ನಮ್ಮದು ಕೇರಳ, ಕರ್ನಾಟಕದ ಗಡಿಭಾಗದಲ್ಲಿ ಮನೆ. ಮನೆಯ ಎದುರಿಗೆ ಅಂಗಳ ದಾಟಿದರೆ ವಿಸ್ತಾರವಾದ ಅಡಿಕೆ, ಬಾಳೆ, ಕೊಕ್ಕೋ ಮತ್ತುತೆಂಗಿನ ತೋಟ. ಪ್ರಾಥಮಿಕ ಶಾಲೆ ಕೇರಳದಲ್ಲಿ. ಮನೆಯಿಂದ ಅರ್ಧ ಗಂಟೆಯ ಕಾಲ್ನಡಿಗೆಯ ಹಾದಿ. ಮಧ್ಯಾಹ್ನ ಶಾಲೆಯಲ್ಲಿ ಈಗಿನ ಹಾಗೆ ಬಿಸಿಯೂಟ ಇಲ್ಲ. ಮನೆಯಲ್ಲಿ ಬೆಳಗ್ಗೆ ಮಾಡಿದ ಗಂಜಿಗೆ ಇಷ್ಟು ಮಜ್ಜಿಗೆ ಸುರಿದು ಅದರ ಮೇಲೆ ಒಂದು ಮಾವಿನ ಮಿಡಿ ಉಪ್ಪಿನಕಾಯಿಯ ಮಿಡಿ ಹಾಕಿ ಲೆಫ್ಟ್, ರೈಟ್ ಮಾಡುತ್ತ ನಡೆದರೆ ಎರಡು ರಾಜ್ಯಗಳಾಲ್ಲಿ ನಮ್ಮ ಸಂಚಾರ. ಗಡಿ, ಬೇರೆ ರಾಜ್ಯ ಅನ್ನುವ ವಿವಾದ ಮಕ್ಕಳಿಗೆಲ್ಲಿಂದ. ಮಧ್ಯಾಹ್ನದ ಒಂದು ಘಂಟೆಗೆ ಊಟಕ್ಕೆ ಬೆಲ್ ಹೊಡೆದಾಗ ಅಧ್ಯಾಪಕರ ಮೇಜಿನ ಪಕ್ಕದ ನೆಲದಲ್ಲಿ ಕೂತು ಬುತ್ತಿ ಬಿಚ್ಚುವ ಕೆಲಸ. ಅಕ್ಕಮ್ಮ ನನ್ನ ಪರಮಾಪ್ತ ಗೆಳತಿ. ಆಗ ಗೊತ್ತಾಗುತ್ತಿರಲಿಲ್ಲ; ಆದರೆ ಈಗ ನೆನಪಿಸಿದರೆ ಅವಳು ಅದ್ಭುತ ಸುಂದರಿ ಅನ್ನುವುದು ಗೊತ್ತಾಗುತ್ತದೆ. ಅವಳ ಬುತ್ತಿ ಬಿಚ್ಚಿದರೆ ಅದರಲ್ಲಿ ಕಲ್ತಪ್ಪ, ಓಡುಪ್ಪಳೆ, ಕೆಂಡದಡ್ಯೆ, ಬಾಣಲೆ ರೊಟ್ಟಿ ಇತ್ಯಾದಿ ನಾನು ಹೆಸರು ಮಾತ್ರ ಕೇಳಿ ಗೊತ್ತಿರುವ ತಿನಿಸುಗಳು ಇರುತ್ತಿತ್ತು. ತಪ್ಪದೆ ನೀರುಳ್ಳಿ ಹಾಕಿ ಅವರಮ್ಮ ಮಾಡಿ ಕೊಡ್ತಿದ್ದ ತಿಂಡಿಯ ಘಮ ಘಮದ ಎದುರಿಗೆ ನನ್ನ ಬುತ್ತಿಯ ಹುಳಿ ಬಡಿಯುವ ಮಜ್ಜಿಗೆ ಅನ್ನಕ್ಕೆ ಎಲ್ಲಿಯ ಸುವಾಸನೆ! ಬಾಯಿಗೆ ಹಾಕುವಾಗ ಹುಳಿಯಿಂದ ಗಂಟಲಿನಲ್ಲಿ ಇಳಿಯದು. ಹಾಗೆಂದು ಬೆಳಗ್ಗೆ ಆಗ ತಾನೆ ಕಡೆದ ಮಜ್ಜಿಗೆ ಹಾಕುತ್ತಿದ್ದೆ. ಬಿಸಿ ಅನ್ನದ ಮೇಲೆ ಬಿದ್ದು ಮಧ್ಯಾಹ್ನದ ತನಕ ಹಾಗೆ ಬಿಟ್ಟರೆ ಹುಳಿ ಬರದೆ ಇರುತ್ತಾ? ಗಕ್, ಗಕ್ ಎಂದು ಶಬ್ದದ ನಡುವೆ ಹಸಿವೆ ತಡೆಯದೆ ಉಣ್ಣುತ್ತಿದ್ದೆ. ಅವಳು ಹತ್ತು ನಿಮಿಷದಲ್ಲಿ ತಿಂದು ಎದ್ದು ಜಾರುಬಂಡಿಯಲ್ಲಿ ಆಡಲು ಧಾವಿಸಿದರೆ ನನ್ನದಿನ್ನೂ ಮುಗಿಯದು. ಅದನ್ನು ನಿತ್ಯಾ ಗಮನಿಸಿದ ಅಕ್ಕಮ್ಮ ಒಂದಾನೊಂದು ದಿನ ಕರುಣೆಯ ಲವಲೇಶವೂ ಇಲ್ಲದೆ ಮಧ್ಯಾಹ್ನ ಬುತ್ತಿ ಉಣ್ಣಲು ಸ್ಪರ್ಧೆ ಏರ್ಪಾಡು ಮಾಡಿದಳು. ಸ್ಪರ್ಧಿಗಳೆಂದರೆ ನಾವಿಬ್ಬರೇ. ಆಗ
ಪರಿಣಾಮವೇನಾದೀತು ಅಂತ ಗೊತ್ತಾಗಲಿಲ್ಲ ನನಗೆ.
ಸರಿ. ಮರುದಿನ ನಾವು ಬುತ್ತಿ ಬಿಚ್ಚಿ ಊಟ ಶುರುಮಾಡಿದಾಗ ಬೇಗ ಬೇಗ ಉಣ್ಣಬೇಕೆಂದು ಅವಸರಿಸಿದರೂ ಗಂಟಲಿನಲ್ಲಿ ಸಿಕ್ಕಿಕೊಂಡು ಆಗಲಿಲ್ಲ. ಅಕ್ಕಮ್ಮ ವಿಜಯೋತ್ಸಾಹದಿಂದ ನೀರುದೋಸೆ ತಿಂದು ಎದ್ದು ಗೆದ್ದ ನಗೆ ಬೀರಿದಾಗ ನನ್ನ ಅರ್ಧ ಊಟವೂ ಮುಗಿದಿರಲಿಲ್ಲ. ಊಟ ಬಿಟ್ಟು ನಾನೂ ಎದ್ದೆ. ಮರುದಿನ ಕೂಡಾ ಅಕ್ಕಮ್ಮ ಫಸ್ಟ್. ಅವಳು ನಿಲ್ಲುವ ಭಂಗಿಯಲ್ಲಿ. ನಡೆವ ಸಂಭ್ರಮದಲ್ಲಿ ಜಂಭ ಎದ್ದು ಕಾಣುತ್ತಿತ್ತು. ನನಗೆ ಅವಮಾನ. ಮೂರು ನಾಲ್ಕು ದಿನ ಹೀಗಾದಾಗ ನಾನು ಮನೆಯಲ್ಲಿ ಬುತ್ತಿಗೆ ಅನ್ನ ಬೇಡವೆಂದು ಹಟ ಹಿಡಿದೆ. ಸರ್ವಥಾ ಒಪ್ಪಲಿಲ್ಲ. ಮಧ್ಯಾಹ್ನ ಒಣಕಲು ದೋಸೆ ತಿಂದರೆ ಹೊಟ್ಟೆ ತುಂಬಲಿಕ್ಕಿಲ್ಲ. ಬುತ್ತಿ ತುಂಬ ಗಂಜಿ, ಮಜ್ಜಿಗೆ ಹಾಕಿ ಊಟ ಮಾಡು. ಆಗ ಹೊಟ್ಟೆಯೂ ತುಂಬುತ್ತದೆ; ಬಾಯಾರಿಕೆಯೂ ಆಗುವುದಿಲ್ಲ. ''ಎಂಥ ಹಟ ಈಗಲೇ. ತಿಂಡಿ ಮಾಡಿ ಕೊಡುವುದಿಲ್ಲ. ಎಲ್ಲ ಮಕ್ಕಳೂ ಅನ್ನ ತರುವಾಗ ಬೆಕ್ಕಿನ ಬಿಡಾರ ಬೇರೆ ಅಂತ ನಿನ್ನದೊಂದು" ಅಂತ ಮಹಾಮಂಗಳಾರತಿ ಆಯ್ತು. ಇನ್ನೇನು ಮಾಡಲಾಗುತ್ತದೆ. ನನ್ನ ಪಾಲಿನ ಪಂಚಾಮೃತವಾದ ಗಂಜಿಯೇ ಗತಿ. ನಾನು ಯಾವಾಗಲೂ ಸೋಲುವುದೇ ಅಂತ ಪೆಚ್ಚಾಯ್ತು. ತುಂಬಾ ಹೊತ್ತು ಒಂಟಿಯಾಗಿ ಅತ್ತ ಮೇಲೆ ಸುಮ್ಮನಾದೆ. ಯಥಾ ಪ್ರಕಾರ ಮರುದಿನ ನನ್ನ ಬುತ್ತಿಗೆ ಅನ್ನ ಹಾಕಿಕೊಂಡು, ಮಜ್ಜಿಗೆ ಹಾಕದೆ ಹೊರಟೆ. ಉಪ್ಪಿನಕಾಯಿ ಮುಟ್ಟಲಿಲ್ಲ.
ಅಕ್ಕಮ್ಮ ಗೆದ್ದ ಹುಂಜದ ಹಾಗೆ ಕೊರಳು ಕೊಂಕಿಸುತ್ತ ಅವಳು ಮಾಡಬೇಕಾದ ಗುಡಿಸುವ ಕೆಲಸ ನನ್ನ ಮೋರೆ ಕಂಡ ತಕ್ಷಣ ನನಗೆ ಒಪ್ಪಿಸಿದಳು. ಮಾತಿಲ್ಲದೆ ಗುಡಿಸಿದೆ. ಮಧ್ಯಾಹ್ನವೂ ಬಂತು. ಘಂಟೆ ಬಾರಿಸಿದಾಗ ಕ್ಲಾಸು ಬಿಟ್ಟಿತು. ಬುತ್ತಿ ಎದುರಿಗೆ ಇಟ್ಟು ಕುಕ್ಕುರುಗಾಲಲ್ಲಿ ಉಣ್ಣಲು ಕೂತೆವು. "ರೆಡೀ, ಒನ್, ಟೂ, ಥ್ರೀ" ಹೇಳಿ ಬುತ್ತಿ ಬಿಚ್ಚಿ ಕೈ ಹಾಕಿದೆವು. ಅಕ್ಕಮ್ಮನಿಗೆ ಅಂದು ಓಡುಪ್ಪಳೆ.ವಾರಗಣ್ಣಲ್ಲಿ ಅವಳ ಬುತ್ತಿಗೆ ನೋಡಿದೆ. ನೂರೆಂಟು ಕಣ್ಣು ಕಣ್ಣುಗಳಿಂದ ಕೂಡಿದ ಓಡುಪ್ಪಳೆ ಜೇನಿನ ಗೂಡಿನ ಹಾಗಿತ್ತು. ನಿತ್ಯಾ ಅದನ್ನುಣ್ಣುವ ಅವಳ ಭಾಗ್ಯಕ್ಕೆ ಅಸೂಯೆ ಪಡುತ್ತ ಬುತ್ತಿ ಮುಚ್ಚಳ ತೆರೆದೆ. ಒಳಗೆ ಕೈ ಹಾಕಿದ್ದೇ ತಡ, ಅದರಲ್ಲಿ ಹಾಕಿದ್ದ ಒಂದೇ ಒಂದು ಅನ್ನದ ಅಗುಳನ್ನು ಎತ್ತಿ ಬಾಯಿಗೆ ಹಾಕಿ ನುಂಗಿ "ನಾ ಫಸ್ಟ್, ನಾನು ಫಸ್ಟ್" ಎಂದು ಕಿರುಚುತ್ತಾ ಖಾಲಿಯಾದ ಅದನ್ನವಳಿಗೆ ತೋರಿಸಿ ತೊಳೆಯಲು ಧಾವಿಸಿದೆ. ಕ್ಷಣಾರ್ಧದಲ್ಲಿ ಅವಳ ಗೋಧಿಗೆಂಪಿನ ಮೋರೆ ಸಿಟ್ಟಿಂದ ಕೆಂಪೇರಿತು. ಅವಳಿಗಿನ್ನೂ ಒಂದೆರಡು ತುಂಡೂ ತಿಂದಾಗಿರಲಿಲ್ಲ. ಕಾಲು ನೆಲಕ್ಕಪ್ಪಳಿಸುತ್ತ ಎದ್ದು ಸಿಟ್ಟಿಂದ ಬಾಯಿಗೆ ಬಂದ ಹಾಗೆ ನನ್ನನ್ನು ಬೈಯುತ್ತಾ ಅಟ್ಟಿಸಿ ಬಂದು ಗುದ್ದಿದಳು. ಒಂದೆಡೆ ಗೆದ್ದ ಸಂಭ್ರಮ; ಇನ್ನೊಂದೆಡೆ ಗೆದ್ದೂ ಪೆಟ್ಟು ತಿನ್ನಬೇಕಾದ ಹಣೆಬರಹ ನನ್ನದು. ಅದೇ ಕೊನೆ. ಆಮೇಲೆ ಅವಳೆಂದೂ ನನ್ನ ಹತ್ತಿರ ಮಾತಾಡಿದವಳಲ್ಲ. ಎಲ್ಲರೆದುರಿಗೆ ನನ್ನನ್ನು " ಒಂದನ್ನ ತಂದು ಮೋಸ ಮಾಡಿದವಳು ''ಎಂಬ ಬೈಗಳು ನನಗೆ. ಕಂಡ ಕಂಡಲ್ಲಿ ಕಾಲು ಮಸೆದು ಜಗಳ! ದುರುಗುಡುವ ನೋಟ. ಮೊದಲಿನ ತಂಪು ಮನದ , ಆಪ್ತ ಗೆಳತಿ ಆಮೇಲೆ ಒಂದು ಬಾರಿ ಕೂಡಾ ಮಾತಾಡಲಿಲ್ಲ. ನಾನಾಗಿ ಸಂಧಾನಕ್ಕೆ ಹೋದಾಗ "ಢೋಂಗಿ ( ಮೋಸ) ಮಾಡುವ ಜನರ ಜೊತೆ ಸ್ನೇಹ ಬೇಡ ಸರ್ವಜ್ಞ" ಎಂದು ರಾಗ ರಾಗವಾಗಿ ಹಾಡಿ ಅಳಿಸುವ ಅಕ್ಕಮ್ಮ ರಾಜಿ ಆಗಲೇ ಇಲ್ಲ. ಈಗ ವರ್ಷಗಳೇ ಸಂದಿದೆ. ಒಂದಗುಳು ಅನ್ನ ತಂದು ತಿಂದು ಗೆದ್ದ ನೆನಪು ನನಗೆ ಹಸಿರಾಗಿದೆ ನಿಜ . ಆದರೆ ತರಗತಿಯವರ ಮುಂದೆ ದಾರುಣವಾಗಿ ಸೋತುಹೋದಾಗ ಆದ ಅಪಮಾನದ ಕಿಚ್ಚು ಹೊತ್ತಿ ಉರಿಯುತ್ತಿದ್ದ, ಬಹುಶ ಇನ್ನೂ ನಂದದ, ಅಕ್ಕಮ್ಮ ಎಲ್ಲಿದ್ದಾಳೆಂದು ತಿಳಿಯದು. ಕೇರಳದ ಕಾಸರಗೋಡಿನಿಂದ ಹುಟ್ಟೂರಿಗೆ ಹೋಗುವ ಸಂದರ್ಭಗಳಲ್ಲಿ ಅವಳ ಹುಟ್ಟಿದ ಮನೆಯ ಕಡೆಯಿಂದ ಸಾಗಿ ಹೋಗುವಾಗ ಹೆಜ್ಜೆಗಳು ನಿಧಾನವಾಗಿ ತಡೆಯುತ್ತವೆ. ನನ್ನ ಪುಟ್ಟ ಸುಂದರಿ ಸ್ನೇಹಿತೆಯ ಮನೆಗೊಮ್ಮೆ ಹೋದರೇನು ಅನ್ನಿಸಿದರೂ ಧೈರ್ಯ ಸಾಲದು.
ಕೃಷ್ಣವೇಣಿ ಕಿದೂರ್