ಹಸಿರ ನಾಡಲ್ಲಿ, ಕಾಫೀ ಘಮದಲ್ಲಿ, ಸುರಿವ ತುಂತುರು ಮಳೆಯಲ್ಲಿ, ಬೀಳೋ ಮಂಜು ಹನಿಗಳ ಜೊತೆ ಆಟವಾಡೋ ತವಕದಲ್ಲಿ.
ಎಲ್ಲವೂ ಇದೆ ಈ ಊರಲ್ಲಿ. ಖುಷಿಯಾದಾಗ ಕುಣಿಯೋಕೆ, ಬೇಜಾರಾದಾಗ ಸುಮ್ಮನೇ ಕೂರೋಕೆ, ಪ್ರಶಾಂತವಾಗಿ ಮನದೊಟ್ಟಿಗೆ ಮಾತಾಡೋಕೆ, ವಾರಾಂತ್ಯಕ್ಕೊಂದು ಚಂದದ ಅಪ್ಪುಗೆಯ ವಿದಾಯ ಹೇಳೋಕೆ, ಸ್ನೇಹಿತರ ಜೊತೆ ಮಸ್ತಿ ಮಾಡೋಕೆ. ..ಎಲ್ಲಾ ಭಾವಗಳಿಗೂ ಸಾಥ್ ನೀಡೋಕೆ ಬೇರೆ ಬೇರೆಯದೇ ಸ್ಥಳಗಳಿವೆ ಇಲ್ಲಿ ಎಲ್ಲಾ ಭಾವಗಳನ್ನೂ ಅದರದರದೇ ರೀತಿ ಜೋಪಾನ ಮಾಡೋಕೆ. ..ಪ್ರಕೃತಿಯ ಜೊತೆಗಿನ ಒಡನಾಡಿಗಳಿಗೆ ತೀರಾ ಖುಷಿ ಆಗೋ ತರಹದ ಚಂದದ ಪರಿಸರವಿದೆ ಇಲ್ಲಿ, ಕಲೆಯ ಇಷ್ಟಪಡೋ ಕವಿತ್ವದ ಮನಗಳು ಆಸ್ವಾದಿಸಬಹುದಾದ ಕಲಾ ಸಾಮ್ರಾಜ್ಯವಿದೆ ಇಲ್ಲಿ.
ಕಲೆಯ ಇಷ್ಟಪಡದ ವ್ಯಕ್ತಿಯಿಲ್ಲ. ..ಕಲೆಯ ಆಸ್ವಾದಿಸದ ಮನವಿಲ್ಲ. ..ಅದರಲ್ಲೂ ಅಂಚು ಅಂಚಲ್ಲೂ ಕಲಾಕಾರನ ಕಲಾತ್ಮಕ ಮನವೇ ಬಿಚ್ಚಿಕೊಳ್ಳೋ ಬೇಲೂರು, ಹಳೆಬೀಡಿನಂತಹ ಚಂದದ ಕಲೆಯ ಊರಲ್ಲಿ ಎಂತಹ ಜಿಡ್ಡು ಮನಸ್ಸು ಕೂಡಾ ಕಲಾತ್ಮಕತೆಯ ಸೋಗಲ್ಲಿ ಮಿಂದೇಳಲೇ ಬೇಕು. …
ಹೌದು. ಕಲೆಯ ಬೀದಿಯ ಮೆರವಣಿಗೆ ಸಾಗ್ತಿರೋದು ಚಂದದ ಊರಾದ ಬೇಲೂರ ಕಡೆಗೆ.
ಸೇರೋದು ಹಾಸನಕ್ಕಾದ್ರೂ ಚಿಕ್ಕಮಗಳೂರಿನಿಂದ ಬರಿಯ ಅರ್ಧ ಗಂಟೆಯ ಹಾದಿ. ..ಮಾಗಡಿ ಹ್ಯಾಂಡ್ ಪೋಸ್ಟ್ ರಸ್ತೆಯಲ್ಲಿ ಚಂದದ ದಾರಿಯನ್ನ ನೋಡ್ತಾ ಹೋಗ್ತಿದ್ರೆ ಬೇಲೂರು ಬಂದಿದ್ದರ ಅರಿವೂ ಆಗಲ್ಲ. ..ಅಷ್ಟು ಹತ್ತಿರ ಈ ಊರು ಚಿಕ್ಕಮಗಳೂರಿಗೆ. ಇನ್ನು ಬೆಂಗಳೂರಿಗರಿಗೆ ಬರಿಯ ನಾಲ್ಕು ಗಂಟೆಯ ಹಾದಿಯಷ್ಟೆ !.
ಚಿಕ್ಕಮಗಳೂರಿಂದ ೨೪ ಕಿ.ಮೀ ದೂರದಲ್ಲಿರೋ ಬೇಲೂರನ್ನ ನೋಡೋಕೆ ಹೋದುದ್ದು ಸ್ನೇಹಿತರ ಒತ್ತಾಯಕ್ಕೆ.ಆದರೆ ಅವರಷ್ಟು ಒತ್ತಾಯ ಮಾಡದಿದ್ರೆ ಖಂಡಿತ ಹೀಗೊಂದು ಶಿಲ್ಪಕಲೆಗಳ ಊರನ್ನ ನೋಡೋದು ತಡವಾಗ್ತಿತ್ತೇನೋ.
ಬೇಲೂರಿನ ಬಸ್ ಸ್ಟಾಂಡ್ ನಿಂದ ಬರಿಯ ಒಂದೈದು ನಿಮಿಷಕ್ಕೆ ಸಿಗೋ ಬೇಲೂರನಾಥನ ದ್ವಾರ ಕಲೆಯ ಬೀದಿಯ ಸ್ವಾಗತಕ್ಕೆಂದು ತಲೆ ಎತ್ತಿ ನಿಂತಿರುತ್ತೆ.
ಚನ್ನಕೇಶವನ ಸನ್ನಿಧಿಯಲ್ಲಿ ತಲೆಬಾಗಿ ಕುಳಿತರೆ ಕಲೆಯ ಸೊಗಡು ಕಲೆಗಾರನ ಭಾವಗಳೇ ಕಣ್ಣೆದುರು ತೆರೆದಿಟ್ಟಂತೆ ಭಾಸವಾಗುತ್ತೆ.
ಇಡಿಯ ದೇವಾಲಯವ ಬರಿಯ ಕಲ್ಲಿಂದ ಅಷ್ಟು ಚಂದದಿ ಕೆತ್ತೋವಾಗ ನಿಜಕ್ಕೂ ಆಶ್ಚರ್ಯವಾಗುತ್ತೆ.
ಗಟ್ಟಿ ಕಲ್ಲನ್ನೇ ಕೆತ್ತಿ ಇಷ್ಟು ಚಂದದ ಮನ ಮುಟ್ಟೋ ಶಿಲೆಗಳ ಮಾಡೋವಾಗ ಮೃದು ಮನವ ಅದೆಷ್ಟು ಚಂದದಿ ಕೆತ್ತಬಹುದಲ್ವಾ ಅನಿಸಿಬಿಡುತ್ತೆ. ಬೇಲೂರ ದೇವಾಲಯವ ಎದುರು ನಿಂತು ನೋಡೋವಾಗ ಒಂದು ಸಾರ್ಥಕ್ಯ ಭಾವ. ದೊಡ್ಡದಾದ ಪ್ರಾಂಗಣದ ಬುಡದಿಂದ ತುದಿಯ ತನಕ ಬರಿಯ ಕಲೆಯ ಅನಾವರಣ. ಕಲಾಕಾರನ ನಿಪುಣತೆಯೇ ಎದ್ದು ಕಾಣುತ್ತಲ್ಲಿ. ಮೊದಲ ಸಲ ಪ್ರಾಂಗಣವ ನಿಂತು ನೋಡೋವಾಗ ದಂಗು ಬಡೆದಿದ್ದೆ ನಾ. ಅಡಿಯಿರಿಸಿ ಮುಂದೆ ನಡೆದರೆ ಇಡಿಯ ದೇವಾಲಯ ಬರಿಯ ಕಲ್ಲಿಂದ ಮಾಡಿದ್ದು !
ಸುಂದರ ಕೆತ್ತನೆಗಳು ನೋಡುಗರ ಮನದಲ್ಲಿ ಹಾಗೆಯೇ ಅಚ್ಚೊತ್ತಿಬಿಡುತ್ತೆ.
ಎಲ್ಲಾ ಶಿಲೆಗಳಲ್ಲೂ ಏಕತಾನತೆ, ಎಲ್ಲವುಗಳಲ್ಲೂ ವಿಭಿನ್ನತೆ. ಶೃಂಗಾರ ಶಿಲೆಗಳ ಕೆತ್ತನೆಗಳಂತೂ ಎಲ್ಲರೂ ಹುಬ್ಬೇರೋ ತರ ಮಾಡಿಬಿಡುತ್ತೆ. ವಿಧ ವಿಧದ ನಾಟ್ಯ ಭಂಗಿಗಳು. ಎಲ್ಲಾ ಶಿಲೆಗಳ ಮುಖ ಭಾವಗಳು ನೋಡುಗರ, ವೀಕ್ಷಕರಿಗೆ ಅರ್ಥವಾಗೋ ಅಷ್ಟರ ಮಟ್ಟಿಗೆ ಕಲಾಕಾರ ಮಾತಾಡುತ್ತಾನೆ ಇಲ್ಲಿ. ಬಾಲಿಕೆಯರ ನಾಟ್ಯ ಭಂಗಿಗಳ ನೋಡೋವಾಗ ಯಾವುದೋ ನಾಟ್ಯ ಶಾಲೆಯಲ್ಲಿ ಕುಳಿತಿದ್ದೇವೇನೋ ಅಂತನಿಸಿಬಿಡುತ್ತೆ. ಚಂದಾ. ..ಚಂದ. .ಈ ಶಿಲ್ಪಕಲೆಯ ಹಾದಿ.
ನಾ ಬೇಲೂರಿಗೆ ಹೋದಾಗ ತುಂತುರು ಮಳೆಯಾಗುತ್ತಿತ್ತು. ಮಳೆಯಿಂದಲೇ ಏನೋ ಪ್ರಾಂಗಣ ಇನ್ನೂ ಸುಂದರ ಅನಿಸಿದ್ದು.ಒದ್ದೆಯಾದ ಮಳೆಯಲ್ಲಿ ಕಲೆಯ ಬೀದಿಯ ಒಂದಿಷ್ಟು ಭಾವಗಳು ಹಸಿ ಹಸಿಯಾಗಿ ಮಣ್ಣ ಗಂಧದಲ್ಲಿ ತೇಯ್ದು ಒದ್ದೆ ಮುದ್ದೆಯಾಗಿದ್ದಂತೂ ಸುಳ್ಳಲ್ಲ.ಈ ಶಿಲೆಗಳಲ್ಲಿ ಪ್ರೀತಿಯಿದೆ, ಕರುಣೆಯಿದೆ, ಸಂತಾಪವಿದೆ, ಗಟ್ಟಿತನವಿದೆ, ಇಷ್ಟವಾಗೋ ಭಂಗಿಗಳಿವೆ, ನಾಟ್ಯವಿದೆ, ಗಂಭೀರತೆಯಿದೆ..ಹಮ್ಮು, ಬಿಮ್ಮು ಎಲ್ಲಾ ಇದೆ…
ಒಟ್ಟಿನಲ್ಲಿ ಕಲ್ಲಿನಲ್ಲೊಂದು ಜೀವವಿದೆ ಅನ್ನೋ ಮಟ್ಟಿಗಿದು ಜೀವಂತವಾಗಿದೆ.
ಯಾವಾಗಲೂ ಪ್ರವಾಸಿಗರ ದಂಡೇ ತುಂಬಿರುತ್ತಿಲ್ಲಿ. ಪ್ರವಾಸಿಗರಿಗೆ ಪ್ರೀತಿಯ ಸ್ವಾಗತ ಕೋರಿ, ಆತ್ಮೀಯವಾಗಿ ನಕ್ಕು ಇಡಿಯ ಬೇಲೂರ ಪರಿಚಯ ಮಾಡಿಸೋಕಂತಾನೇ ಅದೆಷ್ಟೋ ಗೈಡ್ ಗಳು ಕೈ ಕಟ್ಟಿ ನಿಂತಿರುತ್ತಾರಲ್ಲಿ. ಅವರುಗಳಿಗೆ ಈ ಕಲ್ಲಿನ ಕಥೆ ಹೇಳೋದ್ರಲ್ಲೆ ಜೀವನ ಸಾಗುತ್ತಂದ್ರೆ ನೀವಲ್ಲಿ ಬರೋ ಪ್ರವಾಸಿಗರ ಸಂಖ್ಯೆಯ ಲೆಕ್ಕ ಹಾಕ ಬಹುದು. ಅವರಿಗೆಲ್ಲ ಬೇಲೂರಿನ ಇಂಚಿಂಚೂ ಪರಿಚಯವಾಗಿ ಬಿಟ್ಟಿದೆ.ದಂಡಿಯಾಗಿ ಬರೋ ವಿದೇಶಿಯರಿಗೆ ತಲುಪೋ ತರದಿ ಭಾರತ ಇತಿಹಾಸ ತೆರವಿಡೋ, ಆಮೇಲೆ ಅವರುಗಳೂ ಹುಬ್ಬೇರಿಸಿ ಇಲ್ಲಿಯ ಕಲೆಯ ಪ್ರೀತಿ ಸಂಸ್ಕೃತಿಗಳ ಹೊಗಳಿಯೇ ಹೋಗೋ ತರ ಮಾಡೋ ಈ ಗೈಡ್ ಗಳ ನೋಡೋವಾಗ ನಿಜಕ್ಕೂ ಹೆಮ್ಮೆಯನಿಸುತ್ತೆ. ಪ್ರತಿಯ ಕಲ್ಲಿಗೂ ಒಂದು ಕಥೆಯಿದೆ ಅಲ್ಲಿ. ..ಹೇಳೋಕೆ ಹೋದ್ರೆ ಮುಗಿಯದ ಕಥೆಯಾಗಿಬಿಡುತ್ತಿಲ್ಲಿ 🙂 ನೀವಲ್ಲಿ ನಿಂತು ಅದ ನೋಡಿ ಇತಿಹಾಸವ ಕೇಳಿದಾಗ ಮಾತ್ರ ಅರಿವಿಗೆ ಬರುತ್ತೇನೋ ಈ ಚಂದದ ಕಲೆಯ ಊರಿನ ಕಥೆ.
ಮಧ್ಯಾಹ್ನ ಊಟಕ್ಕಂತ ಬೇಲೂರಿನ ಹೋಟೆಲ್ ಒಂದು ಸ್ವಾಗತಿಸುತ್ತಿತ್ತು. ..ಹೋಗಿ ಊಟಕ್ಕೆ ಕುಳಿತರೆ ಅಲ್ಲಿಯೂ ಮುಗುಳ್ನಕ್ಕು ಸ್ವಾಗತಿಸೋ ಜನ ! ಎಲ್ಲರೂ ಆತ್ಮೀಯರನಿಸಿಬಿಡುತ್ತಾರಿಲ್ಲಿ.ಬೇಲೂರು ಅಷ್ಟು ದೊಡ್ದ ಊರಲ್ಲದಿದ್ರೂ ವ್ಯವಸ್ಥಿತ ವ್ಯವಸ್ಥೆಗಳೆಲ್ಲವೂ ಇದೆ ಇಲ್ಲಿ. ಪ್ರವಾಸಿಗರಿಗೆ ಯಾವುದೇ ಕೊರತೆಯಾಗದ ರೀತಿ ಸಲಹೋ ಮನಸ್ಸಿದೆ ಇವರುಗಳಿಗೆ. ಹೋಗಿಬನ್ನಿ ನೀವೂ ಒಮ್ಮೆ, ಕಲೆಯ ರಥ ಬೀದಿಯಲ್ಲಿ ಭಾವಗಳ ಝೇಂಕಾರವಾದೀತು. ..
ಬೇಲೂರಿನ ಕಲಾಕಾರನ ಭಾವಗಳಲ್ಲಿ ಮಿಂದೆದ್ದ ಮನ ಹೊರಟಿದ್ದು ಹಳೆಬೀಡಿನ ಕಲೆಯ ಬೀದಿಯ ಕಡೆಗೆ. ಬೇಲೂರಿನಿಂದ ೨೨ ಕಿ.ಮೀ ಹಾದಿಯಷ್ಟೇ. .ಹಳೆಬೀಡು ಸೇರೋದು ಹಾಸನಕ್ಕೆ.ಹೀಗಾಗಿ ಕಾಫೀ ನಾಡಿನ ಹಂಗಿಲ್ಲ ಇದಕ್ಕೆ. ಬೇಲೂರಿಂದ ಬೇಕಾದಷ್ಟು ಬಸ್ ಗಳಿವೆ ಹಳೆಬೀಡ ಕಡೆಗೆ. ಅರ್ಧ ಗಂಟೆಯ ಹಾದಿಯಲ್ಲಿ ಮತ್ತೆ ಸಿಕ್ಕಿದ್ದು ಹಳೆಬೀಡನ್ನೋ ಮತ್ತದೇ ಕಲೆಯ ಊರು. ಬಸ್ ಇಳಿದು ಎದುರು ನೋಡಿದರೆ ಕಾಣೋ ಗುಹಾಂತರದಂತಹ ದೇವಾಲಯ ಕೈ ಬೀಸಿ ಕರೆದಂತೆ ಭಾಸ.
ಬೇಲೂರಿಗಿಂತಲೂ ದೊಡ್ಡದಾದ ಹಸಿರ ಪ್ರಾಂಗಣವಿದೆ ಇಲ್ಲಿ. ಕುದುರೆ, ಆನೆ, ಸಿಂಹ ದಳಗಳು ಇಡಿಯ ದೇವಾಲಯವ ಸುತ್ತುವರೆದು ಭದ್ರ ಮಾಡಿದೆಯೇನೋ ಅನಿಸುತ್ತೆ ಇಡಿಯ ದೇವಾಲವ ನಾಲ್ಕು ಸಾಲಿನಲ್ಲಿ ಸುತ್ತುವರೆದಿರೋ ಆ ಕಲ್ಲಿನ ದಳಗಳ ನೋಡೋವಾಗ.ಇಲ್ಲೂ ಬೇಲೂರಿನ ತರಹವೇ ಆತ್ಮೀಯವಾಗಿ ಸ್ವಾಗತಿಸೋ ಗೈಡ್ ಗಳು. ಆದರೆ ಬರಿಯ ನಾಟ್ಯ ಭಂಗಿಗಳು ಮಾತ್ರವಲ್ಲದೇ ಇಡಿಯ ರಾಮಾಯಣ, ಗಣಪತಿ, ಶಿವ ಪಾರ್ವತಿಯರ ಭಾವಗಳೆಲ್ಲವೂ ಅನಾವರಣಗೊಂಡಿದೆ ಇಲ್ಲಿ.
ಎಲ್ಲಾ ಕೆತ್ತನೆಗಳಲ್ಲೂ ವಿಭಿನ್ನತೆಯಿದೆ.ಏಕಸ್ಥಾಯಿಯ ಭಾವವಿದೆ.
ಹೀಗೊಂದು ಚಂದದ ಊರಿನ ಕಲೆಯ ಸ್ವಾದವ ಸವಿಯ ಬಂದ ಪೂರ್ತಿ ಖುಷಿ ನಂಗಾಗಿತ್ತವತ್ತಲ್ಲಿ.
ದೇವಾಲಯದ ಎಡಭಾಗದಲ್ಲಿರೋ ಎರಡು ಬೃಹತ್ ನಂದಿಗಳು ಶಿವನಿಗೆ ತಲೆಬಾಗಿ ಕುಳಿತಂತೆ ಅನಿಸುತ್ತಿಲ್ಲಿ. ಭಾರತ ೬ ಮತ್ತು ೭ನೇ ಬೃಹತ್ ನಂಗಿಗಳಂತೆ ಇಲ್ಲಿರೋ ನಂದಿಗಳೆರಡೂ. . ಆಭರಣ ಪ್ರಿಯೆ ಶಕುಂತಲೆಗೆ ಇವಂದ್ರೆ ತೀರಾ ಇಷ್ಟವಂತೆ. ಹಾಗಾಗಿಯೇ ಏನೋ ಇವು ಸರ್ವಾಲಂಕಾರವಾಗಿ ಕುಳಿತುಕೊಂಡಿವೆ ಇಲ್ಲಿ. ಪಾದಕ್ಕೆ ಹಾಕೋ ಆಭರಣದಿಂದ ಹಿಡಿದು ತಲೆಯ ತುದಿಯ ತನಕ ಇರೋ ಸಣ್ಣ ಸಣ್ಣ ಆಭರಣಗಳನ್ನೂ ಬಿಡದೇ ಅಲಂಕರಿಸಿರೋ ಕಲೆಯ ಈ ಮನಸ್ಸಿಗೊಂದು ನಮನ ಹೇಳಲೇಬೇಕನಿಸಿಬಿಡುತ್ತೆ. ಅದೆಷ್ಟು ಸ್ವಾಭಾವಿಕವಾಗಿ ಈ ನಂದಿಗಳೆರಡೂ ಕುಳಿತಿವೆ ಅಂತನಿಸೋ ಅಷ್ಟರ ಮಟ್ಟಿಗೆ ಕೆತ್ತಲಾಗಿದೆ ಇವುಗಳ.
ಇಷ್ಟವಾಗಲೇ ಬೇಕು ಇಲ್ಲಿಯ ಸೊಗಡು, ಒನಪು, ವೈಯಾರಗಳೆಲ್ಲವೂ. .. ಇನ್ಯಾವುದೋ ಮೂಲೆಯಲ್ಲಿ ಶಿವ ಪಾರ್ವತಿಯರ ಹೊತ್ತ ನಂದಿಯ ಮುಖದಲ್ಲೊಂದು ಅಸಹನೆಯ ಸಿಟ್ಟು ಅನಾವರಣವಾಗಿದೆ. .ಯಾಕೆಂದು ಕೇಳಿದಾಗ ಗೆಳೆಯ ಹೇಳಬಂದಿದ್ದು ಹೀಗೆ. .ನಂದಿ ಬರಿಯ ಶಿವನ ವಾಹನ. ಅದಕ್ಕಾಗಿ ಪಾರ್ವತಿಯ ಕುಳಿಸಿಕೊಂಡಿರೋ ಶಿವನಲ್ಲಿ ನಂದಿಯ ಅಸಮಾಧನವಂತೆ ಅದು. ಹೀಗೇ ಏನೇನೋ ಸಣ್ಣ ಸಣ್ಣ ಭಾವಗಳನೂ ಬಿಡದೇ ರವಾನಿಸಿಬಿಡುತ್ತೆ ಇಲ್ಲಿರೋ ಒಂದೊಂದೂ ಕಲ್ಲಿನ ಮೂರ್ತಿಗಳು. ಇಲ್ಲಿ ಯಾವುದನ್ನೂ ಅಲ್ಲಿಯೇ ಕುಳಿತು ಕೆತ್ತಿಲ್ಲ. ಎಲ್ಲೋ ಮಾಡಿ.
ದೇವಾಲಯದ ಒಳಗಡೆ ಎರಡು ದೇವರ ವಿಗ್ರಹಗಳಿವೆ. .ಒಳಗಡೆಯೂ ಪ್ರತಿ ಕಲ್ಲೂ, ಪ್ರತಿಯ ವಿಗ್ರಹವೂ ಒಂದೊಂದು ಕಥೆಯ ರುವಾರಿಯಾಗಿದೆ. ಖುಷಿ ಅನುಸುತ್ತಿಲ್ಲಿ. ದೇವಾಲಯದ ಎಡಕ್ಕೆ ದೊಡ್ಡದಾದ ಕೆರೆಯಿದೆ. ಸುತ್ತ ಮುತ್ತಾ ಹಸಿರಿದೆ. ಪ್ರಶಾಂತತೆಯಿದೆ.
ಮನ ಖುಷಿಸುತ್ತಿಲ್ಲಿ. ಇತಿಹಾಸವ ಇಷ್ಟ ಪಡೋರಿಗೆ, ಅದರಲ್ಲಿ ಆಸಕ್ತಿ ಇರೋರಿಗಿದು ಒಂದು ವ್ಯಾಸಂಗ ಸ್ಥಳವೂ ಹೌದು.ಬೇಲೂರ ಶಿಲಾಬಾಲಿಕೆಯರ ನೋಡಿ, ಹಳೆಬೀಡ ನೆಲದಲ್ಲಿ ಕಲೆಯ ಆಸ್ವಾದಿಸಿ ಅಂತೂ ಆ ದಿನಕ್ಕೊಂದು ಹೊಸ ಮೆರಗು.
ಹಳೆಬೀಡಿನ ಬ್ಲಾಗ್ ಗೆಳೆಯನ ಪ್ರೀತಿಯ ಒತ್ತಾಯಕ್ಕೆ ಮುಂದಿನ ಪಯಣ ಅವನ ಮನೆಗೆ ಸಾಗಿತ್ತು ಅವತ್ತು. ಅಮ್ಮನ ಆತ್ಮೀಯ ಸತ್ಕಾರಕ್ಕೆ ಮನ ಮೂಕಗೊಂಡಿತ್ತು ಅಲ್ಲಿ.
ಆದರೂ ನೋಡೋಕೆ ಇನ್ನೂ ಜಾಗಗಳಿವೆ ನಮ್ಮೂರಲ್ಲಿ ಅಂದಿದ್ದ ಗೆಳೆಯ. ಅವತ್ಯಾಕೋ ಎಲ್ಲಾ ಜಾಗಗಳ ನೋಡೋಕೆ ಆಗಿರಲಿಲ್ಲ. .ಹೋಗಬೇಕು ಮತ್ತೊಮ್ಮೆ ಈ ಕಲೆಯ ಊರಿಗೆ.
ಕಲೆಯ ಉಣಬಡಿಸೋ, ಕಲಾರಸಿಕರ ಮನ ತೃಪ್ತಗೊಳಿಸೋ ಈ ಕಲೆಯ ಊರುಗಳಲ್ಲಿ ನಿಮ್ಮದೂ ಒಂದು ಸುತ್ತಿರಲಿ. ..ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ ಈ ಸ್ಥಳ.
ಕಲಾ ಸೇವೆಯ ಅದೆಷ್ಟೋ ಜನರಿಗಿದು ಉತ್ತೇಜನ ಕೊಟ್ಟಂತಾಗುವುದು. ವಾರಾಂತ್ಯ ಬೇಜಾರು ಅಂತ ಕುರುಬೋ ಜನರಿಗಿದು ಒಂದು ಒಳ್ಳೆಯ ಸ್ಥಳ ಪರಿಚಯ. ಕಲಾರಾಧನೆಯ ಸ್ವಾದ, ಕಲೆಯ ಬೆಳೆಸೋ ಮಂದಿಗಿದು ಪ್ರಚೋದನೆ ಕೊಟ್ಟಂತಾಗುವುದು.
ಬರಿಯ ಕಲ್ಲಿನಲ್ಲಿ ಒಂದೊಂದು ಕಥೆಯ ಹೇಳೋ ಕಲೆಯ ಊರನ್ನ ನಾ ನೋಡಿರೋ, ಅನುಭವಿಸಿರೋ ಭಾವಗಳ ಗುಚ್ಚವಿದು.
ಈ ಕಲೆಯಲ್ಲಿ ಪ್ರೀತಿಯಿದೆ. . ಆಸ್ಥೆಯಿದೆ. .ಬೆಳೆಸೋ, ಬೆಳಗಿಸೋ ಶಕ್ತಿಯಿದೆ.ಹೀಗೊಂದು ಚಂದದ ಕಲೆಯ ಬೀಡು ಕನ್ನಡಿಗರಿಗೆ ದಕ್ಕಿದೆಯಲ್ಲ ಅನ್ನೋ ಖುಷಿ.
ಮಾತು ಧಾತುವಿನ ಸಮ್ಮಿಲನದಲ್ಲಿ, ಕಲೆಯ ಬೀಡಿನ ಒಳಗಿನ ಸಂಭ್ರಮದಲ್ಲಿ ಕಳೆದು ಹೋಗಿ. ..ಮನ ಸ್ಮೃತಿ ಎಲ್ಲವೂ ಮೂಕ.
ಆಮೇಲೆ ಮೂಡೋದು ಆಶ್ಚರ್ಯ ಮಾತ್ರ
ಯಾವುದೇ ತೊಂದರೆಗಳಿಲ್ಲದೇ ಆರಾಮಾಗಿ ನೋಡಿ ಬರೋ ಈ ಸ್ಥಳ ನೋಡಿರೋ, ಸಂತಸ ಪಟ್ಟಿರೋ ಖುಷಿಯ ಪಾಲಿನೊಂದಿಗೆ
ಬೇಲೂರು, ಹಳೆಬೀಡಿನಂತಹ ಕಲೆಯ ಬೀದಿಯಲ್ಲಿ ನೀವೂ ಓಡಾಡಿ, ಅನುಭವಿಸಿ, ಖುಷಿಸಿ, ವ್ಯವಹರಿಸಿ ಭಾವಗಳ ಝೇಂಕರಿಸಿ ಬನ್ನಿ ಅನ್ನೋ ಆಶಯದೊಂದಿಗೆ. ….
-ಭಾಗ್ಯಾ ಭಟ್.
****
ಬೇಲೂರು ದರ್ಶನ ಇಷ್ಟ ಆತು ಭಾಗ್ಯ 🙂 ನೀವಂದ ಬ್ಲಾಗ್ ಗೆಳೆಯ ಬೇಲೂರಿಗೆ ಬಂದಿದ್ದ ಮಕ್ಕಳ ಸೈನ್ಯಕ್ಕೊಂದು ಚೆಂದದ, ತಾಳ್ಮೆಯ ಗೈಡೂ ಆಗಿದ್ದ ತಿಂಗಳ ಹಿಂದೆ.. ಅವನ ಮತ್ತವನ ಮನೆಯವರ ಆತಿಥ್ಯಕ್ಕೊಂದು ಸಲಾಂ 🙂
Hi Bhagya,
Chennaagide pravaasa kathana, mon-monne belur halebeedu nodikondu bandvi. Namma naadina adbuthagalalli idoo ondu. Nimma prati vaaykyavu sathya 🙂 Ishtavaaythu baraha saha.
ನಾನು ಇವತ್ತು ಓದಿದೆ… ತುಂಬಾ ಚೆನ್ನಾಗಿದೆ ಬರಹ. ನಿಮ್ಮ ಬರಹದ ಕೃಷಿ ಹೀಗೆ ಮುಂದುವರೆಯಲಿ.