ಬಿಸಿಲ ನಾಡು ಕಲ್ಬುರ್ಗಿ ಎಂದ ಕೂಡಲೇ ನಮಗೆ ನೆನಪಾಗುವುದು ಇಲ್ಲಿನ ಶರಣ ಬಸವೇಶ್ವರ ದೇಗುಲ ಮತ್ತು ವಿಶ್ವವಿದ್ಯಾಲಯ. ತೊಗರಿ ನಾಡೆಂದು ಪ್ರಸಿದ್ದವಾದ ಕಲ್ಬುರ್ಗಿಯಲ್ಲೊಂದು ವಿಶಿಷ್ಟ ಬುದ್ಧವಿಹಾರವಿದೆ. ಇದನ್ನು ನೋಡಲೇಬೇಕು. ಇದು ನಗರದಿಂದ ದೂರವಿರುವ ಕಾರಣ ಸ್ವಂತ ವಾಹವಿದ್ದರೆ ಅನುಕೂಲ ಇಲ್ಲವೇ ಅಟೋ ಅಥವ ಸೇಡಂ ಕಡೆಗೆ ಹೋಗುವ ಬಸ್ ಮೂಲಕ ಇಲ್ಲಿಗೆ ಬರಬಹುದು. ಅಥವ ನಗರ ಸಾರಿಗೆ ಬಸ್ ಮೂಲಕವೂ ಬರಬಹುದು. ಇದು ನಗರದಿಂದ 7 ಕಿ. ಮೀ ಅಂತರದಲ್ಲಿದೆ.
ಸೇಡಂ ಕಡೆಗೆ ಸಂಚರಿಸುವ ಬಸ್ ರಸ್ತೆಯಲ್ಲಿ ನಿಲ್ದಾಣದಲ್ಲಿ ನಿಂತು ಹೋದರೆ ನಗರ ಸಾರಿಗೆ ಬಸ್ ನೇರವಾಗಿ ಬುದ್ಧವಿಹಾರದ ನಿಲ್ದಾಣದವರೆಗೂ ಒಳಗೆ ಪ್ರವೇಶ ನೀಡುತ್ತವೆ. ಏನೇ ಆಗಲಿ ಇಂತಹ ಸ್ಥಳಗಳನ್ನು ಒಮ್ಮೆಯಾದರೂ ನೋಡಿ ಕಣ್ತುಂಬಿಕೊಳ್ಳಬೇಕು. ಈ ವಿಹಾರದ ಮುಖ್ಯ ದ್ವಾರವೇ ಆಕರ್ಷಣೀಯವಾಗಿದೆ. ನಾಗಸೇನಾ ದ್ವಾರದ ಮೂಲಕ ನಿಮ್ಮ ವಾಹನ ಒಳಬರುವುದು. ನಾಗಸೇನಾ ದ್ವಾರ ತುಂಬಾ ವೈಶಿಷ್ಟ್ಯಪೂರ್ಣವಾಗಿದೆ. ಕಲ್ಲಿನ ಐದು ಅಂತಸ್ತಿನ ಶ್ವೇತ ವರ್ಣದಿಂದ ಕೂಡಿದ ಈ ದ್ವಾರದಲ್ಲಿ ನಾಗ ಸಂತತಿಯ ಸಂಸ್ಕೃತಿಯ ಚಿತ್ರಗಳು ಗಮನ ಸೆಳೆಯುತ್ತವೆ. ಅಲ್ಲಿಂದ ಅಶೋಕ ದ್ವಾರದ ಮೂಲಕ ಚಲಿಸಬೇಕು. ಒಂದೆಡೆ ಯಾತ್ರಿನಿವಾಸ ಕಾಣುವುದು. ಅಲ್ಲಿಂದ ಕಾಲ್ನಡಿಗೆಯಲ್ಲಿ ಬಂದರೆ ನಗರ ಸಿಟಿ ಬಸ್ ನಿಲ್ದಾಣ ಒಂದೆಡೆ ಅದರ ಪಕ್ಕಕ್ಕೆ ಖಾಸಗೀ ವಾಹನಗಳ ನಿಲುಗಡೆಯನ್ನು ಕಾಣುತ್ತೀರಿ,
ಇಲ್ಲಿಂದ ಸುಸಜ್ಜಿತವಾದ ರಸ್ತೆಯ ಮೂಲಕ ಬಂದರೆ ನಿಜಕ್ಕೂ ರಸ್ತೆ ಎಡಬಲಗಳಲ್ಲಿ ನೆಲೆನಿಂತ ಗಿಡಮರಗಳ ಸಾಲು ನಿಮ್ಮನ್ನು ಕೈಬೀಸಿ ಕರೆದರೆ. ಒಂದೆಡೆ ವಾಹನಗಳಿಗೆ ನಿಲುಗಡೆಗೆಂದೇ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು ಅಲ್ಲಿ ವಾಹನ ನಿಲುಗಡೆ ಮಾಡಿ ಮೆಟ್ಟಿಲುಗಳನ್ನೇರಿ ಬಂದರೆ ಮುಂಭಾಗಿಲ ಬಳಿಯೇ ಪ್ರವೇಶದ್ವಾರವುಂಟು. ಬುದ್ದ ವಿಹಾರದ ದರ್ಶನದ ಸಮಯ ಕೂಡ ಇಲ್ಲಿ ನಮೂದಿಸಲಾಗಿದೆ. ಬೆಳಿಗ್ಗೆ 9 ರಿಂದ 1-30 ಮತ್ತು ಸಾಯಂಕಾಲ 4 ರಿಂದ 8 ರ ವರೆಗೆ ಇಲ್ಲಿ ಪ್ರವೇಶವಿದೆ. ಇದನ್ನು ಖಚಿತಪಡಿಸಿಕೊಂಡೇ ಇಲ್ಲಿ ಬರುವುದು ಒಳ್ಳೆಯದು.
ಅಲ್ಲಿ ಪ್ರವೇಶ ಪಡೆದು ತಮ್ಮ ಪಾದರಕ್ಷೆಗಳನ್ನು ಒಂದೆಡೆ ಇಟ್ಟು ಯಾವುದೇ ಮೋಬೈಲ್. ಕ್ಯಾಮರಾ ವಸ್ತುಗಳಿಗೆ ಒಳಗೆ ತಗೆದುಕೊಂಡು ಹೋಗಲು ಅವಕಾಶವಿಲ್ಲದ ಕಾರಣ ಸೆಕ್ಯೂರಟಿಯವರಿಗೆ ನೀಡಿ ಟೋಕನ್ ಪಡೆದು ಒಳಗೆ ಹೋಗುವುದು ಕಡ್ಡಾಯ. ಇಲ್ಲಿ ಅವರು ಕೆಲವು ನಿಯಮಗಳನ್ನು ಹಾಕಿದ್ದು ಅದನ್ನು ಪಾಲಿಸುವುದು ಒಳ್ಳೆಯದು. ಆ ನಿಯಮಗಳೇನೆಂದರೆ. 1) ಸಂದರ್ಶಕರೆಲ್ಲರೂ ವಂದನಾ ಕೇಂದ್ರ. ಧ್ಯಾನ ಕೇಂದ್ರ. ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ದಿವ್ಯಮೌನವನ್ನು ಕಾಪಾಡಬೇಕು. ದಿವ್ಯಮೌನವೆಂದರೆ ಶಾರೀರಿಕ. ಮಾನಸಿಕ. ಮತ್ತು ಮಾತಿನಿಂದ ಮೌನ. ಇತರರ ಜೊತೆ ಯಾವುದೇ ರೀತಿಯ ಮಾತುಗಳನ್ನು ಆಡಬಾರದು. 2) ವಿಹಾರದಲ್ಲಿ ಯಾರೂ ಒಬ್ಬರನ್ನೊಬ್ಬರು ಸ್ಪರ್ಶಿಸಿ ನಡೆಯಬಾರದು. 3) ಒಳ್ಳೆಯ ಸಭ್ಯಕರವಾದ ಮತ್ತು ಸರಳವಾದ ಬಟ್ಟೆಗಳನ್ನು ಧರಿಸಿರಬೇಕು. 4) ಸಂಗೀತಕ್ಕೆ ಸಂಬಂಧಿಸಿದ ರೇಡಿಯೋ,ಮೋಬೈಲ್. ಕ್ಯಾಮರಾ ಅಥವ ಐಪ್ಯಾಡ್ ನಂತಹ ಯಾವುದೇ ವಸ್ತುಗಳನ್ನು ಇಲ್ಲಿ ನಿಷೇಧಿಸಲಾಗಿದೆ. ಈ ಸೂಚನೆಗಳು ಪ್ರವೇಶದ್ವಾರದ ಫಲಕದಲ್ಲಿವೆ. ಇವು ಈ ವಿಹಾರ ನೋಡಿದವರಿಗೆ ತನ್ನಷ್ಟಕ್ಕೆ ತಾನೇ ಮೈಮನಗಳಲ್ಲಿ ಬಂದರೆ ಅಚ್ಚರಿಯೇನಲ್ಲ. ಅಷ್ಟೊಂದು ಶಿಸ್ತುಬದ್ಧ ವಾತಾವರಣ ತನ್ನ ಶುಭ್ರ ಬಿಳಿಯ ಬಣ್ಣದ ಈ ಕಟ್ಟಡ ನಮ್ಮಲ್ಲಿ ತಂದು ಬಿಡುತ್ತದೆ. ಅಂಬೇಡ್ಕರ ಅವರು ತಮ್ಮ ಅನುಯಾಯಿಗಳೊಂದಿಗೆ ಹೊರಟಿರುವ ಪ್ರತಿಕೃತಿ ಇಲ್ಲಿ ಗಮನ ಸೆಳೆಯುವುದಲ್ಲದೇ ಒಂದೆಡೆ ಅಲ್ಲಿ ಅಶೋಕ ಸ್ತಂಭಗಳು ಕೂಡ ಗಮನ ಸೆಳೆಯುತ್ತವೆ. ಅಲ್ಲೊಂದು ಶ್ವೇತ ವರ್ಣದ ಕಮಾನಿನಲ್ಲಿ ಗಂಟೆಯಿದೆ. ಅಲ್ಲಿ ಮತ್ತೊಂದೆಡೆ ಅಶೋಕ ಚಕ್ರ. ವಿದೆ. ಒಂದು ಬದಿ ವಿಶಾಲ ಗ್ರಂಥಾಲಯ ಮತ್ತೊಂದು ಬದಿ ಇದೆ.
ಮೊದಲು ಬುದ್ಧವಿಹಾರದತ್ತ ಪ್ರವೇಶಿಸೋಣ. ಇದನ್ನು 2009 ರ ಜನೇವರಿ 7 ರಂದು ರಾಷ್ಟ್ಪಪತಿ ಪ್ರತಿಭಾದೇವಿಸಿಂಗ್ ಪಾಟೀಲ್ ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿದ್ದು. 75 ಎಕರೆ ಪ್ರದೇಶದಲ್ಲಿ 32. 450 ಚದರ ಅಡಿ ವಿಸ್ತಾರದಲ್ಲಿ ತಲೆ ಎತ್ತಿ ನಿಂತಿರುವ ಈ ವಿಹಾರ ಜಗತ್ತಿನಲ್ಲಿಯೇ ತನ್ನದೇ ಆದ ವೈಶಿಷ್ಟ್ಯದಿಂದ ಗಮನ ಸೆಳೆದಿರುವುದು. ಮಹತ್ವದ ಸಂಗತಿ. ಮಲ್ಲಿಕಾರ್ಜುನ ಖರ್ಗೆಯವರ ಆಸಕ್ತಿಯ ಪ್ರತಿಫಲ ಇದಾಗಿದೆ.
ವಿಹಾರದ ಹೊರಭಾಗದಲ್ಲಿರುವ ಸ್ತೂಪಗಳನ್ನು ಇಟಾಲಿಯನ್ ಮಾರ್ಬಲ್ ನಿಂದ ತಯಾರಿಸಲಾಗಿದ್ದು. ಇವು ಅಶೋಕನ ಕಾಲದ ಮಾದರಿಯಂತಿರುವುದು ಗಮನಾರ್ಹ. ಒಟ್ಟು ಆರು ದ್ವಾರಗಳನ್ನು ಹೊಂದಿದ್ದು ಮೂರನ್ನು ಟೀಕ್ ವುಡ್ನಿಂದ ನಿರ್ಮಿಸಲಾಗಿದೆ. ಮೈಸೂರು ಅರಮನೆ ಕಲಾವಿದ ಕುಟುಂಬದ ಕೈಸರ್ ಅಲಿ ಸಾಂಪ್ರದಾಯಿಕ ಮಾದರಿಯಲ್ಲಿ ಈ ದ್ವಾರ ನಿರ್ಮಿಸಿದ್ದು. ರಾಮನಗರ ಬಿಡದಿಯ ಅಶೋಕ ಗುಡಿಕಾರ ಆರು ಅಡಿ ಎತ್ತರದ ಬುದ್ಧನ ವಿಗ್ರಹ ನಿರ್ಮಿಸಿ ತಮ್ಮ ಕಲಾ ಕೌಶಲ್ಯವನ್ನು ಪ್ರದರ್ಶಿಸಿರುವರು. ಕುಳಿತ ಬುದ್ದನ ಮೂರ್ತಿಯು ನೋಡಲು ಬಲು ಆಕರ್ಷಣೀಯವಾಗಿದೆ. 400 ಪಂಚ ಲೋಕದಿಂದ ಈ ಮೂರ್ತಿಯನ್ನು ಸಿದ್ದಪಡಿಸಲಾಗಿದ್ದು ಅದಕ್ಕೆ ಚಿನ್ನದ ಲೇಪನ ಮಾಡಿರುವರು. ವಿಹಾರದ ನೆಲಮನೆಯಲ್ಲಿ ಸುಮಾರು 2000 ಭಕ್ತರು ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸಬಹುದಾಗಿದೆ.
ಇದರ ನಿರ್ಮಾಣಕ್ಕೆ ಸಿಮೆಂಟ್ ಸುಮಾರು 1500 ಟನ್. ಉಕ್ಕು 250 ಟನ್. ,5 ಲಕ್ಷ ಇಟ್ಟಿಗೆಗಳನ್ನು ಮತ್ತು 200 ಘಟ ಮೀಟರ್ ನಷ್ಟು ಮರಳು ಉಪಯೋಗಿಸಿ ನಿರ್ಮಿಸಿದ ಒಂದು ಸುಂದರ ರಚನೆಯಾಗಿ ನಿರ್ಮಾಣಗೊಳ್ಳುವಲ್ಲಿ ಅನೇಕ ಕುಶಲ ಕರ್ಮಿಗಳ ಕೈಚಳಕ ಕೂಡ ಇಲ್ಲಡಗಿದೆ. ಮುಖ್ಯ ರಚನೆ 284 ಬ್ಲಾಕ್ಗಳ ಜೊತೆ 170 ಕಂಬಗಳನ್ನು ಹೊಂದಿದೆ. ಇದು ಅಜಂತಾ ಎಲ್ಲೋರ ಶಿಲ್ಪಕಲೆಗಳನ್ನು ಪ್ರತಿಬಿಂಬಿಸುತ್ತದೆ. ಮೊದಲ ಮಹಡಿಯಲ್ಲಿ ಗೌತಮ ಬುದ್ಧನ ಎರಡು ಮಹೋಹರವಾಗಿ ಕೆತ್ತಿದ ಮೂರ್ತಿಗಳನ್ನು ಕಾಣಬಹುದು. ಅಷ್ಟೇ ಅಲ್ಲ ಸುತ್ತಲಿನ ಗೋಡೆಗಳಲ್ಲಿಯೂ ಕೂಡ ಬುದ್ದನ ವಿವಿಧ ರೂಪಗಳ ವಿಗ್ರಹಗಳು ಮೂಡಿ ಬಂದಿವೆ. ಒಳ್ಳೆಯ ಸುಂದರ ಕೆತ್ತನೆ ಕೂಡ ಗಮನಸೆಳೆಯುತ್ತದೆ. ಕೆಳಗಿನ ಕೊಠಡಿಯಲ್ಲಿ ಕೂಡ ಬುದ್ಧನ ಮೂರ್ತಿ ಹೊಂದಿರುವ ಧ್ಯಾನಾಸಕ್ತರಿಗೆ ಅನುಕೂಲ ಹೊಂದಿದ ವಾತಾವರಣವಿದೆ. ನಿಶ್ಯಬ್ಧತೆ ಇಲ್ಲಿನ ವೈಶಿಷ್ಟ್ಯ. ಧ್ಯಾನಾಸಕ್ತರಿಗಂತೂ ಹೇಳಿ ಮಾಡಿಸಿದ ವಾತಾವರಣ. ಅಷ್ಟೇ ಅಲ್ಲ ಗೋಡೆ ಕೂಡ ತನ್ನ ಕಲಾತ್ಮಕತೆಯಿಂದ ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಇಲ್ಲಿ ಸ್ವಲ್ಪ ಹೊತ್ತು ಧ್ಯಾನಾಸಕ್ತರಾಗಿ ಕುಳಿತು. ನಂತ ಹೊರ ಬಂದರೆ ಸುತ್ತಲೂ ಕಣ್ಣಾಡಿಸಿದರೆ ಒಂದೆಡೆ ಕಲ್ಬುರ್ಗಿ ನಗರ ಕಾಣುತ್ತದೆ. ಅಂದರೆ ಅಷ್ಟೊಂದು ಎತ್ತರದಲ್ಲಿ ಇದನ್ನು ನಿರ್ಮಿಸಿದ್ದಾರೆ ಎನ್ನಬಹುದು. ಶುಚಿಯಾದ ನೀರಿನ ವ್ಯವಸ್ಥೆ ಇಲ್ಲಿದೆ.
ಹಾಗೆಯೇ ಹೊರ ಬಂದರೆ ಹೊರಗಡೆ ಒಂದು ವಸ್ತುಸಂಗ್ರಹಾಲಯ ಮತ್ತೊಂದು ಗ್ರಂಥಾಲಯ. ಒಂದು ಅಡಿಟೋರಿಯಂ ಅತಿಥಿಗೃಹ ಊಟದ ಹಾಲ್ ಕೂಡ ವಿಹಾರದ ಆವರಣದಲ್ಲಿವೆ. ಇಲ್ಲಿ ಸಂಶೋಧನಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಯೋಜನೆಯನ್ನು ಮಾಜಿ ಸಚಿವರಾದ ಮಲ್ಲಿಕಾರ್ಜುನ ಖರ್ಗೆಯವರು ವಿಪುಲ ಅವಕಾಶಗಳನ್ನು ಕಲ್ಪಿಸಿರುವುದು ಮಹತ್ವದ ಸಂಗತಿ. ಸಿದ್ಧಾರ್ಥ ವಿಹಾರ ಟ್ರಸ್ಟನ ಸಂಸ್ಥಾಪಕ ಅವರಾಗಿದ್ದು ನಿಜಕ್ಕೂ ಈ ವಿಹಾರ ತಲೆಎತ್ತುವಲ್ಲಿ ಅವರ ಪರಿಶ್ರಮವಿದೆ. ಬದುಕಿನ ಜಂಜಾಟದಲ್ಲಿ ಬಸವಳಿದ ದೇಹಕ್ಕೆ ಇಂತಹ ವಿಹಾರಧಾಮಗಳು ಮನಸ್ಸಿಗೆ ಭಕ್ತಿ ಧ್ಯಾನದ ಸಿಂಚನವನ್ನೀಯುತ್ತವೆ. ಈ ಭಾಗದಲ್ಲಿ ಇದು ಒಂದು ಪ್ರವಾಸೀ ತಾಣ ಜೊತೆಗೆ ಧ್ಯಾನಾಸಕ್ತರಿಗೆ ಹೇಳಿ ಮಾಡಿಸಿದ ಸ್ಥಳ ಎಂದರೆ ಅತಿಶಯೋಕ್ತಿಯಲ್ಲ. ಇದು ತೆರೆದಿರುವ ಅವಧಿ ಆಗಮಿಸಿ ಬುಧ್ಧನ ತತ್ವಗಳನ್ನು ಓದಿಕೊಂಡು ಬಂದು ಧ್ಯಾನಾಸಕ್ತರಾಗುವುದು ಒಳ್ಳೆಯದು. ಕಲ್ಬುರ್ಗಿ ಪ್ರವಾಸಕ್ಕೆ ಬಂದವರು ಈ ಸ್ಥಳ ನೋಡದೇ ಹೋದರೆ ಏನನ್ನೋ ಕಳೆದುಕೊಂಡಂತೆ ಆಗುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ತಪ್ಪದೇ ಈ ಸ್ಥಳಕ್ಕೆ ಒಮ್ಮೆಯಾದರೂ ಭೇಟಿ ನೀಡಿ. ಅಧ್ಯಾತ್ಮಿಕ ಬದುಕಿನ ಸಿಂಚನ ಪಡೆಯಿರಿ.
ಅಂದ ಹಾಗೆ ಕಲ್ಗುರ್ಗಿ ನಾಡಿನ ವಿವಿಧ ಸ್ಥಳಗಳಿಂದ ಇರುವ ಅಂತರ ಈ ರೀತಿಯಿದೆ. ಬೆಂಗಳೂರಿನಿಂದ 613 ಕಿ. ಮೀ ಅಂತರದಲ್ಲಿದ್ದು ಬೆಳಗಾವಿಯಿಂದ 517 ಕಿ. ಮೀ. ಹುಬ್ಬಳ್ಳಿಯಿಂದ 441 ಕಿ. ಮೀ. ವಿಜಯಪುರದಿಂದ 192 ಕಿ. ಮೀ. ಬಳ್ಳಾರಿಯಿಂದ 305 ಕಿ. ಮೀ. ಮಂಗಳೂರಿನಿಂದ 560 ಕಿ. ಮೀ. ಹೀಗೆ ರಾಜ್ಯದ ಎಲ್ಲ ನಗರಗಳಿಂದಲೂ ಗುಲ್ಬರ್ಗಕ್ಕೆ ಬರಲು ಅವಕಾಶವಿದೆ. ಅಷ್ಟೇ ಅಲ್ಲ ರಸ್ತೆ ಮತ್ತು ರೈಲು ಮತ್ತು ವಿಮಾನದ ಮೂಲಕ ಕೂಡ ಕಲ್ಗುರ್ಗಿಗೆ ಬರಬಹುದು. ಇಲ್ಲಿನ ಪ್ರವಾಸೀತಾಣಗಳನ್ನು ವೀಕ್ಷಿಸಬೇಕೆಂದರೆ ಸ್ವಂತ ವಾಹನ ಅಥವ ಬಾಡಿಗೆ ವಾಹನವಿದ್ದರೆ ಒಳಿತು. ಎಲ್ಲವನ್ನೂ ನೋಡಿಕೊಂಡು ಹೋಗಬಹುದು. ಕಲ್ಗುರ್ಗಿಯಲ್ಲಿಯಂತೂ ವಸತಿ ಗೃಹಗಳಿಗೇನೂ ಕೊರತೆಯಿಲ್ಲ ಕನಿಷ್ಟ ಎರಡು ದಿನಗಳ ಮಟ್ಟಿಗೆ ಕಲ್ಬುರ್ಗಿಗೆ ಭೇಟಿ ನೀಡಿದರೆ ಇಲ್ಲಿನ ಶರಣಬಸವೇಶ್ವರ ದೇವಾಲಯ. ಕಲ್ಗುರ್ಗಿ ವಿಶ್ವವಿದ್ಯಾಲಯ. ದರ್ಗಾ. ಕೋಟೆ. ವೈಷ್ಣೋದೇವಿ ಮಂದಿರ. ಬುದ್ದವಿಹಾರ ಮೊದಲಾದ ಸ್ಥಳಗಳನ್ನು ನೋಡಬಹುದಾಗಿದೆ. ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಉತ್ತರ ಕರ್ನಾಟಕ ಜೋಳದ ರೊಟ್ಟಿಯ ಉಪಹಾರ ಮಂದಿರಗಳು ಇದ್ದು. ತೊಗರಿ ನಾಡಾಗಿರುವ ಕಾರಣ ತೊಗರಿ ಬೇಳೆ ಪಲ್ಯ. ಸಾರು ಇತ್ಯಾದಿ ಊಟದಲ್ಲಿ ನೀಡುವರು. ಹೀಗೆ ಊಟದ ರುಚಿಯನ್ನು ಸವಿಯಬಹುದು.
–ವೈ. ಬಿ. ಕಡಕೋಳ