ಮಕ್ಕಳೇ ಪಕ್ಷಿಲೋಕ ಬಹು ವೈವಿಧ್ಯಮಯವಾದುದು. ಪ್ರತೀ ಪಕ್ಷಿಯೂ ತನ್ನದೇ ಆದ ವಿಭಿನ್ನತೆಯನ್ನು ಹೊಂದಿರುತ್ತದೆ. ಅವುಗಳ ನೋಟ, ದೇಹರಚನೆ, ಗೂಡುಕಟ್ಟುವಿಕೆ ವೈವಿಧ್ಯವಾಗಿರುತ್ತದೆ. ಅಂತಹ ವೈವಿಧ್ಯತೆಯನ್ನು ಹೊಂದಿದ ಹಕ್ಕಿಗಳಲ್ಲಿ ವಿಶೇಷವಾದುದು ಗೀಜಗ ಹಕ್ಕಿ, ಗೀಜಗನ ಹಕ್ಕಿಯು ಪೆಸ್ಸಾರಿಡೇ ಕುಟುಂಬಕ್ಕೆ ಸೇರಿದ ಹಕ್ಕಿಯಾಗಿದ್ದು, ನೇಯ್ಗೆ ಹಕ್ಕಿ ಎಂದೇ ಚಿರಪರಿಚಿತ. ಆಪ್ರಿಕಾ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಾದ ಭಾರತ, ಶ್ರೀಲಂಕಾ ಮತ್ತು ಬರ್ಮಾಗಳಲ್ಲಿ ಮಾತ್ರ ಕಂಡುಬರುವ ಗೀಜಗ ಹಕ್ಕಿಯು ನೋಡಲು ಗುಬ್ಬಿಯಷ್ಟೇ ಚಿಕ್ಕದು. ಇದು ಗುಬ್ಬಿಯ ಸಂತತಿಗೆ ಹತ್ತಿರವೂ ಹೌದು. ಈ ಹಕ್ಕಿಯು ಸಂಘಜೀವನ ನಡೆಸುತ್ತದೆ. ಸಂತಾನೋತ್ಪತ್ತಿ ಕಾಲವನ್ನು ಹೊರತುಪಡಿಸಿ ಉಳಿದೆಲ್ಲಾ ಕಾಲದಲ್ಲಿಯೂ ಇದು ಗುಬ್ಬಚ್ಚಿಯ ಬಣ್ಣವನ್ನೇ ಹೊಂದಿರುತ್ತದೆ. ಕೊಕ್ಕು ದೃಢವಾಗಿ ಶಂಕುವಿನಾಕಾರಕ್ಕಿದೆ. ಬಾಲವು ಮೋಟಾಗಿ ಕತ್ತರಿಸಿದ ಹಾಗೆ ಕಾಣುತ್ತದೆ. ಸಾಮಾನ್ಯವಾಗಿ ಸಸ್ಯಾಹಾರಿಗಳಾದ ಇವು ಕೆಲಮೊಮ್ಮೆ ಕೀಟಗಳನ್ನೂ ತಿನ್ನುತ್ತವೆ. ಗೀಜಗ ಹಕ್ಕಿಯು ಗೂಡು ಕಟ್ಟುವುದು ಸಾಮಾನ್ಯವಾಗಿ ಮೇ ನಿಂದ ಸೆಪ್ಟೆಂಬರ್ ನಡುವೆ. ಗೂಡು ಕಟ್ಟುವುದರಲ್ಲಿ ಗೀಜಗಹಕ್ಕಿಗೆ ಎಲ್ಲಿಲ್ಲದ ಶ್ರಧ್ಧೆ ಹಾಗೂ ಕಾಳಜಿ.
ಸಾಮಾನ್ಯವಾಗಿ ಭತ್ತದ ತೆನೆಕಟ್ಟುವ ಸಂದರ್ಭದಲ್ಲಿ ಚೀವ್ ಗುಟ್ಟುತ್ತಾ ಗೂಡು ಕಟ್ಟುವ ಈ ಹಕ್ಕಿಯು ಜೌಗು ಪ್ರದೇಶ, ಕೃಷಿ ಭೂಮಿಯ ಸುತ್ತಮುತ್ತಲಿನ ಜಾಲಿಗಿಡಗಳು, ತಾಳೆಗಿಡಗಳ ಎಲೆಗಳಿಗೆ ಜೋಕಾಲಿಯಂತೆ ಗೂಡುಕಟ್ಟುತ್ತದೆ. ಅಷ್ಟಕ್ಕೂ ಇದು ಗೂಡು ಕಟ್ಟುವುದು ತನ್ನ ಸಂಗಾತಿಯನ್ನು ಆಕರ್ಷಿಸಲು. ಸಂಗಾತಿಯೊಂದಿಗೆ ತನ್ನದೇ ಆದ ಪುಟ್ಟ ಸಂಸಾರಹೂಡಲು. ಗೂಡನ್ನು ಕಟ್ಟುತ್ತಾ ತನ್ನ ಮರಿಗಳಿಗೆ ಬದುಕನ್ನು ಕಟ್ಟಿಕೊಡುವ ಅಧಮ್ಯ ಆಸೆ ಈ ಹಕ್ಕಿಗೆ. ಹಾಗೆಯೇ ಭವಿಷ್ಯ ರೂಪಿಸುವ ಕಾಳಜಿ.ಇಕ್ಕಳದಂತಹ ತನ್ನ ಚಿಕ್ಕ ಚೊಂಚಿನಲ್ಲಿ ಪಟಪಟನೆ ಗೂಡನ್ನು ನೇಯುವ ಈ ಹಕ್ಕಿಯ ಕಸೂತಿ ಕೆಲಸ ಯಾವುದೇ ಯಂತ್ರಕ್ಕೂ ಸರಿಸಾಟಿಯಲ್ಲ. ಒಂದೊಂದು ಎಳೆಯನ್ನೂ ಕಲಾತ್ಮಕವಾಗಿ ಬಿಗಿಯುತ್ತದೆ. ಗೂಡು 30 ರಿಂದ 60 ಸೆಂಟಿಮೀಟರ್ ನಷ್ಟು ಉದ್ದವಿರುತ್ತದೆ. ಜೊಂಡುಹುಲ್ಲು, ತೆಂಗಿನನಾರು ಮುಂತಾದ ಕಸಕಡ್ಡಿಗಳನ್ನು ಬಳಸಿ ಕಟ್ಟಿದ ಎರೆಡು ಅಂತಸ್ತಿನ ಈ ಗೂಡು ಎಂಥಾ ಬಿಸಿಲು ಮಳೆಗೂ ಜಗ್ಗದೇ ಮರದ ಕೊಂಬೆಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುತ್ತದೆ. ಕೆಲವೊಮ್ಮೆ ಒಂದೇ ಮರಕ್ಕೆ ಹತ್ತಾರು ಗೂಡುಗಳನ್ನು ಕಟ್ಟಿರುವುದು ಕಂಡುಬರುತ್ತದೆ. ಗೂಡು ಹೂಜಿಯಂತೆ ಕಾಣುತ್ತದೆ.
ಗೀಜಗನ ಗೂಡು ಉದ್ದನೆಯ ಬಾಲದ ಮೂಲಕ ಕೆಳಮುಖವಾಗಿ ಜೋತುಬಿದ್ದಿರುತ್ತದೆ. ಹಾಗಾಗಿ ಕೆಳಗಿನಿಂದ ಗೂಡನ್ನು ಪ್ರವೇಶಿಸಬೇಕು. ಗೂಡಿನ ಪ್ರವೇಶದ್ವಾರ ಕಿರಿದಾಗಿರುತ್ತದೆ. ಗೀಜಗಹಕ್ಕಿಯು ಗೂಡಿನ ನಿರ್ಮಾಣಕ್ಕೆ ಹಸಿರು ಎಲೆಗಳನ್ನಷ್ಟೇ ಬಳಸುತ್ತದೆ. ಗೂಡಿಗೆ ಅವಶ್ಯಕವಾದ ಸಾಮಗ್ರಿಗಳನ್ನು ಒಂದೊಂದಾಗಿ ತನ್ನ ಚೊಂಚಿನಲ್ಲಿ ಅಳತೆ ಪ್ರಕಾರ ಕತ್ತರಿಸಿ ತಂದು ಪರೀಕ್ಷಿಸಿದ ನಂತರ ಗೂಡಿಗೆ ಸೇರಿಸುತ್ತದೆ. ಗಂಡುಹಕ್ಕಿಯು ಗೂಡನ್ನು ಅರ್ಧಕ್ಕೆ ರಚಿಸಿದ ನಂತರ ಅದರ ಆಕೃತಿಯನ್ನು ತನ್ನ ಸಂಗಾತಿಗೆ ತೋರಿಸುತ್ತದೆ. ಒಂದುವೇಳೆ ಅದು ಇಷ್ಟವಾಗದಿದ್ದಲ್ಲಿ ಗೂಡನ್ನು ಪುನಃ ಮೊದಲಿನಿಂದ ಕಟ್ಟುತ್ತದೆ. ಗೂಡು ಇಷ್ಟವಾದಲ್ಲಿ ಹೆಣ್ಣುಹಕ್ಕಿಯು ಗೂಡು ಪೂರ್ಣಗೊಳ್ಳುವ ಮೊದಲೇ ಗೂಡಿನಲ್ಲಿ ಸೇರಿ ಮೊಟ್ಟೆಯಿಡುತ್ತದೆ. ನಂತರ ಗಂಡುಹಕ್ಕಿಯು ಇತರರು ಪ್ರವೇಶಿಸದಂತೆ ಗೂಡನ್ನು ಮುಚ್ಚುತ್ತದೆ. ವಿಚಿತ್ರವೆಂದರೆ ಗಂಡುಗೀಜಗ ಗೂಡನ್ನು ನಿರ್ಮಿಸಿದ ನಂತರ ಅದನ್ನು ಮರಿಗಳ ಪೋಷಣೆಗೆ ಮೀಸಲಿಟ್ಟು, ತನಗಾಗಿ ಮತ್ತೊಂದು ಗೂಡನ್ನು ನಿರ್ಮಿಸಿಕೊಳ್ಳುತ್ತದೆ. ಮತ್ತು ತಾಯಿ ಹಾಗೂ ಮರಿಗಳಿಗೆ ಆಹಾರವನ್ನು ತಂದುಕೊಡುತ್ತದೆ. ಕೆಲವೊಮ್ಮೆ ಗೂಡನ್ನು ಗಟ್ಟಿಗೊಳಿಸುವ ಸಲುವಾಗಿ ಒದ್ದೆಮಣ್ಣನ್ನು ತಂದು ಗೂಡಿಗೆ ಮೆತ್ತುವುದೂ ಉಂಟು.
-ಪ.ನಾ.ಹಳ್ಳಿ..ಹರೀಶ್ ಕುಮಾರ್