ಟು ಬದಲಿಸಿ ಪಂಚೆ, ಬನಿಯನ್ನಿನಲ್ಲಿ ಮತ್ತೆ ಡೈನಿಂಗ್ ಹಾಲಿಗೆ ಬಂದು ಉಪ್ಪಿನಕಾಯಿ ಮತ್ತು ಟೊಮ್ಯಾಟೋ ಸಾಸ್ ಬಾಟಲಿಗಳನ್ನು ರೇಫ್ರಿಜಿರೇಟರಿನಲ್ಲಿಡಲೆಂದು ಫ್ರಿಜ್ಜಿನ ಬಾಗಿಲು ತೆರೆದರು. ಫ್ರಿಜ್ಜಿನ ಕೆಳಗಿನ ಪೂರಾ ಜಾಗವನ್ನು ಒಂದು ದೊಡ್ಡ ಕಲ್ಲಂಗಡಿ ಹಣ್ಣು ಆಕ್ರಮಿಸಿರುವುದು ಕಂಡು ಕಸಿವಿಸಿಯಾಯಿತು. ಏಕೆಂದರೆ ಆ ಗಾತ್ರದ ಕಲ್ಲಂಗಡಿ ಹಣ್ಣು ಅವರೇ ತಂದಿದ್ದು ಮತ್ತು ಫ್ರಿಜ್ಜಿನಲ್ಲಿಟ್ಟಿದವರೂ ಅವರೇ!
ಮಕ್ಕಳು ಮತ್ತು ಮೊಮ್ಮಕ್ಕಳು ತಿನ್ನಲೆಂದು ಎರಡು ದಿನಗಳ ಹಿಂದಷ್ಟೆ ಆ ಹಣ್ಣನ್ನು ಆನಂತಯ್ಯ  ತಂದಿದ್ದರು. ಆದರೆ ಅದರ ಬಗೆಗೆ ಯಾರಿಗೂ ಗಮನವಾಗಲೀ ಆಸಕ್ತಿಯಾಗಲೀ ಮೂಡಿರಲಿಲ್ಲ. ಕಾರಣ ಆಗಲೇ ಎರಡು-ಮೂರು ದಿನಗಳ ಅಂತರದಲ್ಲಿ ಮೂರ್ನಾಲ್ಕು ಸಲ ಮನೆಮಂದಿಯೆಲ್ಲಾ ಕಲ್ಲಂಗಡಿ ಹಣ್ಣನ್ನು ತಿಂದಿದ್ದರು. ವಿದೇಶಕ್ಕೆ ಹೋಗುವ ಮುನ್ನ ಕೊನೆಯ ಸಲ ತಿನ್ನಲಿ ಎಂದು ಅನಂತಯ್ಯ ತಂದಿದ್ದರು. ಎಲ್ಲರ ಆಸಕ್ತಿ ಬತ್ತಿದ್ದರಿಂದ ಅದರೆ ಬಗೆಗೆ ತಾವೂ ಕಾಳಜಿವಹಿಸಲಿಲ್ಲ. ಅದನ್ನು ತಾವೇ ಕೊಯ್ದು ಎಲ್ಲರಿಗೂ ಹಂಚಬೇಕಿತ್ತು. ಏಕೋ ಕೊನೆಯ ನಿಮಿಷದಲ್ಲಿ ಸುಮ್ಮನಾಗಿ ಫ್ರಿಜ್ಜಿನಲ್ಲಿಟ್ಟುಬಿಟ್ಟಿದ್ದರು. 

ಹಣ್ಣಿನ ಗಾತ್ರ ದೊಡ್ಡದ್ದೇ! ಮನೆಯಲ್ಲಿ ಹೆಚ್ಚು ಜನರು ಇದ್ದುದರಿಂದ ಎಲ್ಲರಿಗೂ ಒದಗಲಿ ಎಂದೇ ಭಾರೀ ಗಾತ್ರದ್ದು ಆರಿಸಿ ತಂದಿದ್ದರು ಅನಂತಯ್ಯ. ಅದಕ್ಕೆ ಕೊಟ್ಟಿದ್ದು ಬರೋಬ್ಬರಿ ಇನ್ನೂರೈವತ್ತು ರೂಪಾಯಿಗಳು.
‘ಈ ಸೈಜಿನ ಹಣ್ಣು ಈ ರೇಟಿಗೆ ನಿಮಗೆ ಎಲ್ಲೂ ಸಿಕ್ಕೊಲ್ಲ ಸಾರ್’ ಕಲ್ಲಂಗಡಿ ಹಣ್ಣಿನ ವ್ಯಾಪಾರಿ ಹೇಳಿದ್ದ.

ಇನ್ನು ಮನೆಯಲ್ಲಿ ಉಳಿಯುವವರು ತಾನು ಮತ್ತು ತಮ್ಮ ಪತ್ನಿ ಲಕ್ಷ್ಮಿ ಇಬ್ಬರೇ! ಲಕ್ಷ್ಮಿ ಬರುವುದು ಇನ್ನು ನಾಲ್ಕು ದಿನಗಳ ನಂತರವೇ. ಅಣ್ಣ ಒತ್ತಾಯ ಮಾಡಿದ ಎಂದು ಬೆಂಗಳೂರಲ್ಲೇ ಉಳಿದಿದ್ದಳು. ಜೊತೆಗೆ ನಾಡಿದ್ದು ಒಂದು ಮದುವೆ ಬೇರೆ. ಅದೆಲ್ಲಾ ಮುಗಿದು ಅವಳು ಬರುವುದು ಇನ್ನೂ ಕನಿಷ್ಟ ಎಂದರೂ ನಾಲ್ಕು ದಿನಗಳು. ಅಲ್ಲಿಯವರೆಗೆ ಈ ಹಣ್ಣ್ಣು ಫ್ರಿಜ್ಜಿನಲ್ಲಿರಬೇಕೆ..?  ಮಕ್ಕಳು ಮತ್ತು ಮೊಮ್ಮಕ್ಕಳನ್ನು ವಿದೇಶಕ್ಕೆ ಕಳಿಸಿಬಂದ ಅನಂತಯ್ಯನವರ ಚಿಂತೆಗೆ ಕಲ್ಲಂಗಡಿ ಹಣ್ಣು ವಸ್ತುವಾಗಿಬಿಟ್ಟಿತು! ಆ ಭಾರೀ ಗಾತ್ರದ ಕಲ್ಲಂಗಡಿ ಹಣ್ಣು ಅವರ ಮನಸ್ಸನ್ನು ಪೂರಾ ಆಕ್ರಮಿಸಿಬಿಟ್ಟಿತು.

ಹೆಂಡತಿ ಬರುವವರೆಗೂ ಕಲ್ಲಂಗಡಿ ಹಣ್ಣು ಅಲ್ಲೇ ಇರಲಿ ಎನಿಸಿ ಫ್ರಿಜ್ಜಿನ ಬಾಗಿಲು ಹಾಕಿದರು. ತಮ್ಮ ಕೈಯಲ್ಲಿ ಉಪ್ಪಿನಕಾಯಿ ಮತ್ತು ಸಾಸ್ ಬಾಟಲ್ಲುಗಳು ಉಳಿದಿರುವುದು ಗೋಚರಿಸಿತು. ಅದನ್ನು ಒಳಗಿಡಲೆಂದೇ ಫ್ರಿಜ್ ಬಾಗಿಲು ತೆರೆದದ್ದು, ಅಲ್ಲಿ ಕಲ್ಲಂಗಡಿ ಹಣ್ಣು ಕಂಡಿದ್ದರಿಂದ ಯೋಚನೆ ಬೇರೆ ದಾರಿ ಹಿಡಿಯಿತು ಎಂದು ಅನಂತಯ್ಯನವರಿಗೆ ಅರಿವಾಯಿತು. ಫ್ರಿಜ್ಜಿನಲ್ಲಿ ಜಾಗವಿಲ್ಲದಿರುವುದರಿಂದ ಬೇರೆ ದಾರಿಯಿಲ್ಲದೆ ಡೈನಿಂಗ್ ಟೇಬಲ್ ಮೇಲಿದ್ದ ವಸ್ತುಗಳನ್ನು ಅಲ್ಲಿಯೇ ಬಿಡಬೇಕಾಯಿತು
.
ಲಕ್ಷ್ಮಿ ಬಂದಮೇಲೆ ಈ ಕಲ್ಲಂಗಡಿ ಹಣ್ಣು ಹೆಚ್ಚಿಬಿಡಬೇಕು ಎಂದುಕೊಂಡರು. ಹಣ್ಣಿನ ಗಾತ್ರ ನೆನಸಿಕೊಂಡು ಇಬ್ಬರೂ ಈ ಹಣ್ಣನ್ನು ತಿನ್ನಲಾದೀತೆ ಎಂಬ ಅನುಮಾನ ಶುರುವಾಯಿತು. ಖಂಡಿತಾ ಅದನ್ನು ಇಬ್ಬರು ತಿನ್ನಲಾಗುವುದಿಲ್ಲ. ಆದರೆ ಇಡೀ ಮನೆಯಲ್ಲಿ ಇರುವವರು ಇಬ್ಬರೇ..? ಮಡದಿಯ ಡಯಾಬಿಟೀಸು ನೆನೆಪಾಯಿತು. ಅದರೆ ಜೊತೆಯಲ್ಲೇ ಕಲ್ಲಂಗಡಿ ಹಣ್ಣಿನ ವ್ಯಾಪಾರಿಯ ಮಾತು ಕೂಡ ನೆನಪಾಯಿತು.
‘ನೀವು ಕೇಳಿದಂಗೇ ಐತೆ ಸಾರ್ – ಪೂರಾ ಹಣ್ಣಾಗೈತೆ. ಇವತ್ತೇ ಹಚ್ಕೊಂಡು ತಿಂದ್ಬಿಡಿ. ತಡ ಮಾಡಿದ್ರೆ ಹಣ್ಣು ರುಚಿ ಇರಾಕಿಲ್ಲ! ಆಮೇಲೆ ನನ್ನ ಬೈಕೋಬೇಡಿ’ ಎಂದಿದ್ದ.
ಅಂದೇ ತಿನ್ನಲೆಂದೇ ಅಲ್ಲವೆ ತಾವೇ ಚೆನ್ನಾಗಿ ಹಣ್ಣಾಗಿರುವುದನ್ನು ಹುಡುಕಿ ಕೊಡು ಎಂದಿದ್ದು. ತಾನೇ ಬಯಸಿ, ಆರಿಸಿ ತಂದ ಹಣ್ಣು ಇವತ್ತು ಪೇಚಿನಲ್ಲಿ ಸಿಕ್ಕಿಸಿತಲ್ಲ ಎನಿಸಿತು ಅನಂತಯ್ಯನವರಿಗೆ. ಇದೆಂತಾ ಪರಿಸ್ಥಿತಿ..? ಹಣ್ಣು ಕೊಯ್ಯುವಂತಿಲ್ಲ! ಕೊಯ್ಯದೆ ಇಡುವಂತಿಲ್ಲ!!

ಹಣ್ಣನ್ನು ಕೊಯ್ದರೆ ಅದ್ರ ಹೋಳುಗಳು ಎಷ್ಟಾಗಬಹುದು ಎಂದು ಊಹಿಸಿದರು ಅನಂತಯ್ಯ. ಒಂದು ವೇಳೆ ಕೊಯ್ದು, ಹೋಳುಗಳನ್ನು ಪಾತ್ರೆಯಲ್ಲಿ ತುಂಬಿ ಫ್ರಿಜ್ಜಿನಲ್ಲಿ ಇಟ್ಟರೆ  ಎರಡು ಮೂರು ದಿನಗಳವರೆಗೆ ತಿನ್ನಬಹುದು ಎನ್ನಿಸಿತು. ಹಣ್ಣಿನ ಹೋಳುಗಳನ್ನು ತುಂಬಿಡುವಷ್ಟು ದೊಡ್ಡ ಪಾತ್ರೆಯಿದೆಯೆ..ಎಂದು ಅಡಿಗೆ ಮನೆಗೆ ಹೋಗಿ ಅಲ್ಲಿರುವ ಪಾತ್ರೆಗಳ ಗಾತ್ರಗಳನ್ನೂ ಹೋಳುಗಳ ಗಾತ್ರವನ್ನೂ ಅಂದಾಜು ಮಾಡಿದರು. ಅಷ್ಟು ದೊಡ್ಡ ಪಾತ್ರೆ ಕಾಣಲಿಲ್ಲ. ಹಣ್ಣು ಹೆಚ್ಚಿ ಫ್ರಿಜ್ಜಿನಲ್ಲಿಟ್ಟರೂ ಅದು ನೀರು ಬಿಟ್ಟುಕೊಂಡು ಸಪ್ಪೆಯಾಗುತ್ತದೆ ಎಂದು ನೆನೆಪಾಯಿತು. ಹಿಂದೆ ಒಂದೆರಡು ಸಲ ಹೀಗಾಗದದ್ದು ಅವರ ನೆನಪಿಗೆ ಬಂತು. 

ಹೆಚ್ಚಿಡುವುದು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬಂದರು ಅನಂತಯ್ಯ. ಇಷ್ಟು ದೊಡ್ಡ ಹಣ್ಣನ್ನು ತಾನು ತರಲೇಬಾರದಿತ್ತು! ಆದರೆ ಎರಡು ದಿನದ ಹಿಂದಿನ ಪರಿಸ್ಥಿತಿಯೇ ಬೇರೆ ಇತ್ತಲ್ಲ..? ಮನೆ ತುಂಬ ಜನ! ನಿಜಕ್ಕೂ ಅವರೆಲ್ಲಾ ಈ ಹಣ್ಣು ತಿಂದಿದ್ದರೆ ಕೆಲವರಿಗೆ ಸಿಕ್ಕದಿರುವ ಸಾಧ್ಯತೆಯೂ ಇತ್ತು! ಕೊನೆಕೊನೆಯಲ್ಲಿ ತಿನ್ನಲೆಂದು ತಂದ ತಿನಿಸುಗಳೇ ಹೆಚ್ಚಾಗಿ ಅಲ್ಲವೇ ಕಲ್ಲಂಗಡಿ ಹಣ್ಣಿನ ಬಗೆಗೆ ಯಾರಿಗೂ ಗಮನ ಬಂದಿರಲಿಲ್ಲ. ಇದಕ್ಕೆ ಇನ್ನೂರೈವತ್ತು ತೆತ್ತೆನಲ್ಲ..? ಇದನ್ನು ಹೇಗೆ ಉಪಯೋಗಿಸಬೇಕೆನ್ನುವುದೇ ಸಮಸ್ಯೆಯಾಗಿಬಿಟ್ಟಿತಲ್ಲ..? ಅನಂತಯ್ಯ ಪೇಚಾಡಿದರು. ಕಲ್ಲಂಗಡಿ ಹಣ್ಣಿನ ಯೋಚನೆ ಅವರನ್ನು ಕಾಡಿಸಿತು.
ಲಕ್ಷ್ಮಿ ಇದ್ದಿದ್ದರೆ ಇದಕ್ಕೇನಾದರೂ ಪರ್ಯಾಯ ಸೂಚಿಸುತ್ತಿದ್ದಳು. ಏನೂ ಸೂಚಿಸದಿದ್ದರೂ ಹಣ್ಣು ತಿನ್ನಲು ಇಬ್ಬರಾಗುತ್ತಿದ್ದೆವು. ಈಗ ಒಬ್ಬನೇ ಆಗಿಬಿಟ್ಟೆನಲ್ಲ ಎನಿಸಿತು.

ಗೋಡೆಯ ಮೇಲಿನ ಗಡಿಯಾರ ಒಂದೂವರೆಯನ್ನು ಸೂಚಿಸಿತು. ಸಮಯದ ಅರಿವು ಬಂದೊಡನೆಯೇ ಹಸಿವು ಕಾನಿಸಿಕೊಂಡಿತು. ಎಲಾ..? ಈ ಸಮಯಕ್ಕೂ ಹಸಿವಿಗೂ ಸಂಬಂಧವಿದೆಯೆ ಎಂದು ಅನಂತಯ್ಯನವರಿಗೆ ಅಚ್ಚರಿಯಾಯಿತು. ಜೊತೆಗೆ ಈ ಹಸಿವು ಮಾನಸಿಕವೇ ಇಲ್ಲಾ ದೈಹಿಕವಾದುದ್ದೇ ಎಂದು ಜಿಜ್ಞಾಸೆ ಕಾಡಿತು.  ಗಡಿಯಾರ ನೋಡುವವರೆಗೂ ಹಸಿವಿನ ಸುಳಿವೇ ಇಲ್ಲದಿದ್ದು, ಸಮಯದ ಅರಿವಾಗುತ್ತಲೇ ಕಾಣಿಸಿದ್ದೇಕೆ ಎಂದು ವಿಸ್ಮಯಪಟ್ಟರು!

‘ಹೋಟೆಲಿನಲ್ಲಿ ತಿಂದು ಆರೋಗ್ಯ ಕೆಡಿಸ್ಕೋಬೇಡಿ. ಕುಕ್ಕರಿನಲ್ಲಿ ಒಂದಿಷ್ಟು ಅನ್ನ ಮಾಡ್ಕೊಳ್ಳಿ. ಫ್ರಿಜ್ಜಿನಲ್ಲಿ ಎರಡು ಮೂರು ದಿನಕ್ಕಾಗೋ ಅಷ್ಟು ಸಾರಿದೆ. ಬಿಸಿ ಮಾಡ್ಕೊಳ್ಳಿ. ನಾಲ್ಕೈದು ತರಾ ಚಟ್ನಿ, ಗೊಜ್ಜು ಮಾಡಿಟ್ಟಿದ್ದೀನಿ. ಸಾರು ಬೇಜಾರಾದ್ರೆ ಅವನ್ನು ಉಪಯೋಗಿಸಿ. ಮೊಸರು, ಮಜ್ಜಿಗೆ-ಎಲ್ಲಾ ಇದೆ’ ವಾಪಸ್ಸು ಮೈಸೂರಿಗೆ ಬರುವ ಮುನ್ನ ಹೆಂಡತಿ ಹೇಳಿದ್ದು ನೆನಪಾಯಿತು.
ಅನ್ನ ಮಾಡಿದರೆ ಅದು ತಣ್ಣಗಾಗಲು ಕನಿಷ್ಟ ಅರ್ಧ ಗಂಟೆಯಾದರೂ ಬೇಕು. ಅಲ್ಲಿಯನಕ ತಾನು ಹಸಿವು ತಡೆಯಬಲ್ಲೆನೆ? ಯೋಚಿಸಿದರು ಅನಂತಯ್ಯ. ಅಕ್ಕಿ ತೊಳೆದು, ಕುಕ್ಕರಿನಲ್ಲಿಟ್ಟು, ಅದು ಬೆಂದಾಗ ಪ್ರೆಷರ್ ರಿಲೀಸ್ ಆದ ಶಬ್ದವನು ಕಲ್ಪಿಸಿಕೊಂಡರು. ಹಾಗೆಯೇ ಸಾರನ್ನು ಕಾಯಿಸಿಕೊಂಡಿದ್ದು, ಮೊಸರು ಈಚೆಗೆ ತೆಗೆದು ಊಟ ಮಾಡಿದ್ದು ಕಲ್ಪನೆಯಲ್ಲಿ ಮೂಡಿದುವು. ಊಟದ ನಂತರದ ಕ್ರಿಯೆ ಕಣ್ಮುಂದೆ ಬಂದಾಗ ಕಸಿವಿಸಿಯಾಯಿತು. ಈಗಾಗಲೇ ಕಿಚನ್ನಿನ ಸಿಂಕಿನಲ್ಲಿ ತುಂಬಿರುವ ಪಾತ್ರೆಗಳ ಜೊತೆಗೆ ತಾವು ಊಟ ಮಾಡಿದ ತಟ್ಟೆ, ಅನ್ನ ಬೇಯಿಸಿಕೊಂಡ ಡಬರಿ, ಕುಕ್ಕರ್ ಎಲ್ಲವೂ ಸೇರುವುದನ್ನು ಅವರು ಇಷ್ಟಪಡಲಿಲ್ಲ. ಅದಕ್ಕಿಂತಾ ಹೋಟೆಲಿನಲ್ಲಿ ಊಟ ಮಾಡಿ ಬರುವುದು ಲೇಸೆಂದು ಮನೆಗೆ ಬೀಗ ಹಾಕಿ ರಸ್ತೆಗಿಳಿದರು.

ಹೋಟೆಲಿನಲ್ಲಿ ಊಟ ಮಾಡುವಾಗ ಮತ್ತೆ ಅದೇ ನೆನಪು – ಕಲ್ಲಂಗಡಿ ಹಣ್ಣಿನದು!! ಛೆ…ಸುಮ್ಮನೆ ಆತುರಬಿದ್ದು ಇನ್ನೂರೈವತ್ತು ರೂಪಾಯಿ ವ್ಯರ್ಥ ಮಾಡಿದೆನಲ್ಲ ? ಎಂಬ ಪೇಚಾಟ ಬೆನ್ನು ಬಿಡಲಿಲ್ಲ. ಬಹುಶಃ ಸರ್ವಿಸಿನಲ್ಲಿದ್ದಾಗ ಹೀಗಾಗಿದ್ದರೆ ತಾನು ಯೋಚಿಸುತ್ತಿರಲಿಲ್ಲವೇನೋ..? ಆದರೆ ಈಗ ಪೆನ್ಷನ್ ಹಣದಲ್ಲೇ ಎಲ್ಲವನ್ನೂ ನಿರ್ವಹಿಸಬೇಕಾಗಿರುವಾಗ ಕಲ್ಲಂಗಡಿ ಹಣ್ಣಿಗೆ ವ್ಯರ್ಥವಾಗಿ ತೆತ್ತ ಇನ್ನೂರೈವತ್ತು ರೂಪಾಯಿ ದುಭಾರಿ ವೆಚ್ಚ ಎನಿಸಿತು. ಆದರೆ ತಂದಿದ್ದ ಉದ್ದೇಶ ಈಡೇರಿದ್ದರೆ ಅದು ಸಾರ್ಥಕವಾಗುತ್ತಿತ್ತು ಎನಿಸಿ ನಿಟ್ಟುಸಿರಿಟ್ಟರು.

ಊಟದ ಬಿಲ್ಲು ಬಂದಾಗ ಅನಂತಯ್ಯ ಮೆಟ್ಟಿಬಿದ್ದರು! ಎಲಾ ಕಳೆದ ತಿಂಗಳು ಊಟಕ್ಕೆ ನಲವತ್ತು ರೂಪಾಯಿ ಇದ್ದುದು ಈಗ ಅರವತ್ತು ಆಗಿಬಿಟ್ಟಿದೆಯಲ್ಲಾ..? ಅದೂ ಇಂತಾ ಸಾಮಾನ್ಯ ಹೋಟೆಲಿನ, ಸಾಮಾನ್ಯ ಊಟವೇ ಅರವತ್ತಾದರೆ ಇನ್ನು ಸ್ಟಾರ್ ಹೋಟೆಲುಗಳ ರೇಟು ಹೇಗಿದ್ದಿರಬಹುದು..? ಅದರ ಕಲ್ಪನೆ ಅವರಲ್ಲಿ ಗಾಬರಿ ಹುಟ್ಟಿಸಿತು. 

“ಹೋದ ತಿಂಗಳು ಊಟಕ್ಕೆ ನಲವತ್ತು ರೂಪಾಯಿತ್ತು. ಒಂದೇ ಸಲಕ್ಕೆ ಇಪ್ಪತ್ತು ರೂಪಾಯಿ ಏರಿಸಿಬಿಟ್ಟಿದ್ದೀರಲ್ಲ..?” ಗಲ್ಲಾದಲ್ಲಿ ಕೂತಿದ್ದ ಹೋಟೆಲ್ ಮಾಲೀಕನಿಗೆ ಹೇಳಿದರು ಅನಂತಯ್ಯ.
“ಏನ್ಮಾಡೋದು ಸಾರ್..? ಅಕ್ಕಿ ಹೋದ ತಿಂಗಳು ಮೂವತ್ತೈದು ಇದ್ದುದು ಒಂದೇ ತಿಂಗಳಲ್ಲಿ ಅರವತ್ತಾಗಿದೆ. ಎಣ್ಣೆ ಅರವತ್ತರಿಂದ ತೊಂಬತ್ತಕ್ಕೇರಿದೆ. ನೌಕರರ ಸಂಬಳ, ಕರೆಂಟು, ತರಕಾರಿ, ನೀರಿನ ದರ ಎಲ್ಲಾ ಎದ್ವಾತದ್ವಾ ಏರಿವೆ! ನಾವೂ ಇದರಲ್ಲಿ ಜೀವನ ಮಾಡ್ಬೇಕಲ್ಲ ಸಾರ್..?” ತಮ್ಮ ಬವಣೆ ಹೇಳಿಕೊಂಡ ಹೋಟೆಲ್ ಮಾಲೀಕ.

“ಆಚೆ ಇರೋ ಕಾರು ನಿಮ್ಮದೆ..? ಹೊಸದಿರೋ ಹಾಗಿದೆ..? ಎಷ್ಟು ಬಿತ್ತು ಆನ್ ರೋಡು..?” ಅನಂತಯ್ಯ ಆಚೆ ನಿಂತಿದ್ದ ಹೊಸ ಸ್ಯಾಂಟ್ರೋ ಕಾರು ನೋಡಿ ಕೇಳಿದರು.
“ಹೂ ಸಾರ್, ಮೊನ್ನೆ ತಗೊಂಡಿದ್ದು. ಅನ್ ರೋಡು ಆರು ಲಕ್ಷಕ್ಕೆ ಬಂದುಬಿಡ್ತು’
“ಚೆನ್ನಾಗಿದೆ” ಎನ್ನುತ್ತಾ ಅನಂತಯ್ಯ ಹೋಟೆಲಿಂದೀಚೆ ಬರುವಾಗ ತಮಗೆ ತಾವೇ ಹೇಳಿಕೊಂಡರು. ‘ಹೋಟೆಲಿನ ತಿನಿಸುಗಳ ಬೆಲೆಯೇರಿಕೆಯಲ್ಲಿ ಈ ಕಾರಿನ ಬೆಲೆಯೂ ಸೇರಿರಬೇಕು’. ಎಂಬ ತಮ್ಮ ಯೋಚನೆಗೆ ನಗುವೂ ಬಂತು.
ಮನೆಗೆ ಬಂದ ಅನಂತಯ್ಯ ಮತ್ತೆ ಫ್ರಿಜ್ಜಿನ ಬಾಗಿಲು ತೆರೆದು ಕಲ್ಲಂಗಡಿ ಹಣ್ಣನ್ನು ನೋಡಿದರು. ಅದನ್ನು ನೋಡಿದರೆ ಅದರ ಸಮರ್ಪಕ ಉಪಯೋಗಕ್ಕೆ ಏನಾದರೂ ಉಪಾಯ ಹೊಳೆಯಬಹುದೇನೋ ಎಂದು. ಆದರೆ ಅಂತ ಚಮತ್ಕಾರವೇನೂ ನಡೆಯಲಿಲ್ಲ. ನಿರಾಶೆಯಿಂದ ಅನಂತಯ್ಯ ಫ್ರಿಜ್ಜಿನ ಬಾಗಿಲು ಮುಚ್ಚಿದರು. 

ಬಟ್ಟೆ ಬದಲಾಯಿಸಿ ಡ್ರಾಯಿಂಗ್ ರೂಮಿಗೆ ಬಂದು ಅನಂತಯ್ಯ ಟಿವಿಯನ್ನು ಆನ್ ಮಾಡಿದರು. ಏನು ನೋಡಬೇಕೆಂಬ ನಿರ್ದಿಷ್ಟ ಗುರಿ ಅವರಿಗಿರಲಿಲ್ಲ. ಹಾಕಿದ ತಕ್ಷಣ ಇಂಗ್ಲಿಷ್ ಚಾನಲ್ಲು ಪರದೆಯ ಮೇಲೆ ಕಾಣಿಸಿತು. ಮನೆಯಲ್ಲಿ ವಿದೇಶದಲ್ಲಿ ಹುಟ್ಟಿ ಬೆಳೆಯುತ್ತಿರುವ ಮೊಮ್ಮಕ್ಕಳಿಗೆ ಇವೇ ಚಾನಲ್ಲುಗಳನ್ನು ಬೇಕಾಗಿದ್ದುವು. ಈಗ ದೇಶೀ ಚಾನಲ್ಲುಗಳನ್ನು ನೋಡೋಣ ಎನ್ನಿಸಿತು. ನ್ಯೂಸ್ ಕೇಳೋಣ ಎಂದು ಚಾನಲ್ ಬಟನ್ನು ಒತ್ತತೊಡಗಿದರು. ಒಂದೊಂದೇ ಚಾನಲ್ಲನ್ನು ಕೆಲವು ಸೆಕೆಂಡುಗಳಷ್ಟೇ ನೋಡಿ ಮುಂದಿನ ಚಾನಲ್ಲಿಗೆ ಹೋಗುತ್ತಿದ್ದರು. ಮೆಗಾ ಸೀರಿಯಲ್ಲುಗಳು, ಸಿನಿಮಾಗಳು, ಪ್ರವಾಸಿ ಚಾನಲ್ಲುಗಳು, ಜಿಹ್ವೆಯನ್ನು ತಣಿಸುವ ತಿನಿಸುಗಳನ್ನು ತೋರಿಸುವ ಚಾನಲ್ಲುಗಳು, ಕೊನೆಗೆ ನ್ಯೂಸ್ ಚಾನಲ್ಲು ಕೂಡ ಅವರ ಆಸಕ್ತಿಯನ್ನು ಹಿಡಿಯಲು ಸೋತವು. ಬೇಸತ್ತು ಅನಂತಯ್ಯ ಟಿವಿಯನ್ನು ಆಫ್ ಮಾಡಿದರು.
ಒಮ್ಮೆಲೇ ಅವರಿಗೆ ಹೆಂಡತಿಯ ನೆನಪಾಯಿತು. ಹೆಂಡತಿಯನ್ನು ಕೇಳಿದರೆ ಕಲ್ಲಂಗಡಿ ಹಣ್ಣಿಗೆ ಹೇಗೆ ಸದ್ಗತಿ ಕಾಣಿಸಬಹುದೆಂದು ಹೇಳಿಯಾಳು ಎನಿಸಿತು. ಮೊಬೈಲಿನಲ್ಲಿ ನಂಬರ್ ಒತ್ತಿ ಕಿವಿಗೆ ಹಿಡಿದು ಕೂತರು. ಮೊಬೈಲು ರಿಂಗಾಯಿತೇ ಹೊರತು ಕಾಲ್ ರಿಸೀವ್ ಆಗಲಿಲ್ಲ.

ತವರು ಸೇರಿಬಿಟ್ಟರೆ ಹೆಂಗಸರು ಜಗತ್ತನ್ನೇ ಮರೆತುಬಿಡುತ್ತಾರೆ ಎನಿಸಿತು. ಇನ್ನೊಮ್ಮೆ ಪ್ರಯತ್ನಿಸಿದರು. ಊಹುಂ..! ಮೊಬೈಲ್ ಸರ್ವೀಸಿನ ರೆಕಾರ್ಡೆಡ್ ಮೆಸೇಜು ಉಲಿಯಿತು ‘ನೀವು ಕರೆ ಮಾಡುತ್ತಿರುವ ಚಂದಾದಾರರು ಯಾವುದೇ ಕರೆಯನ್ನು ಸ್ವೀಕರಿಸುತ್ತಿಲ್ಲ, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ’ 
‘ಛೆ..? ಈ ಹೆಂಗಸರಿಗೆ ಸಮಯ ಪ್ರಜ್ಞೆ ಸ್ವಲ್ಪವೂ ಇರೊಲ್ಲ. ಮೊಬೈಲು ಎಲ್ಲೋ ಇಟ್ಟು ಯಾರೊಂದಿಗೇ ಮಾತಿನಲ್ಲಿ ತೊಡಗಿರುತ್ತಾರೆ’ ಎಂದು ಗೊಣಗಿಕೊಂಡರು. ಸರಿ, ರಾತ್ರಿ ಫೋನು ಮಾಡಿದರೆ ಸಿಕ್ಕೇ ಸಿಗುತ್ತಾಳೆ ಎಂದು ಮತ್ತೆ ಫೋನು ಮಾಡುವ ಪ್ರಯತ್ನವನ್ನು ಕೈಬಿಟ್ಟರು.
ಮನೆಯಾಚೆ ಗೇಟಿನ ಬಳಿ ಶಬ್ದವಾಯಿತು – ಯಾರೋ ಗೇಟು ತೆರೆದಂತೆ.  ಅನಂತಯ್ಯ ಎದ್ದು ಬಾಗಿಲನ್ನು ತೆರೆದು ಆಚೆ ಇಣುಕಿದರು. ಅವರ ಊಹೆ ನಿಜವಾಗಿತ್ತು. ಅಂಚೆಯವನು ಅಂಚೆ ಪಟ್ಟಿಗೆಯಲ್ಲಿ ಅಂಚೆಯನ್ನು ಹಾಕಿ ಹೊರಡುತ್ತಿದ್ದ. 

‘ಈ ಕಾಲದಲ್ಲಿ ಪತ್ರ ಬರೆಯುವವರೇ ಇಲ್ಲ! ಅಂಚೆಯಲ್ಲಿ ಯಾವ ಪತ್ರವೂ ಬರುವುದಿಲ್ಲ, ಬರುವುದೆಲ್ಲಾ ಟೆಲಿನು ಬಿಲ್ಲುಗಳಷ್ಟೇ!’ ಎಂದುಕ್ಕೊಳ್ಳುತ್ತಾ ಅನಂತಯ್ಯ ಈಚೆ ಬಂತು ಪೋಸ್ಟ್ ಬಾಕ್ಸಿಗೆ ಕೈಹಾಕಿದರು. ಅವರ ಊಹೆ ನಿಜವಾಗಿತ್ತು. ಎರಡು ಟೆಲಿಫೋನು ಬಿಲ್ಲುಗಳು ಪೆಟ್ಟಿಗೆಯಲ್ಲಿದ್ದವು.
ಬಿಲ್ಲು ಕಳಿಸುವಾಗಿನ ಬದ್ಧತೆ, ಸೇವೆ ನೀಡುವುದರಲ್ಲಿ ಇವರಿಗೆ ಇರುವುದಿಲ್ಲ ಎಂದುಕ್ಕೊಳ್ಳುತ್ತಾ ಮನೆಯೊಳಗೆ ಬರುವುದರಲ್ಲಿ ಅವರ ಮೊಬೈಲು ರಿಂಗಾಯಿತು.
‘ಹಲೋ’ ಎಂದರು.

‘ಹಲೋ..ಏನೋ ಫೋನ್ ಮಾಡಿದ್ರಲ್ಲ…?’ ಮಡದಿಯ ಪ್ರಶ್ನೆ!
‘ಎಲ್ಲಿಗೋಗಿದ್ದೆ..?’
‘ಒಳಗಿದ್ದೆ. ಮೊಬೈಲು ಡ್ರಾಯಿಂಗಿನಲ್ಲಿತ್ತು. ಜೊತೆಗೆ ಟಿವಿಯ ಶಬ್ದ ಬೇರೆ ಇತ್ತು. ಫೋನು ರಿಂಗಾಗಿದ್ದು ಕೇಳಿಸಲಿಲ್ಲ. ಸರಿ ಏನು ವಿಷಯ..? ಊಟ ಆಯ್ತಾ..? ಅನ್ನ ಮಾಡ್ಕೊಂಡಿದ್ರಾ..?’
‘ಇಲ್ಲ ಕಿಚನ್ ಸಿಂಕ್ ತುಂಬಾ ಪಾತ್ರೆ ತುಂಬಿತ್ತು’ ತಮ್ಮನ್ನು ಸಮರ್ಥಿಸಿಕೊಂಡರು ಅನಂತಯ್ಯ.
‘ಅದಕ್ಕೂ ನೀವು ಅನ್ನ ಮಾಡ್ಕೊಳ್ಳೋಕೂ ಏನು ಸಂಬಂಧ..?’
‘ಸಿಂಕಿನಲ್ಲಿ ಇನ್ನಷ್ಟು ಪಾತ್ರೆ ತುಂಬುತ್ತಲ್ಲಾಂತ..!’
‘ಕಳ್ಳನಿಗೊಂದು ಪಿಳ್ಳೆ ನೆವ ಅಷ್ಟೆ! ಹೋಗ್ಲಿ ಊಟ ಆಯ್ತಾ..?’
‘ಆಯ್ತು. ಮೊನ್ನೆ ತಂದಿದ್ದ ಕಲ್ಲಂಗಡಿ ಹಣ್ಣು ಹಾಗೇ ಉಳಿದುಬಿಟ್ಟಿದೆ..ಅದ್ನೇನು ಮಾಡೋದು ?’ ಪೇಚಾಡಿದರು.
‘ನೀವು ಅದನ್ನ ಕೊಯ್ಯಲಿಲ್ಲ. ಅದಕ್ಕೇ ಹಾಗೇ ಉಳೀತು!’ 

ಮಡದಿಯ ಉತ್ತರದಿಂದ ಅನಂತಯ್ಯನವರಿಗೆ ನಿರಾಶೆಯಾಯಿತು. ಏನಾದರೂ ಸಲಹೆ ಕೊಡುತ್ತಾಳೆಂದರೆ ತನ್ನ ಮೇಲೆ ಅಪವಾದ ಹೊರಿಸುವ ಉತ್ಸಾಹದಲ್ಲಿದ್ದಾಳಲ್ಲ ಎನಿಸಿತು.
‘ಸರಿ, ಎನೋ ಆಯ್ತು ಬಿಡು! ಈಗದನ್ನೇನ್ಮಾಡೋದು..? ಒಬ್ಬನಿಗೇ ಅದನ್ನ ತಿನ್ನೋದಕ್ಕಾಗೊಲ್ಲ. ಇಟ್ರೆ ಕೆಟ್ಟೋಗುತ್ತೆ..’
‘ಒಂದ್ಕೆಲ್ಸ ಮಾಡಿ, ನಾಳೆ ಇಲ್ಲಿಗೇ ತಂದ್ಬಿಡಿ. ಇಲ್ಲಿ ಮನೇ ತುಂಬಾ ಜನ ಇದಾರೆ, ಖರ್ಚಾಗುತ್ತೆ.’
‘ಬೆಂಗ್ಳೂರಿಗೆ ಬಂದು ಹೋಗೋಕೆ ಒಂದೈನೂರು ಖರ್ಚು, ಅದರ ಜೊತೆಗೇ ನನ್ನ ಮೈಯೂ ಹಣ್ಣಾಗಿರುತ್ತೆ!’
ವ್ಯಂಗ್ಯದಿಂದ ನುಡಿದರು ಅನಂತಯ್ಯ!

‘ಸರಿ ಯಾರಿಗಾದ್ರೂ ತಿನ್ನೋರಿಗೆ ಕೊಟ್ಬಿಡಿ’ ಸಲೀಸಾಗಿ ಬಂತು ಉತ್ತರ.
‘ಅದ್ಸರಿ, ಕೊಟ್ರೆ ಎಲ್ರೂ ತಿನ್ತಾರಪ್ಪ! ಆದ್ರೆ ಯಾರಿಗೆ ಕೊಡಲಿ…? ಗೇಟ್ ಹತ್ರ ನಿಂತ್ಕೊಂಡು ಯಾರನ್ನಾದ್ರೂ ಕರೆದು ಕೊಡೋದಕ್ಕಾಗುತ್ತಾ..?’
‘ಬೆಳಿಗ್ಗೆ ಕೆಲಸಕ್ಕೆ ಮುನಿಯಮ್ಮ ಬರ್ತಾಳೆ ಅವಳಿಗೆ ಕೊಟ್ಬಿಡಿ’
 ‘ಇಡೀ ಹಣ್ಣನ್ನ..?’ ಅನಂತಯ್ಯನವರಿಗೆ ಜೀವ ಬಾಯಿಗೆ ಬಂದಂತಾಯಿತು. ಇನ್ನೂರೈವತ್ತು ಕೊಟ್ಟು ತಂದಿದ್ದನ್ನ  ಸಲೀಸಾಗಿ ಕೊಟ್ಟುಬಿಡಿ ಎಂದಳಲ್ಲ! ಮಡದಿಯ ಮಾತಿನಲ್ಲಿದ್ದ ಸರಳತೆಗೆ ಅನಂತಯ್ಯ ಅಚ್ಚರಿಪಟ್ಟರು. ತನಗನ್ನಿಸಿದ ಹಾಗೆ ಇವಳಿಗೆ ಅನ್ನಿಸುವುದಿಲ್ಲವೆ..? ಇನ್ನೂರೈವತ್ತು ರೂಪಾಯಿ ಇವಳ ಲೆಕ್ಕದಲ್ಲಿ ಹಣ ಅಲ್ಲವೇ..? ಅಥವಾ ಅದು ತೀರಾ ಅಲ್ಪ ಮೊತ್ತವೆ..?
‘ನಿಮಗಾಗೋ ಅಷ್ಟು ಇಟ್ಕೊಳ್ಳಿ, ಉಳಿದದ್ದು ಕೊಟ್ಬಿಡಿ’ ಮತ್ತದೇ ಸರಳತೆ!
‘ಸರಿ ಹಾಗೇ ಮಾಡ್ತೀನಿ’ ಒಪ್ಪಲೇಬೇಕಾಗಿತ್ತು.
‘ನಾನು ನಾಲ್ಕೈದು ದಿನಗಳಲ್ಲಿ ಬಂದ್ಬಿಡ್ತೀನಿ..’
‘ಸರಿ’
ಮಡದಿ ಕೊಟ್ಟ ಸಲಹೆಯೇನೋ ಸೂಕ್ತವಾಗಿತ್ತು. ಮುನಿಯಮ್ಮನ ಮನೆ ತುಂಬಾ ಜನ. ಕೊಟ್ಟರೆ ಸರಿ ಹೋಗುತ್ತೆ ಎನಿಸಿತು. ಆದರೆ ಇಡೀ ಹಣ್ಣು ಕೊಡಿ ಎಂಬ ಮಡದಿಯ ಸಲಹೆ ಒಪ್ಪಿಗೆಯಾಗಿರಲಿಲ್ಲ. ಇನ್ನೂರೈವತ್ತು ಕೊಟ್ಟು ತಂದಿದ್ದು-ಅದೂ ಮೊಮ್ಮಕ್ಕಳಿಗೆಂದು. ಹಣ್ಣನ್ನು ಹೆಚ್ಚಿಗೆ ದಿನ ಇಡುವಂತೆಯೂ ಇಲ್ಲ! ಪೂರಾ ಕೊಡುವಂತೆಯೂ ಇಲ್ಲ! ತಾನೇಕೆ ಇಂತಾ ತಾಪತ್ರಯದಲ್ಲಿ ಸಿಕ್ಕಿಕ್ಕೊಳ್ಳುತ್ತೇನೆ? ತಮಗೆ ತಾವೇ ಪ್ರಶ್ನೆ ಹಾಕಿಕೊಂಡರು ಅನಂತಯ್ಯ.

ಬಹಳ ಯೋಚನೆಯ ನಂತರ ಅರ್ಧ ಹಣ್ಣನ್ನು ತಾನಿಟ್ಟುಕೊಂಡು ಉಳಿದರ್ಧ ಮುನಿಯಮ್ಮನಿಗೆ ಕೊಟ್ಟುಬಿಡೋದು ಎಂದು ನಿರ್ಧರಿಸಿದರು ಅನಂತಯ್ಯ. ಈ ನಿರ್ಧಾರದ ನಂತರ ಸ್ವಲ್ಪ ಸಮಾಧಾನವಾಯಿತು. ಅಲ್ಲಿಗೆ ಕಲ್ಲಂಗಡಿ ಹಣ್ಣಿನ ಸಮಸ್ಯೆ ಬಗೆಹರಿಯಿತೆನ್ನಿಸಿತು.

ಸಮಯ ಜಾರುತ್ತಿತ್ತು. ಗಡಿಯಾರ ಮೂರನ್ನು ಸಮೀಪಿಸುತ್ತಿತ್ತು. ಆಚೆ ಮಾರ್ಚ್ ತಿಂಗಳ ಬಿಸಿಲು ರವರವ ಎನ್ನುತ್ತಿತ್ತು. ಸ್ವಲ್ಪ ಹೊತ್ತು ಮಲಗೋಣ ಎನ್ನಿಸಿತು. ಕೇವಲ ಒಂದು ದಿನದ ಹಿಂದೆ ಇದೇ ಮನೆಯಲ್ಲಿ ಎಷ್ಟು ಗಲಾಟೆಯಿತ್ತೆಂದರೆ ನಿದ್ರೆಯ ಬಗೆಗೆ ಯೋಚನೆ ಸಹ ಮಾಡುವಂತಿರಲಿಲ್ಲ. ಬಹಳ ಕಾಲದ ಅಭ್ಯಾಸ ಬಿಡಲಾರದೆ ಮಲಗಲು ಪ್ರಯತ್ನಿಸಿದ್ದೂ ಇದೆ. ಮಲಗಿದ ಐದೇ ನಿಮಿಷದಲ್ಲಿ ಯಾರಾದರೊಬ್ಬರು ಬಂದು ಎಬ್ಬಿಸುತ್ತಿದ್ದರು. ಬಹುತೇಕ ಮೊಮ್ಮಕ್ಕಳೇ ಆ ಕೆಲಸ ಮಾಡುತ್ತಿದ್ದುದು. ಕಣ್ಣು ಮುಚ್ಚಿ ಮಲಗಿದ್ದ ತಮ್ಮ ಬಳಿ ಬಂದು ಕೇಳುತ್ತಿದ್ದರು ‘ತಾತಾ ನಿದ್ರೆ ಮಾಡ್ತಿದ್ದೀರಾ..?’. ಅದರೊಂದಿಗೆ ನಿದ್ರೆ ಮುಗಿಯುತ್ತಿತ್ತು.
ಇವತ್ತು ಸಾಕೆನಿಸುವಷ್ಟು ನಿದ್ರೆ ಮಾಡಿಬಿಡೋಣ ಎಂದು ತಮ್ಮ ರೂಮಿಗೆ ಹೋಗಿ ಹಾಸಿಗೆಯಲ್ಲಿ ಅಡ್ಡಾದರು.

ಮುನಿಯಮ್ಮನಿಗೆ ಅರ್ಧ ಕೊಟ್ಟು ತಾವು ಅರ್ಧ ಕಲ್ಲಂಗಡಿ ಹಣ್ಣು ಉಳಿಸಿಕ್ಕೊಳ್ಳುವುದೆಂಬ ನಿರ್ಧಾರ ನೆನಪಾಯಿತು. ಅರೆ..ತಾನು ಅರ್ಧ ಹಣ್ಣು ತಿನ್ನಬಲ್ಲನೆ ಎಂದು ಅನುಮಾನ ಮೂಡಿತು. ಹೆಚ್ಚು ತಿಂದರೆ ಹಣ್ಣು ಸಪ್ಪೆಸಪ್ಪೆ ಎನಿಸಿ ವಾಕರಿಕೆ ಬರುವುದು. ಅದಕ್ಕೇ ಆದಷ್ಟು ತಿಂದು ಉಳಿದದ್ದು ಫ್ರಿಜ್ಜಿನಲ್ಲಿಟ್ಟು ತಿನ್ನುವುದು ಎಂಬ ಉತ್ತರವೂ ಸಿಕ್ಕಿತು. ಫ್ರಿಜ್ಜಿನಲ್ಲಿಟ್ಟುಕೊಂಡರೆ ನೀರು ಬಸಿದು ಇನ್ನಷ್ಟು ಸಪ್ಪೆಯಾಗಿ ಮಾರನೆಯ ದಿನ ತಿನ್ನಲಾರದ ಸ್ಥಿತಿಗೆ ಬರುತ್ತದೆಯಲ್ಲ ಆಗೇನು ಮಾಡುವುದು..? ಬೇಡ ಅರ್ಧ ಕೂಡ ತನಗೆ ಬೇಡ, ಮುನಿಯಮ್ಮನಿಗೆ ಮುಕ್ಕಾಲು ಹಣ್ಣು ಕೊಟ್ಟು ತಾನು ಕಾಲು ಭಾಗ ಉಳಿಸಿಕೊಂಡರೆ ಸೂಕ್ತ ಎಂದು ತಮ್ಮ ಮೊದಲಿನ ತೀರ್ಮಾನವನ್ನು ಅನಂತಯ್ಯ ಬದಲಿಸಿದರು. ಇಷ್ಟೂ ಯೋಚನೆಗಳ ನಡುವೆಯೂ ಮೆಲ್ಲನೆ ನಿದ್ರೆ ಅವರನ್ನು ಆವರಿಸಿಕೊಂಡಿತ್ತು!

ಎದ್ದಾಗ ಐದೂವರೆ! ಕನಿಷ್ಠ ಎರಡು ಗಂಟೆ ಸುಖ ನಿದ್ರೆ ಮಾಡಿದ್ದೀನಿ ಎನ್ನಿಸಿತು ಅನಂತಯ್ಯನವರಿಗೆ. ಹಿಂದಿನ ದಿನ ಸರಿರಾತ್ರಿ ಒಂದು ಗಂಟೆಗೆ ಮಗ, ಸೊಸೆ, ಮೊಮ್ಮಕ್ಕಳು ವಿಮಾನ ಹತ್ತಿ ಇಂಗ್ಲೆಂಡಿಗೆ ಪ್ರಯಾಣಿಸಿದ್ದರು. ಮಗಳು, ಅಳಿಯ ಮತ್ತವರ ಮಕ್ಕಳನ್ನು ಹೊತ್ತ ವಿಮಾನ ಎರಡೂವರೆ ಗಂಟೆಗೆ ಅಮೆರಿಕಾಕ್ಕೆ ಹೊರಟಿತ್ತು. ಅವರನ್ನು ಬೀಳ್ಕೊಟ್ಟು ಮನೆಗೆ ಬಂದು ಮಲಗಿದಾಗ ರಾತ್ರಿ ಮೂರೂವರೆ. 
ಬೆಳಿಗ್ಗೆ ಏಳಕ್ಕೆ ಎದ್ದು, ಸ್ನಾನ-ಉಪಹಾರ ಮುಗಿಸಿ ತಾನು ಮೈಸೂರಿಗೆ ಬಂದಿದ್ದೆ. ನಿದ್ರೆ ತುಂಬಾ ಕಡಿಮೆಯಾಗಿ ಇರುಸು-ಮುರುಸಾಗಿತ್ತು. ಅದು ಈ ನಿದ್ರೆಯಿಂದ ಪರಿಹಾರವಾಗಿದೆ ಎನಿಸಿತು ಅನಂತಯ್ಯನವರಿಗೆ. 
ಎದ್ದು ಮುಖ ತೊಳೆದು, ಕಾಫಿ ಮಾಡಿಕೊಂಡು ಕುಡಿದರು.  ಸಂಜೆ ಆರಕ್ಕೆ ಎಂದಿನಂತೆ ವಾಕಿಂಗ್ ಹೊರಟರು. ದಿನ ನಿತ್ಯ ವಾಕಿಂಗಿನಲ್ಲಿ ಸಿಗುತ್ತಿದ್ದ ಸ್ನೇಹಿತರೆಲ್ಲಾ ಸಿಕ್ಕಿದರು. ವಾಕಿಂಗಿನ ಜೊತೆಗೆ ಒಂದಿಷ್ಟು ಹರಟೆಯೂ ಆಯಿತು. ಮನೆಗೆ ಹಿಂದಿರುಗಿದಾಗ ರಾತ್ರಿ ಏಳೂವರೆಯಾಗಿತ್ತು. 

ಒಂದಿಷ್ಟು ಪೇಪರ್ ಓದಿ, ಟಿವಿ ವೀಕ್ಷಿಸಿ ಎಂಟೂವರೆಗೆ ಮತ್ತದೇ ಹೋಟೆಲಿನಲ್ಲಿ ಊಟ ಮಾಡಿ, ಮನಸ್ಸಿನಲ್ಲೇ ದುಬಾರಿ ಎನ್ನುತ್ತಾ ಅರವತ್ತು ರೂಪಾಯಿ ಕೊಟ್ಟು ಮನೆಗೆ ಬಂದರು ಅನಂತಯ್ಯ. ಮನಸ್ಸು ಪ್ರಸನ್ನವಾಗಿತ್ತು. ಟಿವಿಯಲ್ಲಿ ಒಂದು ಸಿನೀಮಾ ನೋಡುವಷ್ಟು ಮನಸ್ಸು ನಿರಾಳವಾಗಿತ್ತು.
 ಹತ್ತಕ್ಕೆ ಮಲಗುವ ಸಿದ್ಧತೆ ನಡೆಸಿದರು ಅನಂತಯ್ಯ. ಬಾತ್ರೂಮಿನಿಂದ ವಾಪಸ್ಸು ಬರುವಾಗ ಫ್ರಿಜ್ ಬಾಗಿಲು ತೆರೆದು ನೋಡಿದರು. ಅನಂತಯ್ಯನವರ ಮನಸ್ಸಿನಲ್ಲಿ ನಡೆಯುತ್ತಿರುವ ಯೋಚನೆಗಳಿಗೂ ತನಗೂ ಯಾವ ಸಂಬಂಧವೂ ಇಲ್ಲ ಎನ್ನುವಂತೆ ಕಲ್ಲಂಗಡಿ ಹಣ್ಣು ಫ್ರಿಜ್ಜಿನಲ್ಲಿ ತಣ್ಣಗೆ ಕೂತಿತ್ತು. ಅದರಲ್ಲಿ ಎಷ್ಟನ್ನು ತಾನು ಉಳಿಸಿಕ್ಕೊಳ್ಳುವುದು, ಎಷ್ಟನ್ನು ಮುನಿಯಮ್ಮನಿಗೆ ಕೊಡುವುದು ಎಂದು ಮಾನಸಿಕವಾಗಿ ಅಳತೆ ಮಾಡಿದರು. ತಾನು ಕಾಲು ಭಾಗಕ್ಕಿಂತ ಕೊಂಚ ಹೆಚ್ಚಿಗೆ ಉಳಿಸಿಕ್ಕೊಳ್ಳುವುದೆಂದು ತಮ್ಮ ಹಿಂದಿನ ತೀರ್ಮಾನ ಬದಲಿಸಿದರು. ಅಕಸ್ಮಾತ್ ಒಂದೇ ಸಲಕ್ಕೆ ತಿನ್ನಲು ಆಗದಿದ್ದರೆ, ಫ್ರಿಜ್ಜಿನಲ್ಲಿಟ್ಟು ಎರಡನೆಯ ಸಲಕ್ಕೆ ಸ್ವಲ್ಪ ಉಪ್ಪು ಮತ್ತು ಮೆಣಸಿನ ಪುಡಿಯನ್ನು ಚುಮುಕಿಸಿ ತಿಂದರೆ ಚೆನ್ನಾಗಿಯೇ ಇರುತ್ತದೆ ಎನಿಸಿತು. ಇನ್ನೂರೈವತ್ತು ರೂಪಾಯಿ ಕೊಟ್ಟು ತಂದ ಹಣ್ಣನ್ನು ಹಾಗೆಯೇ ಕೊಟ್ಟುಬಿಡಲಾದೀತೆ..? ಮತ್ತೆಮತ್ತೆ ಕೊಡುವ-ಉಳಿಸಿಕ್ಕೊಳ್ಳುವ ಲೆಕ್ಕಾಚಾರ ಮಾಡಿದರು ಅನಂತಯ್ಯ.

ಎಷ್ಟು ಲೆಕ್ಕಾಚಾರ ಮಾಡಿದರೂ, ಯೋಚಿಸಿದರೂ ಅದು ಗೊಂದಲವೇ! ಕೊನೆಗೊಮ್ಮೆ ಅನಂತಯ್ಯನವರಿಗನ್ನಿಸಿತು. ಎಲಾ..ನಾನೇಕೆ ಇಷ್ಟೊಂದು ಲೆಕ್ಕಾಚಾರ ಮಾಡುತ್ತಿರುವೆ..? ಅದೂ ಕೇವಲ ಇನ್ನೂರೈವತ್ತು ರೂಪಾಯಿ ಕೊಟ್ಟು ತಂದ ಹಣ್ಣಿಗೆ. ಕಳೆದ ಹತ್ತು ವರ್ಷಗಳಲ್ಲಿ ಮುನಿಯಮ್ಮನ ಕಷ್ಟಕ್ಕೆ ತಾನು ಮತ್ತು ಲಕ್ಷ್ಮಿ ಎಷ್ಟೊಂದು ನೆರವಾಗಿದ್ದೇವೆ! ಅವಳ ಹಣದ ತಾಪತ್ರಯ, ಸಂಸಾರದ ಖಾಯಿಲೆ-ಕಸಾಲೆ, ಮಕ್ಕಳ ಫೀಜು, ಪುಸ್ತಕಗಳು, ಹಬ್ಬ ಹರಿದಿನಗಳಲ್ಲಿ ಎಣ್ಣೆ, ಬೆಲ್ಲ ಇತ್ಯಾದಿಯಾಗಿ ಲೆಕ್ಕವಿಲ್ಲದಂತೆ ನೆರವಾಗಿರುವಾಗ ಈಗ ಈ ಒಂದು ಹಣ್ಣನ್ನು ಕೊಡಲು ಮನಸ್ಸೇಕೆ ಒಪ್ಪುತ್ತಿಲ್ಲ..? ಮುನಿಯಮ್ಮನ ಬಾಯಿ ಒಡಕಲು! ಮಾತಿಗೆ ಮಾತು ಬೆಳೆಸುವ ಪ್ರವೃತ್ತಿಯಿದೆ! ಜಗಳಗಂಟಿ ಕೂಡ! ಆದರೂ ಹೃದಯ ಒಳ್ಳೆಯದೇ. ತಿಂಗಳಿಗೊಮ್ಮೆ ಕೆಲಸ ಬಿಡುವ ದಮಕೀ ಹಾಕಿದರೂ ಈವರೆಗೆ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಜಗಳ ಮುಗಿದ ಮಾರನೆ ದಿನವೇ, ತನ್ನ ಮಾತಿಗೆ ಮರುಗುತ್ತಿದ್ದಳು. ‘ಈ ಮನೆಯ ಋಣ ನನ್ನ ಮೇಲಿದೆ, ಯಾವ ಮನೆ ಕೆಲಸ ಬಿಟ್ಟರೂ ಈ ಮನೆಯ ಕೆಲಸ ಮಾತ್ರ ಬಿಡೊಲ್ಲ’ ಎನ್ನುತ್ತಿದ್ದಳು. ತನ್ನ ಮನೆಯಲ್ಲಿ ಆಕೆ ಹತ್ತು ವರ್ಷದಿಂದಲೂ ಕೆಲಸ ಮಾಡಿಕೊಂಡು ಬಂದಿದ್ದಾಳೆ. ತನ್ನ ಶಕ್ತಿ ಮೀರಿ ಮನೆಯನ್ನು ಒಪ್ಪ-ಓರಣ ಮಾಡುವುದರಲ್ಲಿ ಲಕ್ಷ್ಮಿಗೆ ನೆರವಾಗಿದ್ದಾಳೆ. ತನ್ನ ಮಕ್ಕಳ ಮದುವೆಗಳಲ್ಲಿ, ಮನೆಯ ಕಷ್ಟ-ಸುಖಗಳಲ್ಲಿ ಕೈಜೋಡಿಸಿದ್ದಾಳೆ. ಮನೆಗೆ ಬಂದ ನೆಂಟರಿಷ್ಟರಿಂದ ‘ಭೇಷ್’ ಎನಿಸಿಕೊಂಡಿದ್ದಾಳೆ. ಇಷ್ಟೆಲ್ಲಾ ಇರುವಾಗ ಒಂದು ಯಕಶ್ಚಿತ್ ಕಲ್ಲಂಗಡಿ ಹಣ್ಣಿನ ವಿಷಯಕ್ಕೆ ನಾನಿಷ್ಟು ಸಣ್ಣವನಾಗಬೇಕೆ..? ಅದೂ ಕೇವಲ ಇನ್ನೂರೈವತ್ತು ರೂಪಾಯಿನದು. ಮುನಿಯಮ್ಮನಿಗೆ ಒಂದು ಸಲ ಸೈಟಿಗೆ ಹಣ ಕಟ್ಟಬೇಕೆಂದಾಗ ಒಂದೇ ಸಲ ಹದಿನೈದು ಸಾವಿರ ಕೊಟ್ಟಿದ್ದೂ ಇದೆ! ಹಾಗಿರುವಾಗ ಈಗ ಈ ಹಣ್ಣಿಗೆ ಜುಂಗಾಡುವುದೆ..? ಅದು ಮಕ್ಕಳು ತಿನ್ನಲಿ ಎಂದು ತಂದಿದ್ದು. ಮುನಿಯಮ್ಮನ ಮಕ್ಕಳು ತಿಂದರೆ ತಾನು ತಂದಿದ್ದ ಉದ್ದೇಶ ಈಡೇರುವುದಿಲ್ಲವೆ..? ತಮ್ಮಲ್ಲಿ ಮೂಡುತ್ತಿದ್ದ ಯೋಚನೆಗಳಿಗೆ ಅನಂತಯ್ಯನವರಿಗೆ ಆಶ್ಚರ್ಯವಾಯಿತು. ಮುನಿಯಮ್ಮ ತನ್ನ ಮನೆಗೆ ಮಾಡಿದ ಸೇವೆಯ ತುಣುಕುಗಳ ಫ್ಲ್ಯಾಷ್ಬ್ಯಾಕ್ಗಳು ಶುರುವಾದುವು.

ಕಾಲಿಂಗ್ ಬೆಲ್ ಶಬ್ದಕ್ಕೆ ಅನಂತಯ್ಯ ಗಡಬಡಿಸಿ ಎದ್ದರು. ಗಾಢ ನಿದ್ರೆಯಲ್ಲಿದ್ದ ಅವರಿಗೆ ಕಾಲಿಂಗ್ ಬೆಲ್ಲಿನ ಶಬ್ದ ಬೇರಾವುದೋ ಲೋಕದಿಂದ ಬಂದಂತಿತ್ತು. ಎದ್ದು ಹೋಗಿ ಬಾಗಿಲು ತೆರೆದರು. ಆಚೆ ಮುನಿಯಮ್ಮ ನಿಂತಿದ್ದಳು.
‘ಮಕ್ಕಳೆಲ್ಲಾ ಸಲೀಸಾಗಿ ಹೋದ್ರಾ ಬುದ್ದಿ..?’ ಎಂದು ಕೇಳುತ್ತಾ ಉತ್ತರಕ್ಕೂ ಕಾಯದೆ ತನ್ನ ಕೆಲಸದಲ್ಲಿ ತೊಡಗಿದಳು ಮುನಿಯಮ್ಮ.
‘ಹೂ..ಎಲ್ಲಾ ಹೋದರು. ನೀನು ಕೆಲಸ ಮುಗಿಸಿ ಹೋಗ್ಬೇಕಾದ್ರೆ ಈ ಕಲ್ಲಂಗಡಿ ಹಣ್ಣು ತಗೊಂಡು ಹೋಗು’ ಎಂದು ಅನಂತಯ್ಯ ಫ್ರಿಜ್ಜಿನಿಂದ ಇಡೀ ಕಲ್ಲಂಗಡಿ ಹಣ್ಣು ತೆಗೆದು ಡೈನಿಂಗ್ ಟೇಬಲ್ಲಿನ ಮೇಲಿಟ್ಟರು.
‘ಆಗ್ಲಿ ಬುದ್ದಿ. ವಾರದಿಂದ ಮಕ್ಕಳು ಒಂದೇ ಸಮ ಕಲ್ಲಂಗಡಿ ಅಂತ ಕನವರಿಸ್ತಿದ್ದೋ..ದೇವ್ರೇ ಪ್ರಸಾದ ಕೊಟ್ಟಂಗಾಯ್ತು’
ಕಸ ಗುಡಿಸುತ್ತಿದ್ದ ಮುನಿಯಮ್ಮ ಹೇಳಿದಾಗ ಅನಂತಯ್ಯನವರ ಎದೆ ತುಂಬಿತ್ತು! ಧನ್ಯತೆಯಿಂದ ಕಲ್ಲಂಗಡಿ ಹಣ್ಣನ್ನು ನೋಡಿ ಹಲ್ಲುಜ್ಜಲು ಬಾತ್ರೂಮಿನ ಕಡೆ ನಡೆದರು.



 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Rajendra B. Shetty
7 years ago

ಬಹಳ ಚೆನ್ನಾಗಿ ಅನಂತಯ್ಯನ ಮನಸ್ಸಿನ ಹೊಯ್ದಾಟ ವಿವರಿಸಿದ್ದೀರಿ. ಓದುತ್ತಿರುವಂತೆ ಅದು ನಮ್ಮ ಅನುಭವ ಎಂದು ಅನಿಸಿತು.

shivashankar
shivashankar
7 years ago

dhanyavadagalu Rajendra, Odi abhipraya thilisiddakke.

shivashankar

2
0
Would love your thoughts, please comment.x
()
x