ಇಷ್ಟೆಲ್ಲಾ ಹೇಳಲು ಕಾರಣಗಳಿಲ್ಲದಿಲ್ಲ. ಇತ್ತೀಚೆಗೆ ಪ್ರತಿಷ್ಠಿತವೆಂದು ಭಾರೀ ಹೆಸರು ಮಾಡಿರುವ ವ್ಯವಹಾರ ನಿರ್ವಹಣಾ ಶಾಸ್ತ್ರದ ಕಾಲೇಜೊಂದರ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ನಾನು ಕೇಳಿದ ಹೆಸರಾಂತ ಶಿಕ್ಷಣ ತಜ್ಞರೊಬ್ಬರ ಅದ್ಭುತವಾದ ಭಾಷಣವೊಂದು, ಯಾವುದೇ ಸಾಮಾಜಿಕ ಹೊಣೆಗಾರಿಕೆ ಹಾಗೂ ಬದ್ಧತೆಯಿಲ್ಲದ ಅತಿ ಬುದ್ಧಿವಂತರು ಸಮಾಜದ ಸ್ವಾಸ್ಥ್ಯಕ್ಕೆ ಹೇಗೆ ಮಾರಕವಾಗಬಲ್ಲರೆಂಬುದಕ್ಕೆ ಜ್ವಲಂತ ನಿದರ್ಶನದಂತಿತ್ತು. ಕಾಕತಾಳೀಯವೆಂಬಂತೆ ಅವರೂ ಸಹ ಈ ಮೇಲೆ ಹೇಳಿದ ಆನೆಯ ಕಥೆಯನ್ನೇ ಬಳಸುತ್ತಿದ್ದರು. ಆದರೆ ಅದರ ಹಿಂದಿನ ಉದ್ದೇಶ ಮಾತ್ರ ಒಳ್ಳಯದಿದ್ದಂತೆ ನನಗೆ ತೋರಲಿಲ್ಲ. ಅವರ ಮಾತಿನ ಧಾಟಿ ಹಾಗೂ ಧೋರಣೆ ಹೀಗಿತ್ತು. “ ನೋಡ್ರೀ, ಮನುಷ್ಯನ ಬಾಳಿನಲ್ಲಿ ಏಳಿಗೆ ಮತ್ತು ಯಶಸ್ಸೆನ್ನುವುದು ಮೂಲತಃ ಅವನ ಅನುವಂಶೀಯತೆ, ಕಲಿಕೆ ಹಾಗೂ ಶಿಕ್ಷಣಗಳ ಮೇಲೆ ಅವಲಂಬಿಸಿರುತ್ತದೆ. ನಾವು ಪಿತ್ರಾರ್ಜಿತವಾಗಿ ಪಡೆಯುವ ಅನುವಂಶಿಕ ಬಳುವಳಿಯಲ್ಲಿ ಯಾವುದೇ ಬಾಹ್ಯ ಪ್ರಭಾವಕ್ಕೆ ಅವಕಾಶಗಳೇ ಇರುವುದಿಲ್ಲ. ಇನ್ನು ನಿಮ್ಮ ಕಲಿಕೆಯೆನ್ನುವುದು ನಿಮ್ಮ ಮನೋವೃತ್ತಿಯನ್ನು ಅವಲಂಬಿಸಿರುತ್ತದೆ. ಬಾಲ್ಯದಲ್ಲಿನ ಪೋಷಣೆ ಹಾಗೂ ಪ್ರಾಥಮಿಕ ಶಿಕ್ಷಣಗಳಿಂದ ಈಗಾಗಲೇ ರೂಪುಗೊಂಡಿರುವ ನಿಮ್ಮ ಮನೋವೃತ್ತಿಯನ್ನು ನೀವು ನಿಮ್ಮ ಮನೆಯಿಂದಲೇ ತಂದಿರುತ್ತೀರಿ.
ಈ ಆನೆಯ ದೃಷ್ಟಾಂತದಿಂದ ಈಗಷ್ಟೇ ನಿರೂಪಿಸಿದಂತೆ, ಸಣ್ಣ ಮಗುವೊಂದು ತನ್ನ ಎಂಟನೆಯ ವಯಸ್ಸಿಗೆ ಮುಂಚೆಯೇ ಏಕ ಕಾಲಕ್ಕೆ ಎಂಟು ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಹೊಂದಿದ್ದರೂ, ಸಾಮಾನ್ಯ ಮನುಷ್ಯನೊಬ್ಬನು ತನ್ನ ೨೦ನೇ ವಯಸ್ಸಿನ ನಂತರ ಕೇವಲ ಐದು ಹೊಸ ಪದಗಳನ್ನು ಕೂಡಾ ಕಲಿಯುವುದಿಲ್ಲವಂತೆ! ಹಾಗಿರುವಾಗ, ಪ್ರಿಯ ವಿದ್ಯಾರ್ಥಿಗಳೇ, ಸ್ನಾತಕೋತ್ತರ ಮಟ್ಟದಲ್ಲಿರುವ ನೀವು ನಿಮ್ಮ ಇತಿಮಿತಿಗಳನ್ನು ತಿಳಿದು, ನಿಮ್ಮ ಪ್ರಾಧ್ಯಾಪಕರುಗಳ ಅಸಹಾಯಕತೆಯನ್ನೂ ಅರ್ಥ ಮಾಡಿಕೊಳ್ಳಬೇಕಲ್ಲವೇ? ಅಲ್ಲದೇ ನಿಮ್ಮ ಉನ್ನತ ಶಿಕ್ಶಣದ ಈ ಹಂತದಲ್ಲಿ, ನಿಮ್ಮ ಕಲಿಕೆ ಹಾಗೂ ಶಿಕ್ಷಣದ ವಿಷಯದಲ್ಲಿ ಹೆಚ್ಚೇನೂ ನಿಯಂತ್ರಣ ಹೊಂದಿರದ ಶಿಕ್ಶಕ ವೃಂದದಿಂದಾಗಲೀ, ಶಿಕ್ಷಣ ಸಂಸ್ಥೆಯಿಂದಾಗಲೀ ಪವಾಡಗಳನ್ನು ನಿರೀಕ್ಷಿಸುವುದು ಮೂರ್ಖತನವಾದೀತಲ್ಲವೇ?” ಎಂದು ಜಾಣ್ಮೆಯಿಂದ ಎಲ್ಲಾ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಆ ವಾಗ್ಮಿಯ ವಾದ ವೈಖರಿಯನ್ನು ಕಂಡು ಹೌಹಾರಿದೆ. ಲಕ್ಷಾಂತರ ಶುಲ್ಕ ತೆರುವುದಲ್ಲದೇ ಅದಕ್ಕೆ ಪ್ರತಿಫಲವನ್ನು ನಿರೀಕ್ಷಿಸುವುದೇ ಮೂರ್ಖತನವೆನ್ನುವ ಧೂರ್ತತನವನ್ನು ಕಂಡು ಬೇಸರವಾಯಿತು. ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಗಳಿಸುವ ತಾರುಣ್ಯಾವಸ್ಥೆಯ ವಯಸ್ಸು, ನಿಜಕ್ಕೂ ಮಕ್ಕಳ ಇಡೀ ವ್ಯಕ್ತಿತ್ವಕ್ಕೆ ಪುಟವಿಟ್ಟು ಮೆರುಗು ಕೊಡಬೇಕಾದ ಸಮಯ. ಅದನ್ನು ಮಾಡುವುದನ್ನು ಬಿಟ್ಟು ಈ ಮಂದಿ ಎಷ್ಟು ಅರ್ಥಗರ್ಭಿತ ದೃಷ್ಟಾಂತವನ್ನು ಹೀಗೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರಲ್ಲಾ ಎಂದು ಖೇದವೆನಿಸಿತು. ಒಬ್ಬ ಶಸ್ತ್ರ ಚಿಕಿತ್ಸಾತಜ್ಞನ ಕೈಯ್ಯಲ್ಲಿದ್ದರೆ ಒಂದು ಜೀವವನ್ನು ಉಳಿಸಬಲ್ಲ ಚಾಕುವೊಂದು ಪಾತಕಿಯ ಕೈ ಸೇರಿದರೆ ಒಂದು ಜೀವವನ್ನು ತೆಗೆಯಲು ಬಳಕೆಯಾಗುವುದೆಂಬ ಮಾತು ನೆನಪಾಯಿತು. ಇಲ್ಲಂತೂ ತೀರ ಪಾತಕಿಯು ವೈದ್ಯನ ಪೋಷಾಕಿನಲ್ಲಿ ಬೇರೆ ನಿಂತುಬಿಟ್ಟಿದ್ದಾನೆ!, ಇನ್ನು ತಪ್ಪಿಸಿಕೊಳ್ಳುವ ಪರಿಯೇ ಇಲ್ಲವೇನೋ ಎಂದೆನಿಸಿ ವ್ಯಥೆಯಾಯಿತು.
ಮೊನ್ನೆ ಬೆಳಗ್ಗೆ, ಈಗಷ್ಟೇ ಫಸ್ಟ್ ಕ್ಲಾಸಿನಲ್ಲಿ ಎಂಬೀಯೇ ಮುಗಿಸಿದ್ದ ನೆರೆಮನೆಯ ರಾಜೇಶ ಸ್ವೀಟ್ಸ್ ತಂದುಕೊಟ್ಟು, “ನಂ ಕಾಲೇಜಿನ ಕ್ಯಾಂಪಸ್ ಇಂಟರ್ವ್ಯೂನಲ್ಲಿ, ಬಿಗ್ ಬಜಾರಿನ ‘ರೀಟೇಲ್ ಇಂಛಾರ್ಜ್’ ಆಗಿ ಸೆಲೆಕ್ಟ್ ಆಗಿದ್ದೀನಿ ಅಂಕಲ್!” ಎಂದು ಹೆಮ್ಮೆಯಿಂದ ಹೇಳಿದ. ಕಂಗ್ರಾಟ್ಸ್ ಹೇಳಿ ಸ್ವೀಟನ್ನು ಗುಳುಂ ಮಾಡಿ ಆಫೀಸಿಗೆ ಹೊರಟೆ. ಹಿಂದೆ ಒಂದು ಕಾಲದಲ್ಲಿ ಓದು ತಲೆಗೆ ಹತ್ತದೇ ಎಸ್ಸೆಲ್ಸಿಯಲ್ಲೋ ಪೀಯೂಸಿಯಲ್ಲೋ ನಪಾಸಾದರೆ, “ಯಾವುದಾದರೂ ದಿನಸಿ ಮಳಿಗೇಲಿ ಪೊಟ್ಣಾ ಕಟ್ಟಕ್ಕೇ ಲಾಯಕ್ಕು ನೀನು, ಸುಮ್ನೆ ಯಾವ್ದಾದ್ರೂ ಮಂಡಿ ಕೆಲ್ಸಕ್ ಸೇರ್ಕೊಂಬುಡು” ಎಂದು ಮೂದಲಿಸುತ್ತಿದ್ದದ್ದು ನೆನಪಾಯಿತು. ಕೆಲ ವರುಷಗಳ ಕೆಳಗೆ ವಿದ್ಯೆ ತಲೆಗೆ ಹತ್ತದವರಿಗೆಂದು ಮೀಸಲಾಗಿರುತ್ತಿದ್ದಂಥಾ ಕೆಲಸ ಪಡೆಯಲು ಇಂದು, ಲಕ್ಷಾಂತರ ಖರ್ಚುಮಾಡಿ, ಒಳ್ಳೆಯ ಅಂಕಗಳಿಸಿ ಇಷ್ಟೆಲ್ಲಾ ಪಡಬಾರದ ಪಡಿಪಾಟಲು ಪಡಬೇಕೆ, ಎಂದು ಗೊಂದಲವಾಯಿತು. ಒಟ್ಟಾರೆ ಇಡೀ ಶಿಕ್ಷಣ ವ್ಯವಸ್ಥೆಯೇ ಅರ್ಥಹೀನವೆಂದೆನಿಸಿ ಒಂದು ರೀತಿಯ ತಾತ್ಸಾರವೂ ತಿರಸ್ಕಾರವೂ ಮೂಡಿತು. ಅದೇ ಗುಂಗಿನಲ್ಲೇ ಆಫೀಸಿಗೆ ಬಂದು ಕೆಲಸಗಳಲ್ಲಿ ತೊಡಗಿಸಿಕೊಳ್ಳುವಷ್ಟರಲ್ಲಿ ಮೊಬೈಲು ರಿಂಗಣಿಸಿತು. ಯಾವುದೋ ತಿಳಿಯದ ನಂಬರ್ ಎಂದುಕೊಳ್ಳುತ್ತಾ ಕರೆ ಸ್ವೀಕರಿಸಿ ‘ಹಲೋ’ ಅಂದೆ. ‘ನಮ್ಸ್ಕಾರ ಕಣಣ್ಣ, ನಾನು ಕೆಬ್ಬಳ್ಳಿ ನಾಗ್ರಾಜ’, ಎಂಬ ದನಿ ಅತ್ತಲಿಂದ ಕೇಳಿ ‘ಏಳಪ್ಪಾ ನಾಗ್ರಾಜ, ಇದೇನಪ್ಪಾ ಪೋನ್ ಮಾಡಿದ್ದು ಅಪ್ರೂಪುಕ್ಕೇ?’ ಅಂದೆ. ಜೀವ ವಿಮಾ ನಿಗಮದ ಅಧಿಕಾರಿಯಾದ ನನಗೆ, ಸಹಜವಾಗಿಯೇ ಸುತ್ತಲ ಹಳ್ಳಿಗಳಲ್ಲಿ ಸಾಕಷ್ಟು ಜನ ಪರಿಚಿತರಿದ್ದಾರೆ. ‘ಏನಿಲ್ಲಾ ನಿಂ ಆಪೀಸತಕ್ ಬಂದಿದ್ದೆ, ನೀನೆಲ್ಲಿದ್ದೀಯಣ್ಣ?’ ಅಂದ ನಾಗ್ರಾಜ. ನಾನು ಆಫೀಸಿನಲ್ಲಿಯೇ ಇರುವುದಾಗಿ ಹೇಳಿ ನೇರ ನನ್ನ ಛೇರಿನ ಬಳಿಗೇ ಬರಬೇಕೆಂದು ತಿಳಿಸಿ ನಾಗ್ರಾಜನ ಕಾಲು ಕತ್ತರಿಸಿದೆ.
ತಕ್ಷಣವೇ ಎದುರು ಪ್ರತ್ಯಕ್ಷನಾದ ನಾಗ್ರಾಜ: ‘ಒಸಿ ಅರ್ಜೆಂಟಾಗ್ ಪಾಲಿಸಿ ಲೋನ್ ಬೇಕಾಗಿತ್ತು, ಅದೆಷ್ಟ್ ಬಂದಾತು ಒಸಿ ನೋಡೇಳಣ್ಣ’ ಎಂದು ಪಾಲಿಸಿ ಬಾಂಡನ್ನು ಚೀಲದಿಂದ ತೆಗೆದು ಮೇಜಿನ ಮೇಲಿಟ್ಟ. ನಂಬರನ್ನು ಗಣಕ ಯಂತ್ರದಲ್ಲಿ ಟೈಪಿಸಿ ಅವನ ಪಾಲಿಸಿಯಲ್ಲಿ ಹದಿನೈದು ಸಾವಿರ ಸಾಲ ದೊರೆಯುವುದಾಗಿ ತಿಳಿಸಿದೆ. ಅದಕ್ಕೆ ನಾಗ್ರಾಜ,‘ಅದ್ನೈದ್ ಸಾವ್ರ ಬಂದದೇನಣ್ಣ? ಪರ್ವಾಯಿಲ್ಲ, ನಾನ್ಕಮ್ಮೀ ಗಿಮ್ಮಿ ಬಿದ್ರೆ ಎಂಗಪ್ಪಾ ಅಂತಿದ್ದೆ’ ಎಂದು ನಿಡುಸುಯ್ದ. ಅದಕ್ಕೆ, ‘ಅದೇನ್ನಾಗ್ರಾಜ ಇದ್ಕಿದ್ದಂಗೆ ಅದ್ನೈದ್ ಸಾವ್ರುದ್ ಕರ್ಚು?’ ಅಂದೆ. ಅದಕ್ಕೆ ನಾಗ್ರಾಜ, ಮಗನ್ನ ಮಾಂಟೇಸಾರಿಗಾಕೀದೀನಲ್ಲಣ್ಣೋ, ಅದ್ಕೇನ್ ಎರಡ್ನೆ ಕಂತ್ ಫೀಜ್ಕಟ್ ಬ್ಯಾಡ್ದಾ?’ ಎಂದು ಮರುಪ್ರಶ್ನೆ ಎಸೆದ. ಮೊದಲೇ ಹದಗೆಟ್ಟ ಶಿಕ್ಷಣ ವ್ಯವಸ್ಥೆಯಿಂದ ಬೇಸತ್ತಿದ್ದ ನನಗೆ, ಕೇವಲ ಮಗುವಿನ ಶಿಶುವಿಹಾರಕ್ಕೆ ನಾಗ್ರಾಜ ಮೂವತ್ತುಸಾವಿರ ಶುಲ್ಕ ಕಟ್ಟುತ್ತಿರುವುದನ್ನು ಕಂಡು ಕನಿಕರ ಉಂಟಾಯಿತು. ಇಷ್ಟೆಲ್ಲಾ ಖರ್ಚುಮಾಡಿ ಕೊನೆಗೆ ಈ ಶಿಕ್ಷಣ ವ್ಯವಸ್ಥೆಯಿಂದ ಕನಿಷ್ಟ ಒಂದು ಸುರಕ್ಷಿತ ಉದ್ಯೋಗ ದೊರೆಯುವ ಖಾತ್ರಿಯೂ ಇಲ್ಲದಿರುವಾಗ ಈ ವ್ಯರ್ಥ ವೆಚ್ಚವು ಶುದ್ಧ ಅವಿವೇಕತನ ಎನಿಸಿತು. ನಾಗ್ರಾಜನ ಸಾಲದ ಅರ್ಜಿಯನ್ನು ನಂತರ ಸಿದ್ಧಪಡಿಸೋಣವೆಂದು ಹೇಳಿ, ಅವನನ್ನೂ ಕರೆದುಕೊಂಡು ಕಾಫಿಗೆಂದು ಆಫೀಸಿನ ಪಕ್ಕದ ಹೋಟೆಲ್ಲಿಗೆ ಹೋದೆ. ಕಾಫಿಗೆ ಆರ್ಡರ್ ಮಾಡಿ, ನಾಗ್ರಾಜನಿಗೆ ಇಂದಿನ ಶಿಕ್ಷಣ ಕ್ಶೇತ್ರದ ವ್ಯಾಪಕ ವ್ಯಾಪಾರೀಕರಣದಿಂದಾಗಿ ಕಳಪೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದಾಗಿಯೂ, ಇತ್ತೀಚೆಗೆ ಹೊರಬರುತ್ತಿರುವ ವಿಶ್ವ ವಿದ್ಯಾಲಯಗಳ ಪದವೀಧರರಲ್ಲಿ ಉದ್ಯೋಗ ಗಳಿಸುವ ಕ್ಷಮತೆಯ ಕೊರತೆ ಇರುವುದಾಗಿ ತಿಳಿಸಿದೆ. ನಾಗ್ರಾಜನಿಗೆ ನನ್ನ ಮಾತಿನ ಮೇಲೆ ನಂಬಿಕೆ ಬರಲಿಲ್ಲ. ‘ ಏ ಕಾರ್ಮೆಂಟ್ನಾಗೆ ಪುಟ್ ಪುಟ್ ಮಕ್ಳೆಲ್ಲಾ ಆ ಪಾಟಿ ಠಸ್ ಪುಸ್ನೆ ಇಂಗ್ಳೀಸ್ ಮಾತಾಡೋ ಈ ಕಾಲ್ದಾಗೆ ನೀನೇನಣ್ಣ ಒಳ್ಳೆ ಇಂಗಂತೀಯ!’ ಅಂದ.
ಸೂಕ್ತ ಉದಾಹರಣೆಗಳೊಂದಿಗೆ ನಾಗ್ರಾಜನಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ನಾನು ಕಲಿತ ಬುದ್ಧಿಯೆಲ್ಲಾ ಖರ್ಚುಮಾಡಿದೆ. ಈ ವಿದ್ಯಾಸಂಸ್ಥೆಗಳೆಲ್ಲವೂ ಇತ್ತೀಚೆಗೆ ಪೋಷಕರನ್ನು ಮರುಳುಮಾಡಿ, ದುಬಾರಿ ಶುಲ್ಕ ವಿಧಿಸಿ ಮೋಸಮಾಡುವ ಕುಲಾವೀ ಕೇಂದ್ರಗಳಾಗತ್ತಿವೆ ಎಂದು ತಿಳಿಹೇಳಿದೆ. ಸ್ವಲ್ಪ ಗೊಂದಲಕ್ಕೊಳಗಾದ ನಾಗ್ರಾಜ ‘ಈಗ್ ನನ್ನೇನ್ ಮಾಡೂ ಅಂತೀಯಣ್ಣಾ?’ ಅಂದ. ಆಗ ನಾನು, ‘ನೋಡ್ನಾಗ್ರಾಜಾ, ಸಿಸ್ವಾರಕ್ಕೇ ಮೂವತ್ಸಾವ್ರ ಫೀಜಾದ್ರೆ, ನಾಳೀಕ್ ಅದೋಯ್ತವೋಯ್ತಾ ಕಮ್ಮಿ ಆದದೋ ಜಾಸ್ತ್ಯಾದದೋ?’ ಕೇಳಿದೆ. ‘ಚೆನ್ನಾಗೇಳ್ದೆ, ಎಲ್ಕಮ್ಮಿಯಾದದು? ಓಯ್ತಾ ಓಯ್ತಾ ಜಾಸ್ತೀನೆ ಅಲ್ವೇನಣ್ಣಾ ಆಗದು?’ ಅಂದ. ‘ಲಕ್ಸಾಂತ್ರ ಕರ್ಚ್ ಮಾಡಿ ಈ ಕೆಲ್ಸುಕ್ ಬಾರದ್ ಇದ್ಯೇ ಯಾಕೇಂತೀನಿ?, ಇಲ್ಲಾ, ಮಗೀನ ಓದುಸ್ಲೇ ಬೇಡಾಂತೇನೂ ನಾನೇಳಲ್ಲ, ಅದ್ಸರಿನೂ ಅಲ್ಲ, ಓದ್ಸು, ಯಾವ್ದಾರ ಸರ್ಕಾರಿ ಸಾಲೇಲಿ ಬೇಕಾರೆ, ಅದೆಷ್ಟ್ ಓದ್ತುದೋ, ಅದೆಂಗ್ ಓದ್ತುದೋ ಓದ್ಸು. ಈ ಸವ್ಕಾರೀ ಸಮುಸ್ತೆಗಳ್ಸವಾಸ ಮಾತ್ರ ಬ್ಯಾಡ ನೋಡು’, ನಿಜವಾದ ಕಳಕಳಿಯಿಂದ ಹೇಳಿದೆ. ಅದಕ್ಕೆ ನಾಗ್ರಾಜ,‘ಅದೆಂಗಣ್ಣ ಆದದು, ನಾಕ್ಜನ ಎಂಗೋ ಅಂಗಿರದ್ಬ್ಯಾಡ್ವಾ?’ ಅಂದ. ಆಗ ನಾನು, ‘ಅಲ್ಲಾ ಕಣ್ ನಾಗ್ರಾಜೂ, ನಮ್ಮೋರೆಲ್ಲಾ ಇಂಗೇ ಆಳಾಗೋದ್ರಲ್ಲೋ, ವರ್ಸುಕ್ಕೆ ನಲ್ವತ್ತೂ ಐವತ್ತೂ ಅಂತ ಫೀಜ್ನ, ಕಟ್ಟೂಕಾದದೇನ್ಲಾ? ಅದ್ರು ಬದ್ಲು ಮಗೀನ ಗೋರ್ಮೆಂಟ್ ಸ್ಕೂಲ್ಗಾಕಿ ಅದೇ ದುಡ್ಗೆ ಮಗೀನೆಸ್ರುಗೆ ಒಂದ್ಪಾಲಿಸೀನಾರ ಮಾಡ್ಸುದ್ರೆ, ಇನ್ನಿಪ್ಪತ್ ವರ್ಸುಕ್ಕೆ ಮಗ ಕೈಗ್ಬರೋ ಒತ್ನಾಗೆ ಅತ್ತೋ ಇಪ್ಪತೋ ಲಕ್ಸಾನೇ ಬತ್ತುದ್ನೋಡಪ್ಪ, ಯಂಗೂ ಆ ಕಾಲಕ್ ಕೆಲ್ಸ ಸಿಗೋದ್ ಅಷ್ಟ್ರಾಗೇ ಅದೆ. ಅದ್ನೇ ಬಂಡ್ವಾಳಕ್ಕಾಕಂದು ಏನಾರ ಯವಾರಮಾಡಿ, ಎಂಗೋ ಬದೀಕೋಬೋದು’ ಅಂದೆ.
ಅದಕ್ಕೆ ನಾಗ್ರಾಜ ತಣ್ಣಗೆ, ‘ಅದೆಲ್ಲಾ ಸರಿ, ನಿಮ್ಮಕ್ಳು ಎಲ್ಲೋದ್ತಾವೆ ಸಾ?’ ಅಂದ. ಇಷ್ಟು ಹೊತ್ತೂ ‘ಅಣ್ಣಾ’ ಎಂದು ಆತ್ಮೀಯವಾಗಿ ಸಂಬೋಧಿಸುತ್ತಿದ್ದ ನಾಗ್ರಾಜ, ಇದ್ದಕ್ಕಿದ್ದಂತೆ ಸಾರ್ ಎಂದು ಅಂತರ ತಂದು ಮಾತನಾಡಿದ್ದರಿಂದ ಸ್ವಲ್ಪ ಕಸಿವಿಸಿಯಾಯಿತು. ನಿರ್ಲಕ್ಷಿಸಿ, ಇದ್ದ ವಸ್ತು ಸ್ಥಿತಿ ತಿಳಿಸಿ, ಉಗುಳು ನುಂಗಿದೆ. ಸಾಮಾನ್ಯವಾಗಿ ಸುಳ್ಳು ಹೇಳುವವರು ಕಣ್ಣು ಕೂಡಿಸಿ ಮಾತನಾಡಲಾರರಂತೆ. ಆದರೆ ಉತ್ತರಿಸುವಾಗ ನಾನು ಸತ್ಯವನ್ನೇ ನುಡಿಯುತ್ತಿದ್ದರೂ ಅದೇಕೋ ನಾಗ್ರಾಜನೊಂದಿಗೆ ನಾನು ಕಣ್ಣು ಕೂಡಿಸಲಿಲ್ಲ. ನಾಗ್ರಾಜ ಒಂದು ಕ್ಷಣ ಘಾತುಕರನ್ನು ದೃಷ್ಟಿಸುವವರಂತೆ ನನ್ನನ್ನೇ ದೃಷ್ಟಿಸಿದ. ನಂತರ ಅರ್ಧ ಕುಡಿದಿದ್ದ ಕಾಫೀ ಲೋಟವನ್ನು ಮೇಜಿನ ಮೇಲೆ ಕುಕ್ಕಿದವನೇ, ನಾಟಕೀಯವಾಗಿ ಎರಡೂ ಕೈಗಳನ್ನೆತ್ತಿ ಜೋಡಿಸಿ, ಏರಿದ ದನಿಯಲ್ಲಿ ‘ಸಾಕ್ಕಣಪ್ಪಾ ನಿನ್ಸವಾಸ, ನಿನ್ಲೋನೂ ಸಾಕು, ನಿನ್ಬುದ್ವಾದಾನೂ ಸಾಕು, ಇವನ್ ಮಕ್ಳು ಕಾರ್ಮೆಂಟ್ಗೋದಾರಂತೆ, ನಮ್ಮಕ್ಳುನ್ನ ಗೋರ್ಮೆಂಟ್ ಸ್ಕೂಲ್ಗಾಕಿ ಇವನ್ತಾವ್ ಪಾಲಿಸಿ ಮಾಡುಸ್ಬೇಕಂತೆ, ಕಂಡೋರ್ಮಕ್ಳುನ್ನ ಬಾವೀಗ್ ತಳ್ಬುಟ್ಟು ತಮಾಸಿ ನೋಡಪ್ಪಾನ್ನೂ, ಚೆಂದಾಕ್ ನೋಡ್ತಾನೆ, ನಿಂದೂ ಒಂದ್ ಬದ್ಕಾ ಥೂ… ’ ಎಂದು ಕ್ಯಾಕರಿಸಿ ಉಗಿದು ಬಿರುಸು ನಡೆಯಲ್ಲಿ ಹೊರಟೇ ಹೋದ. ಹೋಟೆಲ್ಲಿನಲ್ಲಿ ಇದ್ದ ಎಲ್ಲರೂ ನನ್ನನ್ನೇ ಗುರಾಯಿಸುತ್ತಿದ್ದಂತೆ ತೋರಿತು. ಬಿಲ್ಲನ್ನು ತೆತ್ತು ತೆಪ್ಪನೆ ತಲೆ ತಗ್ಗಿಸಿ ಹೊರನಡೆದೆ. ನಿಜವಾಗಿ ಏನೂ ತಪ್ಪು ಮಾಡದೇ ಈ ಪರಿ ಅವಮಾನಿತನಾಗಿದ್ದಕ್ಕೆ ಬೇಸರವಾಯಿತು. ಆಮೇಲೆ ಸುಮ್ಮನೆ ಅಯಾಚಿತವಾಗಿ ಬಿಟ್ಟಿ ಸಲಹೆಗಳನ್ನು ಕೊಡಲು ಹೋಗಿದ್ದು ನನ್ನದೇ ತಪ್ಪೆಂದು ಅರಿವಾಯಿತು. ಅತ್ಯುತ್ಸಾಹದಲ್ಲಿ ಇನ್ನೆಂದೂ ಇಂತಹ ತಪ್ಪು ಮಾಡದೇ ಸ್ವಲ್ಪ ಅದುಮಿಕೊಂಡಿರಬೇಕೆಂದು ಸಂಕಲ್ಪ ಮಾಡಿಕೊಂಡೆ. ನಾಗ್ರಾಜನ ಪ್ರಕರಣದಿಂದ ಇದನ್ನಾದರೂ ಕಲಿತೆನಲ್ಲಾ ಎಂದು ಸಮಾಧಾನ ತಂದುಕೊಂಡೆ. ವಿಶ್ವವೆಂಬ ಈ ವಿದ್ಯಾಲಯದಲ್ಲಿ ಇಂದು ನಾನು ಕಲಿತ ಪಾಠವನ್ನು ಬಹುಶಃ ವಿಶ್ವದ ಯಾವ ವಿಶ್ವವಿದ್ಯಾಲಯಗಳೂ ಕಲಿಸಲಾರವೇನೋ ಅನ್ನಿಸಿ, ಮತ್ತೆ ಕಲಿಕೆಯೇ ಶಿಕ್ಷಣಕ್ಕಿಂತ ಮುಖ್ಯವೆಂದೆನಿಸಿತು.
ಶಿಕ್ಷಣವು ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ದಿಷ್ಟ ಪಠ್ಯಕರ್ಮಕ್ಕೆ ಅನುಗುಣವಾಗಿ, ಶಾಲಾ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಮೂಲಕ ಪ್ರಾಪ್ತವಾದರೆ ಕಲಿಕೆಗೆ ಇಂತಹ ಯಾವುದೇ ಕಟ್ಟುಪಾಡುಗಳಾಗಲೀ, ವಿಧಿ ವಿಧಾನಗಳಾಗಲೀ ಇಲ್ಲ. ಕಲಿಯುವವರು ಏನನ್ನು ಬೇಕಾದರೂ ಎಲ್ಲಿಂದ ಬೇಕಾದರೂ ಕಲಿಯಬಹುದು. ಒಳ್ಳೆಯದನ್ನೂ ಕಲಿಯಬಹುದು, ಕೆಟ್ಟದ್ದನ್ನೂ ಕಲಿಯಬಹುದು. ಹಾಗಾಗಿ ಕಲಿಕೆಯಲ್ಲಿ, ಕಲಿಯುವವನ ಆಯ್ಕೆಯ ಜವಾಬ್ದಾರಿ ಹೆಚ್ಚು. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಒಳ್ಳೆಯ ಕಲಿಕೆಗೆ ಪೂರಕವಾದ ಪರಿಸರವನ್ನೂ ಸಹ ಕಲ್ಪಿಸಬೇಕು. ಪಠ್ಯ ಕ್ರಮದ ಹೊರಗೂ, ವಿದ್ಯಾರ್ಥಿಗಳು ಪ್ರಜ್ಞಾಪೂರ್ವಕವಾಗಿ ಸದ್ವಿಷಯಗಳನ್ನಷ್ಟೇ ಕಲಿಯುವಂತೆ ಸೂಕ್ತ ಮಾರ್ಗದರ್ಶನವನ್ನು ಮಾಡುವುದು ಒಂದು ಒಳ್ಳೆಯ ಶಿಕ್ಷಣ ಪದ್ಧತಿಯ ಮೂಲಭೂತ ಹೊಣೆಗಾರಿಕೆಯಾಗಿದೆ. ಶಿಕ್ಷಣವು ಮಕ್ಕಳಲ್ಲಿ ಕಲಿಕಾ ಕೌಶಲ್ಯವನ್ನು ಬೆಳೆಸಬೇಕು. ಅಸಲು ಕಲಿಯುವುದನ್ನೇ ಕಲಿಸದ ಶಿಕ್ಷಣ ವ್ಯವಸ್ಥೆಯು, ಸಹಜವಾಗಿ ನಿರರ್ಥಕವೆನಿಸಿ ಬಿಡುತ್ತದೆ. ಹಾಗೆಯೇ ವಿದ್ಯಾರ್ಥಿಗಳ ಜೀವನದಲ್ಲಿ ನೈತಿಕ ಮೌಲ್ಯಗಳನ್ನೇ ಬೆಳೆಸದೆ ಕೇವಲ ಪುಸ್ತಕದ ಜ್ಞಾನವನ್ನಷ್ಟೇ ಕೊಡಮಾಡುವ ಶಿಕ್ಷಣ ವ್ಯವಸ್ಥೆಯು ಸಮಾಜಕ್ಕೆ ಮಾರಕವಾಗುತ್ತದೆ.
ಇತ್ತೀಚೆಗೆ ಎನ್.ಡಿ.ಟಿ.ವಿಯ ರಜತೋತ್ಸವದ ಅಂಗವಾಗಿ ವಿಶ್ವದ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗಳನ್ನು ಮಾಡಿದ ೨೫ ಜೀವಂತ ಜಾಗತಿಕ ದಂತಕಥೆಗಳೆನಿಸಿದ ಭಾರತೀಯರನ್ನು ಗೌರವಿಸಲಾಯಿತು. ಭಾರತೀಯ ಪತ್ರಿಕೋದ್ಯಮದಲ್ಲಿ ವಿದ್ಯುನ್ಮಾನ ಮಾಧ್ಯಮದ ಅನಭಿಷಕ್ತ ಪಿತಾಮಹನೆನೆಸಿದ ಡಾ. ಪ್ರಣೋಯ್ ರಾಯ್ ನೇತೃತ್ವದಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಒಂದು ಸುಂದರ ಸಮಾರಂಭದಲ್ಲಿ, ರಾಷ್ಟ್ರಪತಿಗಳಾದ ಸನ್ಮಾನ್ಯ ಪ್ರಣಬ್ ಮುಖರ್ಜಿಯವರು ಈ ಮಹಾನ್ ಸಾಧಕರನ್ನು ಸನ್ಮಾನಿಸಿದರು. ಅಂದು ಸನ್ಮಾನಿತರಾದ ಗಣ್ಯರ, ಅನನ್ಯ ನಕ್ಷತ್ರ ಪುಂಜವನ್ನೊಮ್ಮೆ ವಿಶ್ಲೇಷಣಾತ್ಮಕವಾಗಿ ಗಮನಿಸಿದೆ. ಶ್ರೇಷ್ಟತೆ ಹಾಗೂ ಉತ್ಕೃಷ್ಟತೆಯ ಸಾಧನೆಯಲ್ಲಿ ಶಿಕ್ಷಣವು ಮುಖ್ಯವಾದರೂ, ಕಲಿಕೆಯ ಪಾತ್ರವೇ ಹೆಚ್ಚು ಮಹತ್ವದ್ದೆಂದು ತೋರಿತು. ಸಮಾರಂಭದಲ್ಲಿ ಗೌರವಿಸಲ್ಪಟ್ಟ ಸಾಧಕರನ್ನು, ಸಮಾಜದ ಒಳಿತು ಹಾಗೂ ಏಳಿಗೆಯ ದೃಷ್ಟಿಯಿಂದ ಮುಂಬರುವ ಪೀಳಿಗೆಗೆ ಒಂದು ಸಂದೇಶವೆಂಬಂತೆ, ತಮ್ಮ ಇಡೀ ಜೀವನದ ಮೂರು ಮುಖ್ಯ ಕಲಿಕೆಗಳನ್ನು ಕೇವಲ ಎರಡು ನಿಮಿಷಗಳಲ್ಲಿ ಹಂಚಿಕೊಳ್ಳುವಂತೆ ಕೋರಲಾಗಿತ್ತು. ಇಂತಹ ಅದ್ಭುತ ಕಲ್ಪನೆಯಿಂದ ಒಂದಿಡೀ ಪೀಳಿಗೆಯ ಸಂಸ್ಕರಿತ ಶುದ್ಧ ಅನುಭವಾಮೃತದ ಸಾರವನ್ನು, ಒಂದೇ ಗುಕ್ಕಿನಲ್ಲಿ ಆಸ್ವಾದಿಸುವ ಅವಕಾಶವನ್ನು ಭಾರತೀಯ ಯುವಶಕ್ತಿಗೆ ಕೊಡಮಾಡಿದ ಎನ್.ಡಿ.ಟೀ.ವಿ ಬಳಗಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಕಾರಣಾಂತರಗಳಿಂದ ಈ ಅಮೋಘ ಕಾರ್ಯಕ್ರಮವನ್ನು ತಪ್ಪಿಸಿಕೊಂಡವರಿಗಾಗಿ ಮತ್ತು ಇತರ ಆಸಕ್ತರಿಗೆಂದು ಕಾರ್ಯಕ್ರಮದ ಕೊಂಡಿ ಕಲ್ಪಿಸಿ ಕೊಟ್ಟಿದ್ದೇನೆ. ದಯಮಾಡಿ ಇಲ್ಲಿ ಕ್ಲಿಕ್ಕಿಸಿ ತಮ್ಮ ಕಲಿಕೆಯನ್ನು ವೃದ್ಧಿಸಿಕೊಳ್ಳಬಹುದು.
******
chennagide olle baraha