ಚುನಾವಣಾ ಸಂದರ್ಭ ಕಲಾವಿದರ ಕಲೆಯ ಮಾನ ಮಾರಣ ಹೋಮ. ಇದು ಇತ್ತೀಚೆಗೆ ಚಿಂತನೆಗೀಡು ಮಾಡಿದ ವಿಷಯ. ಕಲಾವಿದ ಎಂದು ಗುರುತಿಸಿಕೊಂಡ ಮೇಲೆ ರಾಜಕೀಯಕ್ಕೆ ಬರಬಾರದು. ಇದು ನನ್ನ ಅಪೇಕ್ಷೆ. ಕಾರಣ ಇಷ್ಟೆ, ಹಲವಾರು ರಾಜಕೀಯ ಪಕ್ಷಗಳು ಭಿನ್ನ ವಿಭಿನ್ನವಾದ ಆಶೋತ್ತರಗಳನ್ನು ಇಟ್ಟುಕೊಂಡು ಗುಂಪುಗಾರಿಕೆಯ ಚಟುವಟಿಕೆ, ಹೀಯ್ಯಾಳಿಕೆ, ಕಾಲೆಳೆಯುವುದು, ತಮ್ಮತನವನ್ನು ತಾವು ಹೊಗಳಿಕೊಳ್ಳುವುದು, ಇತರರನ್ನು ತೆಗಳುವುದು. ಒಳಗಿಂದೊಳಗೆ ಆಮಿಷಕ್ಕೊಳಗಾಗುವುದು ಹೀಗೆ ರಾಜಕೀಯದಲ್ಲಿ ಎಲ್ಲವೂ ಸರಿ. ರಾಜಕೀಯ ಅಂದ್ರೆ ಹೀಗೇನೆ, ಒಪ್ಪೋಣ ಆದರೆ ರಾಜಕೀಯಕ್ಕೆ ಕಲಾವಿದರ ಪ್ರವೇಶ ಎಷ್ಟರ ಮಟ್ಟಿಗೆ ಸರಿ. . ?
ಸಣ್ಣ ಕಲಾವಿದ ಆದ್ರೇನೂ, ದೊಡ್ಡ ಕಲಾವಿದ ಆದ್ರೇನು.? ಕಲಾವಿದ ಅವ ಕಲಾವಿದನೆ. ಇದರಲ್ಲಿ ಎರಡು ಮಾತಿಲ್ಲ. ಎಲ್ಲರೂ ಒಪ್ಪುವಂಥ ಮಾತು. ಸಾಹಿತಿಗಳನ್ನ ಬಿಡಿ ಅವರು ಆದಿಕವಿ ಪಂಪನಾದಿಯಾಗಿ ಸಾಹಿತ್ಯದಲ್ಲಿ ಇಂದಿನವರೆಗೂ ರಾಜಕೀಯ ಪ್ರಜ್ಞೆ ದಟ್ಟ-ದಿಟ್ಟ ಅಂತ ಅಂದು ಬಾಯ್ ಬಿಟ್ಟೋರು ಇಂದಿಗೂ ತೆರೆದೇ ಇದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದವರೆಗೂ ಹೆಸರು ಮಾಡಿದವರೂ, ಹಾಗೆಯೇ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡವರೂ ಇದ್ದಾರೆ. ಆದರೆ ಅವರನ್ನೇ ನೆಚ್ಚಿಕೊಂಡ ಪುಡಿ ಕಲಾವಿದರ ಪಾಡೇನು ಸ್ವಾಮಿ..? ಸ್ವಲ್ಪ ಯೋಚನೆ ಮಾಡಿ. ಕಲಾವಿದರು ಶ್ರೇಷ್ಠ ಕೃತಿಗಳನ್ನು ಆಧರಿಸಿ, ಕಲಾವಿದರನ್ನು ಒಟ್ಟುಗೂಡಿಸಿ, ತಿಂಗಳಾನುಗಟ್ಟಲೆ ತಾಲೀಮು ಮಾಡಿ, ಪ್ರದರ್ಶನಕ್ಕೆ ಸಿದ್ಧತೆ ನಡೆಸಿಕೊಂಡು ಒಬ್ಬ ದೊಡ್ಡ ಸಾಹಿತಿಯ ಹೆಸರು ಹೇಳಿಕೊಂಡು, ಅಥವಾ ನಾಟಕ ಮಾಡಿಕೊಂಡು ಸಹಾಯ ಮಾಡಿ ಅಂತ ಹೋದ್ರೆ, ನೆಚ್ಚಿಕೊಂಡ ಸರ್ಕಾರ ಇದ್ದರೇ ಸರಿ, ಇಲ್ಲದೇ ಹೋದರೆ.? ಖಂಡಿತಾ ಹೊಟ್ಟೆಗೆ ತಣ್ಣೀರು ಬಟ್ಟೆನೇ ಗತಿ. ಅಲ್ಲಿಗೆ ಕಲಾವಿದನ ಶ್ರಮ ಠುಸ್ಸಾಗುತ್ತದೆ. ತಿದ್ದಿತೀಡಿ ಬುದ್ಧಿವಾದ ಹೇಳುವ ಧಮ್ಮು ನಮಗಿಲ್ಲ. ಯಾಕೆ ಅಂದರೆ ನಾವಿನ್ನೂ ಸಣ್ಣವರು. ಪ್ರಗತಿಪರ ಚಿಂತಕ, ದಾರ್ಶನಿಕ ಬಸವಣ್ಣನವರ ಮಾತಿನಂತೆ ಎನಗಿಂತ ಕಿರಿಯರಿಲ್ಲ ಅಂತ ನಿಮ್ಮಾದಿಯಾಗಿ ಗಟ್ಟಿಯಾಗಿ ಹೇಳುವವರು ನಾವು. ಸಮಾಜದ ಅಂಕು ಡೊಂಕುಗಳನ್ನು ಸಾಹಿತ್ಯದ ಮೂಲಕವೋ, ಮಾತಿನ ಮೂಲಕವೋ, ಮಾಧ್ಯಮದ ಮೂಲಕವೋ ತಿದ್ದುವ ಅಪಾರ ಬುದ್ಧಿಯನ್ನು ದೇವರು ಕೊಟ್ಟ ಅನ್ನೋದು ಇರಲಿ, ಅದು ನೀವು ಪಟ್ಟ ಶ್ರಮದ ಪ್ರತಿಫಲ ಎಂಬುದು ನಿಮ್ಮ ಗಮನದಲ್ಲಿರಲಿ.
ಕಲಾವಿದರ ಮೂಲಕ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದು ಪೂರ್ವ ಕಾಲದಿಂದ ನಡೆಸಿಕೊಂಡು ಮತ್ತು ರೂಢಿಸಿಕೊಂಡು ಬಂದಿರುವ ಪದ್ಧತಿ. ಪೂರ್ವ ಕಾಲದಲ್ಲೂ ತನ್ನ ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರಕ್ಕೆ ಧಕ್ಕೆಯಾಗದಂತೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದವರು ಅನೇಕರಿದ್ದಾರೆ. ಆದರೆ ಇಂದು ತನಗೆ ಆಗದವರನ್ನು ದೂರವಿಟ್ಟು, ಆಗುವವರಿಗೆ ಹಚ್ಚಿಕೊಟ್ಟು ತನ್ನ ಪರನೊಡಗೂಡಿ ಇರುವ ಸ್ಥಾನವನ್ನು ಉಳಿಸಿಕೊಳ್ಳುವ ಅವಕಾಶವಾದಿಗಳಿಗೆ ನಮ್ಮಲ್ಲಿ ಕೊರತೆ ಎಂಬುದಿಲ್ಲ.
ಆಧುನಿಕ ಕಲಾ ಜಗತ್ತಿನ ಕಲಾವಂತಿಕೆಯ ಬಣ್ಣದ ಬದುಕಿನ ಸಿಹಿಯನ್ನು ಕೆಲವು ರಾಜಕೀಯ ಸಂಘಟನೆಗಳು ಹೀರಿಕೊಂಡು ಕಬ್ಬಿನ ಸಿಪ್ಪೆಯಂತೆ ಬಿಸಾಡುವುದು ರೂಢಿಯಾಗಿಬಿಟ್ಟಿದೆ. ಬಹುತೇಕ ಕಲಾವಿದರಿಗೆ ಬಹುಪಾಲು ಕಲಾವಂತಿಕೆಯ ಬದುಕಿನ ನೋವು ನಲಿವುಗಳ ಅರಿವು ಗೊತ್ತೇ ಇರುತ್ತದೆ. ಆ ನೋವುಗಳು ಮತ್ತೊಬ್ಬರಿಗೆ ಅರ್ಥವಾಗುವುದು ಕಷ್ಟ. ಯಾಕೆಂದರೆ ರಂಗದ ಮೇಲೆ ಅಭಿನಯಿಸುವ ವ್ಯಕ್ತಿ ಎಷ್ಟೋ ಕಷ್ಟ ಸುಖಗಳನ್ನು ದಾಟಿ ರಂಜಿಸಲು ತನ್ನನ್ನು ತಾನು ವೇದಿಕೆಗೆ ಅರ್ಪಿಸಿಕೊಂಡಿರುತ್ತಾನೆ. ಆದರೆ ಬೇರೆಯವರ ನೋವು ನಲಿವುಗಳು ನಮಗೆ ಸರಿಹೊಂದುತ್ತವೆಯೇ ಎಂಬುದನ್ನು ಗೊತ್ತು ಪಡಿಸಿಕೊಳ್ಳಬೇಕು. ಕಲಾವಿದರ ಕಷ್ಟ ಸುಖ ಅದೇನಿದ್ದರೂ ನೋಡಿ ಮಜಾ ತಗಳ್ಳೋದು, ಚಪ್ಪಾಳೆ ತಟ್ಟೋದು. ಈ ಚಪ್ಪಾಳೆಯಿಂದಲೇ ಕಲಾವಿದ ಸಂತುಷ್ಟನಾಗುತ್ತಾನೆ. ಚಪ್ಪಾಳೆ ಹೊಟ್ಟೆ ತುಂಬಿಸುತ್ತಾ.? ಎಷ್ಟೋ ಜನ ಕಲಾವಿದರು ಹೊಟ್ಟೆಗೆ ಹಿಟ್ಟಿಲ್ಲದೆ, ಸೂರಿಲ್ಲದೆ ಕೊನೆಗೆ ತನ್ನವರನ್ನೂ ಬಿಟ್ಟು ದೇಶಾಂತರ ಹೋದವರೆಷ್ಟೋ. ಅದು ಲೆಕ್ಕಕ್ಕಿಲ್ಲ. ಕಲೆಯನ್ನು ಆಸ್ವಾದಿಸಿ ಪ್ರೋತ್ಸಾಹಿಸುವ ಮನಸ್ಸುಗಳು ಕಲಾವಿದರ ಕೈ ಜೋಡಿಸಬೇಕು. ಆಸರೆ ನೀಡಬೇಕು. ಬದುಕು ಕಲ್ಪಿಸಿಕೊಡಬೇಕು. ಇದನ್ನೆಲ್ಲಾ ಬಿಟ್ಟು ಸ್ವಾರ್ಥಕ್ಕೆ ಕಲಾವಿದರನ್ನು ಬಳಕೆ ಮಾಡಿಕೊಂಡು, ಕಲಾವಿದರ ಆಯಸ್ಸು, ವಯಸ್ಸು, ಶ್ರೇಯಸ್ಸು, ಶ್ರಮ ಇವನ್ನೆಲ್ಲಾ ತಗೊಂಡು ನಡುನೀರಲ್ಲಿ ಬಿಟ್ಟು ಕೈತೊಳಕೊಂಡಿರೋ ಬಂಡವಾಳ ಶಾಹಿಗಳಿಗೆ ನಮ್ಮ ದೇಶದಲ್ಲೇನೂ ಕೊರತೆಯಿಲ್ಲ. ಈಗಲಾದರೂ ಎಚ್ಚೆತ್ತು ಶ್ರಮಿಸುವ, ಸಂಘಟಿಸುವ, ಮನೋರಂಜನೆ ನೀಡುವ, ಜಾಗೃತಿ ಮೂಡಿಸುವ, ತಾನು ನೋವುಂಡು ಮತ್ತೊಬ್ಬರನ್ನು ನಗಿಸುವ, ಚಿಂತನೆಗೆ ಹಚ್ಚುವ ಕಲಾವಿದರನ್ನು ಬೆಳೆಸೋಣ. ಕಲೆಯನ್ನು ಉಳಿಸೋಣ. ಕಲೆ ಯಾರ ಸ್ವತ್ತೂ ಅಲ್ಲ, ಕಲಾವಿದ ಯಾರ ಗುಲಾಮನೂ ಅಲ್ಲ ಏನಂತೀರಾ. .?
-ಕೆ.ಪಿ.ಎಮ್. ಗಣೇಶಯ್ಯ